ಜಾನ್ ಜಾನಿ ಜನಾರ್ದನ, ಕಾಲೇಜ್ ಕುಮಾರ್ ದಂತಹ ಯಶಸ್ವಿ ಚಿತ್ರಗಳ ನಿರ್ಮಾಪಕ ಎಲ್. ಪದ್ಮನಾಭ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಈ ಸಂದರ್ಭದಲ್ಲಿ ಪದ್ಮನಾಭ ಅವರು ತನ್ವಿ ಮೀಡಿಯಾ ಕಾರ್ಪ್ ಸಂಸ್ಥೆ ಲಾಂಛನದಲ್ಲಿ ನಿರ್ಮಿಸುತ್ತಿರುವ ನೂತನ ಚಿತ್ರದ ಶೀರ್ಷಿಕೆ ಬಿಡುಗಡೆಯಾಗಿದೆ. ಬಹುಭಾಷಾ ನಟ ಕಿಶೋರ್ ನಾಯಕರಾಗಿ ಅಭಿನಯಿಸುತ್ತಿರುವ ಈ ಚಿತ್ರಕ್ಕೆ “ಸೆಲ್ವ” ಎಂದು ಹೆಸರಿಡಲಾಗಿದೆ.
ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ನಿರ್ಮಾಣವಾಗಿತ್ತಿರುವ ಪ್ಯಾನ್ ಇಂಡಿಯಾ ಸಿನಿಮಾ ಇದು. ನಂದು ಮಲೇಲ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಚಿತ್ರದ ಫಸ್ಟ್ ಲುಕ್ ಸದ್ಯದಲ್ಲೇ ಅನಾವರಣವಾಗಲಿದೆ. ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಸಂಗೀತ ನಿರ್ದೇಶನ, ಸಜಾದ್ ಕಾಕ್ಕು ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ ಹಾಗೂ ಮೋಹನ್ ಬಿ ಕೆರೆ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿರಲಿದೆ.
ಕನ್ನಡದಲ್ಲಿ “ಕೊರಗಜ್ಜ” ಸಿನಿಮಾ ಆಗುತ್ತಿರುವ ಹಿನ್ನೆಲೆ ಯಲ್ಲೇ ಹಿರಿಯ ನಟ ಶಿವರಾಜ್ ಕುಮಾರ್ ಅವರು ಮಂಗಳೂರು ಸಮೀಪದ ಕುತ್ತಾರುವಿನ ಕೊರಗಜ್ಜ ದೈವ ಸ್ಥಾನಕ್ಕೆ ಭೇಟಿ ನೀಡಿ ಚಕ್ಕುಲಿ-ವೀಳ್ಯ ಸಮರ್ಪಿಸಿರುವುದು “ಕರಿ ಹೈದ ಕರಿ ಅಜ್ಜ” ಚಿತ್ರ ತಂಡಕ್ಕೆ ಇನ್ನಿಲ್ಲದ ಖುಷಿ ನೀಡಿದೆ. ಅಂತಾರಾಷ್ಟ್ರೀಯ ಖ್ಯಾತಿಯ ನಟ ಕಬೀರ್ ಬೇಡಿ ಜೊತೆ ಕನ್ನಡದ ಖ್ಯಾತ ಕಲಾವಿದರಾದ ಭವ್ಯ ಮತ್ತು ಶ್ರುತಿ ಕೂಡಾ ಅಭಿನಯಿಸುತ್ತಿರುವ ಈ ಚಿತ್ರದಲ್ಲಿ ಭರತ್ ಸೂರ್ಯ ಎನ್ನುವ ಹೊಸ ನಟನ ಪರಿಚಯವಾಗುತ್ತಿದೆ.
ತಮ್ಮ ಚಿತ್ರದ ಬಹುತೇಕ ಚಿತ್ರೀಕರಣ ಮುಗಿದು , ಪೋಸ್ಟ್ ಪ್ರೊಡಕ್ಷನ್ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಿರುವ ಇದೇ ಸಮಯದಲ್ಲಿ ಶಿವರಾಜ್ ಕುಮಾರ್ ರವರಂತಹ ಹಿರಿಯ ನಟರು ಕೊರಗಜ್ಜನ ದೈವಸ್ಥಾನಕ್ಕೆ ಭೇಟಿ ನೀಡಿರುವುದು ನಮ್ಮ ಚಿತ್ರಕ್ಕೆ ಆಶಿರ್ವಾದ ರೀತಿಯಲ್ಲಿ ಪರಿಣಮಿಸಲಿದೆ ಎಂದು ನಿರ್ದೇಶಕ ಸುಧೀರ್ ಅತ್ತಾವರ್ ತಿಳಿಸಿದ್ದಾರೆ.
ನಿರ್ದೇಶಕ ಸುಧೀರ್ ಅತ್ತಾವರ್
ಚಿತ್ರೀಕರಣ ಸಂಪೂರ್ಣ ಮುಗಿದಿರುವ ಈ ಸಮಯದಲ್ಲಿ ಕೊರಗಜ್ಜನ ದೈವಸ್ಥಾನದ ದರ್ಶನ ಪಡೆದಿರುವ ನಮ್ಮ ಹಿರಿಯ ಕಲಾವಿದ ಶಿವರಾಜ್ ಕುಮಾರ್ ರವರ ಪ್ರಾರ್ಥನೆಯಿಂದಾಗಿ ಖಂಡಿತಾ ನಮ್ಮ ಚಿತ್ರ ಯಶಸ್ವಿಗೊಳ್ಳಲ್ಲಿದೆ ಎಂದು ನಿರ್ಮಾಪಕ ತ್ರಿವಿಕ್ರಮ ಸಪಲ್ಯ ತಿಳಿಸಿದ್ದಾರೆ.
ಕನ್ನಡದಲ್ಲಿ ಈಗಾಗಲೇ ಹಲವಾರು ಪ್ರಯೋಗಾತ್ಮಕ ಸಿನಿಮಾಗಳು ಬಂದಿವೆ. ಆ ಸಾಲಿಗೆ ‘ಲಾಕ್’ ಸಿನಿಮಾ ಕೂಡ ಒಂದು. ಇಂಥದ್ದೊಂದು ಪ್ರಯೋಗಕ್ಕೆ ಇಳಿದಿರೋದು ನಟ, ನಿರ್ದೇಶಕ, ನಿರ್ಮಾಪಕ, ಸಂಕಲನಕಾರ ನಾಗೇಂದ್ರ ಅರಸ್. ಇದೊಂದು ವಿಭಿನ್ನ ಕಥೆಯ ಚಿತ್ರ. ಅವರದೇ ನಿರ್ದೇಶನ, ನಟನೆ, ನಿರ್ಮಾಣ, ಸಂಕಲನ ಇರುವ ಅಪರೂಪದ ಸಿನಿಮಾ. ಪ್ರೇಕ್ಷಕರ ಮನವನ್ನು ‘ಲಾಕ್’ ಮಾಡೋಕೆ ಸಜ್ಜಾಗಿದ್ದಾರೆ ನಾಗೇಂದ್ರ ಅರಸ್. ಆ ಕುರಿತ ಒಂದಷ್ಟು ಮಾಹಿತಿ
ಹೌದು, ನಾಗೇಂದ್ರ ಅರಸ್, ಸದಾ ಏನಾದರೊಂದು ಸಿನಿಮಾ ಚಟುವಟಿಕೆಯಲ್ಲಿರುವ ಅಪರೂಪದ ನಟ ಕಮ್ ನಿರ್ದೇಶಕ. ಬಹುಶಃ ಕನ್ನಡ ಚಿತ್ರರಂಗದಲ್ಲಿ ಯಾವಾಗಲೂ ಉತ್ಸಾಹದಿಂದಲೇ ಚಿತ್ರ ತಂಡದ ಜೊತೆ ಕೆಲಸ ಮಾಡುವ ಮತ್ತು ಅವರನ್ನು ಪ್ರೋತ್ಸಾಹಿಸುವ ನಟ ಅಂದರೆ ತಪ್ಪಿಲ್ಲ. ಹೊಸಬರಿರಲಿ, ಹಳಬರೇ ಇರಲಿ ಅವರ ಜೊತೆ ನಗುತ್ತಲೇ ಕೆಲಸ ಮಾಡಿ ಮನಸ್ಸಿಗೆ ಹತ್ತಿರವಾಗುವ ನಟ.
