ಕೊರೊನಾ ಸಂಖ್ಯೆ ಹೆಚ್ಚಾಗೋಕೆ ಸಿನಿಮಾ ಮಂದಿ ಕಾರಣ! ಸಿ.ಟಿ.ರವಿ ಹೇಳಿಕೆಗೆ ಸ್ಯಾಂಡಲ್‌ವುಡ್‌ ಆಕ್ರೋಶ!!

ಅದೇನೋ ಗೊತ್ತಿಲ್ಲ. ಎಲ್ಲರೂ ಸಿನಿಮಾರಂಗವನ್ನೇ ಟಾರ್ಗೆಟ್‌ ಮಾಡಿದಂತಿದೆ. ಸಿನಿಮಾ ಮಂದಿಯಿಂದಲೇ ಕೊರೊನಾ ಸಂಖ್ಯೆ ಹೆಚ್ಚಾಗುತ್ತಿದೆ ಎಂಬರ್ಥದಲ್ಲೇ ಎಲ್ಲರೂ ಮಾತಾಡುತ್ತಿದ್ದಾರೆ. ಈಗ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ.ರವಿ ಕೂಡ ಕೊರೊನಾ ಪ್ರಕರಣ ಹೆಚ್ಚಾಗಲೂ ಸಿನಿಮಾ ರಂಗದವರೇ ಪರೋಕ್ಷ ಕಾರಣ ಎಂದು ಹೇಳಿದ್ದಾರೆ. ಏಪ್ರಿಲ್‌ 22 ರಂದು ಸುಮನಹಳ್ಳಿಗೆ ಭೇಟಿ ನೀಡಿದ್ದ ರವಿ ಅವರಿಗೆ ಮೃತರ ಕುಟುಂಬದವರು ಹಾಗು ಗ್ರಾಮಸ್ಥರು ಮುತ್ತಿಗೆ ಹಾಕಿದ್ದರು. ಆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಿ.ಟಿ.ರವಿ, ಕೊರೊನಾ ಹೆಚ್ಚಾಗಲು ಸರ್ಕಾರ ಕಾರಣವಲ್ಲ ಎಂದು ಸಮರ್ಥಿಸಿಕೊಳ್ಳುತ್ತಲೇ, ಸರ್ಕಾರದ ಮೇಲೆ ಚಿತ್ರರಂಗದವರು ಹಾಗು ಇತರರು ಒತ್ತಡ ಹೇರಿದ್ದರಿಂದ ಇಂದು ಕೊರೊನಾ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿದೆ ಎಂದಿದ್ದಾರೆ.

ಸರ್ಕಾರ ಈ ಹಿಂದೆ ಕೊರೊನಾ ಹಾವಳಿ ತಡೆಗೆ ಥಿಯೇಟರ್ ಬಂದ್ ಮಾಡಬೇಕು, ಜಿಮ್ ಬಂದ್ ಮಾಡಬೇಕು ಎಂದು ನಿರ್ಧರಿಸಿದ ಸಂದರ್ಭದಲ್ಲಿ ಚಿತ್ರರಂಗದವರು ಬಂದು ಒಕ್ಕೊರಲ ಧ್ವನಿ ಎತ್ತಿದರು. ಹಾಗಾಗಿ ಸರ್ಕಾರ ತುಸು ಸಡಿಲ ನಿರ್ಧಾರ ಕೈಗೊಂಡಿತು. ಜಿಮ್‌ ಬಂದ್ ಮಾಡೋಣ ಅಂತ ನಿರ್ಧರಿಸಿದಾಗಲೂ ಜಿಮ್‌ನವರು ಒತ್ತಡ ತಂದರು. ಆಗಲೂ ಸರ್ಕಾರ ತನ್ನ ನಿರ್ಧಾರವನ್ನು ಹಿಂದೆ ಪಡೆಯಬೇಕಾಯಿತು. ಇದರಿಂದ ಇಂದು ಸಮಸ್ಯೆ ತಲೆದೋರಿದೆ. ವಿಪಕ್ಷವೂ ಕೂಡ ಯಾಕೆ ಚಿತ್ರಮಂದಿರ ಬಂದ್ ಮಾಡಬೇಕು ಎಂದು ಪ್ರಶ್ನೆ ಮಾಡಿತು. ಮಾಧ್ಯಮಗಳು ಕೂಡ ಅದನ್ನೇ ಬಿತ್ತರಿಸಿದವು. ಯಾರೋ ಸೆಲೆಬ್ರಿಟಿ ಬಂದು ಸ್ಟೇಟ್‌ಮೆಂಟ್ ಕೊಟ್ಟ ಕೂಡಲೇ ಮಾಧ್ಯಮಗಳೆಲ್ಲಾ ಆ ಕಡೆ ಫೋಕಸ್ ಮಾಡಿದವು. ಅದಕ್ಕೆ ಇಂದು ದೊಡ್ಡ ಬೆಲೆ ತೆರಬೇಕಾಗಿದೆ ಎಂದಿದ್ದಾರೆ ರವಿ.

ಈ ಹಿಂದೆ ಪುನೀತ್ ರಾಜ್‌ಕುಮಾರ್ ಅಭಿನಯದ “ಯುವರತ್ನ” ಚಿತ್ರ ಬಿಡುಗಡೆಯಾಗಿ ಎರಡನೇ ದಿನಕ್ಕೆ ಶೇ.50ರಷ್ಟು ಆಸನ ಭರ್ತಿಗೆ ಸರ್ಕಾರ ಆದೇಶಿಸಿತು. ಸರ್ಕಾರದ ಈ ಕ್ರಮಕ್ಕೆ ಪುನೀತ್ ರಾಜ್‌ಕುಮಾರ್ ಸೇರಿದಂತೆ ಹಲವರು ತೀವ್ರವಾಗಿ ಖಂಡಿಸಿದ್ದರು. ನಂತರ ಪುನೀತ್‌ ಅವರು ಸಿಎಂ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು. ಆ ಬಳಿಕ ಆದೇಶವನ್ನು ಎರಡು ದಿನಗಳ ಮಟ್ಟಿಗೆ ಸಡಿಲಗೊಳಿಸಲಾಯಿತು. ಈಗ ನೋಡಿದರೆ, ಏಪ್ರಿಲ್ 21 ರಿಂದ ಮೇ 4 ರವರೆಗೆ ರಾಜ್ಯದಾದ್ಯಂತ ಚಿತ್ರಮಂದಿರಗಳು ಸಂಪೂರ್ಣ ಬಂದ್ ಆಗಿವೆ. ಅದೇನೆ ಇರಲಿ, ಸಿನಿಮಾರಂಗದವರಿಂದಲೇ ಕೊರೊನಾ ಸಂಖ್ಯೆ ಹೆಚ್ಚಾಗುತ್ತಿದೆ ಎಂಬ ಸಿ.ಟಿ.ರವಿ ಅವರ ಮಾತಿಗೆ ಸ್ಯಾಂಡಲ್‌ವುಡ್‌ ಜೋರಾದ ಧ್ವನಿ ಎತ್ತಿದೆ.

Related Posts

error: Content is protected !!