ಬಜಾರ್ ಹೀರೋ ಶೋಕ್ದಾರ್ ಧನ್ವೀರ್ ಗೌಡ ಮೂರನೇ ಸಿನಿಮಾ ಸಜ್ಜಾಗಿದ್ದಾರೆ. ಬಜಾರ್ ಸಿನಿಮಾ ಮೂಲಕ ಬಣ್ಣದ ಲೋಕದಲ್ಲಿ ಅದೃಷ್ಟ ಪರೀಕ್ಷೆಗಿಳಿದ ಧ್ವನೀರ್, ಮೊದಲ ಸಿನಿಮಾದಲ್ಲಿಯೇ ಸಕ್ಸಸ್ ಸಿಕ್ಸರ್ ಬಾರಿಸಿದಾಗಿದೆ. ಸದ್ಯ ಬೈ ಟು ಲವ್ ಗೆ ಎದುರು ನೋಡುತ್ತಿರುವ ಧ್ವನೀರ್ ಮೂರನೇ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.
ಕನ್ನಡ ಮತ್ತು ತೆಲುಗು ಚಿತ್ರಗಳಿಗೆ ಸ್ಕ್ರಿಪ್ಟ್ ರೈಟರ್ ಆಗಿರುವ ಶಂಕರ್ ರಾಮನ್ ಈಗ ನಿರ್ದೇಶಕರಾಗಿ ಮೊದಲ ಹೆಜ್ಜೆ ಇಡುತ್ತಿದ್ದಾರೆ. ತಮ್ಮ ಸಿನಿಮಾ ಬದುಕಿನ 13 ವರ್ಷದ ಅನುಭವವನ್ನೂ ಈ ಸಿನಿಮಾಗೆ ಧಾರೆ ಎರೆಯುತ್ತಿರುವ ಶಂಕರ್ ರಾಮನ್, ಮಾಫಿಯಾ ಲೋಕದ ಕಥೆ ಜೊತೆ ಆಕ್ಷನ್ ಎಂಟರ್ ಟ್ರೈನರ್ ಸಿನಿಮಾವನ್ನು ಧನ್ವೀರ್ ಗೆ ಸಿದ್ಧಪಡಿಸಿದ್ದಾರೆ.
ಈಕ್ವಿನಾಕ್ಸ್ ಗ್ಲೋಬಲ್ ಎಂಟರ್ಟೈನ್ಮೆಂಟ್ಸ್ ಪ್ರೊಡಕ್ಷನ್ ನಡಿ ಧನ್ವೀರ್ ಮೂರನೇ ಸಿನಿಮಾಗೆ ಚೇತನ್ ಕುಮಾರ್ ಗೌಡ ಬಂಡವಾಳ ಹೂಡಲಿದ್ದು, ಸದ್ಯದಲ್ಲಿಯೇ ಈ ಸಿನಿಮಾದ ಟೈಟಲ್ ಹಾಗೂ ಫಸ್ಟ್ ಲುಕ್ ಅನಾವರಣಗೊಳ್ಳಲಿದೆ.
ದೇವನೂರು ಮಹಾದೇವ ಅವರ ಮಾತಿನಂತೆ “ಸಂಬಂಜ ಅನ್ನೋದು ದೊಡ್ದು ಕನಾ” ಎಂಬ ವಾಕ್ಯದ ಆಧಾರದ ಮೇಲೆ ಇಲ್ಲೊಂದು ಸಿನಿಮಾ ರೆಡಿಯಾಗಿದೆ. ಅದರ ಹೆಸರೇ “ಡಿ.ಎನ್.ಎ”. ಈ ಚಿತ್ರ ಇದೀಗ ರಿಲೀಸ್ಗೆ ರೆಡಿಯಾಗಿದೆ. ಇತ್ತೀಚೆಗೆ ಹಾಡುಗಳು ಹೊರಬಂದಿವೆ. ಪದ್ಮಶ್ರೀ ತುಳಸಿಗೌಡ ಹಾಡುಗಳನ್ನು ಬಿಡುಗಡೆ ಮಾಡಿ ಶುಭ ಕೋರಿದ್ದಾರೆ. ಇದರೊಂದಿಗೆ ವಿಡಿಯೋ ಸಾಂಗ್ ಒಂದನ್ನು ಮಾಸ್ಟರ್ ಆನಂದ್ ರಿಲೀಸ್ ಮಾಡಿದ್ದಾರೆ.
ನಿರ್ದೇಶಕ ಪ್ರಕಾಶ್ ರಾಜ್ ಮೇಹು ಈ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಸಿನಿಮಾ ಕುರಿತು ಹೇಳಿಕೊಂಡ ಅವರು, “ನಾನು ಕಳೆದ ಇಪ್ಪತ್ತೈದು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿದ್ದೀನಿ. “ಜನುಮದ ಜೋಡಿ” ಚಿತ್ರಕ್ಕೆ ನಾಗಾಭರಣ ಅವರ ಜೊತೆ ಕೆಲಸ ಮಾಡಿದ್ದೀನಿ. ಸಂಭಾಷಣೆ ಬರೆದಿದ್ದೀನಿ. ಆದರೂ ಇದು ಕೆಲವರಿಗೆ ಬಿಟ್ಟು ಹೆಚ್ಚಿನ ಜನರಿಗೆ ತಿಳಿದಿಲ್ಲ. ಈಗ ಬಹಳ ವರ್ಷಗಳ ನಂತರ ಚಿತ್ರವೊಂದನ್ನು ನಿರ್ದೇಶಿಸಿದ್ದೇನೆ. ದೇವನೂರು ಮಹದೇವ ಅವರ “ಸಂಬಂಜ ಅನ್ನೋದು ದೊಡ್ದು ಕನಾ” ಎಂಬ ಮಾತೇ ಈ ಚಿತ್ರಕ್ಕೆ ಸ್ಪೂರ್ತಿ. ಚಿತ್ರ ಉತ್ತಮವಾಗಿ ಮೂಡಿ ಬರಲು ಸಹಕಾರ ನೀಡಿದ ಇಡೀ ತಂಡಕ್ಕೆ ಧನ್ಯವಾದ ಅದರು ಪ್ರಕಾಶ್ ರಾಜ್ ಮೇಹು.
ನಿರ್ಮಾಪಕ ಮೈಲಾರಿ ಅವರು ಅಣ್ಣಾವ್ರ ಅಭಿಮಾನಿ. ಸಿನಿಮಾ ಬಗ್ಗೆ ಹೇಳುವ ಅವರು, “ನಾನು ಚಿಕ್ಕಂದಿನಿಂದಲೂ ಅಣ್ಣಾವ್ರ ಅಭಿಮಾನಿ. ಕುಟುಂಬ ಸಮೇತ ನೋಡಬಹುದಾದ ಸಿನಿಮಾ ಮಾಡುವ ಆಸೆಯಿತ್ತು. ನಿರ್ದೇಶಕರು ಹೇಳಿದ ಕಥೆ ಇಷ್ಟವಾಯಿತು. ನಿರ್ಮಾಣ ಮಾಡಿದ್ದೀನಿ. ಇದು ನನ್ನ ಮೊದಲ ಚಿತ್ರ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ಮೈಲಾರಿ.
