ಡಿಎನ್‌ಎ ಸಾಂಗ್‌ ರಿಲೀಸ್;‌ ಇದು ಸಂಬಂಧಗಳ ಕಥೆ ಮತ್ತು ವ್ಯಥೆ…

ದೇವನೂರು ಮಹಾದೇವ ಅವರ ಮಾತಿನಂತೆ “ಸಂಬಂಜ ಅನ್ನೋದು ದೊಡ್ದು ಕನಾ” ಎಂಬ ವಾಕ್ಯದ ಆಧಾರದ ಮೇಲೆ ಇಲ್ಲೊಂದು ಸಿನಿಮಾ ರೆಡಿಯಾಗಿದೆ. ಅದರ ಹೆಸರೇ “ಡಿ.ಎನ್.ಎ”. ಈ ಚಿತ್ರ ಇದೀಗ ರಿಲೀಸ್‌ಗೆ ರೆಡಿಯಾಗಿದೆ. ಇತ್ತೀಚೆಗೆ ಹಾಡುಗಳು ಹೊರಬಂದಿವೆ. ಪದ್ಮಶ್ರೀ ತುಳಸಿಗೌಡ ಹಾಡುಗಳನ್ನು ಬಿಡುಗಡೆ ಮಾಡಿ ಶುಭ ಕೋರಿದ್ದಾರೆ. ಇದರೊಂದಿಗೆ ವಿಡಿಯೋ ಸಾಂಗ್ ಒಂದನ್ನು ಮಾಸ್ಟರ್ ಆನಂದ್ ರಿಲೀಸ್ ಮಾಡಿದ್ದಾರೆ.

ನಿರ್ದೇಶಕ ಪ್ರಕಾಶ್‌ ರಾಜ್‌ ಮೇಹು ಈ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಸಿನಿಮಾ ಕುರಿತು ಹೇಳಿಕೊಂಡ ಅವರು, “ನಾನು ಕಳೆದ ಇಪ್ಪತ್ತೈದು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿದ್ದೀನಿ. “ಜನುಮದ ಜೋಡಿ” ಚಿತ್ರಕ್ಕೆ ನಾಗಾಭರಣ ಅವರ ಜೊತೆ ಕೆಲಸ‌ ಮಾಡಿದ್ದೀನಿ. ಸಂಭಾಷಣೆ ಬರೆದಿದ್ದೀನಿ. ಆದರೂ ಇದು ಕೆಲವರಿಗೆ ಬಿಟ್ಟು ಹೆಚ್ಚಿನ ಜನರಿಗೆ ತಿಳಿದಿಲ್ಲ. ಈಗ ಬಹಳ ವರ್ಷಗಳ ನಂತರ ಚಿತ್ರವೊಂದನ್ನು ನಿರ್ದೇಶಿಸಿದ್ದೇನೆ. ದೇವನೂರು ಮಹದೇವ ಅವರ “ಸಂಬಂಜ ಅನ್ನೋದು ದೊಡ್ದು ಕನಾ” ಎಂಬ ಮಾತೇ ಈ ಚಿತ್ರಕ್ಕೆ ಸ್ಪೂರ್ತಿ. ಚಿತ್ರ ಉತ್ತಮವಾಗಿ ಮೂಡಿ ಬರಲು ಸಹಕಾರ ನೀಡಿದ ಇಡೀ ತಂಡಕ್ಕೆ ಧನ್ಯವಾದ ಅದರು ಪ್ರಕಾಶ್ ರಾಜ್ ಮೇಹು.

ನಿರ್ಮಾಪಕ ಮೈಲಾರಿ ಅವರು ಅಣ್ಣಾವ್ರ ಅಭಿಮಾನಿ. ಸಿನಿಮಾ ಬಗ್ಗೆ ಹೇಳುವ ಅವರು, “ನಾನು ಚಿಕ್ಕಂದಿನಿಂದಲೂ ಅಣ್ಣಾವ್ರ ಅಭಿಮಾನಿ. ಕುಟುಂಬ ಸಮೇತ ನೋಡಬಹುದಾದ ‌ಸಿನಿಮಾ‌‌ ಮಾಡುವ ಆಸೆಯಿತ್ತು. ನಿರ್ದೇಶಕರು ಹೇಳಿದ ಕಥೆ ಇಷ್ಟವಾಯಿತು. ನಿರ್ಮಾಣ ಮಾಡಿದ್ದೀನಿ. ಇದು ನನ್ನ ಮೊದಲ ಚಿತ್ರ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ಮೈಲಾರಿ.

