Categories
ಸಿನಿ ಸುದ್ದಿ

ಸೀತಮ್ಮನ ಮಗನಿಗೆ ಕಲಾವಿದ;ಯತಿರಾಜ್ ಆಕ್ಷನ್ ಕಟ್ !

ಕಲಾವಿದ ,ಪತ್ರಕರ್ತ ಯತಿರಾಜ್ ಮತ್ತೊಂದು ಸಾಹಸಕ್ಕೆ ಅಣಿಯಾಗಿದ್ದಾರೆ. ‘ಪೂರ್ಣ ಸತ್ಯ’ ಚಿತ್ರದ ನಂತರ ಅವರೀಗ ಸೀತಮ್ಮನ ಮಗ ಹೆಸರಿ‌ನ ಮತ್ತೊಂದು ಚಿತ್ರಕ್ಕೆ ಡೈರೆಕ್ಟರ್ ಹ್ಯಾಟ್ ತೊಟ್ಟು ಆಕ್ಷನ್ ಕಟ್ ಹೇಳಲು ರೆಡಿಯಾಗಿದ್ದಾರೆ. ಸೋನು ಫಿಲಂಸ್ ಲಾಂಚನದಲ್ಲಿ ಮಂಜುನಾಥ್ ನಾಯಕ್ ನಿರ್ಮಾಣ ಮಾಡುತ್ತಿರುವ ಈ ಚಿತ್ರಕ್ಕೆ ಚರಣ್, ಕಸಾಲ, ಸೋನು ಸಾಗರ್, ಬುಲೆಟ್ ರಾಜು ಕಲಾವಿದರಾಗಿ ಆಯ್ಕೆ ಆಗಿದ್ದಾರೆ. ಚಿತ್ರ ದ ಕುರಿತು ಮಾಹಿತಿಯನ್ನು ಚಿತ್ರ ತಂಡ ಬುಧವಾರ ರಿವೀಲ್ ಮಾಡಲಿದೆ. ಹಾಗೆಯೇ ಅದರ ಚಿತ್ರೀಕರಣ, ಸಂಗೀತ ಇತ್ಯಾದಿ ಮಾಹಿತಿಯೂ ನಾಳೆ ಹೊರ ಬೀಳಲಿದೆ‌ . ಉಳಿದಂತೆ ಇಲ್ಲಿ ಕಲಾವಿದ ಯತಿರಾಜ್ ಅವರ ಮತ್ತೊಂದು ಪ್ರಯತ್ನವೇ ವಿಶೇಷ‌.

ಇದು ಅವಕಾಶ ಗಿಟ್ಟಿಸಿಕೊಂಡರು ಅಥವಾ ಸಿಕ್ಕಿದೆ ಎನ್ನುವುದಕ್ಕಿಂತ ಅವರ ಕಲಾಸೇವೆಯ ಪ್ರತಿಫಲವೇ ಹೌದು. ಯಾಕಂದ್ರೆ ವೃತ್ತಿಯಲ್ಲಿ ಪತ್ರಕರ್ತರಾಗಿದ್ದ ಯತಿರಾಜ್, ನಟನೆಯ ಮೇಲಿನ ಆಸಕ್ತಿಯಿಂದಲೇ ಕಲಾವಿದನಾಗಿ‌ ಗುರುತಿಸಿಕೊಂಡವರು. ಅದಕ್ಕಾಗಿಯೇ ನಟ ಕಿಚ್ವ ಸುದೀಪ್ ಬಳಗವನ್ನು ಸೇರಿ, ಅವರೊಂದಿಗೆ ತೆರೆ‌ಮೇಲೆ ಕಾಣಿಸಿಕೊಂಡರು. ಮುಂದೆ ಅವರಿಗೆ ಅವಕಾಶಗಳೂ ಬಂದವು. ಅದೇ ಕಾರಣಕ್ಕೆ ಪತ್ರಕರ್ತ ವೃತ್ತಿಯ ಜತೆಗೆ ನಟನೆಗೂ ಹೆಚ್ಚು ಆದ್ಯತೆ ನೀಡಿದವರು ಈಗ ಪೂರ್ಣವದಿಯ ನಟ, ನಿರ್ದೇಶಕ ಹಾಗೂ ಬರಹಗಾರ.

ಇದುವರೆಗಿನ ಅವರ ಸಿನ ಪಯಣದಲ್ಲಿ ೧೬೫ಕ್ಕೂ ಹೆಚ್ಚು ಚಿತ್ರಗಳಿಗೆ ನಟನಾಗಿ ಬಣ್ಣ ಹಚ್ಚಿದ್ದಾರೆ. ಕನ್ನಡದ ಜತೆಗೆ ತಮಿಳಿ ಚಿತ್ರ ರಂಗದಲ್ಲೂ ನಟನಾಗಿ ಕಾಣಿಸಿಕೊಂಡಿದ್ದಾರೆ. ಬಹುತೇಕ ಸ್ಟಾರ್ ಸಿನಿಮಾಗಳಲ್ಲಿ ಸಹ ನಟನಾಗಿ ಅಭಿನಯಸಿ, ಸೈ ಎನಿಸಿಕೊಂಡಿದ್ದಾರೆ. ಹಾಗೆಯೇ ಫೇರ್ ಅಂಡ್ ಲವ್ಲಿ , ಪೂರ್ಣ ಸತ್ಯ ಹಾಗೂ ಈಗ ಸೀತಮ್ಮನ ಮಗ ಚಿತ್ರವೂ ಸೇರಿ‌ಮೂರು ಸಿನಿಮಾಗಳಿಗೆ ಕತೆ ಬರೆದಿದ್ದಾರೆ. ಈ ಪೈಕಿ ಈಗ ಅವರದ್ದೇ ನಿರ್ದೇಶನ ಎರಡನೇ‌ಸಿನಿಮಾ ‘ಸೀತಮ್ಮನ ಮಗ’

‘ ವೃತ್ತಿಯಲ್ಲಿ ಪತ್ರಕರ್ತನಾಗಿದ್ದ ನನಗೆ ಕಥೆಗಳ ಬರವಣಿಗೆ ಅನ್ನೋದು ಒಂದು ಹುಚ್ಚು. ಸದಾ ಒಂದಲ್ಲೊಂದು ಬಗೆಯ ಸಿನಿಮಾ ಕಥೆ ತಲೆಗೆ ಹೊಳೆದಾಗ ಅದನ್ನು ಬರೆಯುವುದು ತೀಡುವುದು ಸಹಜವೇ ಆಗಿತ್ತು. ಅದೇ ಹಾದಿಯಲ್ಲಿ ನಾನು ಸಿದ್ದ ಪಡಿಸಿದ ಕಥೆಗಳ ಪೈಕಿ ಮೊದಲು ಫೇರ್ ಅಂಡ್ ಲವ್ಲಿ ಸಿನಿಮಾವಾಯಿತು. ಅದಕ್ಕೆ ಬೇರೆಯವರು ನಿರ್ದೇಶನ‌ಮಾಡಿದರು‌ .‌

ಕೊನೆಗೆ ನನಗೆ ತೀವ್ರವಾಗಿ ಅನಿಸಿದ್ದು ನನ್ನದೇ ಕಥೆಗೆ ನಾನೇ ನಿರ್ದೆಶನ ಮಾಡಿದರೆ ಹೇಗಿರುತ್ತೆ ಅಂತ‌ . ಅದೇ ಹಾದಿಯಲ್ಲಿ’ ಪೂರ್ಣ ಸತ್ಯ’ ಸಿನಿಮಾ ಮಾಡಿದೆ‌. ಈಗ ಸೀತಮ್ಮನ ಮಗ. ಇದೆಲ್ಲ ಕಷವೃತ್ತಿಯಲ್ಲಿಆದರೆ,ಒಬ್ಬ ಸಹ ನಟನಾದವನಿಗೆ ಹೀರೋ ಆಗುವ ಕನಸು, ಹೀರೋ ಸಿನಿಮಾ ನಿರ್ಮಾಣ ಮಾಡುವ ಕನಸು ಎಷ್ಟು ಸಹಜವೋ ಹಾಗೆಯೇ ಸಿನಿಮಾ ಕಥೆ ಬರೆಯುವವನಿಗೆ ನಿರ್ದೇಶಕನಾಗುವ ಹಂಬಲವೂ ಸಹಜ. ಅದೇ ಹಾದಿಯಲ್ಲೀಗ ಸೀತಮ್ಮನ ಮಗ’ ಎನ್ನುತ್ತಾರೆ ಯತಿರಾಜ್.

Categories
ಸಿನಿ ಸುದ್ದಿ

ಕೆಜಿಎಫ್ ಸಾಮ್ರಾಜ್ಯಕ್ಕೆ `ಅಧೀರ’ ಕಮ್ ಬ್ಯಾಕ್ – ಬೆಂಕಿ ಖಬರ್ ! ಇನ್ಮೇಲೆ ಶುರು ಇಂಟರ್ ನ್ಯಾಷನಲ್ ಫೀವರ್!

ನರಾಚಿ ಲೋಕದಲ್ಲಿ ಸ್ಯಾಂಡಲ್ ವುಡ್ ಷೆಹಜಾದ್ ರಾಕಿಭಾಯ್ ಜೊತೆ ಸೆಣಸಾಡಿ ಮುಂಬೈಗೆ ವಾಪಾಸ್ ಆಗಿದ್ದ ಬಿಟೌನ್ ಮುನ್ನಭಾಯ್ ಮತ್ತೆ ರಾಕಿ ಅಂಗಳಕ್ಕೆ ಕಾಲಿಟ್ಟಿದ್ದಾರೆ. ಅಧೀರನ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿ ಎಲ್ಲರನ್ನೂ ದಂಗು ಬಡಿಸಿ ಹೋಗಿದ್ದ ಬಿಟೌನ್ ಬಾಬ ಈಗ ಅಧೀರನ ಪಾತ್ರಕ್ಕೆ ಜೀವತುಂಬಲಿಕ್ಕೆ ಕೆಜಿಎಫ್ ಅಖಾಡಕ್ಕೆ ಭೇಟಿಕೊಟ್ಟಿದ್ದಾರೆ. ಹೌದು, ಅಧೀರ ಇಡೀ ಜಗತ್ತು ಕಣ್ಣರಳಿಸಿ ಕಾಯ್ತಿರುವ ಖಳನಾಯಕ ಪಾತ್ರ. ಕೆಜಿಎಫ್ ಮೇಲೆ ಕಣ್ಣಿಟ್ಟಿದ್ದ ಗರುಡನನ್ನು ಹೊಡೆದುರುಳಿಸಿದ ರಾಕಿಭಾಯ್, ಅಧೀರನನ್ನು ಯಾವ್ ರೀತಿಯಾಗಿ ಮಟ್ಟಹಾಕಿ ಚಿನ್ನದ ಲೋಕಕ್ಕೆ ಅಧಿಪತಿಯಾಗಬಹುದು ಅಂತ ವಲ್ಡ್ ವೈಡ್ ಸಿನಿಮಾ ಪ್ರೇಕ್ಷಕರು ಕೂತೂಹಲದಿಂದ ಎದುರು ನೋಡ್ತಿದ್ದಾರೆ. ಇಂತಹ ಹೈವೋಲ್ಟೇಜ್ ಕ್ಯಾರೆಕ್ಟರ್ ಗೆ ಬಿಟೌನ್ ಬಾಬ ಜೀವ ತುಂಬಿ‌ ಅಭಿನಯಿಸಿದ್ದಾರೆ.ಇತ್ತೀಚಿಗೆ ಕೆಜಿಎಫ್ ತಂಡ ಸೇರಿಕೊಂಡಿರುವ ನಟ ಸಂಜಯ್ ದತ್ತ್ ಡಬ್ಬಿಂಗ್ ಮುಗಿಸಿಕೊಟ್ಟಿದ್ದಾರೆ.

