ಕನ್ನಡತಿ ರಂಜಿನಿ ರಾಘವನ್ ಅವರ ಕತೆ ಡಬ್ಬಿ ಹೊರ ಬಂತು : ನಟಿ ಈಗ ಲೇಖಕಿ ಆಗಿ ಬಡ್ತಿ !

ಪುಟ್ಟಗೌರಿ ಮದುವೆ ಸೀರಿಯಲ್ ಖ್ಯಾತಿಯ ಜನಪ್ರಿಯ ನಟಿ, ನಿರ್ದೇಶಕಿ ರಂಜನಿ ರಾಘವನ್ ಈಗ ಕತೆಗಾರ್ತಿ ಆಗಿ ಬಡ್ತಿ ಪಡೆದಿದ್ದಾರೆ. ಆ ಮೂಲಕ ಲೇಖಕಿ ಆಗಿ ಬಣ್ಣದ ಜಗತ್ತಿನಿಂದ ಸಾಹಿತ್ಯಕ್ಕೆ ಕ್ಷೇತ್ರಕ್ಕೂ ಪ್ರವೇಶ ಮಾಡಿದ್ದಾರೆ. ಹೆಸರಾಂತ ಪತ್ರಕರ್ತ ಜಿ.ಎನ್. ಮೋಹನ್ ಅವರ “ಅವದಿ’ ವೆಬ್ ಪತ್ರಿಕೆಯಲ್ಲಿ ನಟಿ ರಂಜನಿ ರಾಘವನ್ ಇದುವರೆಗೂ ಬರೆದ ಅವರ ಕಥೆಗಳ ಸಂಗ್ರಹ ಈಗ ‘ಕತೆ ಡಬ್ಬಿ’ರೂಪದಲ್ಲಿ ಹೊರ ಬಂದಿದೆ. ಬಹುರೂಪಿ ಪ್ರಕಾಶನ ಈ ಕೃತಿಯನ್ನು ಹೊರ ತಂದಿದೆ. ಇತ್ತೀಚೆಗಷ್ಟೇ ‘ಕತೆ ಡಬ್ಬಿ’ ಕೃತಿ ಬಿಡುಗಡೆ ಆಗಿದೆ.

ನಟನೆಯಲ್ಲಿಯೇ ಬ್ಯುಸಿ ಆಗಿದ್ದ ನಟಿ ರಂಜಿನಿ ರಾಘವನ್, ಕಲರ್ಸ್ ಕನ್ನಡದಲ್ಲಿ ಪ್ರಸಾರವಾದ ‘ಇಷ್ಟದೇವತೆ’ ಧಾರಾವಾಹಿಗೆ ಕಥೆ, ಚಿತ್ರಕಥೆ ಬರೆಯುವ ಮೂಲಕ ಬರಹಗಾರ್ತಿಯೂ ಆಗಿದ್ದರು. ಅಲ್ಲಿಂದ ಬರವಣಿಗೆಯ ಪಯಣದಲ್ಲೀಗ ಕಥಾ ಸಂಕಲನ ಹೊರ ತಂದು ಲೇಖಕಿಯೂ ಆಗಿದ್ದಾರೆ. ಇಷ್ಟಕ್ಕೂ ಕುತೂಹಲ ಇರೋದು ಅವರಲ್ಲಿ ಬರವಣಿಗೆಯ ಕಲೆ ಸಿದ್ದಿಸಿದ್ದು ಹೇಗೆ ಅಂತ.’ನಂಗೆ ಮೊದಲಿನಿಂದಲೂ ಓದುವುದರಲ್ಲಿ ಹೆಚ್ಚು ಆಸಕ್ತಿ. ಓದಿನ ದಿನಗಳಲ್ಲಿಯೇ ಸಾಹಿತ್ಯದ ಪುಸ್ತಕಗಳನ್ನು ಹೆಚ್ಚಾಗಿ ಓದುತ್ತಾ ಬರುತ್ತಿದೆ. ಹಾಗಾಗಿಯೇ ಬರವಣಿಗೆಯ ಬಗ್ಗೆಯೂ ಆಸಕ್ತಿ ಮೂಡಿತ್ತು. ಆದರೆ ಮುಂದೆ ನಟನೆಯಲ್ಲಿ ಬ್ಯುಸಿ ಆದೆ. ಅಲ್ಲಿಯೇ ಹೆಚ್ಚು ಗಮನ ಹರಿಸಿದೆ. ಆದರೆ ಇಷ್ಟ ದೇವತೆ ಧಾರಾವಾಹಿಗೆ ನಾನೇ ಕಥೆ, ಚಿತ್ರಕಥೆ ಬರೆಯೋ ಅವಕಾಶ ಸಿಕ್ಕಿತು. ಅಲ್ಲಿಂದ ಬರವಣಿಗೆ ಶುರು ಮಾಡಿದೆ. ನಾನು ಬರೆದಿದ್ದಕ್ಕೆ ದೊಡ್ಡ ವೇದಿಕೆ ಆಗಿದ್ದ ಅವದಿ ವೆಬ್ ಪತ್ರಿಕೆ. ʻಅವಧಿʼ ವೆಬ್‌ ಪತ್ರಿಕೆಯಲ್ಲಿ ವಾರಕ್ಕೊಮ್ಮೆ ಕತೆಗಳನ್ನು ಬರೆದೆ. ಅದಕ್ಕೆ ಬಂದ ಪ್ರತಿಕ್ರಿಯೆಗಳು ನನಗೆ ಉತ್ಸಾಹ ತುಂಬಿತು ಅದೇ ಕಾರಣವಾಗಿ ‘ಕತೆ ಡಬ್ಬಿ’ ಪುಸ್ತಕವಾಗಿ ರೂಪುಗೊಂಡಿತು. ಪುಸ್ತಕ ಬರೆಯುವ ಕನಸೊಂದು ನನ್ನ ಮನಸಿನ ಮೂಲೆಯಲ್ಲಿ ಕುಳಿತಿತ್ತು. ಅದೀಗ ಕತೆ ಡಬ್ಬಿ ಮೂಲಕ ಇದು ಸಾಕಾರಗೊಂಡಿದೆ. ಮೊದಲ ಪುಸ್ತಕವಾಗಿದ್ದರಿಂದ ತುಂಬಾ ಸಂಭ್ರಮದಲ್ಲಿರುವೆ.ಮುಂದೆ ಕಾದಂಬರಿಯನ್ನು ಬರೆಯುವ ಹಸಿವು ಇದೆ ಎನ್ನುವ ಮಾತುಗಳನ್ನು ನಟಿ ರಂಜಿನಿ ರಾಘವನ್ ಕಥಾ ಸಂಕಲನ ʻಕತೆ ಡಬ್ಬಿʼ ಬಿಡುಗಡೆ ಸಮಾರಂಭದಲ್ಲಿ ಹಂಚಿಕೊಂಡರು.

