ಒಂದು ಕೊಲೆಯ ಪ್ರಮಾದ! ವಾಯ್ಸ್ ಬ್ರಾಂಡ್ ಪ್ರಮೋದ…

ಚಿತ್ರ ವಿಮರ್ಶೆ – ವಿಜಯ್ ಭರಮಸಾಗರ

ರೇಟಿಂಗ್ – 3/5

ಚಿತ್ರ: ಬಾಂಡ್ ರವಿ
ನಿರ್ದೇಶನ: ಪ್ರಜ್ವಲ್
ನಿರ್ಮಾಣ: ನರಸಿಂಹ ಮೂರ್ತಿ
ತಾರಾಗಣ: ಪ್ರಮೋದ್, ಕಾಜಲ್ ಕುಂದರ್, ಶೋಭರಾಜ್, ರವಿಕಾಳೆ, ಜೀ ಜೀ, ಪವನ್, ಧರ್ಮ ಇತರರು.

ನಾನು ಡಾನ್ ಆಗೋಕೆ ಬಂದಿಲ್ವೋ, ಬ್ರಾಂಡ್ ಆಗೋಕೆ ಬಂದೋನು…’

ಹೀಗೆ ಪಂಚ್ ಡೈಲಾಗ್ ಹೇಳುತ್ತ ಎದುರಾಳಿಗಳಿಗೆ ಒಂದೊಂದೆ ಪಂಚ್ ಕೊಡುವ ಮೂಲಕ ಹೀರೋ ಖಡಕ್ ಎಂಟ್ರಿ ಕೊಟ್ಟು ಖದರ್ ತೋರಿಸುವ ಹೊತ್ತಿಗೆ, ಅವನಾಗಲೇ ಜೈಲೊಳಗೆ ಎಂಟ್ರಿಯಾಗಿರುತ್ತಾನೆ. ಅವನು ಜೈಲಿಗೆ ಬಂದಿದ್ಯಾಕೆ? ಅವನ ಮೇಲೆ ರೌಡಿ ಖೈದಿಗಳು ಅಟ್ಯಾಕ್ ಮಾಡಿದ್ದೇಕೆ? ಅನ್ನೋದು ಸಸ್ಪೆನ್ಸ್. ಇಡೀ ಸಿನಿಮಾ ಮಾಸ್ ಫೀಲಲ್ಲೇ ಸಾಗುತ್ತೆ. ಈ ಬಾಂಡ್ ರವಿ ಯಾರು? ಅವನು ಒಳ್ಳೆಯವನೋ, ಕೆಟ್ಟವನೋ ಅನ್ನೋ ಕುತೂಹಲವಿದ್ದರೆ ಒಮ್ಮೆ ಬಾಂಡ್ ರವಿನ ವಿಚಾರಿಸಿಕೊಂಡು ಬರಬಹುದು.

ಇದೊಂದು ಮಾಸ್ ಫೀಲ್ ಇರುವ ಸಿನಿಮಾ. ಜೊತೆಗೊಂದಷ್ಟು ಪ್ರೀತಿ, ಗೆಳೆತನ, ಮೋಸ, ಇತ್ಯಾದಿಯ ಹೂರಣ ಇಲ್ಲಿದೆ. ಇದು ಪಕ್ಕಾ ಯೂತ್ಸ್ ಟಾರ್ಗೆಟ್ ಮಾಡಿ ತೋರಿಸಿರುವ ಸಿನಿಮಾ. ಇಡೀ ಸಿನಿಮಾದ ಅರ್ಧ ಭಾಗ ಜೈಲಿನಲ್ಲೇ ಸಾಗುತ್ತೆ. ಹಾಗಂತ ನೋಡೋರಿಗೆ ಎಲ್ಲೂ ಜೈಲು ಬೋರ್ ಎನಿಸದಷ್ಟರ ಮಟ್ಟಿಗೆ ನಿರ್ದೇಶಕರು ತಮ್ಮ ಕೆಲಸ ಮಾಡಿದ್ದಾರೆ. ಪಕ್ಕಾ ಲೋಕಲ್ ಹುಡುಗನ ಸುತ್ತ ಹೆಣೆದಿರೋ ಕಥೆಯಲ್ಲಿ ಹೇಳಿಕೊಳ್ಳುವಂತಹ ಧಮ್ ಇಲ್ಲವಾದರೂ, ನಿರೂಪಣೆಯಲ್ಲಿ ಬಿಗಿ ಹಿಡಿತವಿದೆ. ಆ ಕಾರಣಕ್ಕೆ ಸಿನಿಮಾ ಸುಮ್ಮನೆ ನೋಡಿಸಿಕೊಂಡು ಹೋಗುತ್ತೆ. ಮೊದಲೇ ಹೇಳಿದಂತೆ ಕಥೆ ಸಿಂಪಲ್. ಆದರೆ, ನಿರ್ದೇಶಕರ ಸ್ಕ್ರೀನ್ ಪ್ಲೇ ತುಸು ಇಂಟ್ರೆಸ್ಟ್ ಎನಿಸುತ್ತೆ.

