Categories
ಸಿನಿ ಸುದ್ದಿ

ಹೊಸ ರೂಪದಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ಬಯೋಗ್ರಫಿ!! ಎರಡನೇ ಮುದ್ರಣ ಪಡೆದ ಲೇಖಕ ಡಾ. ಶರಣು ಹುಲ್ಲೂರು ಪುಸ್ತಕ

ವಿಶ್ವ ಪುಸ್ತಕ ದಿನದಂದು ಕನ್ನಡದ ಹೆಸರಾಂತ ನಟ, ರಾಜಕಾರಣಿ ರೆಬೆಲ್ ಸ್ಟಾರ್ ಅಂಬರೀಶ್ ಅವರ ಬಯೋಗ್ರಫಿ ಹೊಂದಿದ “ಅಂಬರೀಶ್-‌ ವ್ಯಕ್ತಿ-ವ್ಯಕ್ತಿತ್ವ- ವರ್ಣರಂಜಿತ ಬದುಕು” ಪುಸ್ತಕ ಈಗ ಹೊಸ ರೂಪ ಪಡೆದುಕೊಂಡಿದೆ. ಹೌದು, ಇದು ವಿಶೇಷವೇ ಸರಿ. ಕಳೆದ 2018ರಲ್ಲಿ ಬಿಡುಗಡೆಯಾದ ಈ ಪುಸ್ತಕವನ್ನು ನಾಡಿನ ಹೆಸರಾಂತ ಪ್ರಕಾಶನ ಸಂಸ್ಥೆ ಸಾವಣ್ಣ ಪ್ರಕಾಶನ ಈ ಪುಸ್ತಕವನ್ನು ಹೊರತಂದಿತ್ತು. ಬಿಡುಗಡೆಯಾಗಿದ್ದೇ ತಡ, ಈ ಪುಸ್ತಕಕ್ಕೆ ಭಾರೀ ಬೇಡಿಕೆ ಬಂದಿತ್ತು.

ಮುದ್ರಣಗೊಂಡಿದ್ದ ಎಲ್ಲಾ ಪುಸ್ತಕಗಳೂ ಖಾಲಿಯಾಗಿದ್ದವು. ಹಾಗಾಗಿ ಸಾವಣ್ಣ ಪ್ರಕಾಶನ ಈಗ ಎರಡನೇ ಮುದ್ರಣ ಮಾಡಿದೆ. ಪ್ರಕಾಶನ ಸಂಸ್ಥೆಯಿಂದ ಹೊರ ಬಂದಿರುವ ಈ ಎರಡನೇ ಮುದ್ರಣದ ಪುಸ್ತಕ, ಹೊಸ ವಿನ್ಯಾಸ ಮತ್ತು ಹೊಸ ಮುಖಪುಟ ಹೊತ್ತು ಬಂದಿದೆ. ಇತ್ತೀಚೆಗೆ ಲೇಖಕ ಡಾ.ಶರಣು ಹುಲ್ಲೂರು ಮತ್ತು ಪ್ರಕಾಶಕ ಜಮೀಲ್‌ ಸಾವಣ್ಣ ಅವರು ಸರಳವಾಗಿಯೇ ಬಿಡುಗಡೆ ಮಾಡಿದ್ದಾರೆ. ಮಂಡ್ಯದಲ್ಲಿ ಲಕ್ಷಾಂತರ ಅಭಿಮಾನಿಗಳ ಸಮ್ಮುಖದಲ್ಲಿ ಈ ಪುಸ್ತಕವನ್ನು ಸಂಸದೆ ಸುಮಲತಾ ಅಂಬರೀಶ್ ಅವರು ಬಿಡುಗಡೆ ಮಾಡಿದ್ದರು.

ಈ ಸಂದರ್ಭದಲ್ಲಿ ರಾಕಿಂಗ್ ಸ್ಟಾರ್ ಯಶ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕೂಡ ಜೊತೆಗಿದ್ದು, ಪುಸ್ತಕ ಬಿಡುಗಡೆಗೆ ಕೈ ಜೋಡಿಸಿದ್ದರು. ಈ ಪುಸ್ತಕಕ್ಕೆ ಅಪಾರ ಜನಮನ್ನಣೆ ಕೂಡ ಸಿಕ್ಕಿತು. ಅಲ್ಲದೇ ಕರ್ನಾಟಕ ಸರಕಾರ ನೀಡುವ ಚಲನಚಿತ್ರ ಸಾಹಿತ್ಯ ರಾಜ್ಯ ಪ್ರಶಸ್ತಿ ಕೂಡ 2018ರಲ್ಲಿ ಪುಸ್ತಕಕ್ಕೆ ಲಭಿಸಿದೆ. ಸದ್ಯ “ಅಂಬರೀಶ್-‌ ವ್ಯಕ್ತಿ-ವ್ಯಕ್ತಿತ್ವ- ವರ್ಣರಂಜಿತ ಬದುಕು “ಪುಸ್ತಕ ಎಲ್ಲ ಮಳಿಗೆಗಳಲ್ಲೂ ಸಿಗಲಿದೆ. ಹಾಗೆಯೇ ಸಾವಣ್ಣ ಪ್ರಕಾಶನದಲ್ಲೂ ಲಭ್ಯವಿದೆ.

Categories
ಸಿನಿ ಸುದ್ದಿ

ಕೊರೊನಾ ಸಂಖ್ಯೆ ಹೆಚ್ಚಾಗೋಕೆ ಸಿನಿಮಾ ಮಂದಿ ಕಾರಣ! ಸಿ.ಟಿ.ರವಿ ಹೇಳಿಕೆಗೆ ಸ್ಯಾಂಡಲ್‌ವುಡ್‌ ಆಕ್ರೋಶ!!

ಅದೇನೋ ಗೊತ್ತಿಲ್ಲ. ಎಲ್ಲರೂ ಸಿನಿಮಾರಂಗವನ್ನೇ ಟಾರ್ಗೆಟ್‌ ಮಾಡಿದಂತಿದೆ. ಸಿನಿಮಾ ಮಂದಿಯಿಂದಲೇ ಕೊರೊನಾ ಸಂಖ್ಯೆ ಹೆಚ್ಚಾಗುತ್ತಿದೆ ಎಂಬರ್ಥದಲ್ಲೇ ಎಲ್ಲರೂ ಮಾತಾಡುತ್ತಿದ್ದಾರೆ. ಈಗ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ.ರವಿ ಕೂಡ ಕೊರೊನಾ ಪ್ರಕರಣ ಹೆಚ್ಚಾಗಲೂ ಸಿನಿಮಾ ರಂಗದವರೇ ಪರೋಕ್ಷ ಕಾರಣ ಎಂದು ಹೇಳಿದ್ದಾರೆ. ಏಪ್ರಿಲ್‌ 22 ರಂದು ಸುಮನಹಳ್ಳಿಗೆ ಭೇಟಿ ನೀಡಿದ್ದ ರವಿ ಅವರಿಗೆ ಮೃತರ ಕುಟುಂಬದವರು ಹಾಗು ಗ್ರಾಮಸ್ಥರು ಮುತ್ತಿಗೆ ಹಾಕಿದ್ದರು. ಆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಿ.ಟಿ.ರವಿ, ಕೊರೊನಾ ಹೆಚ್ಚಾಗಲು ಸರ್ಕಾರ ಕಾರಣವಲ್ಲ ಎಂದು ಸಮರ್ಥಿಸಿಕೊಳ್ಳುತ್ತಲೇ, ಸರ್ಕಾರದ ಮೇಲೆ ಚಿತ್ರರಂಗದವರು ಹಾಗು ಇತರರು ಒತ್ತಡ ಹೇರಿದ್ದರಿಂದ ಇಂದು ಕೊರೊನಾ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿದೆ ಎಂದಿದ್ದಾರೆ.

ಸರ್ಕಾರ ಈ ಹಿಂದೆ ಕೊರೊನಾ ಹಾವಳಿ ತಡೆಗೆ ಥಿಯೇಟರ್ ಬಂದ್ ಮಾಡಬೇಕು, ಜಿಮ್ ಬಂದ್ ಮಾಡಬೇಕು ಎಂದು ನಿರ್ಧರಿಸಿದ ಸಂದರ್ಭದಲ್ಲಿ ಚಿತ್ರರಂಗದವರು ಬಂದು ಒಕ್ಕೊರಲ ಧ್ವನಿ ಎತ್ತಿದರು. ಹಾಗಾಗಿ ಸರ್ಕಾರ ತುಸು ಸಡಿಲ ನಿರ್ಧಾರ ಕೈಗೊಂಡಿತು. ಜಿಮ್‌ ಬಂದ್ ಮಾಡೋಣ ಅಂತ ನಿರ್ಧರಿಸಿದಾಗಲೂ ಜಿಮ್‌ನವರು ಒತ್ತಡ ತಂದರು. ಆಗಲೂ ಸರ್ಕಾರ ತನ್ನ ನಿರ್ಧಾರವನ್ನು ಹಿಂದೆ ಪಡೆಯಬೇಕಾಯಿತು. ಇದರಿಂದ ಇಂದು ಸಮಸ್ಯೆ ತಲೆದೋರಿದೆ. ವಿಪಕ್ಷವೂ ಕೂಡ ಯಾಕೆ ಚಿತ್ರಮಂದಿರ ಬಂದ್ ಮಾಡಬೇಕು ಎಂದು ಪ್ರಶ್ನೆ ಮಾಡಿತು. ಮಾಧ್ಯಮಗಳು ಕೂಡ ಅದನ್ನೇ ಬಿತ್ತರಿಸಿದವು. ಯಾರೋ ಸೆಲೆಬ್ರಿಟಿ ಬಂದು ಸ್ಟೇಟ್‌ಮೆಂಟ್ ಕೊಟ್ಟ ಕೂಡಲೇ ಮಾಧ್ಯಮಗಳೆಲ್ಲಾ ಆ ಕಡೆ ಫೋಕಸ್ ಮಾಡಿದವು. ಅದಕ್ಕೆ ಇಂದು ದೊಡ್ಡ ಬೆಲೆ ತೆರಬೇಕಾಗಿದೆ ಎಂದಿದ್ದಾರೆ ರವಿ.

