ಎರಡು ದಶಕದ ಯಶಸ್ವಿ ಪ್ರೇಮ ಯಾನ… ಸೋಲು-ಗೆಲುವಲ್ಲೂ ಬೆಳ್ಳಿತೆರೆ ಬೆಳಗಿಸಿದ ಪ್ರೇಮಾಭಿಮಾನ; ಲವ್ಲಿ ಪಯಣ…



ಕನ್ನಡ ಚಿತ್ರರಂಗದಲ್ಲಿ ಸ್ಪುರದ್ರೂಪಿ ನಟ ಅಂದಾಕ್ಷಣ ಥಟ್ಟನೆ ನೆನಪಾಗೋದೇ ನೆನಪಿರಲಿ ಪ್ರೇಮ್.‌ ಹೌದು, ಹುಡುಗರಿಗಿಂತ ಹುಡುಗಿಯರೇ ತುಸು ಹೆಚ್ಚಾಗಿ ಇಷ್ಟಪಡುತ್ತಾರೆ. ಕನ್ನಡ ಚಿತ್ರರಂಗದಲ್ಲಿ ಪ್ರೇಮಕಾವ್ಯ ಬರೆಯುವ ಮೂಲಕ ಫ್ಯಾಮಿಲಿ ಆಡಿಯನ್ಸ್‌ಗೆ ಹತ್ತಿರವಾದವರು. ಫ್ಯಾನ್ಸ್‌ಗೆ ಪ್ರಾಣ ಆಗುವ ಮೂಲಕ ನೆನಪಿರಲಿ ಈ ಪ್ರೇಮ್‌ ಅನ್ನುತ್ತಲೇ ಎಲ್ಲರೊಂದಿಗೂ ಜೊತೆ ಜೊತೆಯಲ್ಲೇ ಅಭಿಮಾನಿಗಳ ಪ್ರೀತಿಯ ಅಭಿಮಾನದ ಪಲ್ಲಕ್ಕಿ ಹೊತ್ತು ಬಂದ ಗುಣವಂತ ಸದಾ ಸದಭಿರುಚಿಯ ಸಿನಮಾ ಕೊಡಬೇಕೆಂಬ ಹೊಂಗನಸು ಕಂಡವರು. ಚಿತ್ರರಂಗದಲ್ಲಿ ಸಾಕಷ್ಟು ಸವಿ ಸವಿ ನೆನಪುಗಳನ್ನು ಉಣಬಡಿಸುತ್ತಲೇ ಬಂದಿರುವ ಪ್ರೇಮ್‌, ಬೆಳ್ಳಿಪರದೆಗೆ ಎಂಟ್ರಿಯಾಗಿ ಬರೋಬ್ಬರಿ ಎರಡು ದಶಕಗಳೇ ಕಳೆದಿವೆ