ನಟ ಅಚ್ಯುತಕುಮಾರ್ ಮಾತನಾಡಿ, ನಿರ್ದೇಶಕರು ನನ್ನ ಆತ್ಮೀಯ ಗೆಳೆಯರು. ಪ್ರಕಾಶ್ ಈ ರೀತಿಯ ಕಥೆಯಿದೆ ಎಂದಾಗ ತಕ್ಷಣ ನಟಿಸಲು ಒಪ್ಪಿಕೊಂಡೆ. ಕೊರೋನದಿಂದ ಬಿಡುಗಡೆ ಸ್ವಲ್ಪ ವಿಳಂಬವಾಗಿದೆ. ನೀವೆಲ್ಲಾ ನೋಡಿ ಹರಿಸಿ ಎಂದರು ಅಚ್ಯುತ ಕುಮಾರ್.
ಕೆಲವು ಸಿನಿಮಾಗಳು ಹೃದಯಕ್ಕೆ ಹತ್ತಿರವಾಗುತ್ತದೆ. ಅಂತಹ ಒಂದು ಸಿನಿಮಾ “ಡಿ.ಎನ್.ಎ”. ಇಂತಹ ಚಿತ್ರದಲ್ಲಿ ಅಭಿನಯಿಸಿದ ಖುಷಿಯಿದೆ ಎಂದರು ನಟಿ ಎಸ್ತರ್ ನರೋನ. ಸಂಬಂಧಗಳ ಸುತ್ತ ಹೆಣೆದಿರುವ ಈ ಕಥೆ ತುಂಬಾ ಚೆನ್ನಾಗಿದೆ. ಉತ್ತಮ ಪಾತ್ರಕೊಟ್ಟ ನಿರ್ದೇಶಕರಿಗೆ ಧನ್ಯವಾದ ಎಂದರು ಅನಿತಾಭಟ್.
ನನ್ನ ಮಗ ಕೃಷ್ಣ ಈ ಚಿತ್ರದಲ್ಲಿ ಅಭಿನಯಿಸಿದ್ದಾನೆ. ನಿರ್ದೇಶಕರು ಹೇಳಿದ ಕಥೆ ಮನಸ್ಸಿಗೆ ಹತ್ತಿರವಾಯಿತು. ಡಿ.ಎನ್.ಎ ಅಂದರೆ ಧ್ರುವ, ನಕ್ಷತ್ರ ಹಾಗೂ ಆಕಾಶ ಎಂದು. ಇದು ತಂದೆ , ತಾಯಿ ಹಾಗೂ ಮಗನ ಹೆಸರು ಎಂಬ ವಿಷಯವನ್ನು ತಿಳಿಸಿದ ಮಾಸ್ಟರ್ ಆನಂದ್ ಚಿತ್ರತಂಡಕ್ಕೆ ಶುಭ ಕೋರಿದರು. ಚೇತನ್ ರಾಜ್ ಸಂಗೀತದ ಬಗ್ಗೆ ಮಾತನಾಡಿದರು. ನಟಿ ಭವಾನಿ ಪ್ರಕಾಶ್ ಕಾರ್ಯಕ್ರಮ ನಿರ್ವಹಣೆ ಮಾಡಿದರು.
ಅಂದಹಾಗೆ, ಕೊರೊನಾ ಹೆಚ್ಚಾಗುತ್ತಿರುವುದರಿಂದ ಸರ್ಕಾರ ವೀಕೆಂಡ್ ಕರ್ಫ್ಯೂ ನಿಯಮ ಜಾರಿ ಮಾಡಿದೆ. ಹಾಗಾಗಿ ಜನವರಿ 7 ರಂದು ಬಿಡುಗಡೆಯಾಗಬೇಕಿದ್ದ ಚಿತ್ರ ಬಿಡುಗಡೆಯನ್ನು ಚಿತ್ರತಂಡ ಮುಂದೂಡಿದೆ. ರೋಜರ್ ನಾರಾ ಣ್, ಎಸ್ತರ್ ನರೋನ, ಅಚ್ಯುತ ಕುಮಾರ್, ಯಮುನ, ಅನಿತಾಭಟ್, ಮಾಸ್ಟರ್ ಕೃಷ್ಣ ಚೈತನ್ಯ, ಮಾಸ್ಟತ ಧ್ರುವ ಮೇಹು, ನಿಹಾರಿಕ ಮುಂತಾದವರು ಚಿತ್ರದಲ್ಲಿದ್ದಾರೆ.
ನಟಿ ಹರ್ಷಿಕಾ ಪೊಣಚ್ಚ ಹೊಸ ವರ್ಷದಲ್ಲೊಂದು ಹೊಸ ಸಿನಿಮಾ ಸುದ್ದಿ ಕೊಟ್ಟಿದ್ದಾರೆ. ಅವರೀಗ ಮತ್ತೊಂದು ಹೊಸ ಸಿನಿಮಾ ಒಪ್ಪಿಕೊಂಡಿದ್ದು, ಅದು ಭೋಜ್ ಪುರಿ ಭಾಷೆಯ ಚಿತ್ರ. ಹೌದು ಆ ಚಿತ್ರಕ್ಕೆ ಹೊಸ ವರ್ಷದಲ್ಲಿ ಲಂಡನ್ ನಲ್ಲಿ ಮುಹೂರ್ತ ನೆರವೇರಿದೆ.ಆ ಚಿತ್ರಕ್ಕೆ ‘ಸನಮ್ ಮೇರೆ ಹಮ್ರಾಜ್’ ಎಂದು ಹೆಸರಿಡಲಾಗಿದೆ.
ಹರ್ಷಿ ಸಿನಿಮಾ ನಿರ್ಮಾಣ ಚಿತ್ರಕ್ಕಿದೆ. ಬಂಟಿ ಅವರ ನಿರ್ದೇಶನವಿದೆ. ಮಹೇಶ್ ಕ್ಯಾಮರಾ ಹಿಡಿಯಲಿದ್ದಾರೆ. ಅಭಯ್ ನಿರ್ಮಾಣ ಮಾಡಲಿದ್ದಾರೆ. ಚಿತ್ರಕ್ಕೆ ರಿತೇಶ್ ಪಾಂಡೆ ಹೀರೋ ಆಗಿದ್ದಾರೆ. ಅವರು ಭೊಜ್ ಪುರಿ ಸಿನಿಮಾ ಇಂಡಸ್ಟ್ರಿಯಲ್ಲಿ ಸೂಪರ್ ಸ್ಟಾರ್. ಸಹಜವಾಗಿಯೇ ಹರ್ಷಿಕಾ ಅವರಿಗೆ ಖುಷಿ ಇದೆ. ಇನ್ನು, ಇದು ಅವರ ಮೂರನೇ ಭೋಜ್ ಪುರಿ ಚಿತ್ರ.