ಈ ಹಿಂದೆ ಪುನೀತ್ ರಾಜ್‌ಕುಮಾರ್ ಅಭಿನಯದ “ಯುವರತ್ನ” ಚಿತ್ರ ಬಿಡುಗಡೆಯಾಗಿ ಎರಡನೇ ದಿನಕ್ಕೆ ಶೇ.50ರಷ್ಟು ಆಸನ ಭರ್ತಿಗೆ ಸರ್ಕಾರ ಆದೇಶಿಸಿತು. ಸರ್ಕಾರದ ಈ ಕ್ರಮಕ್ಕೆ ಪುನೀತ್ ರಾಜ್‌ಕುಮಾರ್ ಸೇರಿದಂತೆ ಹಲವರು ತೀವ್ರವಾಗಿ ಖಂಡಿಸಿದ್ದರು. ನಂತರ ಪುನೀತ್‌ ಅವರು ಸಿಎಂ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು. ಆ ಬಳಿಕ ಆದೇಶವನ್ನು ಎರಡು ದಿನಗಳ ಮಟ್ಟಿಗೆ ಸಡಿಲಗೊಳಿಸಲಾಯಿತು. ಈಗ ನೋಡಿದರೆ, ಏಪ್ರಿಲ್ 21 ರಿಂದ ಮೇ 4 ರವರೆಗೆ ರಾಜ್ಯದಾದ್ಯಂತ ಚಿತ್ರಮಂದಿರಗಳು ಸಂಪೂರ್ಣ ಬಂದ್ ಆಗಿವೆ. ಅದೇನೆ ಇರಲಿ, ಸಿನಿಮಾರಂಗದವರಿಂದಲೇ ಕೊರೊನಾ ಸಂಖ್ಯೆ ಹೆಚ್ಚಾಗುತ್ತಿದೆ ಎಂಬ ಸಿ.ಟಿ.ರವಿ ಅವರ ಮಾತಿಗೆ ಸ್ಯಾಂಡಲ್‌ವುಡ್‌ ಜೋರಾದ ಧ್ವನಿ ಎತ್ತಿದೆ.

Categories
ಸಿನಿ ಸುದ್ದಿ

ಚಿತ್ರರಂಗಕ್ಕೆ ಕೊರೊನಾಘಾತ! ಸದ್ಯ ಐಸಿಯುನಲ್ಲಿ ಸ್ಯಾಂಡಲ್‌ವುಡ್‌; ಕಲಾವಿದರನ್ನೂ ಕಾಡುತ್ತಿದೆ ಹೆಮ್ಮಾರಿ

ಕನ್ನಡ ಚಿತ್ರರಂಗಕ್ಕೆ ಈ ಬಾರಿಯೂ ದೊಡ್ಡ ಹೊಡೆತವನ್ನೇ ಕೊಟ್ಟಿದೆ ಕೊರೊನಾ. ಹೌದು, ಕಳೆದ ವರ್ಷ ಕೊಟ್ಟ ದೊಡ್ಡ ಹೊಡೆತಕ್ಕೆ ಮಕಾಡೆ ಮಲಗಿದ್ದ ಚಿತ್ರರಂಗ, ಹೇಗೋ ಕಳೆದ ಅಕ್ಟೋಬರ್‌ ವೇಳೆಗೆ ಚೇತರಿಸಿಕೊಳ್ಳೋಕೆ ಶುರುಮಾಡಿತು. ಆ ನಂತರ ವೇಗ ಜೋರು ಮಾಡಿಕೊಂಡ ಚಿತ್ರರಂಗ, ಇನ್ನೇನು ತನ್ನ ಮೈಲೇಜ್‌ ಹೆಚ್ಚಾಯ್ತು ಅನ್ನುವ ಹೊತ್ತಿಗೆ ಕೊರೊನಾ ತನ್ನ ಎರಡನೇ ಅಲೆಯ ಹೊಡೆತ ಕೊಟ್ಟಿತು. ಸ್ಟಾರ್ಸ್‌ ಸಿನಿಮಾಗಳು ಕೂಡ ಇದರಿಂದ ತತ್ತರಿಸಿದ್ದು ಸುಳ್ಳಲ್ಲ. ಈಗ ಇಡೀ ಚಿತ್ರರಂಗಕ್ಕೆ ಕೊರೊನಾಘಾತವಾಗಿದೆ. ಸದ್ಯಕ್ಕೆ ಸ್ಯಾಂಡಲ್‌ವುಡ್‌ ಐಸಿಯುನಲ್ಲಿದೆ. ಕೊರೊನಾ ಇಂತಹವರಿಗಷ್ಟೇ ಆವರಿಸಿಕೊಳ್ಳುತ್ತೆ ಎಂಬುದೆಲ್ಲಾ ಸುಳ್ಳು. ಈಗಾಗಲೇ ಸಾಕಷ್ಟು ನಟ, ನಿರ್ಮಾಪಕ, ನಿರ್ದೇಶಕರು ಸೇರಿದಂತೆ ತಾಂತ್ರಿಕ ವರ್ಗದವರನ್ನೂ ಆವರಿಸಿಕೊಂಡಿದೆ. ಕೊರೊನಾ ನೃತ್ಯಕ್ಕೆ ನಲುಗಿರುವ ಸ್ಟಾರ್ಸ್‌, ಅದರಿಂದಾಚೆ ಬರೋಕೆ ಕಾಯುತ್ತಿದ್ದಾರೆ. ಕೊರೊನಾ ಅದೆಷ್ಟೋ ಸಿನಿಮಂದಿಯ ಬದುಕಲ್ಲಿ ಕರಾಳತೆಯನ್ನು ತುಂಬಿದೆ. ಸಿನಿಮಾರಂಗದಲ್ಲಿ ಕೆಲಸ ಮಾಡುತ್ತಿದ್ದ ಅನೇಕರ ಜೀವ ಪಡೆದುಕೊಂಡಿದೆ. ಅಷ್ಟೇ ಅಲ್ಲ, ಪ್ರತಿ ದಿನವೂ ಕೂಡ ನರಳುವಂತೆ ಮಾಡುತ್ತಿದೆ.


ಹಾಗೆ ನೋಡಿದರೆ, ಕೊರೊನಾ ಹೀರೋಗಳಿಗೆ, ನಟಿಮಣಿಗಳಿಗೆ ಬರಲ್ಲ ಅಂತಂದುಕೊಳ್ಳುವಂತಿಲ್ಲ. ಕೊರೊನಾಗೆ ಹೀರೋ, ಯಾರು, ನಾಯಕಿ ಯಾರು ಅನ್ನೋದು ಗೊತ್ತಿಲ್ಲ. ಅದಕ್ಕೆ ಎಲ್ಲರೂ ಒಂದೇ. ಈಗಾಗಲೇ ಬಾಲಿವುಡ್‌ ಸೇರಿದಂತೆ ಸೌತ್‌ ಇಂಡಿಯಾ ಫಿಲ್ಮ್‌ ಫೀಲ್ಡ್‌ನಲ್ಲಿರುವ ಅನೇಕರಿಗೆ ಕೊರೊನಾ ವಕ್ಕರಿಸಿದೆ. ಕೆಲವರು ಕೊರೊನಾ ಹೊಡೆತಕ್ಕೆ ರೋಸಿಹೋಗಿದ್ದಲ್ಲದೆ, ಪ್ರಾಣವನ್ನೂ ಬಿಟ್ಟಿದ್ದಾರೆ. ಕೊರೊನಾ ನಟಿ ಸಂಜನಾ, ನಟ ಪ್ರಜ್ವಲ್‌, ನಿರ್ದೇಶಕ ಗುರುಪ್ರಸಾದ್‌, “ಲವ್‌ ಮಾಕ್ಟೇಲ್”‌ ಖ್ಯಾತಿಯ ಡಾರ್ಲಿಂಗ್‌ ಕೃಷ್ಣ, ಮಿಲನಾ ದಂಪತಿ ಕೊರೊನಾ ಪಾಸಿಟಿವ್‌ ಆಗಿದೆ. ಇನ್ನು, ನಟಿ ಅನು ಪ್ರಭಾಕರ್‌ಗೆ ಕೊರೊನಾ ಪಾಸಿಟಿವ್ ವರದಿ ಬಂದಿದೆ. ಈ ಬಗ್ಗೆ ಅನು ಪ್ರಭಾಕರ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ತುಂಬಾ ಸುರಕ್ಷಿತವಾಗಿ, ಎಲ್ಲಾ ಮುನ್ನೆಚ್ಚರಿಕೆ ತೆಗೆದುಕೊಂಡರೂ ಕೊರೊನಾ ಸೋಂಕು ತಗುಲಿದೆ ಎಂದು ಅನು ಪ್ರಭಾಕರ್ ಹೇಳಿದ್ದಾರೆ. ಸದ್ಯ ಅವರು ಮನೆಯಲ್ಲೇ ಕ್ವಾರಂಟೈನ್ ಆಗಿದ್ದು, ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನು, ಕೊರೊನಾ ಸಮಸ್ಯೆಯಿಂದಾಗಿ ಚಿತ್ರರಂಗದ ಹಲವು ಮಂದಿ ಅಸುನೀಗಿದ್ದಾರೆ. ಕಳೆದ ವರ್ಷ ಮೃತಪಟ್ಟವರ ಸಂಖ್ಯೆ ಲೆಕ್ಕಕ್ಕಿಲ್ಲ. ಈ ವರ್ಷದ ಎರಡನೇ ಅಲೆಗೆ ಚಿತ್ರರಂಗದ ಖ್ಯಾತ ಡಿಸೈನರ್ ಮತ್ತು ನಿರ್ದೇಶಕ ಮಸ್ತಾನ್ ಬಲಿಯಾಗಿದ್ದಾರೆ. ನಿರ್ದೇಶಕ ಮಸ್ತಾನ್ ಇತ್ತೀಚಿಗೆ ಕೊರೊನಾ ಪಾಸಿಟಿವ್‌ನಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಹೆಸರು ಘಟ್ಟ ಬಳಿ ಇರುವ ಸಪ್ತಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಇಹಲೋಕ ತ್ಯಜಿಸಿದ್ದಾರೆ. ಅಂತೆಯೇ ಸಿನಿಮಾ ಪತ್ರಕರ್ತ ಕರುಣೇಶ ಕೂಡ ಕೊರೊನಾ ಪಾಸಿಟಿವ್‌ನಿಂದಾಗಿ ಮೃತಪಟ್ಟಿದ್ದಾರೆ. ಹಲವು ನಟ,ನಟಿಯರು ಕೊರೊನಾದಿಂದ ಎಚ್ಚರ ವಹಿಸಬೇಕು ಎಂದು ಮನವಿ ಮಾಡಿದ್ದಾರೆ. ಮನೆಯಲ್ಲೇ ಇದ್ದು, ಎಲ್ಲೂ ಹೋಗದ ಹಾಗೆ ಎಚ್ಚರವಹಿಸಿ ಎಂದು ಹೇಳಿದ್ದಾರೆ. ಅದೇನೆ ಇದ್ದರೂ, ಚಿತ್ರರಂಗ ಮಾತ್ರ ಕೊರೊನಾ ಹೊಡೆತಕ್ಕೆ ನಲುಗಿರುವುದಂತೂ ನಿಜ. ಬೆಂಬಿಡದೆ ಕಾಡುತ್ತಿರುವ ಕೊರೊನಾ ಅಲೆ ಕಡಿಮೆ ಆಗೋವರೆಗೆ ಚಿತ್ರರಂಗ ಕೂಡ ಮೇಲೇಳುವುದಿಲ್ಲ ಎಂಬುದು ಸಿನಿಪಂಡಿತರ ಲೆಕ್ಕಾಚಾರ.

