ಸಾವಿತ್ರಿಯ ಹಾಡಿನ ಸಂಭ್ರಮ! ವಿಜಯರಾಘವೇಂದ್ರ ಅವರ 51ನೇ ಚಿತ್ರವಿದು…

ಯಾವುದೇ ನಟ ಇರಲಿ, ತನ್ನ ಸಿನಿಮಾ ಅರ್ಧ ಸೆಂಚುರಿ ದಾಟುವುದೇ ವಿಶೇಷ. ಅದರಲ್ಲೂ ಅದೊಂದು ಸಂಭ್ರಮವೇ ಸರಿ. ಈಗ ವಿಜಯರಾಘವೇಂದ್ರ ಅವರು ಅರ್ಧ ಸೆಂಚುರಿ ದಾಟಿ, ತಮ್ಮ ಅಭಿನಯದ ಐವತ್ತೊಂದನೇ ಚಿತ್ರ ಮಾಡಿದ್ದಾರೆ. ಅದೇ ಈ ಹೊತ್ತಿನ ವಿಶೇಷ. ಅಂದಹಾಗೆ, “ಸಾವಿತ್ರಿ” ಅವರ 51ನೇ ಸಿನಿಮಾ….

“ಸಾವಿತ್ರಿ” ಇದು ವಿಜಯರಾಘವೇಂದ್ರ ಅಭಿನಯದ ಚಿತ್ರ. ಈ ಚಿತ್ರವನ್ನು ಪ್ರಶಾಂತ್ ಕುಮಾರ್ ಹೀಲಲಿಗೆ ನಿರ್ಮಿಸಿದ್ದಾರೆ. ಇತ್ತೀಚೆಗೆ ಚಿತ್ರದ ಹಾಡುಗಳು ಬಿಡುಗಡೆಯಾಗಿವೆ. ಜೊತೆಗೆ ಟ್ರೇಲರ್‌ ಕೂಡ ಪ್ರದರ್ಶನ ಕಂಡಿದೆ. ಅಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಉಪಾಧ್ಯಕ್ಷ ಉಮೇಶ್ ಬಣಕಾರ್‌ ಹಾಡು ರಿಲೀಸ್‌ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ವಿಜಯರಾಘವೇಂದ್ರ ಅವರಿಗೆ ಈ ಸಿನಿಮಾ ವಿಶೇಷತೆಗಳಲ್ಲೊಂದು. ಆ ಕುರಿತು ಹೇಳುವ ಅವರು, “ನಾನು ಮಾಡುವ ಎಲ್ಲಾ ಕಾರ್ಯದಲ್ಲೂ ಅಪ್ಪು ಅವರಿರುತ್ತಾರೆ. ಒಳ್ಳೆಯ ತಂಡದೊಂದಿಗೆ ಒಳ್ಳೆಯ ಚಿತ್ರ ಮಾಡಿದ ಸಂತೋಷವಿದೆ. ಸದ್ಯದಲ್ಲೇ ಚಿತ್ರ ಬಿಡುಗಡೆ ಆಗಲಿದೆ.‌ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂಬುದು ಅವರ ಮಾತು.

