ಕನ್ನಡ ಚಿತ್ರರಂಗ ಈಗ ಹೊಸ ಹುರುಪಿನಲ್ಲಿದೆ. ಕೊರೊನಾ ಆತಂಕ ಕೊಂಚ ಕಡಿಮೆಯಾಗುತ್ತಿದ್ದಂತೆಯೇ ಸರ್ಕಾರ ಕೂಡ ಚಿತ್ರರಂಗದ ಚಟುವಟಿಕೆಗೆ ಗ್ರೀನ್ ಸಿಗ್ನಲ್ ಕೊಟ್ಟಿದೆ. ಈಗ ಶೇ.೧೦೦ರಷ್ಟು ಆಸನ ಭರ್ತಿಗೆ ಅನುಮತಿ ಸಿಕ್ಕಾಗಿದೆ. ಸ್ಟಾರ್ ಸಿನಿಮಾಗಳು ಸೇರಿದಂತೆ ಹೊಸಬರ ಚಿತ್ರಗಳು ಪ್ರೇಕ್ಷಕರ ಮುಂದೆ ಬರಲು ಅಣಿಯಾಗುತ್ತಿವೆ. ಅತ್ತ, ಹೊಸಬರ ಸಿನಿಮಾಗಳೂ ಸೆಟ್ಟೇರುತ್ತಿವೆ. ಈಗಾಗಲೇ ಅರ್ಧದಷ್ಟು ಚಿತ್ರೀಕರಣ ಮುಗಿಸಿದ್ದ ಕೆಲವು ಸಿನಿಮಾಗಳು ಸಹ ತನ್ನ ಚಿತ್ರೀಕರಣ ಮುಂದುವರೆಸುತ್ತಿವೆ. ಆ ಸಾಲಿಗೆ “ಶಿವನಪಾದ” ಸಿನಿಮಾವೂ ಸೇರಿದೆ.
ಹೌದು, ಸೀ ಶೋರ್ ಸ್ಟುಡಿಯೋಸ್ ಬ್ಯಾನರ್ನಡಿ ಸಂದೀಶ್ ಹೆಚ್.ಟಿ. ಹಾಗೂ ಪೆರುಮಾಳ್ ವಿ. ಅವರ ನಿರ್ಮಾಣದ ಈ ಚಿತ್ರ ಲವ್, ಸಸ್ಪೆನ್ಸ್, ಥ್ರಿಲ್ಲರ್ ಜೊತೆಗೆ ಹಾರರ್ ಟಚ್ ಹೊಂದಿದೆ. ಜೊತೆಗೆ ಕ್ರೈಮ್ ಕೂಡ ಇಲ್ಲಿದೆ. ಈ ಹಿಂದೆ ಲೂಸ್ ಮಾದ ಯೋಗಿ ಅಭಿನಯದ “ಬಂಗಾರಿ” ಹಾಗು ಮಕ್ಕಳ ಸಿನಿಮಾಗಳಾದ “ಬೆಟ್ಟದ ದಾರಿ”, “ನಡಗಲ್ಲು”, ತಮಿಳಿನ “ಕಾದಲ್ ಪೈತ್ಯಂ” ಚಿತ್ರಗಳನ್ನು ನಿರ್ದೇಶಿಸಿದ್ದ ಮಾ.ಚಂದ್ರು ಅವರು “ಶಿವನಪಾದ” ಚಿತ್ರಕ್ಕೆ ನಿರ್ದೇಶಕರು. ಸದ್ಯ ಈ ಚಿತ್ರ ಶೇ.೫೦ರಷ್ಟು ಚಿತ್ರೀಕರಣ ಬಾಕಿ ಉಳಿಸಿಕೊಂಡಿದೆ. ಮಾತಿನಭಾಗ ಹಾಗೂ ಎರಡು ಹಾಡುಗಳನ್ನು ಸಾಗರ, ಮದ್ದೂರು, ಪುಟ್ಟಣ್ಣ ಸ್ಟುಡಿಯೋ, ಮಿಲನಹೌಸ್ ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗುತ್ತಿದೆ. ಮುದಿನ ವಾರದಿಂದ ಶೂಟಿಂಗ್ ಶುರುವಾಗಲಿದೆ.
ಆರು ಪಾತ್ರಗಳ ಸುತ್ತ ನಡೆಯುವ ಕುತೂಹಲದ ಕಥೆಯಲ್ಲಿ ಒಂದು ಕೊಲೆ ನಡೆಯುತ್ತೆ. ಅದೇ ಚಿತ್ರದ ಹೈಲೈಟ್. ನಿವೃತ್ತ ಹಿರಿಯ ಪೊಲೀಸ್ ಅಧಿಕಾರಿ ಹೆಚ್.ಟಿ. ಸಾಂಗ್ಲಿಯಾನ ಅವರು ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿಯೇ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ವಿಶೇಷತೆಗಳಲ್ಲೊಂದು.
“ಶಿವನಪಾದ” ಎನ್ನುವುದು ಉತ್ತರ ಕರ್ನಾಟಕದಲ್ಲಿರುವ ಒಂದು ಪ್ರಸಿದ್ದ ಪ್ರವಾಸಿ ತಾಣ. ಈ ಚಿತ್ರದಲ್ಲಿ ಆ ಲೊಕೇಶನ್ ಕೂಡ ಒಂದು ಪಾತ್ರವಾಗಿಯೇ ಮೂಡಿಬರಲಿದ್ದು, ಬಹುತೇಕ ಜರ್ನಿಯಲ್ಲೇ ನಡೆಯೋ ಕುತೂಹಲಕರ ಕಥೆ ಇದು ಎಂಬುದು ನಿರ್ದೇಶಕರ ಮಾತು.
ಚಿತ್ರದಲ್ಲಿ ನಾಗೇಶ್ ಆರ್. ಆನಂದ್, ವರ್ಷಿತ ಗಿರೀಶ್, ಮೇಘನಾ, ಬಲ ರಾಜವಾಡಿ, ನವೀನ್ ಡಿ.ಪಡೀಲ್, ಅಂಜಲಿ, ಹರಿಹರನ್ ಬಿ.ಪಿ, ಆಟೋ ನಾಗರಾಜ್, ಶೇಷಗಿರಿ, ನರಸಿಂಹಮೂರ್ತಿ, ಸೂರಿ, ರಂಭಾ ಇತರರು ಇದ್ದಾರೆ. ನಿರ್ದೇಶಕರೇ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ವೀನಸ್ ಮೂರ್ತಿ ಕ್ಯಾಮೆರಾ ಹಿಡಿದರೆ, ವೀರ್ ಸಮರ್ಥ ಅವರ ಸಂಗೀತವಿದೆ. ವಿಜಯ್ ಭರಮಸಾಗರ ಅವರ ಸಾಹಿತ್ಯ, ವೆಂಕಿ ಯುವಿಡಿ ಸಂಕಲನ ಈ ಚಿತ್ರಕ್ಕಿದೆ.
ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅದ್ಯಾಕೋ ಸಿಡಿದೆದಿದ್ದಾರೆ. ಕೊರೋನಾ ಕಾಲದಲ್ಲಿ ಕೈ ಕಟ್ಟಿ ಕುಳಿತಿದ್ದು ಸಾಕೆಂದು ಹೊರ ಬಂದ ಬೆನ್ನಲೇ ಅವರು ಕನ್ನಡದ ಪ್ರತಿಷ್ಠಿತ ಹೊಂಬಾಳೆ ಫಿಲಂಸ್ ಬ್ಯಾನರ್ ನಲ್ಲಿ ‘ರಿಚರ್ಡ್ ಆಂಟನಿ’ ಹೆಸರಿನ ಸಿನಿಮಾ ಅನೌನ್ಸ್ ಮಾಡಿದ್ದು ನಿಮಗೆಲ್ಲ ಗೊತ್ತೇ ಇದೆ. ಸದ್ಯಕ್ಕೀಗ ಅದರ ಕೆಲಸದಲ್ಲಿಯೇ ಬ್ಯುಸಿ ಆಗಿದ್ದಾರೆ. ಈ ನಡುವೆಯೇ ಮತ್ತೊಂದು ಚಿತ್ರ ಮಾಡಲು ಹೊರಟ್ರಾ ? ಹಾಗೊಂದು ಅನುಮಾನ ಅವರು ಸೋಮವಾರ ತಮ್ಮ ಟ್ವಿಟರ್ ಖಾತೆಯಲ್ಲಿ ಹಾಕಿಕೊಂಡಿರುವ ಸ್ಟೇಟಸ್ ಕಾರಣವಾಗಿದೆ.
ಸದ್ಯಕ್ಕೆ ಅವರು ಸಿನಿಮಾ ಮಾಡಲು ಹೊರಟಿರೋದು ನಿಜ. ಆದರೆ ಇದು ಅವರೇ ನಿರ್ದೇಶಿಸಿ, ನಾಯಕರಾಗಿ ಅಭಿನಯಿಸುತ್ತಿರುವ ಸಿನಿಮಾವಂತೂ ಅಲ್ಲ. ಲೂಸಿಯಾ, ರಂಗಿ ತರಂಗ, ರಾಮಾ ರಾಮಾ ರೇ ಹಾಗೂ ಒಂದು ಮೊಟ್ಟೆಯ ಕಥೆ, ಕವಲು ದಾರಿ ಹಾಗೂ ದಿಯಾ ಸೇರಿದಂತೆ ಕನ್ನಡದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದ ಹೆಚ್ಚು ಸದ್ದು ಮಾಡಿದ ಹೊಸ ಅಲೆಯ ಸಿನಿಮಾಗಳು ತಮ್ಮಗೆ ಅತೀವವಾಗಿ ಪ್ರಭಾವ ಬೀರಿವೆ. ಆ ರೀತಿಯ ಸಿನಿಮಾಗಳ ಸಮೂಹಕ್ಕೆ ಇದು ಕೂಡ ಸೇರಲಿದೆ ಅಂತ ಅವರು ಹೇಳಿಕೊಂಡಿದ್ದನ್ನು ನೋಡಿದರೆ ಅವರು ತಮ್ಮದೇ ಪರಮವ್ಹ ಸಂಸ್ಥೆಯ ಬ್ಯಾನರ್ ಮೂಲಕ ಗಟ್ಟಿ ಕಥೆಯ, ಕಡಿಮೆ ಬಜೆಟ್ ಒಂದೊಳ್ಳೆಯ ಸಿನಿಮಾ ನಿರ್ಮಾಣ ಮಾಡುವ ಆಸೆ ಅವರೊಳಗಡೆ ಇರೋದು ನಿಜ. ಅದು ಏನು ಅನ್ನೋದು ಇಂದು ಸಂಜೆಯೇ ಗೊತ್ತಾಗಲಿದೆ.
ಇಂದು ಸಂಜೆ 4.05 ಕ್ಕೆ ಅದು ನಿಮ್ಮ ಮುಂದೆ ಅನಾವರಣಗೊಳ್ಳಲಿದೆ ಎಂಬುದಾಗಿಯೂ ಹೇಳಿಕೊಂಡಿದ್ದಾರೆ. ಅಂದ ಹಾಗೆ, ನಟ ರಕ್ಷಿತ್ ಶೆಟ್ಟಿ ಈಗ ಹೊಸ ಬಗೆಯ ಕಥೆಗಳನ್ನು ತಮ್ಮದೇ ಬ್ಯಾನರ್ ನಲ್ಲಿ ನಿರ್ಮಾಣ ಮಾಡುವುದಕ್ಕೆ ಮನಸು ಮಾಡಿದ್ದಾರೆ. ಆ ಕುರಿತು ಟ್ವಿಟರ್ ಖಾತೆಯಲ್ಲಿ ಹಾಕಿಕೊಂಡ ಸ್ಟೇಟಸ್ ಹೀಗಿದೆ.
