ಕನ್ನಡ ಚಿತ್ರರಂಗದ ಹಿರಿಯ ನಟಿ ಪ್ರತಿಮಾ ದೇವಿ (88) ನಿಧನರಾಗಿದ್ದಾರೆ. ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಅವರು, ಇಹಲೋಕ ತ್ಯಜಿಸಿದ್ದಾರೆ. ಮೈಸೂರಿನ ಸರಸ್ವತಿಪುರಂ ನಿವಾಸದಲ್ಲಿ ಮೃತರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ನಂತರ ವಿದ್ಯುತ್ ಚಿತಾಗಾರದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ ಎಂದು ಮೂಲಗಳು ತಿಳಿಸಿವೆ. ಕನ್ನಡದ ಹಿರಿಯ ನಿರ್ದೇಶಕ ಎಸ್.ವಿ. ರಾಜೇಂದ್ರ ಸಿಂಗ್ ಬಾಬು, ನಟಿ ಹಾಗೂ ನಿರ್ದೇಶಕಿ ವಿಜಯಲಕ್ಷ್ಮಿ ಸಿಂಗ್ ಅವರ ತಾಯಿಯಾಗಿರುವ ಪ್ರತಿಮಾ ದೇವಿ ಅವರು, 1947ರಲ್ಲಿ “ಕೃಷ್ಣಲೀಲಾ” ಚಿತ್ರದಲ್ಲಿ ನಟಿಸುವ ಮೂಲಕ ವೃತ್ತಿ ಜೀವನ ಶುರುಮಾಡಿದರು. 1951ರಲ್ಲಿ ತೆರೆಕಂಡ ‘ಜಗನ್ಮೋಹಿನಿ’ ಚಿತ್ರದಲ್ಲಿ ನಾಯಕಿಯಾಗಿ ನಟಿಸಿ ಜನಪ್ರಿಯಗೊಂಡರು. ಈ ಚಿತ್ರ ಕನ್ನಡದಲ್ಲಿ ಮೊದಲ ಶತದಿನ ಪೂರೈಸಿದ ಸಿನಿಮಾ ಎಂಬ ದಾಖಲೆ ಪಡೆದಿದೆ. ಡಾ. ರಾಜ್ ಕುಮಾರ್, ಡಾ. ವಿಷ್ಣುವರ್ಧನ್ ಅವರ ಸಿನಿಮಾಗಳಲ್ಲಿ ನಟಿಸಿದ್ದರು.
“ಶ್ರೀ ಶ್ರೀನಿವಾಸ ಕಲ್ಯಾಣ”, “ಚಂಚಲ ಕುಮಾರಿ”, “ಮುಟ್ಟಿದ್ದೆಲ್ಲಾ ಚಿನ್ನ”, “ಶಿವಶರಣೇ ನಂಬಿಯಕ್ಕ”, “ಮಂಗಳ ಸೂತ್ರ”, “ಧರ್ಮಸ್ಥಳ ಮಹಾತ್ಮೆ”, “ಪಾತಳಾ ಮೋಹಿನಿ”, “ನಾಗರಹಾವು”, “ರಾಮ ಶಾಮಾ ಭಾಮಾ” ಸೇರಿದಂತೆ ಸುಮಾರು 60 ಚಿತ್ರಗಳಲ್ಲಿ ಪ್ರತಿಮಾ ದೇವಿ ನಟಿಸಿದ್ದಾರೆ. ಮಹಾತ್ಮೆ ಪಿಕ್ಚರ್ಸ್ ಸಂಸ್ಥೆಯ ಸ್ಥಾಪಕರಾದ ಶಂಕರ್ ಸಿಂಗ್ ಅವರನ್ನು ವಿವಾಹವಾಗಿದ್ದ ಪ್ರತಿಮಾ ದೇವಿ ಅವರಿಗೆ ಎಸ್.ವಿ. ರಾಜೇಂದ್ರ ಸಿಂಗ್ ಬಾಬು, ಸಂಗ್ರಾಮ್ ಸಿಂಗ್, ಜಯರಾಜ್ ಸಿಂಗ್, ವಿಜಯಲಕ್ಷ್ಮಿ ಸಿಂಗ್ ಮಕ್ಕಳು. ಸಂತಾಪ: ಮೃತರ ಸುದ್ದಿ ತಿಳಿದು ನಟಿ, ಸಂಸದೆ, ಸುಮಲತಾ ಅಂಬರೀಶ್, ಪುನೀತ್ ರಾಜಕುಮಾರ್ ಸೇರಿದಂತೆ ಕನ್ನಡ ಚಿತ್ರರಂಗದ ಅನೇಕ ನಟ, ನಟಿಯರು, ನಿರ್ಮಾಪಕ, ನಿರ್ದೇಶಕರು ಸಂತಾಪ ಸೂಚಿಸಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಜೈರಾಜ್ ಅವರು ಕೂಡ “ಕನ್ನಡ ಚಿತ್ರರಂಗಕ್ಕೆ ಕಲಾವಿದೆಯಾಗಿ ತಮ್ಮದೇ ಆದ ಸೇವೆ ಸಲ್ಲಿಸಿದ್ದ, ಖ್ಯಾತ ನಟಿ ಪ್ರತಿಮಾದೇವಿ ಅವರ ಪತಿ ಶಂಕರ್ ಸಿಂಗ್ ಅವರ ಜನ್ಮ ಶತಮಾನೋತ್ಸವ ಆಚರಣೆಯ ವರ್ಷವಿದು. ಇದೇ ಸಮಯದಲ್ಲಿ ಅವರು ನಿಧನರಾಗಿದ್ದು, ದುಖದ ಸಂಗತಿ. ಕನ್ನಡ ಚಿತ್ರರಂಗಕ್ಕೆ ಇವರ ಕುಟುಂಬ ನೀಡಿರುವ ಕೊಡುಗೆ ಅಪಾರ. ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ರಾಜೇಂದ್ರಸಿಂಗ್ ಬಾಬು, ನಟಿ, ನಿರ್ದೇಶಕಿ ವಿಜಯಲಕ್ಷ್ಮಿ ಸಿಂಗ್ ಸೇರಿದಂತೆ ನಾಲ್ಕು ಮಕ್ಕಳನ್ನು ಪ್ರತಿಮಾ ದೇವಿ ಅವರು ಅಗಲಿದ್ದಾರೆ. ಅವರ ನಿಧನದ ದುಃಖವನ್ನು ತಡೆದುಕೊಳ್ಳುವ ಶಕ್ತಿಯನ್ನು ಅವರ ಕುಟುಂಬಕ್ಕೆ ದೇವರು ಕರುಣಿಸಲಿ ಎಂದು ಹೇಳಿದ್ದಾರೆ.
ಪತ್ರಕರ್ತ ಹಾಗೂ ನಿರ್ದೇಶಕ ಚಕ್ರವರ್ತಿ ಚಂದ್ರಚೂಡ್ ಅವರ ಬಂಡವಾಳ ಬಯಲಾಗುತ್ತಿದೆ. ಬಿಗ್ ಬಾಸ್ ಮನೆಯಲ್ಲಿ ಈಗ ಕಿರುತೆರೆ ವೀಕ್ಷಕರ ಪಾಲಿಗೆ ಚಂದ್ರಚೂಡ್ ಪ್ರಮುಖ ಆಕರ್ಷಣೆ ಆಗಿದ್ದಾರೆ. ಅವರ ಆಟದಿಂದಲೇ ಬಿಗ್ ಬಾಸ್ ಈಗ ಇಂಟರೆಸ್ಟಿಂಗ್ ಆಗಿದೆ. ಕಳೆದ ಎರಡು ದಿನಗಳಿಂದ ಬದಲಾದ ಅವರ ಹೊಸ ವರಸೆ ಕಂಡು ವೀಕ್ಷಕರೇ ಗಾಬರಿ ಆಗಿದ್ದಾರೆ. ಚಂದ್ರ ಚೂಡ್ ಅಂದ್ರೆ ಹೀಗೂ ಇದ್ದಾರೆಯೇ? ಹಾಗೊಂದು ಪ್ರಶ್ನೆ ಕಿರಿತೆರೆ ವೀಕ್ಷಕರ ತಲೆಯಲ್ಲಿ ಗಿರಕಿ ಹಾಕುತ್ತಿದೆ. ಅಷ್ಟೇ ಯಾಕೆ, ಬಿಗ್ ಬಾಸ್ ಕ್ಯಾಮೆರಾಗಳ ಫೋಕಸ್ ಕೂಡ ಈಗ ಚಂದ್ರಚೂಡ್ ಮೇಲೆಯೇ ಇದೆ. ಇದೆಲ್ಲ ಹೇಗೆ ಸಾಧ್ಯವಾಯಿತು? ಅದೊಂಥರ ಥ್ರಿಲ್, ಇನ್ನೊಂದೆಡೆ ಅನುಮಾನ !
ಹೌದು ಮತ್ತೆ, ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಪತ್ರಕರ್ತ ಚಕ್ರವರ್ತಿ ಚಂದ್ರಚೂಡ್ ಬಿಗ್ ಬಾಸ್ ಮನೆಗೆ ಎಂಟ್ರಿ ಆಗುತ್ತಿದ್ದಾರೆಂದಾಗ ಕೇಳಿಬಂದ ಮಾತುಗಳೇ ಬೇರೆ. ಓಹೋ, ಪ್ರಶಾಂತ್ ಸಂಬರಗಿ ಅವರಿಗೆ ಇದೇನು ಕೌಂಟರ್ ಇರಬಹುದಾ ಅಂತ ಒಂದಷ್ಟು ಮಂದಿ ಸೋಷಲ್ ಮೀಡಿಯಾದಲ್ಲಿ ಕೊಂಕು ಕಾಮೆಂಟ್ ಹಾಕಿದ್ದರು. ಇನ್ನು ಕೆಲವರು ಕಲರ್ಸ್ ಕನ್ನಡದವರಿಗೆ ಬೇರಾರು ಸಿಗಲಿಲ್ಲವೇ ಅಂತ ಹೊಟ್ಟೆ ಉರಿ ತೋಡಿಕೊಂಡಿದ್ದರು. ಹಾಗೆಯೇ ಒಂದಷ್ಟು ಮಂದಿ, ಬಿಗ್ ಬಾಸ್ ಮನೆಯಲ್ಲಿ ಅಸಲಿ ಆಟ ಇನ್ಮೇಲೆ ಶುರುವಾಗುತ್ತೆ ಅಂತ ಭವಿಷ್ಯ ನುಡಿದಿದ್ದರು. ಅದೇನೋ ಗೊತ್ತಿಲ್ಲ. ಚಂದ್ರ ಚೂಡ್ ಈಗ ತಮ್ಮ ವಿರೋಧಿಗಳಿಗೆ ಶಾಕ್ ಕೊಟ್ಟಿದ್ದಾರೆ. ಅಸಲಿ ಆಟ ಇನ್ಮೇಲೆ ಶುರುವಾಗುತ್ತೆ ನೋಡಿ ಅಂದವರಿಗೆ ಖುಷಿ ಕೊಟ್ಟಿದ್ದಾರೆನ್ನುವುದು ಸದ್ಯದ ಸುದ್ದಿ.