ಕನ್ನಡದ ಹುಡುಗಿ ಈಗ ಪರಭಾಷೆಯಲ್ಲೂ ಮಿಂಚುತ್ತಿದ್ದಾರೆ. ಹೊಸ ಬಗೆಯ ಕಥೆ ಮೂಲಕ ಹರ್ಷಿಕಾ ತಮ್ಮದ್ದೊಂದು ಛಾಪು ಮೂಡಿಸುತ್ತಿದ್ದಾರೆ.
ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನಾಯಕರಾಗಿ ನಟಿಸುತ್ತಿರುವ “ಗಣ” ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಆರ್ ಪಿ ಸಿ ಲೇಔಟ್ ನ ಸಂಕಷ್ಟ ಹರ ಗಣಪತಿ ದೇವಸ್ಥಾನದಲ್ಲಿ ನೆರವೇರಿತು. ಮೊದಲ ಸನ್ನಿವೇಶಕ್ಕೆ ವಿತರಕ ದೇವೇಂದ್ರ ರೆಡ್ಡಿ ಕ್ಲಾಪ್ ಮಾಡಿದರು. ಪ್ರಜ್ವಲ್ ಪತ್ನಿ ರಾಗಿಣಿ ಚಂದ್ರನ್ ಕ್ಯಾಮೆರಾ ಚಾಲನೆ ಮಾಡಿದ್ದಾರೆ.
ಆಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಹರಿ ಪ್ರಸಾದ್ ಜಕ್ಕ ನಿರ್ದೇಶಿಸುತ್ತಿದ್ದಾರೆ. ತೆಲುಗಿನಲ್ಲಿ ಮೂರು ಚಿತ್ರಗಳನ್ನು ನಿರ್ದೇಶಿಸಿರುವ ಹರಿಪ್ರಸಾಸ್ ಅವರಿಗೆ ಕನ್ನಡದಲ್ಲಿ ಮೊದಲ ಚಿತ್ರ .
ಚರಿ ಕ್ರಿಯೇಷನ್ಸ್ ಲಾಂಛನದಲ್ಲಿ ಪಾರ್ಥು ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಚಿಕ್ಕಬಳ್ಳಾಪುರ ಶ್ರೀನಿವಾಸ್ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.. ಮೂರು ಹಾಡುಗಳಿರುವ ಈ ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ನೀಡುತ್ತಿದ್ದಾರೆ. ಜೈ ಆನಂದ್ ಛಾಯಾಗ್ರಹಣ ಹಾಗೂ ಹರೀಶ್ ಕೊಮ್ಮೆ ಸಂಕಲನ ಈ ಚಿತ್ರಕ್ಕಿದೆ.
ಪ್ರಜ್ವಲ್ ಅವರಿಗೆ ನಾಯಕಿಯಾಗಿ ಸಾರಾ ಹರೀಶ್(ಭರತ ಬಾಹುಬಲಿ ಖ್ಯಾತಿ) ನಟಿಸುತ್ತಿದ್ದಾರೆ. ಸಂಪತ್ ಕುಮಾರ್, ರವಿ ಕಾಳೆ, ಶಿವರಾಜ್ ಕೆ ಆರ್ ಪೇಟೆ ಮುಂತಾದವರು ಈ ಚಿತ್ರದಲ್ಲಿದ್ದಾರೆ. ಫೆಬ್ರವರಿಯಲ್ಲಿ ಬೆಂಗಳೂರಿನಲ್ಲಿ ಚಿತ್ರೀಕರಣ ಆರಂಭವಾಗಲಿದೆ.
ನಟ ಪುನೀತ್ ಅವರ ಕುರಿತಂತೆ ಸಾಕಷ್ಟು ಹಾಡುಗಳು ಬಂದಿವೆ. ಆ ಸಾಲಿಗೆ ಈಗ ಹೊಸಬರು ಹೊಸದೊಂದು ಹಾಡನ್ನು ರಿಲೀಸ್ ಮಾಡಿದ್ದಾರೆ. ಅದಕ್ಕೆ “ಯಾರೋ ನೀನು” ಎಂಬ ಹೆಸರಿಡಲಾಗಿದೆ. ಇತ್ತೀಚೆಗೆ ರಾಘವೇಂದ್ರ ರಾಜಕುಮಾರ್ ಅವರು ಸಾಂಗ್ ರಿಲೀಸ್ ಮಾಡಿ, ಹೊಸಬರ ತಂಡಕ್ಕೆ ಶುಭಕೋರಿದರು. ಈ ವೇಳೆ ರಾಘವೇಂದ್ರ ರಾಜಕುಮಾರ್ ಅವರು ಮಾತನಾಡಿದ್ದಿಷ್ಟು. “ನನಗೆ ಇಂತಹ ದಿನ ಬರುತ್ತದೆ ಎಂದು ಊಹಿಸಿರಲಿಲ್ಲ. ನಾನು ಅಪ್ಪು ಇದ್ದಾಗ, ಅನೇಕ ಚಿತ್ರದ ಆಡಿಯೋ ರಿಲೀಸ್ ಮಾಡಿದ್ದೀವಿ. ಆಗ ನನಗೆ ಬರೀ ಅಪ್ಪು ಮಾತ್ರ ಕಾಣುತ್ತಿದ್ದ. ಈಗ ಬಿಡುಗಡೆ ಮಾಡಿರುವ ಹಾಡಿನಲ್ಲಿ ಅವನ ಕೋಟ್ಯಾಂತರ ಅಭಿಮಾನಿಗಳು ಕಾಣುತ್ತಿದ್ದಾರೆ. ಈ ಹಾಡಿನ ರಾಜ್ ಕಿಶೋರ್ ಅವರ ಸಾಹಿತ್ಯ- ಸಂಗೀತ ಚೆನ್ನಾಗಿದೆ. ಶಶಿಕುಮಾರ್ ಅದ್ಭುತವಾಗಿ ಹಾಡಿದ್ದಾರೆ. ನಿಮ್ಮೆಲ್ಲರ ಪ್ರೀತಿ ಈ ಹಾಡಿನಲ್ಲಿ ಕಾಣಿಸುತ್ತಿದೆ. ಇದನ್ನು ನಾನು ಬಿಡುಗಡೆ ಅನ್ನುವುದಿಲ್ಲ. ಅರ್ಪಣೆ ಎನ್ನುತ್ತೇನೆ. ಎಲ್ಲರಿಗೂ ಒಳ್ಳೆಯದಾಗಲಿ ಎಂದು ಹಾರೈಸಿದರು.