ʼಲೂಸಿಯಾ, ರಾಮಾ ರಾಮಾ ರೇ, ರಂಗಿತರಂಗ, ಒಂದು ಮೊಟ್ಟೆಯ ಕಥೆ, ಕವಲುದಾರಿ, ದಿಯಾ.. ಈ ಸಿನಿಮಾಗಳು ನನ್ನ ಮೇಲೆ ಉಂಟುಮಾಡಿದ ಪ್ರಭಾವ ಅತಿ ಪ್ರಬಲವಾಗಿತ್ತು ಹಾಗೂ ಅದನ್ನು ಜಗತ್ತಿನ ಜೊತೆ ಹಂಚಿಕೊಳ್ಳಲು ಅತಿ ಸಂತಸವಾದ ವಿಷಯವಾಗಿತ್ತು. ಇಂದು ಇದೇ ರೀತಿ ಪ್ರಭಲವಾದ ಪ್ರಭಾವ ಬೀರುವ ಅಂತದ್ದೇ ಒಂದು ಸಹಯೋಗ ಈ ಸಿನಿಮಾದ ಮೂಲಕ ಕೂಡಿ ಬಂದಿದೆ. ಇದು ನಿಮಗೂ ಸಹ ಭಾವನೆಗಳನ್ನು ಬಡಿದೇಳಿಸುವ ವರ್ಣ ಚಿತ್ರಗಳ ಸಮೂಹವಾ ಗುವುದರಲ್ಲಿ ಎರಡು ಮಾತಿಲ್ಲ. ಇಂದು ಸಂಜೆ ೪.೦೫ ಕ್ಕೆ ನಿಮ್ಮ ಮುಂದೆ ಅನಾವರಣಗೊಳಿಸಲಿದ್ದೇವೆ.. ಇದಿಷ್ಟು ನಟ ರಕ್ಷಿತ್ ಶೆಟ್ಟಿ ಹಾಕಿಕೊಂಡಿರೋ ಸ್ಟೇಟಸ್.
ಪ್ಯಾನ್ ಇಂಡಿಯಾ ಸ್ಟಾರ್ ರಕ್ಷಿತ್ ಶೆಟ್ಟಿ ಮೇಲೆ ಇತ್ತೀಚೆಗೆ ಹಿಗ್ಗಾ ಮುಗ್ಗಾ ವಾರ್ ಆಗಿದ್ದು, ಅವರನ್ನು ಬಡಿದೆಬ್ಬಿಸುವಂತೆ ಮಾಡಿರೋದು ಸತ್ಯ. ಟೀಕೆಗಳನ್ನುಸವಾಲಾಗಿಯೇ ಸ್ವೀಕರಿಸಿರುವ ಅವರೀಗ ತಮ್ಮ ಕೆಲಸಗಳ ಮೂಲಕ ಉತ್ತರಿಸಲು ಹೊರಟಂತಿದೆ. ಅದರ ಮೊದಲ ಕೌಂಟರ್ ರಿಚರ್ಡ್ ಆಂಟನಿ. ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ದೊಡ್ಡ ಟೀಕೆಗೆ ಒಳಗಾದ ದಿನದಲ್ಲಿಯೇ ಅದಕ್ಕೆ ದೊಡ್ಡದಾಗಿ ಕೌಂಟರ್ ಕೊಟ್ಟರು. ಹೊಂಬಾಳೆ ಫಿಲಂಸ್ ಬ್ಯಾನರ್ ನಲ್ಲಿ ಅವರು ರಿಚರ್ಡ್ ಆಂಟನಿ ಮೂಲಕ ನಿರ್ದೇಶನ ಮತ್ತು ನಟನೆಗೆ ಇಳಿದಾಗ ಎಲ್ಲರೂ ನಿಬ್ಬೆರಗಾಗಿ ನಿಂತರು. ಅಲ್ಲಿಂದ ಈಗ ತಮ್ಮದೇ ಸಂಸ್ಥೆಯ ಮೂಲಕ ಹೊಸ ಅಲೆಯ ಸಿನಿಮಾ ನಿರ್ಮಾಣಕ್ಕೆ ಇಳಿಯುತ್ತಿದ್ದಾರೆ. ಆ ಸಿನಿಮಾದ ನಿರ್ದೇಶಕ, ನಾಯಕ ನಟ, ಉಳಿದಂತೆ ಕಲಾವಿದರು, ತಂತ್ರಜ್ಜರ ವಿವರ ಇಂದು ಸಂಜೆಯೇ ಬಹಿರಂಗವಾಗುವುದು ಗ್ಯಾರಂಟಿ. – ಎಂಟರ್ ಟೈನ್ ಮೆಂಟ್ ಬ್ಯೂರೋ ಸಿನಿಲಹರಿ
ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಎಷ್ಟು ದೊಡ್ಡ ಸೆಲಿಬ್ರಿಟಿ ಅಂತ ಇಡೀ ಕರ್ನಾಟಕಕ್ಕೆ ಗೊತ್ತು. ಆದರೆ, ಬಹದ್ದೂರ್ ಹುಡುಗ ನಾನೇನ್ ದೊಡ್ಡ ಸೆಲಿಬ್ರಿಟಿ ಅಲ್ಲ ಬಿಡಿ ಅಂತಾರೇ. ಸ್ಟಾರ್ ನಟನಾಗಿ ಬೆಳೆದು ನಿಂತರೂ ಕೂಡ ಈ ರೀತಿ ಹೇಳೋದು ಅವರ ದೊಡ್ಡ ಗುಣ. ಮಾಡಿರುವುದು ನಾಲ್ಕೇ ನಾಲ್ಕು ಸಿನಿಮಾ ಇರ್ಬೋದು ಆದರೆ ಸಾಧನೆ ಮುಗಿಲೆತ್ತರ, ಅಭಿಮಾನಿಗಳು ಕೋಟ್ಯಾಂತರ.
ಇವತ್ತು, ಭರ್ಜರಿ ಹುಡುಗ ತಮ್ಮ ವಿಐಪಿಗಳಿಗೆ ಶಾಕಿಂಗ್ ನ್ಯೂಸ್ ಕೊಟ್ಟಿದ್ದಾರೆ. ಅದ್ದೂರಿ ಹುಡುಗನ ಅಭಿಮಾನಿಗಳು ಈ ನ್ಯೂಸ್ ನ ನಿರೀಕ್ಷೆ ಮಾಡಿರಲಿಲ್ಲ. ಅಕ್ಟೋಬರ್ 06 ರಂದು ಹಬ್ಬ ಮಾಡಬೇಕು, ತಮ್ಮ ನೆಚ್ಚಿನ ನಟ ಆಕ್ಷನ್ ಪ್ರಿನ್ಸ್ ಹುಟ್ಟುಹಬ್ಬವನ್ನು ಗ್ರ್ಯಾಂಡ್ ಆಗಿ ಆಚರಣೆ ಮಾಡಬೇಕು ಅಂತ ಕನಸು ಕಂಡಿದ್ದರು. ಆದರೆ, ಧ್ರುವ ಬರ್ತ್ ಡೇಗೆ ಬ್ರೇಕ್ ಹಾಕಿದ್ದಾರೆ. ಜನ್ಮದಿನ ಆಚರಣೆ ಮಾಡಿಕೊಳ್ಳದಿರಲು ನಿರ್ಧಾರ ಮಾಡಿದ್ದಾರೆ.
ಕಳೆದ ವರ್ಷವೂ ಧ್ರುವ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿರಲಿಲ್ಲ. ಅಣ್ಣನನ್ನು ಕಳೆದುಕೊಂಡ ನೋವಲ್ಲೇ ದಿನದೂಡುತ್ತಿದ್ದ, ಈಗಲೂ ಸಹೋದರ ಚಿರು ನೆನಪಲ್ಲೇ ಬದುಕು ಸಾಗಿಸುತ್ತಿರುವ ಧ್ರುವ ಸರ್ಜಾ ತಮ್ಮ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಳ್ಳದಿರಲು ತೀರ್ಮಾನ ಮಾಡಿದ್ದಾರೆ ಅನ್ಸುತ್ತೆ. ಅಷ್ಟಕ್ಕೂ, ಬರ್ತ್ ಡೇ ದಿನ ಧ್ರುವ ಬೆಂಗಳೂರಿನಲ್ಲಿ ಇರೋದಿಲ್ಲ. ʼಮಾರ್ಟಿನ್ʼ ಚಿತ್ರದ ಚಿತ್ರೀಕರಣಕ್ಕಾಗಿ ವೈಜಾಗ್ ಗೆ ತೆರಳುತ್ತಿದ್ದಾರೆ. ಹೀಗಾಗಿ, ಅಭಿಮಾನಿ ದೇವರುಗಳನ್ನು ಭೇಟಿ ಮಾಡುವುದಕ್ಕೆ ಸಾಧ್ಯವಿಲ್ಲ.
ಅಣ್ಣನ ಅಗಲಿಕೆಯ ನೋವು ಒಂದು ಕಡೆಯಾದರೆ, ಕೊರೋನಾ ಆತಂಕವೂ ಇನ್ನೂ ಇರೋದ್ರಿಂದ ಗುಂಪು ಸೇರಿಸುವುದು ಬೇಡ ಎನ್ನುವುದು ಆಕ್ಷನ್ ಪ್ರಿನ್ಸ್ ನಿರ್ಧಾರ. ಹೀಗಾಗಿ, ಮನೆ ಮುಂದೆ ಸಂಭ್ರಮಾಚರಣೆ ಬೇಡವೆಂದು ಡಿಸೈಡ್ ಮಾಡಿದ್ದಾರೆ. ಇದ್ದಲಿಂದಲೇ ಶುಭಾಶಯ ಕೋರುವಂತೆ ತಿಳಿಸಿದ್ದಾರೆ. ಬಹದ್ದೂರ್ ಹುಡುಗನ ನಿಲುವು ವಿಐಪಿಗಳಿಗೆ ಬೇಸರ ತಂದರೂ ಅದನ್ನು ಒಪ್ಪಿಕೊಳ್ತಾರೆ. ತಾವಿರುವ ಜಾಗದಿಂದಲೇ ಶುಭಾಶಯ ಹೇಳಲಿದ್ದಾರೆ.