ಈ ಬೆಂಕಿ ಸಮಾಚಾರವನ್ನು ಚಿತ್ರತಂಡ ಸೋಷಿಯಲ್ ಸಮುದ್ರದಲ್ಲಿ ಹಂಚಿಕೊಂಡಿದೆ. ಸುದ್ದಿ ಕೇಳಿ ರಾಕಿಂಗ್ ಫ್ಯಾನ್ಸ್ ಮಾತ್ರವಲ್ಲ ಇಡೀ ಚಿತ್ರಪ್ರೇಮಿಗಳು ದಿಲ್ ಖುಷ್ ಆಗಿದ್ದಾರೆ. ಆದಷ್ಟು ಬೇಗ ಟ್ರೈಲರ್ ಮತ್ತು ಸಾಂಗ್ಸ್ ಝಲಕ್ ತೋರ್ಸಿ ಅಂತ ಹೊಂಬಾಳೆಗೆ ಬೇಡಿಕೆ ಇಡ್ತಿದ್ದಾರೆ. ಬೆಳ್ಳಿತೆರೆ ಅಖಾಡದಲ್ಲಿ ಚಂಡಮಾರುತದ ಅಲೆ ಎಬ್ಬಿಸೋ ಮುನ್ನ ಸೋಷಿಯಲ್ ಸಮುದ್ರದಲ್ಲಿ ಸುನಾಮಿ ಎಬ್ಬಿಸೋದಕ್ಕೆ ಚಿತ್ರತಂಡ‌ ಕೂಡ ಮಾಸ್ಟರ್ ಪ್ಲ್ಯಾನ್ ಮಾಡಿದೆ. ಈಗಾಗಲೇ ಪ್ರಮೋಷನ್ ಕೆಲಸಗಳನ್ನು ಶುರುವಿಟ್ಟುಕೊಂಡಿದೆ. ಅದರ ಭಾಗವಾಗಿ ಮೊದಲು ಕೆಜಿಎಫ್ ಚಾಪ್ಟರ್ 1 ದೃಶ್ಯಗಳನ್ನು ಪ್ರೇಕ್ಷಕರಿಗೆ ರೀಕಾಲ್ ಮಾಡಿಸುವಂತಹ ಕೆಲಸವನ್ನು ಮಾಡ್ತಿದೆ. ಶೀಘ್ರದಲ್ಲೇ ಕೆಜಿಎಫ್ ಚಾಪ್ಟರ್ 2 ಪೋಸ್ಟರ್ ಗಳ ದರ್ಬಾರ್ ಸೋಷಿಯಲ್ ಜಗತ್ತಿನಲ್ಲಿ ಆರಂಭಗೊಳ್ಳಲಿದೆ. ಅಲ್ಲಿಂದ ಶುರುವಾಗಲಿದೆ ಕೆಜಿಎಫ್ ಅಸಲಿ ಇಂಟರ್ ನ್ಯಾಶನಲ್ ಫೀವರ್

ಅಂದ್ಹಾಗೇ, ‘ ಅಧೀರ’ನ ಪಾತ್ರ ಹೊರತು ಪಡಿಸಿ ಬಹುತೇಕ ಎಲ್ಲಾ ಪಾತ್ರಗಳ ಡಬ್ಬಿಂಗ್ ಪೂರ್ಣಗೊಂಡಿತ್ತು. ಬಾಬ ಕಾಲ್ ಶೀಟ್ ಗಾಗಿ ಚಿತ್ರತಂಡ ಎದುರು ನೋಡ್ತಿತ್ತು. ಫೈನಲೀ, ಸಂಜು ಬಾಬು ಕೆಜಿಎಫ್ ಅಂಗಳಕ್ಕೆ ಭೇಟಿಕೊಟ್ಟು ಡಬ್ಬಿಂಗ್ ಮುಗಿಸಿಕೊಟ್ಟಿದ್ದಾರೆ. ಅಲ್ಲಿಗೆ ಕೆಜಿಎಫ್ ಚಾಪ್ಟರ್ 2 ಮಾತಿನ ಮನೆಯ ಸಂಪೂರ್ಣ ಕೆಲಸ ಮುಕ್ತಾಯಗೊಂಡಿದೆ. ಈ ಖುಷಿ ಸಮಾಚಾರವನ್ನು ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ನಿರ್ಮಾಣ ಸಂಸ್ಥೆ ಹೊಂಬಾಳೆ ತಿಳಿಸಿದೆ. ಇಡೀ ಜಗತ್ತು ಜಾತಕ ಪಕ್ಷಿಯಂತೆ ಕಾದು ಕುಳಿತಿರುವ ಸಿನಿಮಾ ಪ್ರೇಕ್ಷಕರಿಗೆ ಚಿನ್ನದ ಸಾಮ್ರಾಜ್ಯ ತೋರಿಸೋಕೆ ಕೆಜಿಎಫ್ ಚಾಪ್ಟರ್ 2 ತಂಡ ಸಕಲ ಸಿದ್ದತೆ ನಡೆಸಿದೆ.ಏಪ್ರಿಲ್ 14 ರಂದು ವಲ್ಡ್ ವೈಡ್ ಕೆಜಿಎಫ್ ಚಾಪ್ಟರ್ 2 ತೆರೆಗೆ ಬರಲಿದೆ.

ವಿಶಾಲಾಕ್ಷಿ, ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಅಪ್ಪು ಕನಸಿನ ಗಂಧದ ಗುಡಿ ನೋಡೋಕೆ ನಾನೂ ಕಾತುರ; ಶಿವಣ್ಣ

ಪುನೀತ್‌ ರಾಜಕುಮಾರ್‌ ಅವರು ಪ್ರೀತಿಯಿಂದಲೇ ನಿರ್ಮಾಣ ಮಾಡಿದ “ಗಂಧದ ಗುಡಿ” ಎಂಬ ವಿಶೇಷ ಡಾಕ್ಯುಮೆಂಟರಿ ಪಾರ್ವತಮ್ಮ ರಾಜಕುಮಾರ್‌ ಅವರ ಹುಟ್ಟುಹಬ್ಬದಂದು ರಿಲೀಸ್‌ ಆಗಿದ್ದು, ಎಲ್ಲೆಡೆಯಿಂದಲೂ ಸಾಕಷ್ಟು ಮೆಚ್ಚುಗೆ ಪಡೆದುಕೊಂಡಿದೆ. ಟೈಟಲ್‌ ಟೀಸರ್ ವೀಕ್ಷಿಸಿರುವ ಕನ್ನಡ ಚಿತ್ರರಂಗದ ಹಲವು ನಟ,ನಟಿಯರು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಹ್ಯಾಟ್ರಿಕ್‌ ಹೀರೋ ಶಿವರಾಜಕುಮಾರ್‌ ಕೂಡ ಟೀಸರ್‌ ನೋಡಿ ಪ್ರತಿಕ್ರಿಯಿಸಿದ್ದು ಹೀಗೆ.

“ಅಪ್ಪು ಮಾಡಿರುವ ಗಂಧದ ಗುಡಿ ಟೀಸರ್‌ ತುಂಬಾನೇ ಚೆನ್ನಾಗಿದೆ. ಒಂದು ಡಿಫರೆಂಟ್‌ ಫಾರ್ಮೆಟ್‌ನಲ್ಲಿದೆ. ಕಾಡಿನ ಅಮೂಲ್ಯತೆ ಬಗ್ಗೆ ಡಾಕ್ಯುಮೆಂಟರಿ ಇದೆ. ಈಗಿನ ಕಾಲಕ್ಕೆ ತುಂಬ ಸೂಕ್ತ ಎನಿಸುತ್ತೆ. ಕಾಡು ಸೇವ್‌ ಮಾಡಬೇಕೆಂಬ ವಿಷಯ ಅದರದ್ದು. ಅಪ್ಪು ಸಿಂಪಲ್‌ ಆಗಿ ಕಾಣಿಸಿಕೊಂಡಿದ್ದಾರೆ ಅಲ್ಲಿ. ಸ್ಟಾರ್‌ಡಮ್‌ ಬಿಟ್ಟು ಬೇರೆ ರೀತಿ ತೊಡಗಿಸಿಕೊಳ್ಳುವುದಿದೆಯಲ್ಲ ಅದೊಂದು ವಿಶೇಷ. ಈ ಕುರಿತಂತೆ ಹಿಂದೆಯೇ, ಗಂಧದ ಗುಡಿ ಕುರಿತು ನನ್ನ ಬಳಿ ಅಪ್ಪು ಹೇಳಿದ್ದರು. ನಾನೂ ಕೂಡ ಅದನ್ನ ನೋಡಲು ಕುತೂಹಲದಿಂದ ಕಾಯುತ್ತಿದ್ದೇನೆ.

ಅಲ್ಲಿ ಕಾಡಿನ ರಕ್ಷಣೆ ಬಗ್ಗೆ ಹೇಳಲಾಗಿದೆ. ಒಂದೊಳ್ಳೆಯ ಜಾಗೃತಿ ಮೂಡಿಸುವ ಸಿನಿಮಾ ಅದು. ಕರ್ನಾಟಕ ಅರಣ್ಯ ಕುರಿತಂತೆ ಅಪ್ಪು ಮಾಡಿರುವುದು ಹೆಮ್ಮೆ ಎನಿಸುತ್ತದೆ. ಈ ಹಿಂದೆ ಕೂಡ ಎಂ.ಪಿ.ಶಂಕರ್‌, ಕೂಡ ಕಾಡಿನ ಕುರಿತಂತೆ ಸಿನಿಮಾ ಮಾಡಿದ್ದರು. ಪ್ರಭಾಕರ್‌ ಅವರು ಸಹ ಕಾಡಿನರಾಜ ಸಿನಿಮಾ ಮಾಡಿದ್ದರು. ನಾನು ಸಿನಿಮಾ ನೋಡೋಕೆ ಕಾಯುತ್ತಿದ್ದೇನೆʼ ಎಂದಿದ್ದಾರೆ. ಪಿಆರ್‌ಕೆ ಮೂಲಕ ೨೦೨೨ರಲ್ಲಿ ಥಿಯೇಟರ್‌ನಲ್ಲಿ ಈ ಚಿತ್ರ ರಿಲೀಸ್‌ ಆಗಲಿದೆ. ಸದ್ಯ ಸೋಶಿಯಲ್‌ ಮೀಡಿಯಾದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.

