Categories
ಸಿನಿ ಸುದ್ದಿ

ಕೊಲ್ಲೂರು ದೇವಾಲಯಕ್ಕೆ ಭೇಟಿ ನೀಡಿದ ಕೆಜಿಎಫ್‌ ಟೀಮ್‌ ; ಏಪ್ರಿಲ್‌ 14 ಅದ್ಧೂರಿ ಬಿಡುಗಡೆ…

ಭಾರತೀಯ ಚಿತ್ರರಂಗದಲ್ಲಿ ಕೆಜಿಎಫ್‌ ಬಹು ನಿರೀಕ್ಷೆ ಹುಟ್ಟಿಸಿದ್ದ ಸಿನಿಮಾ. ಅಂತೆಯೇ ಆ ಸಿನಿಮಾ ರಿಲೀಸ್‌ ಆದ ನಂತರ ಆ ನಿರೀಕ್ಷೆ ಸುಳ್ಳಾಗಲೇ ಇಲ್ಲ. ಕೆಜಿಎಫ್‌2 ಸಿನಿಮಾ ಕೂಡ ಈಗ ರಿಲೀಸ್‌ಗೆ ರೆಡಿಯಾಗಿದೆ. ಕೊರೊನಾ ಅಬ್ಬರ ಇರದೇ ಹೋಗಿದ್ದರೆ ಇಷ್ಟೊತ್ತಿಗಾಗಲೇ ಸಿನಿಮಾ ರಿಲೀಸ್‌ ಆಗಬೇಕಿತ್ತು. ಬಹುದೊಡ್ಡ ನಿರೀಕ್ಷೆ ಹುಟ್ಟಿಸಿರುವ ಕೆಜಿಎಫ್‌ 2 ಇನ್ನೇನು ಏಪ್ರಿಲ್‌ 14ರಂದು ರಿಲೀಸ್‌ ಆಗೋಕೆ ತಯಾರಿ ನಡೆಸಿದೆ. ಇದರ ಬೆನ್ನಲ್ಲೇ ಕೆಜಿಎಫ್‌ 2 ಚಿತ್ರತಂಡ ಶ್ರೀ ಕೊಲ್ಲೂರು ಮೂಕಾಂಬಿಕಾ ಮತ್ತು ಆನೆಗುಡ್ಡೆ ಶ್ರೀ ವಿನಾಯಕ ದೇವಾಲಯಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದುಕೊಂಡಿದೆ.

ಹೌದು, ನಿರ್ದೇಶಕ ಪ್ರಶಾಂತ್‌ ನೀಲ್‌, ನಿರ್ಮಾಪಕರಾದ ವಿಜಯ್‌ ಕಿರಗಂದೂರು, ನಟ ಯಶ್‌ ಹಾಗು ಸಂಗೀತ ನಿರ್ದೇಶಕ ರವಿಬಸ್ರೂರು ಹಾಗು ತಂಡ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದೆ. ಸದ್ಯ ಆ ಫೋಟೋಗಳು ಈಗ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿವೆ.
ಸದ್ಯ ಈ ಬೆಳವಣಿಗೆಗಳನ್ನು ಗಮನಿಸಿದರೆ, ಕೆಜಿಎಫ್‌ 2 ಸಿನಿಮಾ ಏಪ್ರಿಲ್‌ 14ರಂದು ತೆರೆಗೆ ಬರುತ್ತಿದೆ. ದೇವಾಲಯಕ್ಕೆ ಪೂಜೆ ಸಲ್ಲಿಸಿದ್ದೇ ತಡ, ಎಲ್ಲೆಡೆ ಕೆಜಿಎಫ್‌ 2 ಸಿನಿಮಾ ಪ್ರೇಕ್ಷಕರ ಮುಂದೆ ಯಾವಾಗ ಬರುತ್ತೋ ಎಂಬ ಉತ್ಸಾಹದಲ್ಲಿ ಯಶ್‌ ಫ್ಯಾನ್ಸ್‌ ತುದಿಗಾಲ ಮೇಲೆ ನಿಂತಿದ್ದಾರೆ.

ಅಲ್ಲಿಗೆ ಇಡೀ ಜಗತ್ತು ಕೆಜಿಎಫ್‌ 2 ಚಿತ್ರಕ್ಕಾಗಿ ಎದುರು ನೋಡುತ್ತಿತ್ತು. ಈಗ ಚಿತ್ರತಂಡ ದೇವಾಲಯಕ್ಕೆ ಭೇಟಿ ನೀಡಿರುವುದು ತೆರೆಗೆ ಅಪ್ಪಳಿಸಲು ಸಾಕಷ್ಟು ತಯಾರಿ ನಡೆಸುತ್ತಿರುವುದನ್ನು ಹೇಳುತ್ತಿದೆ. ನಿರ್ದೇಶಕ ಪ್ರಶಾಂತ್‌ ನೀಲ್‌ ಅವರು ಕೆಜಿಎಫ್‌ ಮೂಲಕ ದೊಡ್ಡ ಭರವಸೆ ಮೂಡಿಸಿದ್ದು ಸುಳ್ಳಲ್ಲ. ಕೆಜಿಎಫ್‌ ಸಿನಿಮಾ ಬಂದಿದ್ದೇ ತಡ, ಕನ್ನಡ ಚಿತ್ರರಂಗ ಮತ್ತಷ್ಟು ಶೈನ್‌ ಆಗಿದ್ದು ಸುಳ್ಳಲ್ಲ. ಕೆಜಿಎಫ್‌ ಭಾರತೀಯ ಚಿತ್ರರಂಗದಲ್ಲೇ ದೊಡ್ಡ ಯಶಸ್ಸು ಪಡೆದುಕೊಂಡಿತು.


ಆ ಯಶಸ್ಸಿನ ಬೆನ್ನಲ್ಲೇ ಕೆಜಿಎಫ್‌ 2 ಕೂಡ ಶುರುವಾಗಿ, ಏಪ್ರಿಲ್‌ 14ರಂದು ಪ್ರೇಕ್ಷಕರ ಮುಂದೆ ಬರಲು ಅನೌನ್ಸ್‌ ಕೂಡ ಮಾಡಿತ್ತು. ಕೊರೊನಾ ಹಾವಳಿ ಹೆಚ್ಚಾಗಿದ್ದರಿಂದ ಸಿನಿಮಾ ಮುಂದಕ್ಕೆ ಹೋಯಿತು. ಈಗ ಸದ್ಯ, ಇಡೀ ಚಿತ್ರತಂಡ ಒಂದೊಳ್ಳೆಯ ಕಾರ್ಯಕ್ಕೆ ಮುಂದಾಗಿದೆ. ದೇವಾಲಯಗಳಿಗೆ ಭೇಟಿ ನೀಡುತ್ತಿದೆ. ಆ ಮೂಲಕ ಪ್ರಚಾರ ಕಾರ್ಯವೂ ಶುರುವಾಗುತ್ತಿದೆ.

Categories
ಸಿನಿ ಸುದ್ದಿ

ರಂಗಭೂಮಿ ಪ್ರತಿಭೆಗಳ ಪ್ರೀತಿ ಗೀತಿ ಇತ್ಯಾದಿ… ಕೆಡಿಸೋರ ಮಧ್ಯೆ ಪ್ರೀತಿಗಿಬ್ಬರು!!

ಕನ್ನಡ ಚಿತ್ರರಂಗಕ್ಕೆ ದಿನ ಕಳೆದಂತೆ ಹೊಸಬರ ಆಗಮನವಾಗುತ್ತಲೇ ಇದೆ. ಆ ಸಾಲಿಗೆ ಈಗ ರಂಗಭೂಮಿಯ ಅಪ್ಪಟ ಪ್ರತಿಭೆಗಳ ಆಗಮನವಾಗಿದೆ. ಹೌದು, ಇಲ್ಲಿ ಇಬ್ಬರನ್ನು ಹೊರತುಪಡಿಸಿ ಬಹುತೇಕ ರಂಗಭೂಮಿ ಪ್ರತಿಭೆಗಳೇ ಎಂಟ್ರಿಯಾಗಿದ್ದಾರೆ. ಅಂದಹಾಗೆ, ಅವರು ಪ್ರೀತಿಯಿಂದಲೇ ಮಾಡಿರುವ ಚಿತ್ರಕ್ಕೆ “ಪ್ರೀತಿಗಿಬ್ಬರು” ಎಂದು ಹೆಸರಿಟ್ಟಿದ್ದಾರೆ.

ಹೌದು, ಪಾಂಡಿಲ್ಯ ಬಿ.ಟಿ. ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಇದು ಇವರಿಗೆ ಚೊಚ್ಚಲ ಪ್ರಯತ್ನ. ವಿಶೇಷ ಅಂದರೆ, ಇವರು ಕೆ.ವಿ.ರಾಜು ಮತ್ತು ಎಂ.ಎಸ್.ರಮೇಶ್‌ ಅವರಂತಹ ಯಶಸ್ವಿ ನಿರ್ದೇಶಕರೊಂದಿಗೆ ಕೆಲಸ ಮಾಡಿ ಮೊದಲ ಸಲ ನಿರ್ದೇಶನ ಪಟ್ಟ ಅಲಂಕರಿಸುತ್ತಿದ್ದಾರೆ. ಹೆಸರೇ ಹೇಳುವಂತೆ ಇದೊಂದು ಪಕ್ಕಾ ಲವಸ್ಟೋರಿ ಸಿನಿಮಾ ಅಂತ ಪ್ರತ್ಯೇಕವಾಗಿ ಹೇಳುವಂತಿಲ್ಲ ಬಿಡಿ.

