Categories
ಸಿನಿ ಸುದ್ದಿ

ಇದು ಹೇಮಂತ್‌ ಜೋಯ್ಸ್‌ ಖುಷಿಯ ಹಾಡು! ಕನ್ನಡದ ವಿಭಿನ್ನ ಆಲ್ಬಂ ಸಾಂಗ್‌…

ಸಂಗೀತಕ್ಕೆ ಗಡಿ-ಭಾಷೆ ಯಾವುದು ಇರೋದಿಲ್ಲ. ಸಂಗೀತ ಮನತಣಿಸಿ‌ ಕುಣಿಸಿದ್ರೆ ಸಾಕು. ಭಾರತೀಯ ಚಿತ್ರರಂಗದಲ್ಲಿ ಸ್ವತಂತ್ರ ಸಂಗೀತಗಾರರಿಗೇನು ಲೆಕ್ಕವಿಲ್ಲ. ಹಾಗೇಯೇ ನಮ್ ಕನ್ನಡದಲ್ಲೂ ಅದ್ಭುತ ಸಂಗೀತಗಾರರಿಗೇನು ಕಮ್ಮಿಇಲ್ಲ. ಆದರೆ ಎಲ್ಲರೊಳಗೇ ನಾವು ಒಬ್ಬರಾದರೆ ಜನ ನಮ್ಮನ್ನು ನೋಡಲ್ಲ‌. ಆ ಎಲ್ಲರಲ್ಲಿ ನಾವು ವಿಭಿನ್ನ ಎನಿಸಿಕೊಂಡಾಗಲೇ ಜನ ಇಷ್ಟಪಟ್ಟು ಬೆನ್ನು ತಟ್ಟೋದು. ಈಗ ಇಷ್ಟೊಂದು ಪೀಠಿಕೆಗೆ ಕಾರಣ ಸಂಗೀತ ನಿರ್ದೇಶಕ ಹೇಮಂತ್ ಜೋಯ್ಸ್. ಅವರೀಗ ಖುಷಿ-2 ಎಂಬ ಆಲ್ಬಂ ಸಾಂಗ್‌ ರಿಲೀಸ್‌ ಮಾಡಿದ್ದಾರೆ. ಅದು ಹೇಮಂತ್ ಜೋಯ್ಸ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿ ಮೆಚ್ಚುಗೆಗೆ ಪಾತ್ರವಾಗಿದೆ.

ಈ ಹಿಂದೆ ಬಿಡುಗಡೆಯಾಗಿರುವ ಖುಷಿ ಹಾಡಿನ ಸೀಕ್ವೆಲ್ ಆಗಿರುವ ಖುಷಿ 2 ಹಾಡು ಸಮ್ ಥಿಂಗ್ ಸ್ಪೆಷಲ್. ಅಜ್ಜಿ ಹಾಗೂ ಮೊಮ್ಮಗನ ಬಾಂಧವ್ಯದ ಮಹತ್ವ ಸಾರುವ ಈ ಹಾಡು EDM ಸಾಂಗ್, ಅಂದ್ರೆ ಎಲೆಕ್ಟ್ರಾನಿಕ್ ಡ್ಯಾನ್ಸ್ ಮ್ಯೂಸಿಕ್ ಹಾಡು. ಸಾಹಿತ್ಯಕ್ಕಿಂತ ಹೆಚ್ಚಾಗಿ ಮ್ಯೂಸಿಕ್ ಹೆಚ್ಚಿರುತ್ತೆ. ಸಾಮನ್ಯವಾಗಿ ನಾವು ಕೇಳುವ ನೋಡುವ ವಿದೇಶಿ ಹಾಡುಗಳು ಇದೇ ರೀತಿ ಇರುತ್ತವೆ. ನಾನು ಯಾಕೆ EDM ಒಮ್ಮೆ ಟ್ರೈ ಮಾಡಬಾರದು ಅಂತಾ ಯೋಚಿಸಿ ಹೇಮಂತ್ ಖುಷಿ 2 ಹಾಡು ಮಾಡಿ ರಿಲೀಸ್ ಮಾಡಿದ್ದಾರೆ. ಈ ಹಾಡು ಎಲ್ಲರಿಗೂ ಇಷ್ಟವಾಗುತ್ತಿದೆ. ಅಂದಹಾಗೇ ಕನ್ನಡದಲ್ಲಿ ಈ ರೀತಿ ಹಾಡು ಮೊದಲು ಅಂದರೂ ತಪ್ಪಿಲ್ಲ ಬಿಡಿ.

ರಕ್ಷಿತ್ ತೀರ್ಥಹಳ್ಳಿ ಖುಷಿ2 ಹಾಡನ್ನು ನಿರ್ದೇಶನ ಮಾಡಿದ್ದು, ಕನ್ನಡದಲ್ಲಿ ಈ ಹಾಡಿಗೆ ಪ್ರಮೋದ್ ಮರವಂತೆ ಸಾಹಿತ್ಯ ಬರೆದರೆ, ಇಂಗ್ಲೀಷ್ ನಲ್ಲಿ ಚಿನ್ಮಯ್ ಬರೆದಿದ್ದಾರೆ.

ಚೇತನ್ ನಾಯ್ಕ್ ಈ ಹಾಡಿಗೆ ಧ್ವನಿಯಾಗಿದ್ದು, ಹೇಮಂತ್ ಜೋಯ್ಸ್ ಮ್ಯೂಸಿಕ್ ನೀಡುವುದರ ಜೊತೆಗೆ ಈ ಹಾಡಿನ ನಿರ್ಮಾಣ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಹೇಮಂತ್ ಜೋಯ್ಸ್ ಜೊತೆಗೆ ಗುಬ್ಬಿ ವೀರಣ್ಣನ ಮರಿ ಮೊಮ್ಮಗಳು ಸುಂದರಶ್ರೀ ಕೂಡ ನಟಿಸಿದ್ದಾರೆ.

Categories
ಸಿನಿ ಸುದ್ದಿ

ರವಿಚಂದ್ರನ್‌ ಈಗ ರಾಮಸ್ವಾಮಿ! ಚಿ.ಗುರುದತ್‌ ನಿರ್ದೇಶನದಲ್ಲಿ ಕ್ರೇಜಿ…

ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಉತ್ತಮ ಚಿತ್ರಗಳನ್ನು ನೀಡಿರುವ ಎನ್. ಎಸ್. ರಾಜಕುಮಾರ್ ತಮ್ಮ ಓಂಕಾರ್ ಫಿಲಂಸ್ ಮೂಲಕ “ರಮ್ಯ ರಾಮಸ್ವಾಮಿ” ಎಂಬ ಚಿತ್ರವನ್ನು ನಿರ್ಮಾಣ ಮಾಡಲಿದ್ದಾರೆ. ಇತ್ತೀಚೆಗೆ ರವಿಚಂದ್ರನ್‌ ಅವರಿಗೆ “ಕನ್ನಡಿಗ” ಸಿನಿಮಾ ನಿರ್ಮಿಸಿದ್ದ ರಾಜಕುಮಾರ್‌, ಇದೀಗ ಮತ್ತೊಂದು ಸಿನಿಮಾ ನಿರ್ಮಿಸುತ್ತಿದ್ದಾರೆ.

ಈ ಚಿತ್ರಕ್ಕೆ ಚಿ.ಗುರುದತ್‌ ಅವರು ನಿರ್ದೇಶನ ಮಾಡುತ್ತಿದ್ದಾರೆ ಅನ್ನೋದು ವಿಶೇಷ. ಇನ್ನು, ಈ ಚಿತ್ರಕ್ಕೆ ಜನಾರ್ದನ ಮಹರ್ಷಿ ಕಥೆ ಬರೆದಿದ್ದಾರೆ. ಇಲ್ಲಿ ನಾಯಕರಾಗಿ ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯಿಸುತ್ತಿದ್ದು, ರಾಮಸ್ವಾಮಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ರಮ್ಯ ಪಾತ್ರದಲ್ಲಿ ಯಾರು ನಟಿಸುತ್ತಿದಾರೆಂಬ ಕುತೂಹಲವಿದೆ. ಆ ಪಾತ್ರದಲ್ಲಿ ಖ್ಯಾತ ನಟಿಯೊಬ್ಬರು ನಟಿಸಲಿದ್ದು, ಯಾರು ನಟಿಸುತ್ತಾರೆಂಬುದನ್ನು ಸದ್ಯದಲ್ಲೇ ನಿರ್ಮಾಪಕರು ಹೇಳಲಿದ್ದಾರೆ.

