ಕನ್ನಡ ಚಿತ್ರರಂಗದ ಮತ್ತೊಂದು ಹಿರಿಯ ಕೊಂಡಿ ಕಳಚಿದೆ. ಅಪ್ಪುನಾ ಕಳೆದುಕೊಂಡು ಒಂದು ತಿಂಗಳು ಕಳೆಯುವಷ್ಟರಲ್ಲಿ ಹಿರಿಯ ನಟ ಶಿವರಾಮಣ್ಣರ ಸಾವಾಗಿದ್ದು ಸ್ಯಾಂಡಲ್‌ವುಡ್‌ಗೆ ಆಘಾತ ತಂದೊಡ್ಡಿದೆ. ಶಿವರಾಮಣ್ಣರಿಗೆ ವಯಸ್ಸಾಗಿತ್ತು ನಿಜ ಆದರೆ ಕಲೆ ಮೇಲೆ ಅವರಿಗಿದ್ದ ಪ್ರೀತಿ ಮತ್ತು ಭಕ್ತಿ, ಜೀವನದ ಮೇಲೆ ಅವರಿಗಿದ್ದ ಹುಮ್ಮಸ್ಸು ಮತ್ತು ಉತ್ಸಾಹ ಮಾತ್ರ ಕಿಂಚಿತ್ತೂ ಕಡಿಮೆಯಾಗಿರಲಿಲ್ಲ. ರಾಜ್‌ಕುಮಾರ್-ಕಲ್ಯಾಣ್‌ಕುಮಾರ್-ಉದಯ್ ಕುಮಾರ್ ಅವ್ರಂಥ ದಿಗ್ಗಜರಿಂದ ಹಿಡಿದು ಇತ್ತೀಚಿನ ಎಲ್ಲಾ ಸೂಪರ್‌ಸ್ಟಾರ್‌ಗಳ ಜೊತೆಗೆ ಹೊಸ ಕಲಾವಿದರ ಜೊತೆಗೆ ತೆರೆಹಂಚಿಕೊಂಡಿದ್ದ ಶಿವರಾಮ್ ಅವರು ಶಿವರಾಮಣ್ಣ ಅಂತನೇ ಜನಪ್ರಿಯತೆ ಗಳಿಸಿಕೊಂಡಿದ್ದರು. ಬರೋಬ್ಬರಿ ೬ ದಶಕಗಳ ಕಾಲ ಕನ್ನಡ ಚಿತ್ರರಂಗದಲ್ಲಿ ಸಕ್ರಿಯಗೊಂಡಿದ್ದ ಶಿವರಾಮಣ್ಣ, ಹೀರೋ ಪಾತ್ರದಿಂದ ಹಿಡಿದು, ಸಹಾಯಕ ಪಾತ್ರ, ಕಾಮಿಡಿ ಕ್ಯಾರೆಕ್ಟರ್, ಪೋಷಕ ಪಾತ್ರ ಹೀಗೆ ಎಲ್ಲದಕ್ಕೂ ತಮ್ಮನ್ನು ತಾವು ತೊಡಗಿಸಿಕೊಂಡು ಕಲಾಸರಸ್ವತಿಯ ಸೇವೆ ಮಾಡುತ್ತಾ ಕನ್ನಡಿಗರನ್ನು ಮನರಂಜಿಸುತ್ತಾ ಬಂದಿದ್ದಾರೆ.
‘ಬೆರತ ಜೀವ'ಇವರ ಮೊದಲ ಸಿನಿಮಾ.ಕಲ್ಯಾಣ್‌ಕುಮಾರ್ ಹೀರೋ ಆಗಿದ್ದರು. ಬಿ.ಸರೋಜಾದೇವಿ ಹಾಗೂ ಜಯಂತಿ ಈ ಚಿತ್ರದ ನಾಯಕಿಯರಾಗಿದ್ದರು. ಇವರುಗಳೊಟ್ಟಿಗೆ ಸ್ಕ್ರೀನ್ ಶೇರ್ ಮಾಡುವುದರ ಜೊತೆಗೆ ಸಹ ನಿರ್ಮಾಪಕನಾಗಿ ಬಣ್ಣದ ಲೋಕದಲ್ಲಿ ಪಯಣ ಆರಂಭಿಸಿದ ಶಿವರಾಮ್ ಅವರು ಹಿಂತಿರುಗಿ ನೋಡಿದ್ದೇ ಇಲ್ಲ.ಮುಖಕ್ಕೆ ಬಣ್ಣ ಹಚ್ಚುವ ಮೊದಲು ಕ್ಯಾಮೆರಾ ಅಸಿಸ್ಟೆಂಟ್ ಆಗಿದ್ದರು. ೧೯೫೮ರಿಂದ ೧೯೬೫ರವರೆಗೆ ಸಹಾಯಕ ನಿರ್ದೇಶಕರಾಗಿ ಚಿತ್ರರಂಗದಲ್ಲಿ ಸಕ್ರಿಯಗೊಂಡಿದ್ದರು.ಅದ್ಯಾವಾಗ ನಿರ್ದೇಶಕ ಸೀತರಾಮ ಶಾಸ್ತ್ರಿಯವರು
