ಕನ್ನಡ ಚಿತ್ರರಂಗಕ್ಕೆ ದಿನ ಕಳೆದಂತೆ ಹೊಸಬರ ಆಗಮನವಾಗುತ್ತಲೇ ಇದೆ. ಆ ಸಾಲಿಗೆ ಈಗ ರಂಗಭೂಮಿಯ ಅಪ್ಪಟ ಪ್ರತಿಭೆಗಳ ಆಗಮನವಾಗಿದೆ. ಹೌದು, ಇಲ್ಲಿ ಇಬ್ಬರನ್ನು ಹೊರತುಪಡಿಸಿ ಬಹುತೇಕ ರಂಗಭೂಮಿ ಪ್ರತಿಭೆಗಳೇ ಎಂಟ್ರಿಯಾಗಿದ್ದಾರೆ. ಅಂದಹಾಗೆ, ಅವರು ಪ್ರೀತಿಯಿಂದಲೇ ಮಾಡಿರುವ ಚಿತ್ರಕ್ಕೆ “ಪ್ರೀತಿಗಿಬ್ಬರು” ಎಂದು ಹೆಸರಿಟ್ಟಿದ್ದಾರೆ.
ಹೌದು, ಪಾಂಡಿಲ್ಯ ಬಿ.ಟಿ. ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಇದು ಇವರಿಗೆ ಚೊಚ್ಚಲ ಪ್ರಯತ್ನ. ವಿಶೇಷ ಅಂದರೆ, ಇವರು ಕೆ.ವಿ.ರಾಜು ಮತ್ತು ಎಂ.ಎಸ್.ರಮೇಶ್ ಅವರಂತಹ ಯಶಸ್ವಿ ನಿರ್ದೇಶಕರೊಂದಿಗೆ ಕೆಲಸ ಮಾಡಿ ಮೊದಲ ಸಲ ನಿರ್ದೇಶನ ಪಟ್ಟ ಅಲಂಕರಿಸುತ್ತಿದ್ದಾರೆ. ಹೆಸರೇ ಹೇಳುವಂತೆ ಇದೊಂದು ಪಕ್ಕಾ ಲವಸ್ಟೋರಿ ಸಿನಿಮಾ ಅಂತ ಪ್ರತ್ಯೇಕವಾಗಿ ಹೇಳುವಂತಿಲ್ಲ ಬಿಡಿ.
ಅಂದಹಾಗೆ ಇದೊಂದು ಪಕ್ಕಾ ಪ್ರೇಮಕಥೆ ಇರುವ ಸಿನಿಮಾ. ರಾಜಕೀಯ ಇರಲಿ, ಕ್ರಿಕೆಟ್ ಇರಲಿ, ಅಲ್ಲಿ ಒಂದಷ್ಟು ಮಂದಿ ಹೇಗೆ ನೆನಪಾಗುತ್ತಾರೋ ಹಾಗೆಯೇ ಪ್ರೀತಿಯ ಸಿನಿಮಾ ಅಂದಾಕ್ಷಣ, ಅಲ್ಲಿ ನಾಯಕ, ನಾಯಕಿಯೂ ನೆನಪಾಗುತ್ತಾರೆ. ಒಂದು ಹಳ್ಳಿಯಲ್ಲಿ ನಡೆಯುವಂತಹ ಪ್ರೇಮಕಥೆ ಇಲ್ಲಿದೆ. ಕಷ್ಟದ ಸನ್ನಿವೇಶದಲ್ಲಿ ಆ ಊರಿನ ಪ್ರೇಮಿಗಳು ಒಂದಾಗುತ್ತಾರೋ ಇಲ್ಲವೋ ಅನ್ನುವುದು ಕಥೆ. ಇಲ್ಲಿ ಜಾತಿ ವ್ಯವಸ್ಥೆಯೂ ಹೈಲೈಟ್. ಆದರೆ, ಅದೇ ಮುಖ್ಯವಲ್ಲ. ಇನ್ನು, ಈ ಚಿತ್ರದಲ್ಲಿ ನಾಯಕಿ ಹೊರತುಪಡಿಸಿ ಉಳಿದ ಕಲಾವಿದರು ರಂಗಭೂಮಿ ಹಿನ್ನಲೆಯಿಂದ ಬಂದವರು. ಇಬ್ಬರು ನಟಿಯರು ಇಲ್ಲಿ ಖಳನಾಯಕಿಯರಾಗಿ ಅಬ್ಬರಿಸಿದ್ದಾರೆ. ನಾಯಕನಾಗಿ ಗೋವಿಂದ ಕಾಣಿಸಿಕೊಂಡಿದ್ದಾರೆ. ನಿರೋಷಶೆಟ್ಟಿ ನಾಯಕಿ.
ಇನ್ನು, ಖಳನಟಿಯರಾಗಿ ಮಂಜುಳಾ ಮತ್ತು ಕಾವ್ಯಪ್ರಕಾಶ್ ನಟಿಸಿದ್ದಾರೆ. ಅಣ್ಣನಾಗಿ ಚಿರಾಗ್, ಇವರೊಂದಿಗೆ ಶೈಲೇಶ್, ಸಂದೀಪ್ ಇತರರು ನಟಿಸಿದ್ದಾರೆ. ಅನುರಾಗ್‌ರೆಡ್ಡಿ ಸಂಗೀತ ನೀಡಿದರೆ, ಎ.ಟಿ.ರವೀಶ ಅವರು ಹಿನ್ನೆಲೆ ಸಂಗೀತ ನೀಡಿದ್ದಾರೆ. ರಮೇಶ್‌ಗೌಡ ಚಿತ್ರದ ಛಾಯಾಗ್ರಹಣ ಮಾಡಿದರೆ, ಅರ್ಜುನ್ ಕಿಟ್ಟು ಸಂಕಲನ ಮಾಡಿದ್ದಾರೆ. ಡಾ.ದೊಡ್ಡರಂಗೇಗೌಡ ಅವರ ಗೀತ ಸಾಹಿತ್ಯವಿದೆ. ಆರ್ಯನ್ ಶ್ರೀನಿವಾಸನ್ ಮತ್ತು ಅಶೋಕ್ ಸಾಹಸವಿದೆ. ಪ್ರವೀಣ್ ನೃತ್ಯ ನಿರ್ದೇಶನ ಮಾಡಿದ್ದಾರೆ.
ಚಾಮರಾಜನಗರ, ಉಡುಪಿ, ಬಳ್ಳಾರಿ, ಬೀದರ್, ನಾಗಮಂಗಲ, ಕೊಳ್ಳೆಗಾಲ, ಮರವಂತೆ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಈಗಾಗಲೇ ಚಿತ್ರದ ಟ್ರೇಲರ್ ಬಿಡುಗಡೆ ಮಾಡಲಾಗಿದೆ ಚಿತ್ರಕ್ಕೆ ಯುಎ ಪ್ರಮಾಣ ಪತ್ರ ಕೂಡ ಸಿಕ್ಕಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ವಿತರಕ ರಮೇಶ್ ಮೂಲಕ ಚಿತ್ರವನ್ನು ಫೆಬ್ರವರಿಯಲ್ಲಿ ರಿಲೀಸ್ ಮಾಡಲು ಚಿತ್ರತಂಡ ಸಜ್ಜಾಗಿದೆ.