Categories
ಸಿನಿ ಸುದ್ದಿ

ಬಿಗ್‌ಬಾಸ್‌ ಗೃಹ ಪ್ರವೇಶ- ಫೆಬ್ರವರಿ 28ಕ್ಕೆ ಮುಹೂರ್ತ ಇಟ್ಟ ಕಿಚ್ಚ ಸ್ವಾಮಿ!

ಈಗ ಎಲ್ಲರಿಗೂ ಆ ಮನೆಯದ್ದೇ ಚಿಂತೆ!
ಅರೇ ಹೀಗೆಂದಾಕ್ಷಣ, ಒಂದಷ್ಟು ಪ್ರಶ್ನೆಗಳು ಮೂಡಿಬರೋದು ಸಹಜ. ಇಲ್ಲೀಗ ಹೇಳಹೊರಟಿರುವುದು ಬಿಗ್‌ಬಾಸ್‌ ಮನೆ ಕುರಿತು. ಹೌದು, ಕಲರ್ಸ್ ಕನ್ನಡ ವಾಹಿನಿಯಲ್ಲಿ “ಬಿಗ್ ಬಾಸ್ ಸೀಸನ್ 8” ಕ್ಕೆ ಕ್ಷಣಗಣನೆ ಶುರುವಾಗಿದೆ. ನಟ ಸುದೀಪ್ ಈ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದಾರೆ. ಈ ಹಿಂದೆ ನಡೆಸಿಕೊಟ್ಟಿರುವ ಅಷ್ಟೂ ಸೀಸನ್‌ಗಳೂ ಸಾಕಷ್ಟು ಮೆಚ್ಚುಗೆ ಪಡೆದಿವೆ. ಈಗ ಎಂಟನೇ ಆವೃತ್ತಿಗೆ ಸಜ್ಜಾಗಿದೆ ಬಿಗ್‌ಬಾಸ್‌ ಟೀಮ್.‌ ಫೆಬ್ರವರಿ 28ರ ಸಂಜೆ 6ಕ್ಕೆ “ಬಿಗ್‌ಬಾಸ್‌” ಗ್ರ್ಯಾಂಡ್‌ ಓಪನಿಂಗ್‌ ಪಡೆಯಲಿದೆ. ಸದ್ಯಕ್ಕೆ ಬಿಗ್‌ಬಾಸ್‌ ಮನೆಗೆ ಈ ಬಾರಿ ಯಾರೆಲ್ಲಾ ಹೋಗಲಿದ್ದಾರೆ ಎಂಬುದು ಇನ್ನೂ ಗೌಪ್ಯವಾಗಿದೆ.

ಆ ಪಟ್ಟಿಯಲ್ಲಿ ಯಾರೆಲ್ಲಾ ಇದ್ದಾರೆ ಎಂಬುದು ಬಿಗ್‌ಬಾಸ್‌ ನಡೆಸಿಕೊಡಲಿರುವ ಸುದೀಪ ಅವರನ್ನೊಳಗೊಂಡಂತೆ ಬಿಗ್‌ಬಾಸ್‌ ತಂಡಕ್ಕೆ ಮಾತ್ರ ಗೊತ್ತಿದೆ. ಸದ್ಯಕ್ಕೆ ಎಲ್ಲರಿಗೂ ಬಿಗ್‌ಬಾಸ್‌ ಮೇಲೆ ಕಣ್ಣು. ಆದರೆ, ಬಿಗ್‌ಬಾಸ್‌ ಮಾತ್ರ ಆ ಮನೆಯೊಳಗಿರುವ ಸ್ಪರ್ಧಿಗಳ ಮೇಲೆ ಕಣ್ಣು. ಇಲ್ಲಿ ಯಾರ ಕಣ್ಣು ಯಾರ ಮೇಲಿದೆಯೋ ಗೊತ್ತಿಲ್ಲ. ಆದರೆ, ಈ ಬಾರಿ ಒಂದಷ್ಟು ಕುತೂಹಲ ಕೆರಳಿಸಿರುವುದಂತೂ ನಿಜ. ಅದಕ್ಕೆ ಕಾರಣ, ಇನ್ನೂ ಸ್ಪರ್ಧಿಗಳು ಯಾರು ಅನ್ನೂವುದು. ಅಂದಹಾಗೆ, ಇತ್ತೀಚೆಗಷ್ಟೇ, ಸುದೀಪ್‌ ಸ್ವಾಮೀಜಿ ಗೆಟಪ್‌ನಲ್ಲಿ ಕಾಣಿಸಿಕೊಂಡು, ಬಿಗ್‌ಬಾಸ್‌ ಮನೆ ಆರಂಭಕ್ಕೆ ದಿನಾಂಕ ನಿಗದಿ ಮಾಡಿದ್ದರು. ವಿಭಿನ್ನ ಯೋಚನೆಯ ಜಾಹಿರಾತು ಮೂಲಕ ಬಿಗ್‌ಬಾಸ್‌ ಸೀಸನ್‌ ೮ಕ್ಕೆ ಡೇಟ್‌ ಫಿಕ್ಸ್‌ ಮಾಡಲಾಗಿದೆ. ಸದ್ಯಕ್ಕೆ ನೂರು ದಿನಗಳ ಕಾಲ ಆ ಮನೆಯಲ್ಲಿ ಯಾರೆಲ್ಲಾ ಇರುತ್ತಾರೆ, ಈ ಬಾರಿ ಎಂಥೆಂಥಾ ಪ್ರಸಂಗಗಳು ನಡೆಯುತ್ತವೆ ಎನ್ನುವುದನ್ನು ಕಾದು ನೋಡಬೇಕಿದೆ.

Categories
ಸಿನಿ ಸುದ್ದಿ ಸೌತ್‌ ಸೆನ್ಸೇಷನ್

ಇಳಯರಾಜಾ ಸ್ಟುಡಿಯೋ ಕಂಡು ಸೂಪರ್‌ ಸ್ಟಾರ್‌ ದಿಲ್‌ ಖುಷ್‌ !