ನಟನೆ, ನಿರ್ದೇಶನ, ಸಂಕಲನ, ನಿರ್ಮಾಣ, ಜೊತೆಗೆ ಮುಖಪುಟದಲ್ಲೂ ಸದಾ ತಮ್ಮ ‘ಫೇಸ್’ ವ್ಯಾಲ್ಯು ಹೆಚ್ಚಿಸಿಕೊಳ್ಳುತ್ತಲೇ, ಒಳ್ಳೆಯ ವ್ಯಕ್ತಿತ್ವ ರೂಪಿಸಿಕೊಂಡ ನಟ ಕಮ್ ನಿರ್ದೇಶಕ. ಈಗ ಅವರೊಂದು ಸ್ಪೆಷಲ್ ಕಥೆ ಹೆಣೆದು, ನಿರ್ದೇಶನದ ಜೊತೆ ಅವರೊಬ್ಬರೇ ನಟಿಸಿರುವ ಲಾಕ್ ಇನ್ನೇನು ಪ್ರೇಕ್ಷಕರ ಮುಂದೆ ಓಪನ್ ಆಗೋಕೆ ಸಜ್ಜಾಗುತ್ತಿದೆ.
ಈ ಲಾಕ್ ಅಂದಾಕ್ಷಣ, ನೆನಪಾಗೋದೇ ಲಾಕ್ಡೌನ್. ಕೊರೊನಾ ತಂದಿಟ್ಟ ಅವಾಂತರವೆ ಈ ‘ಲಾಕ್’. ಈ ಸಮಯದಲ್ಲೇ ಹೊಳೆದಂತಹ ಕಥೆಯೊಂದು ಈಗ ಸಿನಿಮಾ ರೂಪ ತಾಳಿದೆ ಅನ್ನೋದು ವಿಶೇಷ.
ಇದೊಂದು ಪ್ರಯೋಗಾತ್ಮಕ ಚಿತ್ರವಷ್ಟೇ ಅಲ್ಲ, ಒಂದೇ ಒಂದು ಪಾತ್ರ ಇರುವ ಅಪರೂಪದ ಸೈಕಲಾಜಿಕಲ್ ಥ್ರಿಲ್ಲರ್ ಸಿನಿಮಾ. ಆ ಕಾರಣಕ್ಕೆ ‘ಲಾಕ್’ ವಿಶೇಷವೆನಿಸುತ್ತೆ. ಸಿನಿಮಾಗೆ ಈಗಾಗಲೇ ಸೆನ್ಸಾರ್ ಅಗಿದೆ. ಸೆನ್ಸಾರ್ ಮಂಡಳಿ ಯು/ಎ ಸರ್ಟಿಫಿಕೇಟ್ ನೀಡಿದೆ.
ಒಂದೇ ಮನೆ, ಒಂದೇ ಪಾತ್ರ!
ಈಗಾಗಲೇ ಸಿನಿಮಾದ ಟ್ರೇಲರ್ ರಿಲೀಸ್ ಆಗಿದ್ದು, ಸಾಕಷ್ಟು ಮೆಚ್ಚುಗೆ ಪಡೆದುಕೊಂಡಿದೆ. “ಲಾಕ್” ಮೊದಲೇ ಹೇಳಿದಂತೆ, ಪ್ರಯೋಗಾತ್ಮಕ ಸಿನಿಮಾ. ನಾಗೇಂದ್ರ ಅರಸ್ ಅವರೇ ಸ್ವತಃ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು, ನಟಿಸಿ, ನಿರ್ಮಾಣ ಮಾಡಿ ಸಂಕಲನದ ಜೊತೆ ನಿರ್ದೇಶನ ಮಾಡಿದ್ದಾರೆ.
ಹಾಗಾದರೆ ಈ ಸಿನಿಮಾದ ಒನ್ ಲೈನ್ ಏನು? ಇದಕ್ಕೆ ಉತ್ತರ, ಇದೊಂದು ಸೈಕಲಾಜಿಕಲ್ ಥ್ರಿಲ್ಲರ್ ಕಥೆ. ಇಡೀ ದೇಶವೇ ಲಾಕ್ಡೌನ್ ಆದಾಗ ಮನೆಯೊಂದರಲ್ಲಿ ನಡೆಯೋ ಘಟನೆಯೊಂದು ವಿಚಿತ್ರ ತಿರುವು ಪಡೆದುಕೊಳ್ಳುತ್ತೆ. ಆಮೇಲೆ ಏನೆಲ್ಲಾ ಆಗುತ್ತೆ ಅನ್ನೋದು ಕಥೆ.
ಭರವಸೆಯ ಲಾಕ್
ಸಾಮಾನ್ಯವಾಗಿ, ಕಮರ್ಷಿಯಲ್ ಕಥೆಗಳನ್ನು ಹೇಗೆ ಬೇಕಾದರೂ ಚಿತ್ರೀಕರಿಸಬಹುದು. ಆದರೆ, ಒಂದೇ ಪಾತ್ರ ಇಟ್ಟುಕೊಂಡು, ಒಂದೇ ಮನೆಯಲ್ಲಿ ಕುತೂಹಲ ಎನಿಸುವ ರೀತಿ ಕಟ್ಟಿಕೊಡುವುದಿದೆಯಲ್ಲ ಅದು ಚಾಲೆಂಜ್. ಅಂತಹ ಚಾಲೆಂಜಿಂಗ್ ಸಿನಿಮಾ ಮಾಡಿರುವ ನಾಗೇಂದ್ರ ಅರಸ್, ಇದರ ಮೇಲೆ ಭರವಸೆ ಇಟ್ಟುಕೊಂಡಿದ್ದಾರೆ.
ತೆರೆ ಮೇಲೆ ಅವರೊಬ್ಬರೇ ರಾರಾಜಿಸಬಹುದು. ಆದರೆ, ತೆರೆಯ ಹಿಂದೆ ಒಂದಷ್ಟು ಒಳ್ಳೆಯ ಮನಸ್ಸುಗಳು ಸಾಥ್ ಕೊಟ್ಟಿವೆ. ಸತೀಶ್ ಬಾಬು ಸಂಗೀತ ನೀಡಿದರೆ, ಎಂ.ಬಿ.ಅಳ್ಳಿಕಟ್ಟಿ ಕ್ಯಾಮೆರಾ ಹಿಡಿದಿದ್ದಾರೆ. ಅದೇನೆ ಇರಲಿ, ನಾಗೇಂದ್ರ ಅರಸ್ ಅವರ ಈ ಪ್ರಯತ್ನಕ್ಕೆ ಗೆಲುವು ಸಿಗಲಿ ಅನ್ನೋದೇ ‘ ಸಿನಿ ಲಹರಿ‘ ಆಶಯ.
‘ತರ್ಲೆ ವಿಲೇಜ್’, ‘ಪರಸಂಗ’, ‘ದೊಡ್ಡಹಟ್ಟಿ ಬೋರೇಗೌಡ’ ಸಿನಿಮಾ ಮೂಲಕ ಗುರುತಿಸಿಕೊಂಡಿರುವ ನಿರ್ದೇಶಕ ಕೆ.ಎಂ.ರಘು ಹೊಸ ಸಬ್ಜೆಕ್ಟ್ ಹೊತ್ತು ಬಂದಿದ್ದಾರೆ. ಈ ಬಾರಿ ಯೂತ್ ಫುಲ್ ಸಬ್ಜೆಕ್ಟ್ ಕಥೆ ಹೇಳಲು ರೆಡಿಯಾಗಿದ್ದಾರೆ. ಡಿಸೆಂಬರ್ 14ರಂದು ಸಿನಿಮಾ ಸೆಟ್ಟೇರಲಿದ್ದು, ಚಿತ್ರಕ್ಕೆ ‘ಜಸ್ಟ್ ಪಾಸ್’ ಎಂದು ಶೀರ್ಷಿಕೆ ಇಡಲಾಗಿದೆ.
ಕಾಲೇಜ್ ಯೂತ್ ಸಬ್ಜೆಕ್ಟ್ ಒಳಗೊಂಡ ಚಿತ್ರದಲ್ಲಿ ಇರುವುದೆಲ್ಲವ ಬಿಟ್ಟು, ಗಜಾನನ ಗ್ಯಾಂಗ್ ಖ್ಯಾತಿಯ ನಟ ಶ್ರೀ ನಾಯಕ ನಟನಾಗಿ ನಟಿಸುತ್ತಿದ್ದಾರೆ. ಸ್ಕ್ರಿಪ್ಟ್ ಕೆಲಸಗಳೆಲ್ಲ ಮುಗಿಸಿ ಶೂಟಿಂಗ್ ಹೊರಡಲು ಸಿನಿಮಾ ತಂಡ ಸಕಲ ತಯಾರಿ ನಡೆಸಿಕೊಂಡಿದೆ. ಚಿತ್ರಕ್ಕೆ ಹೀರೋಯಿನ್ ಹುಡುಕಾಟಲ್ಲಿದ್ದ ಚಿತ್ರತಂಡಕ್ಕೆ ಹೊಸ ಪ್ರತಿಭೆ ಪ್ರಣತಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಡಾನ್ಸ್ ಕರ್ನಾಟಕ ಡಾನ್ಸ್, ಫ್ಯಾಮಿಲಿ ವಾರ್ ಸೀಸನ್ 2 ರನ್ನರ್ ಅಪ್ ಆಗಿರುವ ಪ್ರಣತಿ ಬ್ರಹ್ಮಗಂಟು ಸೀರಿಯಲ್ ನಲ್ಲೂ ನಟಿಸಿದ್ದಾರೆ. ಈಗ ಜಸ್ಟ್ ಪಾಸ್ ಮೂಲಕ ನಾಯಕಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ.