ಕನ್ನಡದ ಹಲವು ಚಿತ್ರಗಳಿಗೆ ಸಂಗೀತ ನೀಡಿರುವ ಮತ್ತು ಈಗ ಹಿಂದಿ, ತೆಲುಗು, ಕನ್ನಡ, ತಮಿಳು, ಮಲಯಾಳಂ, ಬಂಗಾಳಿ ಭಾಷೆಗಳಲ್ಲಿ ನಿರ್ಮಾಣವಾಗುತ್ತಿರುವ “ಡಾಟರ್ ಆಫ್ ಇಂಡಿಯಾ” ಚಿತ್ರದ ಸಂಗೀತ ನಿರ್ದೇಶಕ ರಾಜ್ ಕಿಶೋರ್ ಈ ಹಾಡಿಗೆ ಸಾಹಿತ್ಯ ಬರೆದು ಸಂಗೀತ ನೀಡಿದ್ದಾರೆ. ಒಬ್ಬ ನಾಯಕನ ಚಿತ್ರಕ್ಕೋ ಹುಟ್ಟುಹಬ್ಬಕ್ಕೋ ಅಥವಾ ಮತ್ತಾವುದೋ ಸಂದರ್ಭಕ್ಕೋ ಹಾಡು ಬರೆದು ಬಿಡುಗಡೆ ಮಾಡುವುದೇ ಬೇರೆ. ಈ ಸಂದರ್ಭವೇ ಬೇರೆ. ಅವರ ಮನೆಯವರು , ಅವರನ್ನು ಹತ್ತಿರದಿಂದ ಬಲ್ಲ ಎಲ್ಲರಿಗೂ ದುಃಖ ಆಗುವುದು ಸಹಜ. ಆದರೆ, ಬರೀ ಈ ಊರು, ಈ ದೇಶವಲ್ಲದೇ, ಹೊರ ದೇಶಗಳಲ್ಲೂ ಇವರ ನಿಧನಕ್ಕೆ ನಮ್ಮವರನೇ ಕಳೆದುಕೊಂಡಿದ್ದೀವಿ ಎಂದು ದುಃಖಿಸುತ್ತಿದ್ದಾರಲ್ಲಾ ಇದೇ ನಾನು ಹಾಡು ಬರೆಯೋಕೆ ಕಾರಣವಾಯ್ತು. ಇದಕ್ಕೆ ಪ್ರೋತ್ಸಾಹ ನೀಡಿದ್ದ ನಿರ್ಮಾಪಕಿ ಭೈರವಿ ಅವರಿಗೆ, ಗಾಯಕ ಶಶಿಕುಮಾರ್ ಅವರಿಗೆ ಹಾಗೂ ಹಾಡು ಬಿಡುಗಡೆ ಮಾಡಿರುವ ರಾಘವೇಂದ್ರ ರಾಜಕುಮಾರ್ ಅವರಿಗೆ ನಾನು ಧನ್ಯವಾದ ಹೇಳ್ತೀನಿ ಅಂದರು ರಾಜ್ ಕಿಶೋರ್.
ಗಾಯಕ ಶಶಿಕುಮಾರ್ ಅವರು ಈ ಹಾಡು ಹಾಡಿದ್ದಾರೆ. “ದೇವರಿಗಾಗಿ ನಾನು ಯಾವುದೇ ವ್ರತ ಮಾಡಿಲ್ಲ. ಆದರೆ, ನಾನು ಅಪ್ಪು ಅವರಿಗಾಗಿ ಈ ಹಾಡನ್ನು ಹಾಡುವಾಗ ವ್ರತ ಮಾಡಿ ಹಾಡಿದ್ದೇನೆ. ಅವರು ನನ್ನ ಪಾಲಿನ ದೇವರು ಎಂದರೂ ತಪ್ಪಿಲ್ಲ. ಅವಕಾಶ ನೀಡಿದ ರಾಜ್ ಕಿಶೋರ್ ಹಾಗೂ ಭೈರವಿ ಅವರಿಗೆ ಧನ್ಯವಾದ ಎಂದರು ಶಶಿಕುಮಾರ್. ಇನ್ನು, ಈ ಹಾಡಿಗೆ ಭೈರವಿ ನಿರ್ಮಾಪಕರು. ಅವರು ಹೇಳಿದ್ದಿಷ್ಟು, ಚಿಕ್ಕವರಿಂದ ಹಿಡಿದು ದೊಡ್ಡವರ ತನಕ ಅಪ್ಪು ಸರ್ ಅವರ ಸಾವಿನಿಂದ ಆಗುತ್ತಿರುವ ತಳಮಳ ಈ ಹಾಡನ್ನು ನಿರ್ಮಿಸಲು ಮುಖ್ಯ ಕಾರಣ. ಈ ಹಾಡು ನಿರ್ಮಾಣವಾಗಲು ಸಹಕಾರ ನೀಡಿದ ತಂಡಕ್ಕೆ ಥ್ಯಾಂಕ್ಸ್ ಹೇಳಿದರು. ಈ ವೇಳೆ ಎಸ್.ಮಹೇಶ್ ಇತರರು ಇದ್ದರು.
ದೇಶಾದ್ಯಂತ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದ ಸಿನಿಮಾ ಆರ್ಆರ್ಆರ್ ಇನ್ನೇನು ಈ ವಾರದಲ್ಲಿ ಪ್ರೇಕ್ಷಕರ ಮುಂದೆ ಅಪ್ಪಳಿಸಬೇಕಿತ್ತು. ಆದರೆ, ಇದೀಗ ಚಿತ್ರತಂಡದಿಂದ ಸುದ್ದಿಯೊಂದು ಹೊರಬಿದ್ದಿದ್ದು, ಆರ್ಆರ್ಆರ್ ಚಿತ್ರ ಬಿಡುಗಡೆ ಮುಂದಕ್ಕೆ ಹೋಗಿದೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ, ಈ ಚಿತ್ರ ಜನವರಿ ೭ರಂದು ಬಿಡುಗಡೆಯಾಗಬೇಕಿತ್ತು. ಅ ಕುರಿತು ಪ್ರಚಾರ ಕೂಡ ನಡೆದಿತ್ತು. ಆದರೆ, ಚಿತ್ರತಂಡ ಟ್ವೀಟ್ ಮಾಡುವ ಮೂಲಕ ಸಿನಿಮಾ ಬಿಡುಗಡೆ ಮುಂದಕ್ಕೆ ಹೋಗಿರುವುದನ್ನು ಸ್ಪಷ್ಟಪಡಿಸಿದೆ.
ಅದಕ್ಕೆ ಕಾರಣ, ಮತ್ತೆ ಕೊರನಾ ಅವತಾರ. ಹೌದು, ಕೊರೊನಾ ಈಗ ಮತ್ತೆ ಆತಂಕ ತಂದೊಡ್ಡಿದೆ. ಮಹಾರಾಷ್ಟ್ರದಲ್ಲಿ ಅಬ್ಬರ ಶುರುವಾಗುತ್ತಿದೆ. ಅಲ್ಲೂ ಚಿತ್ರಮಂದಿರಗಳಿಗೆ ಸಮಸ್ಯೆ ಇದೆ. ದೆಹಲಿಯಲ್ಲೂ ಅದಾಗಲೇ ಸಮಸ್ಯೆ ಎದುರಾಗಿದೆ. ಅತ್ತ ಕೇರಳದಲ್ಲೂ ಕೂಡ ಹೆಚ್ಚಾಗಿಯೇ ಇದೆ.