ಅಂದಹಾಗೆ ಇದೊಂದು ಪಕ್ಕಾ ಪ್ರೇಮಕಥೆ ಇರುವ ಸಿನಿಮಾ. ರಾಜಕೀಯ ಇರಲಿ, ಕ್ರಿಕೆಟ್‌ ಇರಲಿ, ಅಲ್ಲಿ ಒಂದಷ್ಟು ಮಂದಿ ಹೇಗೆ ನೆನಪಾಗುತ್ತಾರೋ ಹಾಗೆಯೇ ಪ್ರೀತಿಯ ಸಿನಿಮಾ ಅಂದಾಕ್ಷಣ, ಅಲ್ಲಿ ನಾಯಕ, ನಾಯಕಿಯೂ ನೆನಪಾಗುತ್ತಾರೆ. ಒಂದು ಹಳ್ಳಿಯಲ್ಲಿ ನಡೆಯುವಂತಹ ಪ್ರೇಮಕಥೆ ಇಲ್ಲಿದೆ. ಕಷ್ಟದ ಸನ್ನಿವೇಶದಲ್ಲಿ ಆ ಊರಿನ ಪ್ರೇಮಿಗಳು ಒಂದಾಗುತ್ತಾರೋ ಇಲ್ಲವೋ ಅನ್ನುವುದು ಕಥೆ. ಇಲ್ಲಿ ಜಾತಿ ವ್ಯವಸ್ಥೆಯೂ ಹೈಲೈಟ್.‌ ಆದರೆ, ಅದೇ ಮುಖ್ಯವಲ್ಲ. ಇನ್ನು, ಈ ಚಿತ್ರದಲ್ಲಿ ನಾಯಕಿ ಹೊರತುಪಡಿಸಿ ಉಳಿದ ಕಲಾವಿದರು ರಂಗಭೂಮಿ ಹಿನ್ನಲೆಯಿಂದ ಬಂದವರು. ಇಬ್ಬರು ನಟಿಯರು ಇಲ್ಲಿ ಖಳನಾಯಕಿಯರಾಗಿ ಅಬ್ಬರಿಸಿದ್ದಾರೆ. ನಾಯಕನಾಗಿ ಗೋವಿಂದ ಕಾಣಿಸಿಕೊಂಡಿದ್ದಾರೆ. ನಿರೋಷಶೆಟ್ಟಿ ನಾಯಕಿ.

ಇನ್ನು, ಖಳನಟಿಯರಾಗಿ ಮಂಜುಳಾ ಮತ್ತು ಕಾವ್ಯಪ್ರಕಾಶ್ ನಟಿಸಿದ್ದಾರೆ. ಅಣ್ಣನಾಗಿ ಚಿರಾಗ್, ಇವರೊಂದಿಗೆ ಶೈಲೇಶ್, ಸಂದೀಪ್ ಇತರರು ನಟಿಸಿದ್ದಾರೆ. ಅನುರಾಗ್‌ರೆಡ್ಡಿ ಸಂಗೀತ ನೀಡಿದರೆ, ಎ.ಟಿ.ರವೀಶ ಅವರು ಹಿನ್ನೆಲೆ ಸಂಗೀತ ನೀಡಿದ್ದಾರೆ. ರಮೇಶ್‌ಗೌಡ ಚಿತ್ರದ ಛಾಯಾಗ್ರಹಣ ಮಾಡಿದರೆ, ಅರ್ಜುನ್‌ ಕಿಟ್ಟು ಸಂಕಲನ ಮಾಡಿದ್ದಾರೆ. ಡಾ.ದೊಡ್ಡರಂಗೇಗೌಡ ಅವರ ಗೀತ ಸಾಹಿತ್ಯವಿದೆ. ಆರ್ಯನ್‌ ಶ್ರೀನಿವಾಸನ್‌ ಮತ್ತು ಅಶೋಕ್‌ ಸಾಹಸವಿದೆ. ಪ್ರವೀಣ್‌ ನೃತ್ಯ ನಿರ್ದೇಶನ ಮಾಡಿದ್ದಾರೆ.


ಚಾಮರಾಜನಗರ, ಉಡುಪಿ, ಬಳ್ಳಾರಿ, ಬೀದರ್, ನಾಗಮಂಗಲ, ಕೊಳ್ಳೆಗಾಲ, ಮರವಂತೆ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಈಗಾಗಲೇ ಚಿತ್ರದ ಟ್ರೇಲರ್‌ ಬಿಡುಗಡೆ ಮಾಡಲಾಗಿದೆ ಚಿತ್ರಕ್ಕೆ ಯುಎ ಪ್ರಮಾಣ ಪತ್ರ ಕೂಡ ಸಿಕ್ಕಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ವಿತರಕ ರಮೇಶ್‌ ಮೂಲಕ ಚಿತ್ರವನ್ನು ಫೆಬ್ರವರಿಯಲ್ಲಿ ರಿಲೀಸ್‌ ಮಾಡಲು ಚಿತ್ರತಂಡ ಸಜ್ಜಾಗಿದೆ.

Categories
ಸಿನಿ ಸುದ್ದಿ

ಎರಡು ದಶಕದ ಯಶಸ್ವಿ ಪ್ರೇಮ ಯಾನ… ಸೋಲು-ಗೆಲುವಲ್ಲೂ ಬೆಳ್ಳಿತೆರೆ ಬೆಳಗಿಸಿದ ಪ್ರೇಮಾಭಿಮಾನ; ಲವ್ಲಿ ಪಯಣ…



ಕನ್ನಡ ಚಿತ್ರರಂಗದಲ್ಲಿ ಸ್ಪುರದ್ರೂಪಿ ನಟ ಅಂದಾಕ್ಷಣ ಥಟ್ಟನೆ ನೆನಪಾಗೋದೇ ನೆನಪಿರಲಿ ಪ್ರೇಮ್.‌ ಹೌದು, ಹುಡುಗರಿಗಿಂತ ಹುಡುಗಿಯರೇ ತುಸು ಹೆಚ್ಚಾಗಿ ಇಷ್ಟಪಡುತ್ತಾರೆ. ಕನ್ನಡ ಚಿತ್ರರಂಗದಲ್ಲಿ ಪ್ರೇಮಕಾವ್ಯ ಬರೆಯುವ ಮೂಲಕ ಫ್ಯಾಮಿಲಿ ಆಡಿಯನ್ಸ್‌ಗೆ ಹತ್ತಿರವಾದವರು. ಫ್ಯಾನ್ಸ್‌ಗೆ ಪ್ರಾಣ ಆಗುವ ಮೂಲಕ ನೆನಪಿರಲಿ ಈ ಪ್ರೇಮ್‌ ಅನ್ನುತ್ತಲೇ ಎಲ್ಲರೊಂದಿಗೂ ಜೊತೆ ಜೊತೆಯಲ್ಲೇ ಅಭಿಮಾನಿಗಳ ಪ್ರೀತಿಯ ಅಭಿಮಾನದ ಪಲ್ಲಕ್ಕಿ ಹೊತ್ತು ಬಂದ ಗುಣವಂತ ಸದಾ ಸದಭಿರುಚಿಯ ಸಿನಮಾ ಕೊಡಬೇಕೆಂಬ ಹೊಂಗನಸು ಕಂಡವರು. ಚಿತ್ರರಂಗದಲ್ಲಿ ಸಾಕಷ್ಟು ಸವಿ ಸವಿ ನೆನಪುಗಳನ್ನು ಉಣಬಡಿಸುತ್ತಲೇ ಬಂದಿರುವ ಪ್ರೇಮ್‌, ಬೆಳ್ಳಿಪರದೆಗೆ ಎಂಟ್ರಿಯಾಗಿ ಬರೋಬ್ಬರಿ ಎರಡು ದಶಕಗಳೇ ಕಳೆದಿವೆ

ಹೌದು, ಪ್ರೇಮ್‌ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು ಇಪ್ಪತ್ತು ವರ್ಷಗಳು ಪೂರೈಸಿವೆ. ಈ ಚಂದದ ಹೀರೋ ಚಂದನವನದಲ್ಲಿ ಇಷ್ಟು ವರ್ಷ ಕಳೆಯುವುದೆಂದರೆ ಸುಲಭದ ಮಾತಲ್ಲ. ಎಲ್ಲಾ ನಟರಂತೆ ಪ್ರೇಮ್‌ ಕೂಡ ಆರಂಭದಲ್ಲಿ ಸಾಕಷ್ಟು ಕಷ್ಟ ಕಂಡವರು. ಆರಂಭದಲ್ಲಿ ಅವಕಾಶಕ್ಕಾಗಿ ಅಲೆದಾಡಿದ್ದೂ ಉಂಟು. ಮೊದಲ ಎಸೆತದಲ್ಲೇ ಬಾಲನ್ನು ಬೌಂಡರಿ ದಾಟಿಸಿದಂತೆ ಪ್ರೇಮ್‌, ಮೊದಲ ಸಿನಿಮಾ ಮೂಲಕವೇ ಎಲ್ಲರಿಗೂ ಇಷ್ಟವಾದರು. ಆಮೇಲೆ ನೆನಪಿರಲಿ ಮೂಲಕ ಅಚ್ಚಳಿಯದೇ ಉಳಿದ ಹೀರೋ ಎನಿಸಿಕೊಂಡರು. ಅಲ್ಲಿಂದ ದೊಡ್ಡ ಯಶಸ್ಸು ಪಡೆದ ಪ್ರೇಮ್‌ ಸಾಕಷ್ಟು ಯಶಸ್ಸು ಸಿನಿಮಾಗಳನ್ನು ಕೊಡುತ್ತಲೇ ಬಂದರು. ಪ್ರೇಮ್‌ ಸುಲಭವಾಗಿ ಸಕ್ಸಸ್‌ ಕಂಡವರಲ್ಲ. ಸಾಕಷ್ಟು ಶ್ರಮದಿಂದಲೇ, ಒಳ್ಳೆಯ ನಟನೆ ಮತ್ತು ಸ್ಕ್ರಿಪ್ಟ್‌ ಆಯ್ಕೆಯಿಂದಲೇ ಪ್ರೇಮ್‌ ತಮ್ಮ ಸಕ್ಸಸ್‌ ಕಂಡುಕೊಂಡವರು. ಹಾಗಂತ, ಯಶಸ್ಸಿನ ಮೆಟ್ಟಿಲ ಮೇಲೆಯೇ ಪ್ರೇಮ್‌ ನಡೆದು ಬಂದವರಲ್ಲ. ಅವರಿಗೂ ಅಡೆತಡೆಗಳಾಗಿದ್ದುಂಟು. ಒಂದಷ್ಟು ಸಿನಿಮಾಗಳು ಕೈ ಹಿಡಿಯಲಿಲ್ಲ. ಗೆಲುವು ಪಕ್ಕಕ್ಕೆ ಸರಿಯಿತು. ಸೋಲು ಕಣ್ಮುಂದೆಯೇ ಬರತೊಡಗಿತು. ಅಷ್ಟಾದರೂ ಪ್ರೇಮ್‌ ದೃತಿಗೆಡಲಿಲ್ಲ. ಒಂದಷ್ಟು ಸಾಲು ಸಾಲು ಸೋಲು ಕಂಡ ಪ್ರೇಮ್‌ಗೆ ಕಣ್ಣ ಮುಂದೆ ಬಂದಿದ್ದು ಚಾರ್ಮಿನಾರ್.‌