ಮಾರ್ಟಿನ್ ನಿಮ್ಮೆಲ್ಲರಿಗೂ ಗೊತ್ತಿರುವಂತೆ ಬಹು ನಿರೀಕ್ಷೆಯ ಸಿನಿಮಾ. ಅದ್ದೂರಿ ಕಾಂಬೋ ಜೊತೆಯಾಗಿ ಮಾಡ್ತಿರುವ ಮಹಾಮೂವೀ. ಹೀಗಾಗಿ, ನಿರೀಕ್ಷೆ ಗರಿಗೆದರಿದೆ. ಚಿತ್ರಪ್ರೇಮಿಗಳ ನಿರೀಕ್ಷೆಯನ್ನೂ ಮೀರಿ ಸಿನಿಮಾ ನಿರ್ಮಾಣ ಮಾಡೋದಕ್ಕೆ ಇಡೀ ಮಾರ್ಟಿನ್ ಟೀಮ್ ಶ್ರಮವಹಿಸಿ ಕೆಲಸ ಮಾಡ್ತಿದೆ. ಪ್ರತಿ ಸಿನಿಮಾದಂತೆ ʼಮಾರ್ಟಿನ್ʼ ಗೂ ನಿಮ್ಮ ಪ್ರೀತಿ ಪ್ರೋತ್ಸಾಹ ಇರಲೆಂದು ಧ್ರುವ ವಿಐಪಿಗಳಿಗೆ ಕೇಳಿಕೊಂಡಿದ್ದಾರೆ. ಬಹದ್ದೂರ್ ಹುಡುಗರು ಮಾರ್ಟಿನ್ ಚಿತ್ರವನ್ನು ತಲೆ ಮೇಲೆ ಹೊತ್ತು ಮೆರೆಸೋಕೆ ಕಾತುರರಾಗಿದ್ದಾರೆ ಅದರಲ್ಲಿ ನೋಡೌಟ್.
ತೆಲುಗು ತಾರಾ ದಂಪತಿ ಸಮಂತಾ ಹಾಗೂ ಅಕ್ಕಿನೇನಿ ನಾಗಚೈತನ್ಯ ತಮ್ಮ ದಾಂಪತ್ಯ ಜೀವನಕ್ಕೆ ಗುಡ್ ಬೈ ಹೇಳಿದ್ದಾರೆ. ನಾಲ್ಕು ವರ್ಷದ ವೈವಾಹಿಕ ಬದುಕಿಗೆ ಎಳ್ಳುನೀರು ಬಿಟ್ಟಿದ್ದಾರೆ. ೧೧ ವರ್ಷಗಳ ಕಾಲ ಪ್ರೀತ್ಸಿ ಮದುವೆಯಾದ ಈ ಜೋಡಿ ಕೊನೆಗೂ ಸಂಸಾರ ಸಾಗರದ ಬಂಧನದಿಂದ ಬೇರ್ಪಟ್ಟಿದ್ದಾರೆ. ರೀಲ್ ಅಂಡ್ ರಿಯಲ್ ಲೈಫ್ನಲ್ಲಿ ಸೈ ಎನಿಸಿಕೊಂಡ ಚೈ ಅಂಡ್ ಸ್ಯಾಮ್ ಅದ್ಯಾಕೆ ವಿಚ್ಚೇದನದಂತಹ ನಿರ್ಧಾರಕ್ಕೆ ಬಂದ್ರು ? ೧೦ ಕೋಟಿ ಖರ್ಚು ಮಾಡಿ ಇಡೀ ಸೌತ್-ನಾರ್ತ್ ಸಿನಿಮಾ ಇಂಡಸ್ಟ್ರಿ ನಿಬ್ಬೆರಗಾಗುವಂತೆ ಹಸೆಮಣೆ ಏರಿದ ಈ ಕ್ಯೂಟ್ ಕಪಲ್ಸ್ ಕೇವಲ ನಾಲ್ಕೇ ನಾಲ್ಕು ವರ್ಷಕ್ಕೆ ಅದ್ಯಾಕೆ ದಾಂಪತ್ಯ ಜೀವನವನ್ನು ಕೊನೆಗೊಳಿಸಿಕೊಂಡ್ರು? ಈ ಪ್ರಶ್ನೆಗೆ ಕೇವಲ ಒಂದೇ ಸಾಲಿನ ಉತ್ತರ ನಿಡೋದಕ್ಕೆ ಸಾಧ್ಯವಿಲ್ಲ. ಫ್ಯಾಮಿಲಿಮ್ಯಾನ್ ವೆಬ್ಸಿರೀಸೇ ಮಜಿಲಿ ಜೋಡಿಯನ್ನು ದೂರ ದೂರ ಮಾಡ್ತು ಎಂತಲೂ ಹೇಳೋದಕ್ಕೆ ಆಗಲ್ಲ. ಆದರೆ, ಮಾಧರಿಯಾಗಬೇಕಿದ್ದ ಈ ಇಬ್ಬರು ತಾರಾಜೋಡಿಗಳು ನಾನೊಂದು ತೀರಾ, ನೀನೊಂದು ತೀರಾ ಅಂತ ಬೇರ್ಪಟ್ಟಿದ್ದು ಮಾತ್ರ ಅರಗಿಸಿಕೊಳ್ಳೋದಕ್ಕೆ ಸಾಧ್ಯವಾಗ್ತಿಲ್ಲ.
ಸ್ಯಾಮ್ ಅಂಡ್ ಚೈ ದೂರವಾಗ್ತಿರೋದು ಅವರ ಕುಟುಂಬಕ್ಕೆ ಎಷ್ಟು ನೋವುಂಟು ಮಾಡಿದೆಯೋ ಅಷ್ಟೇ ನೋವು ಮನಂ ಜೋಡಿಯ ಕೋಟ್ಯಾಂತರ ಅಭಿಮಾನಿಗಳಿಗೆ ಆಗಿದೆ. ಮಜಿಲಿ ಜೋಡಿಯ ವಿಚ್ಚೇದನದ ಸುದ್ದಿ ಕೇಳಿ ಅಭಿಮಾನಿಗಳ ಹೊಟ್ಟೆಗೆ ಬೆಂಕಿ ಬಿದ್ದಂತಾಗಿದೆ.
ನಾಲ್ಕು ದಿನ ಕಳೆದರೆ ಚೈ ಅಂಡ್ ಸ್ಯಾಮ್ ಗುಡ್ ನ್ಯೂಸ್ ಕೊಡ್ತಾರೆ, ವಾರ್ಷಿಕೋತ್ಸವಕ್ಕೆ ಸಿಹಿ ಸುದ್ದಿ ಸಿಗುತ್ತೆ ಅಂತ ಕಾಯ್ತಿದ್ದ ಫ್ಯಾನ್ಸ್ ಗೆ ನಿರಾಶೆಯಾಗಿದೆ. ಬರೀ ನಿರಾಸೆ ಅಲ್ಲ ಆಕಾಶವೇ ಕಳಚಿ ತಲೆಮೇಲೆ ಬಿದ್ದಾಗಿದೆ ಅಂದರೆ ತಪ್ಪಾಗಲಿಕ್ಕಿಲ್ಲ. ಯಾಕಂದ್ರೆ, ಮಜಿಲಿ ಜೋಡಿ ದೂರವಾಗೋದನ್ನ ಸಹಿಸೋ ಶಕ್ತಿ ಅಭಿಮಾನಿಗಳಿಗಿರಲಿಲ್ಲ. ಇಬ್ಬರು ಬೇರೆಯಾಗ್ತಿದ್ದಾರೆ ಅನ್ನೋ ಸುದ್ದಿ ಹೊರಬಿದ್ದಾಗಿನಿಂದಲೂ ಅಭಿಮಾನಿಗಳ ಪ್ರಾರ್ಥನೆ ಒಂದೇ ಆಗಿತ್ತು ಅದು ಸ್ಯಾಮ್ ಅಂಡ್ ಚೈ ಡಿವೋರ್ಸ್ ಸುದ್ದಿ ಸುಳ್ಳಾಗಬೇಕು, ಅವರಿಬ್ಬರು ಒಂದಾಗಬೇಕು ಎನ್ನುವುದು. ಆದ್ರೆ, ಇವತ್ತು ಈ ತಾರಾ ಜೋಡಿ ಅಧಿಕೃತವಾಗಿ ವಿಚ್ಚೇದನವನ್ನು ಅಧಿಕೃತವಾಗಿ ಘೋಷಿಸಿಕೊಂಡಿದ್ದಾರೆ. ಆದರೆ, ಅಭಿಮಾನಿಗಳು ಮಾತ್ರ ಈಗ್ಲೂ ಹೇಳ್ತಿರೋದು ಒಂದೇ ಇನ್ನೂ ಕಾಲ ಮಿಂಚಿಲ್ಲ ನಿಮ್ಮ ನಿರ್ಧಾರ ಬದಲಾಯಿಸಿಕೊಳ್ಳಿ ಅಂತ.
ಒಡೆದ ಹಾಲು, ಚೂರಾದ ಕನ್ನಡಿ ಮತ್ತೆ ಒಂದು ಗೂಡಿಸೋದಕ್ಕೆ ಆಗಲ್ಲ ಅಂತಾರೇ. ಅಷ್ಟಕ್ಕೂ, ಸ್ಟಾರ್ ಕಪಲ್ಗಳಾದ ಅಕ್ಕಿನೇನಿ ನಾಗಚೈತನ್ಯ ಹಾಗೂ ಸಮಂತಾ ವೈವಾಹಿಕ ಸಂಬಂಧ ಹೊಡೆದು ಚೂರಾಗಿದೆಯೋ ಅಥವಾ ನುಚ್ಚುನೂರಾಗಿದೆಯೋ ಗೊತ್ತಿಲ್ಲ. ಸದ್ಯಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಇಬ್ಬರು ವೈವಾಹಿಕ ಬದುಕಿನಿಂದ ದೂರವಾಗ್ತಿರುವುದಾಗಿ ಹೇಳಿಕೊಂಡಿದ್ದಾರೆ. ತೆಗೆದುಕೊಂಡಿರುವ ತೀರ್ಮಾನದಿಂದ ಹಿಂದೆ ಸರಿಯುತ್ತಾರೋ ಇಲ್ಲವೋ ಗೊತ್ತಿಲ್ಲ. ಹಿಂದೆ ಸರಿಬೇಕು ಒಂದಾಗಿ ಬದುಕಬೇಕು ಎನ್ನುವುದು ಅಕ್ಕಿನೇನಿ ಫ್ಯಾಮಿಲಿ-ಸಮಂತಾ ಕುಟುಂಬದ ಕಳಕಳಿ ಮಾತ್ರವಲ್ಲ ಕೋಟ್ಯಾಂತರ ಭಕ್ತರ ಆಶಯ. ಆ ಆಸೆ ಈಡೇರುತ್ತೋ ಇಲ್ಲವೋ ಕೂತೂಹಲದಿಂದ ಕಾಯಬೇಕು. ಭಗ್ತವಂತ ಅವರಿಬ್ಬರ ಮನಸನ್ನು ಬದಲಾಯಿಸಬೇಕು ಹಾಗಾದ್ರೆ ಮಾತ್ರ ಏ ಮಾಯ ಚೇಸ್ಯಾವೆ ಜೋಡಿ ಒಂದಾಗಲು ಸಾಧ್ಯ.