ರಿಯಲ್ ಲೈಫ್ ನಲ್ಲಿ ಚಂದ್ರಚೂಡ್ ಅಂದ್ರೆ ಒಂದು ವಿಶಿಷ್ಟ ವ್ಯಕ್ತಿತ್ವದ ಮನುಷ್ಯಾಕೃತಿಅನ್ನೋದು ಎಲ್ಲರಿಗೂ ಗೊತ್ತು . ವೃತ್ತಿಯಲ್ಲಿ ಪತ್ರಕರ್ತ ಅಂತ ಗುರುತಿಸಿಕೊಂಡರೂ, ಅವರು ಮಾಡದ ಕೆಲಸ ಇಲ್ಲ. ಎಲ್ಲರಿಗೂ ಗೊತ್ತಿರುವಂತೆ ಅವರೀಗ ಸಿನಿಮಾ ನಿರ್ದೇಶಕ, ಲೇಖಕ, ಬರಹಗಾರರೂ ಹೌದು. ಆದರಾಚೆ ಅವರೊಬ್ಬ ಹೋರಾಟಗಾರ. ನೊಂದ ಜೀವಗಳ ಪರ ಮಿಡಿಯುವ ಮನುಷ್ಯ. ಇದೇ ಕಾರಣಕ್ಕೆ ಅವರು ವಿರೋಧಿಗಳನ್ನು ಸಂಪಾದಿಸಿಕೊಂಡಷ್ಟೇ ಸ್ನೇಹಿತರ ಬಳಗವನ್ನು ಹೊಂದಿದ್ದಾರೆನ್ನುವುದು ವಿಶೇಷ. ಇಷ್ಟಾಗಿಯೂ ಮೇಲ್ನೋಟಕ್ಕೆ ಚಂದ್ರಚೂಡ್ ಕೆಲವು ವಿವಾದಗಳಿಂದ ದೊಡ್ಡ ಸುದ್ದಿ ಆಗಿದ್ದು ಎಲ್ಲರಿಗೂ ಗೊತ್ತು. ಹಾಗಾಗಿಯೇ ಚಂದ್ರಚೂಡ್ ವೈಲ್ಡ್ ಕಾರ್ಡ್ ಮೂಲಕ ಬಿಗ್ ಬಾಸ್ ಗೆ ಎಂಟ್ರಿ ಆಗುತ್ತಿದ್ದಾರೆಂದಾಗ ಅವರನ್ನು ಸ್ವಾಗತಿಸಿದವರಿಗಿಂತ ವಿರೋಧಿಸಿದವರ ಸಂಖ್ಯೆಯೇ ಹೆಚ್ಚಿತ್ತು.
ಪ್ರಶಾಂತ್ ಸಂಬರಗಿ ಅವರಿಗೆ ಕೌಂಟರ್ ಆಗಿ ಚಂದ್ರಚೂಡ್ ಅವರನ್ನು ಕಳುಹಿಸಲಾಗುತ್ತಿದೆ. ಆದರೆ ಸಂಬರಗಿ ಅವರ ವಿರುದ್ಧ ಚಂದ್ರಚೂಡ್ ಆಟ ನಡೆಯೋದಿಲ್ಲ. ಅವರು ಎಂಟ್ರಿ ಅದಷ್ಟೇ ವೇಗದಲ್ಲಿ ವಾಪಾಸ್ ಬರುವುದು ಗ್ಯಾರಂಟಿ ಅಂತ ಕೆಲವರು ಸೋಷಲ್ ಮೀಡಿಯಾದಲ್ಲಿ ಕಾಮೆಂಟ್ ಹಾಕಿದ್ದರು. ಮತ್ತೆ ಕೆಲವರು ಮೊದಲ ವಾರವೇ ಚಂದ್ರಚೂಡ್ ಔಟ್ ಅಂತಲೂ ಭವಿಷ್ಯ ನುಡಿದ್ದರು. ಇವೆಲ್ಲವನ್ನು ಅವರು ಯಾವ ಲೆಕ್ಕಚಾರದಲ್ಲಿ ಹೇಳಿದ್ದರು ಅಂತ ವಿವರಿಸಬೇಕಿಲ್ಲ. ಇದೆಲ್ಲ ಚಂದ್ರಚೂಡ್ ವಿರೋಧಿಸುವವರ ಮನಸ್ಥಿತಿ ಆಗಿತ್ತು. ಅದರಾಚೆ ಬಿಗ್ ಬಾಸ್ ಲೆಕ್ಕಚಾರಗಳೇ ಬೇರೆ ಇರುತ್ತೆ, ಅದು ನಮ್ಮೆಲ್ಲರ ನಿಯಂತ್ರಣದಲ್ಲಿ ಇರೋದಿಲ್ಲ ಅನ್ನುವ ಸತ್ಯ ಅವರಿಗೆ ಬೇಕಾಗಿರಲಿಲ್ಲ. ಬದಲಿಗೆ ಒಂದಷ್ಟು ವಿರೋಧಿಸಬೇಕಿತ್ತು, ವಿರೋಧಿಸಿದರು ಅಷ್ಟೆ. ಅದರಾಚೆ ಇವತ್ತು ಬಿಗ್ ಬಾಸ್ ಮನೆಯಲ್ಲಿ ಆಗಿದ್ದೇನು ಗೊತ್ತಾ?
ಪ್ರಶಾಂತ್ ಹಾಗೂ ಚಂದ್ರಚೂಡ್ ಕಾರಣಕ್ಕೆ ಬಿಗ್ ಬಾಸ್ ಇಂಟರೆಸ್ಟಿಂಗ್ ಆಗಿದೆ. ನೋಡೋದಿಕ್ಕೂ ಒಂದಷ್ಟು ಥ್ರಿಲ್ ಇದೆ. ಹಾಗಂತ ಈ ಮಾತುಗಳನ್ನು ನಾವು ಹೇಳ್ತಿಲ್ಲ. ಕಲರ್ಸ್ ಕನ್ನಡ ಫೇಜ್ ನಲ್ಲಿ ವೀಕ್ಷಕರು ಕಾಮೆಂಟ್ ಹಾಕಿದ್ದಾರೆ. ಒಂದಲ್ಲ ಎರಡಲ್ಲ ಇಂತಹ ಸಾವಿರಾರು ಕಾಮೆಂಟ್ ಇವೆ. ಹಾಗಾದ್ರೆ ಚಂದ್ರಚೂಡ್ ವಿರೋಧಿಸಿದವರೆಲ್ಲ ಯಾರು? ಆ ಕತೆ ಬಿಡಿ, ಚಂದ್ರಚೂಡ್ ನಿಜಕ್ಕೂ ಗ್ಲಾಮ್ ಪ್ಲಾನ್ ಮಾಡುತ್ತಿದ್ದಾರೆ. ಬಿಗ್ ಬಾಸ್ ಮನೆಗೆ ಎಂಟ್ರಿಯಾದ ಒಂದೆರೆಡು ದಿನಗಳಲ್ಲಿ ಅವರು ಎಲ್ಲರನ್ನು ಅನುಮಾನಿಸಿಯೇ ನೋಡಿದ್ದರು. ಅಲ್ಲಿದ್ದವರಿಗೂ ಹಾಗೆಯೇ ಇತ್ತೇನೋ, ಅವರು ತಂಟೆಗೆ ಬಹಳಷ್ಟು ಬರಲೇ ಇಲ್ಲ. ಆದರೆ ಈಗ ಫುಲ್ ಚೇಂಜ್. ಚಂದ್ರಚೂಡ್ ಅವರ ಕಂದ, ಚಿನ್ನ, ರನ್ನ ಎನ್ನುವ ಮಾತುಗಳು ಅಲ್ಲಿ ಸಖತ್ ವರ್ಕೌಟ್ ಆಗಿವೆ. ಬಹುತೇಕರು ಅವರು ಹೇಳಿದಂತೆ ಕೇಳುತ್ತಿದ್ದಾರೆ. ತಾನೇ ಕಿಂಗ್ ಎನ್ನುತ್ತಿದ್ದ ಪಾವಗಡ ಮಂಜು ಕೂಡ ಡರ್ ಆಗಿದ್ದಾರೆ. ಪ್ರಶಾಂತ್ ಸಂಬರಗಿ ಬಾಲ ಮುದುಡಿಕೊಂಡಿದ್ದಾರೆ. ಅಷ್ಟೊಂದು ಹವಾ ಎಬ್ಬಿಸಿರುವ ಚಂದ್ರಚೂಡ್ ಸಾಮಾನ್ಯರೇನಲ್ಲ, ಬಿಗ್ ಬಾಸ್ ಮನೆಯ ಆಳಕ್ಕೆ ಇಳಿದು ʼನಿಧಿʼ ಹುಡುಕುವ ಕಿರಾತಕ ಅವರು. ಅಂತಹದೊಂದು ಆಟ ಈಗ ಬಿಗ್ ಬಾಸ್ ನಲ್ಲಿ ಶುರುವಾಗಿದೆ. ನೋಡ್ಬೇಕು ಇದು ಎಷ್ಟು ದಿನ ಅಂತ. ಒಟ್ಟಿನಲ್ಲೀಗ ಚಂದ್ರಚೂಡ್ ಬಿಗ್ ಬಾಸ್ ಮನೆಯ ಪ್ರಮುಖ ಆಕರ್ಷಣೆಯ ಆಟಗಾರ ಅನ್ನೋದೇ ವಿಶೇಷ.
ಕನ್ನಡದಲ್ಲಿ “ರೂಮ್ ಬಾಯ್” ಸಿನಿಮಾ ಶುರುವಾಗಿದ್ದು ಗೊತ್ತೇ ಇದೆ. ಆ ಚಿತ್ರದ ಚಿತ್ರೀಕರಣ ಜೋರಾಗಿಯೇ ನಡೆದು ಈಗ ಎರಡನೇ ಹಂತದ ಚಿತ್ರೀಕರಣವನ್ನು ಯಶಸ್ವಿಯಾಗಿ ಮುಗಿಸಿದೆ. ಇನ್ನೂ ಮೂರನೇ ಹಂತದ ಚಿತ್ರೀಕರಣಕ್ಕೆ ಅಣಿಯಾಗುತ್ತಿರುವ ಚಿತ್ರತಂಡ, ಸಾಕಷ್ಟು ಉತ್ಸಾಹದಲ್ಲೇ ಕೆಲಸ ಮಾಡುತ್ತಿದೆ. ಅದಕ್ಕೆ ಕಾರಣ, ಸಿನಿಮಾ ಕಂಪ್ಲೀಟ್ ಆಗುವ ಮೊದಲೇ ಒಂದಷ್ಟು ಮಂದಿ ಪರಭಾಷೆ ಡಬ್ಬಿಂಗ್ ರೈಟ್ಸ್ ಕೇಳುತ್ತಿರುವುದು.