ಹಾಗಾಗಿ ಚಿತ್ರತಂಡ ಈ ಸಮಯದಲ್ಲಿ ಸಿನಿಮಾ ಬಿಡುಗಡೆಯಾದರೆ, ಪ್ರೇಕ್ಷಕರು ಬಂದರೂ, ಆಸನ ಭರ್ತಿ ಸಮಸ್ಯೆಯಿಂದ ಚಿತ್ರಕ್ಕೆ ಪೆಟ್ಟು ಬೀಳಬಹುದು ಎಂಬ ಕಾರಣಕ್ಕೆ ಚಿತ್ರ ಬಿಡುಗಡೆಯನ್ನು ಮುಂದಕ್ಕೆ ಹಾಕಿದೆ. ಆದರೆ, ಆರ್ಆರ್ಆರ್ ಚಿತ್ರ ಯಾವಾಗ ಬಿಡುಗಡೆಯಾಗಲಿದೆ ಎಂಬುದಕ್ಕೆ ಸದ್ಯ ಉತ್ತರವಿಲ್ಲ. ಫೆಬ್ರವರಿ ಅಥವಾ ಏಪ್ರಿಲ್ ವೇಳೆಗೆ ಸಿನಿಮಾ ಬರಬಹುದು.
ಹೊಸ ವರ್ಷ ಶುರುವಾಗಿದೆ. ಎಲ್ಲರೂ ಶುಭಾಶಯಗಳ ವಿನಿಮಯ ಮಾಡಿಕೊಳ್ಳುತ್ತಿದ್ದಾರೆ. ತಮ್ಮ ಪ್ರೀತಿಯ ಅಭಿಮಾನಿಗಳಿಗೆ ಕನ್ನಡದ ಬಹುತೇಕ ಸ್ಟಾರ್ ನಟರು ಕೂಡ ತಮ್ಮ ಸೋಶಿಯಲ್ ಮೀಡಿಯಾ ಮೂಲಕ ಶುಭಾಶಯ ತಿಳಿಸಿದ್ದಾರೆ. ದರ್ಶನ್, ಸುದೀಪ್, ಗಣೇಶ್, ಡಾಲಿ ಧನಂಜಯ್, ದುನಿಯಾ ವಿಜಯ್, ನೆನಪಿರಲಿ ಪ್ರೇಮ್ ಸೇರಿದಂತೆ ಕನ್ನಡದ ಬಹುತೇಕ ನಟ,ನಟಿಯರು, ನಿರ್ದೇಶಕರು ಕೂಡ ಹೊಸ ವರ್ಷ ಎಲ್ಲರಿಗೂ ಒಳ್ಳೆಯದ್ದನ್ನು ತರಲಿ ಎಂದು ಶುಭಾಶಯ ಕೋರಿದ್ದಾರೆ.
ಹೊಸ ವರ್ಷದ ಪ್ರತೀ ಕ್ಷಣವೂ ಸಂತಸ ತುಂಬಿರಲಿ ನಟ ದರ್ಶನ್ ಟ್ವೀಟ್ ಮಾಡುವ ಮೂಲಕ ನಾಡಿನ ಜನರಿಗೆ ಹಾಗು ತಮ್ಮ ಅಭಿಮಾನಿಗಳಿಗೆ ಶುಭಕೋರಿದ್ದಾರೆ. “ಹೊಸ ವರ್ಷದ ಪ್ರತಿಕ್ಷಣವೂ ಸಂತಸದಿಂದ ಕೂಡಿರಲಿ. ನಿಮ್ಮ ಇಷ್ಟಾರ್ಥಗಳೆಲ್ಲವೂ ಈಡೇರಲಿ. ನಿಮ್ಮ ಭವಿಷ್ಯ ಮತ್ತಷ್ಟು ಉಜ್ವಲಿಸಲಿ ಎಂದು ಆಶಿಸುತ್ತಾ ತಮಗೆ ಹಾಗೂ ತಮ್ಮ ಕುಟುಂಬಕ್ಕೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು”. ಎಂದು ಟ್ವೀಟ್ ಮಾಡಿದ್ದಾರೆ. ಅವರ ಬರಹ ಇರುವ ಟ್ವೀಟ್ನಲ್ಲಿ ಅವರದ್ದೊಂದು ಫೋಟೋವನ್ನೂ ಹಂಚಿಕೊಂಡಿದ್ದಾರೆ. ಕೆಟ್ಟದ್ದು ಬಿಡಿ, ಒಳ್ಳೆಯದ್ದು ತಗೊಂಡ್ ಮುಂದೆ ಸಾಗಿ ನಟ ಸುದೀಪ್ ಕೂಡ ಟ್ವೀಟ್ ಮಾಡಿದ್ದು, ಟ್ವೀಟ್ನಲ್ಲಿ ಕೆಟ್ಟದನ್ನು ಬಿಟ್ಟು ಒಳ್ಳೆಯದನ್ನು ತೆಗೆದುಕೊಂಡು ಮುಂದುವರೆಯಬೇಕು ಎಂದಿದ್ದಾರೆ.
ಸುದೀಪ್ ವಿಕ್ರಾಂತ್ ರೋಣ ಚಿತ್ರದ ಪೋಸ್ಟರ್ ಹಂಚಿಕೊಂಡು ಹೊಸ ವರ್ಷದ ಶುಭಾಶಯ ತಿಳಿಸಿದ್ದಾರೆ. “ಉತ್ತಮ ಮತ್ತು ಉತ್ತಮವಲ್ಲದ ಘಟನೆಗಳು, ಸಂದರ್ಭಗಳು ಪ್ರತಿ ವರ್ಷ ಬರುತ್ತವೆ. ನಾವೆಲ್ಲರೂ ಉತ್ತಮ ಅಲ್ಲದನ್ನು ಹಿಂದೆ ಬಿಟ್ಟು, ಉತ್ತಮ ಆಗಿರುವುದನ್ನು ಮುಂದಕ್ಕೆ ತೆಗೆದುಕೊಂಡು ಹೋಗಬೇಕು. ಸುಂದರವಾದ ಸೂರ್ಯೋದಯದೊಂದಿಗೆ ನಾವು 2022ಕ್ಕೆ ಕಾಲಿಟ್ಟದ್ದೇವೆ. ಮತ್ತು ಈ ವರ್ಷ ಉತ್ತಮವಾದದನ್ನು ಮಾಡೋಣ. ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು ” ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.