ಜಿ.ಎಸ್.ವಿ ಸೀತಾರಾಂ ಛಾಯಾಗ್ರಹಣವಿದೆ. ಕೆ.ಜಿ.ಎಫ್ ಖ್ಯಾತಿಯ ರವಿ ಬಸ್ರೂರು ಅವರ ಸಂಗೀತ ನಿರ್ದೇಶನ ಚಿತ್ರಕ್ಕಿರಲಿದೆ. ಚಿತ್ರದ ಕುರಿತು ಹೆಚ್ಚಿನ ಮಾಹಿತಿ ಇಷ್ಟರಲ್ಲೇ ಕೊಡಲಿದ್ದಾರೆ ನಿರ್ದೇಶಕರು.

Categories
ಸಿನಿ ಸುದ್ದಿ

ಗಿಲ್ಕಿ ಟ್ರೇಲರ್‌ ಸೌಂಡ್‌ ಹೇಗಿದೆ ಗೊತ್ತಾ? ಕಂಟೆಂಟ್‌ ಸಿನ್ಮಾ ಅನ್ನೋದು ಹೀಗಿರುತ್ತೆ ಗುರು…

ಕನ್ನಡದಲ್ಲಿ ಈಗಾಗಲೇ ಹಲವು ಪ್ರಯೋಗಾತ್ಮಕ ಸಿನಿಮಾಗಳು ಬಂದಿವೆ. ಆ ಸಾಲಿಗೆ “ಗಿಲ್ಕಿ” ಕೂಡ ಸೇರಿದೆ. ಗಿಲ್ಕಿ ಅನ್ನೋದು ಚಿತ್ರದ ಹೀರೋ ಹೆಸರು. ಈ ಚಿತ್ರದ ಕಥೆ ವಿಭಿನ್ನವಾಗಿದೆ. ಸಮಾಜದಿಂದ ವಿಮುಖರಾದ ಮೂರು ಪಾತ್ರಗಳ ಮೂಲಕ ಕಥೆ ಸಾಗುತ್ತದೆ. ಗಿಲ್ಕಿ, ನ್ಯಾನ್ಸಿ ಮತ್ತು ಶೇಕ್ಸ್‌ ಪಿಯರ್‌ ಪಾತ್ರಗಳು ಇಲ್ಲಿ ಹೈಲೈಟ್…

“ಗಿಲ್ಕಿ” ಚಿತ್ರ ಕೂಡ ವಿಭಿನ್ನ ಕಥಾವಸ್ತು ಹೊಂದಿರುವ ಚಿತ್ರ. ಇತ್ತೀಚೆಗೆ ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ನಿರ್ದೇಶಕ ಜಯತೀರ್ಥ, ಸತ್ಯಪ್ರಕಾಶ್ ಹಾಗೂ ನಿರ್ಮಾಪಕ ಮಂಜುನಾಥ್ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.‌ ಇನ್ನು, ನಿರ್ದೇಶಕ ವೈ.ಕೆ ತಮ್ಮ ಸಿನಿಮಾ ಕುರಿತು ಹೇಳಿದ್ದಿಷ್ಟು.

ನಮ್ಮ ಚಿತ್ರ ಮಾಮೂಲಿ ತರಹ ಇರುವುದಿಲ್ಲ. ಹೆಚ್ಚು ಬಜೆಟ್ ಹಾಕಿ ಸಿನಿಮಾ ನಿರ್ಮಾಣ ಮಾಡಿದವರೂ ಕೂಡ ಪ್ರೇಕ್ಷಕನಿಗೆ ಹೊಸ ಪ್ರಪಂಚ ಕಟ್ಟಿಕೊಡುವ ಕೆಲಸ ಮಾಡುತ್ತಾರೆ. ಆದರೆ, ನಾವು ಸೀಮಿತ ಬಜೆಟ್ ನಲ್ಲೇ ಅಂತಹ ಪ್ರಯೋಗಕ್ಕೆ ಮುಂದಾಗಿದ್ದೇವೆ.
ಸಮಾಜದಿಂದ ವಿಮುಖರಾದ ಮೂರು ಪಾತ್ರಗಳ ಮೂಲಕ ನಮ್ಮ ಚಿತ್ರಕಥೆ ಸಾಗುತ್ತದೆ. ಅದು ಗಿಲ್ಕಿ , ನ್ಯಾನ್ಸಿ ಹಾಗೂ ಶೇಕ್ಸ್ ಪಿಯರ್ ಪಾತ್ರಗಳು ಇಲ್ಲಿರಲಿವೆ. ಗಿಲ್ಕಿ ನಾಯಕನ ಪಾತ್ರದ ಹೆಸರು. ಈತ ನೋಡಲು ಮಾಮೂಲಿ ತರಹ ಕಾಣುತ್ತಾನೆ. ಆದರೆ ಮಾತನಾಡಲು ಶುರು ಮಾಡಿದರೆ ಆತನ ಸ್ವಭಾವ ತಿಳಿಯುತ್ತದೆ. ನಾನ್ಸಿ ನಾಯಕಿಯ ಪಾತ್ರ. ಈಕೆ ಚಿಕ್ಕ ವಯಸ್ಸಿನಲ್ಲೇ ದೊಡ್ಡ ಖಾಯಿಲೆಗೆ ತುತ್ತಾಗಿ ತನ್ನ ಕೈ – ಕಾಲುಗಳ ಸ್ವಾಧೀನ ಕಳೆದುಕೊಂಡಿರುತ್ತಾಳೆ. ಇವರಿಬ್ಬರ ನಡುವೆ ಪ್ರೀತಿ ಶುರುವಾಗುತ್ತದೆ. ನಂತರ ಏನಾಗುತ್ತದೆ ಎಂಬುದನ್ನು ಸಿನಿಮಾದಲ್ಲೇ ನೋಡಬೇಕು. ಫೆ.18ರಂದು ರಾಜ್ಯಾದ್ಯಂತ ಬಿಡುಗಡೆಯಾಗಿತ್ತಿದೆ. ಸತ್ಯಪ್ರಕಾಶ್ ತಮ್ಮ ವಿತರಣಾ ಸಂಸ್ಥೆ ಮೂಲಕ ಬಿಡುಗಡೆ ಮಾಡುತ್ತಿದ್ದಾರೆ. ನೋಡಿ ಪ್ರೋತ್ಸಾಹಿಸಿ ಎಂದರು ನಿರ್ದೇಶಕ ವೈ.ಕೆ.

ನಿರ್ಮಾಪಕ ನರಸಿಂಹ ಕುಲಕರ್ಣಿ ಹೇಳಿದ್ದು ಹೀಗೆ. “ನಾನು ಮತ್ತು ನಿರ್ದೇಶಕರು “ಅಮೃತ ಅಪಾರ್ಟ್ಮೆಂಟ್” ಚಿತ್ರದಲ್ಲಿ ಒಟ್ಟಾಗಿ ಕೆಲಸ ಮಾಡಿದ್ದೆವು. ನಾನು ಆಗಲೇ ವೈ ಕೆ ಅವರಿಗೆ ಹೇಳಿದ್ದೆ. ನೀವು ಒಳ್ಳೆಯ ಕಥೆ ಸಿದ್ದ ಮಾಡಿ ಸಿನಿಮಾ ಮಾಡೋಣ ಎಂದು. ಅವರು ಹೇಳಿದ ಕಥೆ ಚೆನ್ನಾಗಿತ್ತು. ಸಿನಿಮಾ ಶುರುವಾಯಿತು. ಸಾಕಷ್ಟು ಜನರ ಸಹಕಾರದಿಂದ ಚಿತ್ರ ಬಿಡುಗಡೆ ಹಂತಕ್ಕೆ ಬಂದಿದೆ. ನಿಮ್ಮ ಬೆಂಬಲವಿರಲಿ ಎಂದರು.

ನಾಯಕಿ ಚೈತ್ರ ಅವರಿಗೆ ನಿರ್ದೇಶಕರು ಕಥೆ ಹೇಳಲು ಆಹ್ವಾನಿಸಿದಾಗ ನಾನು ಹೋಗಲು ಹಿಂದೆ ಸರಿದಿದೆ. ನಂತರ ಕಥೆ ಕೇಳಿದೆ. ಅವರು ಕಥೆ ಹೇಳುವಾಗಲೇ ನಾನು ಪಾತ್ರದಲ್ಲಿ ಮುಳಗಿ ಹೋದೆ . ಈ ಪಾತ್ರ ನಾನೇ ಮಾಡಬೇಕೆಂದು ನಿರ್ಧಾರ ಮಾಡಿದೆ. ಈಗ ಚಿತ್ರ ತೆರೆಗೆ ಬರುತ್ತಿದೆ. ಟ್ರೇಲರ್ ಹಾಗೂ ಹಾಡುಗಳನ್ನು ನೋಡಿದವರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ನನಗೂ ಕೂಡ ಈಗಾಗಲೇ ಬೇರೆ ಚಿತ್ರಗಳಲ್ಲಿ ನಟಿಸಲು ಅವಕಾಶ ಬರುತ್ತಿದೆ ಎಂದು ನಾಯಕಿ ಚೈತ್ರ ತಿಳಿಸಿದರು.