Categories
ಸಿನಿ ಸುದ್ದಿ

ಕಷ್ಟದಲ್ಲಿರೋ ನಿಮ್ಮ ಅಭಿಮಾನಿಗಳಿಗೆ ಏನಾದ್ರೂ ಮಾಡ್ಲಿಕ್ಕಾಗುತ್ತಾ ಡಿಯರ್‌ ಸ್ಟಾರ್ಸ್ಸ್‌? ಫ್ಯಾನ್ಸ್‌ ಪರವಾಗಿ ಸ್ಟಾರ್ಸ್‌ಗೆ ಮನಮಿಡಿಯುವ ಬಹಿರಂಗ ಪತ್ರ ಬರೆದ ವೀರಕಪುತ್ರ ಶ್ರೀನಿವಾಸ್

ದಿನ ಕಳೆದಂತೆ ಕೊರೊನಾ ಹಾವಳಿ ಹೆಚ್ಚುತ್ತಲೇ ಇದೆ. ಸೋಂಕಿತರು ಕೂಡ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಅದೆಷ್ಟೋ ಮಂದಿ ಸರಿಯಾದ ಚಿಕಿತ್ಸೆ ಸಿಗದೆ ಸಾವಿಗೀಡಾಗುತ್ತಿದ್ದಾರೆ. ಇದು ತುಂಬಾನೇ ಆಘಾತಕಾರಿ ವಿಷಯ. ಇಂತಹ ಸಮಯದಲ್ಲಿ ಸ್ಟಾರ್‌ ನಟ,ನಟಿಯರು ಯಾಕೆ ಸಹಾಯಕ್ಕೆ ನಿಲ್ಲಬಾರದು? ಈ ಪ್ರಶ್ನೆ ಈಗ ಎಲ್ಲೆಡೆ ಜೋರು ಸದ್ದು ಮಾಡುತ್ತಿದೆ. ಹೀಗೆ ಕೇಳಿರೋದು ಬೇರಾರೂ ಅಲ್ಲ, ಡಾ.ವಿಷ್ಣುವರ್ಧನ್ ಅವರ ಅಪ್ಪಟ ಅಭಿಮಾನಿ ವೀರಕಪುತ್ರ ಶ್ರೀನಿವಾಸ್. ಹೌದು, ಈ ಕುರಿತಂತೆ ಅವರೀಗ ಸ್ಟಾರ್‌ ನಟರಿಗೆ ಒಂದು ಪತ್ರ ಬರೆದಿದ್ದಾರೆ. ಆ ಮೂಲಕ ಅವರು ಪ್ರೀತಿಯಿಂದಲೇ ಮನವಿ ಮಾಡಿದ್ದಾರೆ. ನೀವು ಕೋಟ್ಯಾಂತರ ಫ್ಯಾನ್ಸ್‌ಗೆ ಹೀರೋ ಆಗಿದ್ದೀರಿ. ಈಗ ನಿಮ್ಮನ್ನು ಪ್ರಾಣಕ್ಕಿಂತಲೂ ಹೆಚ್ಚಾಗಿ ಪ್ರೀತಿಸುವ ಅಭಿಮಾನಿಗಳು ಕಷ್ಟದಲ್ಲಿದ್ದಾರೆ. ಅಂತಹವರನ್ನು ಗುರುತಿಸಿ ಸಹಾಯಕ್ಕೆ ಮುಂದಾಗಿ ಎಂದು ಮನಮಿಡಿಯುವಂತೆ ಪತ್ರವೊಂದನ್ನು ಬರೆದಿದ್ದಾರೆ. ಅಂದಹಾಗೆ, ವೀರಕಪುತ್ರ ಶ್ರೀನಿವಾಸ್‌ ಅವರು ಬರೆದ ಸುದೀರ್ಘ ಪತ್ರದ ಸಾರಾಂಶವಿದು.

  • ಓಹ್ ಹೌದಾ.., ಹಾಗಾದ್ರೆ ಒಂದಷ್ಟು ಕುಟುಂಬಗಳಿಗೆ ಅಕ್ಕಿ ಕೊಡ್ತೀವಿ! ಒಂದಷ್ಟು ಹೊಟ್ಟೆಗಳಿಗೆ ಅನ್ನ ನೀಡ್ತೀವಿ! ಮಾಸ್ಕ್ ವಿತರಿಸ್ತೀವಿ.. ಒಂದಷ್ಟು ಜನರನ್ನು ಊರುಗಳಿಗೆ ತಲುಪಿಸೋಕೆ ಗಾಡಿ ಕಳಿಸ್ತೀವಿ..
  • ಈ ರೀತಿ ಹೇಳುವ ಸಪ್ಪೆ ನಿರ್ಧಾರಗಳಿಗೆ ಬರಬೇಡಿ ಪ್ಲೀಸ್. ಇಲ್ಲಿ ಜನರ ಜೀವಗಳು ಹೋಗ್ತಿವೆ. ನಿಜಕ್ಕೂ ಏನಾದ್ರೂ ಮಾಡುವುದಿದ್ದರೆ ನಿಮ್ಮ ಸಂಪರ್ಕ, ಪ್ರಭಾವ ಬಳಸಿ ಜನರ ಜೀವಗಳನ್ನು ಕಾಪಾಡಿ.
  • ನಿಮ್ಮ ತೋಟದ ಮನೆಯಲ್ಲೋ, ನಿಮ್ಮ ಹೋಟೆಲ್ ಗಳಲ್ಲೋ, ಅಥವಾ ನಿಮಗೆ ಗೊತ್ತಿರುವ ಕಲ್ಯಾಣಮಂಟಪಗಳಲ್ಲೋ ಒಂದು ನೂರಿನ್ನೂರು ಬೆಡ್‌ಗಳ ಕೋವಿಡ್ ಕೇರ್ ಸೆಂಟರ್ ತೆರೆದಿಡಿ.