ನಿರ್ದೇಶಕ ಎಸ್ ದಿನೇಶ್ ಮಾತನಾಡಿ, “ಸಾವಿತ್ರಿ” ವಿಭಿನ್ನ ಕಥಾಹಂದರ ಹೊಂದಿರುವ ಚಿತ್ರ. ಇದು ವಿಜಯರಾಘವೇಂದ್ರ ಅವರ ಐವತ್ತೊಂದನೇ ಚಿತ್ರ. ಆದರೆ ಕೆಲಸದಲ್ಲಿ ಅವರಿಗಿರುವ ಶ್ರದ್ಧೆ ಈಗಲೂ ಹೊಸತು. ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿ ಪಡೆದಿರುವ ವಿಜಯ ರಾಘವೇಂದ್ರ ಹಾಗೂ ತಾರಾ ಅವರು ನಮ್ಮ ಚಿತ್ರದಲ್ಲಿ ಅಭಿನಯಿಸಿರುವುದು ನಮ್ಮ ಹೆಮ್ಮೆ. ಪ್ರಕಾಶ್ ಬೆಳವಾಡಿ, ಊರ್ವಶಿ ರಾಯ್, ಮಿಮಿಕ್ರಿ ಗೋಪಿ, ನೈಲಾ ಪ್ರಮೋದ್, ಸಂಜು ಬಸಯ್ಯ, ಸ್ವಾತಿ ಮುಂತಾದವರು ಚಿತ್ರದಲ್ಲಿದ್ದಾರೆ. ಹೃದಯ ಶಿವ ಬರೆದು, ಮೊದಲ ಬಾರಿಗೆ ಸಂಗೀತ ನೀಡಿರುವ ಹಾಡುಗಳು ಸುಮಧುರವಾಗಿದೆ. ಛಾಯಾಗ್ರಾಹಕ ನಾಗಾರ್ಜುನ ಸೇರಿದಂತೆ ಎಲ್ಲಾ ತಂತ್ರಜ್ಞರ ಕೆಲಸ ಅದ್ಭುತವಾಗಿದೆ ಎಂದರು.

ಗೀತ ಸಾಹಿತಿ ಹೃದಯಶಿವ, “ನಾನು ದಿನೇಶ್ ಅವರ ಮೊದಲ ಚಿತ್ರ “ಉಯ್ಯಾಲೆ”ಗೆ ಸಂಭಾಷಣೆ ಬರೆದಿದೆ. ಹಾಡು ಬರೆಯುತ್ತಿದ್ದ ನನಗೆ ಸಂಭಾಷಣೆ ಬರೆಯಲು ಮೊದಲು ಅವಾಕಾಶ ನೀಡಿದ್ದೆ ಇವರು. ಈಗ ” ಸಾವಿತ್ರಿ” ಚಿತ್ರದ ಮೂಲಕ ಸಂಗೀತ ನಿರ್ದೇಶಕನಾಗಿ ಹೊಸ ಪಯಣ ಆರಂಭಿಸಿದ್ದೀನಿ. ಈವರೆಗೂ ಎಂಟನೂರಕ್ಕೂ ಅಧಿಕ ಹಾಡುಗಳನ್ನು ಬರೆದಿದ್ದೇನೆ. ಆದರೆ ಸಂಗೀತ ನೀಡಿರುವುದು ಇದೇ ಮೊದಲು. ನಾಲ್ಕು ಹಾಡುಗಳು ಚೆನ್ನಾಗಿದೆ ಎಂದರು ಹೃದಯಶಿವ.

ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಉತ್ತಮವಾಗೂ ಮೂಡಿಬಂದಿದೆ. ಸರ್ಕಾರ ನೂರರಷ್ಟು ಅನುಮತಿ ನೀಡಿದರೆ, ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುತ್ತೇನೆ. ಇಲ್ಲವಾದಲ್ಲಿ ಓಟಿಟಿ ಮೂಲಕ ಪ್ರದರ್ಶಿಸುತ್ತೇವೆ ಎಂದರು ನಿರ್ಮಾಪಕ ಪ್ರಶಾಂತ್ ಕುಮಾರ್.

ಚಿತ್ರದ ನಟಿಸಿರುವ ಊರ್ವಶಿ ರಾಯ್, ನೈಲಾ ಪ್ರಮೋದ್ ತಮ್ಮ ಪಾತ್ರದ ಬಗ್ಗೆ ಮಾತನಾಡಿದರು. ಹಲವಾರು ಗಣ್ಯರು ಚಿತ್ರತಂಡಕ್ಕೆ ಶುಭ ಕೋರಿದರು

Related Posts

error: Content is protected !!