ಗಂಧದಗುಡಿಗೆ ರಣಬೀರ್ ಕಪೂರ್ ಆಗಮನ ಎಂದಾಕ್ಷಣ ವಾವ್ ಅಂತೀರಿ? ಯಾವ್ ಸಿನಿಮಾ ? ಏನ್ ಕಥೆ? ಡೈರೆಕ್ಟರ್ ಯಾರು?ಪ್ರೊಡ್ಯೂಸರ್ ಯಾರು ? ಹೀಗೆ ಬ್ಯಾಕ್ ಟು ಬ್ಯಾಕ್ ಕೊಶ್ಚನ್ಸ್ ನೀವೇ ಹಾಕಿಕೊಳ್ತೀರಿ. ಆದರೆ, ನಾವು ಹೇಳಲಿಕ್ಕೆ ಹೊರಟಿರುವುದು ಬಿಟೌನ್ ರಣಬೀರ್ ಬಗ್ಗೆ ಅಲ್ಲ ಸ್ಯಾಂಡಲ್ ವುಡ್ ರಣಬೀರ್ ಕಪೂರ್ ಕುರಿತಾಗಿ. ಬಾಲಿವುಡ್ ಹ್ಯಾಂಡ್ಸಮ್ ಹಂಕ್ ರಣಬೀರ್ ಕಪೂರ್ ನ ಹೋಲುವಂತಹ ಚಾರ್ಮಿಂಗ್ ಹೀರೋ ಚಂದನವನದಲ್ಲಿದ್ದಾರೆ. ಅವರು ನಮ್ಮ ಕನ್ನಡದವರೇ, ಬೆಂಗಳೂರಲ್ಲೇ ಹುಟ್ಟಿ ಬೆಳೆದಿದ್ದಾರೆ. ಆ ಸುರಸುಂದರಾಂಗ ಸುಮುಖರ ಪರಿಚಯ ಮತ್ತು ಸಿನಿಜರ್ನಿಯ ವರದಿ.
ಬಾಲಿವುಡ್ ಬಾದ್ ಷಾ ಅಮಿತಾಬ್ ಆದರೆ, ಸ್ಯಾಂಡಲ್ ವುಡ್ ಬಾದ್ ಷಾ ಕಿಚ್ಚ ಸುದೀಪ್ ಅವರು. ಬಿಟೌನ್ ಕಿಂಗ್ ಖಾನ್ ಶಾರುಖ್, ಸ್ಯಾಂಡಲ್ ಕಿಂಗ್ ಶಿವರಾಜ್ ಕುಮಾರ್, ಬಿಟೌನ್ ಸುಲ್ತಾನ್ ಸಲ್ಮಾನ್, ಸ್ಯಾಂಡಲ್ ವುಡ್ ಸುಲ್ತಾನ್ ದರ್ಶನ್, ಬಾಲಿವುಡ್ ಮಿಸ್ಟರ್ ಪರ್ಫೆಕ್ಟನಿಸ್ಟ್ ಆಮೀರ್, ಸ್ಯಾಂಡಲ್ ಮಿಸ್ಟರ್ ಪರ್ಫೆಕ್ಷನಿಸ್ಟ್ ಪವರ್ ಸ್ಟಾರ್, ಬಿಟೌನ್ ಖಿಲಾಡಿ ಅಕ್ಷಯ್, ಸ್ಯಾಂಡಲ್ ವುಡ್ ಟು ಪ್ಯಾನ್ ಇಂಡಿಯಾ ಕಿಲಾಡಿ ರಾಕಿಂಗ್ ಸ್ಟಾರ್, ಬಾಲಿವುಡ್ ಚಾಕೊಲೇಟ್ ಹೀರೋ ರಣಬೀರ್, ಸ್ಯಾಂಡಲ್ ವುಡ್ ಚಾಕೊಲೇಟ್ ಹೀರೋ ಒನ್ ಅಂಡ್ ಓನ್ಲೀ ಸುಮುಖ ಅಂದರೆ ಬಹುಷಃ ಅತಿಶಯೋಕ್ತಿಯಲ್ಲ.
ಸುಮುಖ
ಸುಮುಖ ಹೆಸರೇ ಹೇಳುವಂತಹ ಸುಂದರವಾದ ಮುಖವುಳ್ಳ ಸುರಸುಂದರಾಂಗ. ಹೆಸರಿಗೆ ತಕ್ಕನಾಗಿರುವ ನಟ. ಥೇಟ್ ರಣಬೀರ್ ಕಪೂರ್ ಥರ ಕಾಣಿಸ್ತಾರೆ. ಬಿಟೌನ್ ಬರ್ಫಿಯಷ್ಟೇ ಹ್ಯಾಂಡ್ಸಮ್ ಆಗಿರುವ ಸುಮುಖ ಕಣ್ಣೋಟದಲ್ಲೇ ಲಾಕ್ ಮಾಡ್ತಾರೆ ಅದಂತೂ ಸತ್ಯ. ನಿಮಗೆ ಡೌಟ್ ಇದ್ರೆ ಒಂದು ಸಲ ಯೂಟ್ಯೂಬ್ ನಲ್ಲಿ ಅಪ್ ಲೋಡ್ ಆಗಿರುವ ‘ ಫಿಸಿಕ್ಸ್ ಟೀಚರ್’ ಟೀಸರ್ ನ ನೋಡಿ ಆಗ ನೀವೇ ಅಚ್ಚರಿಪಡುತ್ತೀರಿ.
ಬಿಟೌನ್ ಚಾಕೊಲೇಟ್ ಹೀರೋ ರಣಬೀರ್ ನ ಹೋಲುವ ನಟ ಸುಮುಖ. ಶಶಿಕುಮಾರ್ ಹಾಗೂ ನಂದಿತ ಯಾದವ್ ಅವರ ಪುತ್ರ. ಅಪ್ಪ- ಅಮ್ಮನಂತೆ ಕಲೆಯ ಸೆಳೆತ. ಬಾಲ್ಯದಿಂದಲೂ ಬಣ್ಣದ ಲೋಕವನ್ನು ನೋಡುತ್ತಾ ಬೆಳೆದ ಸುಮುಖ ಈಗ ಹೊಸ ಸವಾಲೊಂ ದನ್ನು ಸ್ವೀಕರಿಸಿದ್ದಾರೆ. ನಾಯಕನಟ ಪ್ಲಸ್ ನಿರ್ದೇಶಕನಾಗಿ ಗಂಧದಗುಡಿಯ ಅಖಾಡಕ್ಕೆ ಧುಮ್ಕಿದ್ದಾರೆ. ಫಿಸಿಕ್ಸ್ ಟೀಚರ್ ಸಿನಿಮಾದ ಮೂಲಕ ಗಾಂಧಿನಗರದ ಮಂದಿಗೆ ಇನ್ನಷ್ಟು ಚಿರಪರಿಚಿತಗೊಳ್ತಿದ್ದಾರೆ.
ಸುಮುಖರ ತಂದೆ ತಾಯಿ ಬಗ್ಗೆ ಬಹುಷಃ ನಿಮ್ಮೆಲ್ಲರಿಗೂ ತಿಳಿದಿರುತ್ತೆ. ರಂಗಭೂಮಿ- ಕಿರುತೆರೆ- ಬೆಳ್ಳಿತೆರೆಗೆ ಸುಮುಖ ತಂದೆತಾಯಿಯ ಕೊಡುಗೆ ಅಪಾರ. ಕಿರುತೆರೆ ಲೋಕದಲ್ಲಿ ನಿರ್ದೇಶಕಿಯಾಗಿ, ನಿರ್ಮಾಪಕಿಯಾಗಿ ನಂದಿತ ಯಾದವ್ ಸಾಕಷ್ಟು ಹೆಸರು ಮಾಡಿದ್ದಾರೆ. ಶಶಿಕುಮಾರ್ ಸ್ಮಾಲ್ಸ್ಕ್ರೀನ್ ಹಾಗೂ ಬಿಗ್ ಸ್ಕ್ರೀನ್ ನಲ್ಲಿ ತರಹೇವಾರಿ ಪಾತ್ರಗಳಿಗೆ ಜೀವತುಂಬಿ ನಟಿಸಿದ್ದಾರೆ. ಇದೀಗ ಮಗ ಸುಮುಖ ಅವರ ಸರದಿ. ಯಾನ ಚಿತ್ರದಿಂದ ಸಿನಿಜರ್ನಿ ಶುರುಮಾಡಿ ಅಮ್ಮ ನಂದಿತಾ ನಿರ್ದೇಶಿಸಿರುವ ರಾಜಸ್ತಾನ್ ಡೈರೀಸ್ ನಲ್ಲಿ ಆಕ್ಟ್ ಮಾಡಿರುವ ಸುಮುಖ ಈಗ’ ಫಿಸಿಕ್ಸ್ ಟೀಚರ್’ ಹೆಸರಿನ ಸಿನಿಮಾ ನಿರ್ದೇಶನಕ್ಕೆ ಕೈಹಾಕಿದ್ದಾರೆ ಜೊತೆಗೆ ಅಭಿನಯ ಕೂಡ ಮಾಡ್ತಿದ್ದಾರೆ.
ಫಿಸಿಕ್ಸ್ ಟೀಚರ್ ಅಂದಾಕ್ಷಣ ಓಹೋ ಭೌತಶಾಸ್ತ್ರದ ಭೋದನೆನಾ ಅನ್ಕೊಬೇಡಿ, ಸೈನ್ಸ್ ಫಿಕ್ಷನ್ ಸಿನಿಮಾ ಇರ್ಬೋದಾ ಎಂದು ಅಂದಾಜಿಸಬೇಡಿ. ಸುಮುಖ ಆಕ್ಷನ್ ಕಟ್ ಹೇಳಿ ಆಕ್ಟ್ ಮಾಡ್ತಿರುವ ಈ ಫಿಸಿಕ್ಸ್ ಟೀಚರ್ ಸಿನಿಮಾ ಊಹೆಗೆ ಮೀರಿದ್ದಂತೆ. ಫಸ್ಟ್ ಲುಕ್ ನಲ್ಲಿ ಬುಕ್ಸ್ ಹಿಡಿದು ಕುಳಿತಿದ್ದಾರೆ, ಚಿತ್ರದಲ್ಲಿ ಬ್ಯಾಚುಲರ್ ಫಿಸಿಕ್ಸ್ ಟೀಚರ್ ಆಗಿ ಕಾಣಿಸಿಕೊಳ್ತಿದ್ದಾರೆ. ಇವ್ರಿಗೆ ಜೊತೆಯಾಗಿ ಕಾಣಿಸಿಕೊಳ್ತಿರುವ ನಟಿ ಪ್ರೇರಣಾ ಕಂಬಂ ಸೈಕಲಾಜಿ ಟೀಚರ್ ಪಾತ್ರ ಪ್ಲೇ ಮಾಡ್ತಿದ್ದಾರೆ. ಮಂಡ್ಯ, ರಮೇಶ್, ರಾಜೇಶ್ ನಟರಂಗ್ ತಾರಾಬಳಗದಲ್ಲಿದ್ದಾರೆ. ಒಂದು ಹಂತದ ಚಿತ್ರೀಕರಣ ಮುಗಿದಿದೆ, ಇದೇ ಅಕ್ಟೋಬರ್ 07 ರಿಂದ ಮತ್ತೆ ಶೂಟಿಂಗ್ ಶುರುವಾಗಲಿದೆ. ಸದ್ಯ ಟೀಸರ್ ಬಿಡುಗಡೆಯಾಗಿದ್ದು, ಕ್ಯೂರಿಯಾಸಿಟಿ ಹುಟ್ಟಿಸಿದೆ.
