ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಉತ್ತಮ ಚಿತ್ರಗಳನ್ನು ನೀಡಿರುವ ಎನ್. ಎಸ್. ರಾಜಕುಮಾರ್ ತಮ್ಮ ಓಂಕಾರ್ ಫಿಲಂಸ್ ಮೂಲಕ “ರಮ್ಯ ರಾಮಸ್ವಾಮಿ” ಎಂಬ ಚಿತ್ರವನ್ನು ನಿರ್ಮಾಣ ಮಾಡಲಿದ್ದಾರೆ. ಇತ್ತೀಚೆಗೆ ರವಿಚಂದ್ರನ್ ಅವರಿಗೆ “ಕನ್ನಡಿಗ” ಸಿನಿಮಾ ನಿರ್ಮಿಸಿದ್ದ ರಾಜಕುಮಾರ್, ಇದೀಗ ಮತ್ತೊಂದು ಸಿನಿಮಾ ನಿರ್ಮಿಸುತ್ತಿದ್ದಾರೆ.
ಈ ಚಿತ್ರಕ್ಕೆ ಚಿ.ಗುರುದತ್ ಅವರು ನಿರ್ದೇಶನ ಮಾಡುತ್ತಿದ್ದಾರೆ ಅನ್ನೋದು ವಿಶೇಷ. ಇನ್ನು, ಈ ಚಿತ್ರಕ್ಕೆ ಜನಾರ್ದನ ಮಹರ್ಷಿ ಕಥೆ ಬರೆದಿದ್ದಾರೆ. ಇಲ್ಲಿ ನಾಯಕರಾಗಿ ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯಿಸುತ್ತಿದ್ದು, ರಾಮಸ್ವಾಮಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ರಮ್ಯ ಪಾತ್ರದಲ್ಲಿ ಯಾರು ನಟಿಸುತ್ತಿದಾರೆಂಬ ಕುತೂಹಲವಿದೆ. ಆ ಪಾತ್ರದಲ್ಲಿ ಖ್ಯಾತ ನಟಿಯೊಬ್ಬರು ನಟಿಸಲಿದ್ದು, ಯಾರು ನಟಿಸುತ್ತಾರೆಂಬುದನ್ನು ಸದ್ಯದಲ್ಲೇ ನಿರ್ಮಾಪಕರು ಹೇಳಲಿದ್ದಾರೆ.
ಜಿ.ಎಸ್.ವಿ ಸೀತಾರಾಂ ಛಾಯಾಗ್ರಹಣವಿದೆ. ಕೆ.ಜಿ.ಎಫ್ ಖ್ಯಾತಿಯ ರವಿ ಬಸ್ರೂರು ಅವರ ಸಂಗೀತ ನಿರ್ದೇಶನ ಚಿತ್ರಕ್ಕಿರಲಿದೆ. ಚಿತ್ರದ ಕುರಿತು ಹೆಚ್ಚಿನ ಮಾಹಿತಿ ಇಷ್ಟರಲ್ಲೇ ಕೊಡಲಿದ್ದಾರೆ ನಿರ್ದೇಶಕರು.