ವಿಜಯ ಚಿತ್ರದೊಳು ಎಲ್ಲವೂ ಆನಂದಮಯ! ಸಂಕೇಶ್ವರ ಸಾಧನೆಗೆ ಉಘೇ ಉಘೇ…

ಚಿತ್ರ ವಿಮರ್ಶೆ: ವಿಜಯ್ ಭರಮಸಾಗರ

ರೇಟಿಂಗ್: 3.5 /5

ಚಿತ್ರ : ವಿಜಯಾನಂದ
ನಿರ್ದೇಶನ : ರಿಷಿಕಾ ಶರ್ಮ
ನಿರ್ಮಾಣ : ವಿ ಆರ್ ಎಲ್ ಫಿಲ್ಮ್ ಪ್ರೊಡಕ್ಷನ್
ತಾರಾಗಣ : ನಿಹಾಲ್, ಅನಂತ್ ನಾಗ್, ರವಿಚಂದ್ರನ್, ಪ್ರಕಾಶ್ ಬೆಳವಾಡಿ, ವಿನಯಾ ಪ್ರಸಾದ್, ಭರತ್ ಬೋಪಣ್ಣ, ರಾಜೇಶ್ ನಟರಂಗ ಇತರರು

ಯಾವುದೇ ಸಿನಿಮಾ ಇರಲಿ, ಮೊದಲು ಇಷ್ಟವಾಗಬೇಕು, ಮನಸ್ಸಿಗೆ ನಾಟುವಂತಿರಬೇಕು, ಅದಕ್ಕೂ ಹೆಚ್ಚಾಗಿ ಸ್ಪೂರ್ತಿ ಎನಿಸಬೇಕು. ಒಂದಷ್ಟು ಹಠ, ಛಲ ಮತ್ತು ಬದಲಾವಣೆ ತರುವಂತಾಗಬೇಕು. ಈ ಎಲ್ಲಾ ಗುಣಲಕ್ಷಣ ವಿಜಯಾನಂದ ಸಿನಿಮಾದಲ್ಲಿದೆ. ಇದೊಂದು‌ ‘ಆನಂದ’ಮಯದ ವಿಜಯ ಚಿತ್ರ ಎನ್ನುವುದರಲ್ಲಿ ಎರಡು ಮಾತಿಲ್ಲ…

ಅಪ್ಪನಿಗೆ ಮಗ ಟ್ರಾವೆಲ್ಸ್ ಉದ್ಯಮ ನಡೆಸೋದು ಬಿಲ್ ಕುಲ್ ಇಷ್ಟವಿಲ್ಲ. ಮಗನಿಗೋ ಲಾರಿ ಚಲಾಯಿಸಿ ದೊಡ್ಡ ಉದ್ಯಮಿ ಆಗುವ ಬಯಕೆ. ಅಪ್ಪನ ವಿರೋಧದ ನಡುವೆಯೂ ಮಗ ಸಾಲ ಸೋಲ ಮಾಡಿ ಲಾರಿಯೊಂದನ್ನು ಖರೀದಿಸಿ ತನ್ನ ಕನಸ ಬೆನ್ನತ್ತಿ ಹೊರಡುತ್ತಾನೆ. ಆ ಕನಸಿನ ಹಾದಿ ತುಂಬ ನೂರೆಂಟು ವಿಘ್ನ. ಮುಂದಾ….?

ಇದು ಯಾವುದೋ ರೀಲ್ ಕಥೆಯಲ್ಲ. ರಿಯಲ್ ಕಥೆ. ಹೌದು, ಒಂದೇ ಒಂದು ಲಾರಿ ಖರಿದೀಸಿ ಅದನ್ನ ಸ್ವತಃ ಚಲಾಯಿಸುವ ಮೂಲಕ ತನ್ನ ಸಾರಿಗೆ ಉದ್ಯಮವನ್ನು ದೇಶದ ಉದ್ದಗಲಕ್ಕೂ ವಿಸ್ತರಿಸಿದ ಯಶಸ್ವಿ ಉದ್ಯಮಿ ವಿಜಯ ಸಂಕೇಶ್ವರ ಅವರ ಬಯೋಪಿಕ್ ಇದು.

ಏನು, ಎತ್ತ?

