Categories
ಸಿನಿ ಸುದ್ದಿ

ಕೆಆರ್‌ಜಿ ಸ್ಟುಡಿಯೋಸ್‌ನ ಸಾಲು ಸಾಲು ಚಿತ್ರಗಳಲ್ಲಿ ಡಾಲಿ ಧನಂಜಯ್ ನಟನೆ ; ಈ ಸಂಸ್ಥೆಯ ರತ್ನನ ಪ್ರಪಂಚ ಸದ್ಯದಲ್ಲೇ ತೆರೆಗೆ

ನಟ “ಡಾಲಿ” ಧನಂಜಯ್‌ ಸದ್ಯ ಫುಲ್‌ ಬಿಝಿ. ಹೌದು, “ಟಗರು” ಮೂಲಕ “ಡಾಲಿ” ಅಂತಾನೇ ಗುರುತಿಸಿಕೊಂಡ ಧನಂಜಯ್‌ ಆ ಬಳಿಕ ಸಾಲು ಸಾಲು ಸಿನಿಮಾಗಳಿಗೆ ಹೀರೋ ಆಗಿಬಿಟ್ಟರು. ಅದರಲ್ಲೂ ಧನಂಜಯ್‌ ಅವರು ಕೆ.ಆರ್.ಜಿ ಸ್ಟುಡಿಯೋಸ್ ಜೊತೆ ಒಂದು ದೀರ್ಘಕಾಲಿಕ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಅನ್ನೋದು ವಿಶೇಷ. ಅವರಿಬ್ಬರೂ ಜೊತೆಗೂಡಿ ಹಲವಾರು ಚಿತ್ರಗಳನ್ನು ಸಾಲಾಗಿ ಮಾಡಲಿದ್ದಾರೆ ಎಂಬ ಸುದ್ದಿ ಜೋರಾಗಿದೆ.

ಒಟ್ಟಾರೆ, ಧನಂಜಯ್ ಅಭಿಮಾನಿಗಳಿಗೆ ಕೆ.ಆರ್.ಜಿ ಸ್ಟುಡಿಯೋ ಭರ್ಜರಿ ರಸದೌತಣ ನೀಡಲು ಸಿದ್ದವಾಗಿದೆ. ಸದ್ಯದಲ್ಲೇ ನೂತನ ಚಿತ್ರಗಳ ಶೀರ್ಷಿಕೆ ಹಾಗೂ ತಾಂತ್ರಿಕವರ್ಗದ ಮಾಹಿತಿ ಹೊರ ಬರುವ ನಿರೀಕ್ಷೆಯಿದೆ. ಕೆ.ಆರ್.ಜಿ ಸ್ಟುಡಿಯೋಸ್ ಬ್ಯಾನರ್‌ನಲ್ಲಿ ಕಾರ್ತಿಕ್ ಗೌಡ ಹಾಗೂ ಯೋಗಿ ಜಿ.ರಾಜ್ ನಿರ್ಮಾಣ ‌ಮಾಡಿರುವ, “ಡಾಲಿ” ಧನಂಜಯ ನಾಯಕನಾಗಿ ಅಭಿನಯಿಸಿರುವ “ರತ್ನನ ಪ್ರಪಂಚ” ಚಿತ್ರ ಸಹ ಸದ್ಯದಲ್ಲೇ ತೆರೆಗೆ ಬರಲಿದೆ.

ರೋಹಿತ್ ಪದಕಿ ನಿರ್ದೇಶಿಸಿರುವ ಈ ಚಿತ್ರದ ಬಗ್ಗೆ ಗಾಂಧಿನಗರದಲ್ಲಿ ಉತ್ತಮ ಮಾತುಗಳು ಕೇಳಿ ಬರುತ್ತಿದೆ. ಅಜನೀಶ್ ಲೋಕನಾಥ್ “ರತ್ನನ‌ ಪ್ರಪಂಚ”ಕ್ಕೆ ಸಂಗೀತ ನೀಡಿದ್ದಾರೆ. ಶ್ರೀಶ ಛಾಯಾಗ್ರಾಹಣವಿದೆ. ಡಾಲಿಗೆ ನಾಯಕಿಯಾಗಿ ರೆಬಾ ಜಾನ್ ಕಾಣಿಸಿಕೊಂಡಿದ್ದಾರೆ. ಉಮಾಶ್ರೀ, ಅನು ಪ್ರಭಾಕರ್ ಇತರರು ಚಿತ್ರದ ಚಿತ್ರದಲ್ಲಿದ್ದಾರೆ.

Categories
ಸಿನಿ ಸುದ್ದಿ

ಸಿಂಗಲ್ ಸ್ಕ್ರೀನ್‌ ಚಿತ್ರಮಂದಿರಗಳ ಆಸ್ತಿ ತೆರಿಗೆ ಮನ್ನಾ; ಟಾಕೀಸ್ ಮಾಲೀಕರಿಗೆ ಕೊನೆಗೂ ಸಿಕ್ತು ಒಂದಷ್ಟು ರಿಲ್ಯಾಕ್ಸ್


ರಾಜ್ಯದಲ್ಲಿರುವ 630ಕ್ಕೂ ಹೆಚ್ಚು ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಿಗೆ ಪ್ರಸಕ್ತ ಸಾಲಿನ ಆಸ್ತಿ ತೆರಿಗೆ ಪಾವತಿಯಿಂದ ವಿನಾಯಿತಿ ಸಿಕ್ಕಿದೆ. ಈ ಕುರಿತು ವಾರ್ತಾ ಇಲಾಖೆ ಬುಧವಾರ ಆದೇಶ ಹೊರಡಿಸಿದೆ. ಕರ್ನಾಟಕ ಚಿತ್ರ ಪ್ರದರ್ಶಕರ ಸಂಘದ ಮನವಿ ಮೇರೆಗೆ ರಾಜ್ಯ ಸರ್ಕಾರ ಸ್ಪಂದಿಸಿದೆ. ಕೊರೊನಾ ಲಾಕ್‌ಡೌನ್‌ನಿಂದಾಗಿ ಕಳೆದ ವರ್ಷದಿಂದಲೂ ಚಿತ್ರಮಂದಿರಗಳು ಬಹುತೇಕ ಬಂದ್ ಆಗಿದ್ದವು.

ರಾಜ್ಯದಲ್ಲಿ 14 ತಿಂಗಳಿನಿಂದ ಬಹುತೇಕ ಚಿತ್ರಮಂದಿರಗಳ ಬಾಗಿಲು ತೆರೆದಿಲ್ಲ. ಆದರೆ ಆಸ್ತಿ ತೆರಿಗೆ, ವಿದ್ಯುತ್ ಶುಲ್ಕ ಇನ್ನಿತರೆ ಶುಲ್ಕಗಳನ್ನು ಪಾವತಿಸಲೇ ಬೇಕಿತ್ತು. ಈ ಹಿನ್ನೆಲೆಯಲ್ಲಿ ಕಂಗಲಾಗಿದ್ದ ಚಿತ್ರ ಮಂದಿರ ಮಾಲೀಕರಿಗೆ ಈಗ ಒಂದಷ್ಟು ರಿಲ್ಯಾಕ್ಸ್ ಸಿಕ್ಕಿದೆ.

ಸಂಕಷ್ಟದಲ್ಲಿರುವ ಚಿತ್ರಮಂದಿರಗಳಿಗೆ ಆಸ್ತಿ ತೆರಿಗೆ, ವಿದ್ಯುತ್ ಶುಲ್ಕ ಪಾವತಿ ರದ್ದು ಮಾಡಬೇಕು ಎಂದು ರ್ನಾಟಕ ಚಿತ್ರ ಪ್ರದರ್ಶಕರ ಸಂಘ, ಏಕ ಪರದೆ (ಸಿಂಗಲ್ ಸ್ಕ್ರೀನ್) ಚಿತ್ರಮಂದಿರಗಳಿಗೆ ಆಸ್ತಿ ತೆರಿಗೆ ಪಾವತಿಯಿಂದ ವಿನಾಯಿತಿ ನೀಡುವಂತೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿತ್ತು. ಅದಕ್ಕೆ ಸರ್ಕಾರ ಸ್ಪಂದಿಸಿದೆ. ಏಕ ಪರದೆಯ ಚಿತ್ರಮಂದಿರಗಳ ಪ್ರಸಕ್ತ ವರ್ಷದ ಆಸ್ತಿ ತೆರಿಗೆಯನ್ನು ಮನ್ನಾ ಮಾಡಿದೆ. ಇದರಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ 9 ಕೋಟಿ ಹೊರೆಯಾಗಲಿದೆ ಎಂದು ವಾರ್ತಾ ಇಲಾಖೆ ಆದೇಶದಲ್ಲಿ ತಿಳಿಸಿದೆ.

Categories
ಸಿನಿ ಸುದ್ದಿ

ನಿರ್ದೇಶಕ ಕಮ್ ನಿರ್ಮಾಪಕ ದಯಾಳ್ ಪದ್ಮನಾಭನ್ ಕೂಡ ಜಾತಿ ಅವಮಾನ ಅನುಭವಿಸಿದ್ರಾ?