ಭಾರತದ ಜನಪ್ರಿಯ ಸಂಗೀತ ಸಂಯೋಜಕ ಇಳಯರಾಜಾ ಅವರು ದಶಕಗಳ ಕಾಲ ಪ್ರಸಾದ್ ಸ್ಟುಡಿಯೋ ಜೊತೆ ಒಡನಾಟ ಹೊಂದಿದ್ದರು. ಅದು ತಮಗೆ ಅದೃಷ್ಟದ ಸ್ಟುಡಿಯೋ ಎಂದೇ ಅವರು ಭಾವಿಸಿದ್ದರು. ಇತ್ತೀಚೆಗೆ ಪ್ರಸಾದ್ ಸ್ಟುಡಿಯೋದ ಮಾಲೀಕತ್ವ ಬದಲಾಗಿ, ಅಲ್ಲಿ ಇಳಯರಾಜಾ ಅವರಿಗೆ ಕಾನೂನಿನ ತೊಡಕು ಎದುರಾಗಿತ್ತು. ಇದರಿಂದ ಚೆನ್ನೈನ ಕೋಡಂಬಾಕಂನಲ್ಲಿ ಇಳಯರಾಜಾ ತಮ್ಮದೇ ಸ್ವಂತ ಸುಸಜ್ಜಿತ ಸ್ಟುಡಿಯೋ ರೂಪಿಸಿದ್ದಾರೆ.

ಸೂಪರ್‌ಸ್ಟಾರ್ ರಜನೀಕಾಂತ್‌ ಅವರು ಮೊನ್ನೆ ಇಳಯರಾಜಾ ಸ್ಟುಡಿಯೋಗೆ ಭೇಟಿ ಮಾಡಿ ಶುಭ ಹಾರೈಸಿದ್ದಾರೆ. ‘ದಳಪತಿ’, ‘ವೀರಾ’ ಸೇರಿದಂತೆ ರಜನೀಕಾಂತ್‌ರ ಕೆಲವು ಚಿತ್ರಗಳಿಗೆ ಇಳಯರಾಜಾ ಸಂಗೀತ ಸಂಯೋಜನೆಯಿದೆ.

ಹೊಸ ಸ್ಟುಡಿಯೋದಲ್ಲಿ ಕೆಲಸಮಯ ಕಾಲ ಕಳೆದ ರಜನೀಕಾಂತ್‌ ತಮ್ಮ ಹೊಸ ಚಿತ್ರದ ಬಗ್ಗೆ ಚರ್ಚಿಸಿದ್ದಾರೆ. 70ರ ದಶಕದಿಂದಲೂ ಇಳಯರಾಜ ಅವರು ಪ್ರಸಾದ್ ಸ್ಟುಡಿಯೋದಲ್ಲಿ ಸಂಗೀತ ಸಂಯೋಜಿಸುತ್ತಿದ್ದರು. ಆಸ್ತಿ ವಾಜ್ಯದಿಂದಾಗಿ ಅವರು ಹೊರಬರಬೇಕಾಯ್ತು. ಅಲ್ಲಿನ ತಮ್ಮ ಸಂಗೀತ ಪರಿಕರಣಗಳಿಗೆ ಹಾನಿ ಮಾಡಿದ್ದಾರೆ ಎಂದು ಇಳಯರಾಜಾ ದೂರು ದಾಖಲಿಸಿದ್ದಾರೆ.

Categories
ಸಿನಿ ಸುದ್ದಿ ಸೌತ್‌ ಸೆನ್ಸೇಷನ್

‘ಬ್ರಹ್ಮಾಸ್ತ್ರ’ ಪೂರ್ಣಗೊಳಿಸಿದ ನಾಗಾರ್ಜುನ !

ಬಹುವರ್ಷಗಳ ನಂತರ ಬಾಲಿವುಡ್‌ಗೆ ಹೋಗಿದ್ದ ನಾಗಾರ್ಜುನ ತಮ್ಮ ‘ಬ್ರಹ್ಮಾಸ್ತ್ರ’ ಹಿಂದಿ ಸಿನಿಮಾದ ಚಿತ್ರೀಕರಣ ಪೂರ್ಣಗೊಳಿಸಿದ್ದಾರೆ. ಚಿತ್ರದ ಪ್ರಮುಖ ತಾರೆಯರಾದ ರಣಬೀರ್ ಕಪೂರ್ ಮತ್ತು ಅಲಿಯಾ ಭಟ್‌ ಜೊತೆಗಿನ ಫೋಟೋ ಹಂಚಿಕೊಂಡಿರುವ ಅವರು ಚಿತ್ರೀಕರಣದ ಅನುಭವಗಳನ್ನು ಹಂಚಿಕೊಂಡಿದ್ದಾರೆ. “ಚಿತ್ರದ ನನ್ನ ಪೋರ್ಷನ್‌ ಮುಗಿಸಿದೆ. ಉತ್ತಮ ನಟ-ನಟಿಯಾದ ರಣಬೀರ್ ಮತ್ತು ಅಲಿಯಾ ಜೊತೆಗೆ ನಟಿಸಿದ್ದು ತುಂಬಾ ಖುಷಿ ಕೊಟ್ಟಿದೆ. ಥಿಯೇಟರ್‌ನಲ್ಲಿ ನಿಮ್ಮ ಪ್ರತಿಕ್ರಿಯೆಗೆ ಎದುರು ನೋಡುತ್ತಿದ್ದೇನೆ” ಎಂದು ಟ್ವೀಟ್ ಮಾಡಿದ್ದಾರವರು.

‘ಬ್ರಹ್ಮಾಸ್ತ್ರ’ ಚಿತ್ರದಲ್ಲಿ ನಾಗಾರ್ಜುನ ಪುರಾತತ್ವಶಾಸ್ತ್ರಜ್ಞನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಶಿವ (ರಣಬೀರ್‌) ಮತ್ತು ಇಶಾ (ಅಲಿಯಾ) ಪುರಾತನ ದೇವಾಲಯವೊಂದನ್ನು ಅಭ್ಯಸಿಸಲು ವಾರಣಾಸಿಗೆ ಬರುತ್ತಾರೆ. ಅಲ್ಲಿ ವಿಚಿತ್ರ ಘಟನೆಗಳಿಗೆ ಸಾಕ್ಷಿಯಾಗುವ ಅವರಿಗೆ ಹಲವು ಅಚ್ಚರಿಗಳು ಕಾಣುತ್ತವೆ. ಮುಂದೆ ಸಿನಿಮಾ ಕತೆ ಹಿಮಾಲಯದೆಡೆ ಸಾಗುತ್ತದೆ. ಆಕ್ಷನ್‌-ಥ್ರಿಲ್ಲರ್ ಮಾದರಿ ಸಿನಿಮಾದಲ್ಲಿ ಅಮಿತಾಭ್ ಬಚ್ಚನ್ ಮತ್ತು ಮೌನಿ ರಾಯ್‌ ಕೂಡ ನಟಿಸಿದ್ದಾರೆ.