ಕೆ.ಎಂ ರಘು. ನಿರ್ದೇಶನದ ದೊಡ್ಡಹಟ್ಟಿ ಬೋರೇಗೌಡ ಸಿನಿಮಾ ಬೆಂಗಳೂರು ಇಂಟರ್ ನ್ಯಾಷನಲ್ ಫಿಲಂ ಫೆಸ್ಟಿವಲ್ ನಲ್ಲಿ ಕನ್ನಡದ ಅತ್ಯುತ್ತಮ ಮೊದಲ ಸಿನಿಮಾ ಎಂಬ ಪ್ರಶಸ್ತಿ ಪಡೆದುಕೊಂಡು ಗಮನ ಸೆಳೆದಿತ್ತು. ಮೊಲದ ಬಾರಿ ನಿರ್ದೇಶಕರು ಯೂತ್ ಫುಲ್ ಸಬ್ಜೆಕ್ಟ್ ಕೈಗೆತ್ತಿಕೊಂಡಿದ್ದು, ಇದೇ ಡಿಸೆಂಬರ್ 14ರಂದು ಸಿನಿಮಾ ಸೆಟ್ಟೇರಲಿದೆ.
ರಾಯ್ಸ್ ಎಂಟಟೈನ್ಮೆಂಟ್ ಬ್ಯಾನರ್ ನಡಿ ಶಶಿಧರ್.ಕೆ.ವಿ, ಶ್ರೀಧರ್ ಕೆ.ವಿ ಜಸ್ಟ್ ಪಾಸ್ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ರಂಗಾಯಣ ರಘು, ಸಾಧುಕೋಕಿಲ, ಸುಚೇಂದ್ರ ಪ್ರಸಾದ್, ನವೀನ್ ಡಿ ಪಡಿಕ್ಕಲ್, ಪ್ರಕಾಶ್ ತುಮಿನಾಡ್, ದೀಪಕ್ ರೈ, ಅರ್ಪಿತಾ, ಚಂದು ಶ್ರೀ, ಯಶಿಕಾ, ವಿಶ್ವಾಸ್, ನಿಖಿಲ್, ಗಗನ್, ಅಭಿ ಚಿತ್ರದ ತಾರಾಬಳಗದಲ್ಲಿದ್ದಾರೆ. ಕೆ.ಎಂ.ಪ್ರಕಾಶ್ ಸಂಕಲನ, ಹರ್ಷವರ್ಧನ್ ರಾಜ್ ಸಂಗೀತ, ವೀನಸ್ ನಾಗರಾಜ್ ಮೂರ್ತಿ ಛಾಯಾಗ್ರಾಹಣ ಚಿತ್ರಕ್ಕಿದೆ.
ನಟ ಅಂಬರೀಶ್ ಹಾಗು ಸುಮಲತಾ ಅವರ ಪುತ್ರ ಅಭಿಷೇಕ್ ಅಂಬರೀಶ್ ಮತ್ತು ಅವಿವಾ ಬಿದ್ದಪ್ಪ ಅವರ ನಿಶ್ಚಿತಾರ್ಥ ಭಾನುವಾರ ನೆರವೇರಿದೆ.
ಇತ್ತೀಚೆಗೆ ಅಭಿಷೇಕ್ ಅಂಬರೀಶ್ ಮತ್ತು ಅವಿವಾ ಬಿದ್ದಪ್ಪ ಅವರು ಮದುವೆ ಆಗಲಿದ್ದಾರೆ ಎಂಬ ಸುದ್ದಿ ಹರಡಿತ್ತು. ಆದರೆ, ಆ ಸುದ್ದಿಗೆ ಯಾವುದೇ ಸ್ಪಷ್ಟತೆ ಇರಲಿಲ್ಲ. ಈಗ ಅಭಿಷೇಕ್ ಮತ್ತು ಅವಿವಾ ಅವರ ನಿಶ್ಚಿತಾರ್ಥ ನೆರವೇರಿದೆ.
ಅವಿವಾ ಅವರು ಮಾಡೆಲ್ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿರುವ ಪ್ರಸಾದ್ ಬಿದ್ದಪ್ಪ ಅವರ ಪುತ್ರಿ.
ಚಿತ್ರ: ಬಾಂಡ್ ರವಿ ನಿರ್ದೇಶನ: ಪ್ರಜ್ವಲ್ ನಿರ್ಮಾಣ: ನರಸಿಂಹ ಮೂರ್ತಿ ತಾರಾಗಣ: ಪ್ರಮೋದ್, ಕಾಜಲ್ ಕುಂದರ್, ಶೋಭರಾಜ್, ರವಿಕಾಳೆ, ಜೀ ಜೀ, ಪವನ್, ಧರ್ಮ ಇತರರು.
‘ನಾನು ಡಾನ್ ಆಗೋಕೆ ಬಂದಿಲ್ವೋ, ಬ್ರಾಂಡ್ ಆಗೋಕೆ ಬಂದೋನು…’
ಹೀಗೆ ಪಂಚ್ ಡೈಲಾಗ್ ಹೇಳುತ್ತ ಎದುರಾಳಿಗಳಿಗೆ ಒಂದೊಂದೆ ಪಂಚ್ ಕೊಡುವ ಮೂಲಕ ಹೀರೋ ಖಡಕ್ ಎಂಟ್ರಿ ಕೊಟ್ಟು ಖದರ್ ತೋರಿಸುವ ಹೊತ್ತಿಗೆ, ಅವನಾಗಲೇ ಜೈಲೊಳಗೆ ಎಂಟ್ರಿಯಾಗಿರುತ್ತಾನೆ. ಅವನು ಜೈಲಿಗೆ ಬಂದಿದ್ಯಾಕೆ? ಅವನ ಮೇಲೆ ರೌಡಿ ಖೈದಿಗಳು ಅಟ್ಯಾಕ್ ಮಾಡಿದ್ದೇಕೆ? ಅನ್ನೋದು ಸಸ್ಪೆನ್ಸ್. ಇಡೀ ಸಿನಿಮಾ ಮಾಸ್ ಫೀಲಲ್ಲೇ ಸಾಗುತ್ತೆ. ಈ ಬಾಂಡ್ ರವಿ ಯಾರು? ಅವನು ಒಳ್ಳೆಯವನೋ, ಕೆಟ್ಟವನೋ ಅನ್ನೋ ಕುತೂಹಲವಿದ್ದರೆ ಒಮ್ಮೆ ಬಾಂಡ್ ರವಿನ ವಿಚಾರಿಸಿಕೊಂಡು ಬರಬಹುದು.
ಇದೊಂದು ಮಾಸ್ ಫೀಲ್ ಇರುವ ಸಿನಿಮಾ. ಜೊತೆಗೊಂದಷ್ಟು ಪ್ರೀತಿ, ಗೆಳೆತನ, ಮೋಸ, ಇತ್ಯಾದಿಯ ಹೂರಣ ಇಲ್ಲಿದೆ. ಇದು ಪಕ್ಕಾ ಯೂತ್ಸ್ ಟಾರ್ಗೆಟ್ ಮಾಡಿ ತೋರಿಸಿರುವ ಸಿನಿಮಾ. ಇಡೀ ಸಿನಿಮಾದ ಅರ್ಧ ಭಾಗ ಜೈಲಿನಲ್ಲೇ ಸಾಗುತ್ತೆ. ಹಾಗಂತ ನೋಡೋರಿಗೆ ಎಲ್ಲೂ ಜೈಲು ಬೋರ್ ಎನಿಸದಷ್ಟರ ಮಟ್ಟಿಗೆ ನಿರ್ದೇಶಕರು ತಮ್ಮ ಕೆಲಸ ಮಾಡಿದ್ದಾರೆ. ಪಕ್ಕಾ ಲೋಕಲ್ ಹುಡುಗನ ಸುತ್ತ ಹೆಣೆದಿರೋ ಕಥೆಯಲ್ಲಿ ಹೇಳಿಕೊಳ್ಳುವಂತಹ ಧಮ್ ಇಲ್ಲವಾದರೂ, ನಿರೂಪಣೆಯಲ್ಲಿ ಬಿಗಿ ಹಿಡಿತವಿದೆ. ಆ ಕಾರಣಕ್ಕೆ ಸಿನಿಮಾ ಸುಮ್ಮನೆ ನೋಡಿಸಿಕೊಂಡು ಹೋಗುತ್ತೆ. ಮೊದಲೇ ಹೇಳಿದಂತೆ ಕಥೆ ಸಿಂಪಲ್. ಆದರೆ, ನಿರ್ದೇಶಕರ ಸ್ಕ್ರೀನ್ ಪ್ಲೇ ತುಸು ಇಂಟ್ರೆಸ್ಟ್ ಎನಿಸುತ್ತೆ.