ಆ ಕುರಿತು ಮಾತುಕತೆ ನಡೆಸುತ್ತಿರುವ ಚಿತ್ರತಂಡ, ಕಂಪ್ಲೀಟ್ ಮಾಡಿದ ಬಳಿಕ ಆ ಬಗ್ಗೆ ಯೋಚಿಸುವ ಮಾತನಾಡುತ್ತಿದೆ. ಇನ್ನು, ಈಗಾಗಲೇ ಶೇ.೮೦ ರಷ್ಟು ಚಿತ್ರೀಕರಣ ಮುಗಿಸಿದೆ. ಲಿಖಿತ್ ಸೂರ್ಯ ಇಲ್ಲಿ ಹೀರೋ ಅಷ್ಟೇ ಅಲ್ಲ, ನಿರ್ಮಾಪಕರೂ ಹೌದು. ತಮ್ಮ “ಐ ಕ್ಯಾನ್” ಪ್ರೊಡಕ್ಷನ್‌ನಡಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಇನ್ನು ಈ ಚಿತ್ರವನ್ನು ರವಿ ನಾಗಡದಿನ್ನಿ ನಿರ್ದೇಶನ ಮಾಡುತ್ತಿದ್ದಾರೆ.
ಲಿಖಿತ್ ಸೂರ್ಯ, ನಟ
ಲಿಖಿತ್ ಸೂರ್ಯ ಅವರಿಗೆ “ರೂಮ್ ಬಾಯ್” ನಾಲ್ಕನೇ ಚಿತ್ರ. ಈ ಹಿಂದೆ “ಲೈಫ್ ಸೂಪರ್ʼ, ʼಆಪರೇಷನ್ ನಕ್ಷತ್ರʼ ಹಾಗೂ ತೆಲುಗಿನ “ರಾಮಾಪುರಂ” ಹೆಸರಿನ ಚಿತ್ರಗಳಲ್ಲಿ ನಾಯಕರಾಗಿ ಅಭಿನಯಿಸಿದ್ದಾರೆ. ಅವರೀಗ “ರೂಮ್ ಬಾಯ್” ಎಂಬ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳೋಕೆ ರೆಡಿಯಾಗಿದ್ದಾರೆ ಎಂಬುದು ವಿಶೇಷ.
ತಾರಾಗಣದಲ್ಲಿ ಲಿಖಿತ್ ಅವರ ಜೊತೆಗೆ ಯಶ್ ಶೆಟ್ಟಿ, ವರ್ಧನ್ ತೀರ್ಥಹಳ್ಳಿ, ವಜ್ರಾಂಗ್ ಶೆಟ್ಟಿ ಹಾಗೂ ರೋಶನ್ ಕೊಡಗು ಸೇರಿದಂತೆ ನಾಯಕಿ ರಕ್ಷಾ, ಪದ್ಮಿನಿ, ಚಂದನಾ, ಪ್ರಗ್ಯಾ ಹಾಗೂ ಜನನಿ, ರಜನಿ, ಭಾನುಪ್ರಕಾಶ್ ಅಭಿನಯಿಸಿದ್ದಾರೆ. ವಿಶೇಷವಾಗಿ ಇಲ್ಲಿ ರಘುಶಿವಮೊಗ್ಗ ಅವರು ಕೂಡ ಸ್ಪೆಷಲ್ ಪಾತ್ರದ ಮೂಲಕ ಎಂಟ್ರಿಯಾಗಿದ್ದಾರೆ.
ಐವರು ನಾಯಕರು ಹಾಗೂ ಅಷ್ಟೇ ಸಂಖ್ಯೆಯ ನಾಯಕಿಯರ ಸುತ್ತ ನಡೆಯುವ ಒಂದೊಳ್ಳೆಯ ಸಸ್ಪೆನ್ಸ್ ಥ್ರಿಲ್ಲರ್ ಕಥೆ ಇಲ್ಲಿದೆ. ಇನ್ನು, ಯುವ ಪ್ರತಿಭೆ ರವಿ ನಾಗಡದಿನ್ನಿ ನಿರ್ದೇಶಿಸುತ್ತಿದ್ದು, ಇವರಿಗೆ ಇದು ಮೊದಲ ಚಿತ್ರ. ಸಿನಿಮಾ ಮೇಲಿನ ಪ್ರೀತಿ ಮತ್ತು ಆಸಕ್ತಿಯಿಂದಾಗಿ ಎಂಜಿನಿಯರ್ ವೃತ್ತಿ ಬಿಟ್ಟು ಬಂದು ನಿರ್ದೇಶಕರಾಗಿದ್ದಾರೆ.
ರಘು ಶಿವಮೊಗ್ಗ
ಹಲವು ನಿರ್ದೇಶಕರ ಬಳಿ ಸಹಾಯಕ ನಿರ್ದೇಶಕರಾಗಿ ದುಡಿದು, ನಿರ್ದೇಶನದ ಪಟ್ಟು ಕಲಿತುಕೊಂಡು ಈಗ ತಾವೇ ಸ್ವತಂತ್ರ ನಿರ್ದೇಶಕರಾಗಿದ್ದಾರೆ.
ರವಿ ನಾಗಡದಿನ್ನಿ, ನಿರ್ದೇಶಕ
ನಾಯಕ ನಟ ಲಿಖಿತ್ ಅವರಿಗೂ ಇಂತಹದೇ ವೃತ್ತಿ ಬದುಕಿನ ಹಿನ್ನೆಲೆ ಇದೆ. ಒಳ್ಳೆಯ ಕೆಲಸ ಗಿಟ್ಟಿಸಿಕೊಂಡು ವಿದೇಶಕ್ಕೆ ಹಾರಿ, ಕೈ ತುಂಬಾ ಸಂಪಾದನೆ ಮಾಡಿಕೊಂಡಿದ್ದ ಲಿಖಿತ್ ಈಗ ನಟ ಆಗಿದ್ದು ಕೂಡ ಸಿನಿಮಾದ ಮೇಲಿನ ಪ್ರೀತಿಗಾಗಿಯೇ. ಇವರಿಬ್ಬರು ಹಣ ಮಾಡುವುದಕ್ಕಾಗಿ ಸಿನಿಮಾ ಜಗತ್ತಿಗೆ ಬಂದವರಲ್ಲ ಎನ್ನುವುದನ್ನು ಅವರ ವೃತ್ತಿಯ ಹಿನ್ನೆಲೆಯೇ ಹೇಳುತ್ತೆ. ಒಟ್ಟಿನಲ್ಲಿ ಈ ಜೋಡಿ ಸಿನಿಮಾ ಮೇಲಿನ ಪ್ರೀತಿ, ಕಾಳಜಿ, ಮೋಹಕ್ಕಾಗಿಯೇ ಒಂದಾಗಿ ಈಗ “ರೂಮ್ ಬಾಯ್” ಚಿತ್ರ ಶುರು ಮಾಡಿ ಯಶಸ್ವಿಯಾಗಿ ಎರಡನೇ ಹಂತವನ್ನು ಮುಗಿಸಿದೆ.
ಇನ್ನು, “ರೂಮ್ ಬಾಯ್” ಚಿತ್ರಕ್ಕೆ ಕಿರಣ ಕುಮಾರ್ ಸಂಕಲನವಿದೆ. ಧನ್ ಪಾಲ್ ಅವರು ಕ್ಯಾಮೆರಾ ಹಿಡಿದಿದ್ದಾರೆ. ರೋಣದ ಬಕ್ಕೇಶ್ ಸಂಗೀತವಿದೆ. ಈಗಾಗಲೇ ನಂದಿಬೆಟ್ಟ ಬಳಿಯ ರೆಸಾರ್ಟ್ ಸೇರಿದಂತೆ ಬೆಂಗಳೂರು ಸುತ್ತಮುತ್ತಲ ತಾಣಗಳಲ್ಲಿ ಹಾಗೂ ವಿಶೇಷ ಮನೆಯಲ್ಲಿ ಸೆಟ್ ಹಾಕಿ ಚಿತ್ರೀಕರಣ ಮಾಡಲಾಗಿದೆ. “ರೂಮ್ ಬಾಯ್” ಅಂದಾಕ್ಷಣ ಹಲವರಿಗೆ ಒಂದೊಂದು ನೆನಪಾಗುತ್ತೆ.
ಇಲ್ಲಿ ಟೈಟಲ್ ಎಷ್ಟು ವಿಭಿನ್ನ ಎನಿಸುತ್ತೋ, ಅಷ್ಟೇ ವಿಭಿನ್ನವಾಗಿಯೇ ಕಥೆ ಹೆಣೆದು ಸಿನಿಮಾ ಮಾಡಲು ಹೊರಟಿದೆ ಚಿತ್ರತಂಡ. ” ಇದೊಂದು ಸೈಕಾಲಜಿಕಲ್ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ. ಸಾಮಾನ್ಯವಾಗಿ ರೂಮ್ ಬಾಯ್ ಅಂದ್ರೆ ಒಂದು ಹೊಟೇಲ್ ಅಥವಾ ರೆಸಾರ್ಟ್ ನಲ್ಲಿ ನಡೆಯುವ ಕತೆ ಎನ್ನುವುದು ಎಲ್ಲರಿಗೂ ಗೊತ್ತಾಗುವ ವಿಚಾರ. ಇಷ್ಟಾದರೂ ರೆಸಾರ್ಟ್‌ನಲ್ಲಿ ಒಂದು ಘಟನೆ ನಡೆಯುತ್ತೆ. ಅದೇನು ಅನ್ನೋದು ಸಸ್ಪೆನ್ಸ್.
ಕನ್ನಡದಲ್ಲಿ ಹಾರರ್ ಸಿನಿಮಾಗಳಿಗೇನೂ ಕೊರತೆ ಇಲ್ಲ. ಅದರಲ್ಲೂ ಇಲ್ಲಿ ಹೊಸಬರೇ ಹಾರರ್ ಅಂಶಗಳೊಂದಿಗೆ ಬರುತ್ತಿದ್ದಾರೆ. ಅಂತಹವರ ಸಾಲಿಗೆ ಈಗ “ಬ್ರೇಕ್ ಫೇಲ್ಯೂರ್” ಸಿನಿಮಾ ಕೂಡ ಸೇರಿದೆ. ಹೌದು, ಇದು ಬಹುತೇಕ ಹೊಸಬರ ಚಿತ್ರ. ರಾಣಿಗಜ್ ಪ್ರೊಡಕ್ಷನ್ಸ್ ಮೂಲಕ ತಯಾರಾಗಿರುವ “ಬ್ರೇಕ್ ಫೇಲ್ಯೂರ್” ಚಿತ್ರದ ಹಾಡುಗಳು ಇತ್ತೀಚೆಗೆ ಬಿಡುಗಡೆಗೊಂಡಿವೆ.