ನನ್ನ ಜಾತಿ ಹಾಗೂ ಭಾಷೆ ನಿಮಗೆ ಸಮಸ್ಯೆ ಎನಿಸಿತು ಹಾಗಾಗಿ ನನಗೆ ಎಫ್‌ಯುಸಿ ಪ್ರವೇಶ ನಿರಾಕರಿಸಿದ್ರಿ..….
ಇದು ನಿರ್ದೇಶಕ ದಯಾಳ್‌ ಪದ್ಮನಾಭನ್‌ ಅವರ ನೋವಿನ ನುಡಿ. ಅಂದ ಹಾಗೆ, ಲೂಸಿಯಾ ಖ್ಯಾತಿಯ ನಿರ್ದೇಶಕ ಪವನ್‌ ಕುಮಾರ್‌ ನೇತೃತ್ವದಲ್ಲಿ ಈ ಹಿಂದೆ ಶುರುವಾದ ಎಫ್‌ಯುಸಿ ಗೆ ನಿರ್ದೇಶಕರಾದ ತಾವು ಸೇರ ಬಯಸಿದಾಗ ನಿರಾಕರಿಸಿದ್ದರ ಹಿಂದಿನ ಕಾರಣವನ್ನು ದಯಾಳ್‌ ಈಗ ಬಿಚ್ಚಿಟ್ಟಿದ್ದಾರೆ. ನಿರ್ದೇಶಕರಾದ ಪವನ್‌ ಕುಮಾರ್‌ ಹಾಗೂ ದಯಾಳ್‌ ಪದ್ಮಾನಾಭನ್‌ ನಡುವೆ ಅದ್ಯಾಕೆ ಈಗ ಚರ್ಚೆಗೆ ಬಂದಿದೆಯೋ ಗೊತ್ತಿಲ್ಲ. ಆದರೆ ಪವನ್‌ ಕುಮಾರ್‌ ನೇತೃತ್ವದ ಎಫ್‌ಯುಸಿ ಗೆ ತಮ್ಮನ್ನು ನಿರಾಕರಿಸಿದ್ದರ ಹಿಂದಿನ ಕಾರಣ ಏನು ಅಂತ ಈಗ ಸೋಷಲ್‌ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ. ಅದನ್ನು ಪವನ್‌ ಕುಮಾರ್‌ ಅವರಿಗೆ ಉತ್ತರ ರೂಪದಲ್ಲಿ ಬಿಚ್ಚಿಟ್ಟಿದ್ದಾರೆ.

ʼ ನನ್ನ ಜಾತಿ ಹಾಗೂ ಭಾಷೆ ನಿಮಗೆ ಸಮಸ್ಯೆ ಎನಿಸಿತು ಹಾಗಾಗಿ ನನಗೆ ಎಫ್‌ಯುಸಿ ಪ್ರವೇಶ ನಿರಾಕರಿಸಿದಿರ ನನ್ನ, ಹೋರಾಡುವ ಛಾತಿ, ಎತ್ತರಕ್ಕೆ ಬೆಳೆಯುವ ಹಂಬಲ, ನೇರ, ನಿಷ್ಠುರ ಮಾತು, ನನ್ನ ಸ್ವತಂತ್ರ ಚಿಂತನೆಗಳು ಸಹ ನಿಮಗೆ ಸಹಿಸಲಾಗದೆ ನನ್ನನ್ನು ಹೊರಗಿಟ್ಟಿರಿ” ಎಂದಿದ್ದಾರೆ. ”ಎಫ್‌ಯುಸಿಯ ಆಹ್ವಾನವನ್ನು ನೀವೇ ನನಗೆ ಕಳಿಸಿದಿರಿ. ಈಗ ಅದನ್ನು ‘ಪ್ರೊಪೋಸಲ್’ ಎಂದು ನೀವು ಕರೆಯುತ್ತಿದ್ದೀರಿ. ನಾನಾಗಿಯೇ ಬಂದು ನನ್ನನ್ನು ತಂಡದಲ್ಲಿ ಸೇರಿಸಿಕೊಳ್ಳಿ ಎಂದು ಕೇಳಿರಲಿಲ್ಲ.

https://m.facebook.com/story.php?story_fbid=10159268455612158&id=597452157

ಇದಕ್ಕಿಂತಲೂ ಉತ್ತಮವಾದ ಕೆಲಸಗಳು ನನ್ನ ಬಳಿ ಇದ್ದವು” ಎಂದು ಪವನ್‌ಗೆ ಉತ್ತರಿಸಿದ್ದಾರೆ ದಯಾಳ್.ಸದ್ಯಕ್ಕೆ ಇದು ಹವನ್‌ ಅವರಿಗೆ ನೀಡಿದ ಉತ್ತರ ಆಗಿರಬಹುದು, ಆದರೆ ಈಗ ಚಿತ್ರರಂಗದಲ್ಲಿ ಜಾತಿ ವಿಚಾರ ತೀವ್ರ ಚರ್ಚೆಯಲ್ಲಿದೆ. ಅದೇ ಹೊತ್ತಿಗೆ ದಯಾಳ್‌ ಅವರ ಹೇಳಿಕೆ ಕೂಡ ತೀವ್ರ ಗಮನ ಸೆಳೆದಿದಿದೆ.

ಕನ್ನಡ ಚಿತ್ರರಂಗದಲ್ಲಿ ಜಾತಿ ಇದೆ ಇಲ್ಲವೋ ಗೊತ್ತಿಲ್ಲ, ಆದರೆ ಈಗ ಚಿತ್ರರಂಗದಲ್ಲಿ ಜಾತಿ ವಿಚಾರ ಮನ್ನೆಲೆಗೆ ಬಂದಿದೆ ಎನ್ನುವುದಕ್ಕೆ ಇತ್ತೀಚಿನ ಕೆಲವು ವಿವಾದಗಳು ಸಾಕ್ಷಿ. ಯಾವುದೋ ಚರ್ಚೆಯ ವಿಚಾರದಲ್ಲಿ ನಟ ಉಪೇಂದ್ರ ಅವರು, ಮಹಾ ನಾಯಕ ಅಂಬೇಡ್ಕರ್‌ ಹೇಳಿಕೆಯೊಂದನ್ನು ಇನ್ನಾರೋ ಹೇಳಿದ್ದು ಅಂತ ಹೇಳಿದ್ದೆ ಸಿನಿಮಾದೊಳಗಡೆಯೂ ಜಾತಿ ಚರ್ಚೆ ಹುಟ್ಟು ಹಾಕಿದ್ದು ನಿಮಗೂ ಗೊತ್ತು. ಉಪೇಂದ್ರ ಅವರ ಮಾತಿಗೆ ಆ ದಿನಗಳು ಖ್ಯಾತಿಯ ನಟ ಚೇತನ್‌ ನೀಡಿದ ಪ್ರತಿಕ್ರಿಯೆ ದೊಡ್ಡ ವಿವಾದ ಹುಟ್ಟು ಹಾಕಿತು. ಮುಂದೆ ಯುವ ನಟ ಕಿರಣ್‌ ಶ್ರೀನಿವಾಸ್‌ ಕೂಡ ಚಿತ್ರರಂಗದೊಳಗಡೆಯ ಜಾತಿ ಕುರಿತು ಮಾತನಾಡಿದರು. ಕೊನೆಗೆ ನಟ ಸಂಚಾರಿ ನಿಧನದ ನಂತರ ಅವರ ಜಾತಿಯ ಅವಮಾನದ ಕುರಿತು ನಟ ಸತೀಶ್‌ ನೀನಾಸಂ ಆಡಿದ ಮಾತು ಕೂಡ ಸಂಚಲನ ಸೃಷ್ಟಿಸಿತು. ಈಗ ನಿರ್ದೇಶಕ ದಯಾಳ್‌ ಪದ್ಮನಾಭನ್‌ ಕೂಡ ಜಾತಿ ಅವಮಾನ ಕುರಿತು ಮಾತನಾಡಿದ್ದಾರೆ.

ಎಫ್‌ಯುಸಿಯ ಆಹ್ವಾನವನ್ನು ನೀವೇ ನನಗೆ ಕಳಿಸಿದಿರಿ. ಈಗ ಅದನ್ನು ‘ಪ್ರೊಪೋಸಲ್’ ಎಂದು ನೀವು ಕರೆಯುತ್ತಿದ್ದೀರಿ. ನಾನಾಗಿಯೇ ಬಂದು ನನ್ನನ್ನು ತಂಡದಲ್ಲಿ ಸೇರಿಸಿಕೊಳ್ಳಿ ಎಂದು ಕೇಳಿರಲಿಲ್ಲ. ಇದಕ್ಕಿಂತಲೂ ಉತ್ತಮವಾದ ಕೆಲಸಗಳು ನನ್ನ ಬಳಿ ಇದ್ದವು” ಎಂದು ಪವನ್‌ಗೆ ಉತ್ತರಿಸಿದ್ದಾರೆ ದಯಾಳ್. ”ನನಗೆ ಅವಮಾನ ಮಾಡಿದ್ದಕ್ಕೆ ನೀವು ಮತ್ತು ನಿಮ್ಮ ಎಫ್‌ಯುಸಿ ಸದಸ್ಯರು ತಕ್ಕ ಶಾಸ್ತಿ ಅನುಭವಿಸಿಯೇ ತೀರುತ್ತೀರ. ನಿಮಗೆ ಹಾಗೂ ನಿಮ್ಮ ತಂಡದ ಸದಸ್ಯರಿಗೆ ಸಮಯವೇ ಸೂಕ್ತ ಪಾಠ ಕಲಿಸಲಿದೆ. ಯಾವುದು ಸಹ ನನ್ನನ್ನು ಬದಲಾವಣೆ ಮಾಡಲಾರದು. ಏನಾದರೂ ಎದುರು ಬರಲಿ, ನಾನು ಕೊನೆಯವರೆಗೆ ಕನ್ನಡ ಸಿನಿಮಾ ನಿರ್ದೇಶಕನಾಗಿ ಇರುತ್ತೇನೆ” ಎಂದಿದ್ದಾರೆ ದಯಾಳ್.