ಮೊದಲರ್ಧ ಕೊಲೆ, ಜೈಲು, ಅಲ್ಲಿ ನಡೆಯೋ ಡೀಲು, ಹೊಡೆದಾಟ, ಪ್ರೀತಿಯ ಹುಡುಕಾಟ, ಒಂದಷ್ಟು ತಮಾಷೆ, ಎಮೋಷನಲ್ ವಿಷಯಗಳಲ್ಲೇ ಮುಗಿದು ಹೋದರೆ, ದ್ವಿತಿಯಾರ್ಧ ಬದುಕಿನ ಹೋರಾಟ, ಚೀರಾಟ, ಪೋಲೀಸರ ಹುಡುಕಾಟ ಇತ್ಯಾದಿ ಅಂಶಗಳ ಜೊತೆಗೊಂದು ಅಂತ್ಯ. ಇವಿಷ್ಟು ವಿಷಯಗಳನ್ನು ಅಚ್ಚುಕಟ್ಟಾಗಿ ಕಟ್ಟಿಕೊಡುವ ಮೂಲಕ ಸರಿ-ತಪ್ಪುಗಳ ಚರ್ಚೆಗೆ ಬಿಟ್ಟಿದ್ದಾರೆ.
ಸಿನಿಮಾದಲ್ಲಿ ಕೆಲ ಅನಗತ್ಯ ದೃಶ್ಯಗಳಿಗೆ ಕತ್ತರಿ ಹಾಕಬಹುದಿತ್ತು. ಎಲ್ಲೋ ಒಂದು ಕಡೆ ಚಿತ್ರದ ವೇಗ ಕಡಿಮೆ ಆಗುತ್ತಿದೆ ಅಂದುಕೊಳ್ಳುತ್ತಿದ್ದಂತೆ ಅಲ್ಲೊಂದು ಭರ್ಜರಿ ಫೈಟು, ಸಖತ್ ಸಾಂಗು ಕಾಣಿಸಿಕೊಂಡು ವೇಗಕ್ಕೆ ಹೆಗಲು ಕೊಡುತ್ತವೆ.
ಚಿತ್ರದಲ್ಲಿ ಓಹೋ ಅನ್ನುವ ಅಂಶಗಳಿಲ್ಲದಿದ್ದರೂ, ಕ್ಲೈಮ್ಯಾಕ್ಸ್ ಮಾತ್ರ ಎದೆ ಭಾರವಾಗಿಸುತ್ತೆ. ಅದೇ ಸಿನಿಮಾದ ಪ್ಲಸ್. ಹಾಗಾಗುತ್ತೆ ಅಂತ ಭಾವಿಸಿದರೆ, ಅಲ್ಲಿ ಬೇರೇನೋ ಆಗುತ್ತೆ. ಆಗಲೇ ಸಿನಿಮಾ ಮತ್ತಷ್ಟು ಕುತೂಹಲಕ್ಕೆ ಕರೆದೊಯ್ಯುತ್ತೆ. ಇಡೀ ಚಿತ್ರ ಮಾಸ್ ಫೀಲ್ ಕೊಟ್ಟರೂ ಅಲ್ಲಲ್ಲಿ ಹೃದಯದ ಪಿಸುಮಾತು ಕೇಳಿಸುತ್ತೆ. ಜೀವ ಭಾವ ಮಿಡಿತದ ಸಂದೇಶ ಕೊಡುತ್ತೆ. ಇದೆಲ್ಲ ನೋಡಬೇಕು ಕೇಳಬೇಕು ಅನ್ನೋ ಕುತೂಹಲವಿದ್ದರೆ ಬಾಂಡ್ ರವಿ ನೋಡಬಹುದು.
ಇದು ಕಥೆ…
ಬಾಂಡ್ ರವಿ ಕಥಾ ನಾಯಕ. ದುಡ್ಡು ಕೊಟ್ಟರೆ ಬೇಕಾದು ಮಾಡೋ ಲೋಕಲ್ ಹುಡುಗ. ಹಾಗಂತ ತೀರ ಕೆಟ್ಟ ಕೆಲಸದ ಸಹವಾಸ ಮಾಡಲ್ಲ. ಕಾಸಿಲ್ಲದೆ ಯಾರಿಗೂ ಕನೆಕ್ಟ್ ಆಗಲ್ಲ. ಅವನಿಗೆ ಸೆಂಟಿಮೆಂಟ್ ಗಿಂತ ಸೆಟ್ಲ್ ಮೆಂಟ್ ಇಷ್ಟ. ಒಂದು ರೀತಿ ಕೆಟ್ಟೋನು ಥರ ಇರೋ ಒಳ್ಳೆಯವನು. ಇಂಥ ಹುಡುಗನ ಲೈಫಲ್ಲಿ ಹುಡುಗಿ ಎಂಟ್ರಿಯಾಗುತ್ತಾಳೆ. ಅಲ್ಲಿ ಕೊಲೆ, ಪ್ರೀತಿ, ದ್ವೇಷ ಇನ್ನೇನೋ ಆಗುತ್ತೆ. ಕೊನೆಗೊಂದು ಮನಕಲಕುವ ದೃಶ್ಯದ ಅಂತ್ಯವಾಗುತ್ತೆ. ಮುಂದಾ ಅದೇ ಸ್ಪೆಷಲ್.
ಯಾರು ಹೇಗೆ?
ಪ್ರಮೋದ್ ಇಲ್ಲಿ ಎಂದಿಗಿಂತ ಇಷ್ಟವಾಗುತ್ತಾರೆ. ಖಡಕ್ ಡೈಲಾಗ್ ಜೊತೆ ಅವರ ವಾಯ್ಸ್ ಸಿನಿಮಾದ ಮತ್ತೊಂದು ಪ್ಲಸ್. ಶೋಭರಾಜ್ ಖಳನಾಗಿ ಅಬ್ಬರಿಸಿದರೆ, ರವಿಕಾಳೆ ಇರುವಷ್ಟು ಸಮಯ ಗಮನಸೆಳೆಯುತ್ತಾರೆ. ಕಾಜಲ್ ಕೂಡ ನಿರ್ದೇಶಕರು ಹೇಳಿದ್ದನ್ನಷ್ಟೇ ಮಾಡಿದ್ದಾರೆ. ಜೈಲು ಗೆಳೆಯರಾಗಿ ಗೋವಿಂದೇಗೌಡ, (ಜೀ ಜೀ), ಪವನ್, ಮಿಮಿಕ್ರಿ ಗೋಪಿ, ವಿಜಯ್ ಚೆಂಡೂರ್, ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಧರ್ಮ ಪೊಲೀಸ್ ಅಧಿಕಾರಿಯಾಗಿ ಖದರ್ ತೋರಿಸಿದ್ದಾರೆ.
ಮನೋಮೂರ್ತಿ ಅವರ ಸಂಗೀತದ ಒಂದು ಹಾಡು ಗುನುಗುವಂತಿದೆ. ಹಿನ್ನೆಲೆ ಸಂಗೀತ ಕಥೆಗೆ ಪೂರಕವಾಗಿದೆ. ಅರ್ಜುನ್ ಕಿಟ್ಟು ಅವರ ಕತ್ತರಿ ಪ್ರಯೋಗ ಸಿನಿಮಾ ವೇಗ ಹೆಚ್ಚಿಸಿದೆ. ಕೆ.ಎಸ್.ಚಂದ್ರಶೇಖರ್ ಅವರ ಕ್ಯಾಮೆರಾ ಕೈಚಳಕ ಬಾಂಡ್ ರವಿಯನ್ನು ಅಂದವಾಗಿಸಿದೆ.
ಕನ್ನಡದಲ್ಲಿ ಕೆಲವು ಸಿನಿಮಾಗಳು ಬಿಡುಗಡೆಗೆ ಮುನ್ನವೇ ಸದ್ದು ಮಾಡುತ್ತವೆ. ಹಾಗೆಯೇ, ಬೆರಳೆಣಿಕೆಯಷ್ಟು ಹೀರೋಗಳು ತಮ್ಮ ಚೊಚ್ಚಲ ಸಿನಿಮಾ ಮೂಲಕವೇ ಜಾಸ್ತಿ ಸೌಂಡು ಮಾಡುತ್ತಿದ್ದಾರೆ. ಅಂತಹ ಜಾಸ್ತಿ ಸೌಂಡು ಮಾಡುತ್ತಿರುವ ಯಂಗ್ ಎನರ್ಜಿ ಇರುವ ಹೀರೋಗಳ ಸಾಲಿಗೆ ಈಗ ವೀರೆನ್ ಕೇಶವ್ ಕೂಡ ಸೇರಿದ್ದಾರೆ ಇವರ ಮೊದಲ ಸಿನಿಮಾವನ್ನು ಕೆ ಆರ್ ಜಿ ಸ್ಟುಡಿಯೋಸ್ ಅದ್ಧೂರಿಯಾಗಿ ರಿಲೀಸ್ ಮಾಡುತ್ತಿದೆ.