ಕೋಟಿ ಕೋಟಿ ಅಭಿಮಾನಿಗಳನ್ನು ಪಡೆದ ಸಾಧಕರು ನೀವು. ತಾಯಿ ಪ್ರೀತಿ ನಂತರ ಅಭಿಮಾನಿಗಳ ಪ್ರೀತಿಯೇ ಅತ್ಯಂತ ಶ್ರೇಷ್ಠವಾದದ್ದು ಎಂಬುದು ನನ್ನ ನಂಬಿಕೆ. ನೀವು ಎಂದೂ ಅವರನ್ನು ನೋಡಲ್ಲ, ನೋಡಿದ್ರೂ ಮಾತನಾಡಿಸಲ್ಲ. ಮಾತನಾಡಿಸಿದ್ರೂ ನಿಮಗೆ ಆ ವ್ಯಕ್ತಿ ಅದರಾಚೆ ನೆನಪಿರಲ್ಲ. ಆದರೂ ಆ ಅಭಿಮಾನಿ ನಿಮ್ಮನ್ನು ಅವನ ಜೀವನದ ಆರಾಧ್ಯದೈವವನ್ನಾಗಿಸಿಕೊಳ್ತಾನೆ. ಜೀವನವಿಡೀ ನಿಮ್ಮನ್ನೇ ಧ್ಯಾನಿಸುತ್ತಾನೆ! ನಿಮ್ಮ ಬಗ್ಗೆ ಎಳ್ಳಷ್ಟು ಅಪಪ್ರಚಾರವಾದ್ರೂ ಹಿಂದೆ ಮುಂದೆ ಯೋಚಿಸದೆ ನಿಮ್ಮ ಪರ ನಿಂತು ಬಿಡ್ತಾನೆ. ನಿಮಗೆ ಕಿಂಚಿತ್ತು ತೊಂದ್ರೆಯಾದ್ರೂ ನೊಂದು ಹೋಗ್ತಾನೆ. ಅಂತಹ ಅಭಿಮಾನಿ ಇವತ್ತು ಕಷ್ಟದಲ್ಲಿದ್ದಾನೆ. ಸೋಂಕಿಗೆ ಒಳಗಾಗುತ್ತಿರುವ ಲಕ್ಷಾಂತರ ಜನರಲ್ಲಿ ನಿಮ್ಮ ಅಭಿಮಾನಿಗಳೂ ಇದ್ದಾರೆ. ಆದ್ರೆ ಅವರು ತಮ್ಮ ಕಷ್ಟವನ್ನು ನಿಮ್ಮ ತನಕ ತಲುಪಿಸಲಾರರು. ಏಕೆಂದರೆ ನೀವು ಅವರಿಗೆ ಗೊತ್ತೇ ವಿನಃ, ಅವರು ನಿಮಗೆ ಗೊತ್ತಿಲ್ಲ. ನಿಮ್ಮ ಹುಟ್ದಬ್ಬಕ್ಕೆ ಗಂಟೆಗಟ್ಟಲೆ ಕ್ಯೂನಲ್ಲಿ ನಿಂತು ನಿಮಗೆ ವಿಶ್ ಮಾಡಿ ಗೊತ್ತಿದೆಯೇ ಹೊರತು, ನಿಮ್ಮ ಸಂಪರ್ಕದಲ್ಲಿರೋದು ಗೊತ್ತಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಪರವಾಗಿ ವರ್ಷಗಟ್ಟಲೆ ಪ್ರಚಾರ ಮಾಡೋದು, ಜಗಳ ಮಾಡೋದು ಗೊತ್ತೇ ವಿನಃ, ನಿಮ್ಮಿಂದ ಏನನ್ನೂ ನಿರೀಕ್ಷಿಸಿ ಗೊತ್ತಿಲ್ಲ. ನಿಮ್ಮ ಸಿನಿಮಾ ಬಿಡುಗಡೆಯಾದಾಗ ಜಾತ್ರೆಯಂತೆ ಖರ್ಚುಮಾಡಿ ಸಂಭ್ರಮಿಸುವುದು ಗೊತ್ತಿದೆಯೇ ವಿನಃ, ಅಷ್ಟೇ ಸಲೀಸಾಗಿ ಕೊರೊನಾಗೆ ಚಿಕಿತ್ಸೆ ಪಡೆಯುವುದು ಹೇಗೆಂದು ಗೊತ್ತಿಲ್ಲ.


ಅಂತಹವರಿಗಾಗಿ ಏನಾದ್ರೂ ಮಾಡ್ಲಿಕ್ಕಾಗುತ್ತಾ ಡಿಯರ್ ಸ್ಟಾರ್ಸ್?
ಕಷ್ಟದಲ್ಲಿರುವ ಅಭಿಮಾನಿಗಳನ್ನು ಹುಡುಕುವುದು ಕಷ್ಟ ಅನ್ನೋದು ಗೊತ್ತು. ನೀವೇನಾದ್ರೂ ಸಹಾಯ ಮಾಡ್ತೀನಿ ಅಂತ ಮುಂದೆ ಬಂದ್ರೆ ಆಕಾಂಕ್ಷಿಗಳು ಸಾವಿರಾರು ಸಂಖ್ಯೆಯಲ್ಲಿ ಬರುತ್ತಾರೆ ಅನ್ನೋದು ಗೊತ್ತು. ಆದ್ರೂ ಏನಾದ್ರೂ ಮಾಡಬಹುದಾ ಈ ಸಂದರ್ಭದಲ್ಲಿ ನೋಡಿ ಪ್ಲೀಸ್. ಏಕೆಂದರೆ ಈ ಸಮಾಜ ನೀವು ಚೆನ್ನಾಗಿರಲು ಏನೆಲ್ಲಾ ಕೊಟ್ಟಿದೆ. ಅಂತಹ ಸಮಾಜ ಇಂದು ಕಷ್ಟದಲ್ಲಿರುವಾಗ “ಸ್ಟೇ ಹೋಮ್‌, ಸ್ಟೇ ಸೇಫ್‌” ಅಂತ ಉಚಿತ ಸಲಹೆಯೊಂದನ್ನು ಕೊಟ್ಟು ನಮ್ಮಂತಹ ಸಾಮಾನ್ಯರಂತೆ ನೀವೂ ಗೂಡು ಸೇರಿ ಕೂತು ಬಿಡೋದು ಯಾವ ನ್ಯಾಯ? ನಿಮಗೆ ಈ ಅಭಿಮಾನಿಗಳು ಮತ್ತು ಸಮಾಜ ನೀಡಿರುವ ಸ್ಥಾನಮಾನ ಸಾಮಾನ್ಯದಲ್ಲವಲ್ಲ?

ಓಹ್ ಹೌದಾ.., ಹಾಗಾದ್ರೆ ಒಂದಷ್ಟು ಕುಟುಂಬಗಳಿಗೆ ಅಕ್ಕಿ ಕೊಡ್ತೀವಿ! ಒಂದಷ್ಟು ಹೊಟ್ಟೆಗಳಿಗೆ ಅನ್ನ ನೀಡ್ತೀವಿ! ಮಾಸ್ಕ್ ವಿತರಿಸ್ತೀವಿ.. ಒಂದಷ್ಟು ಜನರನ್ನು ಊರುಗಳಿಗೆ ತಲುಪಿಸೋಕೆ ಗಾಡಿ ಕಳಿಸ್ತೀವಿ..
ಈ ರೀತಿ ಹೇಳುವ ಸಪ್ಪೆ ನಿರ್ಧಾರಗಳಿಗೆ ಬರಬೇಡಿ ಪ್ಲೀಸ್. ಇಲ್ಲಿ ಜನರ ಜೀವಗಳು ಹೋಗ್ತಿವೆ. ನಿಜಕ್ಕೂ ಏನಾದ್ರೂ ಮಾಡುವುದಿದ್ದರೆ ನಿಮ್ಮ ಸಂಪರ್ಕ, ಪ್ರಭಾವ ಬಳಸಿ ಜನರ ಜೀವಗಳನ್ನು ಕಾಪಾಡಿ. ನಿಮ್ಮ ತೋಟದ ಮನೆಯಲ್ಲೋ, ನಿಮ್ಮ ಹೋಟೆಲ್ ಗಳಲ್ಲೋ, ಅಥವಾ ನಿಮಗೆ ಗೊತ್ತಿರುವ ಕಲ್ಯಾಣಮಂಟಪಗಳಲ್ಲೋ ಒಂದು ನೂರಿನ್ನೂರು ಬೆಡ್‌ಗಳ ಕೋವಿಡ್ ಕೇರ್ ಸೆಂಟರ್ ತೆರೆದಿಡಿ. ಎಷ್ಟೋ ಜನ ಸಣ್ಣ ಸಣ್ಣ ರೂಮುಗಳಲ್ಲಿ, ಸಿಂಗಲ್ ಬೆಡ್ ರೂಮ್ ಇರುವ ಮನೆಗಳಲ್ಲಿ ವಾಸಿಸ್ತಿದ್ದಾರೆ. ದುಡಿಯಲು ಹೊರಗಡೆ ಹೋಗುವ ಒಬ್ಬರಿಗೆ ಕೊರೊನಾ ಬಂದರೆ ಮನೆಯವರೆಲ್ಲರೂ ಕೊರೊನಾ ಸೋಂಕಿಗೆ ಒಳಗಾಗಬೇಕಾದ ಪರಿಸ್ಥಿತಿ ಇದೆ.

ಅಂತಹವರಿಗೆ ನಿಮ್ಮ ಕೋವಿಡ್ ಕೇರ್ ಸೆಂಟರ್ ಆದ್ಯತೆ ನೀಡಲಿ. ಜೊತೆಗೆ ಸರ್ಕಾರದ ಜೊತೆ ನಿರಂತರ ಸಂಪರ್ಕ ಸಾಧಿಸಿ ನಿಜಕ್ಕೂ ಅಗತ್ಯವಿರುವಂತಹವರಿಗೆ ಹಾಸಿಗೆ, ಆಕ್ಸಿಜನ್ ಗಳನ್ನು ದೊರಕಿಸಿಕೊಡಿ! ಕೊರೊನಾ ಬಂದಿದ್ದಕ್ಕೆ ಜನ ಸಾಯ್ತಿಲ್ಲ, ಸರ್ಕಾರ ಚಿಕಿತ್ಸೆ ನೀಡಲು ವಿಫಲವಾಗಿರುವ ಕಾರಣಕ್ಕೆ ಜನ ಸಾಯ್ತಿರೋದು. ಅಂತಹ ಅಸಹಾಯಕರಿಗೆ ತಮ್ಮ ಸಹಾಯಹಸ್ತ ಸಿಗಬಾರದೇಕೆ? ನಿಮ್ಮ ಮಾತನ್ನು ಅಷ್ಟು ಸಲೀಸಾಗಿ ಅಲ್ಲಗೆಳೆಯುವಂತಹ ಯಾವ ಮಂತ್ರಿಗಳೂ, ಆಸ್ಪತ್ರೆಗಳೂ ನಮ್ಮ ಕರ್ನಾಟಕದಲ್ಲಿಲ್ಲ. ಈ ನಿಟ್ಟಿನಲ್ಲಿ ಯೋಚಿಸಬಾರದೇಕೆ?
ಕೊನೇ ಮಾತು..
ಭಾರತದಲ್ಲಿ ಸುಮಾರು ಸ್ಟಾರ್ ನಟರಿದ್ದಾರೆ. ಆದರೆ ಕೋವಿಡ್ ಬಂದ್ಮೇಲೆ ಜನ ರಿಯಲ್ ಸ್ಟಾರ್ ಎಂದು ಗುರುತಿಸಿದ್ದು ಮತ್ತು ಗೌರವಿಸಿದ್ದು ಬಾಲಿವುಡ್‌ ನಟ ಸೋನುಸೂದ್ ಎಂಬೊಬ್ಬ ಪೋಷಕನಟನನ್ನು ಮಾತ್ರ! ನಿಮ್ಮ ಅಭಿಮಾನಿಗಳಿಗೆ ನೀವು ಮಾದರಿಯಾಗಿರುವ ಹಾಗೆ, ನಿಮಗೆ ಸೋನುಸೂದ್ ಮಾದರಿಯಾಗಲೆಂದು ಆಶಿಸುವೆ..
-ವೀರಕಪುತ್ರ ಶ್ರೀನಿವಾಸ.