ಸಾಮಾನ್ಯವಾಗಿ ಹಾರರ್ ಚಿತ್ರಗಳಲ್ಲಿ ಒಂದು ಅಂಶ ಮಾಮೂಲಾಗಿರುತ್ತೆ. ಹುಡುಗರ ತಂಡವೊಂದು ಭಯಾನಕ ಕಾಡಿಗೆ ಹೋಗೋದು, ಅಲ್ಲಿ ಒಬ್ಬೊಬ್ಬರೇ ನಾಪತ್ತೆಯಾಗೋದು ಸಹಜ. ಅಲ್ಲಿ ಕಾಣದ ಕೈಯೊಂದು ಕೆಲಸ ಮಾಡುತ್ತೆ ಅನ್ನುವ ಸೂಚನೆ ಕೂಡ ಸಿಗುತ್ತಾ ಹೋಗುತ್ತೆ. ಇಂತಹ ಅಂಶವಿರುವ ಚಿತ್ರ “ಬ್ರೇಕ್ ಫೇಲ್ಯೂರ್”. ಬದುಕಿನ ದಾರಿಯಲ್ಲಿ ಭವಿಷ್ಯ ಎಂಬ ಬ್ರೇಕ್ ಫೇಲ್ಯೂರ್ ಆದಾಗ ಏನೆಲ್ಲಾ ಆಗಿಬಿಡುತ್ತೆ ಎಂಬ ಅಂಶಗಳೊಂದಿಗೆ ಚಿತ್ರ ಸಾಗುತ್ತದೆ.
ಆದಿತ್ ನವೀನ್, ಕೃತಿ
ಚಿತ್ರದುದ್ದಕ್ಕೂ ಕುತೂಹಲ ಸಾರವಿದೆ. ಪ್ರತಿ ದೃಶ್ಯದಲ್ಲೂ ಸಸ್ಪೆನ್ಸ್ ಥ್ರಿಲ್ಲರ್ ಅಂಶಗಳಿವೆ. ಬೆಚ್ಚಿ ಬೀಳಿಸುವ ಮುಖಗಳೂ ಇಲ್ಲುಂಟು. ಮುಖ್ಯವಾಗಿ, ಕಾಡು ಮೇಡು ಅಲೆಯುವ ತಂಡದ ಶ್ರಮ ವೀಡಿಯೋ ಸಾಂಗ್‌ನಲ್ಲಿ ನೋಡಬಹುದು. ಅದಿತ್ ನವೀನ್ ನಿರ್ದೇಶಕರು. ಅವರು ನಿರ್ದೇಶನದ ಜೊತೆಯಲ್ಲಿ ತೆರೆ ಮೇಲೂ ನಟಿಸಿದ್ದಾರೆ. ಅಬ್ದುಲ್ ಗಣಿ ತಾಳಿಕೋಟೆ ಅವರು ನಿರ್ಮಾಪಕರು. ಅವರ ಪ್ರಕಾರ ಹಣ ಇದ್ದಾಕ್ಷಣ ಸಿನಿಮಾ ಆಗೋದಿಲ್ಲ. ಒಗ್ಗಟ್ಟು, ಪ್ರೀತಿ, ಶ್ರಮ ಇದ್ದರೆ ಮಾತ್ರ ಒಂದೊಳ್ಳೆಯ ಚಿತ್ರ ಆಗುತ್ತೆ. ಅದು ಇಲ್ಲಾಗಿದೆ. ಸಣ್ಣ ಬಜೆಟ್‌ನಲ್ಲೇ ಅಚ್ಚುಕಟ್ಟಾದ ಚಿತ್ರ ಮಾಡಿದ್ದಾಗಿ ಹೇಳುತ್ತಾರೆ ಅವರು.
ಇಡೀ ಚಿತ್ರತಂಡ ಕಾಡು ಮನುಷ್ಯರಂತೆ ಕಾಡು ಅಲೆದು ಶ್ರಮಿಸಿದ್ದಾರೆ. ಬಹುತೇಕ ದಾಂಡೇಲಿ ಸುತ್ತಮುತ್ತಲ ಪರಿಸರದಲ್ಲಿ ಚಿತ್ರೀಕರಣ ಮಾಡಲಾಗಿದೆ. ಮುಖ್ಯವಾಗಿ ನೀರಿಲ್ಲದೆ ಅಂತಹ ಕಾಡಿನಲ್ಲಿ ಬದುಕೋದೆ ಕಷ್ಟ ಅನ್ನೋದನ್ನು ತಿಳಿದು ಕೊಂಡೆವು. ಮುಂದಿನ ತಿಂಗಳು ಸಿನಿಮಾ ಬಿಡುಗಡೆ ಮಾಡುವ ಯೋಚನೆಯಿದೆ ಎನ್ನುತ್ತಾರೆ ಹೀರೋ ಅದಿತ್ ನವೀನ್. ಉಗ್ರಂ ರವಿ ಕೂಡ ಈ ವೇಳೆ ಮಾತನಾಡಿ, “ಕಾಡಲ್ಲಿ ಚಿತ್ರೀಕರಣ ಮಾಡುವ ಸಂದರ್ಭ ತುಂಬಾನೇ ಭಯವಾಗುತ್ತಿತ್ತು. ಕಾರಣ, ಕಾಡು ಪ್ರಾಣಿಗಳು ರಾತ್ರಿ ವೇಳೆ ನೀರು ಕುಡಿಯಲು ಬರುತ್ತಿದ್ದವು. ಅದನ್ನು ಕಂಡು ಭಯವಾಗಿದ್ದು ನಿಜ. ಒಟ್ಟಾರೆ ಒಳ್ಳೆಯ ಸಿನಿಮಾ ಮಾಡಿದ್ದೇವೆʼ ಎಂಬುದು ಉಗ್ರಂ ರವಿ ಮಾತು.
ನಿರ್ದೇಶಕ ನಂದಕಿಶೋರ್ ಹೊಸ ಚಿತ್ರಕ್ಕೆ ಕೈ ಹಾಕಿದ್ದಾರೆ. ನಂದಕಿಶೋರ್ ಅವರಿಗೆ ಸ್ಟಾರ್ ಸಿನಿಮಾಗಳನ್ನು ಮಾಡೋದು ಗೊತ್ತು. ಗೆಲ್ಲೋದು ಗೊತ್ತು. ಹಾಗೆಯೇ ಹೊಸಬರ ಸಿನಿಮಾಗಳ ಮೂಲಕ ಸದ್ದು ಮಾಡೋದು ಕೂಡ ಗೊತ್ತು. ಈಗಾಗಲೇ ಸಾಬೀತು ಮಾಡಿದ್ದಾರೆ ಕೂಡ. ಅವರೀಗ ನಿರ್ಮಾಪಕ ಕೆ.ಮಂಜು ಅವರ ಪುತ್ರ ಶ್ರೇಯಸ್ ಅವರಿಗೆ ಹೊಸ ಚಿತ್ರ ಮಾಡುತ್ತಿದ್ದಾರೆ.
ಶ್ರೇಯಸ್ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಹೊಸ ಚಿತ್ರ ಅನೌನ್ಸ್ ಮಾಡಲಾಗಿದೆ. ಆದರೆ, ಈ ಸಿನಿಮಾ ಯಾವಾಗ ಅನ್ನೋದು ಗೊತ್ತಿಲ್ಲ. ಈಗ ಸದ್ಯ ಶ್ರೇಯಸ್ “ವಿಷ್ಣುಪ್ರಿಯ” ಸಿನಿಮಾ ಮಾಡಿ ಮುಗಿಸಿದ್ದಾರೆ. ಆ ಚಿತ್ರ ಈಗ ರಿಲೀಸ್‌ಗೆ ರೆಡಿಯಾಗಿದೆ. ಅತ್ತ ನಂದಕಿಶೋರ್ ಕೂಡ “ಪೊಗರು” ಸಿನಿಮಾ ನಂತರ ಧ್ರುವ ಸರ್ಜಾ ಅವರಿಗೆ ಮತ್ತೊಂದು ಸಿನಿಮಾ ಮಾಡಲು ಅಣಿಯಾಗಿದ್ದಾರೆ. ಆದರೆ, ಈ ಸಿನಿಮಾ ಯಾವಾಗ ಸೆಟ್ಟೇರುತ್ತೇ ಅನ್ನೋದು ಮಾತ್ರ ಗೌಪ್ಯ.
ಯುಗಾದಿ ಹಬ್ಬದ ಬಳಿಕ ಈ ಹೊಸ ಚಿತ್ರಕ್ಕೆ ಮುಹೂರ್ತ ನೆರವೇರಲಿದೆ. ಗುಜ್ಜಲ್ ಟಾಕೀಸ್ ಬ್ಯಾನರ್‌ನಲ್ಲಿ ಗುಜ್ಜಲ್ ಪುರುಷೋತ್ತಮ್ ನಿರ್ಮಾಣ ಮಾಡುತ್ತಿದ್ದಾರೆ. ಇವರು ಈ ಹಿಂದೆ ಕೆ.ಪಿ.ಶ್ರೀಕಾಂತ್ ನಿರ್ಮಾಣದ “ಟಗರು” ಚಿತ್ರದಲ್ಲಿ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸಿದ್ದರು. ಈಗ ತಮ್ಮ ಬ್ಯಾನರ್ ನಲ್ಲಿ ನಿರ್ಮಿಸುತ್ತಿರುವ ಮೊದಲ ಚಿತ್ರವಿದು. ಸದ್ಯಕ್ಕೆ “ಪ್ರೊಡಕ್ಷನ್ ನಂ ೧” ಹೆಸರಲ್ಲಿ ಚಿತ್ರದ ಚಟುವಟಿಕೆಗಳು ಆರಂಭವಾಗಿದ್ದು, ಸದ್ಯದಲ್ಲೇ ಶೀರ್ಷಿಕೆ ಅನಾವರಣಗೊಳಿಸುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ. ಧರ್ಮವಿಶ್ ಸಂಗೀತ ನೀಡುತ್ತಿದ್ದಾರೆ. ಶೇಖರ್ ಚಂದ್ರು ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಸಂಕಲನವಿದೆ. ಪ್ರಶಾಂತ್ ರಾಜಪ್ಪ ಸಂಭಾಷಣೆ ಬರೆಯುತ್ತಿದ್ದಾರೆ.