‘ಬೆರತ ಜೀವ’ದಲ್ಲಿ ಶಿವರಾಮಣ್ಣಂಗೆ ಪಾರ್ಟ್ ಮಾಡಿಸಿದ್ರೋ ಫಿನಿಶ್ ಅಲ್ಲಿಂದ ೨೦೨೧ರವರೆಗೆ ಕನ್ನಡ ಚಿತ್ರಕ್ಕಾಗಿ ದುಡಿಯುತ್ತಲೇ ಇದ್ದಾರೆ. ಕೆ.ಎಸ್.ಎಲ್ ಸ್ವಾಮಿ, ಗೀತಪ್ರಿಯ, ಸಂಗೀತಂ ಶ್ರೀನಿವಾಸ್ ರಾವ್, ಪುಟ್ಟಣ್ಣ ಕಣಗಾಲ್‌ರಂತಹ ದಿಗ್ಗಜ ನಿರ್ದೇಶಕರುಗಳೊಟ್ಟಿಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದಾರೆ. ೧೯೭೦ರಿಂದ ಹಿಡಿದು ೨೦೨೧ರ ತನಕ ಬಹುತೇಕ ನಿರ್ದೇಶಕರುಗಳ ಕನಸಿನ ಚಿತ್ರಕ್ಕೆ ಜೀವತುಂಬಿ ಅಭಿನಯಿಸಿದ್ದಾರೆ.
ಹೌದು, ಶರಪಂಜರ-ನಾಗರಹಾವು-ಶುಭಮಂಗಳ ಚಿತ್ರದಲ್ಲಿನ ಶಿವರಾಮ್ ಅವರ ಅಭಿನಯಕ್ಕೆ ಸರಿಸಾಟಿ ಮತ್ಯಾರು? ಪುಟ್ಟಣ್ಣ ಕಣಗಾಲ್ ಅವರು ನಿರ್ದೇಶನ ಮಾಡಿದ್ದ ಈ ಚಿತ್ರಗಳು ಈ ಕಾಲಕ್ಕೂ ಎವರ್‌ಗ್ರೀನ್ ಸಿನಿಮಾ ಪಟ್ಟಿಯಲ್ಲಿ ಮೊದಲು ಬರುತ್ತವೆ. ಇಂತಹ ಚಿತ್ರಗಳಲ್ಲಿ ಪಾರ್ಟ್ ಆಗಿದ್ದ ಶಿವರಾಮಣ್ಣನ್ನ ಕಳೆದುಕೊಂಡು ಕನ್ನಡ ಚಿತ್ರರಂಗ ಮಾತ್ರವಲ್ಲ ಇಡೀ ಕರುನಾಡೇ ಕಂಬನಿ ಮಿಡುಯುತ್ತಿದೆ. ಆಪ್ತಮಿತ್ರ ಹಾಗೂ ಹುಚ್ಚ ಸಿನಿಮಾದ ಶಿವರಾಮಣ್ಣರ ಪಾತ್ರಗಳು ಕಣ್ಮುಂದೆ ಬರುತ್ತಿವೆ. ಗಂಭೀರ ಪಾತ್ರಕ್ಕೂ ಹಾಸ್ಯಕ್ಕೂ ಜೈ ಎನ್ನುವ ಶಿವರಾಮ್ ಅವರು, ಗುರುಶಿಷ್ಯರು-ಹೊಸಬೆಳಕು-ಚಲಿಸುವ ಮೋಡಗಳು ಚಿತ್ರದಲ್ಲಿ ಕಾಮಿಕ್ ಪಾತ್ರಕ್ಕೆ ಬಣ್ಣ ಹಚ್ಚಿ ಚಿತ್ರಪ್ರೇಮಿಗಳನ್ನು ಹುಚ್ಚೆಬ್ಬಿಸಿದ್ದರು. `ಡ್ರೈವರ್ ಹನುಮಂತು’ ಚಿತ್ರದಲ್ಲಿ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದರು. ವಿಷ್ಣುದಾದ ಹಾಗೂ ರೆಬೆಲ್‌ಸ್ಟಾರ್ ಗೆಸ್ಟ್ ಆಗಿ ಡ್ರೈವರ್ ಹನುಮಂತುಗೆ ಸಪೋರ್ಟ್ ಮಾಡಿದರು. ಕಮರ್ಷಿಯಲಿ ಈ ಸಿನಿಮಾ ಹಿಟ್ ಆಗದೇ ಹೋದರು ಪ್ರೇಕ್ಷಕರ ಮನಸ್ಸಲಿ ಉಳಿಯಿತು.
