Categories
ಸಿನಿ ಸುದ್ದಿ

ಸಲ್ಮಾನ್‌ಗೆ ಇಮ್ರಾನ್‌ ಹಶ್ಮಿ‌ ವಿಲನ್! ಯೂರೋಪ್‌ನಲ್ಲಿ ಸಲ್ಲೂ-ಕತ್ರಿನಾ ‘ಟೈಗರ್‌ 3’ ಶೂಟಿಂಗ್

ಕಬೀರ್ ಖಾನ್‌ ನಿರ್ದೇಶನದಲ್ಲಿ 2012ರಲ್ಲಿ ತೆರೆಕಂಡ ‘ಏಕ್ ಥಾ ಟೈಗರ್‌’ ಚಿತ್ರದಲ್ಲಿ ಸಲ್ಮಾನ್ ಮತ್ತು ಕತ್ರಿನಾ ಕೈಫ್ ನಟಿಸಿದ್ದರು. ಚಿತ್ರದಲ್ಲಿನ ಅವರ RAW ಮತ್ತು ISI ಏಜೆಂಟ್ ಪಾತ್ರಗಳು ಕ್ಲಿಕ್ಕಾಗಿದ್ದವು. ಇದಾಗಿ ಐದು ವರ್ಷಕ್ಕೆ ಅಬ್ಬಾಶ್ ಜಾಫರ್‌ ನಿರ್ದೇಶನದಲ್ಲಿ ‘ಟೈಗರ್ ಜಿಂದಾ ಹೈ’ ಬಂತು. ಸಲ್ಲೂ ಮತ್ತು ಕತ್ರಿನಾ ಜೋಡಿಯ ಸಿನಿಮಾ ಬಾಕ್ಸ್ ಆಫೀಸ್ ದಾಖಲೆಗಳನ್ನು ಧೂಳಿಪಟ ಮಾಡಿತು.

ಇದೀಗ ಟೈಗರ್ ಮತ್ತು ಜೋಯಾ ‘ಟೈಗರ್ 3’ಯಲ್ಲಿ ಜೋಡಿಯಾಗುತ್ತಿದ್ದಾರೆ. ಮನೀಶ್ ಶರ್ಮಾ ನಿರ್ದೇಶನದ ಚಿತ್ರದ ಖಳಪಾತ್ರದಲ್ಲಿ ‘ಕಿಸ್ಸಿಂಗ್ ಸ್ಟಾರ್‌’ ಇಮ್ರಾನ್ ಹಶ್ಮಿ ನಟಿಸಲಿದ್ದಾರೆ ಎನ್ನುವುದು ವಿಶೇ‍ಷ! ಚಿತ್ರ ನಿರ್ಮಿಸುತ್ತಿರುವ ಯಶ್ ರಾಜ್ ಫಿಲ್ಮ್ಸ್‌ ಸಂಸ್ಥೆ ಚಿತ್ರದ ಖಳನಾಗಿ ಹೊಸ ನಟನನ್ನು ಪರಿಚಯಿಸುವ ಇರಾದೆ ಹೊಂದಿತ್ತು. ಹಾಗೆ ಹಿಂದೆ ‘ಟೈಗರ್ ಜಿಂದಾ ಹೈ’ ಚಿತ್ರದಲ್ಲಿ ಅವರು ಸಾಜದ್ ಡೆಲಾಫ್ರೂಜ್‌ ಅವರನ್ನು ಪರಿಚಯಿಸಿದ್ದರು. ಇದೀಗ ‘ಟೈಗರ್‌ 3’ನಲ್ಲಿ ಇಮ್ರಾನ್ ಹಶ್ಮಿ ಅವರನ್ನು ಕರೆತಂದಿರುವುದು ಚರ್ಚೆಗೆ ಗ್ರಾಸವಾಗಿದೆ.

‘ಟೈಗರ್ 3’ ಮುಂದಿನ ತಿಂಗಳು ಚಿತ್ರೀಕರಣ ಆರಂಭಿಸಲಿದೆ. ಮುಂಬಯಿಯ ಯಶ್ ರಾಜ್‌ ಸ್ಟುಡಿಯೋದಲ್ಲಿ ಮೊದಲ ಹಂತದ ಶೂಟಿಂಗ್‌ಗೆ ಚಾಲನೆ ಸಿಗಲಿದೆ. ಅಲ್ಲಿ ಸಲ್ಮಾನ್‌, ಕತ್ರಿನಾ ಮತ್ತು ಇಮ್ರಾನ್ ನಟನೆಯ ಕೆಲವು ಸನ್ನಿವೇಶಗಳು ಚಿತ್ರಣಗೊಳ್ಳಲಿವೆಯಂತೆ. ಎರಡನೇ ಹಂತದ ಚಿತ್ರೀಕರಣಕ್ಕೆ ಚಿತ್ರತಂಡ ಯೂರೋಪ್‌ಗೆ ತೆರಳಲಿದೆ. ಮತ್ತೆ ಮೂರನೇ ಹಂತ ಮುಂಬಯಿಯ ಸ್ಟುಡಿಯೋದಲ್ಲಿ ಚಿತ್ರಿತವಾಗಲಿದೆ. ಶಾರುಖ್ ನಟನೆಯ ‘ಪಠಾಣ್‌’ ಚಿತ್ರದ ಒಂದು ಪಾತ್ರದಲ್ಲಿ ಸಲ್ಮಾನ್ ನಟಿಸುತ್ತಿದ್ದಾರೆ. ಆ ಸಿನಿಮಾದ ಕೆಲಸ ಪೂರ್ಣಗೊಳ್ಳುತ್ತಲೇ ಸಲ್ಮಾನ್‌ ‘ಟೈಗರ್ 3’ ತಂಡಕ್ಕೆ ಹಾಜರಾಗಲಿದ್ದಾರೆ. ಖಳಪಾತ್ರದಲ್ಲಿ ಇಮ್ರಾನ್‌ ಹೇಗೆ ಕಾಣಿಸಿಕೊಳ್ಳಬಹುದು ಎನ್ನುವ ಕುತೂಹಲ ಎಲ್ಲರದು.

