ಸಲ್ಮಾನ್‌ಗೆ ಇಮ್ರಾನ್‌ ಹಶ್ಮಿ‌ ವಿಲನ್! ಯೂರೋಪ್‌ನಲ್ಲಿ ಸಲ್ಲೂ-ಕತ್ರಿನಾ ‘ಟೈಗರ್‌ 3’ ಶೂಟಿಂಗ್

ಕಬೀರ್ ಖಾನ್‌ ನಿರ್ದೇಶನದಲ್ಲಿ 2012ರಲ್ಲಿ ತೆರೆಕಂಡ ‘ಏಕ್ ಥಾ ಟೈಗರ್‌’ ಚಿತ್ರದಲ್ಲಿ ಸಲ್ಮಾನ್ ಮತ್ತು ಕತ್ರಿನಾ ಕೈಫ್ ನಟಿಸಿದ್ದರು. ಚಿತ್ರದಲ್ಲಿನ ಅವರ RAW ಮತ್ತು ISI ಏಜೆಂಟ್ ಪಾತ್ರಗಳು ಕ್ಲಿಕ್ಕಾಗಿದ್ದವು. ಇದಾಗಿ ಐದು ವರ್ಷಕ್ಕೆ ಅಬ್ಬಾಶ್ ಜಾಫರ್‌ ನಿರ್ದೇಶನದಲ್ಲಿ ‘ಟೈಗರ್ ಜಿಂದಾ ಹೈ’ ಬಂತು. ಸಲ್ಲೂ ಮತ್ತು ಕತ್ರಿನಾ ಜೋಡಿಯ ಸಿನಿಮಾ ಬಾಕ್ಸ್ ಆಫೀಸ್ ದಾಖಲೆಗಳನ್ನು ಧೂಳಿಪಟ ಮಾಡಿತು.

ಇದೀಗ ಟೈಗರ್ ಮತ್ತು ಜೋಯಾ ‘ಟೈಗರ್ 3’ಯಲ್ಲಿ ಜೋಡಿಯಾಗುತ್ತಿದ್ದಾರೆ. ಮನೀಶ್ ಶರ್ಮಾ ನಿರ್ದೇಶನದ ಚಿತ್ರದ ಖಳಪಾತ್ರದಲ್ಲಿ ‘ಕಿಸ್ಸಿಂಗ್ ಸ್ಟಾರ್‌’ ಇಮ್ರಾನ್ ಹಶ್ಮಿ ನಟಿಸಲಿದ್ದಾರೆ ಎನ್ನುವುದು ವಿಶೇ‍ಷ! ಚಿತ್ರ ನಿರ್ಮಿಸುತ್ತಿರುವ ಯಶ್ ರಾಜ್ ಫಿಲ್ಮ್ಸ್‌ ಸಂಸ್ಥೆ ಚಿತ್ರದ ಖಳನಾಗಿ ಹೊಸ ನಟನನ್ನು ಪರಿಚಯಿಸುವ ಇರಾದೆ ಹೊಂದಿತ್ತು. ಹಾಗೆ ಹಿಂದೆ ‘ಟೈಗರ್ ಜಿಂದಾ ಹೈ’ ಚಿತ್ರದಲ್ಲಿ ಅವರು ಸಾಜದ್ ಡೆಲಾಫ್ರೂಜ್‌ ಅವರನ್ನು ಪರಿಚಯಿಸಿದ್ದರು. ಇದೀಗ ‘ಟೈಗರ್‌ 3’ನಲ್ಲಿ ಇಮ್ರಾನ್ ಹಶ್ಮಿ ಅವರನ್ನು ಕರೆತಂದಿರುವುದು ಚರ್ಚೆಗೆ ಗ್ರಾಸವಾಗಿದೆ.

‘ಟೈಗರ್ 3’ ಮುಂದಿನ ತಿಂಗಳು ಚಿತ್ರೀಕರಣ ಆರಂಭಿಸಲಿದೆ. ಮುಂಬಯಿಯ ಯಶ್ ರಾಜ್‌ ಸ್ಟುಡಿಯೋದಲ್ಲಿ ಮೊದಲ ಹಂತದ ಶೂಟಿಂಗ್‌ಗೆ ಚಾಲನೆ ಸಿಗಲಿದೆ. ಅಲ್ಲಿ ಸಲ್ಮಾನ್‌, ಕತ್ರಿನಾ ಮತ್ತು ಇಮ್ರಾನ್ ನಟನೆಯ ಕೆಲವು ಸನ್ನಿವೇಶಗಳು ಚಿತ್ರಣಗೊಳ್ಳಲಿವೆಯಂತೆ. ಎರಡನೇ ಹಂತದ ಚಿತ್ರೀಕರಣಕ್ಕೆ ಚಿತ್ರತಂಡ ಯೂರೋಪ್‌ಗೆ ತೆರಳಲಿದೆ. ಮತ್ತೆ ಮೂರನೇ ಹಂತ ಮುಂಬಯಿಯ ಸ್ಟುಡಿಯೋದಲ್ಲಿ ಚಿತ್ರಿತವಾಗಲಿದೆ. ಶಾರುಖ್ ನಟನೆಯ ‘ಪಠಾಣ್‌’ ಚಿತ್ರದ ಒಂದು ಪಾತ್ರದಲ್ಲಿ ಸಲ್ಮಾನ್ ನಟಿಸುತ್ತಿದ್ದಾರೆ. ಆ ಸಿನಿಮಾದ ಕೆಲಸ ಪೂರ್ಣಗೊಳ್ಳುತ್ತಲೇ ಸಲ್ಮಾನ್‌ ‘ಟೈಗರ್ 3’ ತಂಡಕ್ಕೆ ಹಾಜರಾಗಲಿದ್ದಾರೆ. ಖಳಪಾತ್ರದಲ್ಲಿ ಇಮ್ರಾನ್‌ ಹೇಗೆ ಕಾಣಿಸಿಕೊಳ್ಳಬಹುದು ಎನ್ನುವ ಕುತೂಹಲ ಎಲ್ಲರದು.

Related Posts

error: Content is protected !!