ಹೆಸರಾಂತ ಸಿನಿಮಾಟೋಗ್ರಫರ್ ಬೊಮ್ಮನ್. ಡಿ. ಇರಾನಿ ಯವರ ಬಳಿ ಅಸಿಸ್ಟೆಂಟ್ ಕ್ಯಾಮೆರಮೆನ್ ಆಗಿ ಬಣ್ಣದ ಲೋಕದ ಜೊತೆ ನಂಟು ಬೆಸೆದುಕೊಂಡ ಶಿವರಾಮಣ್ಣ, ಸಹಾಯಕ ನಿರ್ದೇಶಕರಾಗಿ, ನಟರಾಗಿ, ನಿರ್ದೇಶಕರಾಗಿ ಜೊತೆಗೆ ನಿರ್ಮಾಪಕರಾಗಿಯೂ ಗುರ್ತಿಸಿಕೊಂಡರು. ಸಹೋದರ ರಾಮನಾಥನ್ ಜೊತೆ ಸೇರಿ ಕನ್ನಡ ಹಾಗೂ ಹಿಂದಿ ಚಿತ್ರಗಳನ್ನು ನಿರ್ಮಿಸಿದ್ದರು. ‘ರಾಶಿ ಬ್ರದರ್ಸ್'ಹೆಸರಿನಲ್ಲಿ ಪ್ರೊಡಕ್ಷನ್ ಹೌಸ್ ಶುರು ಮಾಡಿ ಅದರ ಅಡಿಯಲ್ಲಿ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಾ ಹೋದರು. ಗೆಜ್ಜೆಪೂಜೆ,ಉಪಾಸನೆ,ನಾನೊಬ್ಬ ಕಳ್ಳ,ಡ್ರೈವರ್ ಹನುಮಂತು,ಧರ್ಮದುರೈ, ಬಹಳ ಚೆನ್ನಾಗಿದೆ ಸೇರಿದಂತೆ ಹಲವು ಸೂಪರ್‌ಹಿಟ್ ಚಿತ್ರಗಳಿಗೆ ಬಂಡವಾಳ ಸುರಿದು ಗೆಲ್ಲಿಸಿದ ಖ್ಯಾತಿ ಶಿವರಾಮಣ್ಣರ ಬ್ಯಾನರ್‌ಗೆ ಸಲ್ಲುತ್ತೆ. ಗಂಧದಗುಡಿ ಕಟ್ಟಿ ಬೆಳೆಸಿದ ಅಣ್ಣಾವ್ರಿಗೆ
‘ಹೃದಯ ಸಂಗಮ’ ಎನ್ನುವ ಸಿನಿಮಾ ನಿರ್ದೇಶನ ಮಾಡುವ ಅದೃಷ್ಟ ಶಿವರಾಮಣ್ಣರಿಗೆ ಸಿಕ್ಕಿತ್ತು. ಅಮಿತಾಬ್ ಬಚ್ಚನ್-ಕಮಲ್‌ಹಾಸನ್-ರಜನಿಕಾಂತ್ ಹೀಗೆ ಭಾರತೀಯ ಚಿತ್ರರಂಗದ ದಂತಕತೆಗಳು ಒಟ್ಟಿಗೆ ಅಭಿನಯಿಸಿದ್ದ `ಗೆರಫ್ತಾರ್’ ಚಿತ್ರವನ್ನು ಶಿವರಾಮಣ್ಣ ಹಾಗೂ ಸಹೋದರ ಎಸ್. ರಾಮನಾಥನ್ ಸೇರಿ ನಿರ್ಮಾಣ ಮಾಡಿದ್ದರು. ಹೀಗೆ ಬಣ್ಣದ ಲೋಕಕ್ಕೆ ತಮ್ಮದೇ ಆದ ಸೇವೆ ಸಲ್ಲಿಸಿದ್ದಾರೆ. 84ನೇ ವಯಸ್ಸಲ್ಲೂ ಇನ್ನೂ ಚಿತ್ರರಂಗದಲ್ಲಿ ಸಕ್ರಿಯಗೊಂಡಿದ್ದರು. ಇಂತಿಪ್ಪ ಹಿರಿಯ ನಟ ಇನ್ನಿಲ್ಲ ಎನ್ನುವುದೇ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟ. ಸರಿಸುಮಾರು ೨೭೦ಕ್ಕೂ ಹೆಚ್ಚು ಚಿತ್ರಗಳಿಗೆ ಬಣ್ಣ ಹಚ್ಚಿದ ಶಿವರಾಮಣ್ಣ 2010-2011 ಸಾಲಿನಲ್ಲಿ ಡಾ.ರಾಜ್‌ಕುಮಾರ್ ಜೀವಮಾನ ಸಾಧನೆ ಪ್ರಶಸ್ತಿಗೆ ಪಾತ್ರರಾಗಿದ್ದರು. 2013ರಲ್ಲಿ ಪದ್ಮಭೂಷಣ ಡಾ. ಬಿ ಸರೋಜಾ ದೇವಿ ಪ್ರಶಸ್ತಿ ಪಡೆದುಕೊಂಡಿದ್ದರು.
ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