Categories
ಸಿನಿ ಸುದ್ದಿ

ಗುಳಿ ಕೆನ್ನೆ ಚೆಲುವೆಯ ಉಗ್ರ ಅವತಾರ : ಶಬರಿ ಆಗಿ ತೆರೆ ಮೇಲೆ ಬರುತ್ತಿದ್ದಾರೆ ಡಿಂಪಲ್‌ ಕ್ವೀನ್‌ !

ಡಿಂಪಲ್ ಕ್ವೀನ್ ರಚಿತಾ ರಾಮ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗುತ್ತಿದ್ದಾರೆ. ಈಗವರು ಶಬರಿ ಆಗಿ ತೆರೆ ಮೇಲೆ ಬರಲು ರೆಡಿ ಆಗಿದ್ದಾರೆ. ಹೌದು, ಶಬರಿ ಹೆಸರಿನ ಚಿತ್ರವೊಂದಕ್ಕೆ ಗುಳಿಕೆನ್ನೆ ಚೆಲುವೆ ರಚಿತಾ ರಾಮ್‌ ಫಿಕ್ಸ್‌ ಆಗಿದ್ದಾರೆ. ಶ್ರೀರಾಮ ನವಮಿ ದಿನವಾದ ಬುಧವಾರ ರಚಿತಾ ರಾಮ್‌ ಶಬರಿ ಆಗಿ ಅಭಿಮಾನಿಗಳ ಮುಂದೆ ಬರುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಹೌದು, ಡಿಂಪಲ್‌ ಕ್ವೀನ್ ರಚಿತಾ ರಾಮ್‌ ಅಭಿನಯದ ಹೊಸ ಚಿತ್ರಕ್ಕೆ ಶಬರಿ ಸರ್ಚಿಂಗ್‌ ಫಾರ್‌ ರಾವಣ ಅಂತ ಶೀರ್ಷಿಕೆ ಇಡಲಾಗಿದೆ. ಇದು ರಚಿತಾ ಅವರ ೩೬ ನೇ ಸಿನಿಮಾ. ರಾಮ ನವಮಿಯ ವಿಶೇಷವಾಗಿ ಚಿತ್ರದ ಫಸ್ಟ್ ಲುಕ್ ಮತ್ತು ಟೈಟಲ್ ಬಿಡುಗಡೆ ಮಾಡಲಾಗಿದೆ. ಪೋಸ್ಟರ್ ನಲ್ಲಿ ಉಗ್ರ ಅವತಾರ ತಾಳಿರುವ ರಚಿತಾ ಲುಕ್ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.ಅಂದಹಾಗೆ ಶಬರಿ ಸರ್ಚಿಂಗ್ ಫಾರ್ ರಾವಣ ಚಿತ್ರಕ್ಕೆ ನವೀನ್ ಶೆಟ್ಟಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇಷ್ಟು ದಿನ ಇಂಡಸ್ಟ್ರಿನಲ್ಲಿ ಸಂಕಲನಕಾರನಾಗಿ ಗುರುತಿಸಿಕೊಂಡಿದ್ದ ನವೀನ್ ಶಬರಿ ಸಿನಿಮಾ ಮೂಲಕ ನಿರ್ದೇಶಕರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಇದೊಂದು ಮಹಿಳಾ ಪ್ರಧಾನ ಚಿತ್ರ. ಇದರಲ್ಲಿ ರಚಿತಾ ರಾಮ್‌ ವಿಭಿನ್ನವಾಗಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಪೋಸ್ಟರ್ ಶೇರ್ ಮಾಡಿರುವ ರಚಿತಾ, ಎಲ್ಲರಿಗೂ ಶ್ರೀರಾಮ ನವಮಿಯ ಶುಭಾಶಯ ತಿಳಿಸಿದ್ದಾರೆ. ಜೊತೆಗೆ ಹೊಸ ಸಿನಿಮಾಗೆ ಎಲ್ಲರ ಆಶೀರ್ವಾದ ಇರಲಿ ಎಂದು ಕೇಳಿಕೊಂಡಿದ್ದಾರೆ. ಇನ್ನು ಶಬರಿ ಸರ್ಚಿಂಗ್ ಫಾರ್ ರಾವಣ ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ರಚಿತಾ ರಾಮ್ ಬಳಿ ಸದ್ಯ ಬ್ಯಾಡ್ ಮ್ಯಾನರ್ಸ್, ರಚ್ಚು ಐ ಲವ್ ಯು, ವೀರಂ, ಮ್ಯಾಟ್ನಿ, ಲಿಲ್ಲಿ, ಏಪ್ರಿಲ್, ಡಾಲಿ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ರಚಿತಾ ಬ್ಯುಸಿಯಾಗಿದ್ದಾರೆ

Categories
ಸಿನಿ ಸುದ್ದಿ

ರಾಜಕೀಯ ಬಿಜಿನೆಸ್‌ ಆಗಿದ್ದೇ ಇದಕ್ಕೆಲ್ಲ ಕಾರಣ ಅಲ್ವಾ ? ರಿಯಲ್‌ ಸ್ಟಾರ್‌ ಉಪೇಂದ್ರ ಪ್ರಶ್ನೆ

ಕೊರೋನಾ ಪರಿಸ್ಥಿತಿಯನ್ನು ನಿಯಂತ್ರಿಸುವಲ್ಲಿ ರಾಜ್ಯ ಸರ್ಕಾರ ತೋರಿರುವ ನಿರ್ಲಕ್ಷ್ಯಕ್ಕೆ ನಟ ಉಪೇಂದ್ರ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಸದ್ಯ ರಾಜ್ಯಾದ್ಯಂತ ಜನ ಸಾಮಾನ್ಯರ ಪರಿಸ್ಥಿತಿ ನೋಡಿದ್ರೆ, ಕರಳು ಹಿಂಡುತ್ತದೆ. ಆಸ್ಪತ್ರೆಗಳಲ್ಲಿ ಸಕಾಲಕ್ಕೆ ಸರಿಯಾದ ಚಿಕಿತ್ಸೆ ಸಿಗದ ಜನರ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇಂತಹ ಭೀಕರ ಪರಿಸ್ಥಿತಿ ಬರಬಹುದು ಅಂತ ಗೊತ್ತಿದ್ದರೂ ಸರ್ಕಾರಗಳು ಬಹುದೊಡ್ಡ ನಿರ್ಲಕ್ಷ್ಯ ತೋರಿದವು. ಅದೇ ಇವತ್ತಿನ ಪರಿಸ್ಥಿತಿಗೆಲ್ಲ ಕಾರಣ ಅಂತ ಉಪೇಂದ್ರ, ಕಿಡಿಕಾರಿದರು. ʼಲಗಾಮ್‌ʼ ಚಿತ್ರದ ಮುಹೂರ್ತದ ವೇಳೆ ಮಾಧ್ಯಮದವರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದರು.

ಚುನಾವಣೆ ಬಂದಾಗ ಯಾಕೆ ಯೋಚಿಸುವುದಿಲ್ಲ..?

ಮಿತಿ ಮೀರಿದ ಕೊರೋನಾ ಪರಿಸ್ಥಿತಿ, ಜನರ ಸಾವು_ನೋವಿನ ಘಟನಗೆಳಿಗೆ ಪ್ರಜಾಕೀಯದ ಪ್ರತಿಕ್ರಿಯೆ ಏನು ಎನ್ನುವ ಮಾಧ್ಯಮದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ಶಿಕ್ಷಣ ಖಾಸಗೀಕರಣ ಆದಂತೆಯೇ ಇವತ್ತು ರಾಜಕೀಯ ಅನ್ನೋದು ಬಿಸಿನೆಸ್‌ ಆಗಿರೋದ್ರಿಂದಲೇ ಜನರು ಇವತ್ತು ಅಸ್ಪತ್ರೆಗಳಲ್ಲಿ ಸಕಾಲಕ್ಕೆ ಸೌಲಭ್ಯ ಸಿಗದೆ ಜೀವ ಕಳೆದುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಲ್ಲಿ ಯಾರದು ಸರಿ, ಯಾರದು ತಪ್ಪು ಅಂತ ಹೇಳೋದೆ ಕಷ್ಟ. ಯಾಕಂದ್ರೆ ಜನ ಕೂಡ ಚುನಾವಣೆಗಳು ಬಂದಾಗ ತಮ್ಮ ಜವಾಬ್ದಾರಿಗಳನ್ನು ಮರೆತು ಬಿಡುತ್ತಾರೆ. ಆಗ ಜಾತಿ, ಹಣ, ಪಕ್ಷ ಅಂತೆಲ್ಲ ತಮ್ಮ ಮತಗಳನ್ನು ಇನ್ನಾವುದಕ್ಕೋ ಮೀಡಲಿಡುತ್ತಾರೆ. ಆಮೇಲೆ ಇಂತಹ ಪರಿಸ್ಥಿತಿ ನಿರ್ಮಾಣ ಆದಾಗ ಪ್ರತಿಭಟನೆ, ಧರಣಿ ಅಂತೆಲ್ಲ ಮಾತನಾಡುತ್ತಾರೆ ಅಂತ ಉಪೇಂದ್ರ ಬೇಸರ ಹೊರ ಹಾಕಿದರು.