Categories
ಸಿನಿ ಸುದ್ದಿ

ಮತ್ತೆ ಸುದ್ದಿಯಲ್ಲಿ ಲಹರಿ ಸಂಸ್ಥೆ! ರಿಕಿ ಕೇಜ್‌ ಆಲ್ಬಂ ಪ್ರತಿಷ್ಠಿತ ಗ್ರ್ಯಾಮಿ ಅವಾರ್ಡ್‌ಗೆ ನಾಮನಿರ್ದೇಶನ…

ಲಹರಿ ಮ್ಯೂಸಿಕ್‌ ಸಂಸ್ಥೆ ಕನ್ನಡ ಮಾತ್ರವಲ್ಲ, ಇಡೀ ಭಾರತೀಯ ಚಿತ್ರರಂಗಕ್ಕೆ ಹೆಮ್ಮೆ ಎನ್ನುವುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಹೌದು, ಈಗಾಗಲೇ ದಕ್ಷಿಣ ಭಾರತದಲ್ಲಿ ಮೊದಲ ಸ್ಥಾನದಲ್ಲಿರುವ ಈ ಸಂಸ್ಥೆ, ಇದೀಗ ಮತ್ತೊಂದು ಸಂತೋಷದ ವಿಷಯಕ್ಕೆ ಕಾರಣವಾಗಿದೆ.

ಇದೇ ಮೊದಲ ಬಾರಿಗೆ ಲಹರಿ ಮ್ಯೂಸಿಕ್‌ ಸಂಸ್ಥೆಯಿಂದ ಬಿಡುಗಡೆಯಾದ ಆಲ್ಬಂವೊಂದು ಗ್ರ್ಯಾಮಿ ಅವಾರ್ಡ್‌ಗೆ ನಾಮನಿರ್ದೇಶನಗೊಂಡಿದೆ. ಸಹಜವಾಗಿಯೇ ಲಹರಿ ಮ್ಯೂಸಿಕ್‌ ಸಂಸ್ಥೆಯ ಲಹರಿ ವೇಲು ಅವರಿಗೆ ಇದು ಖುಷಿಯಾಗಿದೆ. ಅಂದಹಾಗೆ, ಭಾರತೀಯ ಚಿತ್ರತಂಗದಲ್ಲೇ ಲಹರಿ ಮ್ಯೂಸಿಕ್‌ ಸಂಸ್ಥೆಯಿಂದ ಹೊರಬಂದಿರುವ ಈ ಆಲ್ಬಂ ಗ್ರ್ಯಾಮಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿರುವುದಕ್ಕೆ ಮುಖ್ಯ ಕಾರಣ, ಅದು ಸಂಗೀತ ನಿರ್ದೇಶಕ, ಗಾಯಕ ರಿಕಿ ಕೇಜ್.‌


ರಿಕಿ ಕೇಜ್‌ ಅವರ “ಡಿವೈನ್‌ ಟೈಡ್ಸ್‌” ಹೆಸರಿನ ಆಲ್ಬಂ ಇದೀಗ ಗ್ರ್ಯಾಮಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದೆ. ಹಾಗೆ ನೋಡಿದರೆ, ರಿಕ್ಕಿ ಕೇಜ್‌ ಅವರಿಗೆ ಇದೇನು ಹೊಸದಲ್ಲ. ಕಳೆದ ಐದು ವರ್ಷಗಳ ಹಿಂದೆಯೇ ರಿಕಿ ಕೇಜ್‌ ಅವರು ಗ್ರ್ಯಾಮಿ ಅವಾರ್ಡ್‌ ಪಡೆದುಕೊಂಡಿದ್ದರು. ಈಗ ಎರಡನೇ ಬಾರಿಗೆ ಅವರು ಗ್ರ್ಯಾಮಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ. ವಿಶೇಷವೆಂದರೆ, ರಿಕಿ ಕೇಜ್‌ ಅವರ “ಡಿವೈನ್‌ ಟೈಡ್ಸ್”‌ ಆಲ್ಬಂ ಪ್ರಪಂಚದ ಅದ್ಭುತ ಆಲ್ಬಂಗಳ ಸಾಲಿಗೆ ಸೇರಿದ್ದು, ಪ್ರಪಂಚಾದ್ಯಂತ ಬಂದ ಆಲ್ಬಂಗಳನ್ನು ಹಿಂದಕ್ಕೆ ತಳ್ಳಿ ಪ್ರತಿಷ್ಠಿತ ಗ್ರ್ಯಾಮಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದೆ.

ಸಹಜವಾಗಿಯೇ ಇದು ಕನ್ನಡಕ್ಕೆ ಹೆಮ್ಮೆಯ ವಿಷಯವೇ ಸರಿ. ಯಾಕೆಂದರೆ, ರಿಕಿ ಕೇಜ್‌ ಕೂಡ ಮೂಲತಃ ಕರ್ನಾಟಕದವರು. ಅದರಲ್ಲೂ ದಕ್ಷಿಣ ಭಾರತದಲ್ಲೇ ಪ್ರಖ್ಯಾತಿ ಪಡೆದಿರುವ ಲಹರಿ ಮ್ಯೂಸಿಕ್‌ ಸಂಸ್ಥೆಯಡಿ ಈಗಾಗಲೆ 1.26 ಲಕ್ಷ ಆಲ್ಬಂ ಹಾಡುಗಳಿವೆ. ಸೂಪರ್‌ ಹಿಟ್‌ ಹಾಡುಗಳನ್ನು ಕೊಟ್ಟಿರುವ ಲಹರಿ ಮ್ಯೂಸಿಕ್‌ ಸಂಸ್ಥೆ ಕನ್ನಡಿಗರ ಪ್ರೀತಿಗೆ ಪಾತ್ರವಾಗಿದೆ. ಈಗ ಇದೇ ಮೊದಲ ಸಲ “ಡಿವೈನ್‌ ಟೈಡ್ಸ್‌” ಆಲ್ಬಂ ಲಹರಿ ಸಂಸ್ಥೆಯಡಿ ಬಂದಿದ್ದು, ಆ ಆಲ್ಬಂ ಗ್ರ್ಯಾಮಿ ಅವಾರ್ಡ್‌ಗೆ ಹೋಗಿರೋದು ಸಂತಸದ ವಿಷಯ. ಭಾರತದಲ್ಲೇ ಮೊದಲ ಬಾರಿಗೆ ಲಹರಿ ಸಂಸ್ಥೆ ಗ್ರ್ಯಾಮಿ ಅವಾರ್ಡ್‌ಗೆ ನಾಮನಿರ್ದೇಶನಗೊಂಡಿರುವ ಬಗ್ಗೆ ಸ್ವತಃ ಲಹರಿ ಸಂಸ್ಥೆಯ ಮುಖ್ಯಸ್ಥ ವೇಲು ಅವರೇ ಸಂತೋಷಗೊಂಡಿದ್ದಾರೆ.

ಅಂದಹಾಗೆ, 64 ನೇ ವಾರ್ಷಿಕ ಗ್ರ್ಯಾಮಿ ಅವಾರ್ಡ್‌ಗೆ “ಡಿವೈನ್ ಟೈಡ್ಸ್” ಎಂಬ ಅದ್ಭುತ ಆಲ್ಬಂ ನಾಮನಿರ್ದೇಶನಗೊಂಡಿದೆ. ಸ್ಟೀವರ್ಟ್ ಕೋಪ್ಲ್ಯಾಂಡ್ (ಪೊಲೀಸ್) ಮತ್ತು ರಿಕಿ ಕೇಜ್ ‘ಡಿವೈನ್ ಟೈಡ್ಸ್’ ಗಾಗಿ ಗ್ರ್ಯಾಮಿ ನಾಮನಿರ್ದೇಶನವನ್ನು ಪಡೆದುಕೊಂಡಿದ್ದಾರೆ. ಈ ನಾಮನಿರ್ದೇಶನದ ಕುರಿತಂತೆ ರೆಕಾರ್ಡಿಂಗ್ ಅಕಾಡೆಮಿಯ ಸಿಇಒ ಹಾರ್ವೆ ಮೇಸನ್ ಜೂನಿಯರ್ ಅವರು ಘೋಷಣೆ ಮಾಡಿದ್ದಾರೆ. ಕಳೆದ 2015ರಲ್ಲಿ ರಿಕಿ ಕೇಜ್ ಅವರ “ವಿಂಡ್ಸ್ ಆಫ್ ಸಂಸಾರ” ಎಂಬ ಆಲ್ಬಂಗೆ ಗ್ರ್ಯಾಮಿ ಪ್ರಶಸ್ತಿ ಲಭಿಸಿತ್ತು. ಮಹಾತ್ಮ ಗಾಂಧಿ ಮತ್ತು ನೆಲ್ಸನ್ ಮಂಡೇಲಾ ಅವರ ಆದರ್ಶಗಳನ್ನು ಆಧರಿಸಿ, ‘ವಿಂಡ್ಸ್ ಆಫ್ ಸಂಸಾರ’ ಆಲ್ಬಂ ಬಂದು ಅದು ಯಶಸ್ವಿಯಾಗಿತ್ತು. ಇದರೊಂದಿಗೆ ಯುಎಸ್‌ನ ಬಿಲ್‌ಬೋರ್ಡ್ ನ್ಯೂ ಏಜ್ ಆಲ್ಬಮ್‌ಗಳ ಚಾರ್ಟ್‌ನಲ್ಲಿ ಮೊದಲ ಸ್ಥಾನದಲ್ಲಿತ್ತು. ಇದು ಭಾರತೀಯ ಮೂಲದ ವ್ಯಕ್ತಿಗೆ ಮೊದಲನೆ ಪ್ರಶಸ್ತಿ ಎಂಬುದು ವಿಶೇಷವಾಗಿತ್ತು. ರಿಕಿ ಗ್ರ್ಯಾಮಿ ಪ್ರಶಸ್ತಿ ಗೆದ್ದ ಭಾರತದ ಅತ್ಯಂತ ಕಿರಿಯ ವ್ಯಕ್ತಿ ಮತ್ತು 4 ನೇ ಭಾರತೀಯ. 5-ಬಾರಿ ಗ್ರ್ಯಾಮಿ ಪ್ರಶಸ್ತಿ ವಿಜೇತರಾಗಿರುವ ಸ್ಟೀವರ್ಟ್ ಕೋಪ್ಲ್ಯಾಂಡ್ ಅವರು ಪೌರಾಣಿಕ ಬ್ರಿಟಿಷ್ ರಾಕ್ ಗ್ರೂಪ್‌ನ ‘ದಿ ಪೋಲಿಸ್’ ಸ್ಥಾಪಕ ಮತ್ತು ಡ್ರಮ್ಮರ್ ಆಗಿದ್ದಾರೆ.