Categories
ಸಿನಿ ಸುದ್ದಿ

ದಯವಿಟ್ಟು ಬೇಸರ ಪಟ್ಟುಕೊಳ್ಳಬೇಡಿ- ಅಭಿಮಾನಿ ದೇವರಿಗೆ ಸೆಂಚುರಿ ಸ್ಟಾರ್‌ ಮನವಿ ಮಾಡಿಕೊಂಡಿದ್ದು ಯಾಕೆ ?

ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ತಮ್ಮ ಅಭಿಮಾನಿ ದೇವರುಗಳಿಗೆ ವಿಶೇಷ ಸಂದೇಶ ರವಾನಿಸಿದ್ದಾರೆ. ಸಂಕಷ್ಟದ ಸಮಯದಲ್ಲಿ ಸಂಭ್ರಮಾಚರಣೆ ಬೇಡವೆಂದು ನಿರ್ಧರಿಸಿರುವ ಶಿವಣ್ಣ ತಮ್ಮ ಹುಟ್ಟುಹಬ್ಬಕ್ಕೆ ಬ್ರೇಕ್ ಹಾಕಿದ್ದಾರೆ. ತಮ್ಮ ಬರ್ತ್ಡೇ ಸೆಲಬ್ರೇಷನ್‌ಗಿಂತ ನಿಮ್ಮೆಲ್ಲರ ಆರೋಗ್ಯ ಮುಖ್ಯವೆಂದು ತೀರ್ಮಾನಿಸಿರುವ ಶಿವಣ್ಣ ವಿಡಿಯೋ ಮೂಲಕ ದೊಡ್ಮನೆ ಅಭಿಮಾನಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.

“ಹುಟ್ಟುಹಬ್ಬಕ್ಕಿಂತ ನಿಮ್ಮೆಲ್ಲರ ಆರೋಗ್ಯ ತುಂಬಾ ಮುಖ್ಯ. ದೇವರ ದಯೆಯಿಂದ ಕೊರೊನಾ ಕಮ್ಮಿ ಆಗಿದೆ. ಹಾಗಂತ ಎಚ್ಚರಿಕೆಯಿಂದ ಇರುವ ಸಮಯ ಮುಗಿದಿಲ್ಲ. ಮುಂದೆ ಇನ್ನೂ ಎಚ್ಚರಿಕೆಯಿಂದ ಇರಬೇಕು. ಜುಲೈ 12 ನನ್ನ ಹುಟ್ಟಿದ ದಿನ ಎಲ್ಲರಿಗೂ ಗೊತ್ತಿದೆ. ಕೆಲವು ಕಾರಣಗಳಿಂದ ನಾನು ಬೆಂಗಳೂರಿನಲ್ಲಿ ಇರಲ್ಲ. ದಯವಿಟ್ಟು ಬೇಸರ ಮಾಡಿಕೊಳ್ಳಬೇಡಿ. ನಿಮಗೆ ಎಷ್ಟು ಬೇಸರ ಆಗುತ್ತಿದೆಯೋ ನನಗೂ ಅಷ್ಟೇ ಆಗುತ್ತಿದೆ. ನಿಮ್ಮ ವಿಶ್‌ಗಳನ್ನ ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿ. ನಿಮ್ಮ ಪ್ರೀತಿ, ವಿಶ್ವಾಸ ಪ್ರೋತ್ಸಾಹ ಯಾವಾಗಲೂ ಇರಬೇಕು. ದಯವಿಟ್ಟು ಕೊರೊನಾ ನಿಯಮ ಫಾಲೋ ಮಾಡಿ ಮಾಸ್ಕ್ ಹಾಕಿಕೊಳ್ಳಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ ಎಲ್ಲರೂ ವ್ಯಾಕ್ಸಿನೇಷನ್ ಹಾಕಿಸಿಕೊಳ್ಳಿ ದಯವಿಟ್ಟು ಯಾರು ಬೇಜಾರ್ ಮಾಡಿಕೊಳ್ಳಬೇಡಿ. ಆದಷ್ಟು ಬೇಗ ಕೊರೊನಾ ದೂರವಾಗಿ ಎಲ್ಲರೂ ಒಟ್ಟಾಗಿ ಸೇರುವ ದಿನ ಬರಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿಕೊಳ್ಳೋಣ. ಮನೆಯಲ್ಲೇ ಇರಿ ಎಲ್ಲರೂ ಸೇಫ್ ಆಗಿರಿ ಎಲ್ಲರನ್ನೂ ಸೇಫಾಗಿಡಿ ಹೀಗಂತ ಶಿವಣ್ಣ ಅಭಿಮಾನಿ ದೇವರುಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಆರಾಧ್ಯದೈವನ ಮನವಿಯಂತೆ ನಡೆದುಕೊಳ್ಳೋಕೆ ದೊಡ್ಮನೆ ಭಕ್ತರು ನಿರ್ಧರಿಸಿದ್ದಾರೆ. ಕಾಮನ್ ಡಿಪಿ ಜೊತೆಗೆ ಶಿವಣ್ಣನ ಅಪ್‌ಕಮ್ಮಿಂಗ್ ಸಿನಿಮಾಗಳ ಪೋಸ್ಟರ್ ಹಾಗೂ ಟೀಸರ್‌ಗಳನ್ನ ಸೋಷಿಯಲ್ ಲೋಕದಲ್ಲಿ ಹಂಚಿಕೊಳ್ಳುವ ಮೂಲಕ ಬ್ರ್ಯಾಂಡ್ ಮಾಡಲಿಕ್ಕೆ ಅಭಿಮಾನಿಗಳು ಸಜ್ಜಾಗಿದ್ದಾರೆ. ಅಭಿನಯ ಚಕ್ರವರ್ತಿಯ ಹುಟ್ಟುಹಬ್ಬದಂದು ಪೋಸ್ಟರ್‌ ಹಾಗೂ ಟೀಸರ್ ಜೊತೆ ಹೊಸ ಸಿನಿಮಾಗಳು ಅನೌನ್ಸ್ ಆಗುವ ನಿರೀಕ್ಷೆಯಿದೆ. ಭಜರಂಗಿ 2 ಚಿತ್ರ ಬಿಡುಗಡೆಗೆ ಸಜ್ಜಾಗಿದ್ದು123 ನೇ ಸಿನಿಮಾದಲ್ಲಿ ಶಿವಣ್ಣ ಬ್ಯುಸಿಯಾಗಿದ್ದಾರೆ. ಅಂದ್ಹಾಗೇ ಈ ಚಿತ್ರಕ್ಕೆ ವಿಜಯ್ ಮಿಲ್ಟನ್ ನಿರ್ದೇಶನವಿದ್ದು,ಶಿವಪ್ಪ ಅಂತ ಟೈಟಲ್ ಫಿಕ್ಸ್ ಮಾಡಲಾಗಿತ್ತು, ಆದರೆ, ಶಿವಪ್ಪ ಟೈಟಲ್ ಮ್ಯಾಚ್ ಆಗ್ತಿಲ್ಲ ಎನ್ನುವ ಕಾರಣಕ್ಕೆ ಚೇಂಜ್ ಮಾಡ್ತಿದ್ದಾರೆ. ಬರ್ತ್ಡೇ ದಿನ ಹೊಸ ಟೈಟಲ್ ಅನಾವರಣಗೊಳ್ಳಲಿದೆ

Categories
ಸಿನಿ ಸುದ್ದಿ

ಡ್ಯಾನ್ಸರ್ಸ್ ಕಷ್ಟಕ್ಕೆ ಮಿಡಿಯಿತು ನಿಖಿಲ್ ಮನ !

ಸ್ಯಾಂಡಲ್ ವುಡ್‌ ನ ಯುವರಾಜ ನಿಖಿಲ್ ಕುಮಾರ್ ರೀಲ್ ನಲ್ಲಿ ಮಾತ್ರವಲ್ಲ ರಿಯಲ್ ಲೈಫ್ ನಲ್ಲೂ ಹೀರೋ ಅನ್ನೋದನ್ನ ಪ್ರೂ ಮಾಡಿದ್ದಾರೆ. ಈಗ ಮತ್ತೊಬ್ಬ ರಿಯಲ್ ಹೀರೋ ಅಂತ ಸಾಬೀತುಪಡಿಸಿದ್ದಾರೆ.