ಕೊರೋನಾ ಅಂತ ಭಯ ಬೇಡ, ಧೈರ್ಯದಿಂದಿರಿ

ಖಾಸಗಿ ಆಸ್ಪತ್ರೆಗಳ ವೈದ್ಯರ ಪರಿಸ್ಥಿತಿ ಬಗ್ಗೆಯೂ ಮಾತನಾಡುವಂತಿಲ್ಲ. ಅವರು ಕೂಡ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮೆಡಿಕಲ್‌ ಕೊರ್ಸ್‌ ಮುಗಿಸಿ ಬಂದಿರುತ್ತಾರೆ. ಹಾಗೆಯೇ ಕೊಟ್ಯಾಂತರ ರೂ. ಖರ್ಚು ಮಾಡಿ ಆಸ್ಪತ್ರೆ ಕಟ್ಟುಕೊಂಡಿರುತ್ತಾರೆ. ಅವರು ತಮ್ಮ ಖರ್ಚು ವೆಚ್ಚಗಳ ನ್ನು ನೋಡಿಕೊಳ್ಳುವುದಕ್ಕೆ ಜನರಿಂದ ದುಬಾರಿ ಹಣ ಪಡೆಯುತ್ತಾರೆ. ಇದೆಲ್ಲದಕ್ಕೆ ಯಾರನ್ನು ದೂರೋಣ? ಇದಕ್ಕೆ ಇರೋದು ಒಂದೇ ದಾರಿ, ಜನರು ಚುನಾವಣೆ ಬಂದಾಗ ವಿಚಾರವಂತರಾಗಬೇಕು. ಸರಿಯಾದ ವ್ಯಕ್ತಿಗಳನ್ನು ಗೆಲ್ಲಿಸಿಕೊಳ್ಳಬೇಕು ಅಂತ ಉಪೇಂದ್ರ ಕಿವಿ ಮಾತು ಹೇಳಿದರು. ಹಾಗೆಯೇ ಕೊರೋನಾ ಅಂತ ಭಯ ಪಡುವುದು ಬೇಡ. ಧೈರ್ಯದಿಂದ ಇರಿ. ಕೆಲವೊಮ್ಮೆ ನಮ್ಮ ಧೈರ್ಯವೇ ರೋಗಕ್ಕೆ ಮದ್ದು. ಇದನ್ನು ಪಾಲಿಸಿ. ಹಾಗಂತ ಮಾಸ್ಕ್‌ ಹಾಗೂ ಸಾನಿಟೈಸರ್‌ ಬಳಸುವುದನ್ನು ಮರೆಯಬೇಡಿ ಅಂತ ಉಪೇಂದ್ರ ಹೇಳಿದರು.

Categories
ಸಿನಿ ಸುದ್ದಿ

ಉಪ್ಪಿ ಲಗಾಮ್‌ ಗೆ ಅದ್ಧೂರಿ ಮುಹೂರ್ತ – ರಿಯಲ್‌ ಸ್ಟಾರ್‌ ಗೆ ಪವರ್‌ ಸ್ಟಾರ್‌ ಸಾಥ್‌ !

ʼಗಜʼ ಚಿತ್ರದ ಖ್ಯಾತಿಯ ನಿರ್ದೇಶಕ ಕೆ. ಮಾದೇಶ್ ಇದೇ ಮೊದಲ ಬಾರಿಗೆ ನಾಲ್ಕು ಭಾಷೆಗಳಲ್ಲಿ ಹೊಚ್ಚ ಹೊಸ ಚಿತ್ರಕ್ಕೆ ಕೈ ಹಾಕಿದ್ದಾರೆ. ಅದರ ಹೆಸರೇ “ಲಗಾಮ್’. ಇದೇ ಶುಭ ಸೋಮವಾರ “ಲಗಾಮ್ʼ ಚಿತ್ರದ ಮುಹೂರ್ತ ಕಂಠೀರವ ಸ್ಟುಡಿಯೋದಲ್ಲಿ ಅದ್ಧೂರಿಯಾಗಿ ನೆರವೇರಿತು. ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್, ಚಿತ್ರಕ್ಕೆ ಮೊದಲ ಕ್ಲಾಪ್ ಮಾಡುವ ಮೂಲಕ ತಂಡಕ್ಕೆ ಶುಭ ಹಾರೈಸಿದರು. “ಲಗಾಮ್ʼ ಒಂದೊಳ್ಳೆ ಸಂದೇಶ ಇರುವ ಅದ್ಧೂರಿ ಕಮರ್ಷಿಯಲ್ ಸಿನಿಮಾ ಅಂತಾರೆ ಚಿತ್ರದ ನಾಯಕ ರಿಯಲ್ ಸ್ಟಾರ್ ಉಪೇಂದ್ರ. ಈ ರೀತಿಯ ಅದ್ದೂರಿ ಮುಹೂರ್ತ ಮಾಡಿ ಎರಡು ವರ್ಷಗಳೇ ಆಗಿತ್ತು. ಆದರೆ ಕೊರೋನಾ ಸಮಯದಲ್ಲೂ ಇಷ್ಟೊಂದು ಗ್ರ್ಯಾಂಡ್ ಆಗಿ ಮುಹೂರ್ತ ಮಾಡಿರುವುದೇ ಒಂದು ಪಾಸಿಟಿವ್ ಎನರ್ಜಿ. ಸಿನಿಮಾನೂ ಇಷ್ಟೇ ಗ್ರ್ಯಾಂಡಾಗಿ ಮೂಡಿಬರಲಿದೆ ಎಂಬ ಭರವಸೆ ನನಗಂತೂ ಇದೆ. ಒಳ್ಳೆ ತಂತ್ರಜ್ಞರು, ಒಳ್ಳೆ ಕಲಾವಿದರಿರುವ ಪಕ್ಕಾ ಕಮರ್ಷಿಯಲ್ ಸಿನಿಮಾ. ಒಂದೊಳ್ಳೆ ಮೆಸೇಜ್ ಇರುವ ಎಂಟರ್‌ಟೈನರ್ ಚಿತ್ರ. ಲಗಾಮ್ ಕನ್ನಡದ ಲಗಾನ್ ಆಗುತ್ತೆ ಎಂಬ ವಿಶ್ವಾಸವಿದೆ. ಕಬ್ಜಾ ದೊಡ್ಡ ಮಟ್ಟದ ಸಿನಿಮಾ, ಸೆಟ್‌ನಲ್ಲಿಯೇ ಬಹುತೇಕ ಶೂಟಿಂಗ್ ಮಾಡಲಾಗುತ್ತಿದೆ. ಹೀಗಾಗಿಯೇ ಸಾಕಷ್ಟು ಸಮಯ ಬೇಕು. ಅದೇ ಸಮಯದಲ್ಲಿ ಈ ಸಿನಿಮಾ ಮಾಡುತ್ತಿದ್ದೇನೆ' ಎಂದು ಲಗಾಮ್ ಚಿತ್ರದ ಬಗ್ಗೆ ಮಾಹಿತಿ ನೀಡಿದರು ಚಿತ್ರದ ನಾಯಕ ರಿಯಲ್ ಸ್ಟಾರ್ ಉಪೇಂದ್ರ. ನಿರ್ದೇಶಕ ಕೆ. ಮಾದೇಶ್ ಮಾತನಾಡಿ,ಲಗಾಮ್ ಕನ್ನಡ, ಹಿಂದಿ, ತೆಲುಗು, ತಮಿಳು ಹೀಗೆ ನಾಲ್ಕು ಭಾಷೆಗಳಲ್ಲಿ ಅದ್ದೂರಿ ಮೇಕಿಂಗ್‌ನಲ್ಲಿ ಮೂಡಿಬರಲಿರುವ ಕಮರ್ಷಿಯಲ್ ಸಿನಿಮಾ. ಮುಂದಿನ ಸೋಮವಾರದಿಂದ ಮೈಸೂರಿನಲ್ಲಿ ಮೊದಲ ಹಂತದ ಚಿತ್ರೀಕರಣ ಪ್ರಾರಂಭ ಮಾಡಲಿದ್ದೇವೆ. ಭ್ರಷ್ಟಾಚಾರಕ್ಕೆ, ಮೋಸಕ್ಕೆ, ವಂಚನೆಗೆ, ಅತ್ಯಾಚಾರಕ್ಕೆ, ದ್ರೋಹಕ್ಕೆ, ಕೊರನಾಗೆ ಲಗಾಮ್ ಹಾಕೋದೇ ಈ ಚಿತ್ರದ ಥೀಮ್’ ಎಂದು ನಗುತ್ತಲೇ ಚಿತ್ರದ ಬಗ್ಗೆ ಹೇಳಿಕೊಳ್ಳುತ್ತಾರೆ.