ಪ್ರಪಂಚದಾದ್ಯಂತದ ಕಲಾವಿದರನ್ನು ಒಳಗೊಂಡಿರುವ ಪ್ರಸ್ತುತ ಗ್ರ್ಯಾಮಿ ನಾಮನಿರ್ದೇಶಿತ ಸಂಗೀತ ಆಲ್ಬಂ ‘ಡಿವೈನ್ ಟೈಡ್ಸ್’ ನಮ್ಮ ನೈಸರ್ಗಿಕ ಪ್ರಪಂಚದ ವೈಭವ ಮತ್ತು ಜಾತಿಗಳ ಸ್ಥಿತಿ ಸ್ಥಾಪಕತ್ವಕ್ಕೆ ಗೌರವವಾಗಿದೆ. ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಈ ಆಲ್ಬಂ 9 ಹಾಡುಗಳು ಮತ್ತು 8 ಸಂಗೀತ ವೀಡಿಯೊಗಳನ್ನು ಒಳಗೊಂಡಿದೆ, ಇದನ್ನು ಭಾರತೀಯ ಹಿಮಾಲಯದ ಸೊಗಸಾದ ಸೌಂದರ್ಯದಿಂದ ಸ್ಪೇನ್‌ನ ಹಿಮಾವೃತ ಕಾಡುಗಳವರೆಗೆ ವಿಶ್ವದಾದ್ಯಂತ ಚಿತ್ರೀಕರಿಸಲಾಗಿದೆ. ‘ಡಿವೈನ್ ಟೈಡ್ಸ್’ ಈಗಾಗಲೇ ಪ್ರಪಂಚದಾದ್ಯಂತದ ವಿವಿಧ ಉತ್ಸವಗಳಲ್ಲಿ ಹಲವಾರು ಪ್ರಶಸ್ತಿಗಳನ್ನು ಗೆದ್ದಿದೆ. ದಕ್ಷಿಣ ಭಾರತದ ಪ್ರಮುಖ ರೆಕಾರ್ಡ್ ಲೇಬಲ್ ಆದ ಲಹರಿ ಮ್ಯೂಸಿಕ್‌ನಿಂದ ಸಂಗೀತ ವೀಡಿಯೊಗಳನ್ನು ಪ್ರತ್ಯೇಕವಾಗಿ ಬಿಡುಗಡೆ ಮಾಡಲಾಗಿದೆ. 64 ನೇ ವಾರ್ಷಿಕ ಗ್ರ್ಯಾಮಿ ಪ್ರಶಸ್ತಿ ಸಮಾರಂಭ ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್‌ನಲ್ಲಿ ಜನವರಿ 31, 2022 ರಂದು ನಡೆಯಲಿದೆ. ಈ ಸಮಾರಂಭದಲ್ಲಿ ವಿಜೇತರನ್ನು ಘೋಷಿಸಲಾಗುವುದು.

Categories
ಸಿನಿ ಸುದ್ದಿ

ಅಪ್ಪು ಕಂಡ ಕನಸಿದು… ಗಂಧದ ಗುಡಿ!

ಪುನೀತ್‌ ರಾಜಕುಮಾರ್‌ ಅವರ ಕನಸಿನ ಪಯಣವಿದು. ಇದುವರೆಗೂ ಕಂಡಿರದ ನೈಜ ಘಟನೆಗಳನ್ನು ಆಧರಿಸಿದ ಸಿನಿಮಾ ಅನುಭವ ಅದು. ನಮ್ಮ ನೆಲದ ಘನತೆಯನ್ನು ಮೆರೆಸುವ ಕಥನವೇ ಗಂಧದ ಗುಡಿ…

ಹೌದು, ಅಪ್ಪು ಅವರು “ಗಂಧದ ಗುಡಿ” ಎಂಬ ಅಪರೂಪ ಎನಿಸುವ ಹೊಸ ಜಗತ್ತಿನ ಒಡಲಾಳವನ್ನು ಬೆರಗುಗಣ್ಣಿನಿಂದ ವೀಕ್ಷಿಸಿ, ಅದನ್ನು ತಮ್ಮದೇ ಆದಂತಹ ಶೈಲಿಯಲ್ಲಿ ವಿಶ್ಲೇಷಿಸಿದ ಚಿತ್ರಣವಿದು. ಈಗ “ಗಂಧದ ಗುಡಿ”ಯ ಟೈಟಲ್‌ ಟೀಸರ್‌ ಬಿಡುಗಡೆಯಾಗಿದೆ.

ಅಶ್ವಿನಿ ಪುನೀತ್‌ ರಾಜಕುಮಾರ್‌ ಅವರು ಇದನ್ನು ನಿರ್ಮಿಸಿದ್ದಾರೆ. ಅಮೋಘ ವರ್ಷ ಅವರ ನಿರ್ದೇಶನದಲ್ಲಿ ಮೂಡಿ ಬಂದಿರುವ ಚಿತ್ರಣವಿದು. ಈಗಾಗಲೇ ಗಂಧದ ಗುಡಿ ಟೈಟಲ್ ಟೀಸರ್‌ ‌ಪಿಆರ್‌ಕೆ ಚಾನೆಲ್‌ನಲ್ಲಿ ರಿಲೀಸ್‌ ಆಗಿದ್ದು, ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.

Categories
ಸಿನಿ ಸುದ್ದಿ

ಗಂಧದಗುಡಿಗೆ `ಶರಪಂಜರ’ ಶಿವರಾಮಣ್ಣರ ಕೊಡುಗೆ ಅಪಾರ !

ಕನ್ನಡ ಚಿತ್ರರಂಗದ ಮತ್ತೊಂದು ಹಿರಿಯ ಕೊಂಡಿ ಕಳಚಿದೆ. ಅಪ್ಪುನಾ ಕಳೆದುಕೊಂಡು ಒಂದು ತಿಂಗಳು ಕಳೆಯುವಷ್ಟರಲ್ಲಿ ಹಿರಿಯ ನಟ ಶಿವರಾಮಣ್ಣರ ಸಾವಾಗಿದ್ದು ಸ್ಯಾಂಡಲ್‌ವುಡ್‌ಗೆ ಆಘಾತ ತಂದೊಡ್ಡಿದೆ. ಶಿವರಾಮಣ್ಣರಿಗೆ ವಯಸ್ಸಾಗಿತ್ತು ನಿಜ ಆದರೆ ಕಲೆ ಮೇಲೆ ಅವರಿಗಿದ್ದ ಪ್ರೀತಿ ಮತ್ತು ಭಕ್ತಿ, ಜೀವನದ ಮೇಲೆ ಅವರಿಗಿದ್ದ ಹುಮ್ಮಸ್ಸು ಮತ್ತು ಉತ್ಸಾಹ ಮಾತ್ರ ಕಿಂಚಿತ್ತೂ ಕಡಿಮೆಯಾಗಿರಲಿಲ್ಲ. ರಾಜ್‌ಕುಮಾರ್-ಕಲ್ಯಾಣ್‌ಕುಮಾರ್-ಉದಯ್ ಕುಮಾರ್ ಅವ್ರಂಥ ದಿಗ್ಗಜರಿಂದ ಹಿಡಿದು ಇತ್ತೀಚಿನ ಎಲ್ಲಾ ಸೂಪರ್‌ಸ್ಟಾರ್‌ಗಳ ಜೊತೆಗೆ ಹೊಸ ಕಲಾವಿದರ ಜೊತೆಗೆ ತೆರೆಹಂಚಿಕೊಂಡಿದ್ದ ಶಿವರಾಮ್ ಅವರು ಶಿವರಾಮಣ್ಣ ಅಂತನೇ ಜನಪ್ರಿಯತೆ ಗಳಿಸಿಕೊಂಡಿದ್ದರು. ಬರೋಬ್ಬರಿ ೬ ದಶಕಗಳ ಕಾಲ ಕನ್ನಡ ಚಿತ್ರರಂಗದಲ್ಲಿ ಸಕ್ರಿಯಗೊಂಡಿದ್ದ ಶಿವರಾಮಣ್ಣ, ಹೀರೋ ಪಾತ್ರದಿಂದ ಹಿಡಿದು, ಸಹಾಯಕ ಪಾತ್ರ, ಕಾಮಿಡಿ ಕ್ಯಾರೆಕ್ಟರ್, ಪೋಷಕ ಪಾತ್ರ ಹೀಗೆ ಎಲ್ಲದಕ್ಕೂ ತಮ್ಮನ್ನು ತಾವು ತೊಡಗಿಸಿಕೊಂಡು ಕಲಾಸರಸ್ವತಿಯ ಸೇವೆ ಮಾಡುತ್ತಾ ಕನ್ನಡಿಗರನ್ನು ಮನರಂಜಿಸುತ್ತಾ ಬಂದಿದ್ದಾರೆ.

ಬೆರತ ಜೀವ'ಇವರ ಮೊದಲ ಸಿನಿಮಾ.ಕಲ್ಯಾಣ್‌ಕುಮಾರ್ ಹೀರೋ ಆಗಿದ್ದರು. ಬಿ.ಸರೋಜಾದೇವಿ ಹಾಗೂ ಜಯಂತಿ ಈ ಚಿತ್ರದ ನಾಯಕಿಯರಾಗಿದ್ದರು. ಇವರುಗಳೊಟ್ಟಿಗೆ ಸ್ಕ್ರೀನ್ ಶೇರ್ ಮಾಡುವುದರ ಜೊತೆಗೆ ಸಹ ನಿರ್ಮಾಪಕನಾಗಿ ಬಣ್ಣದ ಲೋಕದಲ್ಲಿ ಪಯಣ ಆರಂಭಿಸಿದ ಶಿವರಾಮ್ ಅವರು ಹಿಂತಿರುಗಿ ನೋಡಿದ್ದೇ ಇಲ್ಲ.ಮುಖಕ್ಕೆ ಬಣ್ಣ ಹಚ್ಚುವ ಮೊದಲು ಕ್ಯಾಮೆರಾ ಅಸಿಸ್ಟೆಂಟ್ ಆಗಿದ್ದರು. ೧೯೫೮ರಿಂದ ೧೯೬೫ರವರೆಗೆ ಸಹಾಯಕ ನಿರ್ದೇಶಕರಾಗಿ ಚಿತ್ರರಂಗದಲ್ಲಿ ಸಕ್ರಿಯಗೊಂಡಿದ್ದರು.ಅದ್ಯಾವಾಗ ನಿರ್ದೇಶಕ ಸೀತರಾಮ ಶಾಸ್ತ್ರಿಯವರು ‘ಬೆರತ ಜೀವ’ದಲ್ಲಿ ಶಿವರಾಮಣ್ಣಂಗೆ ಪಾರ್ಟ್ ಮಾಡಿಸಿದ್ರೋ ಫಿನಿಶ್ ಅಲ್ಲಿಂದ ೨೦೨೧ರವರೆಗೆ ಕನ್ನಡ ಚಿತ್ರಕ್ಕಾಗಿ ದುಡಿಯುತ್ತಲೇ ಇದ್ದಾರೆ. ಕೆ.ಎಸ್.ಎಲ್ ಸ್ವಾಮಿ, ಗೀತಪ್ರಿಯ, ಸಂಗೀತಂ ಶ್ರೀನಿವಾಸ್ ರಾವ್, ಪುಟ್ಟಣ್ಣ ಕಣಗಾಲ್‌ರಂತಹ ದಿಗ್ಗಜ ನಿರ್ದೇಶಕರುಗಳೊಟ್ಟಿಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದಾರೆ. ೧೯೭೦ರಿಂದ ಹಿಡಿದು ೨೦೨೧ರ ತನಕ ಬಹುತೇಕ ನಿರ್ದೇಶಕರುಗಳ ಕನಸಿನ ಚಿತ್ರಕ್ಕೆ ಜೀವತುಂಬಿ ಅಭಿನಯಿಸಿದ್ದಾರೆ.