ಹೌದು, ವೀರೆನ್ ಕೇಶವ್ ಈಗಷ್ಟೇ ಚಂದನವನಕ್ಕೆ ಕಾಲಿಡಲು ಸಜ್ಜಾಗಿರುವ ಆರಡಿ ಕಟೌಟ್. ಅವರು ಅಭಿನಯಿಸಿರುವ ‘ಕಾಕ್ಟೈಲ್’ ಸಿನಿಮಾ ಹೊಸ ವರ್ಷದಲ್ಲಿ ಅದ್ಧೂರಿಯಾಗಿ ತೆರೆಗೆ ಅಪ್ಪಳಿಸಲು ಸಜ್ಜಾಗಿದೆ. ಡಿಸೆಂಬರ್ 9 ಅವರ ಹುಟ್ಟು ಹಬ್ಬ. ಹಾಗಾಗಿ ಚಿತ್ರತಂಡ ಚಿತ್ರದ ರಿಲೀಸ್ ಡೇಟ್ ಕೂಡ ಅನೌನ್ಸ್ ಮಾಡಿದೆ. ಜನವರಿ 6ರಂದು ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಈ ಸಿನಿಮಾ ರಿಲೀಸ್ ಮೊದಲೇ ಹೀರೋ ವೀರೆನ್ ಕೇಶವ್ ‘ಡೆಬ್ಯು ಆ್ಯಕ್ಟರ್ ಅವಾರ್ಡ್- 2022’ ಗೆ ಭಾಜನರಾಗಿದ್ದಾರೆ. ನವ ಕರ್ನಾಟಕ ಚಲನಚಿತ್ರ ಅಕಾಡೆಮಿ ಡಿಸೆಂಬರ್ 10ರಂದು ಹುಬ್ಬಳ್ಳಿಯಲ್ಲಿ ಆಯೋಜಿಸಿರುವ ‘ಕರ್ನಾಟಕ ಅಂತರ ರಾಷ್ಟ್ರೀಯ ಚಲನಚಿತ್ರೋತ್ಸವ’ದಲ್ಲಿ ಕಾಕ್ಟೈಲ್’ ಚಿತ್ರದ ಅಭಿನಯಕ್ಕಾಗಿ ಪ್ರಶಸ್ತಿ ಪಡೆಯುತ್ತಿದ್ದಾರೆ. ಮೊದಲ ಸಿನಿಮಾಗೆ ಪ್ರಶಸ್ತಿ ಪಡೆಯುತ್ತಿರುವುದು ತಂಡಕ್ಕೆ ಸಹಜವಾಗಿಯೇ ಖುಷಿಯಾಗಿದೆ.
ಹೀರೋ ವೀರೆನ್
ಕಾಕ್ಟೈಲ್’ ಸಿನಿಮಾಗೆ ಶ್ರೀರಾಮ್ ಬಾಬು ನಿರ್ದೇಶಕರು. ವಿಜಯಲಕ್ಷ್ಮಿ ಕಂಬೈನ್ಸ್ ಮೂಲಕ ಡಾ.ಶಿವಪ್ಪ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಇನ್ನು, ಕೆ ಆರ್ ಜಿ ಸ್ಟುಡಿಯೋಸ್ ಈ ಚಿತ್ರವನ್ನು ಬಿಡುಗಡೆ ಮಾಡುತ್ತಿರುವುದು ವಿಶೇಷ.
ಈ ಚಿತ್ರದ ಮತ್ತೊಂದು ವಿಶೇಷವೆಂದರೆ, ರಿಲೀಸ್ ಮೊದಲೇ ಗಮನ ಸೆಳೆಯುತ್ತಿದೆ. ಹೌದು, ಈಗಾಗಲೇ ಕನ್ನಡ ಚಿತ್ರರಂಗದ ದಿಗ್ಗಜ್ಜರು ‘ಕಾಕ್ಟೈಲ್’ ಚಿತ್ರದ ಫಸ್ಟ್ ಲುಕ್ ರಿಲೀಸ್ ಮಾಡಿ ಶುಭ ಹಾರೈಸಿದ್ದಾರೆ. ಅಷ್ಟೇ ಅಲ್ಲ, ಚಿತ್ರದ ಫಸ್ಟ್ ಗ್ಲಿಂಪ್ಸ್ ಕೂಡ ಮೆಚ್ಚುಗೆ ಪಡೆದುಕೊಂಡಿದೆ.
ಪಕ್ಕಾ ಹೀರೋ ಮೆಟೀರಿಯಲ್…
ನಾಯಕ ವೀರೆನ್ ಕೇಶವ್, ತಾನು ಹೀರೋ ಆಗೋಕೆ ಏನೆಲ್ಲಾ ಅರ್ಹತೆಗಳಿರಬೇಕೋ ಅವೆಲ್ಲವನ್ನೂ ಕರಗತ ಮಾಡಿಕೊಂಡೇ ಸ್ಯಾಂಡಲ್ ವುಡ್ ಸ್ಪರ್ಶಿಸುತ್ತಿದ್ದಾರೆ. ವೀರೆನ್ ಈಗಾಗಲೇ ಬಾಲನಟರಾಗಿಯೂ ಸೈ ಎನಿಸಿಕೊಂಡವರು. ಹೀರೋ ಆಗಬೇಕು ಎಂಬ ಉದ್ದೇಶದಿಂದ ಮುಂಬೈನ ಪ್ರತಿಷ್ಠಿತ ನಟನಾ ಶಾಲೆಯಲ್ಲಿ ಅವರು ನಟನಾ ತರಬೇತಿ ಪಡೆದಿದ್ದಾರೆ. ಅಷ್ಟೇ ಅಲ್ಲ, ಡ್ಯಾನ್ಸ್ ಮತ್ತು ಫೈಟ್ಸ್ ಕೂಡ ಕಲಿತಿದ್ದಾರೆ. ಥಿಯೇಟರ್ ಹಿನ್ನೆಲೆಯ ವೀರೆನ್ ಕೇಶವ್ ಅವರ ಮೊದಲ ಸಿನಿಮಾ ‘ಕಾಕ್ಟೈಲ್’.
ನಿರ್ಮಾಪಕ ಡಾ.ಶಿವಪ್ಪ, ನಿರ್ದೇಶಕ ಶ್ರೀರಾಮ್ ಬಾಬು, ಹೀರೋ ವೀರೆನ್
ಸಿನಿಮಾ ಬಿಡುಗಡೆ ಮೊದಲೇ ಗ್ಲಿಂಪ್ಸ್ ರಿಲೀಸ್ ಮಾಡುವ ಮೂಲಕ ಕುತೂಹಲ ಕೆರಳಿಸಿದೆ. ‘ಕಾಕ್ಟೈಲ್” ಕುರಿತು ಹೇಳುವುದಾದರೆ, ಚಿತ್ರದ ಹೀರೋ ಎಂಬಿಎ ಮುಗಿಸಿ, ಸಮಾಜ ಸೇವೆಯ ಜೊತೆ ಕಂಪನಿಯಲ್ಲಿ ಕೆಲಸ ಮಾಡುವ ಒಬ್ಬ ಅನಾಥ.
ಹೈಸ್ಕೂಲ್ ಮೇಷ್ಟ್ರು ಮಗಳ ಹಾಗು ಹಿರೋ ನಡುವೆ ಪ್ರೀತಿ ಹುಟ್ಟುತ್ತೆ. ಈ ಮಧ್ಯೆ ಪ್ರಭಾವಿ ರಾಜಕಾರಣಿ ಮತ್ತು ಅವನ ಮಗನ ಅನ್ಯಾಯ ಅಕ್ರಮ ವಿರುದ್ಧ ಹೀರೋ ಹೋರಾಡುತ್ತಾನೆ. ಆಮೇಲೆ ಏನಾಗುತ್ತೆ ಅನ್ನೋದು ಕಥೆ.
ಮೊದಲ ಸಿನಿಮಾ ರಿಲೀಸ್ ಮೊದಲೇ ಹೀರೋ ವೀರೇನ್ ಕೇಶವ್ ಅವರಿಗೆ ಒಂದಷ್ಟು ಕಥೆಗಳು ಹುಡುಕಿ ಬಂದಿವೆಯಾದರೂ, ಯಾವುದನ್ನೂ ಅಂತಿಮಗೊಳಿಸಿಲ್ಲ. ಒಳ್ಳೆಯ ಕಥೆ ಮತ್ತು ತಂಡದ ಜೊತೆ ಕೆಲಸ ಮಾಡಬೇಕೆಂದುಕೊಂಡಿರುವ ವೀರೆನ್ ಕೇಶವ್, ಈಗಾಗಲೇ ಒಂದು ಕಥೆ ಕೇಳಿದ್ದು, ಇಷ್ಟರಲ್ಲೇ ತಮ್ಮ ಎರಡನೇ ಸಿನಿಮಾ ಕುರಿತು ಅನೌನ್ಸ್ ಮಾಡಲಿದ್ದಾರೆ.