ಹೌದು, ಪ್ರೇಮ್‌ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು ಇಪ್ಪತ್ತು ವರ್ಷಗಳು ಪೂರೈಸಿವೆ. ಈ ಚಂದದ ಹೀರೋ ಚಂದನವನದಲ್ಲಿ ಇಷ್ಟು ವರ್ಷ ಕಳೆಯುವುದೆಂದರೆ ಸುಲಭದ ಮಾತಲ್ಲ. ಎಲ್ಲಾ ನಟರಂತೆ ಪ್ರೇಮ್‌ ಕೂಡ ಆರಂಭದಲ್ಲಿ ಸಾಕಷ್ಟು ಕಷ್ಟ ಕಂಡವರು. ಆರಂಭದಲ್ಲಿ ಅವಕಾಶಕ್ಕಾಗಿ ಅಲೆದಾಡಿದ್ದೂ ಉಂಟು. ಮೊದಲ ಎಸೆತದಲ್ಲೇ ಬಾಲನ್ನು ಬೌಂಡರಿ ದಾಟಿಸಿದಂತೆ ಪ್ರೇಮ್‌, ಮೊದಲ ಸಿನಿಮಾ ಮೂಲಕವೇ ಎಲ್ಲರಿಗೂ ಇಷ್ಟವಾದರು. ಆಮೇಲೆ ನೆನಪಿರಲಿ ಮೂಲಕ ಅಚ್ಚಳಿಯದೇ ಉಳಿದ ಹೀರೋ ಎನಿಸಿಕೊಂಡರು. ಅಲ್ಲಿಂದ ದೊಡ್ಡ ಯಶಸ್ಸು ಪಡೆದ ಪ್ರೇಮ್‌ ಸಾಕಷ್ಟು ಯಶಸ್ಸು ಸಿನಿಮಾಗಳನ್ನು ಕೊಡುತ್ತಲೇ ಬಂದರು. ಪ್ರೇಮ್‌ ಸುಲಭವಾಗಿ ಸಕ್ಸಸ್‌ ಕಂಡವರಲ್ಲ. ಸಾಕಷ್ಟು ಶ್ರಮದಿಂದಲೇ, ಒಳ್ಳೆಯ ನಟನೆ ಮತ್ತು ಸ್ಕ್ರಿಪ್ಟ್‌ ಆಯ್ಕೆಯಿಂದಲೇ ಪ್ರೇಮ್‌ ತಮ್ಮ ಸಕ್ಸಸ್‌ ಕಂಡುಕೊಂಡವರು. ಹಾಗಂತ, ಯಶಸ್ಸಿನ ಮೆಟ್ಟಿಲ ಮೇಲೆಯೇ ಪ್ರೇಮ್‌ ನಡೆದು ಬಂದವರಲ್ಲ. ಅವರಿಗೂ ಅಡೆತಡೆಗಳಾಗಿದ್ದುಂಟು. ಒಂದಷ್ಟು ಸಿನಿಮಾಗಳು ಕೈ ಹಿಡಿಯಲಿಲ್ಲ. ಗೆಲುವು ಪಕ್ಕಕ್ಕೆ ಸರಿಯಿತು. ಸೋಲು ಕಣ್ಮುಂದೆಯೇ ಬರತೊಡಗಿತು. ಅಷ್ಟಾದರೂ ಪ್ರೇಮ್‌ ದೃತಿಗೆಡಲಿಲ್ಲ. ಒಂದಷ್ಟು ಸಾಲು ಸಾಲು ಸೋಲು ಕಂಡ ಪ್ರೇಮ್‌ಗೆ ಕಣ್ಣ ಮುಂದೆ ಬಂದಿದ್ದು ಚಾರ್ಮಿನಾರ್.‌

ಈ ಚಾರ್ಮಿನಾರ್ ಸಿನಿಮಾ ಪ್ರೇಮ್‌ ಅವರಿಗೆ ಮತ್ತೊಂದು ಹೊಸ ಬದುಕು ರೂಪಿಸಿತು ಅಂದರೆ ಸುಳ್ಳಲ್ಲ. ಪ್ರೇಮ್‌ ಅಲ್ಲಿಂದ ಮತ್ತೆ ಹಿಂದಿರುಗಿ ನೋಡಿದವರಲ್ಲ. ಚಾರ್ಮಿನಾರ್‌ ಪ್ರೇಮ್‌ ಮಟ್ಟಿಗೆ ದೊಡ್ಡ ಸಕ್ಸಸ್‌ ಕೊಟ್ಟ ಸಿನಿಮಾ. ಒಂದೊಳ್ಳೆಯ ಬ್ಯೂಟಿಫುಲ್‌ ಲವ್‌ಸ್ಟೋರಿ ಮೂಲಕ ಪ್ರೇಮ ಪುನಃ ತನ್ನ ಫ್ಯಾನ್ಸ್‌ ಮೊಗದಲ್ಲಿ ಮಂದಹಾಸ ಬೀರುವಂತೆ ಮಾಡಿದರು. ಈ ಚಿತ್ರದ ನಟನೆಗೆ ಅವರಿಗೆ ಫಿಲ್ಮ್‌ ಫೇರ್‌ ಅವಾರ್ಡ್‌ ಕೂಡ ಬಂತು. ಅದಾದ ಮೇಲೆ ಒಂದಷ್ಟು ಸಾಲು ಸಾಲು ಸಿನಿಮಾಗಳು ಹುಡುಕಿ ಬಂದರೂ, ಪ್ರೇಮ್‌ಗೆ ಹೇಳಿಕೊಳ್ಳುವಂತಹ ಗೆಲುವು ಸಿಗಲಿಲ್ಲ. ಈ ನಡುವೆ ಪ್ರೇಮ್‌ ಒಂದೇ ಪಾತ್ರ, ಕಥೆಗಳಿಗೆ ಸೀಮಿತವಾಗಬಾರದು ಅಂತ ತನ್ನ ಸುಂದರ ಮೈಕಟ್ಟನ್ನು ಹುರಿಗೊಳಿಸಿದರು. ಶತ್ರು ಎಂಬ ಸಿನಿಮಾಗೆ ಅವರು ಬಾಡಿ ಬಿಲ್ಡ್‌ ಮಾಡಿ ಸಿಕ್ಸ್‌ ಪ್ಯಾಕ್‌ ಮಾಡಿಕೊಂಡರು. ತಾನೊಬ್ಬ ಕ್ಲಾಸ್‌ ಹೀರೋ ಅಷ್ಟೇ ಅಲ್ಲ, ಮಾಸ್‌ ಹೀರೋ ಆಗೋಕು ಸೈ ಅಂತ ಆ ಸಿನಿಮಾದಲ್ಲಿ ತೋರಿಸಿಕೊಟ್ಟರು.