Categories
ಸಿನಿ ಸುದ್ದಿ

ತಾಯಿಯಾದ ಸಂಭ್ರಮದಲ್ಲಿ ವೀರ ಕನ್ನಡಿಗ ನಟಿ

ಸಿನಿಮಾ ಮತ್ತು ಕಿರುತೆರೆ ನಟಿ ಅನಿತಾ ಹಸ್ಸನಂದನಿ ತಾಯಿಯಾದ ಸಂಭ್ರಮದಲ್ಲಿದ್ದಾರೆ. ಅನಿತಾ ಮತ್ತು ರೋಹಿತ್ ರೆಡ್ಡಿ ದಂಪತಿ ಗಂಡು ಮಗುವಿಗೆ ಜನ್ಮ ನೀಡಿದ್ದು,  ಅವರಿಗೆ ಸಿನಿಮಾರಂಗದ ಹಲವರು ಶುಭ ಹಾರೈಸುತ್ತಿದ್ದಾರೆ. ದಂಪತಿ ಈ ಸಂತಸದ ಸಂದರ್ಭದ ಫೋಟೋ, ವೀಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅನಿತಾ ಅವರ ಆತ್ಮೀಯ ಗೆಳತಿ, ನಿರ್ಮಾಪಕಿ ಏಕ್ತಾ ಕಪೂರ್‌ ಆಸ್ಪತ್ರೆಯಲ್ಲಿ ನಟಿಯನ್ನು ಭೇಟಿ ಮಾಡಿ ಶುಭ ಹಾರೈಸಿ ಅಲ್ಲಿನ ಫೋಟೋ ಶೇರ್ ಮಾಡಿದ್ದರು.

ಮುಂಬಯಿಯ ಸಿಂಧಿ ಕುಟುಂಬದ ಅನಿತಾ ದಕ್ಷಿಣದ ತೆಲುಗು, ತಮಿಳು ಚಿತ್ರೋದ್ಯಮಗಳಲ್ಲಿ ದೊಡ್ಡ ಗೆಲುವು ಕಂಡ ನಟಿ. ಉದಯ ಕಿರಣ್ ಜೊತೆ ಅವರು ನಟಿಸಿದ ‘ನುವ್ವು ನೇನು’ ತೆಲುಗು ಸಿನಿಮಾ ಸೂಪರ್‌ ಹಿಟ್ ಆಗಿತ್ತು. ಪುನೀತ್ ರಾಜಕುಮಾರ್ ಜೋಡಿಯಾಗಿ ‘ವೀರಕನ್ನಡಿಗ’ ಚಿತ್ರದೊಂದಿಗೆ ಕನ್ನಡಕ್ಕೆ ಬಂದ ಅವರು ‘ಗಂಡುಗಲಿ ಕುಮಾರರಾಮ’ ಚಿತ್ರದ ವಿಶಿಷ್ಠ ಪಾತ್ರದಲ್ಲಿ ನಟಿಸಿದ್ದರು.

ಇಂದ್ರಜಿತ್ ಲಂಕೇಶ್ ನಿರ್ದೇಶನದ ‘ಹುಡುಗ ಹುಡುಗಿ’ ನಂತರ ಮತ್ತೆ ಅವರು ಕನ್ನಡದಲ್ಲಿ ಕಾಣಿಸಿಕೊಂಡಿಲ್ಲ. ಕಳೆದ ಐದಾರು ವರ್ಷಗಳಿಂದ ಕಿರುತೆರೆಯಲ್ಲಿ ಬ್ಯುಜಿಯಾಗಿರುವ ಅವರು ಹಿಂದಿ ಸರಣಿಗಳಲ್ಲಿ ಜನಪ್ರಿಯತೆ ಗಳಿಸಿದ್ದಾರೆ. ಕಾವ್ಯಾಂಜಲಿ, ಯೆಹ್ ಹೈ ಮೊಹಬತೇನ್‌, ನಾಗಿನ್‌ 3 ಹಿಂದಿ ಸರಣಿಗಳು ಅವರಿಗೆ ಹೆಸರು ತಂದುಕೊಟ್ಟಿವೆ. ಕೃಷ್ಣಾ ಕಾಟೇಜ್‌, ಕುಚ್ ತೋ ಹೈ, ರಾಗಿಣಿ ಎಂಎಂಎಸ್‌ ಅವರ ನಟನೆಯ ಹಿಂದಿ ಸಿನಿಮಾಗಳು. 2013ರಲ್ಲಿ ಉದ್ಯಮಿ ರೋಹಿತ್‌ ರೆಡ್ಡಿ ಅವರನ್ನು ವರಿಸಿದ್ದ ಅವರ ದಾಂಪತ್ಯಕ್ಕೀಗ ಪುತ್ರ ಜನಿಸಿದ್ದಾನೆ.

Categories
ಸಿನಿ ಸುದ್ದಿ

ಟಾಪ್‌ ಟಕ್ಕರ್‌ ಸಾಂಗ್‌ನಲ್ಲಿ ರಶ್ಮಿಕಾ ಸ್ಟೆಪ್‌- ಮೊದಲ ಹಿಂದಿ ಹಾಡಲ್ಲಿ ಕುಣಿದ ಕೊಡಗಿನ ಬೆಡಗಿ

ಸದ್ಯಕ್ಕೆ ರಶ್ಮಿಕಾ ಮಂದಣ್ಣ ಜೋರು ಸುದ್ದಿಯಲ್ಲಿದ್ದಾರೆ. ಅದಕ್ಕೆ ಕಾರಣ, ಅವರ ಅಭಿನಯದ “ಪೊಗರು” ಫೆಬ್ರವರಿ ೧೯ರಂದು ರಿಲೀಸ್‌ ಆಗುತ್ತಿದೆ. ಅದಷ್ಟೇ ಅಲ್ಲ, ಅತ್ತ ಬಾಲಿವುಡ್‌ನಲ್ಲೂ ರಶ್ಮಿಕಾ ಮಂದಣ್ಣ ಕೂಡ ಈಗಷ್ಟೇ ಮಿಂಚುತ್ತಿದ್ದಾರೆ. ಅದರೊಂದಿಗೆ ಈಗ ಅವರು ಬಾದ್‌ಷಾ ಅವರ ಟಾಪ್‌ ಟಕ್ಕರ್‌ ಸಾಂಗ್‌ನಲ್ಲಿ ಹೆಜ್ಜೆ ಹಾಕುತ್ತಿದ್ದಾರೆ.