ಮೊದಲರ್ಧ ಕೊಲೆ, ಜೈಲು, ಅಲ್ಲಿ ನಡೆಯೋ ಡೀಲು, ಹೊಡೆದಾಟ, ಪ್ರೀತಿಯ ಹುಡುಕಾಟ, ಒಂದಷ್ಟು ತಮಾಷೆ, ಎಮೋಷನಲ್ ವಿಷಯಗಳಲ್ಲೇ ಮುಗಿದು ಹೋದರೆ, ದ್ವಿತಿಯಾರ್ಧ ಬದುಕಿನ ಹೋರಾಟ, ಚೀರಾಟ, ಪೋಲೀಸರ ಹುಡುಕಾಟ ಇತ್ಯಾದಿ ಅಂಶಗಳ ಜೊತೆಗೊಂದು ಅಂತ್ಯ. ಇವಿಷ್ಟು ವಿಷಯಗಳನ್ನು ಅಚ್ಚುಕಟ್ಟಾಗಿ ಕಟ್ಟಿಕೊಡುವ ಮೂಲಕ ಸರಿ-ತಪ್ಪುಗಳ ಚರ್ಚೆಗೆ ಬಿಟ್ಟಿದ್ದಾರೆ.

ಸಿನಿಮಾದಲ್ಲಿ ಕೆಲ ಅನಗತ್ಯ ದೃಶ್ಯಗಳಿಗೆ ಕತ್ತರಿ ಹಾಕಬಹುದಿತ್ತು. ಎಲ್ಲೋ ಒಂದು ಕಡೆ ಚಿತ್ರದ ವೇಗ ಕಡಿಮೆ ಆಗುತ್ತಿದೆ ಅಂದುಕೊಳ್ಳುತ್ತಿದ್ದಂತೆ ಅಲ್ಲೊಂದು ಭರ್ಜರಿ ಫೈಟು, ಸಖತ್ ಸಾಂಗು ಕಾಣಿಸಿಕೊಂಡು ವೇಗಕ್ಕೆ ಹೆಗಲು ಕೊಡುತ್ತವೆ.

ಚಿತ್ರದಲ್ಲಿ ಓಹೋ ಅನ್ನುವ ಅಂಶಗಳಿಲ್ಲದಿದ್ದರೂ, ಕ್ಲೈಮ್ಯಾಕ್ಸ್ ಮಾತ್ರ ಎದೆ ಭಾರವಾಗಿಸುತ್ತೆ. ಅದೇ ಸಿನಿಮಾದ ಪ್ಲಸ್. ಹಾಗಾಗುತ್ತೆ ಅಂತ ಭಾವಿಸಿದರೆ, ಅಲ್ಲಿ ಬೇರೇನೋ ಆಗುತ್ತೆ. ಆಗಲೇ ಸಿನಿಮಾ ಮತ್ತಷ್ಟು ಕುತೂಹಲಕ್ಕೆ ಕರೆದೊಯ್ಯುತ್ತೆ. ಇಡೀ ಚಿತ್ರ ಮಾಸ್ ಫೀಲ್ ಕೊಟ್ಟರೂ ಅಲ್ಲಲ್ಲಿ ಹೃದಯದ ಪಿಸುಮಾತು ಕೇಳಿಸುತ್ತೆ. ಜೀವ ಭಾವ ಮಿಡಿತದ ಸಂದೇಶ ಕೊಡುತ್ತೆ. ಇದೆಲ್ಲ ನೋಡಬೇಕು ಕೇಳಬೇಕು ಅನ್ನೋ ಕುತೂಹಲವಿದ್ದರೆ ಬಾಂಡ್ ರವಿ ನೋಡಬಹುದು.