ಈ ಚಾರ್ಮಿನಾರ್ ಸಿನಿಮಾ ಪ್ರೇಮ್‌ ಅವರಿಗೆ ಮತ್ತೊಂದು ಹೊಸ ಬದುಕು ರೂಪಿಸಿತು ಅಂದರೆ ಸುಳ್ಳಲ್ಲ. ಪ್ರೇಮ್‌ ಅಲ್ಲಿಂದ ಮತ್ತೆ ಹಿಂದಿರುಗಿ ನೋಡಿದವರಲ್ಲ. ಚಾರ್ಮಿನಾರ್‌ ಪ್ರೇಮ್‌ ಮಟ್ಟಿಗೆ ದೊಡ್ಡ ಸಕ್ಸಸ್‌ ಕೊಟ್ಟ ಸಿನಿಮಾ. ಒಂದೊಳ್ಳೆಯ ಬ್ಯೂಟಿಫುಲ್‌ ಲವ್‌ಸ್ಟೋರಿ ಮೂಲಕ ಪ್ರೇಮ ಪುನಃ ತನ್ನ ಫ್ಯಾನ್ಸ್‌ ಮೊಗದಲ್ಲಿ ಮಂದಹಾಸ ಬೀರುವಂತೆ ಮಾಡಿದರು. ಈ ಚಿತ್ರದ ನಟನೆಗೆ ಅವರಿಗೆ ಫಿಲ್ಮ್‌ ಫೇರ್‌ ಅವಾರ್ಡ್‌ ಕೂಡ ಬಂತು. ಅದಾದ ಮೇಲೆ ಒಂದಷ್ಟು ಸಾಲು ಸಾಲು ಸಿನಿಮಾಗಳು ಹುಡುಕಿ ಬಂದರೂ, ಪ್ರೇಮ್‌ಗೆ ಹೇಳಿಕೊಳ್ಳುವಂತಹ ಗೆಲುವು ಸಿಗಲಿಲ್ಲ. ಈ ನಡುವೆ ಪ್ರೇಮ್‌ ಒಂದೇ ಪಾತ್ರ, ಕಥೆಗಳಿಗೆ ಸೀಮಿತವಾಗಬಾರದು ಅಂತ ತನ್ನ ಸುಂದರ ಮೈಕಟ್ಟನ್ನು ಹುರಿಗೊಳಿಸಿದರು. ಶತ್ರು ಎಂಬ ಸಿನಿಮಾಗೆ ಅವರು ಬಾಡಿ ಬಿಲ್ಡ್‌ ಮಾಡಿ ಸಿಕ್ಸ್‌ ಪ್ಯಾಕ್‌ ಮಾಡಿಕೊಂಡರು. ತಾನೊಬ್ಬ ಕ್ಲಾಸ್‌ ಹೀರೋ ಅಷ್ಟೇ ಅಲ್ಲ, ಮಾಸ್‌ ಹೀರೋ ಆಗೋಕು ಸೈ ಅಂತ ಆ ಸಿನಿಮಾದಲ್ಲಿ ತೋರಿಸಿಕೊಟ್ಟರು.

ಅಲ್ಲಿ ಪ್ರೇಮ್‌ ಅವರ ಶ್ರಮ ಎದ್ದು ಕಂಡರೂ, ಗೆಲುವು ಮಾತ್ರ ಏಳಲಿಲ್ಲ. ಹಾಗಂತ ಪ್ರೇಮ್‌ ಸುಮ್ಮನೆ ಕೂರಲೇ ಇಲ್ಲ. ಮತ್ತೆ ಒಂದಷ್ಟು ಹೊಸ ಬಗೆಯ ಕಥೆಗಳತ್ತ ಮುಖ ಮಾಡಿದರು. ಮೆಲ್ಲನೆ ಬಿಝಿಯಾಗತೊಡಗಿದರು. ನಂತರ ಚೌಕ ಚಿತ್ರ ಅವರಿಗೊಂದು ಹೊಸ ಚೌಕಟ್ಟು ಹಾಕಿ ಕೊಟ್ಟಿದ್ದು ಸುಳ್ಳಲ್ಲ. ಅಲ್ಲಿಂದ ಪ್ರೇಮ್‌ ಮೈಲೇಜ್‌ ಮತ್ತೆ ಜೋರಾಯಿತು. ಪ್ರೇಮ್‌ ಕೂಡ ಅದೇ ಮುಗುಳ್ನಗೆಯಲ್ಲಿ ಸಿನಿಮಾಗಳನ್ನು ಕೊಡುತ್ತಲೇ ಬಂದರು. ಅಷ್ಟೊತ್ತಿಗಾಗಲೇ ಪ್ರೇಮ್‌ ಇಪ್ಪತ್ತಕ್ಕೂ ಹೆಚ್ಚು ಸಿನಿಮಾಗಳನ್ನು ಕೊಟ್ಟಿದ್ದರು. ತಮ್ಮ ವೃತ್ತಿ ಜೀವನದಲ್ಲಿ ಇಪ್ಪತ್ತೈದನೇ ಸಿನಿಮಾ ಮಾಡುವ ಹಂತಕ್ಕೆ ಬಂದ ಪ್ರೇಮ್‌ಗೆ ಅದೊಂದು ಮೈಲಿಗಲ್ಲು ಸಿನಿಮಾ ಆಗಬೇಕು ಅಂದುಕೊಂಡರು. ಹಾಗಾಗಿಯೇ ನೂರಾರು ಕಥೆಗಳನ್ನು ಕೇಳಿದ್ದುಂಟು. ಕೊನೆಗೆ ಅವರ ತೆಕ್ಕೆಗೆ ಬಿದ್ದಿದ್ದು, ಪ್ರೇಮಂ ಪೂಜ್ಯಂ. ಈ ಚಿತ್ರ ಆರಂಭದಿಂದಲೇ ನಿರೀಕ್ಷೆ ಹುಟ್ಟಿಸಿದ್ದು ಸುಳ್ಳಲ್ಲ. ಪ್ರೇಮ್‌ ಆಯ್ಕೆ ಮಾಡಿಕೊಂಡ ಕಥೆ ಮತ್ತು ಪಾತ್ರ ನಿಜಕ್ಕೂ ವಿಶೇಷವಾಗಿತ್ತು. ಈ ಚಿತ್ರದ ಒಂದೊಂದು ಗೀತೆ, ಪೋಸ್ಟರ್‌ ಎಲ್ಲವೂ ಕುತೂಹಲ ಮೂಡಿಸುತ್ತಲೇ ಬಂದಿತ್ತು. ಅದಕ್ಕೆ ಕಾರಣ, ಪ್ರೇಮ್‌ ಅವರ ಇಪ್ಪತ್ತೈದನೇ ಸಿನಿಮಾ ಅನ್ನೋದು.

ಪ್ರೇಮ್‌ ಎಂದಿಗಿಂತಲೂ ಈ ಚಿತ್ರದ ಮೇಲೆ ತುಂಬಾನೇ ಆಸಕ್ತಿ ವಹಿಸಿದರು. ತನ್ನ ವೃತ್ತಿ ಜೀವನದ ಇಪ್ಪತ್ತೈದನೇ ಸಿನಿಮಾ ಆಗಿರುವುದರಿಂದ ಇದೊಂದು ಗೆಲುವಿನ ಸಿನಿಮಾ ಆಗಿ ಉಳಿಯಬೇಕು ಅನ್ನೋದು ಅವರ ಆಸೆ ಆಗಿತ್ತು. ಅವರ ಫ್ಯಾನ್ಸ್‌ ಆಶಯ ಕೂಡ ಹಾಗೆಯೇ ಇತ್ತು. ಅದರಂತೆಯೇ ಪ್ರೇಮಂ ಪೂಜ್ಯಂ ಸಿನಿಮಾ ರಿಲೀಸ್‌ ಆಯ್ತು. ಜನ ಕೈ ಹಿಡಿದರು. ಅವರಿಗೆ ಅದೇ ಪ್ರೀತಿಯಿಂದ ಪ್ರೇಮ್‌ ಕೈ ಜೋಡಿಸಿದರು. ತಮ್ಮ ಇಪ್ಪತ್ತು ವರ್ಷಗಳ ಈ ಸಿನಿಮಾ ಪಯಣದಲ್ಲಿ ಪ್ರೇಮ್‌ ಸೋಲು-ಗೆಲುವು ಎರಡನ್ನೂ ಸಮಾನವಾಗಿಯೇ ಕಂಡುಕೊಂಡಿದ್ದಾರೆ.