“ಕಣ್ಣೇ ಅಧಿರಿಂದಿ…“ ಬಹುಶಃ ಈ ಹಾಡು ಕೇಳದವರಿಲ್ಲ. ಇಂಥದ್ದೊಂದು ಸೂಪರ್ ಹಿಟ್ ಹಾಡಿಗೆ ಧ್ವನಿಯಾಗಿದ್ದು ಗಾಯಕಿ ಮಂಗ್ಲಿ. ದರ್ಶನ್ ಅಭಿನಯದ “ರಾಬರ್ಟ್” ಚಿತ್ರದ ತೆಲುವು ಅವರತಣಿಕೆಗೆ “ಕಣ್ಣೇ ಅಧಿರಿಂದಿ..” ಹಾಡು ಹಾಡಿ ಕನ್ನಡಿಗರ ಮನವನ್ನೂ ಗೆದ್ದಿದ್ದ ಮಂಗ್ಲಿ, ಕನ್ನಡದಲ್ಲಿ ಹಾಡೋದು ಯಾವಾಗ ಎಂಬ ಪ್ರಶ್ನೆ ಇತ್ತು. ಅದಕ್ಕೀಗ ಉತ್ತರ ಸಿಕ್ಕಿದೆ.
ಮಂಗ್ಲಿ ಒಳ್ಳೆಯ ಗಾಯಕಿ. ಇವರ ಈ ಗಾಯನದ ಹಿಂದೆ ದೊಡ್ಡ ಕಥೆಯೇ ಇದೆ. ತಮ್ಮ ಕಂಠದಿಂದಲೇ ಅಪಾರ ಅಭಿಮಾನಿಗಳನ್ನು ಹೊಂದಿರುವ ಮಂಗ್ಲಿ, “ರಾಬರ್ಟ್” ಚಿತ್ರಕ್ಕೆ ಹಾಡಿದ ಆ ಹಾಡು, ನಿಜಕ್ಕೂ ದೊಡ್ಡ ಹೆಸರು ತಂದುಕೊಟ್ಟಿದೆ. ಇನ್ನು, “‘ರಾಬರ್ಟ್” ಸಿನಿಮಾದ ತೆಲುಗು ವರ್ಷನ್ ಪ್ರೀ ರಿಲೀಸ್ ಕಾರ್ಯಕ್ರಮದಲ್ಲೂ ಮಂಗ್ಲಿ ವೇದಿಕೆಯಲ್ಲಿ “ಕಣ್ಣೇ ಅಧಿರಿಂದಿ” ಹಾಡು ಹಾಡುವ ಮೂಲಕ ಮೆಚ್ಚುಗೆ ಪಡೆದಿದ್ದರು.
ಈಗಲೂ ಈ ಹಾಡು ಸಿಕ್ಕಾಪಟ್ಟೆ ವೈರಲ್ ಆಗಿದೆ. ಇಂಥದ್ದೊಂದು ಹಾಡು ಹಾಡುವ ಮೂಲಕ ಎಲ್ಲರ ಪ್ರೀತಿಗೆ ಪಾತ್ರವಾಗಿರುವ ಮಂಗ್ಲಿ, ಕನ್ನಡದಲ್ಲೊಂದು ಹಾಡು ಹಾಡಿದ್ದಾರೆ. “ಕರಿಯಾ ಐ ಲವ್ ಯು” ಎಂಬ ಚಿತ್ರದ ಹಾಡಿಗೆ ಧ್ವನಿಯಾಗಿದ್ದಾರೆ ಕೂಡ.
ಅಂದಹಾಗೆ, ಚಿತ್ರದ “ಬಿಟ್ ಬಂದ್ ಹಳ್ಳಿಯಿಂದ ಬಿಟ್ಯಾಕ್ ಬಂದೆ…” ಎನ್ನುವ ಹಾಡನ್ನು ಹಾಡಿದ್ದಾರೆ. ಲೋಕೇಶ್ ಸಂಗೀತ ನೀಡಿರುವ ಈ ಹಾಡಿಗೆ ಗಾಯಕ ನವೀನ್ ಸಜ್ಜು ಕೂಡ ಸಾಥ್ ನೀಡಿದ್ದಾರೆ. ಚಿತ್ರದ ನಾಯಕ ಮಂಜುನಾಥ್, ಈ ಗಾಯಕಿಯನ್ನು ಕನ್ನಡಕ್ಕೆ ಕರೆತಂದಿದ್ದಾರೆ. ಈಗಾಗಲೇ ಸಾಂಗ್ ರೆಕಾರ್ಡಿಂಗ್ ಮುಗಿದಿದೆ. ಹಾಡು ಕೂಡ ಚೆನ್ನಾಗಿ ಮೂಡಿಬಂದಿರುವ ಖುಷಿ ಚಿತ್ರತಂಡಕ್ಕಿದೆ.
ಸಿನಿಮಾ ಅನ್ನೋದೇ ಹಾಗೆ. ಇಲ್ಲಿ ಒಮ್ಮೆ ಎಂಟ್ರಿಯಾದರೆ ಮುಗೀತು. ಒಂದು ವಿಭಾಗದಲ್ಲಿ ಕಲಿತವರು ಮೆಲ್ಲನೆ ಒಂದೊಂದೇ ವಿಭಾಗದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಮೇಲೇಳಬೇಕು, ಗುರುತಿಸಿಕೊಂಡು ಏನಾದರೊಂದು ಸಾಧನೆ ಮಾಡಬೇಕು ಅನ್ನುವ ಛಲ ಬಂದೇ ಬರುತ್ತೆ. ಈ ನಿಟ್ಟಿನಲ್ಲಿ ಯುವ ನಟ ಶ್ರೇಯಸ್ ಚಿಂಗ ಕೂಡ ಸೇರಿದ್ದಾರೆ.
ಇವರೊಬ್ಬರೇ ಅಲ್ಲ, ಇವರೊಂದಿಗೆ ನಟಿ ಎಸ್ಟರ್ ನರೋನ್ಹಾ ಕೂಡ ಸೇರಿದ್ದಾರೆ ಅನ್ನೋದು ಈ ಹೊತ್ತಿನ ವಿಶೇಷ. ಹೌದು, ನಟನಾಗಿ ಮೂರು ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಶ್ರೇಯಸ್ ಚಿಂಗ ಈಗ ಮೊದಲ ಬಾರಿಗೆ ನಿರ್ದೇಶಕರಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಇವರೊಂದಿಗೆ ನಟಿಯಾಗಿದ್ದ ಎಸ್ಟರ್ ನರೋನ್ಹಾ ಅವರು ಕೂಡ ಈ ಸಿನಿಮಾ ಮೂಲಕ ಸಂಗೀತ ನಿರ್ದೇಶಕಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಅಂದಹಾಗೆ, ಶ್ರೇಯಸ್ ಚಿಂಗ ನಿರ್ದೇಶನದ ಚಿತ್ರಕ್ಕೆ “ದಿ ವೇಕೆಂಟ್ ಹೌಸ್” ಎಂದು ನಾಮಕರಣ ಮಾಡಲಾಗಿದೆ. ಈ ಚಿತ್ರ ಕನ್ನಡದ ಜೊತೆಯಲ್ಲಿ ಕೊಂಕಣಿ ಭಾಷೆಯಲ್ಲೂ ತಯಾರಾಗುತ್ತಿದೆ ಎಂಬುದು ವಿಶೇಷ.
ಚಿತ್ರವನ್ನು ಜಾನೆಟ್ ನೊರೊನ್ಹಾ ಪ್ರೊಡಕ್ಷನ್ಸ್ ಮೂಲಕ ಜಾನೆಟ್ ನೊರೊನ್ಹಾ ನಿರ್ಮಿಸಿದ್ದಾರೆ. ಈ ಚಿತ್ರದ ಚಿತ್ರೀಕರಣ ಬಹುತೇಕ ಮುಗಿದಿದ್ದು, ಏಪ್ರಿಲ್ ೫ರಂದು ಚಿತ್ರದ ಫಸ್ಟ್‌ಲುಕ್ ರಿಲೀಸ್ ಆಗಿದೆ. ನಿರ್ದೇಶಕ ಶ್ರೇಯಸ್ ಚಿಂಗ ಅವರು ನಟನೆ ಜೊತೆ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಈಗಾಗಲೇ ಅವರು ಸುಮಾರು 150೦ಕ್ಕೂ ಹೆಚ್ಚು ಜಾಹಿರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ನಿರ್ದೇಶನ ಮಾಡಿರುವುದರಿಂದ ಅವರಿಗೆ ಸಿನಿಮಾ ಮೇಲೆ ಸಿಕ್ಕಾಪಟ್ಟೆ ನಂಬಿಕೆ ಇದೆ. ಇನ್ನು ನಟಿ ಎಸ್ಟರ್ ನರೋನ್ಹಾ ಅವರಿಗೂ ಇದು ಮೊದಲ ಸಂಗೀತ ನಿರ್ದೇಶನದ ಅನುಭವ. ಅವರಿಗೂ ಒಳ್ಳೆಯ ಕಥೆ ಇರುವ ಚಿತ್ರಕ್ಕೆ ಕೆಲಸ ಮಾಡಿದ್ದು ಖುಷಿ ಕೊಟ್ಟಿದೆ.
ನಿರ್ಮಾಪಕ ಜಾನೆಟ್ ನೊರೊನ್ಹಾ ಅವರಿಗೆ ಇದು ಮೂರನೇ ನಿರ್ಮಾಣದ ಸಿನಿಮಾ. ಈ ಹಿಂದೆ ಅವರು “ಸೋಫಿಯಾ ಎ ಡ್ರೀಮ್ ಗರ್ಲ್” ಎಂಬ ಸಿನಿಮಾ ಮಾಡಿದ್ದರು. ಇದಕ್ಕೆ 2018ರಲ್ಲಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಲಭಿಸಿತ್ತು. ನಂತರ ಜಾಕಿಶ್ರಾಫ್ ಮತ್ತು ಎಸ್ಟರ್ ನೊರೊನ್ಹಾ ನಟಿಸಿದ “ಕಾಂತಾರ್” ೆಂಬ ಕೊಂಕಣಿ ಸಿನಿಮಾ ಕೂಡ ನಿರ್ಮಿಸಿದ್ದರು. ವಿದೇಶದಲ್ಲಿ ಈ ಚಿತ್ರಕ್ಕೆ ಒಳ್ಳೆಯ ಮೆಚ್ಚುಗೆ ಸಿಕ್ಕಿತ್ತು. ಈಗ “ದಿ ವೇಕೆಂಟ್ ಹೌಸ್” ಸಿನಿಮಾ ಮಾಡಿದ್ದಾರೆ. ಚಿತ್ರಕ್ಕೆ ಎಸ್ಟರ್ ನರೋನ್ಹಾ ಅವರು ಸಂಗೀತದ ಜೊತೆ ಸಾಹಿತ್ಯ ಜವಾಬ್ದಾರಿಯನ್ನೂ ವಹಿಸಿಕೊಂಡಿದ್ದಾರೆ. ನಿರ್ದೇಶಕರೂ ಇಲ್ಲಿ ನಿರ್ದೇಶನದ ಜೊತೆ ಮಾತುಗಳನ್ನು ಪೋಣಿಸಿದ್ದಾರೆ. ವಿಜಯ್ ರಾಜ್ ಸಂಕಲನವಿದೆ. ಸದ್ಯ ಮೊದಲ ಪೋಸ್ಟರ್ ರಿಲೀಸ್ ಆಗಿದ್ದು, ಇಷ್ಟರಲ್ಲೇ ಸಿನಿಮಾದ ಪೂರ್ಣ ಮಾಹಿತಿ ಕೊಡುವುದಾಗಿ ನಿರ್ದೇಶಕ ಶ್ರೇಯಸ್ ಚಿಂಗ ಹೇಳಿದ್ದಾರೆ.