ಇನ್ನು ಈಗ್ಗೆ ಐದಾರು ವರ್ಷಗಳ ಹಿಂದೆ ಉಪೇಂದ್ರ ಅವರ ಜೊತೆ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದ ನಟಿ ಹರಿಪ್ರಿಯಾ ಅವರಿಗೆ ಮೊದಲ ಬಾರಿಗೆ ಸಿನಿಮಾದಲ್ಲಿ ರಿಯಲ್ ಸ್ಟಾರ್ ಗಿ ನಾಯಕಿಯಾಗಿ ತೆರೆ ಹಂಚಿಕೊಳ್ಳುತ್ತಿರುವ ಸಂಭ್ರಮ. `ಮೊದಲ ಬಾರಿ ಉಪ್ಪಿ ಸರ್ ಜೊತೆ ಸಿನಿಮಾದಲ್ಲಿ ನಟಿಸುತ್ತಿರುವ ಖುಷಿಯಿದೆ. ಹಾಗೇ ಸಾಧು ಕೋಕಿಲಾ ಸರ್ ಅವರ ಮ್ಯೂಸಿಕ್ ಅಂದರೆ ನನಗೆ ತುಂಬಾ ಇಷ್ಟ. ಇದೇ ಮೊದಲ ಬಾರಿಗೆ ನನ್ನ ಸಿನಿಮಾಗೆ ಅವರು ಮ್ಯೂಸಿಕ್ ನೀಡುತ್ತಿರುವುದು ನನಗೆ ಮತ್ತಷ್ಟು ಖುಷಿ ನೀಡಿದೆ. ಇತ್ತೀಚಿನ ದಿನಗಳಲ್ಲಿ ಪೌರಾಣಿಕ, ಐತಿಹಾಸಿಕ ಸಿನಿಮಾಗಳಲ್ಲೇ ಹೆಚ್ಚು ನಟಿಸುತ್ತಿದ್ದೆ. ಆದರೆ ಈ ಸಿನಿಮಾದಲ್ಲಿ ಈಗಿನ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದೇನೆ. ಒಳ್ಳೆಯ ಕಥೆ ಇದೆ’ ಎಂದು ಖುಷಿಯಿಂದ ಮತ್ತೆ ಗ್ಲಾಮರ್ ಗೊಂಬೆಯಾಗಿ ಮಿಂಚಲು ಅವಕಾಶ ಸಿಕ್ಕಿರುವ ಬಗ್ಗೆ ಸಂತಸ ವ್ಯಕ್ತಪಡಿಸುತ್ತಾರೆ ನಟಿ ಹರಿಪ್ರಿಯಾ. ಸಾಧು ಕೋಕಿಲಾ ಅವರು ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡುವುದರ ಜತೆಗೆ ಪ್ರಮುಖ ಪಾತ್ರದಲ್ಲೂ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

Categories
ಸಿನಿ ಸುದ್ದಿ

ಆಗಸ್ಟ್‌ ವೇಳೆಗೆ ಪ್ರೇಕ್ಷಕರ ಮಂದೆ ರಂಗನ ದರ್ಶನ: ನಗಿಸೋಕೆ ರೆಡಿಯಾದ ರಂಗಣ್ಣ!

ಕನ್ನಡದಲ್ಲಿ ಹಾಸ್ಯ ಸಿನಿಮಾಗಳಿಗೇನೂ ಕೊರತೆ ಇಲ್ಲ. ಇಲ್ಲಿ ಸಾಕಷ್ಟು ಕಾಮಿಡಿ ಜಾನರ್‌ ಚಿತ್ರಗಳು ಬಂದಿವೆ. ಈಗಲೂ ಬರುತ್ತಲೇ ಇವೆ. ಆ ಸಾಲಿಗೆ ಈಗ “ಶ್ರೀರಂಗ” ಸಿನಿಮಾ ಕೂಡ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ.

ಹೌದು, ಈ ಚಿತ್ರ ಈಗ ಚಿತ್ರೀಕರಣ ಪೂರೈಸಿ, ಹಿನ್ನೆಲೆ ಸಂಗೀತ ಕೆಲಸದಲ್ಲಿ ನಿರತವಾಗಿದೆ. ಬಹುತೇಕ ಬೆಂಗಳೂರು ಸುತ್ತಮುತ್ತ ಸುಮಾರು 21ದಿನಗಳ ಕಾಲ ಚಿತ್ರೀಕರಣ ನಡೆದಿದೆ.‌ ಕೊರೊನಾ ಹಾವಳಿ ಕಡಿಮೆಯಾದ ಬಳಿಕ, ಆಗಸ್ಟ್ ವೇಳೆಗೆ ಚಿತ್ರಮಂದಿರಗಳಲ್ಲಿ “ಶ್ರೀರಂಗ” ನ ದರ್ಶನವಾಗಲಿದೆ.

ರತು ಕ್ರಿಯೇಷನ್ಸ್ ಬ್ಯಾನರ್‌ನಲ್ಲಿ ಸುಮಾ ಅವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರವನ್ನು ವೆಂಕಟ್ ಭಾರದ್ವಾಜ್ ನಿರ್ದೇಶನ ಮಾಡಿದ್ದಾರೆ. ಇದೊಂದು ಹಾಸ್ಯಭರಿತ ಸಿನಿಮಾ. ಇಲ್ಲಿ ಮೂರು ಹಾಡುಗಳಿದ್ದು, ಸಮೀರ್ ಕುಲಕರ್ಣಿ ಅವರು ಸಂಗೀತ ನೀಡುತ್ತಿದ್ದಾರೆ. ಮಿಥುನ್ ಛಾಯಾಗ್ರಹಣವಿದೆ. ಚಂದನ್ ಅವರ ಸಂಕಲನವಿರುವ ಈ ಚಿತ್ರದ ಇಂಟ್ರೋಡೆಕ್ಷನ್ ಹಾಡನ್ನು ವಿರಾಜ್ ಕನ್ನಡಿಗ ಅವರೆ ಬರೆದು, ಹಾಡಿದ್ದಾರೆ.

ಗುರುರಾಜ ಹೊಸಕೋಟೆ, ಯಮುನಾ ಶ್ರೀನಿಧಿ, ಶಿನವ, ರಚನಾ ರೈ, ಮಾಸ್ಟರ್ ಚಿರಾಯು ಚಕ್ರವರ್ತಿ, ರೂಪ ರಾಯಪ್ಪ, ವಂದನಾ ಶೆಟ್ಟಿ, ಸಾಗರ್ ಜಯರಾಂ, ಸೂಪರ್ ದೇವು, ರಾಮಕೃಷ್ಣ, ಜ್ಯೋತಿ ಮೂರುರು, ವೆಂಕಟ್ ಭಾರದ್ವಾಜ್ ಇತರರು ಚಿತ್ರದಲ್ಲಿ ನಟಿಸಿದ್ದಾರೆ. ಶಂಕರ್ ರಾಮನ್ ಚಿತ್ರಕ್ಕೆ ಮಾತುಗಳನ್ನು ಪೋಣಿಸಿದ್ದಾರೆ.

Categories
ಸಿನಿ ಸುದ್ದಿ

ಅನಾಹುತದ ಈ ಸೂಚನೆ ಅವತ್ತೇ ಗೊತ್ತಾಗಿರಲಿಲ್ವಾ ಕೃಷ್ಣ ಪರಮಾತ್ಮ ? ಏ.22 ರಿಂದ ಕೃಷ್ಣ ಟಾಕೀಸ್‌ ಶೋ ಸ್ಥಗಿತ, ರಿವೈಂಡ್‌ ಕಥೆ ಇದಕ್ಕಿಂತ ಭಿನ್ನವಾಗಿಲ್ಲ….

ಭಯ, ಭಯ, ಅಂತ ಈಗ ಜನಕ್ಕೆ ಜೀವ ಭಯವೇ ಆವರಿಸಿಕೊಂಡಿದೆ. ಈ ಟೈಮ್‌ನಲ್ಲಿ ಯಾರಾದ್ರೂ ಟಾಕೀಸ್‌ಗೆ ಬಂದು ಸಿನಿಮಾ ನೋಡೋದು ನಿಜವೇ ? ಗೊತ್ತಿಲ್ಲ, ಇಡೀ ಚಿತ್ರರಂಗಕ್ಕೆ ಇಂತಹದೊಂದು ಪ್ರಶ್ನೆ ಕಾಡ್ತಿರೋ ಹೊತ್ತಲ್ಲಿಯೇ ಕಳೆದ ಶುಕ್ರವಾರ “ಕೃಷ್ಣ ಟಾಕೀಸ್‌ʼ ಹಾಗೂ “ರಿವೈಂಡ್‌ʼ ಹೆಸರಿನ ಎರಡು ಸಿನಿಮಾ ರಿಲೀಸ್‌ಆಗಿದ್ದವು.ಈ ಸಿನ್ಮಾ ಟೀಮ್‌ನವರಿಗೆ ಅದೆಂತಹ ಕಾನ್ಪಿಡೆನ್ಸ್‌ಇತ್ತೇನೋ ಗೊತ್ತಿಲ್ಲ, ಆದ್ರೂ ಅವತ್ತು ಈ ಸಿನ್ಮಾ ರಿಲೀಸ್‌ಮಾಡಿದ್ದರು. ಹಾಗಂತ ಅವರ ನಿರೀಕ್ಷೆ ನಿಜವಾಯ್ತಾ ? ಇಲ್ಲ, ಈ ಸಿನ್ಮಾಗಳೆರೆಡು ರಿಲೀಸ್‌ ಆ ದಿನ ಟಾಕೀಸ್‌ಒಳಗಡೆ ಇವತ್ತು ಕಂಡಿದ್ದೇ ಬೇರೆ. ಚಿತ್ರ ತೆರೆ ಕಂಡ ಮುಖ್ಯ ಚಿತ್ರಮಂದಿರಗಳಲ್ಲೇ ಹತ್ತಿಪ್ಪತ್ತು ಜನ ಇರಲಿಲ್ಲ. ಪಾಪ, ಬಂಡವಾಳ ಹಾಕಿ ಸಿನಿಮಾ ಮಾಡಿದ ನಿರ್ಮಾಪಕರ ಕಥೆ ಏನು?