ನಟ ಅಚ್ಯುತಕುಮಾರ್‌ ಮಾತನಾಡಿ, ನಿರ್ದೇಶಕರು ನನ್ನ ಆತ್ಮೀಯ ಗೆಳೆಯರು. ಪ್ರಕಾಶ್ ಈ‌ ರೀತಿಯ ಕಥೆಯಿದೆ ಎಂದಾಗ ತಕ್ಷಣ ನಟಿಸಲು ಒಪ್ಪಿಕೊಂಡೆ. ಕೊರೋನದಿಂದ ಬಿಡುಗಡೆ ಸ್ವಲ್ಪ ವಿಳಂಬವಾಗಿದೆ. ನೀವೆಲ್ಲಾ ನೋಡಿ ಹರಿಸಿ ಎಂದರು ಅಚ್ಯುತ‌ ಕುಮಾರ್.

ಕೆಲವು ಸಿನಿಮಾಗಳು ಹೃದಯಕ್ಕೆ ಹತ್ತಿರವಾಗುತ್ತದೆ.‌ ಅಂತಹ ಒಂದು ಸಿನಿಮಾ “ಡಿ.ಎನ್.ಎ”. ಇಂತಹ ಚಿತ್ರದಲ್ಲಿ ಅಭಿನಯಿಸಿದ ಖುಷಿಯಿದೆ ಎಂದರು ನಟಿ ಎಸ್ತರ್ ನರೋನ.‌ ಸಂಬಂಧಗಳ ಸುತ್ತ ಹೆಣೆದಿರುವ ಈ ಕಥೆ ತುಂಬಾ ಚೆನ್ನಾಗಿದೆ. ಉತ್ತಮ ಪಾತ್ರಕೊಟ್ಟ ನಿರ್ದೇಶಕರಿಗೆ ಧನ್ಯವಾದ ಎಂದರು ಅನಿತಾಭಟ್.

ನನ್ನ ಮಗ ಕೃಷ್ಣ ಈ ಚಿತ್ರದಲ್ಲಿ ಅಭಿನಯಿಸಿದ್ದಾನೆ. ನಿರ್ದೇಶಕರು ಹೇಳಿದ ಕಥೆ ಮನಸ್ಸಿಗೆ ಹತ್ತಿರವಾಯಿತು. ಡಿ.ಎನ್.ಎ ಅಂದರೆ ಧ್ರುವ, ನಕ್ಷತ್ರ ಹಾಗೂ ಆಕಾಶ ಎಂದು. ಇದು ತಂದೆ , ತಾಯಿ ಹಾಗೂ ಮಗನ ಹೆಸರು ಎಂಬ ವಿಷಯವನ್ನು ತಿಳಿಸಿದ ಮಾಸ್ಟರ್ ಆನಂದ್ ಚಿತ್ರತಂಡಕ್ಕೆ ಶುಭ ಕೋರಿದರು. ಚೇತನ್ ರಾಜ್ ಸಂಗೀತದ ಬಗ್ಗೆ ಮಾತನಾಡಿದರು. ನಟಿ ಭವಾನಿ ಪ್ರಕಾಶ್ ಕಾರ್ಯಕ್ರಮ ನಿರ್ವಹಣೆ ಮಾಡಿದರು.

ಅಂದಹಾಗೆ, ಕೊರೊನಾ ಹೆಚ್ಚಾಗುತ್ತಿರುವುದರಿಂದ ಸರ್ಕಾರ ವೀಕೆಂಡ್ ಕರ್ಫ್ಯೂ ನಿಯಮ ಜಾರಿ‌ ಮಾಡಿದೆ. ಹಾಗಾಗಿ ಜನವರಿ 7 ರಂದು ಬಿಡುಗಡೆಯಾಗಬೇಕಿದ್ದ ಚಿತ್ರ ಬಿಡುಗಡೆಯನ್ನು ಚಿತ್ರತಂಡ ಮುಂದೂಡಿದೆ. ರೋಜರ್ ನಾರಾ ಣ್, ಎಸ್ತರ್ ನರೋನ, ಅಚ್ಯುತ ಕುಮಾರ್, ಯಮುನ, ಅನಿತಾಭಟ್, ಮಾಸ್ಟರ್ ಕೃಷ್ಣ ಚೈತನ್ಯ, ಮಾಸ್ಟತ ಧ್ರುವ ಮೇಹು, ನಿಹಾರಿಕ ಮುಂತಾದವರು ಚಿತ್ರದಲ್ಲಿದ್ದಾರೆ‌‌.

Related Posts

error: Content is protected !!