ಬನ್ನಿ ಸಾಹೇಬ್ರೆ, ಮಾಡೋಣ ಅಂದಿದ್ದೇ ಸಿನಿಲಹರಿ ಹುಟ್ಟಿಗೆ ಕಾರಣ ಅಂದ್ರೆ….
ಹೊಸತೆನ್ನುವುದರ ಆರಂಭ ಹೇಗೆ, ಎಲ್ಲಿ, ಯಾವಾಗ ಎನ್ನುವುದು ಗೊತ್ತೇ ಆಗುವುದಿಲ್ಲ. ಎಲ್ಲವೂ ಆಕಸ್ಮಿಕ ಎನ್ನುವ ಹಾಗೆ. ಸಣ್ಣದೋ, ದೊಡ್ಡದೋ ಒಂದು ಹೊಸ ಸಾಹಸ, ಒಂದು ಪ್ರಯತ್ನ ಅಥವಾ ಒಂದು ಹೊಸ ಕನಸು ನನಸಾಗುವುದಕ್ಕೆ ಒಂದು ನೆಪ ಬೇಕು ಅಷ್ಟೇ. ಒಬ್ಬರ ಪ್ರೇರಣೆಯೋ, ಇಲ್ಲವೇ ಒಬ್ಬರು ಮಾದರಿಯಾಗಿಯೋ, ಇಲ್ಲವೇ ಇನ್ನೋಬ್ಬರ ಮನೋಸ್ಥೈರ್ಯ ದ ಮಾತುಗಳೋ ನಮ್ಮ ಸಾಹಸಗಳಿಗೆ ನೀರೆರೆದು , ಪುಷ್ಟಿನೀಡಿ ಬಿಡುತ್ತವೆ. ಒಟ್ಟಿನಲ್ಲಿ ಒಂದು ಸಂದಿಗ್ದ ಪರಿಸ್ಥಿತಿಯಲ್ಲಿ ನಾವೇನೋ ಮಾಡುತ್ತೇವೆ ಅಂತ ಹೊರಟಾಗ ಪಾಸಿಟಿವ್ ಮಾತುಗಳೇ ದೊಡ್ಡ ಶಕ್ತಿ. ಅವತ್ತು ಅಂತಹ ಮಾತುಗಳನ್ನಾಡುವ ಮೂಲಕ ‘ಸಿನಿಲಹರಿ’ ಶುರುವಿಗೆ ಪ್ರೇರಕರಾದವರು ಲಹರಿ ಸಂಸ್ಥೆಯ ಮಾಲೀಕರಾದ ಲಹರಿ ವೇಲು .
‘ಸಿನಿಲಹರಿ ‘ ಹೆಸರಿನ ಒಂದು ವೆಬ್ ಸೈಟ್ ಮತ್ತು ಯುಟ್ಯೂಬ್ ಚಾನೆಲ್ ಇವತ್ತು ಶುರುವಾಗಿ ನಿಮ್ಮಮುಂದೆ ಅನಾವರಣಗೊಂಡಿದ್ದರೆ ಅದಕ್ಕೆ ಪ್ರೇರಕರಾದವರು ಅನೇಕರು. ಅದರಲ್ಲಿ ಮೊದಲಿಗರು ಲಹರಿ ವೇಲು. ಒಂದು ಸಂಕಷ್ಟದ ಕಾಲದಲ್ಲಿ ಅವರು ‘ ಬನ್ನಿ ಸಾಹೇಬ್ರೆ, ಮಾಡೋಣ …ಅಂತೆನ್ನದೇ ಇದ್ದಿದ್ದರೆ ಇದು ಶುರುವಾಗುತ್ತೋ, ಇಲ್ಲವೋ ಗೊತ್ತಿಲ್ಲ. ಆದರೆ ಆ ಒಂದು ಮಾತಿನಿಂದ ‘ಸಿನಿ ಲಹರಿ’ ಶುರುವಾಯ್ತು. ಅದರ ಅಲೋಚನೆ ಹುಟ್ಟಿಕೊಂಡಿದ್ದ ಸಂದರ್ಭವೇ ವಿಚಿತ್ರ ವಾಗಿತ್ತು.ಆ ದಿನಗಳಲ್ಲೇ ಲಹರಿ ವೇಲು ಅವರು ತಮ್ಮ ಕಚೇರಿಯಲ್ಲಿ ಸರಿಸುಮಾರು 3 ಗಂಟೆಯಷ್ಟು ಕಾಲ ಕೂರಿಸಿಕೊಂಡು, ಸುದೀರ್ಘವಾಗಿ ಮಾತನಾಡಿ, ಸಾಹೇಬ್ರೆ, ನೀವು ಮಾಡ್ತೀರಾ ಮಾಡಿ’ ಅಂತ ಬೆನ್ನು ತಟ್ಟಿದ್ದು ‘ಸಿನಿಲಹರಿ ‘ಹುಟ್ಟಿಗೆ ಕಾರಣ. ಈ ನೆನಪು ಯಾಕಂದ್ರೆ , ಅವತ್ತಿನ ಸಂದರ್ಭವೇ ಭಿನ್ನವಾಗಿತ್ತು.ಆ ದಿನಗಳಲ್ಲಿ ನಮಗೆ ಅವರು ಸಿಕ್ಕರು ಎನ್ನುವ ಕಾರಣಕ್ಕೆ.