ಗೆದ್ದಾಗ ಬೀಗಲಿಲ್ಲ. ಸೋತಾಗ ಬೀಳಲಿಲ್ಲ. ಎರಡನ್ನೂ ಬ್ಯಾಲೆನ್ಸ್‌ ಮಾಡಿಕೊಂಡು ಬಂದ ಪ್ರೇಮ್‌ ಅಪ್ಪಟ ಸಿನಿಮಾ ಪ್ರೇಮಿ. ಸದಾ ಸಿನಿಮಾ ಧ್ಯಾನಿಸುವ ಪ್ರೇಮ್‌ಗೆ ಸುಂದರ ಫ್ಯಾಮಿಲಿ ಇದೆ. ಪತ್ನಿ, ಮಗಳು ಮತ್ತು ಮಗ ಅವರ ಪ್ರಪಂಚ. ಆ ಪ್ರಪಂಚದ ಸುತ್ತವೇ ಸುತ್ತುವ ಪ್ರೇಮ್‌, ತನ್ನ ಅಭಿಮಾನಿಗಳಿಗೂ ಅಷ್ಟೇ ಪ್ರೀತಿ ಕೊಟ್ಟವರು. ಇಷ್ಟು ವರ್ಷಗಳ ಸಿನಿಪಯಣದಲ್ಲಿ ನೋವು-ನಲಿವು ಕಂಡ ಪ್ರೇಮ್‌, ಇನ್ನೂ ಸಾಧಿಸುವ ಹಂಬಲದಲ್ಲಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಸದಭಿರುಚಿಯ ಸಿನಿಮಾಗಳನ್ನು ನೀಡುವ ಉತ್ಸಾಹದಲ್ಲಿದ್ದಾರೆ. ಆ ಉತ್ಸಾಹದಲ್ಲೇ ಅವರು ಸದಾ ಸಿನಿಚಟುವಟಿಕೆಯಲ್ಲಿ ತೊಡಗುತ್ತಾರೆ.

ಇನ್ನು ಪ್ರೇಮ್‌ ಸಿನಿಮಾ ಪ್ರೀತಿಸುವಷ್ಟೇ ಕುಟುಂಬ ಹಾಗು ಗೆಳೆತನವನ್ನೂ ಪ್ರೀತಿಸುತ್ತಾರೆ. ಅವರಿಗೆ ಒಂದೊಳ್ಳೆಯ ಗೆಳೆಯರ ಬಳಗವೂ ಇದೆ. ಸಿನಿಮಾರಂಗದ ಗೆಳೆಯರೂ ಇದ್ದಾರೆ. ಅದರಾಚೆಯೂ ಒಂದಷ್ಟು ಗೆಳೆಯರ ಬಳಗವಿದೆ. ಮೊದಲಿನಿಂದಲೂ ಸ್ನೇಹ ಸಂಪಾದಿಸಿಕೊಂಡು ಬಂದಿರುವ ಪ್ರೇಮ್‌ಗೆ ಗೆಳೆಯರ ಆಸ್ತಿ ದೊಡ್ಡದೇ ಇದೆ. ಅದೇ ನನ್ನ ಮೌಲ್ಯ ಹೆಚ್ಚಿಸಿದೆ ಎನ್ನುವ ಪ್ರೇಮ್‌, ಈ ಇಪ್ಪತ್ತು ವರ್ಷಗಳ ಸಿನಿಮಾ ಜರ್ನಿ ಸುಲಭವಾದುದಲ್ಲ. ಈ ಜರ್ನಿಗೆ ಹಲವು ಗೆಳೆಯರ ಸಹಕಾರ, ಪ್ರೋತ್ಸಾಹವೂ ಇದೆ.

ಎಲ್ಲಕ್ಕಿಂತಲೂ ಹೆಚ್ಚಾಗಿ ಸಿನಿಮಾರಂಗದ ಬಳಗವಿದೆ. ಈ ಇಪ್ಪತ್ತು ವರ್ಷದ ನನ್ನ ಸಿನಿಮಾ ವೃತ್ತಿ ಜೀವನದಲ್ಲಿ ಜೊತೆಯಾಗಿ ನಿಂತು ನನ್ನನ್ನು ಸಲುಹಿ ಬೆಳೆಸಿದ ಚಿತ್ರರಂಗದ ಕುಟುಂಬಕ್ಕೆ, ಅಭಿಮಾನಿಗಳಿಗೆ, ,ಮಾಧ್ಯಮಕ್ಕೆ, ಸ್ನೇಹಿತರಿಗೆ ಹಾಗು ನನ್ನ ಕುಟುಂಬಕ್ಕೆ ಮತ್ತು ಕನ್ನಡ ಕಲಾಭಿಮಾನಿಗಳಿಗೆ ನನ್ನ ಹೃತ್ಪೂರ್ವಕ ವಂದನೆಗಳು… ನಿಮ್ಮ ಪ್ರೀತಿ, ಅಭಿಮಾನ, ಆಶೀರ್ವಾದ ಸದಾ ಹೀಗೆ ಇರಲಿ.. ಎಂಬುದು ನೆನಪಿರಲಿ ಮಾತು….

Categories
ಸಿನಿ ಸುದ್ದಿ

ಸಾವಿತ್ರಿಯ ಹಾಡಿನ ಸಂಭ್ರಮ! ವಿಜಯರಾಘವೇಂದ್ರ ಅವರ 51ನೇ ಚಿತ್ರವಿದು…

ಯಾವುದೇ ನಟ ಇರಲಿ, ತನ್ನ ಸಿನಿಮಾ ಅರ್ಧ ಸೆಂಚುರಿ ದಾಟುವುದೇ ವಿಶೇಷ. ಅದರಲ್ಲೂ ಅದೊಂದು ಸಂಭ್ರಮವೇ ಸರಿ. ಈಗ ವಿಜಯರಾಘವೇಂದ್ರ ಅವರು ಅರ್ಧ ಸೆಂಚುರಿ ದಾಟಿ, ತಮ್ಮ ಅಭಿನಯದ ಐವತ್ತೊಂದನೇ ಚಿತ್ರ ಮಾಡಿದ್ದಾರೆ. ಅದೇ ಈ ಹೊತ್ತಿನ ವಿಶೇಷ. ಅಂದಹಾಗೆ, “ಸಾವಿತ್ರಿ” ಅವರ 51ನೇ ಸಿನಿಮಾ….

“ಸಾವಿತ್ರಿ” ಇದು ವಿಜಯರಾಘವೇಂದ್ರ ಅಭಿನಯದ ಚಿತ್ರ. ಈ ಚಿತ್ರವನ್ನು ಪ್ರಶಾಂತ್ ಕುಮಾರ್ ಹೀಲಲಿಗೆ ನಿರ್ಮಿಸಿದ್ದಾರೆ. ಇತ್ತೀಚೆಗೆ ಚಿತ್ರದ ಹಾಡುಗಳು ಬಿಡುಗಡೆಯಾಗಿವೆ. ಜೊತೆಗೆ ಟ್ರೇಲರ್‌ ಕೂಡ ಪ್ರದರ್ಶನ ಕಂಡಿದೆ. ಅಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಉಪಾಧ್ಯಕ್ಷ ಉಮೇಶ್ ಬಣಕಾರ್‌ ಹಾಡು ರಿಲೀಸ್‌ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ವಿಜಯರಾಘವೇಂದ್ರ ಅವರಿಗೆ ಈ ಸಿನಿಮಾ ವಿಶೇಷತೆಗಳಲ್ಲೊಂದು. ಆ ಕುರಿತು ಹೇಳುವ ಅವರು, “ನಾನು ಮಾಡುವ ಎಲ್ಲಾ ಕಾರ್ಯದಲ್ಲೂ ಅಪ್ಪು ಅವರಿರುತ್ತಾರೆ. ಒಳ್ಳೆಯ ತಂಡದೊಂದಿಗೆ ಒಳ್ಳೆಯ ಚಿತ್ರ ಮಾಡಿದ ಸಂತೋಷವಿದೆ. ಸದ್ಯದಲ್ಲೇ ಚಿತ್ರ ಬಿಡುಗಡೆ ಆಗಲಿದೆ.‌ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂಬುದು ಅವರ ಮಾತು.

ನಿರ್ದೇಶಕ ಎಸ್ ದಿನೇಶ್ ಮಾತನಾಡಿ, “ಸಾವಿತ್ರಿ” ವಿಭಿನ್ನ ಕಥಾಹಂದರ ಹೊಂದಿರುವ ಚಿತ್ರ. ಇದು ವಿಜಯರಾಘವೇಂದ್ರ ಅವರ ಐವತ್ತೊಂದನೇ ಚಿತ್ರ. ಆದರೆ ಕೆಲಸದಲ್ಲಿ ಅವರಿಗಿರುವ ಶ್ರದ್ಧೆ ಈಗಲೂ ಹೊಸತು. ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿ ಪಡೆದಿರುವ ವಿಜಯ ರಾಘವೇಂದ್ರ ಹಾಗೂ ತಾರಾ ಅವರು ನಮ್ಮ ಚಿತ್ರದಲ್ಲಿ ಅಭಿನಯಿಸಿರುವುದು ನಮ್ಮ ಹೆಮ್ಮೆ. ಪ್ರಕಾಶ್ ಬೆಳವಾಡಿ, ಊರ್ವಶಿ ರಾಯ್, ಮಿಮಿಕ್ರಿ ಗೋಪಿ, ನೈಲಾ ಪ್ರಮೋದ್, ಸಂಜು ಬಸಯ್ಯ, ಸ್ವಾತಿ ಮುಂತಾದವರು ಚಿತ್ರದಲ್ಲಿದ್ದಾರೆ. ಹೃದಯ ಶಿವ ಬರೆದು, ಮೊದಲ ಬಾರಿಗೆ ಸಂಗೀತ ನೀಡಿರುವ ಹಾಡುಗಳು ಸುಮಧುರವಾಗಿದೆ. ಛಾಯಾಗ್ರಾಹಕ ನಾಗಾರ್ಜುನ ಸೇರಿದಂತೆ ಎಲ್ಲಾ ತಂತ್ರಜ್ಞರ ಕೆಲಸ ಅದ್ಭುತವಾಗಿದೆ ಎಂದರು.