ಹೌದು, ಶರಪಂಜರ-ನಾಗರಹಾವು-ಶುಭಮಂಗಳ ಚಿತ್ರದಲ್ಲಿನ ಶಿವರಾಮ್ ಅವರ ಅಭಿನಯಕ್ಕೆ ಸರಿಸಾಟಿ ಮತ್ಯಾರು? ಪುಟ್ಟಣ್ಣ ಕಣಗಾಲ್ ಅವರು ನಿರ್ದೇಶನ ಮಾಡಿದ್ದ ಈ ಚಿತ್ರಗಳು ಈ ಕಾಲಕ್ಕೂ ಎವರ್‌ಗ್ರೀನ್ ಸಿನಿಮಾ ಪಟ್ಟಿಯಲ್ಲಿ ಮೊದಲು ಬರುತ್ತವೆ. ಇಂತಹ ಚಿತ್ರಗಳಲ್ಲಿ ಪಾರ್ಟ್ ಆಗಿದ್ದ ಶಿವರಾಮಣ್ಣನ್ನ ಕಳೆದುಕೊಂಡು ಕನ್ನಡ ಚಿತ್ರರಂಗ ಮಾತ್ರವಲ್ಲ ಇಡೀ ಕರುನಾಡೇ ಕಂಬನಿ ಮಿಡುಯುತ್ತಿದೆ. ಆಪ್ತಮಿತ್ರ ಹಾಗೂ ಹುಚ್ಚ ಸಿನಿಮಾದ ಶಿವರಾಮಣ್ಣರ ಪಾತ್ರಗಳು ಕಣ್ಮುಂದೆ ಬರುತ್ತಿವೆ. ಗಂಭೀರ ಪಾತ್ರಕ್ಕೂ ಹಾಸ್ಯಕ್ಕೂ ಜೈ ಎನ್ನುವ ಶಿವರಾಮ್ ಅವರು, ಗುರುಶಿಷ್ಯರು-ಹೊಸಬೆಳಕು-ಚಲಿಸುವ ಮೋಡಗಳು ಚಿತ್ರದಲ್ಲಿ ಕಾಮಿಕ್ ಪಾತ್ರಕ್ಕೆ ಬಣ್ಣ ಹಚ್ಚಿ ಚಿತ್ರಪ್ರೇಮಿಗಳನ್ನು ಹುಚ್ಚೆಬ್ಬಿಸಿದ್ದರು. `ಡ್ರೈವರ್ ಹನುಮಂತು’ ಚಿತ್ರದಲ್ಲಿ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದರು. ವಿಷ್ಣುದಾದ ಹಾಗೂ ರೆಬೆಲ್‌ಸ್ಟಾರ್ ಗೆಸ್ಟ್ ಆಗಿ ಡ್ರೈವರ್ ಹನುಮಂತುಗೆ ಸಪೋರ್ಟ್ ಮಾಡಿದರು. ಕಮರ್ಷಿಯಲಿ ಈ ಸಿನಿಮಾ ಹಿಟ್ ಆಗದೇ ಹೋದರು ಪ್ರೇಕ್ಷಕರ ಮನಸ್ಸಲಿ ಉಳಿಯಿತು.

ಹೆಸರಾಂತ ಸಿನಿಮಾಟೋಗ್ರಫರ್ ಬೊಮ್ಮನ್. ಡಿ. ಇರಾನಿ ಯವರ ಬಳಿ ಅಸಿಸ್ಟೆಂಟ್ ಕ್ಯಾಮೆರಮೆನ್ ಆಗಿ ಬಣ್ಣದ ಲೋಕದ ಜೊತೆ ನಂಟು ಬೆಸೆದುಕೊಂಡ ಶಿವರಾಮಣ್ಣ, ಸಹಾಯಕ ನಿರ್ದೇಶಕರಾಗಿ, ನಟರಾಗಿ, ನಿರ್ದೇಶಕರಾಗಿ ಜೊತೆಗೆ ನಿರ್ಮಾಪಕರಾಗಿಯೂ ಗುರ್ತಿಸಿಕೊಂಡರು. ಸಹೋದರ ರಾಮನಾಥನ್ ಜೊತೆ ಸೇರಿ ಕನ್ನಡ ಹಾಗೂ ಹಿಂದಿ ಚಿತ್ರಗಳನ್ನು ನಿರ್ಮಿಸಿದ್ದರು. ‘ರಾಶಿ ಬ್ರದರ್ಸ್'ಹೆಸರಿನಲ್ಲಿ ಪ್ರೊಡಕ್ಷನ್ ಹೌಸ್ ಶುರು ಮಾಡಿ ಅದರ ಅಡಿಯಲ್ಲಿ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಾ ಹೋದರು. ಗೆಜ್ಜೆಪೂಜೆ,ಉಪಾಸನೆ,ನಾನೊಬ್ಬ ಕಳ್ಳ,ಡ್ರೈವರ್ ಹನುಮಂತು,ಧರ್ಮದುರೈ, ಬಹಳ ಚೆನ್ನಾಗಿದೆ ಸೇರಿದಂತೆ ಹಲವು ಸೂಪರ್‌ಹಿಟ್ ಚಿತ್ರಗಳಿಗೆ ಬಂಡವಾಳ ಸುರಿದು ಗೆಲ್ಲಿಸಿದ ಖ್ಯಾತಿ ಶಿವರಾಮಣ್ಣರ ಬ್ಯಾನರ್‌ಗೆ ಸಲ್ಲುತ್ತೆ. ಗಂಧದಗುಡಿ ಕಟ್ಟಿ ಬೆಳೆಸಿದ ಅಣ್ಣಾವ್ರಿಗೆ ‘ಹೃದಯ ಸಂಗಮ’ ಎನ್ನುವ ಸಿನಿಮಾ ನಿರ್ದೇಶನ ಮಾಡುವ ಅದೃಷ್ಟ ಶಿವರಾಮಣ್ಣರಿಗೆ ಸಿಕ್ಕಿತ್ತು. ಅಮಿತಾಬ್ ಬಚ್ಚನ್-ಕಮಲ್‌ಹಾಸನ್-ರಜನಿಕಾಂತ್ ಹೀಗೆ ಭಾರತೀಯ ಚಿತ್ರರಂಗದ ದಂತಕತೆಗಳು ಒಟ್ಟಿಗೆ ಅಭಿನಯಿಸಿದ್ದ `ಗೆರಫ್ತಾರ್’ ಚಿತ್ರವನ್ನು ಶಿವರಾಮಣ್ಣ ಹಾಗೂ ಸಹೋದರ ಎಸ್. ರಾಮನಾಥನ್ ಸೇರಿ ನಿರ್ಮಾಣ ಮಾಡಿದ್ದರು. ಹೀಗೆ ಬಣ್ಣದ ಲೋಕಕ್ಕೆ ತಮ್ಮದೇ ಆದ ಸೇವೆ ಸಲ್ಲಿಸಿದ್ದಾರೆ. 84ನೇ ವಯಸ್ಸಲ್ಲೂ ಇನ್ನೂ ಚಿತ್ರರಂಗದಲ್ಲಿ ಸಕ್ರಿಯಗೊಂಡಿದ್ದರು. ಇಂತಿಪ್ಪ ಹಿರಿಯ ನಟ ಇನ್ನಿಲ್ಲ ಎನ್ನುವುದೇ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟ. ಸರಿಸುಮಾರು ೨೭೦ಕ್ಕೂ ಹೆಚ್ಚು ಚಿತ್ರಗಳಿಗೆ ಬಣ್ಣ ಹಚ್ಚಿದ ಶಿವರಾಮಣ್ಣ 2010-2011 ಸಾಲಿನಲ್ಲಿ ಡಾ.ರಾಜ್‌ಕುಮಾರ್ ಜೀವಮಾನ ಸಾಧನೆ ಪ್ರಶಸ್ತಿಗೆ ಪಾತ್ರರಾಗಿದ್ದರು. 2013ರಲ್ಲಿ ಪದ್ಮಭೂಷಣ ಡಾ. ಬಿ ಸರೋಜಾ ದೇವಿ ಪ್ರಶಸ್ತಿ ಪಡೆದುಕೊಂಡಿದ್ದರು.

ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಮರಿ ಟೈಗರ್ ಹೊಸ ಹೆಜ್ಜೆ! ಟೈಗರ್ ಟಾಕೀಸ್ ನಿರ್ಮಾಣ ಸಂಸ್ಥೆ ಶುರು ಮಾಡಿದ ವಿನೋದ್ ಪ್ರಭಾಕರ್…

ಕನ್ನಡ ಚಿತ್ರರಂಗದಲ್ಲಿ ಟೈಗರ್ ಪ್ರಭಾಕರ್ ಹೆಸರು ಅಮರ. ದೈಹಿಕವಾಗಿ ಅವರಿಲ್ಲ. ಆದರೆ, ಇಂದಿಗೂ ಅವರು ತಮ್ಮ ಪ್ರೀತಿಯ ಅಭಿಮಾನಿಗಳ ಮನದಲ್ಲಿ ಅಚ್ಚಳಿಯದೆ ಉಳಿದಿದ್ದಾರೆ. ಟೈಗರ್ ಪ್ರಭಾಕರ್ ಅವರ ಬಗ್ಗೆ ಬರೀ ಒನ್ ಲೈನ್ ಸ್ಟೋರಿ ಹೇಳಲಾಗದು. ಅದೊಂದು ಮಹಾಗ್ರಂಥವೇ ಸರಿ. ಒಬ್ಬ ಫೈಟರ್ ಆಗಿ, ಖಳನಟರಾಗಿ, ನಾಯಕ ನಟರಾಗಿ, ನಿರ್ದೇಶಕರಾಗಿಯೂ ತೆರೆ ಮೇಲೆ ರಾರಾಜಿಸಿದವರು. ಅವರ ಅನೇಕ ಸಿನಿಮಾಗಳು ಇಂದಿಗೂ ಮಾದರಿ.
ಈಗ ಹೊಸ ಸುದ್ದಿ ಅಂದರೆ, ಟೈಗರ್ ಪ್ರಭಾಕರ್ ಅವರ ಪುತ್ರ ಸಕ್ಸಸ್ ಫುಲ್ ಹೀರೋ ವಿನೋದ್ ಪ್ರಭಾಕರ್ ಅವರು ಹೊಸ ಪ್ರೊಡಕ್ಷನ್ ಹೌಸ್ ಶುರುಮಾಡಿದ್ದಾರೆ
.


ಹೌದು, ಅವರ ಹುಟ್ಟುಹಬ್ಬದ ಮರುದಿನ ಅವರು ಇದನ್ನು ಘೋಷಿಸಿಕೊಂಡಿದ್ದಾರೆ.
ಅಂದಹಾಗೆ, ಅವರ ಹೊಸ ನಿರ್ಮಾಣ ಸಂಸ್ಥೆಗೆ ‘ಟೈಗರ್ ಟಾಕೀಸ್’ ಎಂದು ಹೆಸರಿಟ್ಟಿದ್ದಾರೆ. ಈ ಕುರಿತು ಸ್ವತಃ ವಿನೋದ್ ಪ್ರಭಾಕರ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಈ ವಿಷಯ ಹಂಚಿಕೊಂಡಿದ್ದಾರೆ.
ಅವರು ಹೇಳಿಕೊಂಡ ಮಾತುಗಳಿವು…


‘ಜೈ ಕರ್ನಾಟಕ ಸಮಸ್ತ ಕರುನಾಡ ಜನತೆಗೆ ನಿಮ್ಮ ವಿನೋದ್ ಪ್ರಭಾಕರ್ ಮಾಡುವ ನಮಸ್ಕಾರಗಳು.
ಇಷ್ಟು ವರ್ಷಗಳಿಂದ ನಿಮ್ಮೆಲ್ಲರ ಆಶೀರ್ವಾದದಿಂದ ಕನ್ನಡ ಚಿತ್ರರಂಗದಲ್ಲಿ ನಾನು ನಾಯಕ ನಟನಾಗಿ ನಿಮ್ಮನ್ನೆಲ್ಲ ಮನರಂಜಿಸಿದ್ದೇನೆ. ಮತ್ತೊಮ್ಮೆ ನಿಮ್ಮೆಲ್ಲರ ಆಶೀರ್ವಾದದಿಂದ ನನ್ನ ತಂದೆ ಟೈಗರ್ ಪ್ರಭಾಕರ್ ಅವರ ಹೆಸರಲ್ಲಿ ‘ ಟೈಗರ್ ಟಾಕೀಸ್’ ಎಂಬ ನಿರ್ಮಾಣ ಸಂಸ್ಥೆಯನ್ನು ನಿಮ್ಮ ಮುಂದೆ ಅರ್ಪಿಸುತ್ತಿದ್ದೇನೆ.

ನಮ್ಮ ಸಂಸ್ಥೆಯಡಿಲ್ಲಿ ಬರುವ ಎಲ್ಲಾ ಯೋಜನೆಗಳಿಗೂ ಇನ್ನು ಮುಂದೆಯೂ ಸಹ ನಿಮ್ಮೆಲ್ಲರ ಪ್ರೋತ್ಸಾಹ, ಬೆಂಬಲ, ಆಶೀರ್ವಾದ ಹೀಗೆ ಇರಲಿ ಎಂದು ತಮ್ಮಲ್ಲಿ ನನ್ನ ಸವಿನಯ ಪ್ರಾರ್ಥನೆ’ ಎಂದು ವಿನೋದ್ ಪ್ರಭಾಕರ್ ಬರೆದುಕೊಂಡಿದ್ದಾರೆ.


ಅದೇನೆ ಇರಲಿ, ವಿನೋದ್ ಪ್ರಭಾಕರ್ ಹಂತ ಹಂತವಾಗಿ ಬೆಳೆದು ತಂದೆಗೆ ತಕ್ಕ ಮಗನಾಗಿ, ಅವರಂತೆ ಕನ್ನಡ ಚಿತ್ರರಂಗದಲ್ಲಿ ನೆಲೆ ಕಂಡುಕೊಡಿರುವ ಅವರು ಈಗ ಮತ್ತೊಂದು ಹೊಸ ಹೆಜ್ಜೆ ಇಟ್ಟಿದ್ದಾರೆ. ಅವರ ಹೊಸ ಕನಸು ಬಣದಣದ ಲೋಕದಲ್ಲಿ ರಂಗು ತುಂಬಿಕೊಂಡಿರಲಿ. ಅವರ ನಿರ್ಮಾಣ ಸಂಸ್ಥೆಯಡಿ ಸದಭಿರುಚಿಯ ಚಿತ್ರಗಳು ಬರಲಿ ಎಂದು ‘ಸಿನಿಲಹರಿ‘ ಆಶಿಸುತ್ತದೆ.

Categories
ಸಿನಿ ಸುದ್ದಿ

`ಬೆಂಕಿಚೆಂಡಿ’ಗೆ ಸಿಕ್ಕಳು ಬೆಣ್ಣೆಯಂತಹ ಚೆಲುವೆ ! ಧ್ರುವ ‘ಮಾರ್ಟಿನ್’ ಹೀರೋಯಿನ್ ಇವ್ರೇ ನೋಡಿ !

ಗಂಧದಗುಡಿಯ ಬೆಂಕಿಚೆಂಡಿಗೆ ಬೆಣ್ಣೆಯಂತಹ ಚೆಲುವೆ ಸಿಕ್ಕಿದ್ದಾಳೆ. ಬಹದ್ದೂರ್ ಗಂಡಿನ ಬಗಲಲ್ಲಿ ನಿಲ್ಲೋದಕ್ಕೆ ಜಿಗಿಜಿಗಿದು ಬಂದಿರುವ ಆಕೆ, ‘Who is martin'ಎಂದು ಪ್ರಶ್ನೆ ಮಾಡಿ ಕೊನೆಗೆ ಆಕ್ಷನ್‌ಪ್ರಿನ್ಸ್ ಪಕ್ಕದಲ್ಲಿ ನಿಂತಿದ್ದಾಳೆ.ಹಾಗಾದ್ರೆ ಯಾರಾಕೆ? ಅದ್ದೂರಿ ಹುಡುಗನಿಗೆ ಜೊತೆಯಾಗುವ ಅವಕಾಶ ಸಿಕ್ಕಿದ್ದೇಗೆ? ‘ಮಾರ್ಟಿನ್’ ಮಹಾನಟಿಯ ಚರಿತ್ರ್ಯೆ ಏನು? ಈ ಕ್ಷಣ ನಿಮ್ಮ ಮುಂದೆ `ಮಾರ್ಟಿನ್ ಹೀರೋಯಿನ್ ಮ್ಯಾಟರ್’ ನೋಡ್‌ಬಿಡಿ

ಅದ್ದೂರಿ ಹುಡುಗನ ‘ಮಾರ್ಟಿನ್'ಚಿತ್ರಕ್ಕೆ ನಾಯಕಿ ಯಾರಾಗ್ತಾರೆ? ಇದೊಂದು ಪ್ರಶ್ನೆ ಇತ್ತೀಚೆಗೆ ಮಿಲಿಯನ್ ಡಾಲರ್ ಸ್ವರೂಪ ಪಡೆದಿತ್ತು.ಆಕ್ಷನ್‌ಪ್ರಿನ್ಸ್ ಗೆ ಜೊತೆಯಾಗುವ ಅದೃಷ್ಟ ಅದ್ಯಾವ ನಟಿಗೆ ಸಿಗುತ್ತೆ? ಅದ್ಯಾರನ್ನು ಚಿತ್ರತಂಡ ಹೀರೋಯಿನ್ನಾಗಿ ಆಯ್ಕೆಮಾಡಿಕೊಳ್ಳುತ್ತೆ? ಎನ್ನುವ ಕೂತೂಹಲ ಧ್ರುವ ಸರ್ಜಾರ ವಿಐಪಿಗಳನ್ನು ಹಾಗೂ ಗಾಂಧಿನಗರದ ಮಂದಿಯನ್ನು ಬಹುವಾಗಿ ಕಾಡಿತ್ತು. ಫೈನಲೀ,ವಿಐಪಿಗಳ ಕೌತುಕಕ್ಕೆ ತೆರೆಬಿದ್ದಿದೆ.ಮಾರ್ಟಿನ್’ ಚಿತ್ರಕ್ಕೆ ನಾಯಕಿ ಸೇರಿಕೊಂಡಿದ್ದು ಆಗಿದೆ.

ಹಾಗಾದ್ರೆ ಯಾರು ಆ ಚೆಲುವೆ? ಈ ಕೂತೂಹಲಕ್ಕೆ ಉತ್ತರ ನಟಿ ವೈಭವಿ ಶಾಂಡಿಲ್ಯ. ಮರಾಠಿ ಹಾಗೂ ತಮಿಳು ಚಿತ್ರಗಳಲ್ಲಿ ಗುರ್ತಿಸಿಕೊಂಡಿರುವ ಈ ನಟಿಗೆ ಇದು ಮೊದಲ ಕನ್ನಡ ಸಿನಿಮಾವೇನಲ್ಲ. ಈ ಹಿಂದೆ ಶರಣ್ ಹಾಗೂ ಚಿಕ್ಕಣ್ಣ ಜೊತೆ ‘ರಾಜ್-ವಿಷ್ಣು' ಹೆಸರಿನ ಸಿನಿಮಾ ಮಾಡಿದ್ದರು.ಅನಂತ್ರ ಭಟ್ರು ಗಣಿ ಜೊತೆ ಗಾಳಿಪಟ ಹಾರ‍್ಸೋಕೆ ಸೆಲೆಕ್ಟ್ ಮಾಡಿಕೊಂಡರು.ಈಗ ಎ.ಪಿ ಅರ್ಜುನ್ ಸಾಹೇಬ್ರು ‘ಮಾರ್ಟಿನ್’ ಚಿತ್ರಕ್ಕೆ ಆಯ್ಕೆ ಮಾಡಿಕೊಂಡಿದ್ದಾರೆ. ಆಕ್ಷನ್‌ಪ್ರಿನ್ಸ್ ಗೆ ಜೋಡಿಯನ್ನಾಗಿಸಿ ಸಾಂಸ್ಕೃತಿಕ ನಗರಿಯಲ್ಲಿ ಶೂಟಿಂಗ್ ಕೂಡ ಶುರು ಹಚ್ಚಿಕೊಂಡಿದ್ದಾರೆ. ಸದ್ಯ, ಮೈಸೂರಿನಲ್ಲಿ ಚಿತ್ರೀಕರಣ ನಡೆಯುತ್ತಿದೆ, ಅಲ್ಲಿ ಧ್ರುವ ಸರ್ಜಾ ಹಾಗೂ ವೈಭವಿ ಕಾಂಬಿನೇಷನ್ ದೃಶ್ಯಗಳ ಶೂಟಿಂಗ್ ಭರದಿಂದ ಸಾಗಿದೆ.