ಅಲ್ಲಿ ಪ್ರೇಮ್‌ ಅವರ ಶ್ರಮ ಎದ್ದು ಕಂಡರೂ, ಗೆಲುವು ಮಾತ್ರ ಏಳಲಿಲ್ಲ. ಹಾಗಂತ ಪ್ರೇಮ್‌ ಸುಮ್ಮನೆ ಕೂರಲೇ ಇಲ್ಲ. ಮತ್ತೆ ಒಂದಷ್ಟು ಹೊಸ ಬಗೆಯ ಕಥೆಗಳತ್ತ ಮುಖ ಮಾಡಿದರು. ಮೆಲ್ಲನೆ ಬಿಝಿಯಾಗತೊಡಗಿದರು. ನಂತರ ಚೌಕ ಚಿತ್ರ ಅವರಿಗೊಂದು ಹೊಸ ಚೌಕಟ್ಟು ಹಾಕಿ ಕೊಟ್ಟಿದ್ದು ಸುಳ್ಳಲ್ಲ. ಅಲ್ಲಿಂದ ಪ್ರೇಮ್‌ ಮೈಲೇಜ್‌ ಮತ್ತೆ ಜೋರಾಯಿತು. ಪ್ರೇಮ್‌ ಕೂಡ ಅದೇ ಮುಗುಳ್ನಗೆಯಲ್ಲಿ ಸಿನಿಮಾಗಳನ್ನು ಕೊಡುತ್ತಲೇ ಬಂದರು. ಅಷ್ಟೊತ್ತಿಗಾಗಲೇ ಪ್ರೇಮ್‌ ಇಪ್ಪತ್ತಕ್ಕೂ ಹೆಚ್ಚು ಸಿನಿಮಾಗಳನ್ನು ಕೊಟ್ಟಿದ್ದರು. ತಮ್ಮ ವೃತ್ತಿ ಜೀವನದಲ್ಲಿ ಇಪ್ಪತ್ತೈದನೇ ಸಿನಿಮಾ ಮಾಡುವ ಹಂತಕ್ಕೆ ಬಂದ ಪ್ರೇಮ್‌ಗೆ ಅದೊಂದು ಮೈಲಿಗಲ್ಲು ಸಿನಿಮಾ ಆಗಬೇಕು ಅಂದುಕೊಂಡರು. ಹಾಗಾಗಿಯೇ ನೂರಾರು ಕಥೆಗಳನ್ನು ಕೇಳಿದ್ದುಂಟು. ಕೊನೆಗೆ ಅವರ ತೆಕ್ಕೆಗೆ ಬಿದ್ದಿದ್ದು, ಪ್ರೇಮಂ ಪೂಜ್ಯಂ. ಈ ಚಿತ್ರ ಆರಂಭದಿಂದಲೇ ನಿರೀಕ್ಷೆ ಹುಟ್ಟಿಸಿದ್ದು ಸುಳ್ಳಲ್ಲ. ಪ್ರೇಮ್‌ ಆಯ್ಕೆ ಮಾಡಿಕೊಂಡ ಕಥೆ ಮತ್ತು ಪಾತ್ರ ನಿಜಕ್ಕೂ ವಿಶೇಷವಾಗಿತ್ತು. ಈ ಚಿತ್ರದ ಒಂದೊಂದು ಗೀತೆ, ಪೋಸ್ಟರ್‌ ಎಲ್ಲವೂ ಕುತೂಹಲ ಮೂಡಿಸುತ್ತಲೇ ಬಂದಿತ್ತು. ಅದಕ್ಕೆ ಕಾರಣ, ಪ್ರೇಮ್‌ ಅವರ ಇಪ್ಪತ್ತೈದನೇ ಸಿನಿಮಾ ಅನ್ನೋದು.