ಪುನೀತ್ ರಾಜ್ಕುಮಾರ್ ಅವರು ನಮ್ಮೊಂದಿಗಿಲ್ಲ. ಆದರೆ, ಅದ್ಭುತ ಸಿನಿಮಾಗಳ ಮೂಲಕ ಅವರಿನ್ನೂ ನಮ್ಮೊಂದಿಗೆ ಜೀವಂತವಾಗಿದ್ದಾರೆ. ಅವರು ಇಲ್ಲ ಎಂಬ ಭಾವನೆ ಯಾರಲ್ಲೂ ಇಲ್ಲ. ಅವರು ನಿಧನರಾಗಿ ಎರಡು ತಿಂಗಳಾದರೂ ಪ್ರತಿ ದಿನ ಸಮಾಧಿಗೆ ಸಾವಿರಾರು ಜನ ಭೇಟಿ ನೀಡಿ ಪೂಜಿಸುತ್ತಿದ್ದಾರೆ. ಅವರ ಮನೆಗೂ ಭೇಟಿ ನೀಡುವ ಸ್ಟಾರ್ ನಟರ ಸಂಖ್ಯೆ ಕೂಡ ಕಡಿಮೆಯಾಗಿಲ್ಲ. ಇತ್ತೀಚೆಗಷ್ಟೇ ನಟ ಪ್ರಭಾಸ್ ಅವರು ಭೇಟಿ ನೀಡಿ ಸಾಂತ್ವನ ಹೇಳಿದ್ದರು. ಜನವರಿ ೧ರಂದು ತಮಿಳಿನ ಖ್ಯಾತ ನಟ ಕಮಲ್ ಹಾಸನ್ ಅವರು ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ಅವರು ವಿಕ್ರಂ ಸಿನಿಮಾದ ಶೂಟಿಂಗ್ಗಾಗಿ ಬೆಂಗಳೂರಿಗೆ ಬಂದಿದ್ದಾರೆ. ಈ ಸಮಯದಲ್ಲಿ ಅವರು ಪುನೀತ್ ರಾಜಕುಮಾರ್ ಅವರ ನಿವಾಸಕ್ಕೆ ಭೇಟಿ ನೀಡಿ, ಅಶ್ವಿನಿ ಪುನೀತ್ ರಾಜಕುಮಾರ್ ಅವರ ಜೊತೆ ಮಾತನಾಡಿ, ಚರ್ಚಿಸಿ ಸಾಂತ್ವನ ಹೇಳಿದ್ದಾರೆ.
ಪುನೀತ್ ಅವರು ನಿಧನರಾದಾಗ ಕಮಲ್ ಹಾಸನ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಸಂತಾಪ ಸೂಚಿಸಿದ್ದರು. ಪುನೀತ್ ಅವರ ಅಂತಿಮ ದರ್ಶನಕ್ಕೆ ಅವರು ಆಗಮಿಸಿರಲಿಲ್ಲ. ಈಗ ಪುನೀತ್ ನಿವಾಸಕ್ಕೆ ಆಗಮಿಸಿ, ಅಪ್ಪುಗೆ ನಮನ ಸಲ್ಲಿಸಿದ್ದಾರೆ. ಈಗಾಗಲೇ ಸ್ಟಾರ್ ನಟ-ನಟಿಯರು ಪುನೀತ್ ನಿವಾಸಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ಚಿರಂಜೀವಿ, ರಾಮ್ ಚರಣ್ ತೇಜ, ಜೂ ಎನ್ಟಿಆರ್, ಬಾಲಕೃಷ್ಣ, ನಾಗಾರ್ಜುನ, ಮೋಹನ್ಬಾಬು, ತಮಿಳು ನಟ ವಿಶಾಲ್, ಸೂರ್ಯ, ಸಿದ್ಧಾರ್ಥ್ ಸೇರಿದಂತೆ ಹಲವರು ಆಗಮಿಸಿ ಸಾಂತ್ವನ ಹೇಳಿದ್ದಾರೆ.
ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ನಟನೆಯ ‘ಭಜರಂಗಿ 2’ ಸಿನಿಮಾ ಜೀ 5 ಓಟಿಟಿಯಲ್ಲಿ ಬಿಡುಗಡೆಯಾಗಿ ಭಾರೀ ಸದ್ದು ಮಾಡುತ್ತಿದೆ. ಭಜರೇ ಭಜರಂಗಿ-2 ಓಟಿಟಿಗೆ ಬಂದ ಮೂರೇ ದಿನಗಳಲ್ಲಿ 5 ಕೋಟಿಗೂ ಅಧಿಕ ನಿಮಿಷಗಳ ವೀಕ್ಷಣೆ ಪಡೆದುಕೊಂಡಿದೆ. ಈ ಮೂಲಕ ಕಡಿಮೆ ಅವಧಿಯಲ್ಲಿ ಅಧಿಕ ವೀಕ್ಷಣೆ ಕಂಡ ಕನ್ನಡದ ಮೊದಲ ಸಿನಿಮಾ ಎಂಬ ಹೆಗ್ಗಳಿಕೆಗೆ ‘ಭಜರಂಗಿ 2’ ಪಾತ್ರವಾಗಿದೆ. ಇದು ಭಜರಂಗಿ ಬಳಗಕ್ಕೆ ಹಾಗೂ ಶಿವಣ್ಣ ಅಭಿಮಾನಿಗಳ ಸಂತಸವನ್ನು ದುಪ್ಪಟ್ಟು ಮಾಡಿದೆ.
ಅಭಿಮಾನಿಗಳೊಟ್ಟಿಗೆ ‘ಭಜರಂಗಿ-2’ ಸೆಲೆಬ್ರೇಷನ್!
ಭಜರಂಗಿ-2 ಸಿನಿಮಾ ಡಿಸೆಂಬರ್ 23ಕ್ಕೆ ಜೀ 5 ಒಟಿಟಿಯಲ್ಲಿ ಬಿಡುಗಡೆಯಾಗಿತ್ತು. ದೊಡ್ಡ ರೆಕಾರ್ಡ್ ಬರೆದ ಭಜರಂಗಿ-2 ಸಿನಿಮಾವನ್ನು ಜೀ5 ಒಟಿಟಿಯಲ್ಲಿ ನೋಡಿವರಿಗೆ ಶಿವಣ್ಣನನ್ನು ಭೇಟಿ ಮಾಡಿ ಮಾತುಕತೆ ನಡೆಸುವ ಬಂಗಾರದಂತಹ ಅವಕಾಶವನ್ನು ಜೀ5 ಕಲ್ಪಿಸಿತ್ತು. ಮೂರೇ ದಿನದಲ್ಲಿ 5 ಕೋಟಿ ವೀಕ್ಷಣೆ ಮಾಡಿದ ಪ್ರೇಕ್ಷಕರಲ್ಲಿ ಆಯ್ದ 10 ಮಂದಿಗಳಿಗೆ ಜೀ5 ಶಿವಣ್ಣನೊಟ್ಟಿಗೆ ಮಾತುಕತೆ ನಡೆಸುವ ಸುವರ್ಣಾವಕಾಶ ನೀಡಿತ್ತು. ಅದರಂತೆ ಅಭಿಮಾನಿಗಳು ಶಿವಣ್ಣನೊಟ್ಟಿಗೆ ಬೆರೆತು ಸಮಯ ಕಳೆದಿದ್ದಾರೆ. ಭಜರಂಗಿ-2ಗೆ ಜೈಕಾರ ಹಾಕಿದ್ದಾರೆ. ಅಲ್ಲದೇ ಭಜರಂಗಿ-3ಗೆ ಎದುರು ನೋಡುತ್ತಿರುವುದಾಗಿ ಆಸೆ ವ್ಯಕ್ತಪಡಿಸಿದ್ದಾರೆ.