ನಾನು ಈ ಹಿಂದೆ ಚಿತ್ರದ ಹಾಡುಗಳನ್ನು ನೋಡಿ ಖುಷಿ ಪಟ್ಟಿದೆ. ಟ್ರೇಲರ್ ಕೂಡ ಚೆನ್ನಾಗಿದೆ. ಹೊಸ ಪ್ರಯೋಗಕ್ಕೆ ಒಳಿತಾಗಲಿ ಎಂದು ಜಯತೀರ್ಥ ಹಾರೈಸಿದರು. ಎಲ್ಲಾ ಪ್ರೇಮಕಥೆ ಆಧಾರಿತ ಸಿನಿಮಾಗಳಲ್ಲಿ ನಾಯಕ ಕಟ್ಟುಮಸ್ತಾಗಿರುತ್ತಾನೆ. ನಾಯಕಿ ಸುಂದರವಾಗಿರುತ್ತಾಳೆ. ಆದರೆ ಅಂಗವಿಕಲೆ ಮತ್ತು ಬುದ್ದಿಮಾಂದ್ಯನ ನಡುವೆ ಪ್ರೀತಿ ಹುಟ್ಟುತ್ತದೆ ಎಂಬ ವಿಷಯ ತೆಗೆದುಕೊಂಡಿರುವ ನಿರ್ದೇಶಕರಿಗೆ ಅಭಿನಂದನೆ ಎಂದರು ಸತ್ಯಪ್ರಕಾಶ್.

ಚಿತ್ರದಲ್ಲಿ ನಟಿಸಿರುವ ಗೌತಮ್ ರಾಜ್, ಸಂಗೀತ ನೀಡಿರುವ ಆದಿಲ್ ನಡಾಫ್ ಹಾಗೂ ಸಂಕಲನಕಾರ ಕೆಂಪರಾಜ್ ತಮ್ಮ ಕಾರ್ಯದ ಬಗ್ಗೆ ಮಾತನಾಡಿದರು.

Categories
ಸಿನಿ ಸುದ್ದಿ

ಸಂಗೀತ ನಿರ್ದೇಶಕ ವಿ.ಮನೋಹರ್‌ ಬರ್ತ್‌ಡೇಗೆ ವಿನಯ ಭೂಷಣ ಸಾಕ್ಷ್ಯ ಚಿತ್ರ ; ಇದು ಗೆಳೆಯರ ಗಿಫ್ಟ್!

ರಾಜ್ಯ ಪ್ರಶಸ್ತಿ ಪುರಸ್ಕೃತ, ಸಂಗೀತ ನಿರ್ದೇಶಕ, ನಿರ್ದೇಶಕ ಹಾಗು ಗೀತ ಸಾಹಿತಿ ವಿ.ಮನೋಹರ್‌ ಅವರ ಹುಟ್ಟುಹಬ್ಬವನ್ನು ಅವರ ಅಭಿಮಾನಿ ಬಳಗ ಮತ್ತು ಗೆಳೆಯರು ಇತ್ತೀಚೆಗೆ ಆಚರಿಸುವ ಮೂಲಕ ಸಂಭ್ರಮಿಸಿದರು. ಇದೇ ವೇಳೆ ಗೆಳೆಯರು “ವಿನಯ ಭೂಷಣ” ಎಂಬ ಸಾಕ್ಷ್ಯ ಚಿತ್ರದ ಪೋಸ್ಟರ್‌ ರಿಲೀಸ್‌ ಮಾಡುವ ಮೂಲಕ ಮನೋಹರ್‌ ಅವರ ಹುಟ್ಟುಹಬ್ಬಕ್ಕೆ ವಿಶೇಷ ಕೊಡುಗೆ ನೀಡಿದರು.

“ವಿನಯ ಭೂಷಣ” ಸಾಕ್ಷ್ಯ ಚಿತ್ರವನ್ನು ಹಿರಿಯ ನಿರ್ದೇಶಕ ಬುಕ್ಕಾಪಟ್ಟಣ ವಾಸು ನಿರ್ದೇಶನ ಮಾಡುತ್ತಿದ್ದಾರೆ. ಪಳನಿ ಡಿ. ಸೇನಾಪತಿ ಸಂಗೀತ ನೀಡುತ್ತಿದ್ದಾರೆ. ಗಂಡಸಿ ಸದಾನಂದ್‌ ಅವರು ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ.

ಇವರೊಂದಿಗೆ ಈ ಸಾಕ್ಷ್ಯ ಚಿತ್ರದ ನಿರ್ಮಾಣಕ್ಕೆ ಸೆಂಚುರಿ ಫಿಲ್ಮ್ ಇನ್ಸ್ಟಿಟ್ಯೂಟ್, ಕ್ರಿಯೇಟಿವ್ ಟೈಮ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಇನ್ಫ್ಯಾಂಟ್ ಸ್ಟುಡಿಯೋ ಸಾಥ್‌ ನೀಡಿದೆ.

ಈ ಸಂದರ್ಭದಲ್ಲಿ ಗೀತ ಸಾಹಿತಿ, ನಿರ್ದೇಶಕ, ಸಂಗೀತ ನಿರ್ದೇಶಕ ನಾಗೇಂದ್ರ ಪ್ರಸಾದ್, ನಿರ್ದೇಶಕ ಬುಕ್ಕಾಪಟ್ಟಣ ವಾಸು, ಮ್ಯೂಸಿಕ್ಸ್ ಬಾಕ್ಸ್ ಸಂಸ್ಥೆ, ಐಎಫ್‌ಎಂಎನ ದಿಲೀಪ್ ಕುಮಾರ್ ಮತ್ತು ಕರ್ನಾಟಕ ಛಾಯಾಚಿತ್ರಗ್ರಾಹಕರ ಅಧ್ಯಕ್ಷ ಪರಮೇಶ ಸುಬ್ಬಯ್ಯ ಸೇರಿದಂತೆ ನೂರಾರು ಗಣ್ಯರು ಮತ್ತು ಅಭಿಮಾನಿಗಳು ಹಾಜರಿದ್ದು, ವಿ.ಮನೋಹರ್‌ ಅವರಿಗೆ ಶುಭಕೋರಿದರು.

Categories
ಸಿನಿ ಸುದ್ದಿ

ಲವ್‌ ಬರ್ಡ್ಸ್ ಮೆಲೋಡಿ; ಪುಟ್ಟನ ಜೊತೆ ಬಾಲು ಲೀಲು ತುಂಟಾಟ! ಫೆ.18ಕ್ಕೆ ಬೈಟು ಲವ್‌ ರಿಲೀಸ್…

ಕೆವಿಎನ್ ಪ್ರೊಡಕ್ಷನ್ ನಡಿ ನಿಶಾ ವೆಂಕಟ್ ಕೊನಂಕಿ ನಿರ್ಮಾಣ ಮಾಡಿರುವ “ಬೈ ಟು ಲವ್” ಸಿನಿಮಾದ ಹೊಸ ಟ್ರಾಕ್ ಆನಂದ್ ಆಡಿಯೋ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದೆ. “ನೀನೇ ನೀನೇ…” ಎಂಬ ಮೆಲೋಡಿ ಟ್ರಾಕ್‌ ನಲ್ಲಿ ಲೀಲು-ಬಾಲು ಮುದ್ದಾದ ಮಗುವಿನೊಟ್ಟಿಗೆ ಆಡುವ ತುಂಟಾಟಗಳನ್ನು ಸುಂದರವಾಗಿ ಸೆರೆ ಹಿಡಿಯಲಾಗಿದೆ. ಈ ಹಿಂದೆ ಹಸೆಮಣೆಯಲ್ಲಿ ಕುಳಿತಿರುವ ಜೋಡಿಗಳ ತೊಡೆಯ ಮೇಲೊಂದು ಮಗು ಇರುವ ವಿಶೇಷ ಪೋಸ್ಟರ್ ಬಿಟ್ಟಿದ್ದ ನಿರ್ದೇಶಕ ಹರಿ ಸಂತು, ಈಗ ಹಾಡಿನಲ್ಲಿ ಮಗುವಿನೊಟ್ಟಿಗೆ ಶ್ರೀಲೀಲಾ ಹಾಗೂ ಧನ್ವೀರ್ ಎಂಜಾಯ್ ಮಾಡ್ತಿರುವ ಕಥೆಯೊಂದನ್ನು ಹೇಳಿ ತಲೆಗೆ ಹುಳ ಬಿಟ್ಟಿದ್ದಾರೆ.