ನಾಗಾರ್ಜುನ ನಟಿಸಿದ್ದ ಕೊನೆಯ ಹಿಂದಿ ಸಿನಿಮಾ ‘ಎಲ್‌ಓಸಿ ಕಾರ್ಗಿಲ್‌’ (2003). ಅದಕ್ಕೂ ಮುನ್ನ ಅವರು ಖುದಾ ಗವಾ, ಅಂಗಾರೆ, ಕ್ರಿಮಿನಲ್, ಝಕ್ಮ್‌ ಚಿತ್ರಗಳಲ್ಲಿ ನಟಿಸಿದ್ದರು. ಕೋವಿಡ್‌ ಕಾರಣದಿಂದಾಗಿ ಸ್ಥಗಿತಗೊಂಡಿದ್ದ ಚಿತ್ರೀಕರಣಕ್ಕೆ ಇದೀಗ ಕೊನೆಯ ಹಂತದ ಶೂಟಿಂಗ್ ನಡೆಯುತ್ತಿದೆ. ಸದ್ಯದಲ್ಲೇ ಚಿತ್ರೀಕರಣ ಮುಗಿಯಲಿದ್ದು ಪೋಸ್ಟ್ ಪ್ರೊಡಕ್ಷನ್ ಕೆಲಸಗಳಿಗೆ ಚಾಲನೆ ಸಿಗಲಿದೆ. ಈ ವರ್ಷದ ಕೊನೆಗೆ ಸಿನಿಮಾ ಬಿಡುಗಡೆ ಮಾಡುವುದು ಚಿತ್ರತಂಡದ ಯೋಜನೆ.

Categories
ಸಿನಿ ಸುದ್ದಿ ಸೌತ್‌ ಸೆನ್ಸೇಷನ್

ಈ ನಟಿಗೆ ದೇಗುಲವನ್ನೇ ನಿರ್ಮಿಸಿದ ಅಭಿಮಾನಿಗಳು !

ತೆಲುಗು ಮತ್ತು ತಮಿಳು ಸಿನಿಮಾಗಳ ಯುವನಟಿ ನಿಧಿ ಅಗರ್‌ವಾಲ್‌ ಅವರಿಗೆ ಅಭಿಮಾನಿಗಳು ಚೆನ್ನೈನಲ್ಲಿ ದೇವಸ್ಥಾನ ನಿರ್ಮಿಸಿದ್ದಾರೆ. ನಟಿಯ ಪ್ರತಿಮೆ ರೂಪಿಸಿದ್ದು, ಅದಕ್ಕೆ ಅಭಿಷೇಕ – ಆರತಿ ನಡೆಯುತ್ತಿದೆ. “ಪ್ರೇಮಿಗಳ ದಿನಕ್ಕಾಗಿ ಇದು ನಮ್ಮ ಕಡೆಯಿಂದ ನಟಿಗೆ ಉಡುಗೊರೆ” ಎಂದಿದ್ದಾರೆ ಅಭಿಮಾನಿಗಳು. “ಅಭಿಮಾನಿಗಳು ಈ ನಡೆ ನನಗೆ ಶಾಕ್ ತಂದಿದೆ. ಇದೆಲ್ಲವನ್ನೂ ನಾನು ಖಂಡಿತ ನಿರೀಕ್ಷಿಸಿರಲಿಲ್ಲ. ಅವರ ಪ್ರೀತಿಗೆ ನಾನು ಋಣಿ” ಎನ್ನುತ್ತಾರೆ ನಿಧಿ.

ನಟ-ನಟಿಯರಿಗೆ ದೇವಾಲಯ ನಿರ್ಮಿಸುವುದು ತಮಿಳುನಾಡಿನಲ್ಲಿ ಹೊಸದೇನಲ್ಲ. ಈ ಹಿಂದೆ ಎಂಜಿಆರ್‌, ಖುಷ್ಬೂ, ನಮಿತಾ, ಹನ್ಸಿಕಾ ಅವರಿಗೆ ಅಭಿಮಾನಿಗಳು ದೇವಾಲಯಗಳನ್ನು ನಿರ್ಮಿಸಿದ್ದರು. ಬಹುಭಾಷಾ ತಾರೆ ನಯನತಾರಾ ಅವರಿಗೂ ದೇಗುಲ ನಿರ್ಮಾಣವಾಗುತ್ತಿದೆ ಎನ್ನಲಾಗಿದೆ. ಇದೀಗ ನಿಧಿಯನ್ನು ಆರಾಧಿಸುತ್ತಿರುವುದು ಸ್ವತಃ ಆ ನಟಿಗೇ ಅಚ್ಚರಿ ತಂದಿದೆ.

“ನಾನಿನ್ನೂ ಹೊಸಬಳು. ಮೂರ್ನಾಲ್ಕು ತೆಲುಗು ಮತ್ತು ಎರಡು ತಮಿಳು ಚಿತ್ರಗಳಲ್ಲಿ ನಟಿಸಿದ್ದೇನಷ್ಟೆ. ಅಭಿಮಾನಿಗಳು ನನ್ನ ಬಗ್ಗೆ ಅಪಾರ ಅಭಿಮಾನ ತಳೆದಿದ್ದಾರೆ. ಸಂದರ್ಶನವೊಂದರಲ್ಲಿ ನಾನು ಅನಾಥ ಮಕ್ಕಳಿಗಾಗಿ ಕೆಲಸ ಮಾಡಬೇಕೆನ್ನುವ ಇಚ್ಛೆ ವ್ಯಕ್ತಪಡಿಸಿದ್ದೆ. ನನ್ನ ಮನದಿಂಗಿತ ಅರಿತು ಅಭಿಮಾನಿಗಳು ಅನಾಥರಿಗೆ ಊಟ ನೀಡಿದ್ದಾರೆ” ಎನ್ನುವ ನಿಧಿ ಸದ್ಯ ಪವನ್ ಕಲ್ಯಾಣ್ ಜೋಡಿಯಾಗಿ ತೆಲುಗು ಚಿತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಇದಾದ ನಂತರ ಉದಯನಿಧಿ ಸ್ಟಾಲಿನ್ ಜೊತೆ ತಮಿಳು ಸಿನಿಮಾ ಮಾಡಲಿದ್ದಾರೆ.