ಜೀ ಕನ್ನಡ ಈಗಾಗ್ಲೇ ಹಲವು ವಿಭಿನ್ನ ಪ್ರಯತ್ನಗಳಿಗೆ ಮುನ್ನುಡಿ ಬರೆದಿದೆ. ಅದೇ ರೀತಿ ಸ್ಟಾರ್ಸ್ ಗಳೊಟ್ಟಿಗೆ ಅಭಿಮಾನಿಗಳನ್ನು ಬೆರೆಸುವ ಕೆಲಸ ಮಾಡ್ತಿದೆ. ಒಳ್ಳೆ ಕಂಟೆಂಟ್ ಸಿನಿಮಾಗಳನ್ನು ಜೀ5 ಮೂಲಕ ಪ್ರಪಂಚದೆದುರು ತೆರೆದಿಡ್ತಿದ್ದು, ಇದು ಜಸ್ಟ್ ಸ್ಯಾಂಪಲ್ ಅಷ್ಟೇ. ಮುಂದಿನ ದಿನಗಳಲ್ಲಿ ಇನ್ನಷ್ಟು ವಿಭಿನ್ನ-ವಿಶೇಷ ಯೋಜನೆಗಳನ್ನು ಜೀ5 ಹಾಕಿಕೊಂಡಿದ್ದು, ಅದು ಪ್ರತಿ ಪ್ರೇಕ್ಷಕರಿಗೆ ತಲುಪಿಸಿದೆ ಕನ್ನಡದ ನಂಬರ್ 1 ಮನರಂಜನಾ ಚಾನೆಲ್ ಜೀ ಕನ್ನಡ. ಹೀಗೆ ಸಾಗಲಿ ಈ ಯಶಸ್ವಿನ ಹಾದಿ.
ಸ್ಟೋರಿ ಟೆಲ್ ಕನ್ನಡದಲ್ಲಿ ಆಡಿಯೋ ಸರಣಿಯನ್ನು ಆರಂಭಿಸುತ್ತಿದೆ. ನಟ ರಮೇಶ್ ಅರವಿಂದ್ ಅವರ ಜೊತೆ ಸ್ಟೋರಿ ಟೆಲ್ ಹೊಸದೊಂದು ಸರಣಿ ಆರಂಭಿಸುತ್ತಿದೆ. ಅದೇ “ಮಾಸದ ಮಾತುಗಳುʼ ಹೊಸ ವರ್ಷದಲ್ಲಿ ಸ್ಟೋರಿಟೆಲ್ನಲ್ಲಿನ ಆಡಿಯೋ ಸರಣಿಯ ರೂಪದಲ್ಲಿ ರಮೇಶ್ ಅರವಿಂದ್ ಅವರು, ಭರವಸೆ ನೀಡುವಂತಹ, ಬುದ್ಧಿವಂತಿಕೆ ಹೆಚ್ಚಿಸುವಂತಹ ಮತ್ತು ಬದುಕನ್ನು ರೂಪಿಸಿಕೊಳ್ಳುವಂತಹ ಸಲಹೆಗಳನ್ನು ನೀಡಲಿದ್ದಾರೆ. ಈ ಹೊಸ ಬಗೆಯ ಸ್ಟೋರಿ ಟೆಲ್ ಆಡಿಯೋ ಸರಣಿ ಮೂಲಕ ಹೊಸದೊಂದು ವೇದಿಕೆ ಕಲ್ಪಿಸುವ ಪ್ರಯತ್ನ ಅವರದು.
ಹೌದು, ಕಥೆ ಬರೆಯೋದು, ಓದೋದು ಅಂದರೆ ತುಂಬಾ ಖುಷಿಪಡುವಂತಹ ವಿಷಯ. ಇದುವರೆಗೆ ಯಾರೋ ಬರೆದ ಕಥೆಗಳನ್ನು ಓದುವುದರ ಜೊತೆಗೆ ಮನದಲ್ಲೇ ಸಂಭ್ರಮಿಸಲಾಗುತ್ತಿತ್ತು. ಈಗ ಕಾಲ ಬದಲಾಗಿದೆ. ಕಾಲದ ಜೊತೆಗೆ ತಾಂತ್ರಿಕತೆಯೂ ಬೆಳೆದಿದೆ. ವಿಷಯ ಏನಪ್ಪಾ ಅಂದರೆ, ಸ್ಟೋರಿ ಟೆಲ್ ಕನ್ನಡದಲ್ಲಿ ಆಡಿಯೋ ಸರಣಿಯನ್ನು ಆರಂಭಿಸುತ್ತಿದೆ. ನಟ ರಮೇಶ್ ಅರವಿಂದ್ ಅವರ ಜೊತೆ ಸ್ಟೋರಿ ಟೆಲ್ ಹೊಸದೊಂದು ಸರಣಿ ಆರಂಭಿಸುತ್ತಿದೆ. ಅದೇ “ಮಾಸದ ಮಾತುಗಳುʼ. ಈ ಬಾರಿಯ ಹೊಸ ವರ್ಷದಲ್ಲಿ ಸ್ಟೋರಿಟೆಲ್ನಲ್ಲಿನ ಆಡಿಯೋ ಸರಣಿಯ ರೂಪದಲ್ಲಿ ರಮೇಶ್ ಅರವಿಂದ್ ಅವರು, ಭರವಸೆ ನೀಡುವಂತಹ, ಬುದ್ಧಿವಂತಿಕೆ ಹೆಚ್ಚಿಸುವಂತಹ ಮತ್ತು ಬದುಕನ್ನು ರೂಪಿಸಿಕೊಳ್ಳುವಂತಹ ಸಲಹೆಗಳನ್ನು ನೀಡಲಿದ್ದಾರೆ. ಈ ಹೊಸ ಬಗೆಯ ಸ್ಟೋರಿ ಟೆಲ್ ಆಡಿಯೋ ಸರಣಿ ಮೂಲಕ ಹೊಸದೊಂದು ವೇದಿಕೆ ಕಲ್ಪಿಸುವ ಪ್ರಯತ್ನ ಅವರದು. ಅಂದಹಾಗೆ, ಸ್ಟೋರಿಟೆಲ್ ಕನ್ನಡ ಸರಣಿಯಲ್ಲಿ ರಮೇಶ್ ಅರವಿಂದ್ ಅವರು, “ಮಾಸದ ಮಾತುಗಳು” ವಿತ್ ರಮೇಶ್ ಹೆಸರಲ್ಲಿ ಕೇಳುಗರಿಗೆ ಬದುಕಲ್ಲಿ ನೆರವಾಗಬಲ್ಲಂತಹ ಅನೇಕ ವಿಷಯಗಳಿರಲಿವೆ. ಆ ಸರಣಿ 2022r 12 ತಿಂಗಳ ಅವಧಿಯಲ್ಲಿ ಕಂತುಗಳ ರೂಪದಲ್ಲಿ ಪ್ರಸ್ತುತ ಪಡಿಸಲಾಗುತ್ತದೆ.