ಸಾಮಾನ್ಯವಾಗಿ ಬಯೋಪಿಕ್ ಸಿನಿಮಾಗಳು ರುಚಿಸೋದು ಕಷ್ಟ. ಆದರೆ, ವಿಜಯ ಸಂಕೇಶ್ವರ ಅವರ ಈ ಬಯೋಪಿಕ್ ನೋಡುಗರಿಗೆ ತುಸು ‘ಆನಂದ’ ಅಂದರೆ ಅತಿಶಯೋಕ್ತಿಯಲ್ಲ. ನಿರ್ದೇಶಕಿ ರಿಷಿಕಾ ಶರ್ಮ, ವಿಜಯ ಸಂಕೇಶ್ವರ ಅವರ ಬದುಕಿನ ಏಳು-ಬೀಳನ್ನು ಅಚ್ಚುಕಟ್ಟಾಗಿ ಕಟ್ಟಿಕೊಡುವಲ್ಲಿ ನಿಜಕ್ಕೂ ಯಶಸ್ವಿಯಾಗಿದ್ದಾರೆ ಎನ್ನಬಹುದು.

ವಿಜಯ ಸಂಕೇಶ್ವರ ಅವರ ಯಶಸ್ವಿ ಬದುಕು ಸುಲಭಕ್ಕೆ ದಕ್ಕಿದ್ದಲ್ಲ. ಅದೊಂದು ಛಲದ ಬದುಕು. ಹಠದ ಕೆಲಸ. ಶ್ಯಾನೆ ಅತ್ಮವಿಶ್ವಾಸದ ವ್ಯಕ್ತಿತ್ವ ಅದಕ್ಕೆಲ್ಲ ಕಾರಣ ಅನ್ನೋದು ಸಿನಿಮಾ ನೋಡಿದವರ ಅರಿವಿಗೆ ಬರುತ್ತೆ.

ಹೇಗಿದೆ?

ಬಯೋಪಿಕ್ ಅಂದರೆ ಇದ್ದದ್ದನ್ನು‌ ಇರುವಂತೆಯೇ ತೋರಿಸಬೇಕು. ಅದಿಲ್ಲಿ ಅಷ್ಟರಮಟ್ಟಿಗೆ ಸಾಧ್ಯವಾಗಿಲ್ಲ. ಕಾರಣ, ವಿನಾಕಾರಣ ಒಂದಷ್ಟು ಕಮರ್ಷಿಯಲ್ ಅಂಶಗಳು ಸೇರಿರೋದು. ಮನರಂಜನೆ ದೃಷ್ಟಿಯಲ್ಲಿ ನೋಡುವುದಾದರೆ ಅಡ್ಡಿಯಿಲ್ಲ. ಅದರೆ, ಬಯೋಪಿಕ್ ಅಂದಾಗ, ಇನ್ನಷ್ಟು ಗಾಢತನದ ಅಗತ್ಯತೆ ಇತ್ತು.

ಇದರ ನಡುವೆಯೂ, ಆರಂಭದಿಂದ ಅಂತ್ಯದವರೆಗೂ ಚಿತ್ರ ನೋಡಿಸಿಕೊಂಡು ಹೋಗುತ್ತೆ ಅಂದರೆ, ಸಿನಿಮಾದ ಬಿಗಿ ನಿರೂಪಣೆ. ಜೊತೆಗೆ ಉತ್ತರ ಕರ್ನಾಟಕದ ಜವಾರಿ ಡೈಲಾಗ್ಸ್ ಕಾರಣ.

ಹೈಲೆಟ್ ಏನು?

ಸಿನಿಮಾದಲ್ಲಿ ಅನವಶ್ಯಕ ದೃಶ್ಯಗಳಿಗೆ ಕತ್ತರಿ ಹಾಕಬಹುದಿತ್ತು. ಇನ್ನು ಸಿನಿಮಾದ ಲೆಂಥ್ ಕೂಡ ಹೆಚ್ಚಾಯ್ತು. ಒಂದಷ್ಟು ಲೆಂಥ್ ಕಡಿಮೆಯಾಗಿದ್ದರೆ, ಸಿನಿಮಾ ಇನ್ನಷ್ಟು ಹತ್ತಿರವಾಗುತ್ತಿತ್ತು. ಅವಧಿ ಹೆಚ್ಚಿದ್ದರೂ ನೋಡಿಸಿಕೊಂಡು ಹೋಗುತ್ತೆ. ಕಾರಣ, ಮತ್ತದೇ ಉತ್ತರ ಕರ್ನಾಟಕದ ಜವಾರಿ ಮಾತುಗಳು ಮತ್ತು ಹಿನ್ನೆಲೆ ಸಂಗೀತ. ಇನ್ನು ರೆಟ್ರೋ ಶೈಲಿಯ ದೃಶ್ಯಗಳು ಕೂಡ ತಕ್ಕಮಟ್ಟಿಗೆ ಖುಷಿಕೊಡುತ್ತವೆ.