ಇದು ಅವರ ಮೊದಲ ಹಿಂದಿ ಸಾಂಗ್‌ ಆಗಿದ್ದು, ಸದ್ಯಕ್ಕೆ ಹಾಡಿನ ಟೀಸರ್‌ ಬಿಡುಗಡೆಯಾಗಿದ್ದು, ಸಾಕಷ್ಟು ಸದ್ದು ಮಾಡುತ್ತಿದೆ. ಎಲ್ಲೆಡೆಯಿಂದಲೂ ಒಳ್ಳೆಯ ಮೆಚ್ಚುಗೆಯೂ ಸಿಗುತ್ತಿದೆ. ಈ ಹಾಡಲ್ಲಿ ರಶ್ಮಿಕಾ ಸಿಕ್ಕಾಪಟ್ಟೆ ಬೋಲ್ಡ್‌ ಆಗಿ ಕಾಣಿಸಿಕೊಂಡಿದ್ದಾರೆ.

ಬಾಲಿವುಡ್‌ನ ಚೊಚ್ಚಲ ಚಿತ್ರ “ಮಿಷನ್‌ ಮಜ್ನು” ಚಿತ್ರದ ಸುರುವಿಗೆ ಮುನ್ನವೇ, ಅವರು ಹಿಂದಿ ವಿಡಿಯೋ ಸಾಂಗ್‌ನಲ್ಲಿ ಕಾಣಿಸಿಕೊಂಡಿರೋದು ವಿಶೇಷ. ಸದ್ಯಕ್ಕೆ ಈ ಸುದ್ದಿ ಅವರ ಫ್ಯಾನ್ಸ್‌ಗೆ ಸಿಕ್ಕಾಪಟ್ಟೆ ಖುಷಿ ತಂದಿದೆ.


ಅದೇನೆ ಇರಲಿ, ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಕರುನಾಡ ಕ್ರಶ್ ಅಂತೂ ಹೌದು. “ಕಿರಿಕ್ ಪಾರ್ಟಿ” ಮೂಲಕ ಸಿನಿ ಜಗತ್ತಿಗೆ ಎಂಟ್ರಿಯಾದ ಸಾನ್ವಿಯ ಲೈಫ್‌ ನೋಡ ನೋಡುತ್ತಿದ್ದಂತೆಯೇ ಬದಲಾಗಿದ್ದು ನಿಜ. ಸ್ಯಾಂಡಲ್‌ವುಡ್‌ನಲ್ಲಿ ಹೆಸರು ಮಾಡಿದ ರಶ್ಮಿಕಾ, ನಂತರದ ದಿನಗಳಲ್ಲಿ ಕನ್ನಡದ ಸ್ಟಾರ್‌ ನಟರೊಂದಿಗೆ ಕಾಣಿಸಿಕೊಂಡರು.

ಮೆಲ್ಲನೆ ತೆಲುಗು ಚಿತ್ರರಂಗಕ್ಕೂ ಕಾಲಿಟ್ಟೂ, ಅಲ್ಲೂ ಸೈ ಎನಿಸಿಕೊಂಡರು. ಅಲ್ಲಿಂದ ಬಾಲಿವುಡ್‌ನತ್ತ ಈಗ ಪಯಣ ಬೆಳೆಸಿದ್ದಾರೆ. ಅಲ್ಲಿ ಸಿನಿಮಾ ಮಾಡುವ ಮೊದಲು ಟಾಪ್‌ ಟಕ್ಕರ್‌ ಎಂಬ ಹಿಂದಿ ಸಾಂಗ್‌ನಲ್ಲಿ ಕಾಣಿಸಿಕೊಂಡು ಸುದ್ದಿಯಾಗಿದ್ದಾರೆ.

Categories
ಸೌತ್‌ ಸೆನ್ಸೇಷನ್

ವಿಜಯ್ ದೇವರಕೊಂಡ ‘ಲಿಗರ್‌’ ಸೆಪ್ಟೆಂಬರ್‌ಗೆ – ತೆಲುಗು, ಹಿಂದಿ ಭಾಷೆಗಳಲ್ಲಿ ತಯಾರಾಗುತ್ತಿದೆ ಸಿನಿಮಾ!


ದಕ್ಷಿಣ ಭಾರತದ ಪ್ರಸ್ತುತ ಸೆನ್ಸೇಷನ್‌ ಹೀರೋಗಳಲ್ಲೊಬ್ಬರಾದ ವಿಜಯ್ ದೇವರಕೊಂಡ ನಟನೆಯ ‘ಲಿಗರ್‌’ ರಿಲೀಸ್ ಡೇಟ್ ಹೊರಬಿದ್ದಿದೆ. ಪುರಿ ಜಗನ್ನಾಥ್ ನಿರ್ದೇಶನದ ಸಿನಿಮಾ ಇದೇ ವರ್ಷ ಸೆಪ್ಟೆಂಬರ್ 9ಕ್ಕೆ ಥಿಯೇಟರ್‌ಗೆ ಬರಲಿದೆ. ಚಿತ್ರತಂಡ ಇಂದು ಸೋಷಿಯಲ್ ಮೀಡಿಯಾದಲ್ಲಿ ಚಿತ್ರದ ಹೊಸ ಪೋಸ್ಟರ್‌ನೊಂದಿಗೆ ಬಿಡುಗಡೆ ದಿನಾಂಕ ಘೋಷಿಸಿದೆ. ಅನನ್ಯಾ ಪಾಂಡೆ ಚಿತ್ರದ ನಾಯಕಿಯಾಗಿ ನಟಿಸುತ್ತಿದ್ದು ರಮ್ಯಾ ಕೃಷ್ಣನ್‌, ರೋನಿತ್ ರಾಯ್‌, ಅಲಿ, ಮಕರಂದ್ ದೇಶಪಾಂಡೆ ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿದ್ದಾರೆ.