ಶ್ರೀಮುರಳಿ ಅಭಿನಯದ “ಮದಗಜ” ಏಪ್ರಿಲ್ 5ರಿಂದ ಶುರುವಾಗಲಿದೆ. ಉಮಾಪತಿ ನಿರ್ಮಾಣದ ಈ ಚಿತ್ರದ ಚಿತ್ರೀಕರಣದ ನಾಲ್ಕನೇ ಹಂತದ ಚಿತ್ರೀಕರಣಕ್ಕೆ ಚಾಲನೆ ಸಿಗಲಿದೆ. ದೊಡ್ಡ ಮಟ್ಟದ ಬಜೆಟ್‌ನಲ್ಲಿ ಈ ಚಿತ್ರದ ಚಿತ್ರೀಕರಣ ನಡೆಯಲಿದೆ. ಬೃಹತ್ ನಾಲ್ಕು ಸೆಟ್‌ಗಳಲ್ಲಿ “ಫೈಟ್ಸ್” ಮತ್ತು “ಇಂಟ್ರೊಡಕ್ಷನ್ ಸಾಂಗ್” ಶೂಟಿಂಗ್ ನಿರಂತರವಾಗಿ ನಡೆಯಲಿದೆ.
ಚಿತ್ರೀಕರಣ ಸತತವಾಗಿ ನಡೆಯಲಿದೆ. ಈಗಾಗಲೇ ಎಲ್ಲೆಡೆ “ಮದಗಜ” ಚಿತ್ರದ್ದೇ ಸುದ್ದಿ. ಅದಕ್ಕೆ ಕಾರಣ, ಅವರ ಹುಟ್ಟು ಹಬ್ಬಕ್ಕೆ ಈಗಾಗಲೇ ಬಿಡುಗಡೆಯಾದ ಸಖತ್ ಟೀಸರ್‌ಗೆ ಸಿಕ್ಕಾಪಟ್ಟೆ ಮೆಚ್ಚುಗೆ ಸಿಕ್ಕಿದ್ದು, ಚಿತ್ರಕ್ಕೆ ಮಹೇಶ್ ಕುಮಾರ್ ನಿರ್ದೇಶಕರು. ಉಮಾಪತಿ ನಿರ್ಮಾಣವಿದೆ. ಚಿತ್ರಕ್ಕೆ ನವೀನ್ ಕುಮಾರ್ ಕ್ಯಾಮೆರಾ ಹಿಡಿದರೆ, ರವಿ ಬಸ್ರೂರು ಸಂಗೀತವಿದೆ.
ಚಿತ್ರರಂಗದ ಪಾಡು ಮುಂದೇನು? ಅರೇ, ಇದೆಂಥಾ ಮಾತು ಎಂಬ ಪ್ರಶ್ನೆ ಎದುರಾದರೆ ಅಚ್ಚರಿ ಏನಿಲ್ಲ. ಆದರೆ, ಈಗಿನ ವಾಸ್ತವತೆಯನ್ನು ನೋಡಿದಾಗ, ಚಿತ್ರರಂಗದ ಪಾಡು ಏನಾಗಬಹುದು ಎಂಬ ಆತಂಕ ಖಂಡಿತ ಕಾಡದೇ ಇರದು. ಕನ್ನಡ ಚಿತ್ರರಂಗ ಈಗ ಅಕ್ಷರಶಃ ಕುಗ್ಗಿ ಹೋಗಿದೆ. ಮೊದಲೇ ಕೊರೊನಾ ಹೊಡೆತದಿಂದ ತತ್ತರಿಸಿದ್ದ ಸಿನಿಮಾ ಉದ್ಯಮ, ಇತ್ತೀಚೆಗಷ್ಟೇ ಚೇತರಿಸಿಕೊಳ್ಳುವ ಪ್ರಯತ್ನದಲ್ಲಿತ್ತು. ಅದರ ಬೆನ್ನಲ್ಲೇ ಈಗ ಪುನಃ ಅರ್ಧ ಭರ್ತಿ ಆದೇಶವೂ ಹೊರಬಿದ್ದಿದೆ. ಮೊದಲೇ ನಲುಗಿದ್ದ ಕನ್ನಡ ಚಿತ್ರರಂಗ, ಈಗ ಮತ್ತಷ್ಟು ನಲುಗಿ ಹೋಗುವುದಂತೂ ನಿಜ. ಕೊರೊನಾ ಎರಡನೇ ಅಲೆಯ ಅಬ್ಬರ ಜೋರಾಗುತ್ತಿದ್ದಂತೆಯೇ ಸರ್ಕಾರ ಎಚ್ಚೆತ್ತುಕೊಂಡು ಟಫ್‌ರೂಲ್ಸ್‌ಮಾಡಿದ್ದೇನೋ ನಿಜ. ಎಂಟು ಪ್ರಮುಖ ಜಿಲ್ಲೆಗಳಲ್ಲಿ ಈ ಆದೇಶ ಹೊರಬಿದ್ದಿದೆ. ಚಿತ್ರರಂಗಕ್ಕೂ ಇದರ ಬಿಸಿ ತಟ್ಟಿದೆ. ಈ ನಿರ್ಧಾರದಿಂದ ಚಿತ್ರೋದ್ಯಮ ಏನೆಲ್ಲಾ ಸಂಕಷ್ಟ ಎದುರಿಸುತ್ತೆ ಅನ್ನೋದೇ ಸದ್ಯ ಎದುರಿಗಿರುವ ಪ್ರಶ್ನೆ.
ಚಿತ್ರರಂಗವನ್ನೇ ನಂಬಿ ಬದುಕು ಕಟ್ಟಿಕೊಂಡಿದ್ದವರ ಸ್ಥಿತಿಯಂತೂ ಹೇಳತೀರದು. ಇಲ್ಲಿ ಕೋಟಿ ನಿರ್ಮಾಪಕರು, ಸ್ಟಾರ್‌ನಿರ್ದೇಶಕರು, ಸ್ಟಾರ್‌ನಟರಿಂದ ಹಿಡಿದು ಕಟ್ಟ ಕಡೆಯ ಕಾರ್ಮಿಕರೂ ಇದ್ದಾರೆ. ಈಗ ಅವರೆಲ್ಲರೂ ಒಂದೇ ದೋಣಿಯಲ್ಲಿರುವಂತಹ ಪರಿಸ್ಥಿತಿ ಬಂದೊದಗಿದೆ. ಲಾಕ್‌ಡೌನ್‌ಸಂದರ್ಭದಲ್ಲಂತೂ ಚಿತ್ರರಂಗದಲ್ಲಿ ದುಡಿಮೆ ಮಾಡುವವರ ಪರಿಸ್ಥಿತಿ ಡೋಲಾಯಮಾನವಾಗಿತ್ತು. ಮೆಲ್ಲೆನೆ ಉಸಿರಾಡಲು ಅವಕಾಶ ಸಿಕ್ತು ಅಂತ ನಿಟ್ಟುಸಿರು ಬಿಡುವ ಹೊತ್ತಲೇ ಪುನಃ ಅದಕ್ಕೆ ಬ್ರೇಕ್‌ಬಿತ್ತು. ಇದರಿಂದ ಈಗ ಅಕ್ಷರಶಃ ಚಿತ್ರರಂಗದ ಅನೇಕರು ಬೀದಿಗೆ ಬರುವಂತಹ ಸ್ಥಿತಿ ಎದುರಾಗುತ್ತಿದೆ. ಇದು ಹೀಗೆ ಮುಂದುವರೆದರೆ, ಖಂಡಿತವಾಗಿಯೂ ಕನ್ನಡ ಚಿತ್ರರಂಗ ದೊಡ್ಡ ಆತಂಕದ ಅಲೆಯನ್ನು ಎದುರಿಸಬೇಕಾಗುತ್ತೆ. ಚಿತ್ರರಂಗವನ್ನು ನಂಬಿದ ಸಾವಿರಾರು ಕುಟುಂಬಗಳಿವೆ. ಲಕ್ಷಾಂತರ ಜನರಿದ್ದಾರೆ. ಎಲ್ಲಾ ನಿರ್ಮಾಣ, ನಟನೆ, ನಿರ್ದೇಶನ, ಕಾಸ್ಟ್ಯೂಮ್, ಪ್ರೊಡಕ್ಷನ್ಸ್, ಮೇಕಪ್, ಟ್ರಾನ್ಸ್‌ಪೋರ್ಟ್‌ಸೇರಿದಂತೆ ಹಲವು ವಿಭಾಗಗಳಲ್ಲಿ ಕೆಲಸ ಮಾಡುವ ಸಿನಿಮಂದಿ ಬದುಕು ಮೂರಾಬಟ್ಟೆಯಾಗುವಂತಹ ಭೀತಿಯಲ್ಲಿದೆ. ಕೊರೊನಾ ತಂದಿಟ್ಟ ಆತಂಕದಿಂದಾಗಿ ಇಲ್ಲಿ ಅನ್ನದಾತ ಎನಿಸಿಕೊಂಡವರೂ ಕೂಡ ಒದ್ದಾಡಿದ ಉದಾಹರಣೆಗೇನೂ ಕಮ್ಮಿ ಇಲ್ಲ.
