ಗಾನ್‌ ಕೇಸ್‌ ಹಿಂದೆ ಅರವಿಂದ್‌ ಕೌಶಿಕ್‌ ; ಸೀರಿಯಲ್‌ ಕಿಲ್ಲರ್‌ ಹಿಂದೆ ಬಂದವರು..!


ನಿರ್ದೇಶಕ ಅರವಿಂದ್‌ ಕೌಶಿಕ್‌ ಅವರು ಈಗ ಮತ್ತೊಂದು ಹೊಸ ಕಥೆಯೊಂದಿಗೆ ಬರಲು ಸಜ್ಜಾಗಿದ್ದಾರೆ. ಈಗಾಗಲೇ ಅವರು ಒಂದಷ್ಟು ಹೊಸ ಪ್ರಯೋಗಗಳನ್ನು ಮಾಡಿದ್ದು ಎಲ್ಲರಿಗೂ ಗೊತ್ತೇ ಇದೆ. ಅದರಲ್ಲೂ ಹೊಸ ಪ್ರತಿಭೆಗಳ ಹಿಂದೆಯೇ ಹೋಗಿ, ಕನ್ನಡ ಚಿತ್ರರಂಗಕ್ಕೆ ಕೊಡುಗೆ ನೀಡಿರುವ ಬಗ್ಗೆ ಇಲ್ಲಿ ಹೇಳಬೇಕಿಲ್ಲ. ಅರವಿಂದ್‌ ಕೌಶಿಕ್‌ ಅವರ ಗರಡಿಯಿಂದ ಬಂದ ಪ್ರತಿಭಾವಂತ ನಟರು ಈಗ ಸ್ಟಾರ್‌ ಆಗಿರುವುದುಂಟು. ಈಗ ಮತ್ತೊಂದು ಹೊಸ ಚಿತ್ರಕ್ಕೆ ಹೊಸ ಪ್ರತಿಭೆಯನ್ನು ಗಾಂಧಿನಗರಕ್ಕೆ ಪರಿಚಯಿಸುತ್ತಿದ್ದಾರೆ.

ಅಂದಹಾಗೆ, ಅರವಿಂದ್‌ ಕೌಶಿಕ್‌ ಈ ಬಾರಿ ಪಕ್ಕಾ ಪ್ಲಾನಿಂಗ್‌ ಮಾಡಿಕೊಂಡು ಬಂದಿದ್ದಾರೆ. ಅವರೀಗ ಸೀರಿಯಲ್‌ ಕಿಲ್ಲರ್‌ ಕಥೆ ಹೇಳೋಕೆ ಅಣಿಯಾಗಿದ್ದಾರೆ ಎಂಬುದು ವಿಶೇಷ. ಅವರ ಹೊಸ ಚಿತ್ರಕ್ಕೆ “ಗಾನ್‌ ಕೇಸ್‌” ಎಂದು ನಾಮಕರಣ ಮಾಡಲಾಗಿದೆ. ಶೀರ್ಷಿಕೆಯೇ ಒಂದು ರೀತಿ ಮಾಸ್‌ ಫೀಲ್‌ ಕೊಡುತ್ತದೆ ಅಂದಮೇಲೆ ಅವರು ಹೆಣೆದಿರುವ ಕಥೆ ಕೂಡ ಅಷ್ಟೇ ಮಜವಾಗಿರುತ್ತೆ ಅನ್ನುವುದರಲ್ಲಿ ಎರಡು ಮಾತಿಲ್ಲ. ಈ ಚಿತ್ರದ ಮೂಲಕ ಹೊಸ ಪ್ರತಿಭೆ ಸ್ನೇಹಿತ್‌ ಗೌಡ ಪರಿಚಯವಾಗುತ್ತಿದ್ದಾರೆ.

ಚಿತ್ರದ ಹೀರೋ ಅವರೇ. ನಿರ್ದೇಶಕ ಅರವಿಂದ್‌ ಕೌಶಿಕ್‌ ಹೇಳುವ ಪ್ರಕಾರ, “ಸ್ನೇಹಿತ್‌ ಗೌಡ ಒಳ್ಳೇ ಹುಡುಗ. ತಂಬಾನೇ ನಿರೀಕ್ಷೆ ಇಟ್ಟುಕೊಳ್ಳಬಹುದಾದ ಪ್ರತಿಭೆ. ಅವರಲ್ಲಿ ಸಂಯಮ, ಶ್ರದ್ಧೆ ಇದೆ. ಎರಡು ವರ್ಷಗಳ ಕಾಲ ಸಿನಿಮಾಗೆ ಬೇಕಾದ ಎಲ್ಲಾ ತಯಾರಿಯನ್ನು ಮಾಡಿಕೊಂಡೇ ಅವರೀಗ ಹೀರೋ ಆಗೋಕೆ ಹೊರಟಿದ್ದಾರೆ. ಇನ್ನು, ಚಿತ್ರದಲ್ಲಿ ಹೀರೋನಷ್ಟೇ ಇನ್ನೊಂದು ಪ್ರಮುಖವಾದ ಪಾತ್ರವೂ ಇದೆ. ಆ ಪಾತ್ರವನ್ನು ಚಕ್ರವರ್ತಿ ಚಂದ್ರಚೂಡ ಮಾಡುತ್ತಿದ್ದಾರೆ. ಸದ್ಯಕ್ಕೆ ಚಕ್ರವರ್ತಿ ಚಂದ್ರಚೂಡ ಬಿಗ್‌ಬಾಸ್‌ ಮನೆಯಲ್ಲಿದ್ದಾರೆ. ಅವರು ಹೊರ ಬಂದ ಬಳಿಕವೇ, ಚಿತ್ರೀಕರಣಕ್ಕೆ ಚಾಲನೆ ಸಿಗಲಿದೆ ಎಂದು ವಿವರ ಕೊಡುವ ನಿರ್ದೇಶಕ ಅರವಿಂದ್‌ ಕೌಶಿಕ್‌, ಸಿನಿಮಾ ಕುರಿತು ಹೇಳುವುದಿಷ್ಟು.