Categories
ಸಿನಿ ಸುದ್ದಿ

ರಾಘವೇಂದ್ರ ರಾಜಕುಮಾರ್ ಆರೋಗ್ಯದಲ್ಲಿ ಏರುಪೇರು- ಆಸ್ಪತ್ರೆಗೆ ದಾಖಲು

ನಟ ರಾಘವೇಂದ್ರ ರಾಜಕುಮಾರ್ ಅವರನ್ನು ಮಂಗಳವಾರ ಸಂಜೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಸಿರಾಟದ ಸಮಸ್ಯೆಯಿಂದಾಗಿ ಅವರನ್ನು ಯಶವಂತಪುರದ‌ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಘವೇಂದ್ರ ರಾಜಕುಮಾರ್ ಅವರ ಜೊತೆ ಪುನೀತ್ ರಾಜ್‍ಕುಮಾರ್ ಕೂಡ ಇದ್ದು, ನೋಡಿಕೊಳ್ಳುತ್ತಿದ್ದಾರೆ.
“ನಮ್ಮ ತಂದೆ ಆರೋಗ್ಯವಾಗಿದ್ದಾರೆ. ಯಾರೂ ಆತಂಕ ಪಡುವ ಅಗತ್ಯವಿಲ್ಲ” ಎಂದು ರಾಘವೇಂದ್ರ ರಾಜಕುಮಾರ್ ಅವರ ಪುತ್ರ ವಿನಯ್ ರಾಜಕುಮಾರ್ ಹೇಳಿದ್ದಾರೆ.
ಸದ್ಯ ರಾಘವೇಂದ್ರ ರಾಜಕುಮಾರ್ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ನಾಳೆ ಆಸ್ಪತ್ರೆಯಿಂದ ಡಿಸ್ಟಾರ್ಜ್ ಆಗುವ ಬಗ್ಗೆ ಕುಟುಂಬದವರು ಹೇಳಿದ್ದಾರೆ.

Categories
ಸಿನಿ ಸುದ್ದಿ

ಬ್ಯಾಡ್ ಮ್ಯಾನರ್ಸ್ ತಂಡ ಸೇರಿದ ತಾರಾ – ಅಂಬರೀಷ್ ಜೊತೆ ನಟಿಸಿದ್ದ ಅವರೀಗ ರೆಬೆಲ್ ಮಗನ ಜೊತೆಯೂ ನಟನೆ

 

ಕನ್ನಡ ಚಿತ್ರರಂಗದಲ್ಲಿ ಬಹುತೇಕ ಹಿರಿಯ ನಟರಿಂದ ಹಿಡಿದು ಅನೇಕ ಸ್ಟಾರ್ ನಟರ ಜೊತೆ ನಟಿಸಿರುವ ನಟಿ‌ ತಾರಾ, ಸಾಕಷ್ಟು ಹೊಸ ಪ್ರತಿಭೆಗಳ ಜೊತೆಯಲ್ಲೂ ಕಾಣಿಸಿಕೊಡಿದ್ದಾರೆ. ಇದೀಗ, ಅಭಿಷೇಕ್ ಅಂಬರೀಶ್ ಜೊತೆ ನಟಿಸುತ್ತಿದ್ದಾರೆ.

ಹೌದು, “ಬ್ಯಾಡ್ ಮ್ಯಾನರ್ಸ್” ಚಿತ್ರಕ್ಕೆ ಈಗ ರಾಷ್ಟ್ರ ಪ್ರಶಸ್ತಿ ವಿಜೇತೆ, ನಟಿ ತಾರಾ ಅನುರಾಧ ಅವರ ಎಂಟ್ರಿಯಾಗಿದೆ.ತಾರಾ ಅವರು ರೆಬೆಲ್ ಸ್ಟಾರ್ ಅಂಬರೀಷ್ ಅವರೊಂದಿಗೂ ನಟಿಸಿದ್ದರು. ಈಗ ಅಂಬರೀಶ್ ಅವರ ಪುತ್ರ ಅಭಿಷೇಕ್ ಅಂಬರೀಶ್ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ. ವಿಶೇಷ ಅಂದರೆ, ನಿರ್ದೇಶಕ “ದುನಿಯಾ” ಸೂರಿಯವರ ಚಿತ್ರದಲ್ಲಿ ತಾರಾ ಮೊದಲ ಸಲ ನಟಿಸುತ್ತಿದ್ದಾರೆ. ಹೀಗಾಗಿ‌ತಾರಾ ಅವರು ಸಹಜವಾಗಿಯೇ ಖುಷಿಯಾಗಿದ್ದಾರೆ. ಸದ್ಯಕ್ಕೆ ತಾರಾ ಅವರೀಗ, ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ.

Categories
ಸಿನಿ ಸುದ್ದಿ

ಅಮೀರ್‌ ಸಿನಿಮಾದಿಂದ ಸೇತುಪತಿ ಹೊರ ಬಂದಿದ್ದೇಕೆ!?

ಎಲ್ಲವೂ ಅಂದುಕೊಂಡಂತೆಯೇ ಆಗಿದ್ದರೆ ಅಮೀರ್ ಖಾನ್‌ರ ‘ಲಾಲ್ ಸಿಂಗ್ ಛಡ್ಡಾ’ ಹಿಂದಿ ಚಿತ್ರದಲ್ಲಿ ತಮಿಳು ನಟ ವಿಜಯ್ ಸೇತುಪತಿ ನಟಿಸಬೇಕಿತ್ತು. ಟಾಮ್ ಹ್ಯಾಂಕ್‌ ನಟಿಸಿದ್ದ ಜನಪ್ರಿಯ ಹಾಲಿವುಡ್ ಸಿನಿಮಾ ‘ಫಾರೆಸ್ಟ್ ಗಂಪ್‌’ ರೀಮೇಕಿದು. ಅಮೀರ್ ನಾಯಕನಾಗಿ ನಟಿಸುತ್ತಿದ್ದರೆ ಚಿತ್ರದಲ್ಲಿ ಇನ್ನೆರೆಡು ಪ್ರಮುಖ ಪಾತ್ರಗಳಿದ್ದವು. ಕರೀನಾ ಕಪೂರ್‌ ಅವರದ್ದು ಒಂದು ಪಾತ್ರ. ಮತ್ತೊಂದು ಪ್ರಮುಖ ಪಾತ್ರಕ್ಕೆ ವಿಜಯ್ ಸೇತುಪತಿ ಆಯ್ಕೆಯಾಗಿದ್ದರು.


