ನಟ, ಪತ್ರಕರ್ತ ಲಿಂಗೇನಹಳ್ಳಿ ಸುರೇಶ್‌ ಚಂದ್ರ ಇನ್ನು ನೆನಪು ಮಾತ್ರ…

ಹಿರಿಯ ಪತ್ರಕರ್ತ ಹಾಗೂ ನಟ ಲಿಂಗೇನಹಳ್ಳಿ ಸುರೇಶ್‌ ಚಂದ್ರ ಇನ್ನು ನೆನಪು ಮಾತ್ರ. ಅನಾರೋಗ್ಯದ ಹಿನ್ನೆಲೆಯಲ್ಲಿ ಬಹು ದಿನಗಳಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಶುಕ್ರವಾರ ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು.

ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಲಿಂಗೇನಹಳ್ಳಿ ಅವರ ಮೂಲ ಊರು. ಅಲ್ಲಿಯೇ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಸ್ನೇಹ ಜೀವಿಯಾಗಿದ್ದ ಸುರೇಶ್‌ ಚಂದ್ರ ಅವರದ್ದು ಬಹುಮುಖ ವ್ಯಕ್ತಿತ್ವ. ದೀರ್ಘಕಾಲ ಸಿನಿಮಾ, ರಾಜಕೀಯ ಕ್ಷೇತ್ರಗಳಲ್ಲಿ ಪತ್ರಕರ್ತರಾಗಿ ದುಡಿದಿದ್ದರು. ಸಿನಿಮಾ ಪತ್ರಿಕೋದ್ಯಮ ಒಡನಾಟದೊಂದಿಗೆಯೇ ಸಿನಿಮಾ ಜಗತ್ತಿನ ಜತೆಗೆ ಅನೂನ್ಯ ಬಾಂಧವ್ಯ ಹೊಂದಿದ್ದ ಅವರು, ಪತ್ರಕರ್ತನಾಗಿದ್ದರ ಜತೆಗೆಯೇ ನಟರಾಗಿಯೂ ಪರಿಚಿತರಾದರು.

ನಿರ್ದೇಶಕ ಎಸ್.‌ ನಾರಾಯಣ ನಿರ್ದೇಶನದ ‘ಚೆಲುವಿನ ಚಿತ್ತಾರ’ ಚಿತ್ರದೊಂದಿಗೆ ಸಿನಿಮಾ ಜಗತ್ತಿನಲ್ಲಿ ಹೆಚ್ಚಿನ ಅವಕಾಶ ದಕ್ಕಿಸಿಕೊಂಡ ಸುರೇಶ್‌ ಚಂದ್ರ ಅವರು, ಆನಂತರದ ದಿನಗಳಲ್ಲಿ ಪತ್ರಿಕಾ ವೃತ್ತಿಯ ಜತೆಗೆಯೇ ನಟನೆಯಲ್ಲೂ ಬ್ಯುಸಿ ಆದರು. ‘ನಂದ ಲವ್ಸ್‌ ನಂದಿತಾ’, ‘ಜಂಗ್ಲಿ’, ‘ಉಗ್ರಂ’ ನಂತಹ ಯಶಸ್ವಿ ಚಿತ್ರಗಳಲ್ಲಿ ಕಾಣಿಸಿಕೊಂಡು ಸಾಕಷ್ಟು ಜನಪ್ರಿಯತೆ ಪಡೆದರು. ನಾಡಿನ ಹೆಸರಾಂತ ಸಂಜೆ ದಿನ ಪತ್ರಿಕೆ ‘ಸಂಜೆವಾಣಿ’ಯಲ್ಲಿ ದೀರ್ಘಕಾಲ ಪತ್ರಿಕಾ ವೃತ್ತಿಯನ್ನು ಸಲ್ಲಿಸಿದ ಅವರು, ಅಲ್ಲಿಯೇ ಕಾಪಿ ಎಡಿಟರ್‌ ಆಗಿ, ಸಹ ಸಂಪಾದಕರಾಗಿ ದುಡಿದರು. ಕೊನೆಗೆ ಸಂಪಾದಕರಾಗಿ ನಿವೃತ್ತಿ ಪಡೆದರು. ಪತ್ರಿಕಾ ವೃತ್ತಿಯನ್ನು ಅತ್ಯಂತ ಗೌರವ ಮತ್ತು ಶ್ರದ್ದೆಯಿಂದ ಪರಿಗಣಿಸಿದ್ದ ಅವರು, ನಿರಂತರವಾಗಿ ಒಂದೇ ಸಂಸ್ಥೆಯಲ್ಲಿದ್ದು ನಿಷ್ಟೆಗೂ ಸೈ ಎನಿಸಿಕೊಂಡಿದ್ದರು.

ಪತ್ರಿಕಾ ವೃತ್ತಿಯ ಜತೆಗೆ ಸಾಹಿತ್ಯ ಬರವಣಿಗೆಯಲ್ಲೂ ತೊಡಗಿಸಿಕೊಂಡಿದ್ದ ಅವರು, ಮೂರ್ನಾಲ್ಕು ಚಿತ್ರಗಳಿಗೆ ಸಂಭಾಷಣೆ ಕೂಡ ಬರೆದಿದ್ದರು. ಅದೆಲ್ಲಕ್ಕಿಂದ ಮುಖ್ಯವಾಗಿ ಪತ್ರಕರ್ತ ಬಳಗದಲ್ಲಿ ಅಪಾರ ಸ್ನೇಹಿತರನ್ನು ಸಂಪಾದಿಸಿಕೊಂಡಿದ್ದರು. ಸಾಹಿತ್ಯ ವಲಯದಲ್ಲೂ ಅವರು ಸಾಕಷ್ಟು ಜನರಿಗೆ ಪರಿಚಿತರಿದ್ದರು.

Related Posts

error: Content is protected !!