ನಾಗೇಂದ್ರ ಪ್ರಸಾದ್ ಬರೆದ “ನೀನೇ ನೀನೆ” ಎಂಬ ಹಾಡಿಗೆ ಅಜನೀಶ್ ಲೋಕನಾಥ್ ಅಷ್ಟೇ ಇಂಪಾದ ಸಂಗೀತ ನೀಡಿದ್ದು, ಕಾರ್ತಿಕ್ ಈ ಹಾಡಿಗೆ ಧನ್ವಿಯಾಗಿದ್ದಾರೆ. ಇನ್ನು ಧನ್ವೀರ್ ಹಾಗೂ ಶ್ರೀಲೀಲಾ ಜೋಡಿ ಸಖತ್ ಮುದ್ದು‌ಮುದ್ದಾಗಿ ಕಾಣಿಸಿಕೊಂಡಿದ್ದಾರೆ.

ಫೆಬ್ರವರಿ 18ಕ್ಕೆ ಸಿನಿಮಾ ತೆರೆಗೆ!

ಧನ್ವೀರ್ ಹಾಗೂ ಶ್ರೀಲೀಲಾ ಜೋಡಿ‌ಯ ಬೈ ಟು ಲವ್ ಪ್ರೇಮ್ ಕಹಾನಿ ಬಿಡುಗಡೆಗೆ ಕೌಂಟ್ ಡೌನ್ ಶುರುವಾಗಿದೆ. ಇದೇ 18ರಂದು ರಾಜ್ಯಾದ್ಯಂತ ಬೈ ಟು ಲವ್ ತೆರೆಗಪ್ಪಳಿಸಲಿದೆ. ಈಗಾಗಲೇ ಚಿತ್ರತಂಡ ಅದ್ಧೂರಿ ಪ್ರಮೋಷನ್ ಶುರು ಮಾಡಿದೆ. ಈ ಹಿಂದೆ ಮಾಸ್‌ ಲುಕ್‌ನಲ್ಲಿ ಮಿಂಚಿದ್ದ ಧನ್ವೀರ್‌, ಈಗ “ಬೈ ಟು ಲವ್‌’ನಲ್ಲಿ ಲವರ್‌ ಬಾಯ್‌ ಪಾತ್ರದಲ್ಲಿ ನಟಿಸಿದ್ದಾರೆ. ಶ್ರೀಲೀಲಾ ಮಲೆನಾಡ ಹುಡ್ಗಿಯಾಗಿ ಕಾಣಿಸಿಕೊಂಡಿದ್ದಾರೆ.

ಅಲೆಮಾರಿ, ಡವ್, ಕಾಲೇಜ್ ಕುಮಾರ್ ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳಿ ಸಕ್ಸಸ್ ಕಂಡಿರುವ ಹರಿ ಸಂತೋಷ್ ಬೈ ಟು ಲವ್ ಸಿನಿಮಾಗೆ ನಿರ್ದೇಶನ ಮಾಡಿದ್ದು, ಮಹೇನ್ ಸಿಂಹ ಛಾಯಾಗ್ರಹಣ, ಅಜನೀಶ್‌ ಲೋಕನಾಥ್‌ ಸಂಗೀತ ಹಾಗೂ ಯೋಗಾನಂದ್‌ ಸಂಭಾಷಣೆ ಚಿತ್ರಕ್ಕಿದೆ.

Categories
ಸಿನಿ ಸುದ್ದಿ

ದರ್ಶನ್‌ ಹುಟ್ಟುಹಬ್ಬಕ್ಕೆ ಮೆಜೆಸ್ಟಿಕ್‌‌ ಮರು ಬಿಡುಗಡೆ! ಸೂಪರ್‌ ಹಿಟ್‌ ಚಿತ್ರಕ್ಕೆ ಈಗ ಎರಡು ದಶಕ; ಹೊಸ ರೂಪದಲ್ಲಿ ಫ್ಯಾನ್ಸ್‌ ಮುಂದೆ…

ಫೆಬ್ರವರಿ 8, 2002 … ಬಹುಶಃ ಕನ್ನಡ ಚಿತ್ರರಂಗದಲ್ಲಿ ಈ ದಿನವನ್ನು ನೆನಪಿಡಲೆಬೇಕು. ಕಾರಣ, ಈ ದಿನದಂದೇ ಕನ್ನಡಕ್ಕೊಬ್ಬ ಸೂಪರ್‌ ಸ್ಟಾರ್‌ ಹುಟ್ಟುಕೊಂಡಿದ್ದು. ಹೌದು, ಫೆ. 8, 2002 ರಲ್ಲಿ ದರ್ಶನ್‌ ಅಭಿನಯದ ಮೆಜೆಸ್ಟಿಕ್‌ ಸಿನಿಮಾ ರಿಲೀಸ್‌ ಆಗಿತ್ತು. ಈ ಸಿನಿಮಾ ಬಿಡುಗಡೆಯಾಗಿದ್ದೇ ತಡ, ಕನ್ನಡಕ್ಕೊಬ್ಬ ಮಾಸ್‌ ಹೀರೋ ಸಿಕ್ಕಿಬಿಟ್ಟರು ಅನ್ನೋ ಉದ್ಘಾರ ಎಲ್ಲರಿಂದಲೂ ಬಂದಿದ್ದು ಸುಳ್ಳಲ್ಲ. ಪಿ.ಎನ್.‌ ಸತ್ಯ ನಿರ್ದೇಶನದಲ್ಲಿ ದರ್ಶನ್‌ ಮೊದಲ ಸಲ ಹೀರೋ ಆಗಿ ಮಿಂಚಿದ ಸಿನಿಮಾ ಇದು. ಮೊದಲ ಬಾಲ್‌ನಲ್ಲೇ ಸಿಕ್ಸರ್‌ ಬಾರಿಸಿದಂತೆ, ಮೊದಲ ಸಿನಿಮಾವೇ ಸೂಪರ್‌ ಡೂಪರ್‌ ಹಿಟ್‌ ಆಯ್ತು. ದರ್ಶನ್‌ ಅವರ ಈ ಮೆಜೆಸ್ಟಿಕ್‌ ಸಿನಿಮಾ ಇಂದಿಗೆ ಬಿಡುಗಡೆಯಾಗಿ ಬರೋಬ್ಬರಿ ಎರಡು ದಶಕಗಳು ಕಳೆದಿವೆ.


ನಿಜ, ಫೆಬ್ರವರಿ 8, 2002 ರಲ್ಲಿ ಈ ಚಿತ್ರ ಬಿಡುಗಡೆಯಾಗಿ ಇಲ್ಲಿಗೆ ಇಪ್ಪತ್ತು ವರ್ಷಗಳನ್ನು ಪೂರೈಸಿದೆ. ಆ ನೆನಪಿಗೆ ಇದೀಗ ನಿರ್ಮಾಪಕರಾದ ಎಂ.ಜಿ.ರಾಮಮೂರ್ತಿ ಅವರು ಮೆಜೆಸ್ಟಿಕ್‌ ಅನ್ನು ಮತ್ತಷ್ಟು ಕಲರ್‌ಫುಲ್‌ ಆಗಿಡುವ ಪ್ರಯತ್ನ ಮಾಡಿದ್ದಾರೆ. ಫೆ.16ರಂದು ದರ್ಶನ್‌ ಅವರ ಹುಟ್ಟುಹಬ್ಬ. ಆ ನೆನಪಿಗೆ ಮತ್ತು ಮೆಜೆಸ್ಟಿಕ್‌ ಸಿನಿಮಾ ರಿಲೀಸ್‌ ಆಗಿ ಇಪ್ಪತ್ತು ವರ್ಷಗಳನ್ನು ಪೂರೈಸಿರುವ ಸಂಭ್ರಮಕ್ಕೆ ಈ ಚಿತ್ರವನ್ನು ಮರು ಬಿಡುಗಡೆ ಮಾಡಲು ತಯಾರಿ ನಡೆಸಿದ್ದಾರೆ.