ಕೋವಿಡ್ ಕಾರಣದಿಂದಾಗಿ ‘ಲಾಲ್ ಸಿಂಗ್ ಛಡ್ಡಾ’ ಶೂಟಿಂಗ್ ನಿಂತುಹೋಗಿತ್ತು. ಮತ್ತೆ ಚಿತ್ರೀಕರಣ ಆರಂಭವಾದಾಗ ಚಿತ್ರತಂಡದಲ್ಲಿ ಸೇತುಪತಿ ಹೆಸರು ಬಿಟ್ಟುಹೋಗಿತ್ತು. “ಸೇತುಪತಿ ಹಿಂದಿ ಚಿತ್ರಕ್ಕಾಗಿ ತಮ್ಮ ದೇಹದ ತೂಕ ಇಳಿಸಿಕೊಳ್ಳಬೇಕಿತ್ತು. ಅದು ಸಾಧ್ಯವಾಗದ ಕಾರಣ ಅವರು ಚಿತ್ರದಿಂದ ಹೊರಗುಳಿಯಬೇಕಾಯ್ತು” ಎನ್ನುವ ವದಂತಿಯಿತ್ತು. ಈ ವದಂತಿಗಳನ್ನು ಅಲ್ಲಗಳೆದಿರುವ ಅವರು, “ಕೋವಿಡ್ ಕಾರಣದಿಂದಾಗಿ ನನ್ನ ಸಿನಿಮಾ ಯೋಜನೆಗಳೆಲ್ಲಾ ತಲೆಕೆಳಗಾದವು. ಐದು ತೆಲುಗು ಸಿನಿಮಾಗಳನ್ನು ಒಪ್ಪಿಕೊಂಡಿದ್ದೆ. ಹಾಗಾಗಿ ಹಿಂದಿ ಚಿತ್ರಕ್ಕೆ ಡೇಟ್ಸ್ ಹೊಂದಿಸಿಕೊಳ್ಳಲು ಸಾಧ್ಯವಾಗಲಿಲ್ಲ” ಎಂದಿದ್ದಾರೆ.

ಹಿಂದಿ ಚಿತ್ರದಲ್ಲಿ ನಟಿಸುವಂತೆ ಸ್ವತಃ ಅಮೀರ್ ಖಾನ್ ಅವರೇ ಒತ್ತಡ ತಂದಿದ್ದರು ಎನ್ನುತ್ತಾರೆ ಸೇತುಪತಿ. “ತಮಿಳುನಾಡಿನಲ್ಲಿ ನನ್ನ ಚಿತ್ರದ ಶೂಟಿಂಗ್ ನಡೆಯುವಲ್ಲಿಯೇ ಅಮೀರ್ ಬಂದಿದ್ದರು. ಕಾರಣಾಂತರಗಳಿಂದ ಚಿತ್ರದ ನಿರ್ದೇಶಕ ಅದ್ವೈತ್‌ ಚಂದನ್ ಬಂದಿರಲಿಲ್ಲ. ಅಮೀರ್ ಸ್ಕ್ರಿಪ್ಟ್ ಹಾಗೂ ನನ್ನ ಪಾತ್ರದ ಬಗ್ಗೆ ಹೇಳಿದ್ದರು. ಅವರು ಕತೆ ಹೇಳುವ ರೀತಿಯೇ ಸೊಗಸು. ಬ್ಯುಸಿ ಶೆಡ್ಯೂಲ್‌ನಿಂದಾಗಿ ಹಿಂದಿ ಚಿತ್ರ ಕೈತಪ್ಪಿತು. ಮುಂದೊಮ್ಮೆ ಅವರೊಂದಿಗೆ ನಟಿಸುವ ಅವಕಾಶ ಕಳೆದುಕೊಳ್ಳುವುದಿಲ್ಲ” ಎನ್ನುವ ಅವರು ವದಂತಿಗಳನ್ನು ಸಂಪೂರ್ಣ ಅಲ್ಲಗಳೆಯುತ್ತಾರೆ.

Categories
ಸಿನಿ ಸುದ್ದಿ

ಹಾರರ್‌ ಸಿನಿಮಾ ರೂಹಿ ಟ್ರೇಲರ್ ಔಟ್‌!

ಹಾರ್ದಿಕ್ ಮೆಹ್ತಾ ನಿರ್ದೇಶನದ ‘ರೂಹಿ’ ಕಾಮಿಡಿ-ಹಾರರ್ ಹಿಂದಿ ಸಿನಿಮಾದ ‌ಟ್ರೇಲರ್‌  ಇಂದು ಬಿಡುಗಡೆಯಾಗಿದೆ. ಹಾರರ್‌ಗೆ ಅಗತ್ಯವಿರುವ ಹಿನ್ನೆಲೆ ಸಂಗೀತ, ಗ್ರಾಫಿಕ್ ವಿ‍ಶ್ಯುಯಲ್ಸ್‌ಗಳೊಂದಿಗೆ ನೋಡುಗರಿಗೆ ಅಂಜಿಕೆ ಬರುವಂತಿದೆ ಟ್ರೇಲರ್.‌  ರಾಜ್‌ಕುಮಾರ್ ರಾವ್, ಜಾಹ್ನವಿ ಕಪೂರ್ ಮತ್ತು ವರುಣ್ ಶರ್ಮಾ ಮುಖ್ಯಭೂಮಿಕೆಯಲ್ಲಿರುವ ಸಿನಿಮಾ ಹಾರರ್‌ ಜೊತೆ ಸಂದೇಶವೊಂದನ್ನು ಸಾರುವ ಸೂಚನೆ ನೀಡುತ್ತದೆ.