ಅದ್ಹೆಂಗೆ ಅಂತೀರಾ? ಲಾಕ್ ಡೌನ್ ಆಗಷ್ಟೇ ತೆರವಾಗಿದ್ದ ಸಂದರ್ಭ. ಜನರ ಓಡಾಟಕ್ಕೆ ಒಂದಷ್ಟು ನಿರ್ಬಂಧಗಳು ಸಡಿಲಗೊಂಡಿದ್ದವು ಎನ್ನುವುದನ್ನು ಬಿಟ್ಟರೆ, ಕೊರೋನಾ ಹರಡುವಿಕೆಯ ಅಬ್ಬರ ಮಾತ್ರ ಕಿಂಚಿತ್ತು ಕಮ್ಮಿ ಆಗಿರಲಿಲ್ಲ. ಜನ ರಸ್ತೆಯಲ್ಲಿ ಓಡಾಡುವುದಕ್ಕೂ ಭಯ ಪಡುತ್ತಿದ್ದರು. ನಂಗಂತೂ ಎದುರಿಗೆ ಬಂದವರೆಲ್ಲ ಕೊರೋನಾ ದಂತೆಯೇ ಕಾಣುತ್ತಿದ್ದರು. ಆ ದಿನಗಳಲ್ಲೇ ನಾನು ಊರಿನಿಂದ ವಾಪಾಸ್ ಬೆಂಗಳೂರಿಗೆ ಬಂದಿದ್ದೆ.ಆ ಹೊತ್ತಿಗಾಗಲೇ ನಾನು ನಿರುದ್ಯೋಗಿ. ಮಾನಸಿಕ ಕಿರಿಕಿರಿ ಆಗಿ, ಕೆಲಸ ಬೇಡ ಅಂತ ಬಿಟ್ಟು ಬಿಟ್ಟಿದ್ದೆ.’ ಅನ್ನ ಹಳಸಿತ್ತು, ನಾಯಿ ಹಸಿದಿತ್ತು ‘ ಅನ್ನೋ ಪರಿಸ್ಥಿತಿ ನಾನು ಕೆಲಸ ಬಿಟ್ಟ ಸಂಸ್ಥೆಗೂ ಇತ್ತು. ಅಲ್ಲಿದ್ದ ಕೆಲವರು ಸಂಭ್ರಮಾಚರಣೆ ಮಾಡಿದ್ದರು. ಆ ಬಗ್ಗೆ ತಲೆ ಕಡೆಸಿಕೊಳ್ಳದೆ, ಎರಡ್ಮೂರು ತಿಂಗಳು ಊರಲ್ಲೇ ಇದ್ದೆ. ವಾಪಾಸ್ ಬೆಂಗಳೂರಿಗೆ ಬರಲೇಬೇಕು.ಬಂದ್ಮೇಲೆ ಏನು ಅಂತ ಗೆಳೆಯ ವಿಜಯ್ ಭರಮ ಸಾಗರ ಜತೆ ಚರ್ಚೆ ಮಾಡುತ್ತಿದ್ದಾಗ, ಆತನೆ, ವೆಬ್ಸೈಟ್ ಪ್ರಪೋಜಲ್ ಇಟ್ಟಿದ್ದ. ಆದರೆ ಅದಕ್ಕೆಲ್ಲ ಯಾರು ಬೆಂಬಲ ನೀಡ್ತಾರೆ, ಹಣಕಾಸು ಹೇಗೆ ಅಂತೆಲ್ಲ ಯೋಚಿಸುತ್ತಲೇ ಬೆಂಗಳೂರಿಗೆ ಬಂದೆ
