ಹೊಸ ವರ್ಷ ಶುರುವಾಗಿದೆ. ಎಲ್ಲರೂ ಶುಭಾಶಯಗಳ ವಿನಿಮಯ ಮಾಡಿಕೊಳ್ಳುತ್ತಿದ್ದಾರೆ. ತಮ್ಮ ಪ್ರೀತಿಯ ಅಭಿಮಾನಿಗಳಿಗೆ ಕನ್ನಡದ ಬಹುತೇಕ ಸ್ಟಾರ್ ನಟರು ಕೂಡ ತಮ್ಮ ಸೋಶಿಯಲ್ ಮೀಡಿಯಾ ಮೂಲಕ ಶುಭಾಶಯ ತಿಳಿಸಿದ್ದಾರೆ. ದರ್ಶನ್, ಸುದೀಪ್, ಗಣೇಶ್, ಡಾಲಿ ಧನಂಜಯ್, ದುನಿಯಾ ವಿಜಯ್, ನೆನಪಿರಲಿ ಪ್ರೇಮ್ ಸೇರಿದಂತೆ ಕನ್ನಡದ ಬಹುತೇಕ ನಟ,ನಟಿಯರು, ನಿರ್ದೇಶಕರು ಕೂಡ ಹೊಸ ವರ್ಷ ಎಲ್ಲರಿಗೂ ಒಳ್ಳೆಯದ್ದನ್ನು ತರಲಿ ಎಂದು ಶುಭಾಶಯ ಕೋರಿದ್ದಾರೆ.
ಹೊಸ ವರ್ಷದ ಪ್ರತೀ ಕ್ಷಣವೂ ಸಂತಸ ತುಂಬಿರಲಿ
ನಟ ದರ್ಶನ್ ಟ್ವೀಟ್ ಮಾಡುವ ಮೂಲಕ ನಾಡಿನ ಜನರಿಗೆ ಹಾಗು ತಮ್ಮ ಅಭಿಮಾನಿಗಳಿಗೆ ಶುಭಕೋರಿದ್ದಾರೆ. “ಹೊಸ ವರ್ಷದ ಪ್ರತಿಕ್ಷಣವೂ ಸಂತಸದಿಂದ ಕೂಡಿರಲಿ. ನಿಮ್ಮ ಇಷ್ಟಾರ್ಥಗಳೆಲ್ಲವೂ ಈಡೇರಲಿ. ನಿಮ್ಮ ಭವಿಷ್ಯ ಮತ್ತಷ್ಟು ಉಜ್ವಲಿಸಲಿ ಎಂದು ಆಶಿಸುತ್ತಾ ತಮಗೆ ಹಾಗೂ ತಮ್ಮ ಕುಟುಂಬಕ್ಕೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು”. ಎಂದು ಟ್ವೀಟ್ ಮಾಡಿದ್ದಾರೆ. ಅವರ ಬರಹ ಇರುವ ಟ್ವೀಟ್‌ನಲ್ಲಿ ಅವರದ್ದೊಂದು ಫೋಟೋವನ್ನೂ ಹಂಚಿಕೊಂಡಿದ್ದಾರೆ.
ಕೆಟ್ಟದ್ದು ಬಿಡಿ, ಒಳ್ಳೆಯದ್ದು ತಗೊಂಡ್ ಮುಂದೆ ಸಾಗಿ
ನಟ ಸುದೀಪ್ ಕೂಡ ಟ್ವೀಟ್ ಮಾಡಿದ್ದು, ಟ್ವೀಟ್‌ನಲ್ಲಿ ಕೆಟ್ಟದನ್ನು ಬಿಟ್ಟು ಒಳ್ಳೆಯದನ್ನು ತೆಗೆದುಕೊಂಡು ಮುಂದುವರೆಯಬೇಕು ಎಂದಿದ್ದಾರೆ.
ಸುದೀಪ್ ವಿಕ್ರಾಂತ್ ರೋಣ ಚಿತ್ರದ ಪೋಸ್ಟರ್ ಹಂಚಿಕೊಂಡು ಹೊಸ ವರ್ಷದ ಶುಭಾಶಯ ತಿಳಿಸಿದ್ದಾರೆ. “ಉತ್ತಮ ಮತ್ತು ಉತ್ತಮವಲ್ಲದ ಘಟನೆಗಳು, ಸಂದರ್ಭಗಳು ಪ್ರತಿ ವರ್ಷ ಬರುತ್ತವೆ. ನಾವೆಲ್ಲರೂ ಉತ್ತಮ ಅಲ್ಲದನ್ನು ಹಿಂದೆ ಬಿಟ್ಟು, ಉತ್ತಮ ಆಗಿರುವುದನ್ನು ಮುಂದಕ್ಕೆ ತೆಗೆದುಕೊಂಡು ಹೋಗಬೇಕು. ಸುಂದರವಾದ ಸೂರ್ಯೋದಯದೊಂದಿಗೆ ನಾವು 2022ಕ್ಕೆ ಕಾಲಿಟ್ಟದ್ದೇವೆ. ಮತ್ತು ಈ ವರ್ಷ ಉತ್ತಮವಾದದನ್ನು ಮಾಡೋಣ. ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು ” ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.