ಕಳೆದ ಎರಡು ದಿನಗಳಿಂದ ಬಹದ್ದೂರ್ ಹುಡುಗ ಹಾಗೂ ನಟಿ ವೈಭವಿ ಜೊತೆಯಾಗಿ ಲುಕ್ ಕೊಟ್ಟಿರುವ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿತ್ತು. ‘ಮಾರ್ಟಿನ್'ಚಿತ್ರದ ನಾಯಕಿ ಇವರೇ ಇರ‍್ಬೋದು ಎನ್ನುವ ಶಂಕೆ ಮೂಡಿತ್ತಾದರೂ ಕೂಡ ಫಿಲ್ಮ್ ಟೀಮ್ ಖಚಿತಪಡಿಸಿರಲಿಲ್ಲ.ಆದರೆ,ಧ್ರುವ ಬಾಸ್ ತಮ್ಮ ಇನ್ಸ್ಟಾಗ್ರಾಮ್ ಸ್ಟೇಟಸ್‌ನಲ್ಲಿ ಶೂಟಿಂಗ್ ಸೆಟ್‌ನ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ.ಇತ್ತ ‘ಮಾರ್ಟಿನ್’ ಅಂಗಳಕ್ಕೆ ಬಂದು ಸೇರಿಕೊಂಡಿರುವ ನಟಿ ವೈಭವಿ ಕೂಡ `Who is martin’ಎಂದು ಕೇಳುತ್ತಾ ಎಕ್ಸ್ ಪ್ರೆಷನ್ ಕೊಟ್ಟಿರುವ ವಿಡಿಯೋ ಝಲಕ್‌ನ ಹಂಚಿಕೊಂಡಿದ್ದಾರೆ. ಅಲ್ಲಿಗೆ, ಬಹದ್ದೂರ್ ಗಂಡಿಗೆ ಬೆಣ್ಣೆಯಂತಹ ಚೆಲುವೆ ಸಿಕ್ಕಹಾಗೇ ಅಲ್ಲವೇ.

ಮಾರ್ಟಿನ್'ಆಕ್ಷನ್‌ಪ್ರಿನ್ಸ್ ಅಭಿನಯದ ಬಹುನಿರೀಕ್ಷೆಯ ಸಿನಿಮಾ.ಅದ್ದೂರಿ ಜೋಡಿ ಮತ್ತೆ ಒಂದಾಗಿರುವ ಕಾರಣಕ್ಕೆ ‘ಮಾರ್ಟಿನ್’ ಸಿನಿಮಾದ ಮೇಲಿರುವ ನಿರೀಕ್ಷೆ ಮುಗಿಲುಮುಟ್ಟಿದೆ. ನಟ ಧ್ರುವ ಸರ್ಜಾ-ನಿರ್ದೇಶಕ ಎ.ಪಿ ಅರ್ಜುನ್ ಕಾಂಬಿನೇಷನ್‌ನ `ಮಾರ್ಟಿನ್’ ಚಿತ್ರ ಹೊಸ ಮೇನಿಯಾ ಸೃಷ್ಟಿಸೋದ್ರಲ್ಲಿ ಡೌಟೇ ಇಲ್ಲ ಎನ್ನುವ ಮಾತು ಕೂಡ ಕೇಳಿರ‍್ತಿದೆ. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ನಿರ್ಮಾಣಗೊಳ್ತಿರೋ ಈ ಚಿತ್ರಕ್ಕೆ ಉದಯ್. ಕೆ.ಮೆಹ್ತಾ ಬಂಡವಾಳ ಹೂಡಿದ್ದಾರೆ. ಐದು ಭಾಷೆಯಲ್ಲಿ ಅದ್ದೂರಿಯಾಗಿಯೇ ಸಿನಿಮಾ ಬರಬೇಕು ಎಂದು ಅನ್ನದಾತರು ಕೋಟಿ ಕೋಟಿ ಹಣ ಹೂಡಿಕೆ ಮಾಡ್ತಿದ್ದಾರೆ. ಚಿತ್ರತಂಡ ಕೂಡ ಆದಷ್ಟು ಬೇಗ ಸಿನಿಮಾ ಮುಗಿಸಬೇಕು, ವರ್ಷದೊಳಗೆ ಸಿನಿಮಾ ರಿಲೀಸ್ ಮಾಡ್ಬೇಕು ಎನ್ನುವ ಉತ್ಸಾಹದಲ್ಲಿ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ.

ವಿಶಾಲಾಕ್ಷಿ, ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಲಾಂಚ್‌ ಆಗಿದೆ “ಬಾಡಿ ಗಾಡ್” ಚಿತ್ರದ ಪವರ್ ಫುಲ್ ಸಾಂಗ್ಸ್‌ – ಕೇಳುಗರ ಮನಕಲುಕುತ್ತಿದೆ ಪವರ್‌ ಸ್ಟಾರ್ ವಾಯ್ಸ್‌ !

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಮ್ಮನಗಲಿ ಒಂದು ತಿಂಗಳೇ ಕಳೆದಿದೆ. ಆದರೂ ದುಃಖ ಮಾಸಿಲ್ಲ. ಅಪ್ಪು ಅವರು “ಬಾಡಿಗಾಡ್” ಚಿತ್ರಕ್ಕಾಗಿ ಹಾಡಿರುವ “ಆರೇಸ ಡನ್ಕನಕ” ಎಂಬ ಹಾಡು ಇತ್ತೀಚೆಗೆ ಬಿಡುಗಡೆಯಾಗಿದೆ. ತುಂಬಾ ಅರ್ಥಗರ್ಭಿತವಾದ ಈ ಹಾಡನ್ನು ಎಸ್ ಕೆ ಎಸ್ ಬರೆದಿದ್ದಾರೆ. ಇತ್ತೀಚೆಗೆ ಈ ಹಾಡನ್ನು ರಾಘವೇಂದ್ರ ರಾಜಕುಮಾರ್ ಬಿಡುಗಡೆ ಮಾಡಿದ್ದಾರೆ.ಇಷ್ಟು ದಿನ ನನ್ನ ತಮ್ಮನಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಿದೆ. ಇಂದು ಗೀತಾಂಜಲಿ ಸಲ್ಲಿಸಿದ್ದೇನೆ. ಅವನು ಇಲ್ಲ ಎಂದು ಕೊರಗುವುದು ಬೇಡ. ಅವನು ಹಾಡಿರುವ ಹಾಡಿನಲ್ಲಿ, ಮಾಡಿರುವ ಕೆಲಸದಲ್ಲಿ ಅವನಿದ್ದಾನೆ. ನಿರ್ದೇಶಕ ಪ್ರಭು ಶ್ರೀನಿವಾಸ್ ನನಗೆ ಮೊದಲಿನಿಂದಲೂ ಪರಿಚಯ. ಅವರ ಈ ಪ್ರಯತ್ನಕ್ಕೆ ಶುಭವಾಗಲಿ ಎಂದು ರಾಘಣ್ಣ ಹಾರೈಸಿದರು.

ಅಪ್ಪು ಸರ್ ಅವರನ್ನು ಭೇಟಿಯಾಗಿ ಈ ಹಾಡನ್ನು ಹಾಡಲು ಕೇಳಿದಾಗ, ಇದು ತುಂಬಾ ಹೈಪಿಚ್ ನಲ್ಲಿ ಹಾಡಬೇಕು. ನೋಡಿ ನನ್ನ ಧ್ವನಿ ಸರಿ ಹೊಂದುತ್ತದೆಯಾ? ಎಂದು ಕೇಳಿದರು. ಸರಿ ಹೊಂದದಿದ್ದಲ್ಲಿ ಬೇರೆ ಅವರ ಬಳಿ ಹಾಡಿಸಿ ಎಂದರು. ಇಲ್ಲ ಈ ಹಾಡನ್ನು ನೀವೇ ಹಾಡಬೇಕು ಎಂದು ಕೇಳಿದಾಗ, ಅವರ ಸ್ಟುಡಿಯೋದಲ್ಲೇ ಈ ಹಾಡು ಹಾಡಿದರು. ನನಗೆ ತಿಳಿದ ಹಾಗೆ ಇದೇ ಅವರು ಹಾಡಿರುವ ಕೊನೆಯ ಗೀತೆ ಅನಿಸುತ್ತದೆ.‌ ಈ ಹಾಡಿನಲ್ಲಿ‌ ಬರುವ ಕೆಲವು ಸಾಲುಗಳು ಪುನೀತ್ ಅವರಿಗೆ ಹತ್ತಿರವಾಗಿದೆ ಎಂದು ಅವರ ಮರಣದ ನಂತರ ತಿಳಿಯುತ್ತಿದೆ.

“ಬಾಡಿ ಗಾಡ್” ತೆರೆಗೆ ಬರಲು ಸಿದ್ದವಾಗಿದ್ದು, ಜನವರಿಯಲ್ಲಿ ತೆರೆಗೆ ತರುತ್ತೇವೆ ಎಂದರು ನಿರ್ದೇಶಕ ಹಾಗೂ ನಿರ್ಮಾಪಕ ಪ್ರಭು ಶ್ರೀನಿವಾಸ್.ನನಗೆ ಅಪ್ಪು ಅವರು ಹಾಡುವ ಹಾಡಿಗೆ ಡ್ಯಾನ್ಸ್ ಮಾಡಬೇಕೆಂದು ಆಸೆಯಿತ್ತು. ಈ ಹಾಡಿನ ಬಗ್ಗೆ ಮಾತನಾಡಲು ನಿರ್ದೇಶಕರೊಂದಿಗೆ ಅಪ್ಪು ಸರ್ ಮನೆಗೆ ಹೋದಾಗ, ಅವರ ಸ್ವಾಗತ ನೋಡಿ ನನಗೆ ಆಶ್ಚರ್ಯವಾಯಿತು.‌ “ಬನ್ನಿ ಮನೋಜ್. ಹೇಗಿದ್ದೀರಿ.‌ ಆರು, ಏಳು ಸರಿ ಶಾಸಕರಾಗಿದ್ದ ಮತ್ತೆ ಉನ್ನತ ಹುದ್ದೆ ಅಲಂಕರಿಸಿದ ಪ್ರಸಿದ್ಧ ವ್ಯಕ್ತಿಯ ಮಗನಾಗಿದ್ದರು‌, ನಿಮ್ಮಲ್ಲಿ ಒಂದು ಚೂರು ಅಹಂ ಇಲ್ಲ” ಎಂದು ಅವರು ಹೇಳಿದ ಮಾತು ಇನ್ನೂ ಕಿವಿಯಲ್ಲೇ ಇದೆ. ಎಂದು ಭಾವುಕರಾದರು ನಾಯಕ ಮನೋಜ್.

