ತಾಯಿಯಾದ ಸಂಭ್ರಮದಲ್ಲಿ ವೀರ ಕನ್ನಡಿಗ ನಟಿ

ಸಿನಿಮಾ ಮತ್ತು ಕಿರುತೆರೆ ನಟಿ ಅನಿತಾ ಹಸ್ಸನಂದನಿ ತಾಯಿಯಾದ ಸಂಭ್ರಮದಲ್ಲಿದ್ದಾರೆ. ಅನಿತಾ ಮತ್ತು ರೋಹಿತ್ ರೆಡ್ಡಿ ದಂಪತಿ ಗಂಡು ಮಗುವಿಗೆ ಜನ್ಮ ನೀಡಿದ್ದು,  ಅವರಿಗೆ ಸಿನಿಮಾರಂಗದ ಹಲವರು ಶುಭ ಹಾರೈಸುತ್ತಿದ್ದಾರೆ. ದಂಪತಿ ಈ ಸಂತಸದ ಸಂದರ್ಭದ ಫೋಟೋ, ವೀಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅನಿತಾ ಅವರ ಆತ್ಮೀಯ ಗೆಳತಿ, ನಿರ್ಮಾಪಕಿ ಏಕ್ತಾ ಕಪೂರ್‌ ಆಸ್ಪತ್ರೆಯಲ್ಲಿ ನಟಿಯನ್ನು ಭೇಟಿ ಮಾಡಿ ಶುಭ ಹಾರೈಸಿ ಅಲ್ಲಿನ ಫೋಟೋ ಶೇರ್ ಮಾಡಿದ್ದರು.

ಮುಂಬಯಿಯ ಸಿಂಧಿ ಕುಟುಂಬದ ಅನಿತಾ ದಕ್ಷಿಣದ ತೆಲುಗು, ತಮಿಳು ಚಿತ್ರೋದ್ಯಮಗಳಲ್ಲಿ ದೊಡ್ಡ ಗೆಲುವು ಕಂಡ ನಟಿ. ಉದಯ ಕಿರಣ್ ಜೊತೆ ಅವರು ನಟಿಸಿದ ‘ನುವ್ವು ನೇನು’ ತೆಲುಗು ಸಿನಿಮಾ ಸೂಪರ್‌ ಹಿಟ್ ಆಗಿತ್ತು. ಪುನೀತ್ ರಾಜಕುಮಾರ್ ಜೋಡಿಯಾಗಿ ‘ವೀರಕನ್ನಡಿಗ’ ಚಿತ್ರದೊಂದಿಗೆ ಕನ್ನಡಕ್ಕೆ ಬಂದ ಅವರು ‘ಗಂಡುಗಲಿ ಕುಮಾರರಾಮ’ ಚಿತ್ರದ ವಿಶಿಷ್ಠ ಪಾತ್ರದಲ್ಲಿ ನಟಿಸಿದ್ದರು.

ಇಂದ್ರಜಿತ್ ಲಂಕೇಶ್ ನಿರ್ದೇಶನದ ‘ಹುಡುಗ ಹುಡುಗಿ’ ನಂತರ ಮತ್ತೆ ಅವರು ಕನ್ನಡದಲ್ಲಿ ಕಾಣಿಸಿಕೊಂಡಿಲ್ಲ. ಕಳೆದ ಐದಾರು ವರ್ಷಗಳಿಂದ ಕಿರುತೆರೆಯಲ್ಲಿ ಬ್ಯುಜಿಯಾಗಿರುವ ಅವರು ಹಿಂದಿ ಸರಣಿಗಳಲ್ಲಿ ಜನಪ್ರಿಯತೆ ಗಳಿಸಿದ್ದಾರೆ. ಕಾವ್ಯಾಂಜಲಿ, ಯೆಹ್ ಹೈ ಮೊಹಬತೇನ್‌, ನಾಗಿನ್‌ 3 ಹಿಂದಿ ಸರಣಿಗಳು ಅವರಿಗೆ ಹೆಸರು ತಂದುಕೊಟ್ಟಿವೆ. ಕೃಷ್ಣಾ ಕಾಟೇಜ್‌, ಕುಚ್ ತೋ ಹೈ, ರಾಗಿಣಿ ಎಂಎಂಎಸ್‌ ಅವರ ನಟನೆಯ ಹಿಂದಿ ಸಿನಿಮಾಗಳು. 2013ರಲ್ಲಿ ಉದ್ಯಮಿ ರೋಹಿತ್‌ ರೆಡ್ಡಿ ಅವರನ್ನು ವರಿಸಿದ್ದ ಅವರ ದಾಂಪತ್ಯಕ್ಕೀಗ ಪುತ್ರ ಜನಿಸಿದ್ದಾನೆ.

Related Posts

error: Content is protected !!