ಲಾಕ್ ಡೌನ್ ನಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದ ಬೆಂಗಳೂರಿನ ಡಾನ್ಸರ್ಸ್ ಅಸೋಸಿಯೇಷನ್ ಸದಸ್ಯರಿಗೆ ಫುಡ್ ಕಿಡ್ ವಿತರಣೆ ಮಾಡಿದ್ದಾರೆ.
ಡಾನ್ಸ್ ಮಾಸ್ಟರ್ ಭೂಷಣ್ ಜೊತೆ ಸೇರಿ ಆಹಾರ ಕಿಟ್ ವಿತರಿಸಿದ್ದಾರೆ. ಇನ್ನು ರಾಮನಗರದಲ್ಲಿ ಅಂಗನವಾಡಿ ಸಿಬ್ಬಂದಿ, ದಾದಿಯರು ಹಾಗೂ ಕೊರೋನಾ ವಾರಿಯರ್ಸ್‌ ಗೂ ನಟ ನಿಖಿಲ್ ಕುಮಾರ್‌ , ಫುಡ್‌ ಕಿಟ್‌ ವಿತರಣೆ ಮಾಡಿದ್ದರು.

Categories
ಸಿನಿ ಸುದ್ದಿ

ಅದ್ಧೂರಿ ಕಾಂಬಿನೇಷನ್‌ಗೆ ಬಿಗ್ ಸ್ಕ್ರೀನ್ ಹೊಡೀತು ಕೇಕೆ!

ಅದ್ದೂರಿ ಜೋಡಿ ಮತ್ತೆ ಒಂದಾಗಬೇಕು ಅನ್ನೋದು ಆಕ್ಷನ್ ಪ್ರಿನ್ಸ್ ಅಭಿಮಾನಿಗಳ ಬಹುದೊಡ್ಡ ಕನಸು. ಆ ಮಹಾಕನಸು ಕೊನೆಗೂ ಈಡೇರಿದೆ. ಧ್ರುವ ಹಾಗೂ ಎ.ಪಿ ಅರ್ಜುನ್ ಮತ್ತೆ ಒಂದಾಗಿದ್ದಾರೆ. ಒಂಭತ್ತು ವರ್ಷಗಳ ನಂತರ ಇಬ್ಬರು ಕೈ‌ ಜೋಡಿಸಿದ್ದಾರೆ. ಅಭಿಮಾನಿ ದೇವರುಗಳ ಕನಸನ್ನ ಈಡೇರಿಸಿದ್ದಾರೆ.


ಅದ್ದೂರಿ ಧ್ರುವ ಡೆಬ್ಯೂ ಚಿತ್ರ. ನಾಯಕ ನಟನಾಗಿ ಬೆಳ್ಳಿ ಭೂಮಿ ಮೇಲೆ ಮೆರವಣಿಗೆ ಹೊರಟ ಮೊದಲ ಸಿನಿಮಾ. ಚೊಚ್ಚಲ ಚಿತ್ರದಲ್ಲೇ ಭರವಸೆ ಮೂಡಿಸಿ ನಾಯಕನಟನ ಪಟ್ಟಕ್ಕೇರಿದ, ಸ್ಟಾರ್ ಸಿನಿಮಾಗಳಿಗೆ ಸೆಡ್ಡು ಹೊಡೆದು ಬೆಳ್ಳಿ ತೆರೆಮೇಲೆ ಗುಡುಗಿ ಸ್ಟಾರ್ ನಟ ಎನಿಸಿಕೊಳ್ಳೋಕೆ ಸಾಧ್ಯವಾಗಿಸಿದ ಮೊದಲ ಸಿನಿಮಾ.

ಇಂತಹ ಅದ್ಬುತ ಚಿತ್ರದ ಸಾರಥಿ ಎ. ಪಿ ಅರ್ಜುನ್. ಧ್ರುವ- ಅರ್ಜುನ್ ಕಾಂಬೋ ಮತ್ತೆ ಒಂದಾಗಿದೆ ಅಂದರೆ ನಿರೀಕ್ಷೆಗಳು ಗರಿಗೆದರುತ್ತವೆ.

ಅಭಿಮಾನಿ ವಲಯದಲ್ಲಿ ಮಾತ್ರವಲ್ಲ ಗಾಂಧಿ ನಗರದ ಮಂದಿ‌ ಕೂಡ ಇವರಿಬ್ಬರ ಜುಗಲ್ ಬಂಧಿಯ ಮೇಲೆ‌ ಕೂತೂಹಲ ಕೆರಳಿರುತ್ತೆ. ಬೆಳ್ಳಿತೆರೆ ಮಾತ್ರವಲ್ಲ ಬಾಕ್ಸ್ ಆಫೀಸ್ ಕೂಡ ಇವರಿಬ್ಬರು ಜೊತೆಯಾಗಿರುವ ಸುದ್ದಿಕೇಳಿ ಥ್ರಿಲ್ಲಾಗಿರುತ್ತೆ. ಆಕ್ಷನ್ ಪ್ರಿನ್ಸ್ ದುಬಾರಿಯಾಗೋದಕ್ಕೆ ಹೊರಟ್ದಿದ್ದರು. “ಪೊಗರು” ಡೈರೆಕ್ಟರ್ ಜೊತೆ ಮತ್ತೆ ಖದರ್ ತೋರಿಸುವುದಕ್ಕೆ ಹೊರಟಿದ್ದರು.

ಈ ನಡುವೆ ದುಬಾರಿಗೆ ಬ್ರೇಕ್ ಹಾಕಿ ಅದ್ದೂರಿ ಸಾರಥಿಯ ಜೊತೆ ಹೊರಟಿದ್ದಾರೆ. ಅಂದ್ಹಾಗೇ ಮತ್ತೆ ಒಂದಾಗಿರೋ ಅದ್ದೂರಿ ಜೋಡಿಗೆ ಉದಯ್ ಕೆ‌ ಮೆಹ್ತಾ ಬಂಡವಾಳ‌ ಹೂಡುತ್ತಿದ್ದಾರೆ. ಇವತ್ತು ಸಿನಿಮಾದ ಮುಹೂರ್ತ ನೆರವೇರಿದೆ. ಚಿತ್ರದ ನಾಯಕಿ ಸೇರಿದಂತೆ ಉಳಿದ ಪಾತ್ರವರ್ಗ, ಚಿತ್ರದ ತಂತ್ರಜ್ಞರ ಬಗ್ಗೆ ಇನ್ನಷ್ಟೇ ಮಾಹಿತಿ ಹೊರಬೀಳಬೇಕಿದೆ.

Categories
ಸಿನಿ ಸುದ್ದಿ

ಕೆಜಿಎಫ್- 2 ರಿಲೀಸ್ ಸೂಚನೆ; ಸುನಾಮಿ ಎಬ್ಬಿಸಿದೆ ಪ್ರಶಾಂತ್ ಟ್ವೀಟ್ ! ರಾಕಿಭಾಯ್ ದರ್ಶನ ಆಗೋದು ಇಷ್ಟು ಜನ ಗ್ಯಾಂಗ್ ಸ್ಟರ್ಸ್ ಅಲ್ಲಿ ಸೇರಿದಾಗ ಮಾತ್ರ ; ಭೀಕರ ರಣಭಯಂಕರ ರಾಕಿ ಘರ್ಜನೆ!

