ಹೊಸಬರ ಬ್ರೇಕ್‌ ಫೇಲ್ಯೂರ್‌;‌ ಮತ್ತೊಂದು ಹಾರರ್‌ ಸಿನಿಮಾ ರೆಡಿ

ಕನ್ನಡದಲ್ಲಿ ಹಾರರ್‌ ಸಿನಿಮಾಗಳಿಗೇನೂ ಕೊರತೆ ಇಲ್ಲ. ಅದರಲ್ಲೂ ಇಲ್ಲಿ ಹೊಸಬರೇ ಹಾರರ್‌ ಅಂಶಗಳೊಂದಿಗೆ ಬರುತ್ತಿದ್ದಾರೆ. ಅಂತಹವರ ಸಾಲಿಗೆ ಈಗ “ಬ್ರೇಕ್‌ ಫೇಲ್ಯೂರ್‌” ಸಿನಿಮಾ ಕೂಡ ಸೇರಿದೆ. ಹೌದು, ಇದು ಬಹುತೇಕ ಹೊಸಬರ ಚಿತ್ರ. ರಾಣಿಗಜ್ ಪ್ರೊಡಕ್ಷನ್ಸ್ ಮೂಲಕ ತಯಾರಾಗಿರುವ “ಬ್ರೇಕ್ ಫೇಲ್ಯೂರ್”‌ ಚಿತ್ರದ ಹಾಡುಗಳು ಇತ್ತೀಚೆಗೆ ಬಿಡುಗಡೆಗೊಂಡಿವೆ.

ಸಾಮಾನ್ಯವಾಗಿ ಹಾರರ್‌ ಚಿತ್ರಗಳಲ್ಲಿ ಒಂದು ಅಂಶ ಮಾಮೂಲಾಗಿರುತ್ತೆ. ಹುಡುಗರ ತಂಡವೊಂದು ಭಯಾನಕ ಕಾಡಿಗೆ ಹೋಗೋದು, ಅಲ್ಲಿ ಒಬ್ಬೊಬ್ಬರೇ ನಾಪತ್ತೆಯಾಗೋದು ಸಹಜ. ಅಲ್ಲಿ ಕಾಣದ ಕೈಯೊಂದು ಕೆಲಸ ಮಾಡುತ್ತೆ ಅನ್ನುವ ಸೂಚನೆ ಕೂಡ ಸಿಗುತ್ತಾ ಹೋಗುತ್ತೆ. ಇಂತಹ ಅಂಶವಿರುವ ಚಿತ್ರ “ಬ್ರೇಕ್‌ ಫೇಲ್ಯೂರ್‌”. ಬದುಕಿನ ದಾರಿಯಲ್ಲಿ ಭವಿಷ್ಯ ಎಂಬ ಬ್ರೇಕ್‌ ಫೇಲ್ಯೂರ್‌ ಆದಾಗ ಏನೆಲ್ಲಾ ಆಗಿಬಿಡುತ್ತೆ ಎಂಬ ಅಂಶಗಳೊಂದಿಗೆ ಚಿತ್ರ ಸಾಗುತ್ತದೆ.

ಚಿತ್ರದುದ್ದಕ್ಕೂ ಕುತೂಹಲ ಸಾರವಿದೆ. ಪ್ರತಿ ದೃಶ್ಯದಲ್ಲೂ ಸಸ್ಪೆನ್ಸ್‌ ಥ್ರಿಲ್ಲರ್‌ ಅಂಶಗಳಿವೆ. ಬೆಚ್ಚಿ ಬೀಳಿಸುವ ಮುಖಗಳೂ ಇಲ್ಲುಂಟು. ಮುಖ್ಯವಾಗಿ, ಕಾಡು ಮೇಡು ಅಲೆಯುವ ತಂಡದ ಶ್ರಮ ವೀಡಿಯೋ ಸಾಂಗ್‌ನಲ್ಲಿ ನೋಡಬಹುದು. ಅದಿತ್ ನವೀನ್ ನಿರ್ದೇಶಕರು. ಅವರು ನಿರ್ದೇಶನದ ಜೊತೆಯಲ್ಲಿ ತೆರೆ ಮೇಲೂ ನಟಿಸಿದ್ದಾರೆ. ಅಬ್ದುಲ್ ಗಣಿ ತಾಳಿಕೋಟೆ ಅವರು ನಿರ್ಮಾಪಕರು. ಅವರ ಪ್ರಕಾರ ಹಣ ಇದ್ದಾಕ್ಷಣ ಸಿನಿಮಾ ಆಗೋದಿಲ್ಲ. ಒಗ್ಗಟ್ಟು, ಪ್ರೀತಿ, ಶ್ರಮ ಇದ್ದರೆ ಮಾತ್ರ ಒಂದೊಳ್ಳೆಯ ಚಿತ್ರ ಆಗುತ್ತೆ. ಅದು ಇಲ್ಲಾಗಿದೆ. ಸಣ್ಣ ಬಜೆಟ್‌ನಲ್ಲೇ ಅಚ್ಚುಕಟ್ಟಾದ ಚಿತ್ರ ಮಾಡಿದ್ದಾಗಿ ಹೇಳುತ್ತಾರೆ ಅವರು.

ಇಡೀ ಚಿತ್ರತಂಡ ಕಾಡು ಮನುಷ್ಯರಂತೆ ಕಾಡು ಅಲೆದು ಶ್ರಮಿಸಿದ್ದಾರೆ. ಬಹುತೇಕ ದಾಂಡೇಲಿ ಸುತ್ತಮುತ್ತಲ ಪರಿಸರದಲ್ಲಿ ಚಿತ್ರೀಕರಣ ಮಾಡಲಾಗಿದೆ‌. ಮುಖ್ಯವಾಗಿ ನೀರಿಲ್ಲದೆ ಅಂತಹ ಕಾಡಿನಲ್ಲಿ ಬದುಕೋದೆ ಕಷ್ಟ ಅನ್ನೋದನ್ನು ತಿಳಿದು ಕೊಂಡೆವು‌. ಮುಂದಿನ ತಿಂಗಳು ಸಿನಿಮಾ ಬಿಡುಗಡೆ ಮಾಡುವ ಯೋಚನೆಯಿದೆ ಎನ್ನುತ್ತಾರೆ ಹೀರೋ ಅದಿತ್ ನವೀನ್. ಉಗ್ರಂ ರವಿ ಕೂಡ ಈ ವೇಳೆ ಮಾತನಾಡಿ, “ಕಾಡಲ್ಲಿ ಚಿತ್ರೀಕರಣ ಮಾಡುವ ಸಂದರ್ಭ ತುಂಬಾನೇ ಭಯವಾಗುತ್ತಿತ್ತು. ಕಾರಣ, ಕಾಡು ಪ್ರಾಣಿಗಳು ರಾತ್ರಿ ವೇಳೆ ನೀರು ಕುಡಿಯಲು ಬರುತ್ತಿದ್ದವು. ಅದನ್ನು ಕಂಡು ಭಯವಾಗಿದ್ದು ನಿಜ. ಒಟ್ಟಾರೆ ಒಳ್ಳೆಯ ಸಿನಿಮಾ ಮಾಡಿದ್ದೇವೆʼ ಎಂಬುದು ಉಗ್ರಂ ರವಿ ಮಾತು.

Related Posts

error: Content is protected !!