ಗೀತ ಸಾಹಿತಿ ಹೃದಯಶಿವ, “ನಾನು ದಿನೇಶ್ ಅವರ ಮೊದಲ ಚಿತ್ರ “ಉಯ್ಯಾಲೆ”ಗೆ ಸಂಭಾಷಣೆ ಬರೆದಿದೆ. ಹಾಡು ಬರೆಯುತ್ತಿದ್ದ ನನಗೆ ಸಂಭಾಷಣೆ ಬರೆಯಲು ಮೊದಲು ಅವಾಕಾಶ ನೀಡಿದ್ದೆ ಇವರು. ಈಗ ” ಸಾವಿತ್ರಿ” ಚಿತ್ರದ ಮೂಲಕ ಸಂಗೀತ ನಿರ್ದೇಶಕನಾಗಿ ಹೊಸ ಪಯಣ ಆರಂಭಿಸಿದ್ದೀನಿ. ಈವರೆಗೂ ಎಂಟನೂರಕ್ಕೂ ಅಧಿಕ ಹಾಡುಗಳನ್ನು ಬರೆದಿದ್ದೇನೆ. ಆದರೆ ಸಂಗೀತ ನೀಡಿರುವುದು ಇದೇ ಮೊದಲು. ನಾಲ್ಕು ಹಾಡುಗಳು ಚೆನ್ನಾಗಿದೆ ಎಂದರು ಹೃದಯಶಿವ.

ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಉತ್ತಮವಾಗೂ ಮೂಡಿಬಂದಿದೆ. ಸರ್ಕಾರ ನೂರರಷ್ಟು ಅನುಮತಿ ನೀಡಿದರೆ, ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುತ್ತೇನೆ. ಇಲ್ಲವಾದಲ್ಲಿ ಓಟಿಟಿ ಮೂಲಕ ಪ್ರದರ್ಶಿಸುತ್ತೇವೆ ಎಂದರು ನಿರ್ಮಾಪಕ ಪ್ರಶಾಂತ್ ಕುಮಾರ್.

ಚಿತ್ರದ ನಟಿಸಿರುವ ಊರ್ವಶಿ ರಾಯ್, ನೈಲಾ ಪ್ರಮೋದ್ ತಮ್ಮ ಪಾತ್ರದ ಬಗ್ಗೆ ಮಾತನಾಡಿದರು. ಹಲವಾರು ಗಣ್ಯರು ಚಿತ್ರತಂಡಕ್ಕೆ ಶುಭ ಕೋರಿದರು

Categories
ಸಿನಿ ಸುದ್ದಿ

ಶ್ರೀಧರ್ ಹಾಡಿನ ಸಂಭ್ರಮ! ನಾಟಿ ಕೋಳಿ ನೀನು … ನಾಟಿ ಹುಂಜ ನೀನು ಅಂದ್ರು ಜೋಗಿ ಸುನೀತ…

ಸಂಗೀತ ನಿರ್ದೇಶಕ ಶ್ರೀಧರ್ ಸಂಭ್ರಮ್ ಗಾಯಕರ ಮೂಲಕ ಹಾಡಿಸೋದು ಗೊತ್ತು. ಈಗ ಅವರೇ ಮೊದಲ ಸಲ ಹಾಡಿದ್ದಾರೆ. ಅದು ಶೋಕಿವಾಲ ಸಿನಿಮಾಗೆ. ಈಗಾಗಲೆ ಮೊದಲನೇ ಲಿರಿಕಲ್ ವೀಡಿಯೋ ರಿಲೀಸ್ ಅಗಿ ಹಿಟ್ ಅಗಿತ್ತು…

ಈಗ ಎರಡನೇ ಲಿರಿಕಲ್ ವೀಡಿಯೋ ನಾಟಿ ಕೋಳಿ… ನೀನು ನಾಟಿ ಹುಂಜ ನಾನು… ಹಾಡು ಹಾಡಿದ್ದಾರೆ. ಅಂದಹಾಗೆ, ಈ ಹಾಡು ಫೆಬ್ರವರಿ 3ರಂದು ಸಂಜೆ 5:04ಕ್ಕೆ ಕ್ರಿಸ್ಟಲ್ ಮ್ಯೂಸಿಕ್ ಚಾನಲ್ ನಲ್ಲಿ ರಿಲೀಸ್ ಆಗುತ್ತಿದೆ.

ಡಾ”ಟಿ.ಆರ್,ಚಂದ್ರಶೇಖರ್ ಸರ್ ನಿರ್ಮಾಣದ ಈ ಚಿತ್ರವನ್ನು, ಜಾಕಿ ನಿರ್ದೇಶನ ಮಾಡಿದ್ದಾರೆ. ಶ್ರೀಧರ್. ವಿ.ಸಂಭ್ರಮ್ ಸಂಗೀತವಿದೆ. ಮೊದಲ ಬಾರಿಗೆ ಅವರಿಲ್ಲಿ ಹಾಡಿದ್ದಾರೆ. ಅವರೊಂದಿಗೆ ಜೋಗಿ ಸುನೀತ ಧ್ವನಿಗೂಡಿಸಿದ್ದಾರೆ. ನಾಗೇಂದ್ರ ಪ್ರಸಾದ್, ಗೌಸ್ ಪೀರ್ ಬರೆದಿರುವ ಹಾಡು ಕ್ರಿಸ್ಟಲ್ ಮ್ಯೂಸಿಕ್ ಚಾನೆಲ್ ನಲ್ಲಿ ರಿಲೀಸ್ ಆಗಲಿದೆ.

Categories
ಸಿನಿ ಸುದ್ದಿ

ಹೊಸಬರ ಧರ್ಮಂ ಚಿತ್ರದ ಶೀರ್ಷಿಕೆ ಬಿಡುಗಡೆ…

ಶಾಂತಾ ಸಿನಿಮಾಸ್ ನಡಿ ಎಸ್ ಕೆ ರಾಮಕೃಷ್ಣ ನಿರ್ಮಾಣದ ಹೊಸ ಸಿನಿಮಾದ ಟೈಟಲ್ ಅನಾವರಣಗೊಂಡಿದೆ. ಒಂದಷ್ಟು ಹೊಸಬರೇ ಸೇರಿ ಮಾಡುತ್ತಿರುವ ಈ ಸಿನಿಮಾಗೆ ಧರ್ಮಂ ಎಂಬ ಪವರ್ ಫುಲ್ ಟೈಟಲ್ ಇಡಲಾಗಿದ್ದು, ಇತ್ತೀಚೆಗೆಷ್ಟೇ ಈ ಸಿನಿಮಾದ ಟೈಟಲ್ ಲಾಂಚ್ ಆಗಿದೆ. ಕನ್ನಡದ ಚಿತ್ರರಂಗದ ಸ್ಫೂರ್ತಿಯ ನಟರಾದ ಶಂಕರ್ ನಾಗ್ ಹಾಗೂ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಈ ಶೀರ್ಷಿಕೆಯನ್ನು ಚಿತ್ರತಂಡ ಅರ್ಪಣೆ ಮಾಡಿದೆ.

ಕಳೆದ ಹದಿಮೂರು ವರ್ಷಗಳಿಂದ ಅಸೋಸಿಯೇಟ್ ಡೈರೆಕ್ಟರ್ ಆಗಿ ಕೆಲಸ ನಿರ್ವಹಿಸುತ್ತಿರುವ ನಾಗಮುಖ ಧರ್ಮಂ ಸಿನಿಮಾ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದು, ಇದು ಇವರು ನಿರ್ದೇಶನದ ಮೊದಲ ಸಿನಿಮಾವಾಗಿದೆ. 1980ರ ಕಾಲಘಟ್ಟದಲ್ಲಿ ನಡೆದ ಸತ್ಯ ಘಟನೆ ಆಧಾರಿತ ಧರ್ಮಂ ಸಿನಿಮಾದಲ್ಲಿ ಶಶಿ ನಾಯಕ ನಟನಾಗಿ ಅಭಿನಯಿಸಿದ್ದು, ವರಿಣಿಕಾ ಶೆಟ್ಟಿ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ಉಳಿದಂತೆ ಸರವಣ ಸಂಗೀತ, ವಿನೋದ್ ಕುಮಾರ್ ಸಂಕಲನ, ನಾಗಶಟ್ಟಿ ಕ್ಯಾಮೆರಾ ಕೈಚಳಕ ಸಿನಿಮಾದಲ್ಲಿರಲಿದೆ.

ಆನೇಕಲ್ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದ್ದು, ಈಗಾಗಲೇ 90ರಷ್ಟು ಶೂಟಿಂಗ್ ಕಂಪ್ಲೀಟ್ ಮಾಡಿರುವ ಚಿತ್ರತಂಡ ಸಾಂಗ್ ಹಾಗೂ ಫೈಟ್ ಸೀನ್ಸ್ ಶೂಟಿಂಗ್ ನ್ನು ಬಾಕಿ ಉಳಿಸಿಕೊಂಡಿದೆ. ಸದ್ಯಕ್ಕೆ ಟಾಕಿ ಪೋಷನ್ ನಲ್ಲಿ ಬ್ಯುಸಿಯಾಗಿರುವ ಧರ್ಮಂ ಟೀಂ ಕೊರೋನಾ ಆರ್ಭಟ ಕೊಂಚ ಕಡಿಮೆಯಾದ್ಮೇಲೆ ತೆರೆಗೆ ಬರುವ ಯೋಜನೆ ಹಾಕಿಕೊಂಡಿದೆ.

Categories
ಸಿನಿ ಸುದ್ದಿ

ಫೆಬ್ರವರಿ 11ಕ್ಕೆ ಫೋರ್ ವಾಲ್ಸ್ ಸಿನಿಮಾ ತೆರೆಗೆ; ಅಚ್ಯುತ್ ಚಿತ್ರದ ಹೀರೋ

ಕನ್ನಡದಲ್ಲಿ ಈಗಾಗಲೇ ವಿಭಿನ್ನ ಬಗೆಯ ಶೀರ್ಷಿಕೆಯ ಸಿನಿಮಾಗಳು ಬಂದಿವೆ. ಅದರ ಜೊತೆಯಲ್ಲಿ ಪೋಸ್ಟರ್ ಹಾಗು ಟೈಟಲ್,ಟೀಸರ್ ಹೀಗೆ ಪ್ರತಿ ಹಂತದಲ್ಲೂ ಕ್ಯೂರಿಯಾಸಿಟಿ ಹುಟ್ಟಿಸುವ ಮೂಲಕ ಎಲ್ಲರ ಗಮನ ತನ್ನತ್ತ ಸೆಳೆಯುವಲ್ಲಿ ಯಶಸ್ವಿಯೂ ಆಗುತ್ತವೆ. ಅಂತಹ ಸಿನಿಮಾಗಳ ಸಾಲಿಗೆ ಫೋರ್ ವಾಲ್ಸ್ ಸಿನಿಮಾವೂ ಸೇರಿದೆ.