ವಿಜಯ ಸಂಕೇಶ್ವರ ಅವರ ಬದುಕಿನ ಹೋರಾಟದ ದಿನಗಳನ್ನು ರೋಚಕವಾಗಿ ತೋರಿಸಲಾಗಿದೆ. ಕಷ್ಟದ ದಿಗಳನ್ನು ಮೆಟ್ಟಿನಿಂತು ತಾನೊಬ್ಬ ಯಶಸ್ವಿ ಉದ್ಯಮಿ ಹೇಗಾದರು ಅನ್ನುವುದನ್ನ ತೋರಿಸುವ ಪರಿ ಇಲ್ಲಿ ಹೈಲೆಟ್.

ಬಯೋಪಿಕ್ ವ್ಯಕ್ತಿ ಈಗ ಎಷ್ಟೊಂದು ರಿಚ್ ಆಗಿದ್ದಾರೋ ಅಷ್ಟೇ ರಿಚ್ ಆಗಿ ವಿಜಯಾನಂದ ಮೂಡಿ ಬಂದಿದೆ. ಒಂದು ಚಿತ್ರದಲ್ಲಿ ಇರಬೇಕಾದ ಕಮರ್ಷಿಯಲ್ ಅಂಶಗಳು ಇಲ್ಲೂ ಇವೆಯಾದರೂ, ಎಲ್ಲೂ ಅವು ಹೆಚ್ಚಾಗಿ ಮೇಳೈಸಿಲ್ಲ. ಇಲ್ಲಿ ಶ್ರಮವಿದೆ, ಹಠ, ಛಲವಿದೆ, ಪ್ರಾಮಾಣಿಕತೆ, ಬುದ್ಧಿವಂತಿಕೆ ಇದೆ. ಎಲ್ಲದ್ದಕ್ಕು ಹೆಚ್ಚಾಗಿ ಕಾಯಕವೇ ಕೈಲಾಸ ಎಂಬ ಅಂಶವಿದೆ. ಜೊತೆಗಿಷ್ಟು ಜೀವ-ಭಾವದ ಮಿಡಿತವಿದೆ, ಅಪ್ಪನ ಬಾಂಧವ್ಯ, ಅಮ್ಮನ ವಾತ್ಸಲ್ಯ, ಮಡದಿಯ ಪ್ರೀತಿ, ಭಾವುಕತೆ, ಸೋಲು, ಗೆಲುವು, ಅವಮಾನ, ಸನ್ಮಾನ ಎಲ್ಲವೂ ಚಿತ್ರದ ವೇಗಕ್ಕೆ ಕಾರಣವಾಗಿವೆ.

ವಿಜಯ ಸಂಕೇಶ್ವರ ಅವರು ತನ್ನ ಬದುಕನ್ನು ಕಟ್ಟಿಕೊಳ್ಳೋಕೆ ಎಷ್ಟೆಲ್ಲಾ ಶ್ರಮ ಪಟ್ಟಿದ್ದಾರೋ, ಅವರ ಬಯೋಪಿಕ್ ಸಿನಿಮಾ ಕಟ್ಟಿಕೊಡಲು ನಿರ್ದೇಶಕರು ಕೂಡ ಶ್ರಮಿಸಿರುವುದು ಕಾಣುತ್ತೆ.