ರಾಕಿಭಾಯ್ ದರ್ಶನ ಯಾವಾಗ ? ಇದು ಕೆಜಿಎಫ್ ಪಾರ್ಟ್ -2 ಗಾಗಿ ಕಾದು ಕುಳಿತವರ ಮಿಲಿಯನ್ ಡಾಲರ್ ಪ್ರಶ್ನೆ. ಆ ಪ್ರಶ್ನೆಗೆ ಕೆಜಿಎಫ್ ಸಾರಥಿ ಉತ್ತರ ನೀಡಿದ್ದಾರೆ. ಕೆಜಿಎಫ್ ಚಾಪ್ಟರ್- 2 ರಿಲೀಸ್ ಯಾವಾಗ ಎನ್ನುವ ಮಹಾನ್ ಕೌತುಕಕ್ಕೆ ಸಣ್ಣ ತೆರೆ ಎಳೆಯೋ‌ ಕೆಲಸ‌ ಮಾಡಿದ್ದಾರೆ.
ಕೆಜಿಎಫ್ ಚಾಪ್ಟರ್- 2 ಇಡೀ‌ ಇಂಡಿಯನ್‌ ಸಿನಿಮಾ ಇಂಡಸ್ಟ್ರಿಯೇ ಕಾದು ಕುಳಿತಿರುವ ಚಿತ್ರ. ರಾಕಿಯ‌ ಅಬ್ಬರ ಆರ್ಭಟದ ಜೊತೆಗೆ ಅಧೀರನೊಟ್ಟಿಗಿನ ಕಾದಾಟವನ್ನು ನೋಡಲಿಕ್ಕೆ, ಚಿನ್ನದ ಸಾಮ್ರಾಜ್ಯದ ವೈಭೋಗವನ್ನು ಕಣ್ತುಂಬಿಕೊಳ್ಳೋದಕ್ಕೆ ಪ್ರೇಕ್ಷಕ ಮಹಾಷಯರು ಕಣ್ಣರಳಿಸಿ ಕಾಯ್ತಿದ್ದಾರೆ. ಅದರಂತೇ, ಜಗತ್ತಿನ ಎಲ್ಲಾ ಕೆಜಿಎಫ್ ಪ್ರೇಕ್ಷಕರಿಗೆ ನರಾಚಿಯ ದರ್ಶನ ಮಾಡಿಸಿ, ಚಿನ್ನದ ಸಾಮ್ರಾಜ್ಯಕ್ಕೆ ಕೊಂಡೊಯ್ಯಲಿಕ್ಕೆ ಸಿನಿಮಾ ಟೀಮ್ ಕೂಡ‌ ಸಿದ್ದತೆ ಮಾಡಿಕೊಂಡಿದೆ. ಈ ನಡುವೆ ನಿರ್ದೇಶಕ ಪ್ರಶಾಂತ್ ನೀಲ್ ರಾಕಿ ಅಖಾಡಕ್ಕೆ ಇಳಿಯೋದು ಗ್ಯಾಂಗ್ ಸ್ಟರ್ ಗಳಿಂದ ಆ ಜಾಗ ತುಂಬಿದಾಗ ಮಾತ್ರ.. ಶೀಘ್ರದಲ್ಲೇ ರಾಕಿ ದರ್ಶನದ ದಿವ್ಯ ದಿನವನ್ನ ಘೋಷಣೆ ಮಾಡೋದಾಗಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ರಾಕಿಭಾಯ್ ಹೇಳಿಕೇಳಿ ಮಾನ್‌ಸ್ಟರ್. ಗ್ಯಾಂಗ್ ಕಟ್ಟಿಕೊಂಡು ಬರೋದಿಲ್ಲ. ಸಿಂಗಲ್ಲಾಗಿ ಅಖಾಡಕ್ಕಿಳಿಯೋ ಮಾನ್ ಸ್ಟರ್ ನ ಸ್ವಾಗತಿಸೋಕೆ ಗ್ಯಾಂಗ್ ಸ್ಟರ್ ಗಳು ರೆಡಿಯಿರಬೇಕು. ನೀಲ್ ಅವರ ಟ್ವೀಟ್ ನ ಸೂಕ್ಷ್ಮವಾಗಿ ಗಮನಿಸಿದರೆ
ಅರ್ಥ ಆಗುತ್ತೆ. ಗ್ಯಾಂಗ್ ಸ್ಟರ್ಸ್ ಅಂತ ಕರೆದಿರುವುದು ಯಾರಿಗೆ ಅಂತ. ಮಾನ್ ಸ್ಟರ್ ರಾಕಿಭಾಯ್ ಗಾಗಿ‌ ಕಾದಿರುವ ಇಡೀ ಪ್ರೇಕ್ಷಕ ವಲಯಕ್ಕೆ ಪ್ರಶಾಂತ್ ಗ್ಯಾಂಗ್ ಸ್ಟರ್ಸ್ ಕಿರೀಟ ತೊಡಿಸಿದ್ದಾರೆ. ಹೀಗಾಗಿ, ಸಿನಿಮಾ ಹಾಲ್ ಯಾವಾಗ ಗ್ಯಾಂಗ್ ಸ್ಟಾರ್ಸ್ ಗಳಿಂದ ತುಂಬಿ ತುಳುಕುತ್ತೋ ಆಗ ರಾಕಿಭಾಯ್ ದರ್ಶನ ಆಗುತ್ತೆ ಎಂಬ ಸೂಚನೆ ಕೊಟ್ಟಿದ್ದಾರೆ.

ಚಿತ್ರಮಂದಿರ ಹೌಸ್ ಫುಲ್ ಆಗಬೇಕು ಅಂದರೆ ಸರ್ಕಾರ ದೊಡ್ಡ ಮನಸ್ಸು ಮಾಡಬೇಕು. 100 ಅಕ್ಯೂಪೆನ್ಸಿಗೆ ಅನುಮತಿ ಕೊಡಬೇಕು. ಅಷ್ಟಕ್ಕೂ, ಇನ್ನೂ ಚಿತ್ರಮಂದಿರ ಓಪನ್ ಮಾಡಲಿಕ್ಕೆ ಅವಕಾಶ ಸಿಕ್ಕಿಲ್ಲ. ಮೂರನೇ ಅನ್ ಲಾಕ್ ಪ್ರಕ್ರಿಯೆಯಲ್ಲಿ ಥಿಯೇಟರ್ ಆರಂಭಕ್ಕೆ ಅವಕಾಶ ಸಿಗುತ್ತೆ ಎನ್ನುವ ನಿರೀಕ್ಷೆಯಲ್ಲಿ ಸಿನಿಮಾಮಂದಿ ಕಾತುರದಿಂದ ಕಾಯ್ತಿದ್ದಾರೆ.

ಒಂದು ವೇಳೆ ಥಿಯೇಟರ್ ಆರಂಭಿಸಲು ಅವಕಾಶ ಕೊಟ್ಟು 100% ಆಸನ ವ್ಯವಸ್ಥೆಗೆ ಅವಕಾಶ ನೀಡಿದರೆ ‘ಕೆಜಿಎಫ್ 2’ ಶೀಘ್ರದಲ್ಲೇ ಬಿಡುಗಡೆ ಆಗಲಿದೆ. ಆ ಬಿಡುಗಡೆ ದಿನಾಂಕವನ್ನು ಪ್ರಶಾಂತ್ ನೀಲ್ ಸದ್ಯದಲ್ಲೇ ಅನೌನ್ಸ್ ಮಾಡಲಿದ್ದಾರೆ. ಅಲ್ಲಿವರೆಗೂ ವೇಯ್ಟ್ ಆಂಡ್ ಸೀ…

Categories
ಸಿನಿ ಸುದ್ದಿ

ನೆಟ್‌ಫ್ಲಿಕ್ಸ್‌ನಲ್ಲಿ ಕನ್ನಡ ಯುವನಟನದ್ದೇ ಹವಾ!

ಸಿನಿಮಾ ಅಂದರೇನೆ ಹಾಗೆ. ಅದೊಂದು ರಂಜಿಸುವ ಮಾಧ್ಯಮ. ಅದಕ್ಕೆ ನಗಿಸುವುದು ಗೊತ್ತು, ಅಳಿಸುವುದೂ ಗೊತ್ತು. ಹಾಗೆ ಒಮ್ಮೊಮ್ಮೆ ಭಾವುಕತೆಗೆ ದೂಡುವುದೂ ಗೊತ್ತು. ಕೆಲ ಸಿನಿಮಾಗಳು ಮನಸ್ಸಿಗೆ ಆಪ್ತವಾಗಿಬಿಡುತ್ತಿವೆ. ಅಂತಹ ಆಪ್ತ ಸಿನಿಮಾಗಳ ಸಾಲಿಗೆ ಈಗ “ಸಿನಿಮಾ ಬಂಡಿ” ಕೂಡ ಸೇರಿದೆ. ಹೌದು, “ಸಿನಿಮಾ ಬಂಡಿ” ಈಗ ಇತ್ತೀಚೆಗೆ ಜೋರು ಸದ್ದು ಮಾಡುತ್ತಿರುವ ಚಿತ್ರ. ದೇಶ ಮಾತ್ರವಲ್ಲ, ವಿದೇಶಿಗರು ಕೂಡ ಮೆಚ್ಚಿಕೊಳ್ಳುತ್ತಿರುವ ಚಿತ್ರ ಅನ್ನೋದು ವಿಶೇಷ. “ಸಿನಿಮಾ ಬಂಡಿ” ತೆಲುಗು ಚಿತ್ರ. ಅರೇ, ತೆಲುಗು ಚಿತ್ರದ ಬಗ್ಗೆ ಇಷ್ಟೊಂದು ಪೀಠಿಕೆ ಯಾಕೆ ಎಂಬ ಪ್ರಶ್ನೆ ಎದುರಾಗಬಹುದು. ಅದಕ್ಕೆ ಉತ್ತರ. “ಸಿನಿಮಾ ಬಂಡಿ” ಚಿತ್ರದ ಹೈಲೈಟ್.‌

ಇದಕ್ಕೆ ಕಾರಣ, ಈ ಚಿತ್ರದಲ್ಲಿ ಕನ್ನಡದ ಪ್ರತಿಭಾವಂತರಿದ್ದಾರೆ ಅನ್ನೋದೇ ಈ ಹೊತ್ತಿನ ವಿಶೇಷ.
“ಸಿನಿಮಾ ಬಂಡಿ” ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿದೆ. ಬಿಡುಗಡೆಯಾಗಿದ್ದೇ ತಡ, ಎಲ್ಲೆಡೆಯಿಂದಲೂ ಒಳ್ಳೆಯ ಮೆಚ್ಚುಗೆ ಸಿಗುತ್ತಿದೆ. ಈ ಸಿನಿಮಾಗೆ ಪ್ರವೀಣ್‌ ಕಂದ್ರೆಗುಲ ನಿರ್ದೇಶಕರು. ರಾಜ್‌ ಮತ್ತು ಡಿಕೆ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಇದು ತೆಲುಗು ಸಿನಿಮಾ ಆಗಿದ್ದರೂ, ಈ ಚಿತ್ರದ ಹೈಲೈಟ್‌ ಕನ್ನಡದ ನಟ. ಹೆಸರು ವಿಕಾಸ್‌ ವಸಿಷ್ಠ ಇವರೊಂದಿಗೆ ಉಮಾ ಮತ್ತು ಸಿಂಧು ಎಂಬ ಕನ್ನಡದ ನಟಿಯರೂ ನಟಿಸಿದ್ದಾರೆ. ಈ ಕುರಿತಂತೆ ನಟ ವಿಕಾಸ್‌ ಸಿಂಹ, “ಸಿನಿಲಹರಿ” ಜೊತೆ ಒಂದಷ್ಟು ಮಾತಾಡಿದ್ದಾರೆ.