ಲವರ್ ಬಾಯ್‌ ವಿಜಯ್‌ ಈ ಚಿತ್ರದಲ್ಲಿ ಇಮೇಜು ಬದಲಿಸಿಕೊಳ್ಳುವ ಉಮೇದಿನಲ್ಲಿದ್ದಾರೆ. ಮಾರ್ಷಿಯಲ್ ಆರ್ಟ್ಸ್‌ ಹಿನ್ನೆಲೆಯ ಕತೆಯ ಇದೊಂದು ಸ್ಪೋರ್ಟ್ಸ್‌ ಡ್ರಾಮಾ ಎನ್ನಲಾಗಿದೆ. ತೆಲುಗು ಮಾತ್ರವಲ್ಲದೆ ಹಿಂದಿ ಭಾ‍ಷೆಯಲ್ಲೂ ಸಿನಿಮಾ ತಯಾರಾಗುತ್ತಿದೆ. ಈ ಮೂಲಕ ಬಾಲಿವುಡ್‌ಗೆ ಪರಿಚಯವಾಗುತ್ತಿದ್ದಾರೆ ದೇವರಕೊಂಡ. ಮತ್ತೊಂದೆಡೆ ಪುರಿ ಜಗನ್ನಾಥ್ ಹತ್ತು ವರ್ಷದ ನಂತರ ಬಾಲಿವುಡ್‌ಗೆ ಮರಳುತ್ತಿದ್ದಾರೆ. ದಶಕದ ಹಿಂದೆ ಅವರ ನಿರ್ದೇಶನದಲ್ಲಿ ಅಮಿತಾಭ್ ಬಚ್ಚನ್ ನಟಿಸಿದ್ದ ‘ಬುಡ್ಡಾ ಹೋಗಾ ತೇರಿ ಬಾಪ್‌’ ಹಿಂದಿ ಚಿತ್ರ ತೆರೆಕಂಡಿತ್ತು. ಪುರಿ ಜಗನ್ನಾಥ್‌, ಕರಣ್ ಜೋಹರ್‌, ನಟಿ ಚಾರ್ಮಿ ಕೌರ್ ಚಿತ್ರದ ನಿರ್ಮಾಪಕರು. ಕನ್ನಡ, ತಮಿಳು ಮತ್ತು ಮಲಯಾಳಂ ಭಾಷೆಗಳ ಡಬ್ಬಿಂಗ್ ಅವತರಣಿಕೆಗಳೂ ಏಕಕಾಲದಲ್ಲಿ ಬಿಡುಗಡೆಯಾಗಲಿದೆ.

Categories
ಸಿನಿ ಸುದ್ದಿ

ಆಸ್ಪತ್ರೆಗೆ ದಾಖಲಾದ ಸಂಜನಾ! ಲೈವ್‌ ಬಂದು ಬದುಕು ಬೇಸರವಾಗಿದೆ ಜೀವನ ಬೇಡ ಅಂದಿದ್ದರು

ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ಸಿಕ್ಕಿಬಿದ್ದು ಜೈಲುವಾಸ ಅನುಭವಿಸಿದ್ದ ನಟಿ   ಸಂಜನಾ ಗಲ್ರಾನಿ,  ಕೆಲವು ತಿಂಗಳ ಕಾಲ ಜೈಲಲ್ಲಿದ್ದರು. ಕೊನೆಗೂ ಅವರು ಹೊರಬಂದಿದ್ದೂ ಆಯ್ತು. ಯಾರ ಮಾತಿಗೂ  ಸಿಗದ ಸಂಜನಾ ಕೆಲ ಕಾಲ  ಮನೆಯಲ್ಲಿದ್ದುಕೊಂಡೇ ರಿಲ್ಯಾಕ್ಸ್ ಆಗಿದ್ದರು. ಪೈಂಟಿಂಗ್ ಮಾಡಿಕೊಳ್ಳುತ್ತಾ, ಖುಷಿ ಖುಷಿಯಾಗಿ ಮನೆಯವರ ಜೊತೆ ಕಾಲ ಕಳೆಯುತ್ತಿದ್ದರು. ಈಗ ಸಂಜನಾ ಇದ್ದಕ್ಕಿದ್ದಂತೆ ಸೋಷಿಯಲ್ ಮೀಡಿಯಾದಲ್ಲಿ ಲೈವ್‌   ಬಂದು, ಬದುಕಿನ ಬಗೆಗೆ ಬೇಸರ ಆಗಿದೆ, ಜೀವನನೇ ಬೇಡ ಎಂಬಂತೆ  ಹೇಳಿಕೊಂಡಿದ್ದರು. ತಮ್ಮ ಇನ್‌ಸ್ಟಾಗ್ರಾಂನಲ್ಲಿ ಲೈವ್ ಬಂದು ನನ್ನ ಆರೋಗ್ಯದಲ್ಲಿ ವಿಪರೀತ ಏರುಪೇರಾಗಿದೆ ಎಂದಿದ್ದರು.