ಪ್ರೇಮ್‌ ಎಂದಿಗಿಂತಲೂ ಈ ಚಿತ್ರದ ಮೇಲೆ ತುಂಬಾನೇ ಆಸಕ್ತಿ ವಹಿಸಿದರು. ತನ್ನ ವೃತ್ತಿ ಜೀವನದ ಇಪ್ಪತ್ತೈದನೇ ಸಿನಿಮಾ ಆಗಿರುವುದರಿಂದ ಇದೊಂದು ಗೆಲುವಿನ ಸಿನಿಮಾ ಆಗಿ ಉಳಿಯಬೇಕು ಅನ್ನೋದು ಅವರ ಆಸೆ ಆಗಿತ್ತು. ಅವರ ಫ್ಯಾನ್ಸ್‌ ಆಶಯ ಕೂಡ ಹಾಗೆಯೇ ಇತ್ತು. ಅದರಂತೆಯೇ ಪ್ರೇಮಂ ಪೂಜ್ಯಂ ಸಿನಿಮಾ ರಿಲೀಸ್‌ ಆಯ್ತು. ಜನ ಕೈ ಹಿಡಿದರು. ಅವರಿಗೆ ಅದೇ ಪ್ರೀತಿಯಿಂದ ಪ್ರೇಮ್‌ ಕೈ ಜೋಡಿಸಿದರು. ತಮ್ಮ ಇಪ್ಪತ್ತು ವರ್ಷಗಳ ಈ ಸಿನಿಮಾ ಪಯಣದಲ್ಲಿ ಪ್ರೇಮ್‌ ಸೋಲು-ಗೆಲುವು ಎರಡನ್ನೂ ಸಮಾನವಾಗಿಯೇ ಕಂಡುಕೊಂಡಿದ್ದಾರೆ.

ಗೆದ್ದಾಗ ಬೀಗಲಿಲ್ಲ. ಸೋತಾಗ ಬೀಳಲಿಲ್ಲ. ಎರಡನ್ನೂ ಬ್ಯಾಲೆನ್ಸ್‌ ಮಾಡಿಕೊಂಡು ಬಂದ ಪ್ರೇಮ್‌ ಅಪ್ಪಟ ಸಿನಿಮಾ ಪ್ರೇಮಿ. ಸದಾ ಸಿನಿಮಾ ಧ್ಯಾನಿಸುವ ಪ್ರೇಮ್‌ಗೆ ಸುಂದರ ಫ್ಯಾಮಿಲಿ ಇದೆ. ಪತ್ನಿ, ಮಗಳು ಮತ್ತು ಮಗ ಅವರ ಪ್ರಪಂಚ. ಆ ಪ್ರಪಂಚದ ಸುತ್ತವೇ ಸುತ್ತುವ ಪ್ರೇಮ್‌, ತನ್ನ ಅಭಿಮಾನಿಗಳಿಗೂ ಅಷ್ಟೇ ಪ್ರೀತಿ ಕೊಟ್ಟವರು. ಇಷ್ಟು ವರ್ಷಗಳ ಸಿನಿಪಯಣದಲ್ಲಿ ನೋವು-ನಲಿವು ಕಂಡ ಪ್ರೇಮ್‌, ಇನ್ನೂ ಸಾಧಿಸುವ ಹಂಬಲದಲ್ಲಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಸದಭಿರುಚಿಯ ಸಿನಿಮಾಗಳನ್ನು ನೀಡುವ ಉತ್ಸಾಹದಲ್ಲಿದ್ದಾರೆ. ಆ ಉತ್ಸಾಹದಲ್ಲೇ ಅವರು ಸದಾ ಸಿನಿಚಟುವಟಿಕೆಯಲ್ಲಿ ತೊಡಗುತ್ತಾರೆ.