ದರ್ಶನ್‌ ಅವರ ಬರ್ತ್‌ಡೇ ನೆನಪಿಗಾಗಿಯೇ ಮೆಜೆಸ್ಟಿಕ್‌ ಸಿನಿಮಾವನ್ನು ಮತ್ತಷ್ಟು ರಂಗಾಗಿಸಲು ಹೊರಟಿದ್ದಾರೆ. ಅಂದರೆ ಇಪ್ಪತ್ತು ವರ್ಷಗಳ ಹಿಂದೆ ಇದ್ದಂತಹ ಮೆಜೆಸ್ಟಿಕ್‌ ಚಿತ್ರಕ್ಕೆ ಈಗಿನ ಜನರೇಷನ್‌ಗೆ ತಕ್ಕಂತೆ ಏನೆಲ್ಲಾ ಮಾಡಬೇಕೋ ಅದನ್ನು ಮಾಡಲು ಹೊರಟಿದ್ದಾರೆ. ಅಂದಹಾಗೆ, ಚಿತ್ರಕ್ಕೆ ಡಿಐ ಗ್ರಾಫಿಕ್ಸ್‌, ಮ್ಯೂಸಿಕ್‌ ಎಫೆಕ್ಟ್‌, ಸೌಂಡ್‌ ಎಫೆಕ್ಟ್ಸ್‌ ಸಿ.ಜಿ ವರ್ಕ್‌ ಸೇರಿದಂತೆ ಇನ್ನಿತರೆ ತಾಂತ್ರಿಕತೆಯನ್ನು ಬಳಸಿ ಮೆಜೆಸ್ಟಿಕ್‌ ಅಂದವನ್ನು ಹೆಚ್ಚಿಸಲಾಗಿದೆ. ಸಾಧುಕೋಕಿಲ ಅವರು ಈ ಚಿತ್ರಕ್ಕೆ ಸಂಗೀತ ನೀಡಿದ್ದರು. ಈಗ ಸಾಧುಕೋಕಿಲ ಅವರ ಸ್ಟುಡಿಯೋದಲ್ಲೇ ಮೆಜೆಸ್ಟಿಕ್‌ ಚಿತ್ರವನ್ನು ಮತ್ತಷ್ಟು ಅಂದಗೊಳಿಸಲಾಗಿದೆ.

ಫೆ.8 ರಂದು ನಿರ್ಮಾಪಕರು ಸಣ್ಣದ್ದೊಂದು ಸೆಲೆಬ್ರೇಷನ್‌ ಕೂಡ ಇಟ್ಟುಕೊಂಡಿದ್ದಾರೆ. ದರ್ಶನ್‌ ಅವರ ನೇತೃತ್ವದಲ್ಲಿ ಆ ಸಂಭ್ರಮ ನಡೆಯಲಿದೆ. ಅದೇನೆ ಇರಲಿ, ಡಿ ಬಾಸ್‌ ಹುಟ್ಟು ಹಬ್ಬಕ್ಕೆ ದಚ್ಚು ಫ್ಯಾನ್ಸ್‌ಗೆ ಮೆಜೆಸ್ಟಿಕ್‌ ಚಿತ್ರವನ್ನು ಕೊಡುಗೆಯಾಗಿ ಕೊಡಲು ನಿರ್ಮಾಪಕರು ಸಜ್ಜಾಗಿದ್ದಾರೆ. ಮೆಜೆಸ್ಟಿಕ್‌ ಈಗ ಎಂದಿಗಿಂತಲೂ ಕಂಗೊಳಿಸಲಿದೆ ಅನ್ನೋದೇ ಈ ಹೊತ್ತಿನ ವಿಶೇಷ.

ಈ ಚಿತ್ರ ಬಿಡುಗಡೆಯಾಗಿ ಇಪ್ಪತ್ತು ವರ್ಷ ಕಳೆದಿದೆ. ಇದೇ ಫೆ. 16 ರಂದು ದರ್ಶನ್ ಅವರ ಹುಟ್ಟುಹಬ್ಬವಿದೆ. ಈ ಸಂದರ್ಭದಲ್ಲಿ ಹೊಸ ತಂತ್ರಜ್ಞಾನದೊಂದಿಗೆ “ಮೆಜೆಸ್ಟಿಕ್” ಚಿತ್ರ ಮರು ಬಿಡುಗಡೆಯಾಗಲಿದೆ
ಎಂದು ನಿರ್ಮಾಪಕ ಎಂ.ಜಿ.ರಾಮಮೂರ್ತಿ ತಿಳಿಸಿದ್ದಾರೆ.

Categories
ಸಿನಿ ಸುದ್ದಿ

ಇದು ಅಂತರಂಗ ಶುದ್ಧಿ ಮಾಡುವ ಚಿತ್ರ! ಇದೇ ನಿರ್ದೇಶಕರ ಬಹಿರಂಗ ಸುದ್ದಿ!!


ಕನ್ನಡದಲ್ಲಿ ಈಗಾಗಲೇ ತರಹೇವಾರಿ ಶೀರ್ಷಿಕೆ ಇರುವ ಸಿನಿಮಾಗಳು ಬಂದಿವೆ. ಆ ಸಾಲಿಗೆ ಈಗ “ಇದೇ ಅಂತರಂಗ ಶುದ್ಧಿ” ಸಿನಿಮಾ ಕೂಡ ಸೇರಿದೆ. ಹೌದು, ಈಗಾಗಲೇ ಈ ಚಿತ್ರ ಸದ್ದಿಲ್ಲದೆಯೇ ಚಿತ್ರೀಕರಣ ಮುಗಿಸಿ, ಇದೀಗ ರಿಲೀಸ್‌ಗೂ ರೆಡಿಯಾಗಿದೆ. ಫೆಬ್ರವರಿ 11ರಂದು ರಾಜ್ಯಾದ್ಯಂತ ಈ ಚಿತ್ರ ರಿಲೀಸ್‌ ಆಗುತ್ತಿದೆ. ಶೀರ್ಷಿಕೆಯೇ ಹೇಳುವಂತೆ ಇದೊಂದು ವಿಭಿನ್ನ ಕಥೆ ಹೊಂದಿರುವ ಸಿನಿಮಾ. ಅಭಿನವ್ ಸ್ಟುಡಿಯೋಸ್ ಬ್ಯಾನರ್‌ನಲ್ಲಿ ಅಭಿಲಾಷ್ ಚಕ್ಲಾ ಹಾಗೂ ನವಾಜಿತ್ ಬಲ್ಲರ್ ನಿರ್ಮಾಣ ಮಾಡಿರುವ “ಇದೇ ಅಂತರಂಗ ಶುದ್ಧಿ” ಚಿತ್ರ ಹೊಸ ಪ್ರಯೋಗಾತ್ಮಕ ಸಿನಿಮಾ ಅನ್ನಬಹುದು. ಇಡೀ ಕಥೆಯಲ್ಲಿ ವಿಶೇಷವಾದಂತಹ ಸಾರಾಂಶವಿದೆ. ಇಂತಹ ಚಿತ್ರಕ್ಕೆ ಕುಮಾರ್‌ ದತ್ ನಿರ್ದೇಶನ ಮಾಡಿದ್ದಾರೆ. ಇದು ಇವರ ಎರಡನೇ ನಿರ್ದೇಶನದ ಚಿತ್ರ.

ಈ ಚಿತ್ರದ ಶೀರ್ಷಿಕೆಯೇ ಹೇಳುವಂತೆ ಇದೊಂದು ಅಂತರಂಗ ಶುದ್ಧಿ ಮಾಡಲು ಹೊರಟ ಸಿನಿಮಾ ಅನ್ನಬಹುದು. ಮನುಷ್ಯನ ಮನಸ್ಸು ಶುದ್ದಿ ಮಾಡುವಂತ ಕೆಲಸ ಅಂತಿಟ್ಟುಕೊಳ್ಳಿ. ಈ ದಿನದ ಜೀವನ ಶೈಲಿ ಹಾಗೂ ಅವಸರದ ಬದುಕಿನ ನಡುವೆ ಪ್ರೀತಿ ಪ್ರೇಮ, ಭಾವನೆಗಳು ಮತ್ತು ಪರಿಸ್ಥಿತಿಗೆ ಕನ್ನಡಿ ಹಿಡಿದಂತೆ ಮಾಡಿರುವ ಸಿನಿಮಾ ಅನ್ನೋದು ನಿರ್ದೇಶಕರ ಮಾತು.

ಎಲ್ಲೋ ಒಂದು ಕಡೆ ಮನುಷ್ಯ ತನ್ನನ್ನು ತಾನು ಕಳೆದುಕೊಂಡು ಸಾಗುತ್ತಿರುವಾಗ, ತಾನೇ ತನ್ನ ಕಣ್ಣೆದುರು ಹಲವು ಸನ್ನಿವೇಶಗಳ ಮೂಲಕ ಅಥವಾ ಕೆಲವು ಬದುಕಿನಲ್ಲಿ ಕಲಿತ ಪಾಠದಂತೆ ಬಂದು ಹೋಗೋ ಘಟನೆಗಳ ಮೂಲಕ ಕಲಿಯುವಂತಹ ಪಾಠ ಈ ಚಿತ್ರದಲ್ಲಿದೆ ಎನ್ನುತ್ತಾರೆ.