ಕೆಲ ಹೊತ್ತಿನ ಬಳಿಕ ಅವರನ್ನು  ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ  ಎಂಬ ಸುದ್ದಿ ಬಂದಿದೆ. ಸದ್ಯಕ್ಕೆ ಸಂಜನಾ ಗಲ್ರಾನಿ  ಆಸ್ಪತ್ರೆಗೆ ಸೇರಿದ್ದು ಯಾಕೆ ಎಂಬ ಮಾಹಿತಿ ತಿಳಿದಿಲ್ಲ. ಆಸ್ಪತ್ರೆಯಿಂದಲೇ ಲೈವ್ ನಲ್ಲಿ ಮಾತನಾಡಿರುವ ಇವರು,  ನನ್ನ ಆರೋಗ್ಯ ಈಗ ಸುಧಾರಿಸಿದೆ ಎಂದು ಹೇಳಿಕೊಂಡಿದ್ದಾರೆ. ಅದೇನೆ ಇರಲಿ, ಸಂಜನಾ ಜೈಲಿನಿಂದ ಹೊರಬಂದ ಬಳಿಕ ಮಾತನಾಡಿದ್ದು, ಆಸ್ಪತ್ರೆಗೆ ಸೇರಿದ್ದು ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ.

Categories
ಟಾಲಿವುಡ್

ಆಫ್ರಿಕಾದಲ್ಲಿ ರಾಜ್‌ಮೌಳಿ-ಮಹೇಶ್ ಬಾಬು ಸಿನಿಮಾ!  ‘ಆರ್‌ಆರ್‌ಆರ್‌’ ನಂತರ ಸೆಟ್ಟೇರಲಿದೆ ಮೆಗಾ ಪ್ರಾಜೆಕ್ಟ್‌  


ರಾಜ್‌ಮೌಳಿ ಸದ್ಯ ರಾಮ್‌ ಚರಣ್‌ ತೇಜಾ ಮತ್ತು ಜ್ಯೂನಿಯರ್ ಎನ್‌ಟಿಆರ್‌ ನಟನೆಯ ‘ಆರ್‌ಆರ್‌ಆರ್‌’ ಸಿನಿಮಾದಲ್ಲಿ ಬ್ಯುಜಿಯಾಗಿದ್ದಾರೆ. ಇದಾದ ನಂತರ ಅವರು ಮಹೇಶ್ ಬಾಬು ಸಿನಿಮಾ ಕೈಗೆತ್ತಿಕೊಳ್ಳುವುದು ಬಹುತೇಕ ಖಚಿತವಾಗಿದೆ. ರಾಜ್‌ಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಚಿತ್ರಕಥೆ ರಚಿಸುತ್ತಿದ್ದು, ಇದಕ್ಕೆ ದಟ್ಟ ಕಾಡಿನ ಹಿನ್ನೆಲೆಯ ಬ್ಯಾಕ್‌ಡ್ರಾಪ್‌ ಅವಶ್ಯಕತೆ ಇದೆ ಎನ್ನಲಾಗುತ್ತಿದೆ. ಹಾಗಾಗಿ ಆಫ್ರಿಕಾದ ಕಾಡುಗಳಲ್ಲಿ ಚಿತ್ರೀಕರಣ ನಡೆಸುವ ಬಗ್ಗೆ ರಾಜ್‌ಮೌಳಿ ಯೋಚಿಸುತ್ತಿದ್ದಾರೆ. ಮುಂದಿನ ವರ್ಷದಲ್ಲಿ ಚಿತ್ರ ಸೆಟ್ಟೇರಲಿದ್ದು, ಈ ಚಿತ್ರದೊಂದಿಗೆ ಪ್ಯಾನ್‌ ಇಂಡಿಯಾ ಸ್ಟಾರ್ ಆಗುವ ಕನಸು ಕಾಣುತ್ತಿದ್ದಾರೆ ಮಹೇಶ್ ಬಾಬು.

ದಟ್ಟ ಕಾನನದಲ್ಲಿ ನಡೆಯುವ ಆಕ್ಷನ್‌-ಥ್ರಿಲ್ಲರ್ ಚಿತ್ರಕ್ಕಾಗಿ ಸೂಕ್ತ ತಯಾರಿ ನಡೆದಿದೆ. ಪೀರಿಯಡ್‌ ಸಿನಿಮಾಗಳ ನಂತರ ರಾಜ್‌ಮೌಳಿ ಮತ್ತು ವಿಜಯೇಂದ್ರ ಪ್ರಸಾದ್ ಅವರು ಹೊಸ ರೀತಿಯ ಕತೆ ಮಾಡಲು ಹವಣಿಸುತ್ತಿದ್ದಾರೆ. ಮಹೇಶ್ ಬಾಬು ಚಿತ್ರದೊಂದಿಗೆ ಇದನ್ನು ಸಾಕಾರಗೊಳಿಸುವುದು ಅವರ ಉದ್ದೇಶ. ಭಾರತೀಯ ಸಿನಿಮಾಗಳಲ್ಲಿ ಹಿಂದೆಂದೂ ಚಿತ್ರಿಸದ ಆಫ್ರಿಕಾ ಕಾಡುಗಳಲ್ಲಿ ಸಿನಿಮಾ ಮಾಡುವುದು ರಾಜ್‌ಮೌಳಿ ಯೋಜನೆ. ಸದ್ಯ ಮಹೇಶ್ ಬಾಬು ‘ಸರ್ಕಾರು ವಾರಿ ಪಾಟ’ ಚಿತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಪರಶುರಾಮ್ ಪೆಟ್ಲಾ ನಿರ್ದೇಶನದ ಚಿತ್ರದಲ್ಲಿ ಮಹೇಶ್ ಬಾಬುಗೆ ಕೀರ್ತಿ ಸುರೇಶ್ ನಾಯಕಿ.