ಈ ಕಲರ್‌ಫುಲ್‌ದುನಿಯಾದಲ್ಲಿ ಬಣ್ಣ ಬಣ್ಣದ ಕನಸು ಕಟ್ಟಿಕೊಂಡಿದ್ದ ಅದೆಷ್ಟೋ ಮಂದಿ ಮೊಗದಲ್ಲಿ ಆತಂಕದ ಛಾಯೆ ಮೂಡಿದೆ. ಕಳೆದ ಒಂದು ವರ್ಷದಿಂದಲೂ ಇದೇ ಅತಂತ್ರ ಪರಿಸ್ಥಿತಿಯಲ್ಲಿರುವ ಚಿತ್ರರಂಗಕ್ಕೆ ಮತ್ತೆ ದೊಡ್ಡ ಹೊಡೆತ ಬಿದ್ದಿರುವುದನ್ನು ನೋಡಿದರೆ, ಅಂತಿಮ ಹಂತ ತಲುಪುವ ಸೂಚನೆಯೇನೋ ಎಂಬಂತೆ ಭಾಸವಾಗುತ್ತಿದೆ. ಈಗಷ್ಟೇ ಚಿತ್ರರಂಗ ಚೇತರಿಸಿಕೊಳ್ಳುತ್ತಿತ್ತು. ಕಳೆದ ವರ್ಷ ಇದೇ ತಿಂಗಳಲ್ಲಿ ಕೊರೊನಾ ಒಕ್ಕರಿಸಿ ಆತಂಕ ಸೃಷ್ಟಿಸಿತ್ತಲ್ಲದೆ, ಲಾಕ್‌ಡೌನ್‌ಗೂ ಕಾರಣವಾಗಿ ಎಲ್ಲರ ಬದುಕನ್ನೇ ಬರಡಾಗಿಸಿತ್ತು. ಈಗ ಮತ್ತದೇ ಆತಂಕ ಶುರುವಾಗುತ್ತಿದೆ! ಅರ್ಧ ಭರ್ತಿ ಆದೇಶದಿಂದ ಚಿತ್ರರಂಗ ಮತ್ತೆ ಮೊದಲಿನಂತಾಗಲು ವರ್ಷಗಳೇ ಬೇಕಾಗಬಹುದೇನೋ? ಕಳೆದ ಒಂದು ವರ್ಷದ ಕೊರೊನಾ ಹೊಡೆತಕ್ಕೆ ಇನ್ನೂ ಚಿತ್ರರಂಗ ಚೇತರಿಸಿಕೊಂಡಿಲ್ಲ. ಮತ್ತೆ ಕೊರೊನಾ ಹಾವಳಿ ಎದುರಾಗಿ ಸಮಸ್ಯೆಗೆ ಕಾರಣವಾಗಿದೆ. ಹೀಗಾಗಿ ಚಿತ್ರರಂಗವನ್ನೇ ನಂಬಿದವರ ಪಾಡು ಅತಂತ್ರದಲ್ಲಿರುವುದಂತೂ ಸತ್ಯ.
“ರಾಬರ್ಟ್” ಚಿತ್ರ ಬಿಡುಗಡೆ ನಂತರ ಚಿತ್ರರಂಗದ ಮೊಗದಲ್ಲಿ ಮಂದಹಾಸ ಮೂಡಿತ್ತು. ಮತ್ತೆ ಆ ದಿನಗಳಿಗೆ ಚಿತ್ರರಂಗ ಮರಳುತ್ತೆ ಎಂಬ ಲೆಕ್ಕಾಚಾರವೂ ಜೋರಾಗಿತ್ತು. ಆ ಚಿತ್ರದ ಬಳಿಕ ಪುನೀತ್‌ರಾಜಕುಮಾರ್‌ಅಭಿನಯದ “ಯುವರತ್ನ” ರಿಲೀಸ್‌ಆಯ್ತು. ಎಲ್ಲೆಡೆ ಮೆಚ್ಚುಗೆ ಪಡೆಯುತ್ತಿದ್ದಂತೆಯೇ ಪುನಃ, ಅರ್ಧ ಭರ್ತಿ ಆದೇಶ ಹೊರಬಿತ್ತು. “ಯುವರತ್ನ” ಬಳಿಕ ಅದೆಷ್ಟೋ ಸಿನಿಮಾಗಳು ಚಿತ್ರಮಂದಿರಕ್ಕೆ ಬರಲು ಉತ್ಸಾಹ ತೋರಿದ್ದವು. ವರ್ಷಗಟ್ಟಲೆ ಕಾದಿದ್ದ ಸಿನಿಮಾಗಳಿಗೆ ಸರ್ಕಾರದ ಈ ಆದೇಶದಿಂದ ಆಘಾತವಾಗಿದ್ದು ಸುಳ್ಳಲ್ಲ. ಸಾಲ ಸೂಲ ಮಾಡಿ ಸಿನಿಮಾ ಮಾಡಿದ್ದ ಅನೇಕ ಹೊಸ ನಿರ್ಮಾಪಕರು, ಹೇಗೋ ರಿಲೀಸ್‌ಮಾಡಿ, ಬದುಕಿ ಬಿಡೋಣ ಅಂದುಕೊಂಡಿದ್ದರು. ಈಗ ನೋಡಿದರೆ, ಅದಕ್ಕೂ ಕಲ್ಲು ಬಿದ್ದಂತಾಗಿದೆ. ಮೂಲಗಳ ಪ್ರಕಾರ ೩೫೦ ಕ್ಕೂ ಹೆಚ್ಚು ಚಿತ್ರಗಳು ರಿಲೀಸ್‌ಗೆ ರೆಡಿಯಾಗಿವೆ. ಈ ಇಷ್ಟೂ ಚಿತ್ರಗಳ ಬಜೆಟ್‌ಲೆಕ್ಕ ಹಾಕಿದರೆ, ಸಾವಿರ ಕೋಟಿ ಮೀರುತ್ತೆ.
ಇಲ್ಲಿ ಹಣ ಹಾಕಿ ಹಣ ತೆಗೆಯುತ್ತೇನೆ ಅನ್ನೋದು ಕಷ್ಟದ ಮಾತು. ಹೋಗಲಿ ಹಾಕಿದ ಹಣ ತೆಗೆಯೋಣ ಅಂತಂದುಕೊಂಡರೂ, ಕೊರೊನಾ ಹೊಡೆತ ಕೊಟ್ಟಿದೆ. ಹೇಗೋ ಬಂದಷ್ಟು ಬರಲಿ ಅಂದುಕೊಂಡು ರಿಲೀಸ್‌ಗೆ ಸಜ್ಜಾಗಿದ್ದರೂ, ಅರ್ಧ ಭರ್ತಿ ಆದೇಶ ಮತ್ತಷ್ಟು ನರಳುವಂತೆ ಮಾಡಿಬಿಟ್ಟಿದೆ. ಹೇಗೋ ಒಂದಷ್ಟು ಸಿನಿಮಾಗಳು ಚಿತ್ರೀಕರಣ ಶುರುಮಾಡಿದ್ದವು. ಈಗ ಶೂಟಿಂಗ್‌ಮಾಡೋಕೂ ಹಿಂದೆ ಮುಂದೆ ನೋಡುವಂತಹ ಸ್ಥಿತಿ ಬಂದೊದಗಿದೆ. ಹೇಗೋ ಚಿತ್ರೀಕರಣ ಶುರುವಾಯ್ತು ಅಂತ ಕಾರ್ಮಿಕ ವಲಯ ಸಂಭ್ರಮದಲ್ಲೇ ಇತ್ತು. ಆದರೀಗ, ಅವರ ಅನ್ನಕ್ಕೂ ಕುತ್ತು ಬರುವಂತಾಗಿದೆ. ಅವರ ಗೋಳಿನ ದನಿ ಮಾತ್ರ ಅಲ್ಲೇ ಗಿರಕಿಹೊಡೆಯುವಂತಾಗಿದೆ.
ಅದೇನೆ ಇರಲಿ, ಸರ್ಕಾರದ ಈ ಕ್ರಮದಿಂದ ಸಿನಿಮಾಗಳಿಗೆ ಪೆಟ್ಟು ಕೊಟ್ಟಿದ್ದಷ್ಟೇ ಅಲ್ಲ, ನಿರ್ಮಾಪಕರನ್ನೂ ಹೈರಾಣಾಗಿಸಿದೆ. ಚಿತ್ರಮಂದಿರಗಳಲ್ಲಿ ದುಡಿಯುವ ಕೈಗಳು ಹಿಜುಕಿಕೊಳ್ಳುವಂತಾಗಿದೆ. ಈಗಷ್ಟೇ ಚಿತ್ರಮಂದಿರಗಳತ್ತ ಜನರು ದಾಪುಗಾಲು ಇಡುತ್ತಿದ್ದರು. ಈ ಬೆನ್ನಲ್ಲೇ ಪುನಃ ಚಿತ್ರಮಂದಿರಗಳಿಗೆ ಅರ್ಧ ಭರ್ತಿ ಎಂಬ ನಿರ್ಧಾರದಿಂದ ಇಡೀ ಚಿತ್ರೋದ್ಯಮವೇ ದಿಕ್ಕು ತೋಚದಂತಾಗಿ ಕುಳಿತಿದೆ. ಈಗಾಗಲೇ ಒಂದು ವರ್ಷದಿಂದ ಕಾದು ಸೋತು, ಸಣ್ಣಗಾಗಿರುವ ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿದ್ದವು. ಈಗ ಆ ಚಿತ್ರಗಳ ಬಿಡುಗಡೆ ದಿನಾಂಕ ಕೂಡ ಮುಂದೆ ಹೋಗುತ್ತಿವೆ. ಕೋಟಿ ಹಣ ಹಾಕಿ ನಿರ್ಮಿಸಿದ್ದ ನಿರ್ಮಾಪಕ ಕೂಡ ಮತ್ತಷ್ಟು ದಿನ ಒದ್ದಾಡುವಂತಹ ಸ್ಥಿತಿ ಬಂದೊದಗಿದೆ. “ಯುವರತ್ನ” ಮೇಲೇಳುವ ಹೊತ್ತಲ್ಲೇ ಈ ನಿರ್ಧಾರ ಹೊರಬಂದಿದೆ.