ಅದೇನೆ ಇರಲಿ, ಕನ್ನಡಕ್ಕೆ ಹೊಸ ಹೀರೋಗಳ ಆಗಮನ ತುಸು ಜೋರಾಗಿದೆ. ಆ ಸಾಲಿನ ಹೀರೋಗಳಲ್ಲಿ ವೀರೆನ್ ಕೇಶವ್ ಕೂಡ ಕನ್ನಡ ಚಿತ್ರರಂಗದಲ್ಲಿ ಗಟ್ಟಿನೆಲೆ ಕಾಣಲಿ ಎಂಬುದು ‘ಸಿನಿಲಹರಿ‘ ಆಶಯ.
ಚಿತ್ರ : ವಿಜಯಾನಂದ ನಿರ್ದೇಶನ : ರಿಷಿಕಾ ಶರ್ಮ ನಿರ್ಮಾಣ : ವಿ ಆರ್ ಎಲ್ ಫಿಲ್ಮ್ ಪ್ರೊಡಕ್ಷನ್ ತಾರಾಗಣ : ನಿಹಾಲ್, ಅನಂತ್ ನಾಗ್, ರವಿಚಂದ್ರನ್, ಪ್ರಕಾಶ್ ಬೆಳವಾಡಿ, ವಿನಯಾ ಪ್ರಸಾದ್, ಭರತ್ ಬೋಪಣ್ಣ, ರಾಜೇಶ್ ನಟರಂಗ ಇತರರು
ಯಾವುದೇ ಸಿನಿಮಾ ಇರಲಿ, ಮೊದಲು ಇಷ್ಟವಾಗಬೇಕು, ಮನಸ್ಸಿಗೆ ನಾಟುವಂತಿರಬೇಕು, ಅದಕ್ಕೂ ಹೆಚ್ಚಾಗಿ ಸ್ಪೂರ್ತಿ ಎನಿಸಬೇಕು. ಒಂದಷ್ಟು ಹಠ, ಛಲ ಮತ್ತು ಬದಲಾವಣೆ ತರುವಂತಾಗಬೇಕು. ಈ ಎಲ್ಲಾ ಗುಣಲಕ್ಷಣ ವಿಜಯಾನಂದ ಸಿನಿಮಾದಲ್ಲಿದೆ. ಇದೊಂದು ‘ಆನಂದ’ಮಯದ ವಿಜಯ ಚಿತ್ರ ಎನ್ನುವುದರಲ್ಲಿ ಎರಡು ಮಾತಿಲ್ಲ…
ಅಪ್ಪನಿಗೆ ಮಗ ಟ್ರಾವೆಲ್ಸ್ ಉದ್ಯಮ ನಡೆಸೋದು ಬಿಲ್ ಕುಲ್ ಇಷ್ಟವಿಲ್ಲ. ಮಗನಿಗೋ ಲಾರಿ ಚಲಾಯಿಸಿ ದೊಡ್ಡ ಉದ್ಯಮಿ ಆಗುವ ಬಯಕೆ. ಅಪ್ಪನ ವಿರೋಧದ ನಡುವೆಯೂ ಮಗ ಸಾಲ ಸೋಲ ಮಾಡಿ ಲಾರಿಯೊಂದನ್ನು ಖರೀದಿಸಿ ತನ್ನ ಕನಸ ಬೆನ್ನತ್ತಿ ಹೊರಡುತ್ತಾನೆ. ಆ ಕನಸಿನ ಹಾದಿ ತುಂಬ ನೂರೆಂಟು ವಿಘ್ನ. ಮುಂದಾ….?
ಇದು ಯಾವುದೋ ರೀಲ್ ಕಥೆಯಲ್ಲ. ರಿಯಲ್ ಕಥೆ. ಹೌದು, ಒಂದೇ ಒಂದು ಲಾರಿ ಖರಿದೀಸಿ ಅದನ್ನ ಸ್ವತಃ ಚಲಾಯಿಸುವ ಮೂಲಕ ತನ್ನ ಸಾರಿಗೆ ಉದ್ಯಮವನ್ನು ದೇಶದ ಉದ್ದಗಲಕ್ಕೂ ವಿಸ್ತರಿಸಿದ ಯಶಸ್ವಿ ಉದ್ಯಮಿ ವಿಜಯ ಸಂಕೇಶ್ವರ ಅವರ ಬಯೋಪಿಕ್ ಇದು.
ಏನು, ಎತ್ತ?
ಸಾಮಾನ್ಯವಾಗಿ ಬಯೋಪಿಕ್ ಸಿನಿಮಾಗಳು ರುಚಿಸೋದು ಕಷ್ಟ. ಆದರೆ, ವಿಜಯ ಸಂಕೇಶ್ವರ ಅವರ ಈ ಬಯೋಪಿಕ್ ನೋಡುಗರಿಗೆ ತುಸು ‘ಆನಂದ’ ಅಂದರೆ ಅತಿಶಯೋಕ್ತಿಯಲ್ಲ. ನಿರ್ದೇಶಕಿ ರಿಷಿಕಾ ಶರ್ಮ, ವಿಜಯ ಸಂಕೇಶ್ವರ ಅವರ ಬದುಕಿನ ಏಳು-ಬೀಳನ್ನು ಅಚ್ಚುಕಟ್ಟಾಗಿ ಕಟ್ಟಿಕೊಡುವಲ್ಲಿ ನಿಜಕ್ಕೂ ಯಶಸ್ವಿಯಾಗಿದ್ದಾರೆ ಎನ್ನಬಹುದು.
ವಿಜಯ ಸಂಕೇಶ್ವರ ಅವರ ಯಶಸ್ವಿ ಬದುಕು ಸುಲಭಕ್ಕೆ ದಕ್ಕಿದ್ದಲ್ಲ. ಅದೊಂದು ಛಲದ ಬದುಕು. ಹಠದ ಕೆಲಸ. ಶ್ಯಾನೆ ಅತ್ಮವಿಶ್ವಾಸದ ವ್ಯಕ್ತಿತ್ವ ಅದಕ್ಕೆಲ್ಲ ಕಾರಣ ಅನ್ನೋದು ಸಿನಿಮಾ ನೋಡಿದವರ ಅರಿವಿಗೆ ಬರುತ್ತೆ.
ಹೇಗಿದೆ?
ಬಯೋಪಿಕ್ ಅಂದರೆ ಇದ್ದದ್ದನ್ನು ಇರುವಂತೆಯೇ ತೋರಿಸಬೇಕು. ಅದಿಲ್ಲಿ ಅಷ್ಟರಮಟ್ಟಿಗೆ ಸಾಧ್ಯವಾಗಿಲ್ಲ. ಕಾರಣ, ವಿನಾಕಾರಣ ಒಂದಷ್ಟು ಕಮರ್ಷಿಯಲ್ ಅಂಶಗಳು ಸೇರಿರೋದು. ಮನರಂಜನೆ ದೃಷ್ಟಿಯಲ್ಲಿ ನೋಡುವುದಾದರೆ ಅಡ್ಡಿಯಿಲ್ಲ. ಅದರೆ, ಬಯೋಪಿಕ್ ಅಂದಾಗ, ಇನ್ನಷ್ಟು ಗಾಢತನದ ಅಗತ್ಯತೆ ಇತ್ತು.
ಇದರ ನಡುವೆಯೂ, ಆರಂಭದಿಂದ ಅಂತ್ಯದವರೆಗೂ ಚಿತ್ರ ನೋಡಿಸಿಕೊಂಡು ಹೋಗುತ್ತೆ ಅಂದರೆ, ಸಿನಿಮಾದ ಬಿಗಿ ನಿರೂಪಣೆ. ಜೊತೆಗೆ ಉತ್ತರ ಕರ್ನಾಟಕದ ಜವಾರಿ ಡೈಲಾಗ್ಸ್ ಕಾರಣ.
ಹೈಲೆಟ್ ಏನು?