Categories
ಸೌತ್‌ ಸೆನ್ಸೇಷನ್

ಕಾಜಲ್‌ ನಿದ್ರೆಯಿಲ್ಲದ ರಾತ್ರಿಗಳು! ‘ಲೈವ್‌ ಟೆಲಿಕಾಸ್ಟ್‌’ ವೆಬ್‌ ಸರಣಿ ಪ್ರೀಮಿಯರ್

ದಕ್ಷಿಣ ಭಾರತದ ಜನಪ್ರಿಯ ತಾರೆ ಕಾಜಲ್ ಅಗರ್‌ವಾಲ್‌ ಇದೀಗ ಓಟಿಟಿಗೂ ಕಾಲಿಟ್ಟಿದ್ದಾರೆ. ಅವರು ಮುಖ್ಯಪಾತ್ರದಲ್ಲಿ ನಟಿಸಿರುವ ‘ಲೈವ್ ಟೆಲಿಕಾಸ್ಟ್‌’ ವೆಬ್‌ ಸರಣಿ ಫೆಬ್ರವರಿ 12ರಿಂದ ಹಾಟ್‌ಸ್ಟಾರ್‌ನಲ್ಲಿ ಪ್ರೀಮಿಯರ್ ಆಗುತ್ತಿದೆ. ವೆಂಕಟ್ ಪ್ರಭು ನಿರ್ದೇಶನದಲ್ಲಿ ತಯಾರಾಗಿರುವ ಸರಣಿಯಿದು. ಟೀವಿ ಚಾನೆಲ್ ತಂಡವೊಂದು ಕಾರ್ಯಕ್ರಮವೊಂದನ್ನು ರೂಪಿಸಲು ಸಜ್ಜಾಗಿರುತ್ತದೆ.

ಈ ಹಂತದಲ್ಲಿ ಇವರಿದ್ದ ಮನೆಯನ್ನು ಅತೀಂದ್ರಿಯ ಶಕ್ತಿಗಳು ನಿಯಂತ್ರಿಸತೊಡಗುತ್ತವೆ. ಇಂಥದ್ದೊಂದು ಥ್ರಿಲ್ಲಿಂಗ್‌ ಹಿನ್ನೆಲೆಯ ಕಥಾವಸ್ತು ಸರಣಿಯದ್ದು.
ಸರಣಿಯಲ್ಲಿ ನಟಿಸಿದ ತಮ್ಮ ಅನುಭವಗಳನ್ನು ಕಾಜಲ್ ಹಂಚಿಕೊಳ್ಳುತ್ತಾ, “ಚಿತ್ರೀಕರಣ ನಡೆದ ಮನೆ ನಮ್ಮ ಸರಣಿಗೆ ಹೇಳಿಮಾಡಿಸಿದ ಹಾಗಿತ್ತು. ಎತ್ತರದ ಗುಡ್ಡದ ಮೇಲಿನ ಒಂಟಿ ಮನೆ. ನಮ್ಮ ಕತೆಗೆ ಸೂಕ್ತವಾಗಿ ಹೊಂದಿಕೆಯಾಗಿತ್ತು.

ಆದರೆ ಸರಣಿ ಚಿತ್ರೀಕರಣದುದ್ದಕ್ಕೂ ರಾತ್ರಿಗಳು ನನಗೆ ಭಯಾನಕವಾಗಿದ್ದವು. ಹೆದರಿಕೆಯಿಂದ ನಿದ್ದೆ ಮಾಡುತ್ತಿದ್ದಿಲ್ಲ. ಅದರ ಹೊರತಾಗಿ ನಾನಂತೂ ಸಂಪೂರ್ಣವಾಗಿ ಪಾತ್ರದಲ್ಲಿ ಲೀನವಾಗಿದ್ದೆ” ಎನ್ನುತ್ತಾರೆ. ವೈಭವ್ ರೆಡ್ಡಿ, ಕಾಯಲ್ ಆನಂದಿ, ಪ್ರಿಯಾಂಕಾ, ಸೆಲ್ವ, ಡೇನಿಯಲ್ ಇತರರು ‘ಲೈವ್ ಟೆಲಿಕಾಸ್ಟ್‌’ನಲ್ಲಿ ನಟಿಸಿದ್ದಾರೆ.

Categories
ಸಿನಿ ಸುದ್ದಿ

ಶುರುವಾಯ್ತು ರಶ್ಮಿಕಾ ಹಿಂದಿ ಸಿನಿಮಾ! ಮಿಷನ್ ಮಜ್ನೂ ಹೀರೋ ಸಿದ್ಧಾರ್ಥ್ ಮಲ್ಹೋತ್ರಾ

ಕನ್ನಡತಿ ರಶ್ಮಿಕಾ ಮಂದಣ್ಣ ಈಗ ದಕ್ಷಿಣ ಭಾರತದ ಬೇಡಿಕೆಯ ನಟಿ. ಇನ್ನೂ ಒಂದು ಮೆಟ್ಟಿಲು ಹತ್ತಿರುವ ಅವರೀಗ ಬಾಲಿವುಡ್ ಹಿರೋಯಿನ್‌! ಶಂತನು ಬಾಗ್ಚಿ ನಿರ್ದೇಶನದ ಅವರ ಹಿಂದಿ ಸಿನಿಮಾ ‘ಮಿಷನ್ ಮಜ್ನೂ’ ಇಂದು ಚಿತ್ರೀಕರಣ ಆರಂಭಿಸಿದೆ. ‘ಕಪೂರ್ ಅಂಡ್ ಸನ್ಸ್‌’, ‘ಏಕ್ ವಿಲನ್‌’ ಸಿನಿಮಾಗಳ ಖ್ಯಾತಿಯ ಸಿದ್ಧಾರ್ಥ್ ಮಲ್ಹೋತ್ರಾ ಚಿತ್ರದ ಹೀರೋ.

