ಕನ್ನಡದಲ್ಲಿ ಈಗಾಗಲೇ ಹಲವಾರು ಪ್ರಯೋಗಾತ್ಮಕ ಸಿನಿಮಾಗಳು ಬಂದಿವೆ. ಆ ಸಾಲಿಗೆ ‘ಲಾಕ್’ ಸಿನಿಮಾ ಕೂಡ ಒಂದು. ಇಂಥದ್ದೊಂದು ಪ್ರಯೋಗಕ್ಕೆ ಇಳಿದಿರೋದು ನಟ, ನಿರ್ದೇಶಕ, ನಿರ್ಮಾಪಕ, ಸಂಕಲನಕಾರ ನಾಗೇಂದ್ರ ಅರಸ್. ಇದೊಂದು ವಿಭಿನ್ನ ಕಥೆಯ ಚಿತ್ರ. ಅವರದೇ ನಿರ್ದೇಶನ, ನಟನೆ, ನಿರ್ಮಾಣ, ಸಂಕಲನ ಇರುವ ಅಪರೂಪದ ಸಿನಿಮಾ. ಪ್ರೇಕ್ಷಕರ ಮನವನ್ನು ‘ಲಾಕ್’ ಮಾಡೋಕೆ ಸಜ್ಜಾಗಿದ್ದಾರೆ ನಾಗೇಂದ್ರ ಅರಸ್. ಆ ಕುರಿತ ಒಂದಷ್ಟು ಮಾಹಿತಿ
ಹೌದು, ನಾಗೇಂದ್ರ ಅರಸ್, ಸದಾ ಏನಾದರೊಂದು ಸಿನಿಮಾ ಚಟುವಟಿಕೆಯಲ್ಲಿರುವ ಅಪರೂಪದ ನಟ ಕಮ್ ನಿರ್ದೇಶಕ. ಬಹುಶಃ ಕನ್ನಡ ಚಿತ್ರರಂಗದಲ್ಲಿ ಯಾವಾಗಲೂ ಉತ್ಸಾಹದಿಂದಲೇ ಚಿತ್ರ ತಂಡದ ಜೊತೆ ಕೆಲಸ ಮಾಡುವ ಮತ್ತು ಅವರನ್ನು ಪ್ರೋತ್ಸಾಹಿಸುವ ನಟ ಅಂದರೆ ತಪ್ಪಿಲ್ಲ. ಹೊಸಬರಿರಲಿ, ಹಳಬರೇ ಇರಲಿ ಅವರ ಜೊತೆ ನಗುತ್ತಲೇ ಕೆಲಸ ಮಾಡಿ ಮನಸ್ಸಿಗೆ ಹತ್ತಿರವಾಗುವ ನಟ.
ನಟನೆ, ನಿರ್ದೇಶನ, ಸಂಕಲನ, ನಿರ್ಮಾಣ, ಜೊತೆಗೆ ಮುಖಪುಟದಲ್ಲೂ ಸದಾ ತಮ್ಮ ‘ಫೇಸ್’ ವ್ಯಾಲ್ಯು ಹೆಚ್ಚಿಸಿಕೊಳ್ಳುತ್ತಲೇ, ಒಳ್ಳೆಯ ವ್ಯಕ್ತಿತ್ವ ರೂಪಿಸಿಕೊಂಡ ನಟ ಕಮ್ ನಿರ್ದೇಶಕ. ಈಗ ಅವರೊಂದು ಸ್ಪೆಷಲ್ ಕಥೆ ಹೆಣೆದು, ನಿರ್ದೇಶನದ ಜೊತೆ ಅವರೊಬ್ಬರೇ ನಟಿಸಿರುವ ಲಾಕ್ ಇನ್ನೇನು ಪ್ರೇಕ್ಷಕರ ಮುಂದೆ ಓಪನ್ ಆಗೋಕೆ ಸಜ್ಜಾಗುತ್ತಿದೆ.
ಈ ಲಾಕ್ ಅಂದಾಕ್ಷಣ, ನೆನಪಾಗೋದೇ ಲಾಕ್ಡೌನ್. ಕೊರೊನಾ ತಂದಿಟ್ಟ ಅವಾಂತರವೆ ಈ ‘ಲಾಕ್’. ಈ ಸಮಯದಲ್ಲೇ ಹೊಳೆದಂತಹ ಕಥೆಯೊಂದು ಈಗ ಸಿನಿಮಾ ರೂಪ ತಾಳಿದೆ ಅನ್ನೋದು ವಿಶೇಷ.