ಜೀವನ ಅನ್ನೋದೇ ಒಂದು ಪಯಣ. ಒಬ್ಬೊಬ್ಬರು ಒಂದೊಂದು ರೀತಿ ಕನಸು, ಅನುಭವ, ಆಸೆ, ಗುರಿ, ಕಾಯಕ ಹೊತ್ತು ಸಾಗುತ್ತಾರೆ. ಆ ಜರ್ನಿ ಮಧ್ಯೆ ಅವರು ಯಾರು ಯಾರನ್ನು ಭೇಟಿ ಆಗುತ್ತಾರೆ. ಏನೇನು ಆಗತ್ತೆ. ಏನೆಲ್ಲಾ ನಡೆಯತ್ತೆ ಎಂಬುದು ಕಥಾ ಹಂದರ. ಲವ್ ಪ್ರಾಣ್ ಮೆಹ್ತಾ ಸಂಗೀತ ನೀಡಿದ್ದಾರೆ. ಈಗಾಗಲೇ ಟ್ರೇಲರ್‌ ಮತ್ತು ಸಾಂಗ್‌ ಭರ್ಜರಿ ಸದ್ದು ಮಾಡಿದೆ ಕೂಡ. ವಿನಯ್ ಹೊಸ ಗೌಡರ್ ಛಾಯಾಗ್ರಹಣ ಮಾಡಿದರೆ, ಸುಪ್ರೀತ್ ಅವರ ಸಂಕಲನವಿದೆ. ಚಿತ್ರದಲ್ಲಿ ಆರ್ಯ ವರ್ಧನ್ ನಾಯಕರಾಗಿ ನಟಿಸಿದ್ದಾರೆ. ಉಳಿದಂತೆ ಚಿತ್ರದಲ್ಲಿ ಪ್ರತಿಭಾ, ಶ್ವೇತ, ರೂಪೇಶ್, ಶ್ರೀಧರ್, ಸೂರಜ್, ರಘು, ಪುನೀತ್, ಮಂಜುಳಾ ರೆಡ್ಡಿ‌ ಸೇರಿದಂತೆ ಇತರರು ಇದ್ದಾರೆ.

Categories
ಸಿನಿ ಸುದ್ದಿ

ಐರಾ ಟೀಸರ್ ಬಂತು; ನಿರ್ಮಾಪರ ಬಲದಿಂದ ಹೋಪ್ ಬಂತು!


ಐರಾ… ಇದು ಕನ್ನಡದ ಮತ್ತೊಂದು ಹೊಸ ಚಿತ್ರ. ಐರಾ ಅನ್ನೋದು ಸಂಸ್ಕೃತ ಪದ, ಪ್ರಕೃತಿಯಲ್ಲಿ ಏನಾದರೂ ಒಂದು ಕ್ರಿಯೆ ನಡೆಯುವ ಮುನ್ನ ವಿಚಿತ್ರ ಶಬ್ದವೊಂದು ಕೇಳಿ ಬರುತ್ತದೆ. ಆ ಶಬ್ದವನ್ನೇ ಐರಾ ಅಂತಾರೆ. ಇದು ನಿರ್ದೇಶಕ ರಾಜ್ಉದಯ್ ಟೈಟಲ್ ಕುರಿತು ನೀಡುವ ಮಾಹಿತಿ.
ಇತ್ತೀಚೆಗೆ ಐರಾ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ನಿರ್ಮಾಪಕ ಜಾಕ್ ಮಂಜು, ನಟ ಮೋಹನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು, ಸುರೇಶ್ ಸುಬ್ರಮಣ್ಯ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಶಿವು ಹಾಗೂ ಮೀನಾಕ್ಷಿ ಈ ಚಿತ್ರದಲ್ಲಿ ತಾಯಿ, ಮಗನಾಗಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ಕೌಶಿಕ್ ಹರ್ಷ ಸಂಗೀತ ಸಂಯೋಜನೆ ಮಾಡಿದ್ದಾರೆ. ವಿಘ್ನೇಶ್ ನಾಗೇಂದ್ರ ಕ್ಯಾಮೆರಾ ಕೆಲಸ ಮಾಡಿದ್ದಾರೆ.


ಮಾಸ್ತಿಗುಡಿ ದುರಂತದಲ್ಲಿ ಮಡಿದ ಉದಯ್ ನನ್ನ ಸ್ವಂತ ಭಾಮೈದ, ಉದಯ್‌ಗಾಗೇ ಈ ಕಥೆ ರೆಡಿ ಮಾಡಿಕೊಂಡಿದ್ದೆ. ಐರಾ ನನ್ನ ಕನಸು, ಈ ಕಥೆಯನ್ನು ನೂರಾರು ನಿರ್ಮಾಪಕರ ಬಳಿ ತೆಗೆದುಕೊಂಡು ಹೋಗಿದ್ದೆ. ಕಥೆಯನ್ನು ಇಷ್ಟಪಟ್ಟರೂ, ಹೀರೋ ಹೆಸರು ಕೇಳಿದ ಕೂಡಲೇ ನೋಡೋಣ ಎನ್ನುತ್ತಿದ್ದರು. ಆದರೆ ಸುರೇಶ್ ಸುಬ್ರಮಣ್ಯ ಚಿತ್ರ ಅರ್ಧದಲ್ಲೇ ನಿಲ್ಲುವ ಸ್ಥಿತಿಯಲ್ಲಿದ್ದಾಗ ಮುಂದೆ ಬಂದರು, ಅನಾಥ ಹುಡುಗನೊಬ್ಬನ ಸುತ್ತ ನಡೆವ ಕಥೆಯಿದು, ಆತ ಏಕೆ ಹುಚ್ಚನಾದ, ಅದರ ಹಿನ್ನೆಲೆಯೇನು ಅನ್ನೋದೇ ಈ ಚಿತ್ರದ ಕಥೆ. ವಿಶೇಷವಾಗಿ ಮದರ್ ಸಂಟಿಮೆಟ್ ಸಾಂಗನ್ನು ಜೋಗಿ ಪ್ರೇಮ್ ಅವರು ಹಾಡುತ್ತಿದ್ದಾರೆ.15 ದಿನಗಳ ಕಾಲ ಬನಶಂಕರಿಯ ಸ್ಮಶಾನದಲ್ಲಿ ನಂತರ ಆಂದ್ರಹಳ್ಳಿ ದೇವಸ್ಥಾನವೊಂದರಲ್ಲಿ ಚಿತ್ರೀಕರಣ ನಡೆಸಿದ್ದು, ಸದ್ಯದಲ್ಲೇ 2ನೇ ಹಂತದ ಶೂಟಿಂಗ್ ಆರಂಭಿಸುತ್ತಿದ್ದೇವೆ. ಪ್ರಕೃತಿಯಲ್ಲಿ ಏನಾದರೂ ಕ್ರಿಯೆ ಆಗಬೇಕಾದರೆ ಅದರ ಮುನ್ಸೂಚನೆ ಎಂಬಂತೆ ಒಂದು ಸೌಂಡ್ ಕೇಳಿಬರುತ್ತದೆ, ಅದೇ ಐರಾ ಎಂದು ವಿವರಿಸಿದರು.


ಚಿತ್ರದ ನಾಯಕ ಶಿವು ಮಾತನಾಡಿ, ನಾನು ರಾಜ್‌ ಉದಯ್ ಸೇರಿ ಐದು ವರ್ಷಗಳ ಕಾಲ ತಾಯಿ ಸೆಂಟಿಮೆಂಟ್ ಇರುವ ಈ ಕಥೆಯನ್ನು ರೆಡಿ ಮಾಡಿದೆವು. ಒಬ್ಬ ನಿರ್ಮಾಪಕರೂ ಸಿಗಲಿಲ್ಲ ಅಂತ ಇಬ್ಬರೂ ಬಹಳ ಸಲ ಅತ್ತಿದ್ದೇವೆ. ಕೊನೆಗೆ ಸುರೇಶ್ ಸುಬ್ರಮಣ್ಯ ಅವರು ಸಿಕ್ಕರು. ಇದರಲ್ಲಿ ನನ್ನ ಪಾತ್ರಕ್ಕೆ ಹುಚ್ಚನ ಕ್ಯಾರೆಕ್ಟರ್ ಅಲ್ಲದೆ ಹಲವಾರು ಗೆಟಪ್‌ಗಳಿವೆ ಎಂದು ಹೇಳಿದರು.