ಹಾರ್ದಿಕ್ ಮೆಹ್ತಾ ಈ ಹಿಂದೆ ‘ಕಾಮ್‌ಯಾಬ್‌’ (2018) ಹಿಂದಿ ಸಿನಿಮಾ ನಿರ್ದೇಶಿಸಿದ್ದರು. ಅದಕ್ಕೂ ಎರಡು ವರ್ಷಗಳ ಹಿಂದೆ  ‘ಟ್ರಾಪ್ಡ್‌’ ಚಿತ್ರಕಥೆಯಲ್ಲಿ ಭಾಗಿಯಾಗಿದ್ದವರು. ‘ರೂಹಿ’ಯಾಗಿ ಜಾಹ್ನವಿ ಕಪೂರ್ ವಸ್ತ್ರವಿನ್ಯಾಸ, ಮೇಕಪ್‌ ಸೂಕ್ತವಾಗಿದ್ದು, ಜಾಹ್ನವಿ ಪಾತ್ರವನ್ನು ಅರಿತು ನಟಿಸಿರುವಂತಿದೆ. ಮದುವೆ ನಂತರ ಹನಿಮೂನ್‌ಗೆ ತೆರೆಳುವ ದಂಪತಿ ಕಂಡರೆ ಪ್ರೇತಾತ್ಮ ‘ರೂಹಿ’ಗೆ ಅಸಮಾಧಾನ.

ರೂಹಿಯಿಂದ ಯುವತಿಯರನ್ನು ರಾಜ್‌ಕುಮಾರ್ ರಾವ್ ಮತ್ತು ವರುಣ್ ಶರ್ಮಾ ಹೇಗೆ ಕಾಪಾಡುತ್ತಾರೆ ಎನ್ನುವುದು ಕಥಾವಸ್ತು. ಇಬ್ಬರು ನಾಯಕರು ಪ್ರೇತಾತ್ಮದ ಬಗ್ಗೆ ಕನಿಕರದಿಂದ ಸಮಸ್ಯೆಯನ್ನು ನಿಭಾಯಿಸುವಾಗ ಸಂಭವಿಸುವ ತಮಾಷೆಗಳು ಅಲ್ಲಲ್ಲಿ ಕಾಣಿಸುತ್ತವೆ. ಕತ್ತನ್ನು 360 ಡಿಗ್ರಿ ತಿರುಗಿಸುವುದು, ಕಾಲುಗಳನ್ನು ತಿರುವು, ಮುರುವು ಮಾಡುವ ‘ರೂಹಿ’ ಪಾತ್ರದಲ್ಲಿ ಜಾಹ್ನವಿ ಭರವಸೆ ಮೂಡಿಸುತ್ತಾರೆ.

Categories
ಸಿನಿ ಸುದ್ದಿ

ಮಿತ್ರ ಫಿಲ್ಮ್‌ ಅಕಾಡೆಮಿ – ನಟಿಸೋರಿಗೊಂದು ಹೊಸ ವೇದಿಕೆ ಕಲ್ಪಿಸಿಕೊಟ್ಟ ಹಾಸ್ಯ ಕಲಾವಿದ

ಹಾಸ್ಯ ನಟ ಕಮ್‌ ನಿರ್ಮಾಪಕ ಮಿತ್ರ ಅಂದಾಕ್ಷಣ ನೆನಪಾಗೋದೇ “ರಾಗ” ಎಂಬ ಅದ್ಭುತ ಸಿನಿಮಾ. ಹೌದು, ಈ ಚಿತ್ರದ ಮೂಲಕ ನಿರ್ಮಾಪಕ ಎನಿಸಿಕೊಂಡ ಮಿತ್ರ, ಒಂದೊಳ್ಳೆಯ ಸಿನಿಮಾ ನಿರ್ಮಿಸಿದ ಕಲಾವಿದ ಎಂಬ ಮಾತಿಗೂ ಕಾರಣರಾದರು. ನೂರಾರು ಸಿನಿಮಾಗಳ ಮೂಲಕ ಕನ್ನಡ ಚಿತ್ರರಸಿಕರ ಪಾಲಿಗೆ ಪ್ರೀತಿಯ ನಟ ಎನಿಸಿಕೊಂಡಿರುವ ಮಿತ್ರ ಅವರೀಗ ಹೊಸದೊಂದು ಕಾರ್ಯಕ್ಕೆ ಕೈ ಹಾಕಿದ್ದಾರೆ. ಹಾಗಂತ, ಹೊಸ ಸಿನಿಮಾ ನಿರ್ಮಾಣಕ್ಕಿಳಿದು ಬಿಟ್ಟರಾ? ಈ ಪ್ರಶ್ನೆ ಎದುರಾಗೋದು ಸಹಜ.

ಆದರೆ, ಮಿತ್ರ, ಹೊಸ ಸಿನಿಮಾ ಮಾಡೋಕೆ ಸಜ್ಜಾಗಿರೋದು ಸತ್ಯ. ಸದ್ಯಕ್ಕೆ ಸಾಲು ಸಾಲು ಸಿನಿಮಾಗಳಿವೆಯಾದರೂ, ಈಗ ಅವರೊಂದು ಹೊಸ ಯೋಚನೆಯಲ್ಲಿದ್ದಾರೆ. ಆ ಯೋಚನೆ ಮತ್ತು ಯೋಜನೆ ಬೇರೇನೂ ಅಲ್ಲ, ಅವರೀಗ “ಆರ್‌ಕೆ ಮಿತ್ರ ಫಿಲ್ಮ್‌ ಅಕಾಡೆಮಿ” ಶುರು ಮಾಡಿದ್ದಾರೆ. ಇದು ಅವರ ಹೊಸ ಕನಸು. ಅವರ ಈ ಹೊಸ ಯೋಜನೆ ಅವರದೇ ಕೂರ್ಗ್‌ನಲ್ಲಿರುವ ಸ್ವರ್ಣಭೂಮಿ ರೆಸಾರ್ಟ್‌ನಲ್ಲಿ ಶುರುವಾಗುತ್ತಿದೆ. ಫೆಬ್ರವರಿ ೨೮ರಿಂದ ಶುರುವಾಗಲಿರುವ ಆವರ “ಆರ್‌ಕೆ ಮಿತ್ರ ಫಿಲ್ಮ ಅಕಾಡೆಮಿ” ಮೂಲಕ ಕೇವಲ ನಟನಾ ತರಬೇತಿ ನಡೆಯಲಿದೆ. ಇದೊಂದು ವಿನೂತನ ಮತ್ತು ಅಪರೂಪ ಎನಿಸುವ ನಟನಾ ತರಬೇತಿ ಎನ್ನುವ ಮಿತ್ರ, “ಸಿನಿಲಹರಿ” ಜೊತೆ ತಮ್ಮ ಅಕಾಡೆಮಿಯೊಳಗಿನ ಮಾಹಿತಿ ಹಂಚಿಕೊಂಡರು.