ಓವರ್‌ ಟು ವಿಕಾಸ್‌ ವಸಿಷ್ಠ…
“2012 ರಲ್ಲಿ ನನ್ನ ಸಿನಿಮಾ ಜರ್ನಿ ಶುರುವಾಯ್ತು. ಈ ರಂಗಿನ ಲೋಕಕ್ಕೆ ಬರುವ ಮೊದಲು, ಒಂದು ಕಡೆ ಕೆಲಸ ಮಾಡುತ್ತಿದ್ದೆ. ಆ ಬಳಿಕ ನನಗೂ ನಟಿಸೋ ಆಸೆ ಹೆಚ್ಚಾಯ್ತು. ಆಸಕ್ತಿ ಇದ್ದುದರಿಂದ ನಾನು ಮೊದಲು “ಪಂಚರಂಗಿ ಪೊಂವ್‌ ಪೊಂವ್‌” ಸೀರಿಯಲ್‌ನಲ್ಲಿ ನಟಿಸಿದೆ. ಅದು ದಿನದ ಪಾತ್ರವಾಗಿತ್ತು. ಆ ಬಳಿಕ “ಪರಿಣಿತ”, “ಕೋಗಿಲೆ”, “ಚಕ್ರವ್ಯೂಹ”, “ಅಮ್ಮ”, “ಅವಳು”, “ಮನಸಾರೆʼ ಹೀಗೆ ಧಾರಾವಾಹಿಗಳಲ್ಲಿ ನಟಿಸುತ್ತಾ ಹೋದೆ. ಅದರ ನಡುವೆಯೇ ನನಗೆ ಸಿನಿಮಾದಲ್ಲೂ ನಟಿಸೋ ಭಾಗ್ಯ ಸಿಕ್ಕಿತು.”ಕರಾಲಿ”, “ಅರನೇ ಮೈಲಿ”, “ರಾಂಧವ” ಸಿನಿಮಾದಲ್ಲಿ ನಟಿಸಿದೆ.

ಹೀಗೆ ಮೆಲ್ಲನೆ ಕನ್ನಡ ಚಿತ್ರರಂಗದ ಜರ್ನಿ ಶುರುವಾಯ್ತು. ಹೀಗಿರುವಾಗಲೇ ನನಗೆ ತೆಲುಗಿನ “ಸಿನಿಮಾ ಬಂಡಿ”ಯಲ್ಲಿ ನಟಿಸೋ ಆವಕಾಶ ಬಂತು. ಆ ಸಿನಿಮಾ ನಿರ್ದೇಶ ಪ್ರವೀಣ್‌ ಕಂದ್ರೆಗುಲ ಅವರು ಮೊದಲೇ ಪರಿಚಯವಿದ್ದರು. ಅವರೊಂದಿಗೆ ತಮಿಳು ಜಾಹಿರಾತಿನಲ್ಲಿ ಕೆಲಸ ಮಾಡಿದ್ದೆ. ಹೀಗಿರುವಾಗ ಅವರು, “ಸಿನಿಮಾ ಬಂಡಿ” ಕಥೆ ಹೇಳಿದ್ದರು. ಮಾಡೋಣ ಸರ್‌ ಅಂದೆ. ನಿರ್ಮಾಪಕರ ಬಳಿ ಕಥೆ ಹೇಳಿದಾಗ, ಒಂದು ವಿಡಿಯೋ ಮಾಡಿಕೊಂಡು ಬನ್ನಿ ಅಂದರು. ಸರಿ, ಅಂತ, ನಿರ್ದೇಶಕರು ನಾವು ಸೇರಿ ಒಂದು ವಿಡಿಯೋ ಶೂಟ್‌ ಮಾಡಿಕೊಂಡು ಅವರ ಬಳಿ ಹೋದೆವು. ನೋಡಿದ ನಿರ್ಮಾಪಕರು, ಖುಷಿಯಾದರು. ಇದರಲ್ಲಿರೋ ಆರ್ಟಿಸ್ಟ್‌ ಇಟ್ಟುಕೊಂಡೇ ಸಿನಿಮಾ ಮಾಡಿ ಅಂದರು. ಅಲ್ಲಿಂದಲೇ “ಸಿನಿಮಾ ಬಂಡಿ” ಶುರುವಾಯ್ತು. ತೆಲುಗಿನಲ್ಲಿ ತಯಾರಾದ ಈ ಚಿತ್ರವನ್ನು ಥಿಯೇಟರ್‌ನಲ್ಲೇ ಬಿಡುಗಡೆ ಮಾಡಬೇಕು ಅಂದುಕೊಂಡಿದ್ದೆವು. ಆದರೆ, ಕೊರೊನಾ ಸಮಸ್ಯೆ ಹಿನ್ನೆಲೆಯಲ್ಲಿ ಎಲ್ಲವೂ ಸಾಧ್ಯವಾಗಲಿಲ್ಲ. ನೆಟ್‌ಫ್ಲಿಕ್ಸ್‌ ನಲ್ಲಿ ಸಿನಿಮಾ ಬಿಡುಗಡೆಯಾಯ್ತು. ಎಲ್ಲೆಡೆ ಸುದ್ದಿಯಾಯ್ತು” ಎನ್ನುತ್ತಾರೆ ವಿಕಾಸ್‌ ವಸಿಷ್ಠ.

“ಸಿನಿಮಾ ಬಂಡಿ” ಕುರಿತ ಅನುಭವ ಹಂಚಿಕೊಳ್ಳುವ ಅವರು, ನಿಜಕ್ಕೂ ಚಿತ್ರೀಕರಣದ ವೇಳೆ ಸಾಕಷ್ಟು ಅನುಭವ ಆಯ್ತು. ಸಾಮಾನ್ಯವಾಗಿ ಸಿನಿಮಾ ಅಂದರೆ, ದೊಡ್ಡ ಯೂನಿಟ್‌, ಗಜಿಬಿಜಿ ಓಡಾಟ ಕಾಮನ್.‌ ಆದರೆ, ನಮ್ಮ ಶೂಟಿಂಗ್‌ ಟೈಮ್‌ನಲ್ಲಿ ಈ ರೀತಿ ಇರಲೇ ಇಲ್ಲ. ಕೇವಲ 13 ರಿಂದ 15 ಜನರನ್ನು ಇಟ್ಟುಕೊಂಡು ಮಾಡಿದ ಸಿನಿಮಾ ಅದು. ಟೆಕ್ನಿಕಲಿ ಸ್ಟ್ರಾಂಗ್‌ ಇತ್ತು. ದೊಡ್ಡ ಕ್ಯಾಮೆರಾವನ್ನೇ ಇಲ್ಲಿ ಬಳಸಿದ್ದೆವು. ಆದರೆ, ಸಿನಿಮಾ ಡಿಮ್ಯಾಂಡ್‌ ಮಾಡಿದ್ದೆಲ್ಲವನ್ನೂ ನಿರ್ಮಾಪಕರು ಕೊಟ್ಟಿದ್ದರು. ನಮಗೂ ಇಷ್ಟೇ ಬೇಕು, ಇಷ್ಟು ಸಾಕು ಅಂತಂದುಕೊಂಡೇ ಕೆಲಸ ಮಾಡಿದೆವು. ಕಥೆಗಿಂತ ಹೆಚ್ಚು ಮಾಡಿದರೆ, ವೈಭವೀಕರಣ ಆಗುತ್ತೆ. ನಮಗೆ ಅಂತಹ ವೈಭವೀಕರಣ ಬೇಕಿರಲಿಲ್ಲ. ಎಲ್ಲವೂ ನ್ಯಾಚುರಲ್‌ ಆಗಿರಬೇಕು. ಇಲ್ಲಿ ಎಲ್ಲವೂ ನ್ಯಾಚುರಲ್‌ ಆಗಿಯೇ ಇತ್ತು. ದೊಡ್ಡ ಲೈಟಿಂಗ್‌ ಬೇಡವಾಗಿತ್ತು, ಹೆಲಿಕ್ಯಾಮ್‌ ಕೂಡ ಬೇಕಿರಲಿಲ್ಲ. ಒಂದೊಳ್ಳೆಯ ಸಿನಿಮಾ ಆಗೋಕೆ ಏನೆಲ್ಲಾ ಬೇಕಿತ್ತೋ ಅದನ್ನು ಇಟ್ಟುಕೊಂಡು ಸಿನಿಮಾ ಮಾಡಿದೆವು. ಒಳ್ಳೇ ಚಿತ್ರವಾಯ್ತು. ಆದರೆ, ಈ ಮಟ್ಟಕ್ಕೆ ರೀಚ್‌ ಆಗುತ್ತೆ ಅಂತ ಗೊತ್ತಿರಲಿಲ್ಲ. ನಿಜಕ್ಕೂ ನಮ್ಮ ಪರಿಶ್ರಮ ಈಗ ಸಾರ್ಥಕವಾಗಿದೆ. ಸುಮಾರು ೩೫ ದಿನಗಳ ಕಾಲ ಮುಳಬಾಗಿಲು ಸುತ್ತಮುತ್ತ ಶೂಟಿಂಗ್‌ ಮಾಡಿದ್ದೇವೆ. ಸಮೀಪದ ಉತ್ತನೂರು, ಗೊಲ್ಲಹಳ್ಳಿ, ಸುತ್ತಮುತ್ತ ಚಿತ್ರೀಕರಣ ನಡೆದಿದೆ ಎಂಬುದು ವಿಕಾಸ್‌ ವಸಿಷ್ಠ ಅವರ ಮಾತು.