ಇಂದು ಚಿತ್ರಕ್ಕೆ ಚಾಲನೆ ಸಿಕ್ಕಿದ್ದು ನಾಯಕ – ನಾಯಕಿ ಸಿದ್ಧಾರ್ಥ್ ಮತ್ತು ರಶ್ಮಿಕಾ ಸ್ಕ್ರಿಪ್ಟ್‌ ಪೇಪರ್‌ ಹಿಡಿದು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಎಪತ್ತರ ದಶಕದ ಹಿನ್ನೆಲೆಯ ಕತೆ ಚಿತ್ರದಲ್ಲಿರುತ್ತದೆ. ನೈಜ ಘಟನೆಯನ್ನು ಆಧರಿಸಿ ಹೆಣೆದಿರುವ ಕತೆಯಲ್ಲಿ ಸಿದ್ಧಾರ್ಥ್‌ ರಾ  ಏಜೆಂಟ್‌ ಪಾತ್ರ ನಿರ್ವಹಿಸುತ್ತಿದ್ದಾರೆ. ಭಾರತ ಮತ್ತು ಪಾಕಿಸ್ತಾನ ಗೂಢಚರ್ಯೆಗೆ ಸಂಬಂಧಿಸಿದಂತಹ ಪ್ರಮುಖ ಅಂಶವೊಂದು ಹೇಗೆ ಎರಡು ದೇಶಗಳ ಸಂಬಂಧದ ಮೇಲೆ ಪರಿಣಾಮ ಬೀರುತ್ತದೆ ಎನ್ನುವುದರ ಸುತ್ತ ಕಥಾಹಂದರ ಹೆಣೆಯಲಾಗಿದೆ.

ಪರ್ವೀಜ್ ಶೇಖ್‌, ಅಸೀಮ್ ಅರೋರಾ, ಸುಮಿತ್ ಬತೇಜಾ ಚಿತ್ರಕಥೆ ಹೆಣೆದಿದ್ದಾರೆ. “ವಿಶೇಷ ತಂಡದೊಂದಿಗೆ ಅಪರೂಪದ ಕತೆಯ ಸಿನಿಮಾ ಶುರುವಾಗಿದೆ” ಎಂದು ನಟ ಸಿದ್ಧಾರ್ಥ್ ಟ್ವೀಟ್ ಮಾಡಿ ಫೋಟೋ ಹಂಚಿಕೊಂಡಿದ್ದಾರೆ.

Categories
ಸಿನಿ ಸುದ್ದಿ

ಗೋವಾ ಕನ್ನಡಿಗನ ಸಲಗ ಪ್ರೀತಿ- ಕೈ ಮೇಲೆ ಟ್ಯಾಟೋ ಹಾಕಿಸಿಕೊಂಡ ದುನಿಯಾ ವಿಜಯ್ ಅಭಿಮಾನಿ

ಭಾವುಕರಾದ ವಿಜಯ್‌ ಅಭಿಮಾನಿ ಜೊತೆ ವಿಡಿಯೋ ಕಾಲ್‌ ಮಾತುಕತೆ

ಅದೇನೋ ಗೊತ್ತಿಲ್ಲ. ಸಿನಿಮಾ ಸ್ಟಾರ್ಸ್‌ ಅಂದರೆ, ಅದೊಂದು ರೀತಿ ಎಲ್ಲಿಲ್ಲದ ಅಭಿಮಾನ. ಅಭಿಮಾನಿಗಳು ತಮ್ಮ ತಮ್ಮ ಹೀರೋಗಳನ್ನು ಆರಾಧಿಸುವ ಪರಿ ಬಗ್ಗೆ ಹೇಳುವುದು ಕಷ್ಟವೇ. ಹೌದು, ಇಲ್ಲೀಗ ಹೇಳಹೊರಟಿರುವ ವಿಷಯ, “ದುನಿಯಾ” ವಿಜಯ್‌ ಅಭಿಮಾನಿಯೊಬ್ಬನ ಪ್ರೀತಿಯ ಬಗ್ಗೆ. ಉತ್ತರ ಕರ್ನಾಟಕ ಮೂಲದ ಹನುಮಂತ ಎಂಬ ಹುಡುಗ, ಗೋವಾದಲ್ಲಿರುವ ಕಿರಾಣಿ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾನೆ.

ಅವನಿಗೆ “ದುನಿಯಾ” ವಿಜಯ್‌ ಅಂದರೆ, ತುಂಬು ಪ್ರೀತಿ. ಅಪ್ಪಟ ಅಭಿಮಾನಿಯೂ ಹೌದು. ವಿಜಯ್‌ ಅವರಂತೆಯೇ ಹನುಮಂತ ಕೂಡ ತನ್ನ ತಂದೆ-ತಾಯಿಯನ್ನು ಅಷ್ಟೇ ಪ್ರೀತಿಯಿಂದ ಆರಾಧಿಸುತ್ತಾನೆ. ತಮ್ಮ ಪ್ರೀತಿಯ ಹೀರೋ “ದುನಿಯಾ” ವಿಜಯ್‌ ಅವರ ಚೊಚ್ಚಲ ನಿರ್ದೇಶನದ “ಸಲಗ” ಚಿತ್ರ ಯಶಸ್ವಿಯಾಗಲಿ ಎಂದು ಹಾರೈಸಿ,”ಸಲಗ” ಟೈಟಲ್‌ ಅನ್ನು ತನ್ನ ಕೈ ಮೇಲೆ ಟ್ಯಾಟೋ ಹಾಕಿಸಿಕೊಂಡು ಅಭಿಮಾನ ಮೆರೆದಿದ್ದಾನೆ.

ಈ ಅಭಿಮಾನಿಯ ವಿಷಯ ತಿಳಿಯುತ್ತಿದ್ದಂತೆಯೇ “ದುನಿಯಾ” ವಿಜಯ್‌ ಗೋವಾದಲ್ಲಿರುವ ಅಭಿಮಾನಿ ಹನುಮಂತುಗೆ ವಿಡಿಯೋ ಕಾಲ್‌ ಮಾಡಿ, ಪ್ರೀತಿಯಿಂದ ಮಾತಾಡಿದ್ದಾರೆ. ವಿಜಯ್‌ ವಿಡಿಯೋ ಕಾಲ್‌ ಮಾಡುತ್ತಿದ್ದಂತೆಯೇ, ಆ ಅಭಿಮಾನಿ ಹನುಮಂತು, ಖುಷಿಗೊಂಡಿದ್ದಾರೆ. ಆನಂದಭಾಷ್ಪ ಸುರಿಸಿದ್ದಾರೆ. ಈ ವೇಳೆ ವಿಜಯ್‌ ಕೂಡ ಭಾವುಕರಾಗಿ, ತಮ್ಮ ಅಭಿಮಾನಕ್ಕೆ ಮೂಕನಾಗಿದ್ದೇನೆ ಎಂದು ಹೇಳಿದ್ದಾರೆ. ನಿಮ್ಮ ತಂದೆ-ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಿ. ನಿಮಗೆ ಒಳ್ಳೆಯದಾಗುತ್ತೆ ಎಂದು ಹನುಮಂತನಿಗೆ ಶುಭಕೋರಿದ್ದಾರೆ. ಸದ್ಯಕ್ಕೆ ಈ ವಿಡಿಯೋ ವೈರಲ್‌ ಆಗುತ್ತಿದೆ.