ಅಂದ್ಹಾಗೇ, ಹೀರೋ ಸುಮುಖ ಅವರು ಸ್ಟೂಡೆಂಟ್ ಥರ ಇದ್ದಾರೆ. ಆದರೆ, ಸಿನಿಮಾದಲ್ಲಿ ಟೀಚರ್ ಪಾತ್ರ ನಿರ್ವಹಿಸ್ತಿದ್ದಾರೆ. ಕ್ಲೀನ್ ಶೇವ್ ನಲ್ಲಿ ಸುದ್ದಿಗೋಷ್ಟಿಗೆ ಆಗಮಿಸಿದ್ದರು, ಅವರ ಲುಕ್-ಸ್ಟೈಲ್- ಸ್ಮೈಲ್ -ಫಿಸಿಕ್ -ಟಾಕು ಎಲ್ಲವೂ ರಣಬೀರ್ ಕಪೂರ್ ಅವರನ್ನು ಹೋಲುವಂತಿತ್ತು. ಕಣ್ಣೋಟದಲ್ಲಿ ರಣಬೀರ್ ಛಾಯೆ ಎದ್ದು ಕಾಣ್ತಿತ್ತು. ಈ ಬಗ್ಗೆ ಸಿನಿಲಹರಿ ಟೀಮ್ ಮಾತನಾಡಿಸಿದಾಗ ಸುಮುಖ ಹೇಳಿದ್ದಿಷ್ಟು ನೋಡಿ.
ನಾನು ರಣಬೀರ್ ಕಪೂರ್ ಥರ ಕಾಣ್ತೀನಿ ಅಂತ ಹೇಳಿದ್ದಕ್ಕೆ ಥ್ಯಾಂಕ್ಸ್. ನಾನು ರಣಬೀರ್ ಕಪೂರ್ ನ ಫಾಲೋ ಮಾಡಲ್ಲ. ಆದರೆ, ಅವರ ಸಿನಿಮಾಗಳಿಗೆ ಬಿಗ್ ಫ್ಯಾನ್ ನಾನು. ಬರೀ ರೊಮ್ಯಾಂಟಿಕ್ ಹೀರೋ ಕ್ಯಾರೆಕ್ಟರ್ ಗೆ ಸ್ಟಿಕ್ ಆನ್ ಆಗಿಲ್ಲ. ಬದಲಾಗಿ ಚಾಲೆಂಜಿಂಗ್ ಪಾತ್ರಗಳನ್ನೂ ಮಾಡಿದ್ದಾರೆ. ಅವರ ಒಂದೊಂದು ಸಿನಿಮಾದ ಪಾತ್ರ ಕೂಡ ಪ್ರೇಕ್ಷಕರ ಮನಮುಟ್ಟುತ್ತದೆ. ಹೀಗಾಗಿ ರಣಬೀರ್ ಕಪೂರ್ ನನಗೆ ಇಷ್ಟವಾಗ್ತಾರೆ. ಅಷ್ಟಕ್ಕೂ ಸ್ಯಾಂಡಲ್ ವುಡ್ ರಣಬೀರ್ ಕಪೂರ್ ಅಂತ ಟ್ಯಾಗ್ ಮಾಡಿಕೊಳ್ಳಲಿಕ್ಕೆ ಇಷ್ಟವಿಲ್ಲ ನಾನೇ ಸ್ವಂತ ಬ್ರ್ಯಾಂಡ್ ಆಗ್ತೀನಿ ಅಂತ ಹೆಮ್ಮೆಯಿಂದ ಹೇಳಿಕೊಂಡರು ಸುಮುಖ.
ತಂದೆ ಶಶಿಕುಮಾರ್ ಜತೆಗೆ ಸುಮುಖ
ಫಿಸಿಕ್ಸ್ ಟೀಚರ್ ಸುಮುಖ ಅವರೇ ಹೇಳಿಕೊಂಡಂತೆ ಯಾರ ಐಡೆಂಟಿಟಿಗೂ ನಾವು ಸ್ಟಿಕ್ ಆನ್ ಆಗದೇ ಇರೋದು ಬೆಸ್ಟು. ಅಖಾಡಕ್ಕೆ ಇಳಿದಾಗ ಓನ್ ಬ್ರ್ಯಾಂಡ್ ಆಗಬೇಕು. ಅದೇ ದಾರಿಯಲ್ಲಿ ಯುವ ನಟ ಸುಮುಖ ನಡೆಯುತ್ತಿದ್ದಾರೆ. ಎನಿವೇ, ಕನ್ನಡ ಚಿತ್ರರಂಗಕ್ಕೆ ಚಾಕೊಲೇಟ್ ಹೀರೋ ಸಿಕ್ಕಂತಾಯ್ತು. ಜೊತೆಗೆ ಯೂನಿಕ್ ಟ್ಯಾಲೆಂಟ್ ಇರೋ ಮತ್ತೊಬ್ಬ ಪ್ರತಿಭೆ ಗಂಧದಗುಡಿಗೆ ಆಗಮನವಾಯ್ತು ಅದರಲ್ಲಿ ಎರಡು ಮಾತಿಲ್ಲ ಎನ್ನುವುದಕ್ಕಿಂತ ಸಿನಿಮಾ ಮೇಲಿರುವ ಪ್ರೀತಿ ಭಕ್ತಿ ಶ್ರದ್ಧೆ ಜೊತೆಗೆ ಕಲಾಲೋಕಕ್ಕೆ ವಿಶಿಷ್ಟವಾದ ಕೊಡುಗೆ ನೀಡಲು ಹಾತೊರೆಯುತ್ತಿರುವ ಸುಮುಖ ಅವರ ಮನವೇ ಸಾಕ್ಷಿ.
ಗಾಂಧಿ ಜಯಂತಿಗೆ’ ಗುರು ಶಿಷ್ಯರು’ ಚಿತ್ರ ತಂಡ ಸ್ಪೆಷಲ್ ಸಂಗತಿಯೊಂದನ್ನು ರಿವೀಲ್ ಮಾಡಿದೆ. ಕನ್ನಡದ ಹೆಸರಾಂತ ನಟ, ನಿರ್ದೇಶಕ, ಪರಿಸರವಾದಿ ಸುರೇಶ್ ಹೆಬ್ಳೀಕರ್ ಅವರು ‘ ಗುರು ಶಿಷ್ಯರು’ ಚಿತ್ರದಲ್ಲಿ ನಿರ್ವಹಿಸಿದ ಪಾತ್ರದ ಸ್ಪೆಷಲ್ ಲುಕ್ ಅನ್ನು ರಿವೀಲ್ ಮಾಡಿದೆ. ಗಾಂಧಿ ವೇಷದಲ್ಲಿ ಕಾಣಿಸಿಕೊಂಡಿರುವ ನಟ ಸುರೇಶ್ ಹೆಬ್ಬೀಕರ್ ಅವರದ್ದು ಇಲ್ಲಿ ವಿಶೇಷ ಪಾತ್ರ. ಚಿತ್ರ ತಂಡ ಹೇಳುವ ಪ್ರಕಾರ, ಅದು ಗಾಂಧಿ ತತ್ವ ಪರಿಪಾಲಿಸುವ ಪಾತ್ರ ಎನ್ನುವುದು ವಿಶೇಷ. ಗಾಂಧಿ ಜಯಂತಿ ಸಂದರ್ಭದಲ್ಲಿ ಆ ಪಾತ್ರದ ಕುರಿತು ಚಿತ್ರ ತಂಡ ತನ್ನ ಅನಿಸಿಕೆ ಹಂಚಿಕೊಂಡಿದೆ.
ಮಹಾತ್ಮ ಗಾಂಧಿಯ ಬದುಕಿಗೂ ಮತ್ತು ಸುರೇಶ್ ಹೆಬ್ಳೀಕರ್ ಅವರು ನಿರ್ವಹಿಸುತ್ತಿರುವ ಪಾತ್ರಕ್ಕೂ ಸಾಕಷ್ಟು ಹೋಲಿಕೆಗಳಿವೆ. ಅಲ್ಲದೇ, ಗಾಂಧಿ ಬದುಕನ್ನೇ ಆದರ್ಶವಾಗಿ ತಗೆದುಕೊಂಡು ಬದುಕುವ ಪಾತ್ರ ಕೂಡ ಅದಾಗಿದೆ. ಗಾಂದಿಯ ಮೌಲ್ಯ, ಜೀವನ, ಸಾಧನೆಯನ್ನು ಈ ಪಾತ್ರದ ಮೂಲಕ ಸಮೀಕರಿಸಬಹುದಾಗಿದೆ. ಈ ಪಾತ್ರದ ಕುರಿತು ಗುರು ಶಿಷ್ಯರು ಸಿನಿಮಾದ ಕ್ರಿಯೇಟಿವ್ ಹೆಡ್ ಮತ್ತು ಕೋ ಪ್ರೊಡ್ಯುಸರ್ ತರುಣ್ ಕಿಶೋರ್ ಹೇಳುವುದು ಹೀಗೆ ” ನಮ್ಮ ಈ ಸಿನಿಮಾದಲ್ಲಿ ಸುರೇಶ್ ಹೆಬ್ಳೀಕರ್ ಅವರು ಗಾಂಧಿ ತತ್ವವನ್ನು ಪಾಲಿಸುವ ವ್ಯಕ್ತಿಯಾಗಿ ಮತ್ತು ಹಳ್ಳಿಯೊಂದರಲ್ಲಿ ಶಾಲೆ ನಡೆಸುವ ಅಪ್ಪಟ ಗಾಂಧಿವಾದಿಯಾಗಿ ನಟಿಸುತ್ತಿದ್ದಾರೆ. ಪಾತ್ರ ಮತ್ತು ಸಿನಿಮಾದ ಬಗೆಗಿರುವ ಅವರ ಪ್ರೀತಿ ಎಂದಿಗೂ ಮಾದರಿ. ಪರಿಸರ ಹೋರಾಟಗಾರರಾಗಿ, ರಾಷ್ಟ್ರ ಪ್ರಶಸ್ತಿ ಪುರಸ್ಕೃತರಾಗಿ ನಮ್ಮೊಂದಿಗೆ ಅವರು ಬೆರೆತ ರೀತಿ ಹೆಮ್ಮೆ ಮೂಡಿಸುವಂಥದ್ದು. ಸಾಮಾನ್ಯವಾಗಿ ವ್ಯಾಪಾರಿ ಗುಣದ ಚಿತ್ರಗಳಲ್ಲಿ ಕಾಣಿಸಿಕೊಳ್ಳದ ಇವರು, ಇದೇ ಮೊದಲ ಬಾರಿಗೆ ನಮ್ಮ ಸಿನಿಮಾದಲ್ಲಿ ನಟಿಸಿದ್ದು ಖುಷಿ ತಂದಿದೆ”.
ಜಂಟಲ್ ಮನ್ ಖ್ಯಾತಿಯ ನಿರ್ದೇಶಕ ಜಡೇಶ್ ಕೆ ಹಂಪಿ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದು ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಸುಧಾಕರ್ ಶೆಟ್ಟಿ ಅವರ ಸಿನಿಮಾಟೋಗ್ರಫಿ ಚಿತ್ರಕ್ಕಿದೆ. ನಟ ಶರಣ್ ಅವರ ಲಡ್ಡು ಸಿನಿಮಾಸ್ ಮತ್ತು ತರುಣ್ ಕಿಶೋರ್ ಅವರ ಕ್ರಿಯೇಟಿವಿಸ್ ಬ್ಯಾನರ್ ನಲ್ಲಿ ಗುರು ಶಿಷ್ಯರು ಚಿತ್ರ ತಯಾರಾಗಿದೆ. ಈಗಾಗಲೇ ಶೇಕಡಾ ಎಂಬತ್ತರಷ್ಟು ಸಿನಿಮಾದ ಶೂಟಿಂಗ್ ಮುಗಿದಿದ್ದು, ಕೊನೆಯ ಹಂತದ ಚಿತ್ರೀಕರಣಕ್ಕಾಗಿ ಬೆಂಗಳೂರಿನಲ್ಲಿ ಸಿದ್ದತೆ ನಡೆದಿದೆ. ಎಂದಿನಂತೆ ಮಾಧ್ಯಮದ ಮಿತ್ರರ ಸಹಕಾರವನ್ನು ಕೋರುತ್ತೇವೆ. ಈ ಸಿನಿಮಾದಲ್ಲಿ ಶರಣ್ ನಾಯಕನಾಗಿ ನಟಿಸಿದ್ದು, ಇಲ್ಲಿ ಅವರು ಪಿಟಿ ಮಾಸ್ಟರ್ ಪಾತ್ರ ಮಾಡಿದ್ದಾರೆ. ನಿಶ್ವಿಕಾ ನಾಯಕಿ. ಹಿರಿಯ ನಟ ದತ್ತಣ್ಣ ಸೇರಿದಂತೆ ಹೆಸರಾಂತ ಕಲಾವಿದರು ನಟಿಸಿದ್ದಾರೆ.