“ಮಾಸದ ಮಾತುಗಳು ವಿತ್ ರಮೇಶ್” ಸರಣಿಯ ಎಲ್ಲಾ ೧೨ ಕಂತುಗಳು ಜನವರಿ ೨ರಂದು ಬಿಡುಗಡೆಯಾಗಲಿದೆ. ರಮೇಶ್ ಅರವಿಂದ್ ಅವರು ಬರೆದಿರುವ ಈ ಸರಣಿ ವಿಶೇಷವಾಗಿ ಸ್ಟೋರಿಟೆಲ್ನಲ್ಲಿ ಮಾತ್ರ ಸಿಗಲಿದೆ. ರಮೇಶ್ ಅವರು ತಮ್ಮ ಅನುಭವಗಳು, ಬದುಕಿನಿಂದ ಕಲಿತ ಪಾಠಗಳು ಮತ್ತು ಜೀವನ ಮೌಲ್ಯಗಳನ್ನು ಬರಹಗಳ ರೂಪದಲ್ಲಿ ಹೆಣೆಯಲಾಗಿದೆ. ನಿತ್ಯ ಬದುಕಿನ ಸೊಬಗಿನ ಬಗ್ಗೆ ಅವರು ಮಾತಾಡಿದ್ದಾರೆ. ಎಲ್ಲಾ ವಯಸ್ಸಿನ ಓದುಗರಿಗೂ ಇದು ಇಷ್ಟವಾಗಲಿದ್ದು, ಲೈಫಲ್ಲಿ ಪ್ರೇರಣೆ ಸಿಗುವಂತಹ ಸರಣಿ ಇದಾಗಲಿದೆ ಎಂಬುದು ಸ್ಟೋರಿಟೆಲ್ ಸಂಸ್ಥೆಯ ಮಾತು.
ರಮೇಶ್ ಅರವಿಂದ್ ತಮ್ಮ ವಿಶೇಷ ಮಾತಿನ ಮೂಲಕ ಅವರ ಸ್ನೇಹಪರ ವ್ಯಕ್ತಿತ್ವ ಎದ್ದು ಕಾಣಲಿದೆ. ಅವರು ನೇರ ನಮ್ಮ ಜೊತೆಯಲ್ಲೇ ಮಾತಾಡುತ್ತಿದ್ದಾರೇನೋ ಎಂದೆನಿಸುವುದು ನಿಜ. ಇತ್ತೀಚಿನ ದಿನಗಳಲ್ಲಿ ಅವರು ಒಬ್ಬ ಪ್ರೇರಣಾದಾಯಕರಾಗಿ, ವಾಗ್ಮಿಯಾಗಿದ್ದು, ಬದುಕನ್ನು ಎಲ್ಲಾ ದೃಷ್ಟಿಕೋನದಿಂದ ನೋಡುವಂತೆ ತಮ್ಮ ಕೇಳುಗರನ್ನು ಪ್ರೋತ್ಸಾಹಿಸುತ್ತದ ಬಂದಿದ್ದಾರೆ. ಶಿಕ್ಷಣ, ವೃತ್ತಿ, ಉದ್ಯಮ ಹೀಗೆ ಇತರೆ ರಂಗಗಳ ಕುರಿತು ಮಾತಾಡಿದ್ದಾರೆ.
ಸ್ಟೋರಿಟೆಲ್ ಎಲ್ಲಾ ಬಗೆಯ ಚಿಂತನೆಗಳಿರುವ ಓದುಗರಿಗೆ, ವಿಭಿನ್ನ ಪ್ರಾಕಾರಗಳ ಪುಸ್ತಕ ಓದುವ ಓದುಗರಿಗೂ ಇಷ್ಟವಾಗಲಿದೆ. ಕನ್ನಡದಲ್ಲೂ ಇದು ನೆಲದ ಕಥೆಗಳಿಗೆ ಹತ್ತಿರವಾಗಿಸುವ ಸಲುವಾಗಿಯೇ ಸ್ಟೋರಿಟೆಲ್ ಇಂಡಿಯಾ ಪ್ರಾದೇಶಿಕ ಭಾಷೆಗಳಲ್ಲೂ ಆಡಿಯೋ ಪುಸ್ತಕ ಪ್ರಕಟಿಸಲು ಶ್ರಮಿಸುತ್ತಿದೆ. ಈ ಮೂಲಕ ಅನೇಕ ಖ್ಯಾತ ಲೇಖಕರ ಕೃತಿಗಳ ಆಡಿಯೋ ಬುಕ್ಗಳನ್ನಿಲ್ಲಿ ಪ್ರಕಟಿಸಲಾಗುತ್ತಿದೆ. ಈಗಾಗಲೇ ಗಿರೀಶ್ ಕಾರ್ನಾಡ್, ಯು.ಆರ್. ಅನಂತಮೂರ್ತಿ, ಎಸ್.ಎಲ್.ಭೈರಪ್ಪ, ವೈದೈಹಿ, ಅನುಪಮಾ ನಿರಂಜನ, ವಿವೇಕ ಶಾನಭಾಗ, ವಸುಧೇಂದ್ರ ಸೇರಿದಂತೆ ಅನೇಕ ಲೇಖಕರ ಕೃತಿಗಳನ್ನು ಒಳಗೊಂಡಿದೆ. ಚಂದ್ರಶೇಖರ ಕಂಬಾರ, ಆರ್.ಕೆ.ನಾರಾಯಣ್, ಶಾಂತಿನಾಥ ದೇಸಾಯಿ, ಎಚ್.ಎಸ್.ಶಿವಪ್ರಕಾಶ್ ಲೇಖಕರು ಹಾಗು ಸಮಕಾಲೀನ ಲೇಖಕರ ಕೃತಿಗಳು ಕೂಡ ಶೀಘ್ರದಲ್ಲೇ ಸ್ಟೋರಿಟೆಲ್ನಲ್ಲಿ ಸಿಗಲಿವೆ.
ವಿಶೇಷವೆಂದರೆ, ಕಲಾವಿದರಾದ ಬಿ.ಜಯಶ್ರೀ, ಬಿ.ಸುರೇಶ, ಮಂಡ್ಯ ರಮೇಶ, ಶರತ್ ಲೋಹಿತಾಶ್ವ, ಬಾಲಾಜಿ ಮನೋಹರ್, ಅರವಿಂದ್ ಕುಪ್ಳೀಕರ್, ರವಿಭಟ್,ರಘು ಶಿವಮೊಗ್ಗ, ಬಿ.ಎಂ.ಗಿರಿರಾಜ, ಶೃಂಗ, ಪ್ರಶಾಂತ್ ಸಿದ್ಧಿ, ಕಿರಣ್ ನಾಯಕ್, ಚಿತ್ಕಲಾ ಬಿರಾದಾರ್, ರಂಜನಿ ರಾಘವನ್, ಪಿ.ಡಿ.ಸತೀಶ್ ಇತರರು ಸ್ಟೋರಿಟೆಲ್ ಕನ್ನಡಕ್ಕೆ ಧ್ವನಿ ನೀಡಿದ್ದಾರೆ.