ಏನಾದರೂ ಮಾಡಲೇ ಬೇಕು ಎನ್ನುವ ಚರ್ಚೆಯಲ್ಲೆ ವಾರ ಕಳೆಯಿತು. ಅಲ್ಲಿ ಇಲ್ಲಿ ಒಂದಷ್ಟು ಗೆಳೆಯರ ಜತೆ ಮಾತುಕತೆ ನಡೆಯಿತು. ಅಲ್ಲಿಂದ ಒಂದಿನ ಲಹರಿವೇಲು ಅವರನ್ನ ಭೇಟಿ ಮಾಡುವ ಆಲೋಚನೆಬಂತು.ತಕ್ಷಣವೇ ಕಾಲ್ ಮಾಡಿಮಾತನಾಡಿದೆ. ನಾಳೆಯೇ ಆಫೀಸ್ ಗೆ ಬನ್ನಿ,ಅಂದ್ರು. ಅದೇ ಮಾತಿನಂತೆ ಮಧ್ಯಾಹ್ನ 2 ಗಂಟೆಗೆ ಅವರದೇ ಆಫೀಸ್ ನಲ್ಲಿ ಭೇಟಿಯಾದೆವು. ‘ ನಾಲ್ಕು ತಿಂಗಳಾದವು ಸಾಹೇಬ್ರೆ, ಅಫೀಸ್ ಮುಖ ನೋಡದೆ. ನಿಮಗಾಗಿಯೇ ಇವತ್ತು ಇಲ್ಲಿಗೆ ಬಂದೆ. ಬೇರೆ ಯಾರೇ ಆಗಿದ್ದರೂ, ಆಫೀಸ್ ಗೆ ಬರುತ್ತಿರಲಿಲ್ಲ’ ಅಂತ ಕೊರೋನಾ ಆತಂಕದ ಬದುಕನ್ನು ವಿವರಿಸುತ್ತಾ ಮಾತಿಗೆ ಕುಳಿತರು.
ಮೂರು ತಾಸು ಮಾತುಕತೆ ನಡೆಯಿತು. ನಮ್ಮಪರಿಸ್ಥಿತಿ ಕೇಳಿ ನೊಂದುಕೊಂಡರು. ಕೊನೆಗೆ ಅವರು ಹೇಳಿದ್ದು ಒಂದೇ ಮಾತು, ‘ ಸಾಹೇಬ್ರೆ , ನೀವೆನು ಯೋಚನೆ ಮಾಡ್ಬೇಡಿ. ನೀವೇನು, ನಿಮ್ಮಸಾಮಾರ್ಥ್ಯವೇನು ಅಂತ ನಂಗೊತ್ತು. ನಾನಿದ್ದೇನೆ, ವೆಬ್ ಸೈಟ್ ಮಾಡಿ, ಒಳ್ಳೆಯದಾಗುತ್ತೆ ‘ ಅಂದ್ರು.ಆ ಒಂದು ಮಾತು ನಮಗೆ ಅನೆ ಬಲ ನೀಡಿತು. ಅಲ್ಲಿಂದಶುರುವಾದ ವೆಬ್ ಸೈಟ್ ಕೆಲಸಕ್ಕೆ ಅನೇಕರು ಸಾಥ್ ಕೊಟ್ಟರು.ಅನೇಕರುಪ್ರೊತ್ಸಾಹ ದಾಯಕಮಾತುಗಳನ್ನು ಆಡಿದರು.ಹಲವರು ನಾವಿದ್ದೇವೆ ಮಾಡಿ ಅಂತ ಬೆನ್ನಿಗೆ ನಿಂತಿರು. ಅದೆಲ್ಲದರ ಪ್ರತಿಫಲವೇ’ ಸಿನಿಲಹರಿ’. ಎಲ್ಲದರಿಗೂ ಧನ್ಯವಾದ.