ಇದೊಂದು ಪ್ರಯೋಗಾತ್ಮಕ ಚಿತ್ರವಷ್ಟೇ ಅಲ್ಲ, ಒಂದೇ ಒಂದು ಪಾತ್ರ ಇರುವ ಅಪರೂಪದ ಸೈಕಲಾಜಿಕಲ್ ಥ್ರಿಲ್ಲರ್ ಸಿನಿಮಾ. ಆ ಕಾರಣಕ್ಕೆ ‘ಲಾಕ್’ ವಿಶೇಷವೆನಿಸುತ್ತೆ. ಸಿನಿಮಾಗೆ ಈಗಾಗಲೇ ಸೆನ್ಸಾರ್ ಅಗಿದೆ. ಸೆನ್ಸಾರ್ ಮಂಡಳಿ ಯು/ಎ ಸರ್ಟಿಫಿಕೇಟ್ ನೀಡಿದೆ.
ಒಂದೇ ಮನೆ, ಒಂದೇ ಪಾತ್ರ!
ಈಗಾಗಲೇ ಸಿನಿಮಾದ ಟ್ರೇಲರ್ ರಿಲೀಸ್ ಆಗಿದ್ದು, ಸಾಕಷ್ಟು ಮೆಚ್ಚುಗೆ ಪಡೆದುಕೊಂಡಿದೆ. “ಲಾಕ್” ಮೊದಲೇ ಹೇಳಿದಂತೆ, ಪ್ರಯೋಗಾತ್ಮಕ ಸಿನಿಮಾ.
ನಾಗೇಂದ್ರ ಅರಸ್ ಅವರೇ ಸ್ವತಃ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು, ನಟಿಸಿ, ನಿರ್ಮಾಣ ಮಾಡಿ ಸಂಕಲನದ ಜೊತೆ ನಿರ್ದೇಶನ ಮಾಡಿದ್ದಾರೆ.
ಹಾಗಾದರೆ ಈ ಸಿನಿಮಾದ ಒನ್ ಲೈನ್ ಏನು? ಇದಕ್ಕೆ ಉತ್ತರ, ಇದೊಂದು ಸೈಕಲಾಜಿಕಲ್ ಥ್ರಿಲ್ಲರ್ ಕಥೆ. ಇಡೀ ದೇಶವೇ ಲಾಕ್ಡೌನ್ ಆದಾಗ ಮನೆಯೊಂದರಲ್ಲಿ ನಡೆಯೋ ಘಟನೆಯೊಂದು ವಿಚಿತ್ರ ತಿರುವು ಪಡೆದುಕೊಳ್ಳುತ್ತೆ. ಆಮೇಲೆ ಏನೆಲ್ಲಾ ಆಗುತ್ತೆ ಅನ್ನೋದು ಕಥೆ.
ಭರವಸೆಯ ಲಾಕ್
ಸಾಮಾನ್ಯವಾಗಿ, ಕಮರ್ಷಿಯಲ್ ಕಥೆಗಳನ್ನು ಹೇಗೆ ಬೇಕಾದರೂ ಚಿತ್ರೀಕರಿಸಬಹುದು. ಆದರೆ, ಒಂದೇ ಪಾತ್ರ ಇಟ್ಟುಕೊಂಡು, ಒಂದೇ ಮನೆಯಲ್ಲಿ ಕುತೂಹಲ ಎನಿಸುವ ರೀತಿ ಕಟ್ಟಿಕೊಡುವುದಿದೆಯಲ್ಲ ಅದು ಚಾಲೆಂಜ್. ಅಂತಹ ಚಾಲೆಂಜಿಂಗ್ ಸಿನಿಮಾ ಮಾಡಿರುವ ನಾಗೇಂದ್ರ ಅರಸ್, ಇದರ ಮೇಲೆ ಭರವಸೆ ಇಟ್ಟುಕೊಂಡಿದ್ದಾರೆ.
ತೆರೆ ಮೇಲೆ ಅವರೊಬ್ಬರೇ ರಾರಾಜಿಸಬಹುದು. ಆದರೆ, ತೆರೆಯ ಹಿಂದೆ ಒಂದಷ್ಟು ಒಳ್ಳೆಯ ಮನಸ್ಸುಗಳು ಸಾಥ್ ಕೊಟ್ಟಿವೆ. ಸತೀಶ್ ಬಾಬು ಸಂಗೀತ ನೀಡಿದರೆ, ಎಂ.ಬಿ.ಅಳ್ಳಿಕಟ್ಟಿ ಕ್ಯಾಮೆರಾ ಹಿಡಿದಿದ್ದಾರೆ. ಅದೇನೆ ಇರಲಿ, ನಾಗೇಂದ್ರ ಅರಸ್ ಅವರ ಈ ಪ್ರಯತ್ನಕ್ಕೆ ಗೆಲುವು ಸಿಗಲಿ ಅನ್ನೋದೇ ‘ ಸಿನಿ ಲಹರಿ‘ ಆಶಯ.