 

Categories
ಸಿನಿ ಸುದ್ದಿ

ರಿಷಭ್‌ ಶೆಟ್ಟಿ ಹೀರೋ ಆಗಿ ಎಂಟ್ರಿ- ಅಶೋಕವನ ಎಸ್ಟೇಟ್‌ನಲ್ಲಿ ರಕ್ತಚರಿತ್ರೆ!

ಮಾರ್ಚ್ 5ಕ್ಕೆ ಹೀರೋ ಸಿನಿಮಾ ಬಿಡುಗಡೆ

ಕನ್ನಡದಲ್ಲೀಗ ಸಾಲು ಸಾಲು ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿವೆ. ಆ ಸಾಲಿಗೆ ಈಗ ರಿಷಭ್‌ ಶೆಟ್ಟಿ ಅವರ ನಿರ್ಮಾಣದ “ಹೀರೋ” ಕೂಡ ರಿಲೀಸ್‌ಗೆ ರೆಡಿಯಾಗಿದೆ. ಮಾರ್ಚ್‌ 5 ರಂದು “ಹೀರೋ”ರಾಜ್ಯಾದ್ಯಂತ ತೆರೆಗೆ ಬರುತ್ತಿದೆ. ಈ ವಿಷಯವನ್ನು ಸ್ವತಃ ರಿಷಭ್‌ ಶೆಟ್ಟಿ ಅವರೇ ತಮ್ಮ ಟ್ವೀಟ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ರಿಷಬ್ ಶೆಟ್ಟಿ ಫಿಲಂ ಬ್ಯಾನರ್‌ನಲ್ಲಿ ಈ ಚಿತ್ರ ತಯಾರಾಗಿದೆ. ಎಂ. ಭರತ್ ರಾಜ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಇನ್ನು, ರಿಷಭ್‌ ಶೆಟ್ಟಿ ಇಲ್ಲಿ ಹೀರೋ ಆಗಿದ್ದರೆ, ಅವರಿಗೆ ಗಾನವಿ ಲಕ್ಷ್ಮಣ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಈ ಚಿತ್ರದಲ್ಲಿ ಪ್ರಮೋದ್ ಶೆಟ್ಟಿ, ಮಂಜುನಾಥ್ ಗೌಡ ಸೇರಿದಂತೆ ಹಲವರು ಇದ್ದಾರೆ.


ಈ “ಹೀರೋ” ಬಗ್ಗೆ ಹೇಳುವುದಾದರೆ, ಅಶೋಕ ವನ ಎಸ್ಟೇಟ್‌ ನಲ್ಲಿ ನಡೆಯುವ ಒಂದು ಕಥೆ. ಸಸ್ಪೆನ್ಸ್‌ ಥ್ರಿಲ್ಲರ್‌ ಕಥೆ ಇದು. ವಿಶೇಷವೆಂದರೆ, ಲಾಕ್‌ಡೌನ್‌ ಸಮಯದಲ್ಲಿ ಚಿತ್ರೀಕರಣಗೊಂಡಿರುವ ಸಿನಿಮಾ. ಎಲ್ಲರೂ ಲಾಕ್‌ಡೌನ್‌ ಸಮಯದಲ್ಲಿ ಮನೆಯಲ್ಲಿದ್ದರೆ, ರಿಷಭ್‌ ಶೆಟ್ಟಿ, ಆ ವೇಳೆ ಚಂದದ ಕಥೆ ಮಾಡಿಕೊಂಡು, ಸ್ಕ್ರಿಪ್ಟ್‌ ಬರೆದು, ಚಿತ್ರೀಕರಣಕ್ಕೆ ಅಣಿಯಾದರು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ರಿಷಭ್‌ ಶೆಟ್ಟಿ ಬ್ಯಾನರ್‌ನಲ್ಲಿ ಇದೇ ಮೊದಲ ಸಲ ರಕ್ತಗತವಾದ ಅಂಶಗಳಿರುವ ಸಿನಿಮಾ ಎಂಬುದು. ಹೌದು, ಇಲ್ಲಿ ಗನ್‌ಗಳ ಸದ್ದಿದೆ, ರಕ್ತದ ಕಲೆಗಳೂ ಕಾಣಿಸಿಕೊಳ್ಳುತ್ತವೆ. ಬಹುತೇಕ ಒಂದು ಕಾಡು, ಅಶೋಕವನ ಎಂಬ ಎಸ್ಟೇಟ್‌ ಸುತ್ತಲೇ ಸುತ್ತುವ ಕಥೆ ಇದಾಗಿದೆ. ರಿಷಭ್‌ ಆಗಾಗ ಪ್ರಯತ್ನಕ್ಕೆ ಇಳಿಯುತ್ತಲೇ ಇರುತ್ತಾರೆ. ಅಂಥದ್ದೊಂದು ಪ್ರಯತ್ನ “ಹೀರೋ” ಮೂಲಕ ಆಗಿದೆ ಎಂಬುದು ಚಿತ್ರತಂಡದ ಮಾತು. ಅದೇನೆ ಇರಲಿ, ಇಲ್ಲಿ “ಹೀರೋ” ಯಾರು? ಈ ಪ್ರಶ್ನೆಗೆ ಮಾರ್ಚ್‌ 5ರವರೆಗೆ ಕಾಯಲೇಬೇಕು.

error: Content is protected !!