“ಸಿನಿಮಾ ಬಂಡಿ” ಕ್ಲಿಕ್‌ ಆಗುತ್ತಿದ್ದಂತೆಯೇ ಅತ್ತ, ವಿಕಾಸ್‌ ವಸಿಷ್ಠ ಅವರಿಗೂ ಒಂದಷ್ಟು ಅವಕಾಶಗಳು ಹುಡುಕಿ ಬರುತ್ತಿವೆ. ಸದ್ಯ ಈಗ ತೆಲುಗಿನಲ್ಲೇ ಇನ್ನೊಂದು ಸಿನಿಮಾ ಸಿಕ್ಕಿದ್ದು, ಚಿತ್ರೀಕರಣ ನಡೆಯುತ್ತಿದೆ. ಅತ್ತ, ಒಂದಷ್ಟು ವೆಬ್‌ಸೀರೀಸ್‌ ಕೂಡ ಪ್ಲಾನ್‌ ಆಗುತ್ತಿದೆಯಂತೆ. ಕನ್ನಡದಲ್ಲೂ ಎರಡು ಚಿತ್ರಗಳ ಮಾತುಕತೆ ನಡೆಯುತ್ತಿದೆ ಎನ್ನುತ್ತಾರೆ ಅವರು. “ಸಿನಿಮಾ ಬಂಡಿ” ಚಿತ್ರಕ್ಕೆ ಮುಂಬೈ ಮೂಲದ ಅಪೂರ್ವ, ಹೈದರಾಬಾದ್‌ನ ಸಾಗರ್‌ ಛಾಯಾಗ್ರಹಣ ಮಾಡಿದ್ದಾರೆ. ಶರೀಶ್‌ ಸತ್ಯಗೋಲು ಸಂಗೀತ ನೀಡಿದರೆ, ರವಿತೇಜ, ಧರ್ಮ ಸಂಕಲನ ಮಾಡಿದ್ದಾರೆ. ವಸಂತ್‌ ಮರಗಂಟಿ ಕಥೆ ಬರೆದಿದ್ದಾರೆ.

Categories
ಸಿನಿ ಸುದ್ದಿ

ಗಾನ್‌ ಕೇಸ್‌ ಹಿಂದೆ ಅರವಿಂದ್‌ ಕೌಶಿಕ್‌ ; ಸೀರಿಯಲ್‌ ಕಿಲ್ಲರ್‌ ಹಿಂದೆ ಬಂದವರು..!


ನಿರ್ದೇಶಕ ಅರವಿಂದ್‌ ಕೌಶಿಕ್‌ ಅವರು ಈಗ ಮತ್ತೊಂದು ಹೊಸ ಕಥೆಯೊಂದಿಗೆ ಬರಲು ಸಜ್ಜಾಗಿದ್ದಾರೆ. ಈಗಾಗಲೇ ಅವರು ಒಂದಷ್ಟು ಹೊಸ ಪ್ರಯೋಗಗಳನ್ನು ಮಾಡಿದ್ದು ಎಲ್ಲರಿಗೂ ಗೊತ್ತೇ ಇದೆ. ಅದರಲ್ಲೂ ಹೊಸ ಪ್ರತಿಭೆಗಳ ಹಿಂದೆಯೇ ಹೋಗಿ, ಕನ್ನಡ ಚಿತ್ರರಂಗಕ್ಕೆ ಕೊಡುಗೆ ನೀಡಿರುವ ಬಗ್ಗೆ ಇಲ್ಲಿ ಹೇಳಬೇಕಿಲ್ಲ. ಅರವಿಂದ್‌ ಕೌಶಿಕ್‌ ಅವರ ಗರಡಿಯಿಂದ ಬಂದ ಪ್ರತಿಭಾವಂತ ನಟರು ಈಗ ಸ್ಟಾರ್‌ ಆಗಿರುವುದುಂಟು. ಈಗ ಮತ್ತೊಂದು ಹೊಸ ಚಿತ್ರಕ್ಕೆ ಹೊಸ ಪ್ರತಿಭೆಯನ್ನು ಗಾಂಧಿನಗರಕ್ಕೆ ಪರಿಚಯಿಸುತ್ತಿದ್ದಾರೆ.

ಅಂದಹಾಗೆ, ಅರವಿಂದ್‌ ಕೌಶಿಕ್‌ ಈ ಬಾರಿ ಪಕ್ಕಾ ಪ್ಲಾನಿಂಗ್‌ ಮಾಡಿಕೊಂಡು ಬಂದಿದ್ದಾರೆ. ಅವರೀಗ ಸೀರಿಯಲ್‌ ಕಿಲ್ಲರ್‌ ಕಥೆ ಹೇಳೋಕೆ ಅಣಿಯಾಗಿದ್ದಾರೆ ಎಂಬುದು ವಿಶೇಷ. ಅವರ ಹೊಸ ಚಿತ್ರಕ್ಕೆ “ಗಾನ್‌ ಕೇಸ್‌” ಎಂದು ನಾಮಕರಣ ಮಾಡಲಾಗಿದೆ. ಶೀರ್ಷಿಕೆಯೇ ಒಂದು ರೀತಿ ಮಾಸ್‌ ಫೀಲ್‌ ಕೊಡುತ್ತದೆ ಅಂದಮೇಲೆ ಅವರು ಹೆಣೆದಿರುವ ಕಥೆ ಕೂಡ ಅಷ್ಟೇ ಮಜವಾಗಿರುತ್ತೆ ಅನ್ನುವುದರಲ್ಲಿ ಎರಡು ಮಾತಿಲ್ಲ. ಈ ಚಿತ್ರದ ಮೂಲಕ ಹೊಸ ಪ್ರತಿಭೆ ಸ್ನೇಹಿತ್‌ ಗೌಡ ಪರಿಚಯವಾಗುತ್ತಿದ್ದಾರೆ.

ಚಿತ್ರದ ಹೀರೋ ಅವರೇ. ನಿರ್ದೇಶಕ ಅರವಿಂದ್‌ ಕೌಶಿಕ್‌ ಹೇಳುವ ಪ್ರಕಾರ, “ಸ್ನೇಹಿತ್‌ ಗೌಡ ಒಳ್ಳೇ ಹುಡುಗ. ತಂಬಾನೇ ನಿರೀಕ್ಷೆ ಇಟ್ಟುಕೊಳ್ಳಬಹುದಾದ ಪ್ರತಿಭೆ. ಅವರಲ್ಲಿ ಸಂಯಮ, ಶ್ರದ್ಧೆ ಇದೆ. ಎರಡು ವರ್ಷಗಳ ಕಾಲ ಸಿನಿಮಾಗೆ ಬೇಕಾದ ಎಲ್ಲಾ ತಯಾರಿಯನ್ನು ಮಾಡಿಕೊಂಡೇ ಅವರೀಗ ಹೀರೋ ಆಗೋಕೆ ಹೊರಟಿದ್ದಾರೆ. ಇನ್ನು, ಚಿತ್ರದಲ್ಲಿ ಹೀರೋನಷ್ಟೇ ಇನ್ನೊಂದು ಪ್ರಮುಖವಾದ ಪಾತ್ರವೂ ಇದೆ. ಆ ಪಾತ್ರವನ್ನು ಚಕ್ರವರ್ತಿ ಚಂದ್ರಚೂಡ ಮಾಡುತ್ತಿದ್ದಾರೆ. ಸದ್ಯಕ್ಕೆ ಚಕ್ರವರ್ತಿ ಚಂದ್ರಚೂಡ ಬಿಗ್‌ಬಾಸ್‌ ಮನೆಯಲ್ಲಿದ್ದಾರೆ. ಅವರು ಹೊರ ಬಂದ ಬಳಿಕವೇ, ಚಿತ್ರೀಕರಣಕ್ಕೆ ಚಾಲನೆ ಸಿಗಲಿದೆ ಎಂದು ವಿವರ ಕೊಡುವ ನಿರ್ದೇಶಕ ಅರವಿಂದ್‌ ಕೌಶಿಕ್‌, ಸಿನಿಮಾ ಕುರಿತು ಹೇಳುವುದಿಷ್ಟು.