ಹಿರಿಯ ಪತ್ರಕರ್ತ, ಲೇಖಕ ಜೋಗಿ ಕೃತಿ ಬಿಡುಗಡೆ ಮಾಡಿದರು. ಆನಂತರ ಅವರು ಮಾತನಾಡುತ್ತಾ, ಕತೆ ಹೇಳುವ ಶೈಲಿ ಮತ್ತು ವಯಸ್ಸನ್ನು ಮೀರಿ ಆಲೋಚನೆ, ಸೊಗಸಾದ ತಂತ್ರಗಾರಿಕೆಯ ಬಳಕೆ ಮತ್ತು ಇಂದಿನ ಕಾಲದ ಭಾಷೆಯನ್ನು ಹಿಡಿದಿಡುವ ನೈಜತೆ ʻಕನ್ನಡತಿʼ ರಂಜನಿ ರಾಘವನ್‌ ಅವರ ಕಥೆಗಳ ಹೆಚ್ಚುಗಾರಿಕೆ ಎಂದರು.ಮನುಷ್ಯನ ಪಿಪಾಸುತನ ಮತ್ತು ದಾಹವನ್ನು ಹಿಡಿದಿಟ್ಟಿದ್ದಾರೆ. ಗಾಢವಾಗಿರುವ ಕತೆಗಳನ್ನು ಕಟ್ಟಿಕೊಟ್ಟಿದ್ದಾರೆ. ಬದುಕನ್ನು ಸುಂದರಗೊಳಿಸುವ ಮತ್ತು ಕತೆಯಲ್ಲಿ ಬರುವ ಸೂಕ್ಷ್ಮಗಳನ್ನು ಬಹುವಾಗಿ ಹಿಡಿದಿದ್ದಾರೆ ಎಂದು ಶ್ಲಾಘಿಸಿದರು.

ಚಿತ್ರ ನಿರ್ದೇಶಕ ಜಯತೀರ್ಥ ಕೃತಿ ಬಿಡುಗಡೆಗೆ ಅತಿಥಿಯಾಗಿದ್ದರು. ‘ ಸಂಪ್ರದಾಯದ ಹೊರೆ ಕಳಚಿ ಸತ್ಯಕ್ಕೆ ಹತ್ತಿರವಾಗುವ ಪ್ರಾಮಾಣಿಕ ಪ್ರಯತ್ನಪಟ್ಟಿದ್ದಾರೆ’ ಎಂದರು. ಹಾಗೆಯೇ ಚಿತ್ರ ನಟ ಋಷಿ ಅತಿಥಿಯಾಗಿ ಬಂದಿದ್ದರು.’ಬಹುರೂಪಿ’ ಯ ಜಿ ಎನ್‌ ಮೋಹನ್‌, ಬಹುರೂಪಿ ಬುಕ್‌ ಹಬ್‌ ನಿರ್ದೇಶಕರಾದ ಶ್ರೀಜಾ ವಿ ಎನ್, ಧೀರಜ್‌ ಹನುಮೇಶ್ ಉಪಸ್ಥಿತರಿದ್ದರು.

  • ಎಂಟರ್‌ ಟೈನ್‌ ಮೆಂಟ್‌ ಬ್ಯೂರೋ ಸಿನಿಲಹರಿ

Related Posts

error: Content is protected !!