“ಕೋಟಿಗೊಬ್ಬ 3”, “ಸಲಗ”, ”ಕೆಜಿಎಫ್″, “ಕೃಷ್ಣ ಟಾಕೀಸ್”, “ಭಜರಂಗಿ” ಸೇರಿದಂತೆ ಹಲವು ಚಿತ್ರಗಳು ಬಿಡುಗಡೆ ದಿನವನ್ನು ಘೋಷಿಸಿದ್ದವು. ಈಗ ಅನಿವಾರ್ಯ ಎಂಬಂತೆ ಮಂದಕ್ಕೆ ಹೋದರೂ ಅಚ್ಚರಿ ಇಲ್ಲ. ಒಂದು ವೇಳೆ ಈ ನಿರ್ಧಾರ ಮತ್ತಷ್ಟು ಕಠಿಣಗೊಂಡರೆ, ಸಿನಿಮಾರಂಗದ ಪಾಡೇನು, ಸ್ಟಾರ್‌ಚಿತ್ರಗಳ ಜೊತೆಗೆ ಸಣ್ಣಪುಟ್ಟ ಚಿತ್ರಗಳ ದೊಡ್ಡ ಪಟ್ಟಿಯೂ ಇದೆ. ಆ ಎಲ್ಲಾ ಸಿನಿಮಾ ನಿರ್ಮಾಪಕರ ಸ್ಥಿತಿ ಏನಾಗಬೇಡ? ಚಿತ್ರರಂಗವನ್ನೇ ನಂಬಿದವರ ಬದುಕು ಹೇಗಾಗಬೇಡ? ಒಂದು ಸಿನಿಮಾ ಮಾಡುವ ಕಷ್ಟ, ನಿರ್ಮಾಪಕರಿಗಷ್ಟೇ ಗೊತ್ತು. ಎಲ್ಲಿಂದಲೋ ಹಣ ತಂದು, ಸಾಲ ಮಾಡಿ, ಬಡ್ಡಿ ಕಟ್ಟಿ, ಸಿನಿಮಾ ಮಾಡುತ್ತಾನೆ. ಆದರೆ, ಆ ಹಣ ಹಿಂದಿರುಗುತ್ತದೆ ಎಂಬ ಯಾವ ಗ್ಯಾರಂಟಿಯೂ ಇಲ್ಲಿರೋದಿಲ್ಲ. ಒಂದು ಸಿನಿಮಾ ಶುರುವಾದರೆ, ನೂರಾರು ಕುಟುಂಬ ಬದುಕು ಕಟ್ಟಿಕೊಳ್ಳುತ್ತೆ. ಆದರೆ, ಸಿನಿಮಾ ನಿರ್ಮಾಪಕನಿಗೇ ದೊಡ್ಡ ಪೆಟ್ಟು ಬಿದ್ದರೆ, ಅಂತಹ ಕುಟುಂಬಗಳೂ ಹೊಡೆತ ತಿನ್ನುತ್ತವೆ. ಇನ್ನೇನು ರಿಲೀಸ್‌ಗೆ ಸಜ್ಜಾಗುತ್ತಿರುವ ಹೊತ್ತಿಗೆ ಮತ್ತೊಂದು ಆತಂಕದ ತೂಗುಕತ್ತಿ ನೇತಾಡುತ್ತಿರುವುದು ನಿಜಕ್ಕೂ ಬೇಸರದ ವಿಷಯ. ಮತ್ತದೇ ಭಯ ಹುಟ್ಟಿಸುತ್ತಿರುವ ಕೊರೊನಾ, ಚಿತ್ರರಂಗದವರ ಬಣ್ಣವನ್ನು ಅಳಿಸದಂತಿರಲಿ ಎಂಬುದೇ ಸಿನಿಲಹರಿಯ ಆಶಯ.
ಕೊರೊನಾ ಎರಡನೇ ಅಲೆ ಜೋರಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ನಿನ್ನೆಯಷ್ಟೇ ಕಠಿಣ ಕ್ರಮಗಳನ್ನು ಜಾರಿಗೊಳಿಸಿದೆ. ಬೆಂಗಳೂರು ಸೇರಿದಂತೆ ಎಂಟು ಜಿಲ್ಲೆಗಳಲ್ಲಿ ಟಫ್ ರೂಲ್ಸ್ ಜಾರಿ ಮಾಡಿದೆ. ಚಿತ್ರಮಂದಿರಗಳಿಗೆ ಶೇ.50ರಷ್ಟು ಭರ್ತಿಗೆ ಮಾತ್ರ ಅವಕಾಶ ಎಂದು ಹೇಳಿದೆ. ಈ ಹಿನ್ನೆಲೆಯಲ್ಲಿ ಚಿತ್ರರಂಗ ದೊಡ್ಡ ಧ್ವನಿ ಎತ್ತಿದೆ. ಈ ಆದೇಶ ಹೊರಬರುತ್ತಿದ್ದಂತೆಯೇ ಚಿತ್ರರಂಗದ ಸ್ಟಾರ್ ನಟರಿಂದ ಹಿಡಿದು, ಚಿತ್ರೋದ್ಯಮದ ಎಲ್ಲರೂ ಒಕ್ಕೊರಲ ಧ್ವನಿ ಎತ್ತಿದ್ದಾರೆ. ಅಂತೆಯೇ ನಟ ರೋರಿಂಗ್ ಸ್ಟಾರ್ ಶ್ರೀಮುರಳಿ ಅವರೂ ಕೂಡ ತಮ್ಮ ಟ್ವೀಟ್ ಮೂಲಕ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.
ಅವರು ಮಾಡಿರುವ ಟ್ವೀಟ್‌ನಲ್ಲಿ “ಕೊರೋನಾ ನಿಯಂತ್ರಣಕ್ಕೆ ಸರ್ಕಾರ ಕೈಗೊಳ್ಳುವ ಮುಂಜಾಗ್ರತಾ ಕ್ರಮಗಳ ಬಗ್ಗೆ ವಿರೋಧ ಇಲ್ಲ. ಇದು ಅಗತ್ಯ ಕೂಡ. ಸರ್ಕಾರ ಕೈಗೊಳ್ಳುವ ನಿರ್ಧಾರಗಳಲ್ಲಿ ಬಣ್ಣವನ್ನೇ ನಂಬಿ ಬದುಕುವರ “ಬಣ್ಣ” ಅಳಿಸೋದು ಬೇಡ ಎಂಬ ಮನವಿ ನಮ್ಮದು. ಕೊರೋನಾ ಎಚ್ಚರಿಕೆ ಕ್ರಮಗಳೊಂದಿಗೆಯೇ ಮನರಂಜಿಸುವ ಕೆಲಸ ಚಿತ್ರೋದ್ಯಮದಿಂದ ಆಗುತ್ತೆ ಎಂಬ ನಂಬಿಕೆ ಸರ್ಕಾರಕ್ಕೂ ಬರಲಿ” ಎಂದು ಹೇಳಿದ್ದಾರೆ. ಅವರ ಈ ಟ್ವೀಟ್‌ಗೆ ಫ್ಯಾನ್ಸ್ ಸೇರಿದಂತೆ ಸಾಮಾಜಿಕ ವಲಯದಿಂದಲೂ ಮೆಚ್ಚುಗೆ ಸಿಕ್ಕಿದ್ದು, ಎಲ್ಲರೂ ಶ್ರೀಮುರಳಿ ಅವರ ಮಾತಿಗೆ ಧ್ವನಿಗೂಡಿಸಿದ್ದಾರೆ.
ಇನ್ನು, ಸಾಮಾಜಿಕ ತಾಣದಲ್ಲಿ ಮತ್ತೊಂದು ವಿಡಿಯೋ ಹರಿಬಿಟ್ಟಿರುವ ಶ್ರೀಮುರಳಿ, “ಮನಸು ಬಹಳ ಬೇಜಾರಾಗುತ್ತಿದೆ. ಈಗಷ್ಟೇ ಒಂದು ನ್ಯೂಸ್ ಕೇಳಿದೆ. ಮತ್ತೊಮ್ಮೆ ಶೇ.50ರಷ್ಟು ಆಕ್ಯುಪೆನ್ಸಿಗೆ ಅವಕಾಶ ಕೊಟ್ಟಿದ್ದಾರೆ ಅಂತ. ನಿನ್ನೆ ತಾನೇ “ಯುವರತ್ನ” ರಿಲೀಸ್ ಆಗಿದೆ. ಅದಕ್ಕೂ ಮುಂಚೆ “ರಾಬರ್ಟ್” ರಿಲೀಸ್ ಆಗಿದೆ. ಈ ವಾರ ಒಂದಷ್ಟು ಸಿನಿಮಾಗಳು ರಿಲೀಸ್ ಆಗಬೇಕಿದೆ. ಏನ್ ಮಾಡಬೇಕು ಸರ್. ರಿಲೀಸ್ ಆಗಿರುವ ಸಿನಿಮಾಗಳ ಗತಿ ಏನಾಗಬೇಕು ಸರ್. ಹಲವು ಸಂಸಾರಗಳು ಈ ವೃತ್ತಿಯನ್ನು ನಂಬಿ ಬದುಕುತ್ತಿದ್ದೇವೆ ಸರ್. ನಮಗೆ ಬೇರೇನೂ ಗೊತ್ತಿಲ್ಲ ಸರ್. ಜನರಿಗೆ ಅಳಿಸ್ತೀವಿ, ಇಲ್ಲ ನಗಸ್ತೀವಿ ಇಷ್ಟೇ ಸರ್ ಗೊತ್ತಿರೋದು. ಎಲ್ಲೋ ಒಂದು ಕಡೆ ನಿಜವಾಗಿಯೂ ನೋವಾಗುತ್ತಿದೆ ಸರ್. ಏನ್ ಮಾಡಬೇಕು ನಿರ್ಮಾಪಕರು.
ಅಷ್ಟೊಂದು ಖರ್ಚು ಮಾಡಿ ಎಂಟರ್‌ಟೈನ್‌ಮೆಂಟ್‌ಗೋಸ್ಕರ ಸಿನಿಮಾ ಮಾಡಿದಾಗ ನಾವೆಲ್ಲಾ ಏನ್ ಆಗಬೇಕು ಸರ್. ದಯವಿಟ್ಟು ಇದನ್ನು ವಾಪಸ್ ತಗೊಳ್ಳಿ. ದಯವಿಟ್ಟು ಶೇ.100 ಆಕ್ಯುಪೆನ್ಸಿಗೆ ಅವಕಾಶ ಕೊಡಿ ಸರ್. ಇದು ನಮ್ಮ ಮನವಿ. ನೀವು ಇವತ್ತು ಇದನ್ನು ಮಾಡಲಿಲ್ಲವೆಂದರೆ, ಹಲವಾರು ಜನರು ನಾಳೆ ಬೀದಿಗೆ ಬರುತ್ತಾರೆ. ಇನ್ನಷ್ಟು ಸಿನಿಮಾಗಳು ರಿಲೀಸ್ ಆಗುತ್ತವೆ. ವ್ಯಾಕ್ಸಿನೇಷನ್ ಬಂದಿದೆ ಸರ್.
ಎಲ್ಲರೂ ತಗೊಂಡು ಸೇಫ್ ಆಗ್ತಾರೆ. ನೀವೇ ಸಲಹೆ ಕೊಟ್ಟಿದ್ದೀರಿ. ಆದರೂ ಈ ನಿರ್ಧಾರದಿಂದ ಭಯ ಆಗುತ್ತಿದೆ. ಮತ್ತೊಮ್ಮೆ ಶೇ.100ರಷ್ಟು ಆಕ್ಯುಪೆನ್ಸಿ ಕೊಡಿ” ಎಂದು ಮನವಿ ಮಾಡಿದ್ದಾರೆ. ಅದೇನೆ ಇರಲಿ, ಈಗ ಚಿತ್ರರಂಗದ ಸ್ಟಾರ್ ನಟರೆಲ್ಲರೂ ಒಗ್ಗಟ್ಟಾಗಿ ಮನವಿ ಮಾಡುತ್ತಿದ್ದಾರೆ. ಸರ್ಕಾರ ಕೂಡ ಈ ಬಗ್ಗೆ ಯೋಚಿಸಿ, ಚಿತ್ರರಂಗದ ಮನವಿಗೆ ಸ್ಪಂದಿಸುವುದೇ ಎಂದು ಕಾದು ನೋಡಬೇಕಿದೆ.