ಇನ್ನು ಪ್ರೇಮ್‌ ಸಿನಿಮಾ ಪ್ರೀತಿಸುವಷ್ಟೇ ಕುಟುಂಬ ಹಾಗು ಗೆಳೆತನವನ್ನೂ ಪ್ರೀತಿಸುತ್ತಾರೆ. ಅವರಿಗೆ ಒಂದೊಳ್ಳೆಯ ಗೆಳೆಯರ ಬಳಗವೂ ಇದೆ. ಸಿನಿಮಾರಂಗದ ಗೆಳೆಯರೂ ಇದ್ದಾರೆ. ಅದರಾಚೆಯೂ ಒಂದಷ್ಟು ಗೆಳೆಯರ ಬಳಗವಿದೆ. ಮೊದಲಿನಿಂದಲೂ ಸ್ನೇಹ ಸಂಪಾದಿಸಿಕೊಂಡು ಬಂದಿರುವ ಪ್ರೇಮ್‌ಗೆ ಗೆಳೆಯರ ಆಸ್ತಿ ದೊಡ್ಡದೇ ಇದೆ. ಅದೇ ನನ್ನ ಮೌಲ್ಯ ಹೆಚ್ಚಿಸಿದೆ ಎನ್ನುವ ಪ್ರೇಮ್‌, ಈ ಇಪ್ಪತ್ತು ವರ್ಷಗಳ ಸಿನಿಮಾ ಜರ್ನಿ ಸುಲಭವಾದುದಲ್ಲ. ಈ ಜರ್ನಿಗೆ ಹಲವು ಗೆಳೆಯರ ಸಹಕಾರ, ಪ್ರೋತ್ಸಾಹವೂ ಇದೆ.

ಎಲ್ಲಕ್ಕಿಂತಲೂ ಹೆಚ್ಚಾಗಿ ಸಿನಿಮಾರಂಗದ ಬಳಗವಿದೆ. ಈ ಇಪ್ಪತ್ತು ವರ್ಷದ ನನ್ನ ಸಿನಿಮಾ ವೃತ್ತಿ ಜೀವನದಲ್ಲಿ ಜೊತೆಯಾಗಿ ನಿಂತು ನನ್ನನ್ನು ಸಲುಹಿ ಬೆಳೆಸಿದ ಚಿತ್ರರಂಗದ ಕುಟುಂಬಕ್ಕೆ, ಅಭಿಮಾನಿಗಳಿಗೆ, ,ಮಾಧ್ಯಮಕ್ಕೆ, ಸ್ನೇಹಿತರಿಗೆ ಹಾಗು ನನ್ನ ಕುಟುಂಬಕ್ಕೆ ಮತ್ತು ಕನ್ನಡ ಕಲಾಭಿಮಾನಿಗಳಿಗೆ ನನ್ನ ಹೃತ್ಪೂರ್ವಕ ವಂದನೆಗಳು… ನಿಮ್ಮ ಪ್ರೀತಿ, ಅಭಿಮಾನ, ಆಶೀರ್ವಾದ ಸದಾ ಹೀಗೆ ಇರಲಿ.. ಎಂಬುದು ನೆನಪಿರಲಿ ಮಾತು….

Related Posts

error: Content is protected !!