ಒಮ್ಮೆ ನೋಡಲ್ಲಡ್ಡಿಯಿಲ್ಲ

ವಿಜಯ ಸಂಕೇಶ್ವರ ಅವರ ಬದುಕು ಈಗ ಸುಂದರ. ಆದರೆ, ಅದರ ಹಿಂದೆ ಏನೆಲ್ಲಾ ಸಮಸ್ಯೆ ಇತ್ತು, ಹೇಗೆಲ್ಲಾ ಎದುರಿಸಿದರು. ಯಾರೆಲ್ಲಾ ಜೊತೆಗಿದ್ದರು, ಹೇಗೆಲ್ಲ ಸಹಾಯ ಮಾಡಿದರು ಎಂದು ತಿಳಿಯುವ ಕುತೂಹಲವಿದ್ದರೆ, ಒಮ್ಮೆ ಈ ಬಯೋಪಿಕ್ ನೋಡಲ್ಲಡ್ಡಿಯಿಲ್ಲ.

ಯಾರು ಹೇಗೆ?

ನಿಹಾಲ್ ಇಲ್ಲಿ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಸಾಧಿಸುವ ವ್ಯಕ್ತಿಯಾಗಿ ಇಷ್ಟವಾಗುತ್ತಾರೆ, ಕೋಪ ತಾಪ ತಾಳ್ಮೆಯಲ್ಲೂ ಗಮನ ಸೆಳೆಯುತ್ತಾರೆ. ಇನ್ನು, ಅನಂತ್ ನಾಗ್ ಎಂದಿಗಿಂತಲೂ ಇಲ್ಲಿ ಇಷ್ಟವಾಗುತ್ತಾರೆ. ಉತ್ತರ ಕರ್ನಾಟಕ ಡೈಲಾಗ್ ಹೇಳುವ ಮೂಲಕ ಜೀವಿಸಿದ್ದಾರೆ. ರವಿಚಂದ್ರನ್ ಇರುವಷ್ಟು ಕಾಲ ಇಷ್ಟವಾಗುತ್ತಾರೆ. ಪ್ರಕಾಶ್ ಬೆಳವಾಡಿ ಪತ್ರಿಕಾ ಸಂಪಾದಕರಾಗಿ ಗಮನ ಸೆಳೆಯುತ್ತಾರೆ. ಭರತ್ ಭೋಪಣ್ಣ ಸಿಕ್ಕ ಪಾತ್ರ ದಲ್ಲಿ ಜೀವಿಸಿದ್ದಾರೆ. ಗಣೇಶ್ ರಾವ್ ಕೇಸರ್ಕರ್ ಅವರಿಲ್ಲಿ ಸಂಪತ್ ಕಟ್ಟಿಮನಿ ಎಂಬ ಹೋರಾಟಗಾರರಾಗಿ ತೆರೆಯ ಮೇಲೆ ಇರುವಷ್ಟು ಕಾಲ ಗಮನ ಸೆಳೆಯುತ್ತಾರೆ. ತೆರೆ ಮೇಲೆ ಬರುವ ಸಾಕಷ್ಟು ಪಾತ್ರಗಳು ತಮ್ಮ ಕೆಲಸಕ್ಕೆ ಮೋಸ ಮಾಡಿಲ್ಲ.

ಚಿತ್ರಕ್ಕೆ ಗೋಪಿ ಸುಂದರ್ ಸಂಗೀತ ಹೆಚ್ಚು ಮೈಲೇಜ್ ನೀಡಿದೆ. ಅದಕ್ಕೆ ತಕ್ಕಂತೆ ರಘು ನಿಡುವಳ್ಳಿ ಅವರ ಸಂಭಾಷಣೆ, ಹೇಮಂತ್ ಮತ್ತು ಕೀರ್ತನ್ ಪೂಜಾರಿ ಅವರ ಶ್ರಮವೂ ಎದ್ದು ಕಾಣುತ್ತೆ. ಒಟ್ಟಾರೆ ಎಲ್ಲಾ ತಂತ್ರಜ್ಞರ ಕೈಚಳಕದಿಂದ ಚಿತ್ರ ಆನಂದಮಯ.

ಕೊನೇಮಾತು: ವಿಜಯಾನಂದ ನೋಡಿ ಹೊರಬಂದವರಿಗೆ ಲೈಫಲ್ಲಿ ತಾನೂ ಸಾಧನೆ ಮಾಡಬೇಕು, ಪ್ರಾಮಾಣಿಕತೆ ತೋರಬೇಕು, ದೊಡ್ಡ ಕನಸು ಕಾಣಬೇಕು, ಅದನ್ನು ಸಾಕಾರಗೊಳಿಸಬೇಕು ಅಂತೆನಿಸದೇ ಇರದು…

Related Posts

error: Content is protected !!