“ನಾನೊಬ್ಬ ಹಾಸ್ಯ ಕಲಾವಿದನಾಗಿ. ಸದಾ ಹೊಸತನ್ನೇ ಬಯಸುತ್ತಿರುತ್ತೇನೆ. ಏನಾದರೊಂದು ಮಾಡಬೇಕೆಂಬ ತುಡಿತ ನನ್ನದು. ಆ ನಿಟ್ಟಿನಲ್ಲಿ ನಾನು ಸಿನಿಮಾರಂಗದಲ್ಲಿದ್ದುಕೊಂಡೇ “ರಾಗ” ಎಂಬ ಒಂದೊಳ್ಳೆಯ ಚಿತ್ರವನ್ನು ನಿರ್ಮಿಸಿದೆ. ಅದರಿಂದ ನನಗೆ ಹಣ ಬರದಿದ್ದರೂ, ಒಂದೊಳ್ಳೆಯ ಸಿನಿಮಾ ಮಾಡಿದ ತೃಪ್ತಿ ಇದೆ. ಇನ್ನು, ಇದರ ನಡುವೆ ನಾನು ನಟನೆಯಲ್ಲೂ ಬಿಝಿ ಇದ್ದೇನೆ. ಒಂದಷ್ಟು ಸಿನಿಮಾಗಳ ಚಿತ್ರೀಕರಣ ನಡೆಯುತ್ತಿದೆ. ಕೆಲವು ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿವೆ. ಇನ್ನಷ್ಟು ಚಿತ್ರಗಳ ಮಾತುಕತೆಯೂ ನಡೆಯುತ್ತಿದೆ. ಇದರ ನಡುವೆಯೇ ನಾನು ಕೂರ್ಗ್‌ನಲ್ಲಿ ಸ್ವರ್ಣಭೂಮಿ ರೆಸಾರ್ಟ್‌ವೊಂದನ್ನು ನಡೆಸುತ್ತಿದ್ದೇನೆ. ಮೂಲತಃ ರೆಸಾರ್ಟ್‌ ಉದ್ಯಮದಿಂದಲೇ ನಾನು ಸಿನಿಮಾ ಲೋಕಕ್ಕೆ ಬಂದವನು. ಹಾಗಾಗಿ, ರೆಸಾರ್ಟ್‌ ಜೊತೆ ನನಗೆ ಅವಿನಾಭಾವ ಸಂಬಂಧವೂ ಇದೆ. ಈಗ ಕೂರ್ಗ್‌ನಲ್ಲಿ ವಿಶಾಲವಾಗಿ, ಸುಸಜ್ಜಿತವಾಗಿ ತಲೆಎತ್ತಿರುವ ಸ್ವರ್ಣಭೂಮಿ ರೆಸಾರ್ಟ್‌ನಲ್ಲೀ “ಆರ್‌ಕೆ ಮಿತ್ರ ಫಿಲ್ಮ ಅಕಾಡೆಮಿ” ಶುರು ಮಾಡಿ, ಆ ಮೂಲಕವೇ ರಂಗತರಬೇತಿ ಶಿಬಿರ ಆಯೋಜಿಸುತ್ತಿದ್ದೇನೆ. ಅದು ಹದಿನೈದು ದಿನಗಳ ಶಿಬಿರವಾಗಿದ್ದು, ಅಲ್ಲಿ ನಟನೆ ತರಗತಿ ಮಾತ್ರ ನಡೆಯಲಿದೆ.

ಈ ಹದಿನೈದು ದಿನಗಳಲ್ಲಿ ನುರಿತ ಕಲಾವಿದರು, ತಾಂತ್ರಿಕ ವರ್ಗದವರು, ಸಿನಿಮಾ ಪತ್ರಕರ್ತರು ಬಂದು ಶಿಬಿರಾರ್ಥಿಗಳ ಜೊತೆ ಸಂವಾದ ನಡೆಸಲಿದ್ದಾರೆ. ನಟನೆ ಬಗ್ಗೆ ಒಂದಷ್ಟು ಮಾಹಿತಿಯನ್ನೂ ಕೊಡಲಿದ್ದಾರೆ. ಉಳಿದಂತೆ ಶಿಬಿರದಲ್ಲಿ ಪಾಲ್ಗೊಳ್ಳುವ ಅಭ್ಯರ್ಥಿತಿಗಳಿಗೆ ನಾವೇ ಕಿರುಚಿತ್ರ ತಯಾರು ಮಾಡಿ, ಅವರ ಪ್ರತಿಭೆಗೊಂದು ವೇದಿಕೆ ಕಲ್ಪಿಸುವ ಪ್ರಯತ್ನ ಮಾಡುತ್ತಿದ್ದೇವೆ. ಹದಿನೈದು ದಿನಗಳ ಕಾಲ ಅಲ್ಲೇ ವಾಸ್ತವ್ಯ, ಊಟ, ತಿಂಡಿಯ ವ್ಯವಸ್ಥೆಯೂ ಇರಲಿದೆ. ಹದಿನೈದು ದಿನಗಳ ಕಾಲ ರೆಸಾರ್ಟ್‌ನಲ್ಲಿ ತಂಗುವುದರ ಜೊತೆಗೆ ಸುಪ್ತ ಪ್ರತಿಭೆ ಆಚೆ ತರುವ ಕೆಲಸ ನಡೆಯುತ್ತದೆ. ಹೆಚ್ಚಿನ ವಿವರಗಳಿಗೆ “www.rkmithrafilmacademy.com” ವೆಬ್‌ಸೈಟ್‌ ವೀಕ್ಷಿಸಬಹುದಾಗಿದೆ.