ಪುಟ್ಟಗೌರಿ ಮದುವೆ ಸೀರಿಯಲ್ ಖ್ಯಾತಿಯ ಜನಪ್ರಿಯ ನಟಿ, ನಿರ್ದೇಶಕಿ ರಂಜನಿ ರಾಘವನ್ ಈಗ ಕತೆಗಾರ್ತಿ ಆಗಿ ಬಡ್ತಿ ಪಡೆದಿದ್ದಾರೆ. ಆ ಮೂಲಕ ಲೇಖಕಿ ಆಗಿ ಬಣ್ಣದ ಜಗತ್ತಿನಿಂದ ಸಾಹಿತ್ಯಕ್ಕೆ ಕ್ಷೇತ್ರಕ್ಕೂ ಪ್ರವೇಶ ಮಾಡಿದ್ದಾರೆ. ಹೆಸರಾಂತ ಪತ್ರಕರ್ತ ಜಿ.ಎನ್. ಮೋಹನ್ ಅವರ “ಅವದಿ’ ವೆಬ್ ಪತ್ರಿಕೆಯಲ್ಲಿ ನಟಿ ರಂಜನಿ ರಾಘವನ್ ಇದುವರೆಗೂ ಬರೆದ ಅವರ ಕಥೆಗಳ ಸಂಗ್ರಹ ಈಗ ‘ಕತೆ ಡಬ್ಬಿ’ರೂಪದಲ್ಲಿ ಹೊರ ಬಂದಿದೆ. ಬಹುರೂಪಿ ಪ್ರಕಾಶನ ಈ ಕೃತಿಯನ್ನು ಹೊರ ತಂದಿದೆ. ಇತ್ತೀಚೆಗಷ್ಟೇ ‘ಕತೆ ಡಬ್ಬಿ’ ಕೃತಿ ಬಿಡುಗಡೆ ಆಗಿದೆ.
ನಟನೆಯಲ್ಲಿಯೇ ಬ್ಯುಸಿ ಆಗಿದ್ದ ನಟಿ ರಂಜಿನಿ ರಾಘವನ್, ಕಲರ್ಸ್ ಕನ್ನಡದಲ್ಲಿ ಪ್ರಸಾರವಾದ ‘ಇಷ್ಟದೇವತೆ’ ಧಾರಾವಾಹಿಗೆ ಕಥೆ, ಚಿತ್ರಕಥೆ ಬರೆಯುವ ಮೂಲಕ ಬರಹಗಾರ್ತಿಯೂ ಆಗಿದ್ದರು. ಅಲ್ಲಿಂದ ಬರವಣಿಗೆಯ ಪಯಣದಲ್ಲೀಗ ಕಥಾ ಸಂಕಲನ ಹೊರ ತಂದು ಲೇಖಕಿಯೂ ಆಗಿದ್ದಾರೆ. ಇಷ್ಟಕ್ಕೂ ಕುತೂಹಲ ಇರೋದು ಅವರಲ್ಲಿ ಬರವಣಿಗೆಯ ಕಲೆ ಸಿದ್ದಿಸಿದ್ದು ಹೇಗೆ ಅಂತ.’ನಂಗೆ ಮೊದಲಿನಿಂದಲೂ ಓದುವುದರಲ್ಲಿ ಹೆಚ್ಚು ಆಸಕ್ತಿ. ಓದಿನ ದಿನಗಳಲ್ಲಿಯೇ ಸಾಹಿತ್ಯದ ಪುಸ್ತಕಗಳನ್ನು ಹೆಚ್ಚಾಗಿ ಓದುತ್ತಾ ಬರುತ್ತಿದೆ. ಹಾಗಾಗಿಯೇ ಬರವಣಿಗೆಯ ಬಗ್ಗೆಯೂ ಆಸಕ್ತಿ ಮೂಡಿತ್ತು. ಆದರೆ ಮುಂದೆ ನಟನೆಯಲ್ಲಿ ಬ್ಯುಸಿ ಆದೆ. ಅಲ್ಲಿಯೇ ಹೆಚ್ಚು ಗಮನ ಹರಿಸಿದೆ. ಆದರೆ ಇಷ್ಟ ದೇವತೆ ಧಾರಾವಾಹಿಗೆ ನಾನೇ ಕಥೆ, ಚಿತ್ರಕಥೆ ಬರೆಯೋ ಅವಕಾಶ ಸಿಕ್ಕಿತು. ಅಲ್ಲಿಂದ ಬರವಣಿಗೆ ಶುರು ಮಾಡಿದೆ. ನಾನು ಬರೆದಿದ್ದಕ್ಕೆ ದೊಡ್ಡ ವೇದಿಕೆ ಆಗಿದ್ದ ಅವದಿ ವೆಬ್ ಪತ್ರಿಕೆ. ʻಅವಧಿʼ ವೆಬ್ ಪತ್ರಿಕೆಯಲ್ಲಿ ವಾರಕ್ಕೊಮ್ಮೆ ಕತೆಗಳನ್ನು ಬರೆದೆ. ಅದಕ್ಕೆ ಬಂದ ಪ್ರತಿಕ್ರಿಯೆಗಳು ನನಗೆ ಉತ್ಸಾಹ ತುಂಬಿತು ಅದೇ ಕಾರಣವಾಗಿ ‘ಕತೆ ಡಬ್ಬಿ’ ಪುಸ್ತಕವಾಗಿ ರೂಪುಗೊಂಡಿತು. ಪುಸ್ತಕ ಬರೆಯುವ ಕನಸೊಂದು ನನ್ನ ಮನಸಿನ ಮೂಲೆಯಲ್ಲಿ ಕುಳಿತಿತ್ತು. ಅದೀಗ ಕತೆ ಡಬ್ಬಿ ಮೂಲಕ ಇದು ಸಾಕಾರಗೊಂಡಿದೆ. ಮೊದಲ ಪುಸ್ತಕವಾಗಿದ್ದರಿಂದ ತುಂಬಾ ಸಂಭ್ರಮದಲ್ಲಿರುವೆ.ಮುಂದೆ ಕಾದಂಬರಿಯನ್ನು ಬರೆಯುವ ಹಸಿವು ಇದೆ ಎನ್ನುವ ಮಾತುಗಳನ್ನು ನಟಿ ರಂಜಿನಿ ರಾಘವನ್ ಕಥಾ ಸಂಕಲನ ʻಕತೆ ಡಬ್ಬಿʼ ಬಿಡುಗಡೆ ಸಮಾರಂಭದಲ್ಲಿ ಹಂಚಿಕೊಂಡರು.
ಹಿರಿಯ ಪತ್ರಕರ್ತ, ಲೇಖಕ ಜೋಗಿ ಕೃತಿ ಬಿಡುಗಡೆ ಮಾಡಿದರು. ಆನಂತರ ಅವರು ಮಾತನಾಡುತ್ತಾ, ಕತೆ ಹೇಳುವ ಶೈಲಿ ಮತ್ತು ವಯಸ್ಸನ್ನು ಮೀರಿ ಆಲೋಚನೆ, ಸೊಗಸಾದ ತಂತ್ರಗಾರಿಕೆಯ ಬಳಕೆ ಮತ್ತು ಇಂದಿನ ಕಾಲದ ಭಾಷೆಯನ್ನು ಹಿಡಿದಿಡುವ ನೈಜತೆ ʻಕನ್ನಡತಿʼ ರಂಜನಿ ರಾಘವನ್ ಅವರ ಕಥೆಗಳ ಹೆಚ್ಚುಗಾರಿಕೆ ಎಂದರು.ಮನುಷ್ಯನ ಪಿಪಾಸುತನ ಮತ್ತು ದಾಹವನ್ನು ಹಿಡಿದಿಟ್ಟಿದ್ದಾರೆ. ಗಾಢವಾಗಿರುವ ಕತೆಗಳನ್ನು ಕಟ್ಟಿಕೊಟ್ಟಿದ್ದಾರೆ. ಬದುಕನ್ನು ಸುಂದರಗೊಳಿಸುವ ಮತ್ತು ಕತೆಯಲ್ಲಿ ಬರುವ ಸೂಕ್ಷ್ಮಗಳನ್ನು ಬಹುವಾಗಿ ಹಿಡಿದಿದ್ದಾರೆ ಎಂದು ಶ್ಲಾಘಿಸಿದರು.
ಚಿತ್ರ ನಿರ್ದೇಶಕ ಜಯತೀರ್ಥ ಕೃತಿ ಬಿಡುಗಡೆಗೆ ಅತಿಥಿಯಾಗಿದ್ದರು. ‘ ಸಂಪ್ರದಾಯದ ಹೊರೆ ಕಳಚಿ ಸತ್ಯಕ್ಕೆ ಹತ್ತಿರವಾಗುವ ಪ್ರಾಮಾಣಿಕ ಪ್ರಯತ್ನಪಟ್ಟಿದ್ದಾರೆ’ ಎಂದರು. ಹಾಗೆಯೇ ಚಿತ್ರ ನಟ ಋಷಿ ಅತಿಥಿಯಾಗಿ ಬಂದಿದ್ದರು.’ಬಹುರೂಪಿ’ ಯ ಜಿ ಎನ್ ಮೋಹನ್, ಬಹುರೂಪಿ ಬುಕ್ ಹಬ್ ನಿರ್ದೇಶಕರಾದ ಶ್ರೀಜಾ ವಿ ಎನ್, ಧೀರಜ್ ಹನುಮೇಶ್ ಉಪಸ್ಥಿತರಿದ್ದರು.
ವಿಆರ್ ಎಲ್ ಸಂಸ್ಥೆಯ ಮಾಲೀಕ ವಿಜಯ ಸಂಕೇಶ್ವರ ಅವರ ಬಯೋಫಿಕ್ ವಿಜಯಾನಂದ ಚಿತ್ರ ಸೆಟ್ಟೇರಲು ರೆಡಿ ಆಗಿದೆ. ಅಕ್ಟೋಬರ್ ೨೪ಕ್ಕೆ ಗ್ರಾಂಡ್ ಮುಹೂರ್ತಕ್ಕೆ ದಿನ ಫಿಕ್ಸ್ ಆಗಿದೆ. ಅಲ್ಲಿಂದ ಶೂಟಿಂಗ್ ಸ್ಟಾರ್ಟ್ ಆಗ್ತಿದೆ.