ನಾನು ಮೊದಲ ಬಾರಿಗೆ ನಾಯಕಿಯಾಗಿ ಚಿತ್ರರಂಗ ಪ್ರವೇಶಿಸಿದ್ದೇನೆ. ಉತ್ತಮ ಪಾತ್ರ ನೀಡಿದ ನಿರ್ದೇಶಕರಿಗೆ ವಂದನೆಗಳು ಎಂದರು ನಾಯಕಿ‌ ದೀಪಿಕಾ. ಗೀತರಚನೆಕಾರ ಗೌಸ್ ಫಿರ್ ಅವರ ಬಳಿ ಸಹಾಯಕರಾಗಿದ್ದ ಎಸ್ ಕೆ ಎಸ್, ವೆಂಕಟೇಶ್ ಕುಲಕರ್ಣಿ, ಸಂಕಲನಕಾರ ಉಜ್ವಲ್ ಚಂದ್ರ ಹಾಗೂ ನೃತ್ಯ ನಿರ್ದೇಶಕ ರಾಜು ಪತ್ರಿಕಾಗೋಷ್ಠಿಯಲ್ಲಿ ತಮ್ಮ ಕಾರ್ಯದ ಬಗ್ಗೆ ಮಾಹಿತಿ ನೀಡಿದರು. ಪ್ರಭು ಶ್ರೀನಿವಾಸ್ ನಿರ್ದೇಶಿಸಿರುವ ಈ ಚಿತ್ರದ ನಾಯಕನಾಗಿ ಮೊಗ್ಗಿನ‌ ಮನಸ್ಸಿನ ಮನೋಜ್ ನಟಿಸಿದ್ದಾರೆ. ದೀಪಿಕಾ ನಾಯಕಿ.‌ ಮಠ ಗುರುಪ್ರಸಾದ್ ಪ್ರಮುಖಪಾತ್ರದಲ್ಲಿ ನಟಿಸಿದ್ದಾರೆ. ಪದ್ಮಜಾರಾವ್, ನಿರಂಜನ್, ಅಶ್ವಿನ್ ಹಾಸನ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಕರಣ್ ಬಿ ಕೃಪ ಈ ಚಿತ್ರಕ್ಕೆ ಸಂಗೀತ ನೀಡಿರುವ ಈ ಚಿತ್ರಕ್ಕೆ ವೇಲ್ ಮುರುಗನ್ ಅವರ ಛಾಯಾಗ್ರಹಣವಿದೆ.

  • ಎಂಟರ್‌ ಟೈನ್‌ ಮೆಂಟ್‌ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಯೋಗರಾಜ್‌ ಭಟ್ಟರ ʼಪದವಿ ಪೂರ್ವʼ ಕ್ಕೆ ಸೇರಿದ ನಟಿ ದಿವ್ಯ ಉರುಡುಗ !

ಬಿಗ್‌ ಬಾಸ್‌ ಖ್ಯಾತಿಯ ನಟಿ ದಿವ್ಯ ಉರುಡುಗ ಮತ್ತೆ ನಟನೆಯಲ್ಲಿ ಬ್ಯುಸಿ ಆಗುತ್ತಿದ್ದಾರೆ. ಇದೀಗ ಯೋಗರಾಜ್ ಸಿನಿಮಾಸ್ ಹಾಗು ರವಿ ಶಾಮನೂರ್ ಫಿಲಂಸ್‌ರವರ ಜಂಟಿ ನಿರ್ಮಾಣದಲ್ಲಿ ಹರಿಪ್ರಸಾದ್ ಜಯಣ್ಣ ನಿರ್ದೇಶಿಸುತ್ತಿರುವ ಚಿತ್ರ “ಪದವಿಪೂರ್ವ”ಕ್ಕೆ ಈಗ ದಿವ್ಯ ಉರುಡುಗ ಎಂಟ್ರಿ ಆಗಿರುವ ಹೊಸ ಸುದ್ದಿ ರಿವೀಲ್‌ ಆಗಿದೆ. ಅಂದ ಹಾಗೆ, ಈಗಾಗಲೇ ಪದವಿ ಪೂರ್ವ ಚಿತ್ರ ಬಹುತೇಕ ಚಿತ್ರೀಕರಣ ಮುಗಿಸಿರುವುದು ನಿಮಗೂ ಗೊತ್ತಿದೆ. ಅಂದ್ಮೇಲೆ ಈ ಚಿತ್ರದಲ್ಲಿ ಅವರೇನು ಪಾತ್ರ ಅಂತ ನಿಮಗೂ ಕುತೂಹಲ ಇರಬಹುದು. ಅದು ವಾಸ್ತವವೂ ಹೌದು. ದಿವ್ಯ ಉರುಡುಗ ಪದವಿ ಪೂರ್ವಕ್ಕೆ ಬಂದರೂ ನಾಯಕಿ ಆಗಿ ಅಲ್ಲ ಎನ್ನುವುದು ನಿಮಗೂ ಗೊತ್ತಿರುವ ಹಾಗೆಯೇ ಅವರಲ್ಲಿ ಅತಿಥಿ ಪಾತ್ರವೊಂದನ್ನು ನಿರ್ವಹಿಸಿದ್ದಾರಂತೆ. ಭಟ್ಟರ ತಂಡ ಸೇರಿದ್ದಕ್ಕೆ ಅವರಿಗೂ ಸಿಕ್ಕಾಪಟ್ಟೆ ಖುಷಿ ಆಗಿದೆಯಂತೆ.

ʼ ಭಟ್ಟರ ಸಿನಿಮಾ ಅಂದ್ರೆ ಹೆಚ್ಚೇನು ಹೇಳಬೇಕಿಲ್ಲ, ಅಲ್ಲಿ ವಿಶೇಷತೆ ಇದ್ದೇ ಇರುತ್ತದೆ. ಇಲ್ಲಿ ಅವರು ನಿರ್ದೇಶನ ಮಾಡುತ್ತಿಲ್ಲ ಅಂದ್ರು ನಿರ್ಮಾಣ ಅವರದ್ದೇ ಆಗಿದೆ. ಹಾಗಾಗಿ ಅವರ ಸಿನಿಮಾಗಳ ಮೇಲೆ ಪ್ರೇಕ್ಷಕರಿಗೂ ಸಾಕಷ್ಟು ನಿರೀಕ್ಷೆ ಇದ್ದೇ ಇರುತ್ತದೆ. ನಂಗೆ ಅಂತಹ ಕುತೂಹಲ ಇತ್ತು. ಈಗ ಅವರದ್ದೇ ನಿರ್ಮಾಣದ ಸಿನಿಮಾದಲ್ಲಿ ಅಭಿನಯಿಸುವ ಅವಕಾಶ ಹುಡುಕಿಕೊಂಡು ಬಂದಿದೆ. ಖುಷಿ ಆಗಿದೆ ಅಂತ ನಟಿ ದಿವ್ಯ ಉರುಡುಗ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಇನ್ನು ದಿವ್ಯ ನಟಿಸಲಿರುವ ಭಾಗದ ಚಿತ್ರೀಕರಣವು ಬೆಂಗಳೂರು ಹಾಗು ಮಂಗಳೂರಿನ ಸುತ್ತಮುತ್ತ ಶೀಘ್ರದಲ್ಲೇ ಶುರು ಆಗಲಿದ್ದು, ಚಿತ್ರದ ಐದನೇ ಹಂತದ ಚಿತ್ರೀಕರಣಕ್ಕೆ ಚಿತ್ರತಂಡ ಸಕಲ ಸಿದ್ಧತೆ ನಡೆಸಿದೆ. ಇದು ಹರಿಪ್ರಸಾದ್‌ ಜಯಣ್ಣ ನಿರ್ದೇಶನದ ಚಿತ್ರ. ಚಿತ್ರದ ನಾಲ್ಕನೇ ಹಂತದ ಚಿತ್ರೀಕರಣವು ಕಳೆದ ತಿಂಗಳಷ್ಷೇ ಪೂರ್ಣಗೊಂಡಿದ್ದು, ಬೆಂಗಳೂರಿನ ವಿವಿಧ ಭಾಗಗಳಲ್ಲಿ ನಡೆಸಿದ ಚಿತ್ರೀಕರಣದ ದೃಶ್ಯಗಳು ಅತ್ಯಂತ ಸೊಗಸಾಗಿ ಮೂಡಿಬಂದಿದೆಯಂತೆ.

ಹೊಸಬರ ದಂಡೇ ಇರುವ ಈ ಚಿತ್ರಕ್ಕೆ ಯುವ ಪ್ರತಿಭೆ ಪೃಥ್ವಿ ಶಾಮನೂರು ನಾಯಕನಾದರೆ, ಅಂಜಲಿ ಅನೀಶ್ ಮತ್ತು ಯಶ ಶಿವಕುಮಾರ್ ನಾಯಕಿಯಾಗಿ ಅಭಿನಯಿಸಿದ್ದಾರೆ. ಅರ್ಜುನ್ ಜನ್ಯ ಸಂಯೋಜಿಸಿರುವ ರಾಗಗಳಿಗೆ ಕನ್ನಡ ಶೋತೃಗಳ ವಿಕಟಕವಿ ಯೋಗರಾಜ್ ಭಟ್ ಸಾಹಿತ್ಯ ರಚಿಸಿದರೆ, ಖ್ಯಾತ ಛಾಯಾಗ್ರಾಹಕ ಸಂತೋಷ್ ರೈ ಪಾತಾಜೆ ಛಾಯಾಗ್ರಹಣ ಹಾಗೂ ಮಧು ತುಂಬಕೆರೆಯ ಸಂಕಲನದ ಕೈಚಳಕ ಚಿತ್ರವನ್ನು ಮತ್ತಷ್ಟು ಶ್ರೀಮಂತಗೊಳಿಸಿದೆ ಎನ್ನುವುದು ಚಿತ್ರ ತಂಡದ ಮಾತು

  • ಎಂಟರ್‌ ಟೈನ್‌ ಮೆಂಟ್‌ ಸಿನಿಲಹರಿ
error: Content is protected !!