ಫಾರ್ ದ ಫಸ್ಟ್ ಟೈಮ್ ಖ್ಯಾತ ನಟ ಅಚ್ಯುತ್ ಕುಮಾರ್ ಹೀರೋ ಆಗಿ ನಟಿಸಿರುವ ‘ಫೋರ್ ವಾಲ್ಸ್’ ಸಿನಿಮಾ ಇದೀಗ ಬಿಡುಗಡೆಗೆ ಸಜ್ಜಾಗಿದೆ. ಅವರ ಜೊತೆ ಸುಜಯ್, ಜಾಹ್ನವಿ, ಭಾಸ್ಕರ್ ನೀನಾಸಂ, ಡಾ.ಪವಿತ್ರ, ರಚನಾ ಇತರರು ಕಾಣಿಸಿಕೊಂಡಿದ್ದಾರೆ.

ಫೆಬ್ರವರಿ 11ಕ್ಜೆ ‘ಫೋರ್ ವಾಲ್ಸ್’ ಸಿನಿಮಾ ಬಿಡುಗಡೆ ಮಾಡುವ ಬಗ್ಗೆ ಚಿತ್ರತಂಡ‌ ಜೋರು ತಯಾರಿ ನಡೆಸಿದೆ.

ಗಾಯಕ ವಿಜಯ್ ಪ್ರಕಾಶ್ ಅವರ ಧ್ವನಿಯಲ್ಲಿ ಮೂಡಿ ಬಂದಿದ್ದ ‘ಕಣ್ಮಣಿಯೇ ಕಣ್ಮಣಿಯೇ’ ಹಾಡಿನ ಲಿರಿಕಲ್ ವೀಡಿಯೋ ಸಾಂಗ್ ಈ ಹಿಂದೆ ಎಲ್ಲೆಡೆ ಜೋರು ಸದ್ದು ಮಾಡಿತ್ತು. ಅಚ್ಯುತ್ ಕುಮಾರ್ ಸೈಕಲ್ ಹಿಡಿದು ಗೆಳತಿ ಹಿಂದೆ ಸುತ್ತುತ್ತ, ಪ್ರೀತಿ ನಿವೇದನೆ ಮಾಡುವ ಹಾಡು ಕೇಳುಗರಿಗಂತೂ ಸಿಕ್ಕಾಪಟ್ಟೆ ಮೋಡಿ ಮಾಡಿತ್ತು. ಶ್ರೀ ತಲಗೇರಿ ಅವರ ಸಾಹಿತ್ಯಕ್ಕೆ ಸಂಗೀತ ನಿರ್ದೇಶಕ ಆನಂದ ರಾಜಾ ವಿಕ್ರಮ ಇಂಪಾದ ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಹಾಡಿನ ವಿಡಿಯೋ ಕೂಡ ಬಿಡುಗಡೆಯಾಗಿದ್ದು, ಯೂಟ್ಯೂಬ್ ನಲ್ಲಿ‌ ಸೌಂಡ್ ಮಾಡ್ತಿದೆ ಅನ್ನೋದು ಪ್ರತ್ಯೇಕವಾಗಿ ಹೇಳುವಂತಿಲ್ಲ.

‘ಫೋರ್ ವಾಲ್ಸ್’ ಚಿತ್ರಕ್ಕೆ ಮಂತ್ರಂ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಡೈರೆಕ್ಟರ್ ಆಗಿ ಎಂಟ್ರಿ ಕೊಟ್ಟಿದ್ದ ಎಸ್.ಎಸ್ ಸಜ್ಜನ್ ಈ ಚಿತ್ರಕ್ಕೆ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಅಚ್ಯುತ್ ಕುಮಾರ್ ಇಲ್ಲಿ ಹೀರೋ ಆಗಿ ಮಿಂಚಿದ್ದು, ಮೂರು ಶೇಡ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಟೀಸರ್ ನೋಡಿ, ಅಚ್ಯುತ್ ಕುಮಾರ್ ಹೊಸ ಗೆಟಪ್ ನಲ್ಲಿ ಕಂಡ ಚಿತ್ರಪ್ರೇಮಿಗಳು ಸಿನಿಮಾ ಬಗ್ಗೆ ಇನ್ನಿಲ್ಲದ ನಿರೀಕ್ಷೆಯನ್ನು ಇಟ್ಟುಕೊಂಡಿರುವುದಂತು ನಿಜ.

ಹಾಗಾದರೆ, ಈ ಫೋರ್ ವಾಲ್ಸ್ ಸ್ಟೋರಿ ಏನ್ ಗೊತ್ತಾ? ಹೇಳಿ ಕೇಳಿ ಇದೊಂದು ಫ್ಯಾಮಿಲಿ ಎಂಟಟೈನ್ಮೆಂಟ್ ಚಿತ್ರ. ತಂದೆ ಮತ್ತು ಮಗನ ನಡುವಿನ ಬಾಂಧವ್ಯದ ಕತೆ ಚಿತ್ರದಲ್ಲಿದೆ.

ಮನರಂಜನೆಗೆ ಎಲ್ಲೂ ಕೊರತೆ ಇಲ್ಲ ಎನ್ನುವುದು ಚಿತ್ರತಂಡದ ಮಾತು. ಎಸ್.ವಿ ಪಿಕ್ಚರ್ಸ್ ಬ್ಯಾನರ್ ನಲ್ಲಿ ಟಿ. ವಿಶ್ವನಾಥ್ ನಾಯಕ್ ನಿರ್ಮಾಪಕರು. ಡಾ. ಪವಿತ್ರ ನಾಯಕಿಯಾಗಿ ಅಭಿನಯಿಸಿದ್ದಾರೆ. ಡಾ. ಜಾನ್ಹವಿ ಜ್ಯೋತಿ, ದತ್ತಣ್ಣ, ಭಾಸ್ಕರ್ ನೀನಾಸಂ, ಶ್ರೇಯಾ ಶೆಟ್ಟಿ, ಆಂಚಲ್ ಸೇರಿದಂತೆ ಹಲವು ಕಲಾವಿದರು ಚಿತ್ರದಲ್ಲಿದ್ದಾರೆ. ವಿಡಿಆರ್ ಛಾಯಾಗ್ರಹಣ ಚಿತ್ರಕ್ಕಿದೆ.

Categories
ಸಿನಿ ಸುದ್ದಿ

ಆ ಅಪ್ಪರಂತೆ ಇವರೂ ಇರಲಿ…

ಚಿರಂಜೀವಿ ಸರ್ಜಾ ಮತ್ತು ಪನ್ನಗ ಇಬ್ಬರೂ ಆತ್ಮೀಯ ಗೆಳೆಯರು ಅನ್ನೋದು ಎಲ್ಲರಿಗೂ ಗೊತ್ತು. ಅವರ ಸ್ನೇಹ ಹೇಗಿತ್ತೆಂದರೆ, ಒಟ್ಟಿಗೆ ತಿಂಡಿ ತಿನ್ನುವುದರಿಂದ ಹಿಡಿದು ಒಟ್ಟಿಗೆ ಕಥೆಗಳನ್ನು ಕೇಳುವವರೆಗೂ ಇತ್ತು. ಬಿಡುವಿದ್ದಾಗೆಲ್ಲ ಸದಾ ಒಂದಷ್ಟು ಹರಟೆ, ಸಿನಿಮಾ ಕುರಿತ ಮಾತುಕತೆ ಇತ್ಯಾದಿ ವಿಷಯಗಳ ಬಗ್ಗೆ ಚರ್ಚಿಸುತ್ತಿದ್ದ ಅವರು ಒಂದು ರೀತಿ ಗೆಳೆತನಕ್ಕೆ ಹೇಳಿ ಮಾಡಿಸಿದಂತಹ ದೋಸ್ತ್‌ಗಳೇ.


ಹೌದು, ಇಲ್ಲಿರುವ ಒಂದು ಫೋಟೋ ನೋಡಿದವರಿಗೆ ಹೆಚ್ಚೇನೂ ಹೇಳುವ ಅಗತ್ಯವಿಲ್ಲ. ಇಲ್ಲಿರುವ ಫೋಟೋದಲ್ಲಿ ಚಿರಂಜೀವಿ ಸರ್ಜಾ ಅವರು ಪನ್ನಗ ಅವರಿಗೆ ಹೆಡ್‌ ಮಸಾಜ್‌ ಮಾಡುತ್ತಿದ್ದಾರೆ. ಹಾಗೆಯೇ ಪಕ್ಕದಲ್ಲಿರೋ ಫೋಟೋವನ್ನು ಗಮನಿಸಿ, ಆ ಫೋಟೋದಲ್ಲಿ ಚಿರಂಜೀವಿ ಸರ್ಜಾ ಅವರ ಪುತ್ರ ರಾಯನ್‌ ಪನ್ನಗ ಪುತ್ರ ವೇದ್‌ ಅವರಿಗೆ ತಲೆ ಸವರುತ್ತಿದ್ದಾನೆ. ಅಲ್ಲಿಗೆ ಅಪ್ಪಂದಿರಂತೆಯೇ ಮಕ್ಕಳೂ ಕಾಣಿಸಿಕೊಂಡಿದ್ದಾರೆ. ಇವರಿಬ್ಬರ ಗೆಳೆತನ ಕೂಡ ಹಾಗೆಯೇ ಇರಲಿ ಅನ್ನೋದು ಸಿನಿಲಹರಿ ಅಶಯ…