ಸಿನಿಮಾದಲ್ಲಿ ಅನವಶ್ಯಕ ದೃಶ್ಯಗಳಿಗೆ ಕತ್ತರಿ ಹಾಕಬಹುದಿತ್ತು. ಇನ್ನು ಸಿನಿಮಾದ ಲೆಂಥ್ ಕೂಡ ಹೆಚ್ಚಾಯ್ತು. ಒಂದಷ್ಟು ಲೆಂಥ್ ಕಡಿಮೆಯಾಗಿದ್ದರೆ, ಸಿನಿಮಾ ಇನ್ನಷ್ಟು ಹತ್ತಿರವಾಗುತ್ತಿತ್ತು. ಅವಧಿ ಹೆಚ್ಚಿದ್ದರೂ ನೋಡಿಸಿಕೊಂಡು ಹೋಗುತ್ತೆ. ಕಾರಣ, ಮತ್ತದೇ ಉತ್ತರ ಕರ್ನಾಟಕದ ಜವಾರಿ ಮಾತುಗಳು ಮತ್ತು ಹಿನ್ನೆಲೆ ಸಂಗೀತ. ಇನ್ನು ರೆಟ್ರೋ ಶೈಲಿಯ ದೃಶ್ಯಗಳು ಕೂಡ ತಕ್ಕಮಟ್ಟಿಗೆ ಖುಷಿಕೊಡುತ್ತವೆ.
ವಿಜಯ ಸಂಕೇಶ್ವರ ಅವರ ಬದುಕಿನ ಹೋರಾಟದ ದಿನಗಳನ್ನು ರೋಚಕವಾಗಿ ತೋರಿಸಲಾಗಿದೆ. ಕಷ್ಟದ ದಿಗಳನ್ನು ಮೆಟ್ಟಿನಿಂತು ತಾನೊಬ್ಬ ಯಶಸ್ವಿ ಉದ್ಯಮಿ ಹೇಗಾದರು ಅನ್ನುವುದನ್ನ ತೋರಿಸುವ ಪರಿ ಇಲ್ಲಿ ಹೈಲೆಟ್.
ಬಯೋಪಿಕ್ ವ್ಯಕ್ತಿ ಈಗ ಎಷ್ಟೊಂದು ರಿಚ್ ಆಗಿದ್ದಾರೋ ಅಷ್ಟೇ ರಿಚ್ ಆಗಿ ವಿಜಯಾನಂದ ಮೂಡಿ ಬಂದಿದೆ. ಒಂದು ಚಿತ್ರದಲ್ಲಿ ಇರಬೇಕಾದ ಕಮರ್ಷಿಯಲ್ ಅಂಶಗಳು ಇಲ್ಲೂ ಇವೆಯಾದರೂ, ಎಲ್ಲೂ ಅವು ಹೆಚ್ಚಾಗಿ ಮೇಳೈಸಿಲ್ಲ. ಇಲ್ಲಿ ಶ್ರಮವಿದೆ, ಹಠ, ಛಲವಿದೆ, ಪ್ರಾಮಾಣಿಕತೆ, ಬುದ್ಧಿವಂತಿಕೆ ಇದೆ. ಎಲ್ಲದ್ದಕ್ಕು ಹೆಚ್ಚಾಗಿ ಕಾಯಕವೇ ಕೈಲಾಸ ಎಂಬ ಅಂಶವಿದೆ. ಜೊತೆಗಿಷ್ಟು ಜೀವ-ಭಾವದ ಮಿಡಿತವಿದೆ, ಅಪ್ಪನ ಬಾಂಧವ್ಯ, ಅಮ್ಮನ ವಾತ್ಸಲ್ಯ, ಮಡದಿಯ ಪ್ರೀತಿ, ಭಾವುಕತೆ, ಸೋಲು, ಗೆಲುವು, ಅವಮಾನ, ಸನ್ಮಾನ ಎಲ್ಲವೂ ಚಿತ್ರದ ವೇಗಕ್ಕೆ ಕಾರಣವಾಗಿವೆ.
ವಿಜಯ ಸಂಕೇಶ್ವರ ಅವರು ತನ್ನ ಬದುಕನ್ನು ಕಟ್ಟಿಕೊಳ್ಳೋಕೆ ಎಷ್ಟೆಲ್ಲಾ ಶ್ರಮ ಪಟ್ಟಿದ್ದಾರೋ, ಅವರ ಬಯೋಪಿಕ್ ಸಿನಿಮಾ ಕಟ್ಟಿಕೊಡಲು ನಿರ್ದೇಶಕರು ಕೂಡ ಶ್ರಮಿಸಿರುವುದು ಕಾಣುತ್ತೆ.
ಒಮ್ಮೆ ನೋಡಲ್ಲಡ್ಡಿಯಿಲ್ಲ
ವಿಜಯ ಸಂಕೇಶ್ವರ ಅವರ ಬದುಕು ಈಗ ಸುಂದರ. ಆದರೆ, ಅದರ ಹಿಂದೆ ಏನೆಲ್ಲಾ ಸಮಸ್ಯೆ ಇತ್ತು, ಹೇಗೆಲ್ಲಾ ಎದುರಿಸಿದರು. ಯಾರೆಲ್ಲಾ ಜೊತೆಗಿದ್ದರು, ಹೇಗೆಲ್ಲ ಸಹಾಯ ಮಾಡಿದರು ಎಂದು ತಿಳಿಯುವ ಕುತೂಹಲವಿದ್ದರೆ, ಒಮ್ಮೆ ಈ ಬಯೋಪಿಕ್ ನೋಡಲ್ಲಡ್ಡಿಯಿಲ್ಲ.
ಯಾರು ಹೇಗೆ?
ನಿಹಾಲ್ ಇಲ್ಲಿ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಸಾಧಿಸುವ ವ್ಯಕ್ತಿಯಾಗಿ ಇಷ್ಟವಾಗುತ್ತಾರೆ, ಕೋಪ ತಾಪ ತಾಳ್ಮೆಯಲ್ಲೂ ಗಮನ ಸೆಳೆಯುತ್ತಾರೆ. ಇನ್ನು, ಅನಂತ್ ನಾಗ್ ಎಂದಿಗಿಂತಲೂ ಇಲ್ಲಿ ಇಷ್ಟವಾಗುತ್ತಾರೆ. ಉತ್ತರ ಕರ್ನಾಟಕ ಡೈಲಾಗ್ ಹೇಳುವ ಮೂಲಕ ಜೀವಿಸಿದ್ದಾರೆ. ರವಿಚಂದ್ರನ್ ಇರುವಷ್ಟು ಕಾಲ ಇಷ್ಟವಾಗುತ್ತಾರೆ. ಪ್ರಕಾಶ್ ಬೆಳವಾಡಿ ಪತ್ರಿಕಾ ಸಂಪಾದಕರಾಗಿ ಗಮನ ಸೆಳೆಯುತ್ತಾರೆ. ಭರತ್ ಭೋಪಣ್ಣ ಸಿಕ್ಕ ಪಾತ್ರ ದಲ್ಲಿ ಜೀವಿಸಿದ್ದಾರೆ. ಗಣೇಶ್ ರಾವ್ ಕೇಸರ್ಕರ್ ಅವರಿಲ್ಲಿ ಸಂಪತ್ ಕಟ್ಟಿಮನಿ ಎಂಬ ಹೋರಾಟಗಾರರಾಗಿ ತೆರೆಯ ಮೇಲೆ ಇರುವಷ್ಟು ಕಾಲ ಗಮನ ಸೆಳೆಯುತ್ತಾರೆ. ತೆರೆ ಮೇಲೆ ಬರುವ ಸಾಕಷ್ಟು ಪಾತ್ರಗಳು ತಮ್ಮ ಕೆಲಸಕ್ಕೆ ಮೋಸ ಮಾಡಿಲ್ಲ.
ಚಿತ್ರಕ್ಕೆ ಗೋಪಿ ಸುಂದರ್ ಸಂಗೀತ ಹೆಚ್ಚು ಮೈಲೇಜ್ ನೀಡಿದೆ. ಅದಕ್ಕೆ ತಕ್ಕಂತೆ ರಘು ನಿಡುವಳ್ಳಿ ಅವರ ಸಂಭಾಷಣೆ, ಹೇಮಂತ್ ಮತ್ತು ಕೀರ್ತನ್ ಪೂಜಾರಿ ಅವರ ಶ್ರಮವೂ ಎದ್ದು ಕಾಣುತ್ತೆ. ಒಟ್ಟಾರೆ ಎಲ್ಲಾ ತಂತ್ರಜ್ಞರ ಕೈಚಳಕದಿಂದ ಚಿತ್ರ ಆನಂದಮಯ.
