ರಿಷಭ್‌ ಶೆಟ್ಟಿ ಹೀರೋ ಆಗಿ ಎಂಟ್ರಿ- ಅಶೋಕವನ ಎಸ್ಟೇಟ್‌ನಲ್ಲಿ ರಕ್ತಚರಿತ್ರೆ!

ಮಾರ್ಚ್ 5ಕ್ಕೆ ಹೀರೋ ಸಿನಿಮಾ ಬಿಡುಗಡೆ

ಕನ್ನಡದಲ್ಲೀಗ ಸಾಲು ಸಾಲು ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿವೆ. ಆ ಸಾಲಿಗೆ ಈಗ ರಿಷಭ್‌ ಶೆಟ್ಟಿ ಅವರ ನಿರ್ಮಾಣದ “ಹೀರೋ” ಕೂಡ ರಿಲೀಸ್‌ಗೆ ರೆಡಿಯಾಗಿದೆ. ಮಾರ್ಚ್‌ 5 ರಂದು “ಹೀರೋ”ರಾಜ್ಯಾದ್ಯಂತ ತೆರೆಗೆ ಬರುತ್ತಿದೆ. ಈ ವಿಷಯವನ್ನು ಸ್ವತಃ ರಿಷಭ್‌ ಶೆಟ್ಟಿ ಅವರೇ ತಮ್ಮ ಟ್ವೀಟ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ರಿಷಬ್ ಶೆಟ್ಟಿ ಫಿಲಂ ಬ್ಯಾನರ್‌ನಲ್ಲಿ ಈ ಚಿತ್ರ ತಯಾರಾಗಿದೆ. ಎಂ. ಭರತ್ ರಾಜ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಇನ್ನು, ರಿಷಭ್‌ ಶೆಟ್ಟಿ ಇಲ್ಲಿ ಹೀರೋ ಆಗಿದ್ದರೆ, ಅವರಿಗೆ ಗಾನವಿ ಲಕ್ಷ್ಮಣ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಈ ಚಿತ್ರದಲ್ಲಿ ಪ್ರಮೋದ್ ಶೆಟ್ಟಿ, ಮಂಜುನಾಥ್ ಗೌಡ ಸೇರಿದಂತೆ ಹಲವರು ಇದ್ದಾರೆ.


ಈ “ಹೀರೋ” ಬಗ್ಗೆ ಹೇಳುವುದಾದರೆ, ಅಶೋಕ ವನ ಎಸ್ಟೇಟ್‌ ನಲ್ಲಿ ನಡೆಯುವ ಒಂದು ಕಥೆ. ಸಸ್ಪೆನ್ಸ್‌ ಥ್ರಿಲ್ಲರ್‌ ಕಥೆ ಇದು. ವಿಶೇಷವೆಂದರೆ, ಲಾಕ್‌ಡೌನ್‌ ಸಮಯದಲ್ಲಿ ಚಿತ್ರೀಕರಣಗೊಂಡಿರುವ ಸಿನಿಮಾ. ಎಲ್ಲರೂ ಲಾಕ್‌ಡೌನ್‌ ಸಮಯದಲ್ಲಿ ಮನೆಯಲ್ಲಿದ್ದರೆ, ರಿಷಭ್‌ ಶೆಟ್ಟಿ, ಆ ವೇಳೆ ಚಂದದ ಕಥೆ ಮಾಡಿಕೊಂಡು, ಸ್ಕ್ರಿಪ್ಟ್‌ ಬರೆದು, ಚಿತ್ರೀಕರಣಕ್ಕೆ ಅಣಿಯಾದರು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ರಿಷಭ್‌ ಶೆಟ್ಟಿ ಬ್ಯಾನರ್‌ನಲ್ಲಿ ಇದೇ ಮೊದಲ ಸಲ ರಕ್ತಗತವಾದ ಅಂಶಗಳಿರುವ ಸಿನಿಮಾ ಎಂಬುದು. ಹೌದು, ಇಲ್ಲಿ ಗನ್‌ಗಳ ಸದ್ದಿದೆ, ರಕ್ತದ ಕಲೆಗಳೂ ಕಾಣಿಸಿಕೊಳ್ಳುತ್ತವೆ. ಬಹುತೇಕ ಒಂದು ಕಾಡು, ಅಶೋಕವನ ಎಂಬ ಎಸ್ಟೇಟ್‌ ಸುತ್ತಲೇ ಸುತ್ತುವ ಕಥೆ ಇದಾಗಿದೆ. ರಿಷಭ್‌ ಆಗಾಗ ಪ್ರಯತ್ನಕ್ಕೆ ಇಳಿಯುತ್ತಲೇ ಇರುತ್ತಾರೆ. ಅಂಥದ್ದೊಂದು ಪ್ರಯತ್ನ “ಹೀರೋ” ಮೂಲಕ ಆಗಿದೆ ಎಂಬುದು ಚಿತ್ರತಂಡದ ಮಾತು. ಅದೇನೆ ಇರಲಿ, ಇಲ್ಲಿ “ಹೀರೋ” ಯಾರು? ಈ ಪ್ರಶ್ನೆಗೆ ಮಾರ್ಚ್‌ 5ರವರೆಗೆ ಕಾಯಲೇಬೇಕು.

Related Posts

error: Content is protected !!