Categories
ಸಿನಿ ಸುದ್ದಿ

ಹೊಸ ಪ್ರತಿಭೆಗಳಿಗೆ ಅವಾರ್ಡ್‌ ಕೊಡಲಿದೆ ಅವಾರ್ಡಿಯೊ ಕಿರುಚಿತ್ರೋತ್ಸವ! ಇದು ಪ್ರತಿಭಾವಂತರ ಹೊಸ ವೇದಿಕೆ…

ಕಿರುಚಿತ್ರಗಳ ಮೂಲಕ ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಹೊರಟಿರುವ ಅನೇಕ ಪ್ರತಿಭಾವಂತರು ಕನ್ನಡ ಸಿನಿ ಜಗತ್ತಿನಲ್ಲಿದ್ದಾರೆ. ಈಗಾಗಲೇ ಅನೇಕ ಪ್ರತಿಭಾವಂತರು ಕಿರುಚಿತ್ರಗಳ ಮೂಲಕವೇ ತಮ್ಮ ಭವಿಷ್ಯ ಕಟ್ಟಿಕೊಂಡಿದ್ದಾರೆ. ಅಂತಹ ಯುವ ಪ್ರತಿಭೆಗಳನ್ನು ಗುರುತಿಸಿ, ಅವರ ಸಿನಿಮಾ ಮತ್ತು ಅವರೊಳಗಿರುವ ಅಗಾಧ ಪ್ರತಿಭೆಯನ್ನು ಹೊರತರುವಂತಹ ಪ್ರಯತ್ನ ಕಿರುಚಿತ್ರೋತ್ಸವಗಳ ಮೂಲಕ ನಡೆದಿದೆ. ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸಬೇಕೆಂಬ ಉದ್ದೇಶದಿಂದಲೇ ಹಲವು ರಾಜ್ಯ ಮತ್ತು ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಕಿರುಚಿತ್ರೋತ್ಸವಗಳು ನಡೆಯುತ್ತವೆ. ಪ್ರತಿ ವರ್ಷ ನಡೆಯುವ ಈ ಕಿರುಚಿತ್ರೋತ್ಸವಗಳ ಸಾಲಿಗೆ ಈಗ ಅವಾರ್ಡಿಯೊ ರಾಷ್ಟ್ರೀಯ ಕಿರುಚಿತ್ರೋತ್ಸವ ಕೂಡ ಸೇರಿದೆ.


ಹೌದು, ನವ ಪ್ರತಿಭೆಗಳಿಗೊಂದು ಹೊಸ ವೇದಿಕೆಯಾಗಿರುವ ಈ ಕಿರುಚಿತ್ರೋತ್ಸವದಲ್ಲಿ ಎಲ್ಲರಿಗೂ ಉತ್ತಮ ವೇದಿಕೆ ಕಲ್ಪಿಸುವ ಗುರಿಯನ್ನು ಹೊಂದಿದೆ ಎಂದು ಹೇಳುವ ANSFF ಸಂಸ್ಥಾಪಕ ಹಾಗು ಸಿಇಓ ಲಿಖಿತ್ ರಘುವೀರ್, ” ನಾವು ಆರಂಭಿಸುವ ಈ ಕಿರುಚಿತ್ರೋತ್ಸವದಂತಹ ವೇದಿಕೆಗಳನ್ನು ಬಹಳಷ್ಟು ಕಂಪನಿಗಳು ಶುರುಮಾಡಿವೆ. ಆದರೆ, ಅವುಗಳಿಗಿಂತಲೂ ಭಿನ್ನವಾಗಿ ಮಾಡಬೇಕು, ಎಲ್ಲಾ ಪ್ರತಿಭೆಗಳನ್ನೂ ಪರಿಗಣಿಸಿ ಅವರಿಗೆ ಸೂಕ್ತ ವೇದಿಕೆ ಕಲ್ಪಿಸಬೇಕು ಅನ್ನೋದು ನಮ್ಮ ಉದ್ದೇಶ. ಕೇವಲ ಅದು ಕಿರುಚಿತ್ರೋತ್ಸವ ಆಗಿ ಉಳಿಯದೆ, ಒಂದೊಳ್ಳೆಯ ಅನುಭವ ಕಟ್ಟಿಕೊಡುವ ಪ್ರಯತ್ನ ಮಾಡುತ್ತೇವೆ. ಎಲ್ಲಕ್ಕಿಂತಲೂ ಉತ್ತಮ ಸಂಬಂಧದ ಅರ್ಥ ಕಲ್ಪಿಸಿ, ಗೌರವಿಸುವ ಪ್ರಯತ್ನ ಮಾಡಲಾಗುತ್ತದೆ. ಹಲವು ಪ್ರತಿಭಾವಂತರ ಕನಸುಗಳನ್ನು ನನಸಾಗಿಸುವ ಸಣ್ಣ ಪ್ರಯತ್ನವಿದು.

ಇನ್ನು, ಈ ಕಿರುಚಿತ್ರೋತ್ಸವ ಯುವ ಪೀಳಿಗೆಯ ಚಲನಚಿತ್ರ ನಿರ್ಮಾಪಕರಿಗೆ ಮತ್ತೊಂದು ಅನನ್ಯ ವೇದಿಕೆಯೂ ಹೌದು. ಈ ಅವಾರ್ಡಿಯೊ ರಾಷ್ಟ್ರೀಯ ಕಿರುಚಿತ್ರೋತ್ಸವ ಬೆಂಗಳೂರಿನಲ್ಲೇ ನಡೆಯಲಿದೆ. ಕಿರುಚಿತ್ರೋತ್ಸವದಲ್ಲಿ ಖ್ಯಾತ ನಟ, ನಟಿಯರು, ನಿರ್ಮಾಪಕರು, ನಿರ್ದೇಶಕರು ಆಗಮಿಸಲಿದ್ದಾರೆ. ಕಿರುಚಿತ್ರೋತ್ಸವದಲ್ಲಿ ನಿರ್ಮಾಪಕ, ನಿರ್ದೇಶಕರ ಜೊತೆ ಸಂವಾದ ಕಾರ್ಯಕ್ರಮವೂ ಇರಲಿದೆ. ಇನ್ನು, 2022 ರ ಏಪ್ರಿಲ್‌ 23 ಮತ್ತು 24 ರಂದು ಕಿರುಚಿತ್ರೋತ್ಸವ ನಡೆಯಲಿದೆ. ತಮ್ಮ ಕಿರುಚಿತ್ರಗಳನ್ನು ಮಾರ್ಚ್‌ 6ರ ಒಳಗಾಗಿ ನೋಂದಣಿ ಮಾಡಿಕೊಳ್ಳಬೇಕು. ಇಲ್ಲಿ ಶಾರ್ಟ್‌ ಫಿಲ್ಮ್‌, ಶಾರ್ಟ್‌ ಡಾಕ್ಯುಮೆಂಟರಿ ಮತ್ತು ಮ್ಯೂಸಿಕ್‌ ವಿಡಿಯೋ ಕೂಡ ನೋಂದಣಿ ಮಾಡಬಹುದಾಗಿದೆ. www.awardioevents.com ಈ ಮೇಲ್‌ಗೆ ನೋಂದಣಿಗ ಎಂದು ವಿವರ ಕೊಡುತ್ತಾರೆ ಲಿಖಿತ್‌ ರಘುವೀರ್.

ಅಂದಹಾಗೆ, ಈ ಕಿರುಚಿತ್ರೋತ್ಸವಕ್ಕೆ ಇಂಡಿಯನ್ ಫಿಲ್ಮ್ ಮೇಕರ್ಸ್ ಅಸೋಸಿಯೇಷನ್, ಮ್ಯೂಸಿಕ್ ಬಾಕ್ಸ್ ನ ಸ್ಕೈಲೈನ್ ದಿಲೀಪ್ ಸಾಥ್‌ ನೀಡಿದ್ದಾರೆ. ನಮ್ಮೊಂದಿಗೆ ಫಿಲ್ಮಾಹಾಲಿಕ್‌ ಫೌಂಡೇಶನ್ ಮತ್ತು ತಾಥಿ ಸಿನಿಮಾ ಪ್ರೊಡಕ್ಷನ್ಸ್ ಕೂಡ ಕೈ ಜೋಡಿಸಿದೆ. ಜನವರಿ 1, 2016 ರ ನಂತರ ಪೂರ್ಣಗೊಂಡ ಯಾವುದೇ ಕಿರುಚಿತ್ರಕ್ಕೆ ANSFF ಮುಕ್ತವಾಗಿದೆ. ತಮ್ಮ ಚಲನಚಿತ್ರವನ್ನು ANSFF ಗೆ ಸಲ್ಲಿಸುವುದು ಆಯ್ಕೆಯ ಗ್ಯಾರಂಟಿ ಅಲ್ಲ. ಎಲ್ಲಾ ವಿಜೇತರನ್ನು ನಮ್ಮ ಅಧಿಕೃತ ವೆಬ್‌ಸೈಟ್‌ನಲ್ಲಿ ಪಟ್ಟಿ ಮಾಡಲಾಗುತ್ತದೆ. ಎಲ್ಲಾ ವಿಜೇತ ಚಿತ್ರಗಳಿಗೂ ಟ್ರೋಫಿ ಮತ್ತು ಪ್ರಮಾಣ ಪತ್ರವನ್ನು ನೀಡಲಾಗುತ್ತದೆ.