ಕೊನೇಮಾತು: ವಿಜಯಾನಂದ ನೋಡಿ ಹೊರಬಂದವರಿಗೆ ಲೈಫಲ್ಲಿ ತಾನೂ ಸಾಧನೆ ಮಾಡಬೇಕು, ಪ್ರಾಮಾಣಿಕತೆ ತೋರಬೇಕು, ದೊಡ್ಡ ಕನಸು ಕಾಣಬೇಕು, ಅದನ್ನು ಸಾಕಾರಗೊಳಿಸಬೇಕು ಅಂತೆನಿಸದೇ ಇರದು…
ಸೆನ್ಸೇಶನಲ್ ಸ್ಟಾರ್ ಕೋಮಲ್ ಆಫ್ಟರ್ ಲಾಂಗ್ ಬ್ರೇಕ್ ಬಳಿಕ ಮತ್ತೆ ನಟನೆಗೆ ಮರಳಿದ್ದಾರೆ. ಇತ್ತೀಚೆಗೆ ಅವರ ಹೊಸ ಸಿನಿಮಾ ‘ಕಾಲಾಯ ನಮಃ’ ಸೆಟ್ಟೇರಿದ್ದು, ಈ ಚಿತ್ರದ ಮೂಲಕ ಮತ್ತೆ ಬಣ್ಣದ ಲೋಕದಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಆ ಸಿನಿಮಾ ನಂತರ ಮತ್ತೊಂದು ಹೊಸ ಸಿನಿಮಾಗೂ ಗ್ರೀನ್ ಸಿಗ್ನಲ್ ನೀಡಿದ್ದಾರೆ.
‘ಬಿಲ್ ಗೇಟ್ಸ್’ ಸಿನಿಮಾ ಮೂಲಕ ಗಮನ ಸೆಳೆದ ನಿರ್ದೇಶಕ ಶ್ರೀನಿವಾಸ್ ಮಂಡ್ಯ ಹೊಸದೊಂದು ಸಿನಿಮಾವನ್ನು ಕೈಗೆತ್ತಿಕೊಂಡಿದ್ದಾರೆ. ಚಿತ್ರಕ್ಕೆ ‘ರೋಲೆಕ್ಸ್’ ಎಂದು ಟೈಟಲ್ ಇಡಲಾಗಿದ್ದು, ಈ ಚಿತ್ರದಲ್ಲಿ ನಾಯಕ ನಟನಾಗಿ ಕೋಮಲ್ ನಟಿಸುತ್ತಿದ್ದಾರೆ.
ಈ ಚಿತ್ರ ಕಟೆಂಟ್ ಬೆಸ್ಡ್ ಸಿನಿಮಾವಾಗಿದ್ದು ಕೋಮಲ್ ತುಂಬಾ ಇಷ್ಟಪಟ್ಟು ಈ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ ಎಂದು ನಿರ್ದೇಶಕ ಶ್ರೀನಿವಾಸ್ ಮಂಡ್ಯ ತಿಳಿಸಿದ್ದಾರೆ.
ಫೀನಿಕ್ಸ್ ಎಂಟರ್ ಟೈನ್ಮೆಂಟ್ಸ್ ಬ್ಯಾನರ್ ನಡಿ ಅನಿಲ್ ಕುಮಾರ್. ಎಸ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಬಹು ದೊಡ್ಡ ತಾರಾಗಣ ಸಿನಿಮಾದಲ್ಲಿದ್ದು, ರಾಕೇಶ್. ಸಿ. ತಿಲಕ್ ಕ್ಯಾಮೆರಾ ವರ್ಕ್, ಜೆಸ್ಸಿ ಗಿಫ್ಟ್ ಸಂಗೀತ ನಿರ್ದೇಶನ, ಅರವಿಂದ್ ರಾಜ್ ಸಂಕಲನ ಚಿತ್ರಕ್ಕಿದೆ. ಜನವರಿಯಲ್ಲಿ ‘ರೋಲೆಕ್ಸ್ ‘ ಸಿನಿಮಾ ಸೆಟ್ಟೇರಲಿದ್ದು ಸದ್ಯದಲ್ಲೇ ಹೆಚ್ಚಿನ ಮಾಹಿತಿಯನ್ನು ಸಿನಿಮಾ ತಂಡ ಹಂಚಿಕೊಳ್ಳಲಿದೆ.
‘ತರ್ಲೆ ವಿಲೇಜ್’, ‘ಪರಸಂಗ’, ‘ದೊಡ್ಡಹಟ್ಟಿ ಬೋರೇಗೌಡ’ ಸಿನಿಮಾ ಮೂಲಕ ಚಂದನವನದಲ್ಲಿ ಗುರುತಿಸಿಕೊಂಡಿರುವ ನಿರ್ದೇಶಕ ಕೆ.ಎಂ.ರಘು ಹೊಸದೊಂದು ಸಿನಿಮಾಗೆ ಆಕ್ಷನ್ ಕಟ್ ಹೇಳಲು ರೆಡಿಯಾಗಿದ್ದಾರೆ. ಈ ಬಾರಿ ಯೂತ್ ಫುಲ್ ಸಬ್ಜೆಕ್ಟ್ ಕಥೆ ಹೆಣೆದು ನಿರ್ದೇಶನಕ್ಕೆ ಕೆ.ಎಂ ರಘು ಸಜ್ಜಾಗಿದ್ದು ಇದೇ ತಿಂಗಳು ಸಿನಿಮಾ ಸೆಟ್ಟೇರಲಿದೆ.
ಚಿತ್ರಕ್ಕೆ ‘ಜಸ್ಟ್ ಪಾಸ್’ ಎಂದು ಶೀರ್ಷಿಕೆ ಇಡಲಾಗಿದೆ. ಕಾಲೇಜ್ ಯೂತ್ ಸಬ್ಜೆಕ್ಟ್ ಒಳಗೊಂಡ ಈ ಚಿತ್ರಕ್ಕೆ ‘ಇರುವುದೆಲ್ಲವ ಬಿಟ್ಟು’, ‘ಗಜಾನನ ಗ್ಯಾಂಗ್’ ಖ್ಯಾತಿಯ ನಟ ಶ್ರೀ ನಾಯಕ ನಟನಾಗಿ ನಟಿಸುತ್ತಿದ್ದಾರೆ. ಚಿತ್ರಕ್ಕೆ ನಾಯಕಿ ಪೈನಲ್ ಆಗಬೇಕಿದ್ದು,ಸ್ಕ್ರಿಪ್ಟ್ ಕೆಲಸಗಳೆಲ್ಲ ಮುಗಿಸಿ ಶೂಟಿಂಗ್ ಹೊರಡಲು ಸಿನಿಮಾ ತಂಡ ಸಕಲ ತಯಾರಿ ನಡೆಸಿಕೊಂಡಿದೆ. ಇದೇ ತಿಂಗಳು ಸಿನಿಮಾ ಸೆಟ್ಟೇರಲಿದೆ.
ನಿರ್ದೇಶಕ ರಘು
ಕೆ.ಎಂ ರಘು. ನಿರ್ದೇಶನದ ‘ದೊಡ್ಡಹಟ್ಟಿ ಬೋರೇಗೌಡ’ ಸಿನಿಮಾ ಈ ಬಾರಿಯ ಬೆಂಗಳೂರು ಇಂಟರ್ ನ್ಯಾಷನಲ್ ಫಿಲಂ ಫೆಸ್ಟಿವಲ್ ನಲ್ಲಿ ಕನ್ನಡದ ಅತ್ಯುತ್ತಮ ಮೊದಲ ಸಿನಿಮಾ ಎಂಬ ಪ್ರಶಸ್ತಿ ಪಡೆದುಕೊಂಡಿದೆ. ಇದೀಗ ಮೊದಲ ಬಾರಿ ಯೂತ್ ಫುಲ್ ಸಬ್ಜೆಕ್ಟ್ ಕೈಗೆತ್ತಿಕೊಂಡಿದ್ದು, ಸಿನಿಮಾ ಬಗೆಗಿನ ಹೆಚ್ಚಿನ ಮಾಹಿತಿ ಸದ್ಯದಲ್ಲೇ ಶೇರ್ ಮಾಡಿಕೊಳ್ಳಲಿದೆ ಚಿತ್ರತಂಡ.
ರಾಯ್ಸ್ ಎಂಟಟೈನ್ಮೆಂಟ್ ಬ್ಯಾನರ್ ನಡಿ ಶಶಿಧರ್.ಕೆ.ವಿ, ಶ್ರೀಧರ್ ಕೆ.ವಿ ‘ಜಸ್ಟ್ ಪಾಸ್’ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ರಂಗಾಯಣ ರಘು, ಸಾಧುಕೋಕಿಲ, ಸುಚೇಂದ್ರ ಪ್ರಸಾದ್, ನವೀನ್ ಡಿ ಪಡಿಕ್ಕಲ್, ಪ್ರಕಾಶ್ ತುಮಿನಾಡ್, ದೀಪಕ್ ರೈ ಮೊದಲಾದವರ ತಾರಾಬಳಗ ಸಿನಿಮಾದಲ್ಲಿದೆ.
ಕೆ.ಎಂ.ಪ್ರಕಾಶ್ ಸಂಕಲನ, ಹರ್ಷವರ್ಧನ್ ರಾಜ್ ಸಂಗೀತ, ವೀನಸ್ ನಾಗರಾಜ್ ಮೂರ್ತಿ ಛಾಯಾಗ್ರಹಣ ಚಿತ್ರಕ್ಕಿದೆ.