ವಿಶೇಷವಾಗಿ ಹೇಳುವುದಾದರೆ, ಈ ಹದಿನೈದು ದಿನದ ತರಬೇತಿಯ ಬ್ಯಾಚ್‌ನಲ್ಲಿ ಕೇವಲ ೨೦ ಜನರಿಗೆ ಮಾತ್ರ ಅವಕಾಶವಿದೆ. ತಿಂಗಳಿಗೊಂದು ಬ್ಯಾಚ್‌ ನಡೆಯುತ್ತಿದ್ದು, 20 ಜನರ ಮೇಲೆ ಎಷ್ಟೇ ಹಣ ಕೊಟ್ಟರೂ, ಅವಕಾಶ ಇರುವುದಿಲ್ಲ. ಇಲ್ಲಿ ಹಣಕ್ಕಿಂತ ಮೊದಲು, ಒಂದೊಳ್ಳೆಯ ವೇದಿಕೆ ಕಲ್ಪಿಸಬೇಕೆಂಬುದು ನಮ್ಮ ಉದ್ದೇಶ. ನಿರ್ದೇಶನದ ಕನಸು ಕಟ್ಟಿಕೊಂಡಿರುವವರಿಗೆ ಇಲ್ಲಿ ಕಿರುಚಿತ್ರ ನಿರ್ದೇಶನಕ್ಕೂ ಅವಕಾಶ ಮಾಡಿಕೊಡುತ್ತಿದ್ದು, ಆ ಕಿರುಚಿತ್ರದ ನಿರ್ಮಾಣವನ್ನೂ ಆರ್‌ಕೆ ಮಿತ್ರ ಫಿಲ್ಮ್ಮ್ಸ್‌ ಅಕಾಡೆಮಿ ನೋಡಿಕೊಳ್ಳಲಿದೆ. ಅವರ ಶಾರ್ಟ್‌ ಸಿನಿಮಾ ನಮ್ಮದೇ ಚಾನೆಲ್‌ನಲ್ಲೂ ಪ್ರಸಾರ ಮಾಡಲಿದ್ದೇವೆ. ರಾಜ್ಯದ ಯಾವುದೇ ಮೂಲೆಯಿಂದಲೂ ಸಿನಿಮಾ ಮೇಲೆ ಪ್ರೀತಿ ಇದ್ದವರು ಬಂದವರಿಗೆ ಇಲ್ಲಿ ಅವಕಾಶವಿದೆ. ಮೊದಲು ರಿಜಿಸ್ಟರ್‌ ಮಾಡಿಕೊಂಡವರಿಗೆ ಮೊದಲ ಆದ್ಯತೆ. ಇಲ್ಲಿ ಸಂಪೂರ್ಣ ಹೊಸ ರೀತಿಯ ಅನುಭವದ ಜೊತೆ, ನಟನೆ ಕಲಿಕೆಯ ವೇದಿಕೆ ವ್ಯವಸ್ಥೆ ಮಾಡಲಾಗುವುದು” ಎನ್ನುತ್ತಾರೆ ಮಿತ್ರ.

Categories
ಸಿನಿ ಸುದ್ದಿ

ಬಂಧಿತ ದಿಶಾ ಬೆಂಬಲಿಸಿ ನಟಿ ರಮ್ಯಾ ಪೋಸ್ಟ್‌!

ರೈತರ ಹೋರಾಟ ಬೆಂಬಲಿಸಿ ಟೂಲ್‌ಕಿಟ್‌ ಸೃಷ್ಟಿ ಮಾಡಿದ ಆರೋಪದಡಿ ಬಂಧಿತರಾಗಿರುವ ದಿಶಾ ರವಿ ಬೆಂಬಲಿಸಿ ನಟಿ ರಮ್ಯಾ ಇನ್‌ಸ್ಟಾಗ್ರಾಂ ಪೋಸ್ಟ್ ಹಾಕಿದ್ದಾರೆ. ಈ ಸುದೀರ್ಘ ಪತ್ರದಲ್ಲಿ ರಮ್ಯಾ ಅವರು ಕೇಂದ್ರ ಸರ್ಕಾರದ ನಿಲುವನ್ನು ಪ್ರಶ್ನಿಸುತ್ತಲೇ ನಾಗರಿಕರ ಜವಾಬ್ದಾರಿಯನ್ನೂ ನೆನಪು ಮಾಡಿದ್ದಾರೆ.

21ರ ಹರೆಯದ ಬೆಂಗಳೂರಿನ ಯುವತಿ ದಿಶಾ ರವಿ ಅವರನ್ನು ಮೊನ್ನೆ ದಿಲ್ಲಿ ಪೊಲೀಸರು ಬಂಧಿಸಿದ ಕರೆದೊಯ್ದಿದ್ದಾರೆ. ರೈತರ ಹೋರಾಟಕ್ಕೆ ಸಂಬಂಧಿಸಿದಂತೆ ಜಾಗತಿಕ ಹೋರಾಟಗಾರರಿಗೆ ಟೂಲ್‌ಕಿಟ್‌ನೊಂದಿಗೆ ನೆರವಾಗಿದ್ದಾರೆ ಎನ್ನುವ ಆರೋಪ ಅವರ ಮೇಲಿದೆ. ದಿಶಾರನ್ನು ಬೆಂಬಲಿಸಿರುವ ರಮ್ಯಾ, “ಈಗ ದಿಶಾ ಜೈಲಿನಲ್ಲಿದ್ದರೆ ಅದಕ್ಕೆ ನಾವೆಲ್ಲರೂ ಹೊಣೆಗಾರರು. ಮೂಕಪ್ರೇಕ್ಷಕರಂತೆ ನೋಡುತ್ತಾ ಕುಳಿತಿರುವ ನಾವು ದಿಟ್ಟತನದಿಂದ ಮಾತನಾಡಿ ಎಷ್ಟು ಸಮಯವಾಗಿದೆ?” ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ಜನರು ತಮ್ಮ ಅಧಿಕಾರ, ದನಿಯನ್ನೇ ಮರೆತಿದ್ದಾರೆ ಎನ್ನುವುದು ಅವರ ಅಸಮಾಧಾನ. “ಜನರಿಂದ, ಜನರಿಗಾಗಿ ಸರ್ಕಾರ ಎನ್ನುವುದನ್ನು ಮರೆತಿದ್ದೇವೆ. ಆ ಯುವತಿ ತನ್ನದೇ ಒಂದು ಸ್ವಂತ ವ್ಯಕ್ತಿತ್ವ, ನಿಲುವು ಹೊಂದಿರುವುದಕ್ಕಾಗಿ ಇಂದು ಜೈಲಿನಲ್ಲಿದ್ದಾರೆ. ಪರಿಸರ ಹೋರಾಟಕ್ಕಾಗಿ ತನ್ನ ಬದುಕನ್ನು ಮುಡಿಪಾಗಿಟ್ಟಿರುವ ಆಕೆಯನ್ನು ನಾವು ಬೆಂಬಲಿಸದಿದ್ದರೆ ಹೇಗೆ? ನಾವೆಲ್ಲರೂ ದಿಶಾ ಪರ ನಿಲ್ಲೋಣ” ಎನ್ನುವ ರಮ್ಯಾ ಪೋಸ್ಟ್‌ಗೆ ಪರ-ವಿರೋಧದ ನೂರಾರು ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

error: Content is protected !!