ಈ ಕಿರುಚಿತ್ರೋತ್ಸವ ಪ್ರತಿಯೊಬ್ಬ ನಟ,ನಿರ್ದೇಶಕ ಮತ್ತು ನಿರ್ಮಾಪಕ ಹಾಗು ಅವರ ತಂಡವನ್ನು ಸಮಾನವಾಗಿ ಪರಿಗಣಿಸುತ್ತದೆ. ಇನ್ನು, ಈ ಕಿರುಚಿತ್ರೋತ್ಸವದಲ್ಲಿ ಒಟ್ಟು 22 ವಿಭಾಗಳಲ್ಲಿ ಪ್ರಶಸ್ತಿ ನೀಡಲಾಗುತ್ತದೆ. ಅತ್ಯುತ್ತಮ ನಟ. ನಟಿ. ಅತ್ಯುತ್ತಮ ಕಥೆ. ಅತ್ಯುತ್ತಮ ಚಿತ್ರಕಥೆ. ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ಛಾಯಾಗ್ರಹಣ, ಅತ್ಯುತ್ತಮ ಸಂಗೀತ ನಿರ್ದೇಶಕ, ಅತ್ಯುತ್ತಮ ಸಂಕಲನ, ಅತ್ಯುತ್ತಮ ಚೊಚ್ಚಲ ಕಿರುಚಿತ್ರ ತಯಾರಕ, 2022 ರ ಅತ್ಯುತ್ತಮ ಅವಾರ್ಡಿಯೊ ಕಿರುಚಿತ್ರ ಸೇರಿದಂತೆ ಇತರೆ ವಿಭಾಗಳಲ್ಲೂ ಪ್ರಶಸ್ತಿ ವಿತರಿಸಲಾಗುತ್ತದೆ ಎಂದು ಕಿರುಚಿತ್ರೋತ್ಸವದ ಸಂಸ್ಥಾಪಕ ಲಿಖಿತ್ ರಘುವೀರ್ ಹೇಳಿದ್ದಾರೆ.

Categories
ಸಿನಿ ಸುದ್ದಿ

ಕನ್ನಡದಲ್ಲಿ ಮತ್ತೆ ರಣರಂಗ …? ಹೊಂಬಾಳೆ ಫಿಲಂಸ್‌ ಜೊತೆ ಶಿವರಾಜಕುಮಾರ್‌ ಸಿನಿಮಾ; ಸಂತೋಷ್‌ ಆನಂದ್‌ರಾಮ್‌ ಕಥೆ!!

ರಣರಂಗ… ಈ ಶೀರ್ಷಿಕೆ ಯಾರು ಕೇಳಿಲ್ಲ. ಅದರಲ್ಲೂ ಈ ಹೆಸರು ಕೇಳಿದಾಕ್ಷಣ ಥಟ್ಟನೆ ನೆನಪಾಗೋದೇ ಹ್ಯಾಟ್ರಿಕ್‌ ಹೀರೋ ಶಿವರಾಜಕುಮಾರ್.‌ ಹೌದು, ಶಿವರಾಜಕುಮಾರ್‌ ಅಭಿನಯದ ಈ ಸಿನಿಮಾ ೧೯೮೮ರಲ್ಲಿ ಬಿಡುಗಡೆಯಾಗಿತ್ತು. ಶಿವರಾಜಕುಮಾರ್‌ ಜೊತೆ ಈ ಚಿತ್ರದಲ್ಲಿ ಸುಧಾರಾಣಿ ಜೋಡಿಯಾಗಿದ್ದರು. ಈಗ ಮತ್ತೇಕೆ ಈ ಚಿತ್ರದ ವಿಷಯ ಅನ್ನೋ ಪ್ರಶ್ನೆ ಎದುರಾಗಬಹುದು. “ಮತ್ತೆ ರಣರಂಗ” ಶುರುವಾಗುವ ಸುದ್ದಿ ಜೋರಾಗಿಯೇ ಹರಿದಾಡುತ್ತಿದೆ. ಹೊಂಬಾಳೆ ಫಿಲಂಸ್‌ ಬ್ಯಾನರ್‌ನಲ್ಲಿ ಶಿವರಾಜಕುಮಾರ್‌ ನಟಿಸುತ್ತಿದ್ದು, ಸಂತೋಷ್‌ ಆನಂದರಾಮ್‌ ನಿರ್ದೇಶನ ಮಾಡಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಲೇ ಇವೆ. ಹಾಗೊಂದು ವೇಳೆ ಎಲ್ಲವೂ ಸರಿಯಾದರೆ ದೊಡ್ಮನೆ ಫ್ಯಾನ್ಸ್‌ ಫುಲ್‌ ಖುಷ್.‌


ಶಿವರಾಜ್ ಕುಮಾರ್ ಸದ್ಯ ಬಿಡುವಿಲ್ಲದಷ್ಟು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಅವುಗಳ ಜೊತೆಗೆ ಪ್ಯಾನ್‌ ಇಂಡಿಯಾ ಸಿನಿಮಾವೂ ಇದೆ. ವೇದ ಚಿತ್ರದ ನಂತರ ಪ್ಯಾನ್ ಇಂಡಿಯಾ ಸಿನಿಮಾ ಶುರುವಾಗಬಹುದು ಎನ್ನಲಾಗುತ್ತಿದೆ. ಅದರ ಹಿಂದೆಯೇ ಈಗ ಹೊಸ ಸುದ್ದಿ ಬಂದಿದೆ. ಶಿವರಾಜ್ ಕುಮಾರ್ ಮತ್ತು ಸಂತೋಷ್‌ ಆನಂದ್‌ರಾಮ್ ಕಾಂಬಿನೇಷನ್ ನಲ್ಲಿ ಹೊಸ ಸಿನಿಮಾ ಸೆಟ್ಟೇರಲಿದೆ ಎಂಬುದೇ ಆ ಸುದ್ದಿ. ಆ ಸುದ್ದಿ ನಿಜವಾಗಲಿ ಅನ್ನೋದು ಕೂಡ ಎಲ್ಲರ ಆಶಯ. ಇಷ್ಟಕ್ಕೂ ಸಂತೋಷ್‌ ಆನಂದ್‌ ರಾಮ್‌ ಅವರು ಶಿವಣ್ಣ ಅವರಿಗೆ “ರಾಜಕುಮಾರ” ಸಿನಿಮಾ ವೇಳೆಯೇ ಒಂದೊಳ್ಳೆಯ ಕಥೆ ರೆಡಿ ಮಾಡಿಟ್ಟುಕೊಂಡಿದ್ದರಂತೆ. ಅದಕ್ಕೆ “ಮತ್ತೆ ರಣರಂಗ” ಎಂಬ ಶೀರ್ಷಿಕೆಯನ್ನೂ ಅವರು ಕೊಟ್ಟಿದ್ದರಂತೆ. ಆದರೆ, ಅದಕ್ಕೆ ಕಾಲ ಕೂಡಿಬಂದಿರಲಿಲ್ಲ. ಈಗ ಸಮಯ ಬಂದಿರಬಹುದೇನೋ ಅದಕ್ಕೆ ಎಲ್ಲೆಡೆ ಈ ಇಬ್ಬರ ಕಾಂಬಿನೇಷನ್‌ನ ಸಿನಿಮಾ ಕುರಿತು ಸುದ್ದಿ ಹರಿದಾಡುತ್ತಿದೆ.

“ಮತ್ತೆ ರಣರಂಗ” ಸಿನಿಮಾದ ಈ ಚಿತ್ರದ ಶಿವರಾಜ್ ಕುಮಾರ್ ಅವರ ಪಾತ್ರವನ್ನು ತುಂಬಾನೇ ವಿಶೇಷವಾಗಿ ಮಾಡಿದ್ದಾರಂತೆ ಸಂತೋಷ್ ಆನಂದ್ ರಾಮ್. ಈ ಸಿನಿಮಾ ಮಾಡಬೇಕು ಅಂದಾಗೆಲ್ಲ ಆಗುತ್ತಿರಲಿಲ್ಲ. ಆ ನಡುವೆ ಪುನೀತ್‌ ರಾಜಕುಮಾರ್‌ ಅವರಿಗೆ ಸಂತೋಷ್‌ ಆನಂದ್‌ರಾಮ್‌ “ಯುವರತ್ನ” ಮಾಡಿದರು. ಈಗ
ಹೊಂಬಾಳೆ ಫಿಲಂಸ್‌ ಬ್ಯಾನರ್‌ನಡಿ “ಮತ್ತೆ ರಣರಂಗ” ಶುರುವಾಗುತ್ತಾ? ಈ ವಿಚಾರವೇ ಈಗ ಎಲ್ಲೆಡೆ ಹರಿದಾಡುತ್ತಿದೆ. ಇದು ಆದಷ್ಟು ಬೇಗ ಕನ್ಪರ್ಮ್‌ ಆಗಿ ಹೊರಬರಬೇಕಿದೆ. ಈ ಚಿತ್ರ ಶುರುವಾಗೋದು ಯಾವಾಗ ಎಂಬಿತ್ಯಾದಿ ಕುರಿತು ವಿಜಯ್ ಕಿರಗಂದೂರು ಅವರ ಹೊಂಬಾಳೆ ಫಿಲಂಸ್‌ ಮೂಲಕವೇ ಹೊರಬರಬೇಕು. ಈಗ ಶಿವಣ್ಣ ಕೂಡ ಬಿಝಿಯಾಗಿದ್ದಾರೆ. ಸಂತೋಷ್‌ ಆನಂದ್ ರಾಮ್ ಕೂಡ ಬಿಝಿ ಬಿಝಿಯಾಗಿದ್ದಾರೆ.

ಈಗ “ಮತ್ತೆ ರಣರಂಗ” ಸಿನಿಮಾದ್ದೇ ಸುದ್ದಿ. ಅದೇನೆ ಇದ್ದರೂ, ಶಿವರಾಜಕುಮಾರ್‌ ಮತ್ತು ಸಂತೋಷ್‌ ಆನಂದರಾಮ್‌ ಅವರ ಕಾಂಬಿನೇಷನ್‌ನಲ್ಲಿ ಸಿನಿಮಾ ಬರುತ್ತೆ ಅನ್ನೋದೇ ಖುಷಿ ವಿಷಯ. ಅದರಲ್ಲೂ ಹೊಂಬಾಳೆ ಫಿಲಂಸ್‌ ಸಿನಿಮಾ ಅಂದರೆ ಇನ್ನೂ ಸಂತಸ. ಈ ಮೂರು ಕಾಂಬಿನೇಷನ್‌ನ ಸಿನಿಮಾ ಸದ್ಯಕ್ಕೆ ದೊಡ್ಡ ನಿರೀಕ್ಷೆ ಹುಟ್ಟಿಸಿರುವುದಂತೂ ಸುಳ್ಳಲ್ಲ.

error: Content is protected !!