ಯುವ ನಿರ್ದೇಶಕಿ ರಿಷಿಕಾ ಶರ್ಮಾ ನಿರ್ದೇಶನದ ಬಹುನಿರೀಕ್ಷಿತ ಚಿತ್ರ ʼವಿಜಯಾನಂದʼ ಸೆಟ್ಟೇರಲು ಸಜ್ಜಾಗಿದೆ. ಎಲ್ಲವೂ ಅಂದುಕೊಂ ಡಂತೆಯೇ ಆಗಿದ್ದರೆ ಚಿತ್ರಕ್ಕೆ ಸೆಪ್ಟೆಂಬರ್ ಕೊನೆ ವಾರದಲ್ಲಿಯೇ ಮುಹೂರ್ತ ಮುಗಿದು ಹಳೇ ಮಾತೇ ಆಗುತ್ತಿತ್ತೇನೋ, ಆದರೆ ತಾಂತ್ರಿಕ ಕಾರಣದಿಂದ ಮುಹೂರ್ತದ ದಿನಾಂಕ ಪೋಸ್ಟ್ ಪೋನ್ಡ್ ಆಯಿತು. ಈಗ ಅಕ್ಟೋಬರ್ ೨೪ಕ್ಕೆ ಗ್ರಾಂಡ್ ಮುಹೂರ್ತಕ್ಕೆ ದಿನ ಫಿಕ್ಸ್ ಆಗಿದೆ. ಸದ್ಯಕ್ಕೆ ಚಿತ್ರ ತಂಡ ಅದೇ ಕೆಲಸದಲ್ಲಿ ಬ್ಯುಸಿ ಆಗಿದೆ. ಈ ನಡುವೆ ಪ್ರೀ ಪ್ರೊಡಕ್ಷನ್ ಕೆಲಸಗಳಲ್ಲಿಯೇ ತೊಡಗಿಸಿಕೊಂಡಿರುವ ಚಿತ್ರ ತಂಡ, ಕಳೆದ ನಾಲ್ಕೈದು ದಿನಗಳ ಹಿಂದಷ್ಟೇ ಹುಬ್ಬಳ್ಳಿಯಲ್ಲಿ ದೊಡ್ಡದೊಂದು ಆಡಿಷನ್ಸ್ ಶೋ ಮುಗಿಸಿಕೊಂಡು ಬಂದಿದೆ. ಚಿತ್ರತಂಡ ಹೇಳುವ ಮಟ್ಟಿಗೆ ಅದೊಂದು ದಾಖಲೆಯ ಆಡಿಷನ್ಸ್ ಶೋ. ಆಡಿಷನ್ಸ್ ಗೆ ಬಂದ ಕಲಾವಿದರ ಸಂಖ್ಯೆಯೇ ಅದಕ್ಕೆ ಸಾಕ್ಷಿಯಂತೆ.
ಹೌದು, ಹುಬ್ಬಳ್ಳಿಯ ಸವಾಯಿ ಗಂಧರ್ವ ಕಲಾಮಂದಿರಕ್ಕೆ ಆ ದಿನ ಕಲಾವಿದರ ದಂಡೇ ಆಗಮಿಸಿತ್ತು. ನೋಡಿದವರಿಗೆಲ್ಲ ಅಲ್ಲೆನೋ ರಾಜಕೀಯ ಸಮಾವೇಶವೇ ಜರುಗಿದೆ ಅಂತಲೇ ಅನಿಸುವಂತಿತ್ತು ಆಡಿಷನ್ಸ್ ಶೋ. ನೂರಿನ್ನೂರು ಅಲ್ಲ, ಅಲ್ಲಿಗೆ ಬಂದವರ ಸಂಖ್ಯೆ ಕನಿಷ್ಠ ೫ ಸಾವಿರಕ್ಕೂ ಹೆಚ್ಚಿತ್ತು. ಅಷ್ಟು ಕಲಾವಿದರಿಗೂ ಆಡಿಷನ್ಸ್ ಅವಕಾಶ ಕೊಟ್ಟ ಚಿತ್ರ ತಂಡ, ಚಿತ್ರದ ಪಾತ್ರಗಳಿಗೆ ಸೂಕ್ತವಾಗುವ ೪೦ ಕ್ಕೂ ಹೆಚ್ಚು ಕಲಾವಿದರನ್ನು ಆಯ್ಕೆ ಮಾಡಿಕೊಂಡು ಬಂದಿದೆ. ಅಂದ ಹಾಗೆ ʼವಿಜಯಾನಂದʼ ಚಿತ್ರವು ವಿಆರ್ ಎಲ್ ಸಂಸ್ಥೆಯ ಮಾಲೀಕ, ನಾಡಿನ ಉದ್ಯಮಿ ವಿಜಯ ಸಂಕೇಶ್ವರ ಅವರ ಬಯೋಫಿಕ್. ಅದೇ ಕಾರಣಕ್ಕೆ ಹುಬ್ಬಳ್ಳಿಯ ಆಡಿಷನ್ಸ್ ಜಾತ್ರೆಯಂತೆ ನಡೆಯಿತು ಅನ್ನೋದು ಚಿತ್ರ ತಂಡದ ಮಾತು ಕೂಡ.
ʼಚಿತ್ರದ ಮುಖ್ಯ ಪಾತ್ರಗಳನ್ನು ಹೊರತು ಪಡಿಸಿ, ಒಂದಷ್ಟು ಸಹ ಕಲಾವಿದರು ಚಿತ್ರಕ್ಕೆ ಬೇಕಿದೆ. ಅವರೆಲ್ಲ ಉತ್ತರ ಕರ್ನಾಟಕದ ಭಾಷೆ ಬಲ್ಲವರೇ ಆಗಬೇಕಿದೆ. ಅದೇ ಕಾರಣಕ್ಕೆ ನಾವು ಒಂದು ದಿನ ಕಾಲ ಹುಬ್ಬಳ್ಳಿಯಲ್ಲಿ ಆಡಿಷನ್ಸ್ ಆಯೋಜಿಸಿದ್ದೇವು. ಇದನ್ನು ಮೊದಲೇ ಅನೌನ್ಸ್ ಮಾಡಿದ್ದೆವು. ಅದೇ ಕಾರಣಕ್ಕೆ ಇರಬೇಕು, ಆಡಿಷನ್ಸ್ ಗೆ ನಾವು ನಿರೀಕ್ಷೆ ಮಾಡಿದ್ದಕ್ಕಿಂತ ಮೂರು ಪಟ್ಟು ಕಲಾವಿದರು ಆಗಮಿಸಿದ್ದರು. ರಾಜ್ಯದ ವಿವಿಧ ಜಿಲ್ಲೆಗಳಿಂದ ಮಾತ್ರವಲ್ಲದೆ ಗೋವಾ, ಮುಂಬೈನಿಂದಲೂ ಒಂದಷ್ಟು ಕಲಾವಿದರು ಬಂದಿದ್ದರು. ಬಂದವರ ಸಂಖ್ಯೆ ಹೆಚ್ಚಿದೆ ಅಂತ ಯಾವರನ್ನು ಯಾರನ್ನು ವಾಪಸ್ ಕಳುಹಿಸಿಲ್ಲ. ಆಡಿಷನ್ಸ್ ಗೆ ನಾವು ನಾಲ್ಕು ತಂಡಗಳಲ್ಲಿ ಸಿದ್ದತೆ ಮಾಡಿಕೊಂಡಿದ್ದೆವು. ಅಂದು ಅಲ್ಲಿಗೆ ಬಂದವರೆನ್ನೆಲ್ಲ ಆಡಿಷನ್ಸ್ ಅವಕಾಶ ಕೊಟ್ಟು, ನಮ್ಮ ಚಿತ್ರದ ಪಾತ್ರಗಳಿಗೆ ಬೇಕಿದ್ದ ಕಲಾವಿದರನ್ನೇ ಆಯ್ಕೆ ಮಾಡಿಕೊಂಡಿದ್ದೇವೆʼ ಎನ್ನುತ್ತಾರೆ ನಿರ್ದೇಶಕಿ ರಿಷಿಕಾ ಶರ್ಮಾ.
ಅಂದ ಹಾಗೆ, ‘ವಿಜಯಾನಂದ’ ಚಿತ್ರ ಕನ್ನಡದ ಮಟ್ಟಿಗೆ ಒಂದು ವಿಶೇಷ ಚಿತ್ರವಾಗುವುದಂತೂ ಹೌದು. ಒಂದು ಲಾರಿಯಿಂದ ಇವತ್ತು ಸಾವಿರಾರು ಬಸ್ಸು ಹಾಗೂ ಲಾರಿಗಳನ್ನು ಹೊಂದಿದ್ದು ಮಾತ್ರವಲ್ಲ ದೊಡ್ಡ ಉದ್ಯಮಿಯಾಗಿ ಹೊರ ಹೊಮ್ಮಿರುವ ವಿಜಯ ಸಂಕೇಶ್ವರ ಅವರ ಬಯೋಪಿಕ್ ಎನ್ನುವುದು ಅದಕ್ಕೆ ಕಾರಣ. ದೊಡ್ಡ ಸಾಧನೆಯ ಮೂಲಕವೇ ಕನ್ನಡಿಗರ ಮನೆ ಮಾತನಾದ ವಿಜಯ ಸಂಕೇಶ್ವರ ಅವರ ಸಾಹಸದ ಬದುಕು ಈಗ ತೆರೆ ಮೇರೆ ಬರುತ್ತಿದೆಅಂದರೆ ಕೂತೂಹಲ ಇಲ್ಲದೆ ಇರುತ್ತಾ? ಹುಬ್ಬಳ್ಳಿ ಸೇರಿ ಈಗ ಉತ್ತರ ಕರ್ನಾಟಕದಲ್ಲಿ ದೊಡ್ಡ ಹವಾ ಶುರುವಾಗಿದೆ.
ಆಡಿಷನ್ಸ್ ನಲ್ಲಿ ಚಿತ್ರತಂಡದೊಂದಿಗೆ ನಿರ್ಮಾಪಕರೂ ಆದ ವಿಆರ್ ಎಲ್ ಸಂಸ್ಥೆಯ ಎಂಡಿ ಆನಂದ್ ಸಂಕೇಶ್ವರ್
ಅಂದ ಹಾಗೆ, ವಿಜಯ ಸಂಕೇಶ್ವರ ಅವರ ಪಾತ್ರದಲ್ಲಿ ಭರವಸೆಯ ಯುವ ನಟ ನಿಹಾಲ್ ರಜಪೂತ್ ಕಾರಣಿಸಿಕೊಳ್ಳುತ್ತಿದ್ದಾರೆ. ಹಿರಿಯ ನಟ ಅನಂತನಾಗ್ ಕೂಡ ಚಿತ್ರದಲ್ಲಿದ್ದಾರೆ. ಉಳಿದಂತೆ ದೊಡ್ಡ ತಾರಾಗಣವೇ ಚಿತ್ರದಲ್ಲಿದೆ. ಅದೆಲ್ಲವೂ ಇಷ್ಟರಲ್ಲಿಯೇ ರಿವೀಲ್ ಆಗಲಿದೆಯಂತೆ. ಆಡಿಷನ್ಸ್ ನಲ್ಲಿ ವಿಆರ್ಎಲ್ ಸಂಸ್ಥೆಯ ಎಂಡಿ ಆನಂದ್ ಸಂಕೇಶ್ವರ್ ಕೂಡ ಭಾಗವಹಿಸಿದ್ದರು.