“ಇದೊಂದು ಸೀರಿಯಲ್‌ ಕಿಲ್ಲರ್‌ ಸುತ್ತ ನಡೆಯೋ ಕಥೆ. ಇಲ್ಲಿ ಸ್ನೇಹಿತ್‌ ಗೌಡ ಅವರು ಸೀರಿಯಲ್‌ ಕಿಲ್ಲರ್‌ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಚಕ್ರವರ್ತಿ ಚಂದ್ರಚೂಡ ಅವರು ಪೊಲೀಸ್‌ ಅಧಿಕಾರಿ ಪಾತ್ರದಲ್ಲಿ ನಟಿಸಲಿದ್ದಾರೆ. ಹೀರೋ ಇಲ್ಲಿ ಸೀರಿಯಲ್‌ ಕಿಲ್ಲರ್‌ ಆಗೋದು ಯಾಕೆ ಅನ್ನೋದೇ ಸಸ್ಪೆನ್ಸ್.‌ ಅವರು ಯಾಕೆ ಆ ರೀತಿ ಮಾಡ್ತಾನೆ. ಅವನ ಲೈಫಲ್ಲಿ ನಡೆದ ಆ ಘಟನೆ ಏನು ಎಂಬುದು ವಿಶೇಷ. ಒಬ್ಬ ಸೀರಿಯಲ್‌ ಕಿಲ್ಲರ್‌ ಮತ್ತು ಪೊಲೀಸ್‌ ಅಧಿಕಾರಿ ಮಧ್ಯೆ ನಡೆಯೋ ಜಟಾಪಟಿ ಇಲ್ಲಿ ಹೈಲೈಟ್.‌ ಇದೊಂದು ಸೈಕಲಾಜಿಕಲ್‌ ಥ್ರಿಲ್ಲರ್‌. ಸಾಮಾನ್ಯವಾಗಿ ಸೈಕಲಾಜಿಕಲ್‌ ಥ್ರಿಲ್ಲರ್‌ ಅಂದಾಕ್ಷಣ, ಎಲ್ಲರೂ ಡಾರ್ಕ್‌ ಆಗಿ ತೋರಿಸ್ತಾರೆ.


ಅಲ್ಲಿ ವೈಲೆಂಟು ಇರುತ್ತೆ. ಆದರೆ, ಇಲ್ಲಿ ಸೀರಿಯಲ್‌ ಕಿಲ್ಲರ್‌ ಇದ್ದರೂ, ನಾರ್ಮಲ್ ಆಗಿರುತ್ತಾನೆ. ಅವನ ಬದುಕಲ್ಲಿ ನಡೆದ ಘಟನೆಗಳಿಂದ ಅವನು ಆ ರೀತಿ ಆಗಿರುತ್ತಾನೆ. ಆ ಘಟನೆಗಳು ಏನು ಅನ್ನೋದು ಇಲ್ಲಿ ಕಥೆ. ಅಂದಹಾಗೆ, ಇದನ್ನು ಮೊದಲು ಹಿಂದಿಯಲ್ಲಿ ಚಿತ್ರೀಕರಿಸುವ ಯೋಚನೆ ಇತ್ತು. ಕೊನೆಗೆ ಕನ್ನಡ ಸೇರಿಯೂ ಮಾಡಬೇಕು ಎಂದು ನಿರ್ಧಿರಿಸಿ, ಕನ್ನಡ ಹಿಂದಿ ಭಾಷೆಯಲ್ಲಿ ತಯಾರು ಮಾಡುತ್ತಿದ್ದೇವೆ.

ಸದ್ಯಕ್ಕೆ ನಾಯಕಿಯ ಆಯ್ಕೆ ನಡೆಯಬೇಕಿದೆ. ಆ ಆಯ್ಕೆಯನ್ನು ಆಡಿಷನ್‌ ಮೂಲಕವೇ ಮಾಡಲಾಗುತ್ತದೆ. ಇಲ್ಲಿ ಹೊಸ ಪ್ರತಿಭೆಗೆ ಹುಡುಕಾಟ ನಡೆಯುತ್ತಿದೆ. ಚಿತ್ರದ ಕಥೆ ಹೊಸ ಮುಖವನ್ನೇ ಡಿಮ್ಯಾಂಡ್‌ ಮಾಡುತ್ತಿದೆ. ಬೆಂಗಳೂರಲ್ಲಿ ಸಾಕಷ್ಟು ಪ್ರತಿಭಾವಂತರಿದ್ದಾರೆ. ಹಾಗಾಗಿ, ಇಲ್ಲಿಯವರನ್ನೇ ಹುಡುಕಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ ಎಂಬುದು ಅರವಿಂದ್‌ ಕೌಶಿಕ್‌ ಮಾತು.

Related Posts

error: Content is protected !!