ಇದು ಕಥೆ…

ಬಾಂಡ್ ರವಿ ಕಥಾ ನಾಯಕ. ದುಡ್ಡು ಕೊಟ್ಟರೆ ಬೇಕಾದು ಮಾಡೋ ಲೋಕಲ್ ಹುಡುಗ. ಹಾಗಂತ ತೀರ ಕೆಟ್ಟ ಕೆಲಸದ ಸಹವಾಸ ಮಾಡಲ್ಲ. ಕಾಸಿಲ್ಲದೆ ಯಾರಿಗೂ ಕನೆಕ್ಟ್ ಆಗಲ್ಲ. ಅವನಿಗೆ ಸೆಂಟಿಮೆಂಟ್ ಗಿಂತ ಸೆಟ್ಲ್ ಮೆಂಟ್ ಇಷ್ಟ. ಒಂದು ರೀತಿ ಕೆಟ್ಟೋನು ಥರ ಇರೋ ಒಳ್ಳೆಯವನು. ಇಂಥ ಹುಡುಗನ ಲೈಫಲ್ಲಿ ಹುಡುಗಿ ಎಂಟ್ರಿಯಾಗುತ್ತಾಳೆ. ಅಲ್ಲಿ ಕೊಲೆ, ಪ್ರೀತಿ, ದ್ವೇಷ ಇನ್ನೇನೋ ಆಗುತ್ತೆ. ಕೊನೆಗೊಂದು ಮನಕಲಕುವ ದೃಶ್ಯದ ಅಂತ್ಯವಾಗುತ್ತೆ. ಮುಂದಾ ಅದೇ ಸ್ಪೆಷಲ್.

ಯಾರು ಹೇಗೆ?

ಪ್ರಮೋದ್ ಇಲ್ಲಿ ಎಂದಿಗಿಂತ ಇಷ್ಟವಾಗುತ್ತಾರೆ. ಖಡಕ್ ಡೈಲಾಗ್ ಜೊತೆ ಅವರ ವಾಯ್ಸ್ ಸಿನಿಮಾದ ಮತ್ತೊಂದು ಪ್ಲಸ್. ಶೋಭರಾಜ್ ಖಳನಾಗಿ ಅಬ್ಬರಿಸಿದರೆ, ರವಿಕಾಳೆ ಇರುವಷ್ಟು ಸಮಯ ಗಮನಸೆಳೆಯುತ್ತಾರೆ. ಕಾಜಲ್ ಕೂಡ ನಿರ್ದೇಶಕರು ಹೇಳಿದ್ದನ್ನಷ್ಟೇ ಮಾಡಿದ್ದಾರೆ. ಜೈಲು ಗೆಳೆಯರಾಗಿ ಗೋವಿಂದೇಗೌಡ, (ಜೀ ಜೀ), ಪವನ್, ಮಿಮಿಕ್ರಿ ಗೋಪಿ, ವಿಜಯ್ ಚೆಂಡೂರ್, ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಧರ್ಮ ಪೊಲೀಸ್ ಅಧಿಕಾರಿಯಾಗಿ ಖದರ್ ತೋರಿಸಿದ್ದಾರೆ.

ಮನೋಮೂರ್ತಿ ಅವರ ಸಂಗೀತದ ಒಂದು ಹಾಡು ಗುನುಗುವಂತಿದೆ. ಹಿನ್ನೆಲೆ ಸಂಗೀತ ಕಥೆಗೆ ಪೂರಕವಾಗಿದೆ. ಅರ್ಜುನ್ ಕಿಟ್ಟು ಅವರ ಕತ್ತರಿ ಪ್ರಯೋಗ ಸಿನಿಮಾ ವೇಗ ಹೆಚ್ಚಿಸಿದೆ. ಕೆ.ಎಸ್.ಚಂದ್ರಶೇಖರ್ ಅವರ ಕ್ಯಾಮೆರಾ ಕೈಚಳಕ ಬಾಂಡ್ ರವಿಯನ್ನು ಅಂದವಾಗಿಸಿದೆ.

Related Posts

error: Content is protected !!