ಸರ್ಕಾರ ಚಿತ್ರಮಂದಿರಗಳಲ್ಲಿ ನೂರರಷ್ಟು ಭರ್ತಿಗೆ ಅವಕಾಶ ನೀಡಿರುವ ಹಿನ್ನೆಲೆಯಲ್ಲಿ, ಅಕ್ಟೋಬರ್ 14 ರಿಂದ ಸ್ಟಾರ್ ನಟರ ಚಿತ್ರಗಳು ಬಿಡುಗಡೆಯಾಗುತ್ತಿವೆ.
ಕರ್ನಾಟಕದಲ್ಲಿ ಪೈರಸಿ ಹೆಚ್ಚಾಗುವ ಸೂಚನೆಯಿದ್ದು, ಅದನ್ನು ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳುವಂತೆ ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷರಾದ ಡಿ.ಕೆ.ರಾಮಕೃಷ್ಣ ಅವರ ನೇತೃತ್ವದಲ್ಲಿ ಪೊಲೀಸ್ ಮುಖ್ಯಸ್ಥರನ್ನು ಭೇಟಿ ಮಾಡಲಾಗಿದೆ.
ಈ ವೇಳೆ ನಿರ್ಮಾಪಕರಾದ ಕೆ.ಮಂಜು, ಜಯಣ್ಣ, ಗಣೇಶ್, ರಮೇಶ್ ಯಾದವ್, ಕೆ.ಪಿ.ಶ್ರೀಕಾಂತ್ ಮುಂತಾದ ನಿರ್ಮಾಪಕರು ಪೊಲೀಸ್ ಕಮೀಷನರ್ ಕಮಲ್ ಪಂತ್ ಹಾಗೂ ಸೈಬರ್ ಕ್ರೈಮ್ ಮುಖ್ಯಸ್ಥರಾದ ಸಂದೀಪ್ ಪಾಟೀಲ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
ಸೌರವ್ ಲೋಕಿ ‘ಭಜರಂಗಿ ಲೋಕಿ’ ಅಂತಲೇ ಬ್ರಾಂಡ್ ಆದವರು. ಅಷ್ಟು ಮಾತ್ರವಲ್ಲ, ಕನ್ನಡಕ್ಕೊಬ್ಬ ಖಡಕ್ ಖಳನಟ ಸಿಕ್ಕಿದ್ದು ಕೂಡ ಭಜರಂಗಿ ಮೂಲಕವೇ. ಭಜರಂಗಿ ಚಿತ್ರ ಕೊಟ್ಟ ತಾರಾ ವರ್ಚಸ್ಸು ಅವರಿಗೆ ಮತ್ತಾವುದೇ ಚಿತ್ರ ತಂದು ಕೊಟ್ಟಿಲ್ಲ. ಮತ್ತೆ ‘ ಭಜರಂಗಿ 2 ‘ ಮೂಲಕ ವಿಶಿಷ್ಟವಾದ ಲುಕ್ಕು, ಖಡಕ್ ಪಾತ್ರದೊಂದಿಗೆ ಬೆಳ್ಳಿತೆರೆ ಮೇಲೆ ಬರಲು ರೆಡಿಯಾಗಿದ್ದಾರೆ. ಆ ಪಾತ್ರದ ಒಂದು ಲುಕ್ಕು ಇದು
ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅಭಿನಯದ ಬಹು ನಿರೀಕ್ಷಿತ ಚಿತ್ರ ‘ ಭಜರಂಗಿ 2 ‘ ಅಭಿಮಾನಿಗಳಲ್ಲಿ ದಿನೇ ದಿನೇ ಕುತೂಹಲ ಹುಟ್ಟಿಸುತ್ತಿದೆ. ಈಗಾಗಲೇ ಚಿತ್ರ ತಂಡ ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಮಾಡಿದೆ. ಚಿತ್ರದ ಬಗ್ಗೆ ಸಿನಿಮಾ ಪ್ರೇಕ್ಷಕರಲ್ಲಿ ದೊಡ್ಡ ಕ್ರೇಜ್ ಹುಟ್ಟು ಹಾಕಲು ಮುಂದಾಗಿರುವ ಚಿತ್ರ ತಂಡ, ಈಗ ಒಂದು ಪಾತ್ರದ ಫಸ್ಟ್ ಲುಕ್ ರಿವೀಲ್ ಮಾಡಿದೆ. ಈಗಾಗಲೇ ಟೀಸರ್ ನಲ್ಲಿ ಆ ಪಾತ್ರದ ಲುಕ್ ಕಾಣಿಸಿಕೊಂಡರೂ, ಆ ಪಾತ್ರದ ಪರಿಚಯಕ್ಕೆ ಅಂತಲೇ ಈಗ ವಿಶೇಷವಾದ ಪೋಸ್ಟರ್ ಕ್ರಿಯೇಟ್ ಮಾಡಿ, ಸೋಶಿಯಲ್ ಮೀಡಿಯಾದಲ್ಲಿ ಷೇರ್ ಮಾಡಿದೆ. ಈಗಾಗಲೇ ಅದು ವೈರಲ್ ಕೂಡ ಆಗಿದೆ. ನಿರೀಕ್ಷೆಯಂತೆ ಸಿನಿಮಾದ ಬಗ್ಗೆ ದೊಡ್ಡ ಕ್ರೇಜ್ ಶುರುವಾಗಲು ಅದು ನಾಂದಿ ಹಾಡಿದೆ. ಅಂದಹಾಗೆ, ಆ ಪಾತ್ರ ಮತ್ತು ಪಾತ್ರದ ಕಲಾವಿದ ಬೇರಾರು ಅಲ್ಲ, ಅವರೇ ಭಜರಂಗಿ ಲೋಕಿ.
ಸೌರವ್ ಲೋಕಿ ಹೆಸರಲ್ಲಿ ಬೆಳ್ಳಿತೆರೆಗೆ ಬಂದು ಭಜರಂಗಿ ಚಿತ್ರದ ಮೂಲಕವೇ ‘ಭಜರಂಗಿ ಲೋಕಿ’ ಅಂತಲೇ ಬ್ರಾಂಡ್ ಆದ ನಟ ಇವರು. ಅಷ್ಟು ಮಾತ್ರವಲ್ಲ, ಕನ್ನಡಕ್ಕೊಬ್ಬ ಖಡಕ್ ಖಳನಟ ಸಿಕ್ಕಿದ್ದು ಕೂಡ ಭಜರಂಗಿ ಚಿತ್ರದ ಮೂಲಕವೇ. ಅಲ್ಲಿಂದ ಶುರುವಾದ ಅವರ ರಿಯಲ್ ಸಿನಿ ಜರ್ನಿಯಲ್ಲಿ ಸಾಕಷ್ಟು ಸಿನಿಮಾ ಮಾಡಿದ್ದಾರೆ. ಆದರೆ, ಭಜರಂಗಿ ಚಿತ್ರ ಕೊಟ್ಟಂತಹ ತಾರಾ ವರ್ಚಸ್ಸು ಅವರಿಗೆ ಮತ್ತಾವುದೇ ಚಿತ್ರ ತಂದು ಕೊಟ್ಟಿಲ್ಲ. ಈಗ ಮತ್ತೆ ‘ ಭಜರಂಗಿ 2 ‘ ಚಿತ್ರದ ಮೂಲಕ ಮತ್ತೊಂದು ವಿಶಿಷ್ಟವಾದ ಲುಕ್ಕು, ಖಡಕ್ ಪಾತ್ರದೊಂದಿಗೆ ಬೆಳ್ಳಿತೆರೆಯ ಮೇಲೆ ಬರಲು ರೆಡಿಯಾಗಿದ್ದಾರೆ. ಆ ಪಾತ್ರದ ಒಂದು ಲುಕ್ಕು ಈ ಪೋಸ್ಟರ್.
ಈಗಾಗಲೇ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಅದರಲ್ಲಿ ಲೋಕಿ ಅವರು ಹೊಸ ಗೆಟಪ್ನಲ್ಲಿ ಕಾಣಿಸಿಕೊಂಡಿದ್ದನ್ನು ಅಭಿಮಾನಿಗಳು ಗುರುತಿಸಿದ್ದರು. ಆದರೆ ಪಾತ್ರದ ಹೆಸರು ಸೇರಿದಂತೆ ಇತರ ಅಂಶ ರಿವೀಲ್ ಆಗಿರಲಿಲ್ಲ. ಇದೀಗ ಚಿತ್ರತಂಡ ಅಧಿಕೃತವಾಗಿ ಲೋಕಿ ಅವರ ಪಾತ್ರದ ಪರಿಚಯವನ್ನು ಮಾಡಿದ್ದು, ಅಚ್ಚರಿಯ ಮಾಹಿತಿಯನ್ನು ನೀಡಿದೆ. ಚಿತ್ರದಲ್ಲಿ ಸೌರವ್ ಲೋಕೇಶ್ ಅವರದ್ದು ಭಿನ್ನ ಮಾದರಿಯ ಪಾತ್ರವಾಗಿದ್ದು, ಚಿತ್ರತಂಡ ದೊಡ್ಡತೆರೆಯ ಮೇಲೆ ಈ ಪಾತ್ರ ನೀಡುವ ಸರ್ಪ್ರೈಸ್ ಅನ್ನು ಕಣ್ತುಂಬಿಕೊಳ್ಳಿ ಎಂದು ಬರೆದಿದೆ. ಇದರಿಂದಾಗಿ ಲೋಕಿ ಅವರ ಪಾತ್ರ ಹಾಗೂ ಚಿತ್ರದ ಕುರಿತಂತೆ ನಿರೀಕ್ಷೆಗಳು ಗರಿಗೆದರಿವೆ.
ಸದ್ಯಕ್ಕೆ ‘ ಭಜರಂಗಿ 2 ‘ ಚಿತ್ರದಲ್ಲಿನ ಪಾತ್ರಗಳ ಬಗ್ಗೆ ಇರುವ ದೊಡ್ಡ ನಿರೀಕ್ಷೆಗಳ ಪೈಕಿ, ಭಜರಂಗಿ ಲೋಕಿ ಯವರ ಪಾತ್ರದ ಬಗ್ಗೆಯೂ ಇದೆ. ಅವರ ಪಾತ್ರದ ವಿಶೇಷ ಗೆಟಪ್ ನೋಡಿದಾಗ ಲೋಕಿ ಅವರ ಕೆರಿಯರ್ ನಲ್ಲಿ ಇದು ಕೂಡ ಒಂದು ಮೈಲುಗಲ್ಲು ಆಗುವುದು ಕೂಡ ಗ್ಯಾರಂಟಿ ಅಂತೆ. ‘ ಭಜರಂಗಿ 2 ‘ ಚಿತ್ರದಲ್ಲಿನ ತಮ್ಮ ಪಾತ್ರದ ಕುರಿತು ಮಾತನಾಡುವ ಸೌರವ್ ಲೋಕಿ ಅಲಿಯಾದ್ ಭಜರಂಗಿಲೋಕಿ, ಈ ಚಿತ್ರ ತೆರೆ ಕಂಡರೆ ತಮ್ಮನ್ನು ಇದು ಇನ್ನೊಂದು ಲೆವೆಲ್ ಗೆ ತೆಗೆದುಕೊಂ ಡು ಹೋಗುವುದು ಖಚಿತ ಎನ್ನುವ ವಿಶ್ವಾಸ ಅವರದು. ಅಂತೆಯೇ ಅವರಿಗೆ ದೊಡ್ಡ ಯಶಸ್ಸು ಸಿಗಲಿ ಎನ್ನುವುದು ಸಿನಿ ಲಹರಿ ಆಶಯ ಕೂಡ.