ಜಾಕ್ ಮಂಜು ಮಾತನಾಡಿ, ಕನಸುಗಳನ್ನು ಹೊತ್ತ ತಂಡ ಇಲ್ಲಿದೆ, ಇವರೆಲ್ಲರ ಕನಸು ಈಡೇರಲಿ, ಎಲ್ಲರಿಗೂ ಒಳ್ಳೇ ಹೆಸರು ಬರಲಿ, ಟೀಸರ್ ಬಹಳ ಅದ್ಭುತವಾಗಿ ಬಂದಿದೆ, ಟೀಸರ್‌ನಲ್ಲಿ ಹಾಡಿನ ತುಣುಕನ್ನೂ ಸೇರಿಸಿರುವುದು ಒಳ್ಳೇ ಪ್ರಯತ್ನ, ಇವರೆಲ್ಲ ಮಾತಾಡುವಾಗ ನನ್ನ ಮೊದಲಚಿತ್ರ ಡೆಡ್ಲಿಸೋಮ ನೆನಪಾಯ್ತು ಎಂದರು, ನಟ ಮೋಹನ್ ಮಾತನಾಡಿ ಮೊದಲಹೆಜ್ಜೆ ಇಡೋದೇ ಕಷ್ಟ, ಈ ಹುಡುಗರು ಆಗಲೇ ಯಶಸ್ಸು ಗಳಿಸಿದ್ದಾರೆ.. ನಾನೊಬ್ಬ ನಿರ್ದೇಶಕನಾಗಿ ಗುರುತಿಸಿಕೊಳ್ಳಲು 8 ವರ್ಷಗಳ ಕಾಲ ಕಾದಿದ್ದೆ ಎಂದು ತನ್ನ ಅನುಭವ ಹಂಚಿಕೊಂಡರು. ನಾಯಕನ ತಾಯಿ ಪಾತ್ರ ಮಾಡಿರುವ ಮೀನಾಕ್ಷಿ, ಮತ್ತೊಬ್ಬ ಪ್ರಮುಖ ಪಾತ್ರಧಾರಿ ಕಾರ್ತೀಕ್ ವರ್ಣೇಕರ್ ಚಿತ್ರದ ಕುರಿತಂತೆ ತಮ್ಮ ಅನುಭವ ಹಂಚಿಕೊಂಡರು.

ಛಾಯಾಗ್ರಾಹಕ ವಿಘ್ನೇಶ್ ನಾಗೇಂದ್ರ ಮಾತನಾಡಿ ಸ್ಮಶಾನದಲ್ಲಿ ಶೂಟ್ ಮಾಡಿದ್ದೇವೆ, ರಿಯಲ್ ಹೆಣದ ಜತೆಗೇ ನಾಯಕ ಶಿವು ಆಕ್ಟ್ ಮಾಡಿದ್ದಾರೆ ಎಂದು ಹೇಳಿದರು. ಸಂಗೀತ ನಿರ್ದೇಶಕ ಕೌಶಿಕ್ ಹರ್ಷ ಮಾತನಾಡಿ ಚಿತ್ರದಲ್ಲಿ ೪ ಹಾಡುಗಳಿವೆ, ನನ್ನ ಸಹೋದರ ಚೇತನ್ ಸಾಹಿತ್ಯ ಬರೆದಿದ್ದಾರೆ ಎಂದರು.

Categories
ಸಿನಿ ಸುದ್ದಿ

ದಿಗಂತ್-ತರುಣ್ ಚಂದ್ರ ಜೋಡಿಯ ಹೊಸ ಸಿನಿಮಾ; ಚಾಲನೆ ಸಿಕ್ತು ಕಮರ್ ಫ್ಯಾಕ್ಟರಿಗೆ…

ಕಮರ್ ಫ್ಯಾಕ್ಟರಿ ಅರ್ಪಿಸುವ, ಕಮರ್ ಡಿ ಹಾಗೂ ವಿಜಯಲಕ್ಷ್ಮಿ ವೀರ ಮಾಚನನ್ ನಿರ್ಮಿಸುತ್ತಿರುವ ನೂತನ ಚಿತ್ರದ ಮುಹೂರ್ತ ಸಮಾರಂಭ ಮಲ್ಲೇಶ್ವರದ ಶ್ರೀಗಣಪತಿ ದೇವಸ್ಥಾನದಲ್ಲಿ ನೆರವೇರಿತು. ದಿಗಂತ್ ಹಾಗೂ ತರುಣ್ ಚಂದ್ರ ಈ ಚಿತ್ರದ ನಾಯಕರಾಗಿ ನಟಿಸುತ್ತಿದ್ದಾರೆ.
ಕಾವ್ಯ ಶೆಟ್ಟಿ ಮತ್ತು ಕೊಮಿಕಾ ಆಂಚಲ್ ಈ ಚಿತ್ರದ ನಾಯಕಿಯರು.

ದೇವರ ಮೇಲೆ ಸೆರೆ ಹಿಡಿಯಲಾದ ಮೊದಲ ಸನ್ನಿವೇಶಕ್ಕೆ ನಿರ್ಮಾಪಕರಾದ ಕಮರ್ ಹಾಗೂ ಕಿರಣ್ ವೆಂಕಟ್ ವೀರಮಾಚನೆನಿ ಆರಂಭ ಫಲಕ ತೋರಿದರು. ವಾಸಿಂ ಕ್ಯಾಮೆರಾ ಚಾಲನೆ ಮಾಡಿದರು. ಶಾಸಕ ರೇಣಕಾಚಾರ್ಯ ಅವರು ಮುಖ್ಯ ಅತಿಥಿಯಾಗಿ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು.

ಮುಂಬೈ ಮೂಲದ ಆನಂದ್ ಪ್ರಕಾಶ್ ಮಿಶ್ರ ಈ ಚಿತ್ರದ ನಿರ್ದೇಶಕರು. ಇದು ಅವರಿಗೆ ಚೊಚ್ಚಲ ಸಿನಿಮಾ. ಥ್ರಿಲ್ಲರ್ ಸಿನಿಮಾಗಿರುವುದರಿಂದ ಕಥೆ ಬಗ್ಗೆ ಹೆಚ್ಚು ಹೇಳುವಂತಿಲ್ಲ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಿರ್ದೇಶಕ ಆನಂದ್ ಪ್ರಕಾಶ್ ಮಿಶ್ರ.

ಬಹಳ ದಿನಗಳ ನಂತರ ನಾನು ಈ ಚಿತ್ರದ ಮೂಲಕ ನಟನೆಗೆ ಮರಳಿ ಬಂದಿದ್ದೀನಿ. ದಿಗಂತ್ , ಕಮರ್ ಅವರ ಜೊತಗೆ ಕ್ರಿಕೇಟ್ ಆಡಿದ್ದೀನಿ. ಆದರೆ ಸಿನಿಮಾ ಮಾಡಿಲ್ಲ. ಇದೇ ಮೊದಲ ಬಾರಿಗೆ ಅವರ ಜೊತೆಗೆ ಸಿನಿಮಾ ಮಾಡುತ್ತಿದ್ದೇನೆ. ಎಲ್ಲರ ಬೆಂಬಲವಿರಲಿ ಎಂದರು ತರುಣ್ ಚಂದ್ರ.

ನನ್ನದು ಈ ಚಿತ್ರದಲ್ಲಿ ಬರಹಗಾರನ ಪಾತ್ರ. ಕಮರ್ ಹಾಗೂ ತರುಣ್ ನನ್ನ ಬಹಳ ದಿನಗಳ ಸ್ನೇಹಿತರು. ಕಮರ್ ಯಾವಾಗಲೂ ಒಂದು ಸಿನಿಮಾ ಮಾಡೋಣ ಎನ್ನುತ್ತಿದ್ದರು. ಈಗ ಸಮಯ ಕೂಡಿ ಬಂದಿದೆ ಎಂದರು ದಿಗಂತ್.

ನನಗೆ ಇವರೆಲ್ಲರೂ ಮೊದಲಿಂದಲೂ ಪರಿಚಯ. ಈ ಚಿತ್ರದಲ್ಲಿ ನಟಿಸುತ್ತಿರುವುದು ಸಂತಸ ತಂದಿದೆ. ನಿರ್ದೇಶಕರು ಕಥೆ ಬಗ್ಗೆ ಹೆಚ್ಚು ಹೇಳಿಲ್ಲ ಎನ್ನುತ್ತಾರೆ ಕಾವ್ಯ ಶೆಟ್ಟಿ.

ಮತ್ತೊಬ್ಬ ನಾಯಕಿ‌ ಕೊಮಿಕ ಆಂಚಲ್ ಸಹ ಸಿನಿಮಾ ಕುರಿತು‌ ಮಾತನಾಡಿದರು.