“ಇದೊಂದು ಸೀರಿಯಲ್‌ ಕಿಲ್ಲರ್‌ ಸುತ್ತ ನಡೆಯೋ ಕಥೆ. ಇಲ್ಲಿ ಸ್ನೇಹಿತ್‌ ಗೌಡ ಅವರು ಸೀರಿಯಲ್‌ ಕಿಲ್ಲರ್‌ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಚಕ್ರವರ್ತಿ ಚಂದ್ರಚೂಡ ಅವರು ಪೊಲೀಸ್‌ ಅಧಿಕಾರಿ ಪಾತ್ರದಲ್ಲಿ ನಟಿಸಲಿದ್ದಾರೆ. ಹೀರೋ ಇಲ್ಲಿ ಸೀರಿಯಲ್‌ ಕಿಲ್ಲರ್‌ ಆಗೋದು ಯಾಕೆ ಅನ್ನೋದೇ ಸಸ್ಪೆನ್ಸ್.‌ ಅವರು ಯಾಕೆ ಆ ರೀತಿ ಮಾಡ್ತಾನೆ. ಅವನ ಲೈಫಲ್ಲಿ ನಡೆದ ಆ ಘಟನೆ ಏನು ಎಂಬುದು ವಿಶೇಷ. ಒಬ್ಬ ಸೀರಿಯಲ್‌ ಕಿಲ್ಲರ್‌ ಮತ್ತು ಪೊಲೀಸ್‌ ಅಧಿಕಾರಿ ಮಧ್ಯೆ ನಡೆಯೋ ಜಟಾಪಟಿ ಇಲ್ಲಿ ಹೈಲೈಟ್.‌ ಇದೊಂದು ಸೈಕಲಾಜಿಕಲ್‌ ಥ್ರಿಲ್ಲರ್‌. ಸಾಮಾನ್ಯವಾಗಿ ಸೈಕಲಾಜಿಕಲ್‌ ಥ್ರಿಲ್ಲರ್‌ ಅಂದಾಕ್ಷಣ, ಎಲ್ಲರೂ ಡಾರ್ಕ್‌ ಆಗಿ ತೋರಿಸ್ತಾರೆ.


ಅಲ್ಲಿ ವೈಲೆಂಟು ಇರುತ್ತೆ. ಆದರೆ, ಇಲ್ಲಿ ಸೀರಿಯಲ್‌ ಕಿಲ್ಲರ್‌ ಇದ್ದರೂ, ನಾರ್ಮಲ್ ಆಗಿರುತ್ತಾನೆ. ಅವನ ಬದುಕಲ್ಲಿ ನಡೆದ ಘಟನೆಗಳಿಂದ ಅವನು ಆ ರೀತಿ ಆಗಿರುತ್ತಾನೆ. ಆ ಘಟನೆಗಳು ಏನು ಅನ್ನೋದು ಇಲ್ಲಿ ಕಥೆ. ಅಂದಹಾಗೆ, ಇದನ್ನು ಮೊದಲು ಹಿಂದಿಯಲ್ಲಿ ಚಿತ್ರೀಕರಿಸುವ ಯೋಚನೆ ಇತ್ತು. ಕೊನೆಗೆ ಕನ್ನಡ ಸೇರಿಯೂ ಮಾಡಬೇಕು ಎಂದು ನಿರ್ಧಿರಿಸಿ, ಕನ್ನಡ ಹಿಂದಿ ಭಾಷೆಯಲ್ಲಿ ತಯಾರು ಮಾಡುತ್ತಿದ್ದೇವೆ.

ಸದ್ಯಕ್ಕೆ ನಾಯಕಿಯ ಆಯ್ಕೆ ನಡೆಯಬೇಕಿದೆ. ಆ ಆಯ್ಕೆಯನ್ನು ಆಡಿಷನ್‌ ಮೂಲಕವೇ ಮಾಡಲಾಗುತ್ತದೆ. ಇಲ್ಲಿ ಹೊಸ ಪ್ರತಿಭೆಗೆ ಹುಡುಕಾಟ ನಡೆಯುತ್ತಿದೆ. ಚಿತ್ರದ ಕಥೆ ಹೊಸ ಮುಖವನ್ನೇ ಡಿಮ್ಯಾಂಡ್‌ ಮಾಡುತ್ತಿದೆ. ಬೆಂಗಳೂರಲ್ಲಿ ಸಾಕಷ್ಟು ಪ್ರತಿಭಾವಂತರಿದ್ದಾರೆ. ಹಾಗಾಗಿ, ಇಲ್ಲಿಯವರನ್ನೇ ಹುಡುಕಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ ಎಂಬುದು ಅರವಿಂದ್‌ ಕೌಶಿಕ್‌ ಮಾತು.

Categories
ಸಿನಿ ಸುದ್ದಿ

ಯೋಗಿ ಹುಟ್ಟು ಹಬ್ಬಕ್ಕೆ “ಲಂಕೆ” ಚಿತ್ರದ ಮೋಷನ್ ಪೋಸ್ಟರ್ ರಿಲೀಸ್‌


ಲೂಸ್ ಮಾದ ಯೋಗೇಶ್ ನಾಯಕನಾಗಿ ನಟಿಸಿರುವ “ಲಂಕೆ” ಚಿತ್ರ ಬಿಡುಗಡೆಗೆ ರೆಡಿಯಾಗಿದೆ. ಜುಲೈ ೬ ಯೋಗೇಶ್‌ ಅವರ ಹುಟ್ಟುಹಬ್ಬ. ಆ ಹಿನ್ನೆಲೆಯಲ್ಲಿ “ಲಂಕೆ” ಚಿತ್ರದ ಮೋಷನ್ ಪೋಸ್ಟರ್ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗುತ್ತಿದೆ. ಆಕ್ಷನ್‌ ಕಥಾಹಂದರ ಹೊಂದಿರುವ ಈ ಚಿತ್ರವನ್ನು ರಾಮ್ ಪ್ರಸಾದ್ ಎಂ.ಡಿ ನಿರ್ದೇಶಿಸಿದ್ದಾರೆ. ಕಥೆ, ಚಿತ್ರಕಥೆ ಅವರದೇ. ರಾಮ್ ಪ್ರಾಸಾದ್ ಹಾಗೂ ಗುರುರಾಜ ದೇಸಾಯಿ ಸಂಭಾಷಣೆ ಬರೆದಿದ್ದಾರೆ.

ದಿ ಗ್ರೇಟ್ ಎಂಟರ್ ಟೈನರ್ ಬ್ಯಾನರ್‌ನಲ್ಲಿ ಪಟೇಲ್ ಶ್ರೀನಿವಾಸ್ (ನಾಗವಾರ) ಹಾಗು ಸುರೇಖ ರಾಮಪ್ರಸಾದ್ ಅವರು ನಿರ್ಮಿಸಿರುವ ಈ ಚಿತ್ರ, ಚಿತ್ರಮಂದಿರ ಆರಂಭಕ್ಕೆ ಅನುಮತಿ ಸಿಕ್ಕ ಬಳಿಕ ತೆರೆಗೆ ಅಪ್ಪಳಿಸಲಿದೆ. ಕಾರ್ತಿಕ್ ಶರ್ಮಾ ಸಂಗೀತ ನೀಡಿರುವ ಈ ಚಿತ್ರದಲ್ಲಿ ನಾಲ್ಕು ಹಾಡುಗಳು ಹಾಗೂ ಎರಡು ಬಿಟ್ಸ್ ಗಳಿವೆ. ರಮೇಶ್ ಬಾಬು ಛಾಯಾಗ್ರಹಣ ಮಾಡಿದ್ದಾರೆ.

ಶಿವರಾಜ್ ಮೇಹು ಸಂಕಲನವಿದೆ. ರವಿವರ್ಮ, ಪಳನಿರಾಜ್, ಅಶೋಕ್ ಸಾಹಸ ನಿರ್ದೇಶನ ಮಾಡಿದ್ದಾರೆ. ಧನಂಜಯ್, ಮೋಹನ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಲೂಸ್ ಮಾದ ಯೋಗೇಶ್ ಚಿತ್ರದ ನಾಯಕನಾಗಿ ಅಭಿನಯಿಸಿದ್ದು, ಇತ್ತೀಚೆಗೆ ನಿಧನರಾದ ಸಂಚಾರಿ ವಿಜಯ್ ಸಹ ಈ‌ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಕೃಷಿ ತಾಪಂಡ, ಕಾವ್ಯಾಶೆಟ್ಟಿ, ಶರತ್ ಲೋಹಿತಾಶ್ವ, ಶೋಭ್ ರಾಜ್, ಡ್ಯಾನಿ ಕುಟ್ಟಪ್ಪ, ಸುಚೇಂದ್ರ ಪ್ರಸಾದ್, ವಾಣಿಶ್ರೀ, ಗಾಯಿತ್ರಿ ಜಯರಾಂ, ಎಸ್ಟರ್ ನರೋನ, ಪ್ರಶಾಂತ್ ಸಿದ್ದಿ ಇತರರು ನಟಿಸಿದ್ದಾರೆ.

error: Content is protected !!