ಕೊರೋನಾ ಅಂತ ಚಿತ್ರೋದ್ಯಮ ಕಂಗಾಲಾಗಿ ಕುಳಿತಿರುವಾಗ ಸಿನಿಮಾ ಮಾಡಿದ ನಿರ್ಮಾಪಕರ ಪರಿಸ್ಥಿತಿ ಇತರರಗಿಂತ ಭಿನ್ನವಾಗಿಲ್ಲ. ಕೋಟಿ ಕೋಟಿ ಹಣ ಸುರಿದು ಸಿನಿಮಾ ನಿರ್ಮಾಣ ಮಾಡುವ ನಿರ್ಮಾಪಕರು ಕೂಡ ತತ್ತರಿಸಿ ಹೋಗುವ ಹಾಗೆ ಮಾಡಿದ ಕೋರೋನಾ ಎನ್ನುವ ಮಾಹಾಮಾರಿ. ಕೋಟಿ ನಿರ್ಮಾಪಕರ ಸ್ಥಿತಿಯೇ ಹೀಗಿರಬೇಕಾದ್ರೆ, ಸಣ್ಣ ಪುಟ್ಟವರು ಕಥೆ ಏಂತೂ ? ಆ ಕಥೆ ಇನ್ನು ಘೋರ. ಪರಿಸ್ಥಿತಿ ಹೀಗಿರುವಾಗ ಕಷ್ಟಪಟ್ಟು , ಬಂಡವಾಳ ಹಾಕಿ ಸಿನಿಮಾ ನಿರ್ಮಾಣ ಮಾಡಿದ ನಿರ್ಮಾಪಕರಿಗೆ ತಮ್ಮ ಚಿತ್ರ ರಿಲೀಸ್‌ಆದಾಗ ಚಿತ್ರ ಮಂದಿರದಲ್ಲಿ ಪ್ರೇಕ್ಷಕರೇ ಕಾಣದಿದ್ದರೆ ಏನಾಗಬೇಡ ? ಅವತ್ತು ಚಿತ್ರ ತಂಡದ ಮುಖದಲ್ಲಿ ಕಂಡಿದ್ದು ಕಣ್ಣೀರು. ಅದರ ಪರಿಸ್ಥಿತಿ ಇವತ್ತು ಆಗಿದ್ದೇನು? ಈ ಪೈಕಿ ಇವತ್ತು ʼ ಕೃಷ್ಣ ಟಾಕೀಸ್‌ʼ ಚಿತ್ರದ ಪ್ರದರ್ಶನವನ್ನು ಚಿತ್ರ ತಂಡ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ನಿರ್ಧರಿಸಿದೆ.

“‌ ಸರ್ಕಾರ ಏನು ನಿರ್ಧಾರ ತೆಗೆದುಕೊಳ್ಳುವುದು ಗೊತಿಲ್ಲ. ಆದರೆ ಚಿತ್ರದ ನಿರ್ಮಾಪಕ ಗೋವಿಂದರಾಜು ಹಾಗೂ ಚಿತ್ರತಂಡದವರು ಎಲ್ಲಕ್ಕಿಂತ ಆರೋಗ್ಯವೇ ಮುಖ್ಯ ಎಂಬ ಉದ್ದೇಶದಿಂದ ಏಪ್ರಿಲ್ 22 ರವರೆಗೂ ಮಾತ್ರ ಚಿತ್ರವನ್ನು ಪ್ರದರ್ಶಿಸಿ, ನಂತರ ಸ್ಥಗಿತಗೊಳಿಸಲು ತೀರ್ಮಾನಿಸಿದ್ದಾರೆ. ಹಾಗೊಂದು ವೇಳೆ ಸರ್ಕಾರ ನಾಳೆಯಿಂದಲೇ ಚಿತ್ರಮಂದಿರ ಮುಚ್ಚಬೇಕು ಅಂದರೆ ಅದಕ್ಕೂ ನಾವು ಬದ್ಧ ಎನ್ನುತ್ತಾರೆ ನಿರ್ದೇಶಕ ವಿಜಯಾನಂದ್. ಮತ್ತೊಂದಡೆ ಚಿತ್ರದ ಮರು ಬಿಡುಗಡೆಗೂ ಚಿತ್ರ ತಂಡ ಪ್ಲಾನ್‌ ಹಾಕಿಕೊಂಡಿದೆ. ಕೊರೋನಾ ಪರಿಸ್ಥಿತಿ ನಿಯಂತ್ರಣಕ್ಕೆ ಬಂದ ನಂತರ ರೀ ರಿಲೀಸ್‌ ಮಾಡುವುದಾಗಿ ತಿಳಿಸಿದೆ.

ಹೌದು, ನಿರ್ಮಾಣ ಮಾಡಿದ ಸಿನಿಮಾವನ್ನು ರಿಲೀಸ್‌ಮಾಡದೆ ಇರೋದಕ್ಕೆ ಅದೇನು ಪಾತ್ರೆ-ಸಾಮಾನು ಅಲ್ಲ. ಅಪ್ಕೋರ್ಸ್‌, ತಯಾರಾದ ಸಿನಿಮಾ ಚಿತ್ರಮಂದಿರಕ್ಕೆ ಬರಲೇ ಬೇಕು. ಪ್ರೇಕ್ಷಕರಿಂದ ಅದಕ್ಕೆ ಒಳ್ಳೆಯ ರೆಸ್ಪಾನ್ಸ್‌ಕೂಡ ಸಿಗಬೇಕು. ಆದ್ರೆ ಇವರೆಡು ಸಿನಿಮಾ ಇವತ್ತು ರಿಲೀಸ್‌ ಆದ ಸಂದರ್ಭ ಸರಿಯಿತ್ತಾ ? ಟೀಮ್‌ನವರಿಗೆ ಅದೇನೋ ಕಾನ್ಪಿಡೆನ್ಸ್‌ ಇತ್ತೇನೋ. ಕೊರೋನಾ ಅಂತ ಏನೇ ಭಯ ಹುಟ್ಟಿಸಿದ್ರೂ ಪ್ರೇಕ್ಷಕರಿಗೆ ಸಿನ್ಮಾ ಬೇಕು. ಅವರು ಬಂದೇ ಬರ್ತಾರೆ ಅಂತ ಭಂಡ ಧೈರ್ಯವೂ ಇತ್ತೇನೋ. ಆದ್ರೆ ಪರಿಸ್ಥಿತಿ ಹಾಗಿರಲಿಲ್ಲ ಅನ್ನೋದು ಅಷ್ಟೇ ಸತ್ಯ.

Categories
ಸಿನಿ ಸುದ್ದಿ

ನನಗೆ ಕೊರೋನಾ ಪಾಸಿಟಿವ್‌ ಬಂದಿದೆ,ಮುಂದೆ ನಂಗೇನಾದ್ರೂ ಆಗಿದ್ದಾದ್ದಲ್ಲಿ,ಅದಕ್ಕೆ ನೇರ ಕಾರಣವೇ ರಾಜ್ಯ ಸರ್ಕಾರ : ನಿರ್ದೇಶಕ ಗುರು ಪ್ರಸಾದ್‌ ಆಕ್ರೋಶ

ʼಮಠʼ ಚಿತ್ರದ ಖ್ಯಾತಿಯ ನಿರ್ದೇಶಕ ಗುರುಪ್ರಸಾದ್‌ ಅವರಿಗೆ ಕೊರೋನಾ ಪಾಸಿಟಿವ್‌ ಬಂದಿದೆ. ತಮಗೆ ಕೊರೋನಾ ಪಾಸಿಟಿವ್ ಧೃಡಪಟ್ಟಿರುವ ಕುರಿತು ಮಾತನಾಡಿರುವ ವಿಡಿಯೋವೊಂದನ್ನು ಗುರುಪ್ರಸಾದ್‌ ಸೋಷಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.” ನನಗೆ ಕರೋನಾ ಪಾಸಿಟಿವ್‌ ಬಂದಿದೆ. ಬಂದಿದೆ ಅನ್ನೊದಕ್ಕಿಂತ ರಾಜ್ಯ ಸರ್ಕಾರ ಮನೆ ಮನೆಗೆ ಕೊರೋನಾ ತಂದು ಮುಟ್ಟಿಸಿದೆ. ಇದಕ್ಕೆ ಮುಖ್ಯ ಕಾರಣ ಸಿಎಂ ಯಡಿಯೂರಪ್ಪ, ಅವರ ಪುತ್ರ ವಿಜಯೇಂದ್ರ ಹಾಗೂ ಆರೋಗ್ಯ ಸಚಿವ ಡಾ.ಸುಧಾಕರ್.‌ ಇದು ಇವರೆಲ್ಲರ ಕೊಡುಗೆ. ಮುಂದೆ ನಾನು ಏನಾಗುತ್ತೇನೋ ಗೊತ್ತಿಲ್ಲ. ಹಾಗೇನಾದ್ರು ನಂಗೆ ಆದ್ರೆ ಅದಕ್ಕೆ ರಾಜ್ಯ ಸರ್ಕಾರವೇ ಕಾರಣ ಅಂತ ತರಾಟೆಗೆ ತೆಗೆದುಕೊಂಡಿದ್ದಾರೆ. ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ಹೊರ ಹಾಕಿರುವ ಗುರು ಪ್ರಸಾದ್‌, ತೀವ್ರ ನೋವು ತೊಡಿಕೊಂಡಿದ್ದಾರೆ. ಅದರ ಸಂಪೂರ್ಣ ವಿಡಿಯೋ ಇಲ್ಲಿದೆ. ( ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ )

https://www.facebook.com/watch/?v=1206848433063292

error: Content is protected !!