ನಿರ್ದೇಶಕ ಆನಂದ್ ಪ್ರಕಾಶ್ ಮಿಶ್ರ ಅವರನ್ನು ಮುಂಬೈನಲ್ಲಿ ಭೇಟಿ ಯಾದಾಗ ಈ ಕಥೆ ಹೇಳಿದರು. ಇಷ್ಟವಾಯಿತು. ನಾಲ್ಕು ಹಾಡುಗಳಿದೆ. ಆನಂದ್ ರಾಜ್ ವಿಕ್ರಮ್ ಸಂಗೀತ ನೀಡುತ್ತಿದ್ದಾರೆ. ಹಿರಿಯ ಛಾಯಾಗ್ರಾಹಕ ಪಿ.ಕೆ.ಎಚ್ ದಾಸ್ ಛಾಯಾಗ್ರಹಣ ಈ ಚಿತ್ರಕ್ಕಿದೆ. ಇದೇ ಏಳರಿಂದ ಬೆಂಗಳೂರು, ಕೊಡಗು ಮುಂತಾದ ಕಡೆ ನಲವತ್ತು ದಿನಗಳ ಚಿತ್ರೀಕರಣ ನಡೆಯಲಿದೆ ಎಂದು ನಿರ್ಮಾಪಕ ಕಮರ್ ತಿಳಿಸಿದರು. ಮತ್ತೊಬ್ಬ ನಿರ್ಮಾಪಕ ಕಿರಣ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Categories
ಸಿನಿ ಸುದ್ದಿ

ಹೊಸ ವೇಷದೊಂದಿಗೆ ಬಹುಕೃತ ವಿಷಯಂ! ಡಿಲೇರಿಯಂ ಫೋಬಿಯಾ ಸುತ್ತ ಹೀಗೊಂದು ಎಮೋಷನಲ್ ಸ್ಟೋರಿ

ಈ ಹಿಂದೆ ಗೌಡ್ರುಸೈಕಲ್ ಎಂಬ ಪಕ್ಕಾ ಗ್ರಾಮೀಣ ಸೊಗಡಿನ ಚಿತ್ರ ಮಾಡಿದ್ದ ತಂಡದ ಬಹುತೇಕರು ಸೇರಿ ಮತ್ತೊಂದು ಸಿನಿಮಾ ಮಾಡಿದ್ದಾರೆ. ಅದಕ್ಕೆ ಬಹುಕೃತ ವೇಷಂ ಎಂದು ಹೆಸರಿಡಲಾಗಿದೆ. ಅಂದಹಾಗೆ, ಇದೊಂದು ಸೈಕಲಾಜಿಕಲ್ ಥ್ರಿಲ್ಲರ್ ಕಥಾಹಂದರ ಹೊಂದಿದೆ. ಇಲ್ಲಿ ಬಿಗ್‌ ಬಾಸ್ ಖ್ಯಾತಿಯ ವೈಷ್ಣವಿಗೌಡ ಹಾಗೂ ಗೌಡ್ರು ಸೈಕಲ್ ನಾಯಕ ಶಶಿಕಾಂತ್ ಚಿತ್ರದ ಆಕರ್ಷಣೆ. ಈ ಚಿತ್ರವನ್ನು ಪ್ರಶಾಂತ್ ಕೆ. ಎಳ್ಳಂಪಳ್ಳಿ ನಿರ್ದೇಶನ ಮಾಡಿದ್ದಾರೆ. ಈ ಹಿಂದೆ ಇವರು ಗೌಡ್ರುಸೈಕಲ್ ಚಿತ್ರಕ್ಕೂ ನಿರ್ದೇಶಕರಾಗಿದ್ದರು.

ಇತ್ತೀಚೆಗೆ ಬಹುಕೃತ ವೇಷಂ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ನೆರವೇರಿತು. ಈ ವೇಳೆ ನಾಯಕ ಶಶಿಕಾಂತ್ ಮಾತನಾಡಿ, “ನನ್ನದು 2 ಶೇಡ್ ಇರೊ ಪಾತ್ರ, ಡಿಲೇರಿಯಂ ಫೋಬಿಯಾ ಎನ್ನುವ ಖಾಯಿಲೆಯ ಮೇಲೆ ಮಾಡಿರುವ ಚಿತ್ರವಿದು, ನಾವು ಈ ಕಥೆ ಮಾಡಿಕೊಂಡು ನಿರ್ಮಾಪಕರ ಬಳಿ ಹೋದಾಗ ಮೊದಲು ಒಪ್ಪಲಿಲ್ಲ, ನಂತರ ನಮ್ಮ ಹಿಂದಿನ ಚಿತ್ರಕ್ಕೆ ಪತ್ರಿಕೆಗಳಲ್ಲಿ ಪ್ರಕಟವಾದ ವಿಮರ್ಶೆಗಳನ್ನು ತಂದು ತೋರಿಸಿದಾಗ ಒಪ್ಪಿದರು. ಮಾದ್ಯಮಗಳ ಕಾರಣದಿಂದ ದೊಡ್ಡ ಚಿತ್ರವೊಂದು ಆರಂಭವಾಯಿತು ಎಂಬುದು ಅವರ ಮಾತು.

ನಿರ್ಮಾಪಕರು ಒಂದೊಳ್ಳೇ ಸಿನಿಮಾ ಮಾಡಿಕೊಡಿ ಎಂದು ಹೇಳಿ ಎಲ್ಲಾ ಜವಾಬ್ದಾಾರಿ ನಮಗೇ ವಹಿಸಿದ್ದರು. ಕಥೆ ಬರೆಯುವಾಗ ಈ ಪಾತ್ರಕ್ಕೆ ವೈಷ್ಣವಿಗೌಡ ಅವರೇ ಸೂಕ್ತ ಅಂದುಕೊಂಡಿದ್ದೆವು, ಅವರ ಬಳಿ ಹೋಗಿ ಕಥೆ ಹೇಳಿದಾಗ ಅವರೂ ಸಹ ಒಪ್ಪಿದರು. ಚಿತ್ರಕ್ಕೆ 70 ದಿನಗಳ ಕಾಲ ಚಿತ್ರೀಕರಣ ಮಾಡಿದ್ದೇವೆ, ವೈಷ್ಣವಿಗೌಡ ಅವರು ಸಿಂಗಲ್ ಶಾಟ್‌ನಲ್ಲಿ ಅದ್ಭುತವಾಗಿ ನಟಿಸಿದ್ದಾರೆ ಎಂದರು.

ಚಿತ್ರದ ಕಥೆ, ಚಿತ್ರಕಥೆ ಬರೆದಿರುವ ಅಧ್ಯಾಯ ತೇಜ್, “ನನ್ನ ಸ್ನೇಹಿತನೊಬ್ಬನಿಗೆ ಈ ಥರದ ಖಾಯಿಲೆ ಇತ್ತು. ಪ್ರತಿದಿನ ಅವನ ಮೇಲೆ ಅವನೇ ಫೈಟ್ ಮಾಡುತ್ತಿರುತ್ತಾನೆ. ಇದನ್ನು ಸ್ನೇಹಿತ ಶಶಿಕಾಂತ್ ಬಳಿ ಹೇಳಿದೆ. ಆತನೂ ಸಿನಿಮಾ ಮಾಡಲು ಒಪ್ಪಿದ. ಕಂಟೆಂಟ್ ಸಿನಿಮಾವನ್ನು ಕಮರ್ಷಿಯಲ್‌ ಆಗಿ ಮಾಡಿದ್ದೇವೆ ಎಂದರು.
ಚಿತ್ರದ ಪ್ರೀ ಕ್ಲೈಮ್ಯಾಕ್ಸನಲ್ಲಿ ನಾಲ್ಕುವರೆ ನಿಮಿಷದ ಒಂದೇ ಶಾಟ್ ಇದೆ. ಅದರಲ್ಲಿ ವೈಷ್ಣವಿಗೌಡ ಅವರು ನಗು, ಅಳು ಸೇರಿಸಿ ಪೈಪೋಟಿಗೆ ಬಿದ್ದವರಂತೆ ಅಭಿನಯಿಸಿದ್ದಾರೆ ಎಂಬುದು ಅವರ ಮಾತು.

ಹೆಚ್. ನಂದ ಹಾಗೂ ಡಿ. ಕೆ. ರವಿ ಚಿತ್ರ ನಿರ್ಮಾಣ‌ ಮಾಡಿದ್ದಾರೆ. ವೈಶಾಖ್ ವಿ.ಭಾರ್ಗವ್ ಈ ಚಿತ್ರದ ನಾಲ್ಕು ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದರೆ, ಕಿರಣ್ ಕೃಷ್ಣಮೂರ್ತಿ ಅವರು ಚಿತ್ರಕ್ಕೆ ಹಿನ್ನೆಲೆ ಸಂಗೀತ ಒದಗಿಸಿದ್ದಾರೆ. ಹರ್ಷಕುಮಾರ್‌ಗೌಡ ಕ್ಯಾಮೆರಾ ಹಿಡಿದಿದ್ದಾರೆ. ಜ್ಞಾನೇಶ್ ಅವರ ಸಂಕಲನವಿದೆ.

error: Content is protected !!