ಕನ್ನಡ ನಟಿ ರಶ್ಮಿಕಾ ಮಂದಣ್ಣ ಒಂದಾದ ಮೇಲೊಂದು ದೊಡ್ಡ ಸಿನಿಮಾಗಳಲ್ಲಿ ಅವಕಾಶ ಪಡೆಯುತ್ತಿದ್ದಾರೆ. ದಕ್ಷಿಣದ ಸ್ಟಾರ್ ಹೀರೋಗಳ ಚಿತ್ರಗಳಲ್ಲಿ ನಟಿಸಿದ ಬೆಡಗಿ ಇದೀಗ ‘ಮಿಷನ್ ಮಜ್ನೂ’ ಬಾಲಿವುಡ್ ಚಿತ್ರೀಕರಣದಲ್ಲಿದ್ದಾರೆ. ಇದೀಗ ಬಂದ ಸುದ್ದಿಯ ಪ್ರಕಾರ ಅವರು ತೆಲುಗು ಸ್ಟಾರ್ ರಾಮ್ ಚರಣ್ ತೇಜಾ ನಟನೆಯ ದುಬಾರಿ ಪ್ಯಾನ್ ಇಂಡಿಯಾ “3ಡಿ” ಸಿನಿಮಾದ ನಾಯಕಿಯಾಗಲಿದ್ದಾರಂತೆ. ಸೈನ್ಸ್-ಫಿಕ್ಷನ್ ಸಿನಿಮಾಗಳ ಜನಪ್ರಿಯ ನಿರ್ದೇಶಕ ಶಂಕರ್ ನಿರ್ದೇಶನದ ಚಿತ್ರವಿದು ಎನ್ನುವುದು ವಿಶೇಷ.
ಸದ್ಯ ರಶ್ಮಿಕಾ ಜನಪ್ರಿಯತೆಯ ಉತ್ತುಂಗದಲ್ಲಿದ್ದಾರೆ. ತಮ್ಮ ಚಿತ್ರಕ್ಕೆ ಅವರೇ ನಾಯಕಿಯಾಗಲಿ ಎನ್ನುವುದು ರಾಮ್ ಚರಣ್ ಇರಾದೆ. ಹಾಗಾಗಿ ಚಿತ್ರತಂಡದಿಂದ ನಟಿಗೆ ಆಹ್ವಾನವೂ ಹೋಗಿದೆ. ಆದರೆ ಹಲವು ಚಿತ್ರಗಳಲ್ಲಿ ಬ್ಯುಸಿಯಾಗಿರುವ ರಶ್ಮಿಕಾಗೆ ಹೊಸ ಚಿತ್ರಕ್ಕೆ ಡೇಟ್ಸ್ ಹೊಂದಿಸಿಕೊಳ್ಳುವುದು ಕಷ್ಟವಾಗಿದೆ. ಆದರೆ ರಾಮ್ ಚರಣ್ – ಶಂಕರ್ ಸಿನಿಮಾ ಕೈಬಿಡಲು ಅವರಿಗೂ ಇಷ್ಟವಿಲ್ಲ.
ಹಾಗಾಗಿ ಬಹುತೇಕ ಅವರೇ ಚಿತ್ರದ ನಾಯಕಿಯಾಗಬಹುದು. ಇನ್ನು ಸದ್ಯದಲ್ಲೇ ಅಲ್ಲು ಅರ್ಜುನ್ ಜೊತೆಗೆ ಅವರು ನಟಿಸಿರುವ ‘ಪುಷ್ಪ’ ತೆಲುಗು ಸಿನಿಮಾ ತೆರೆಗೆ ಬರುತ್ತಿದೆ. ಅಲ್ಲದೆ ಇಂದು ಅವರು ನಾಯಕಿಯಾಗಿರುವ ಕನ್ನಡ ಸಿನಿಮಾ ‘ಪೊಗರು’ ತೆರೆಕಂಡಿದ್ದು, ಇದರ ತೆಲುಗು ಅವತರಣಿಕೆಯೂ ಆಂಧ್ರದಲ್ಲಿ ತೆರೆಕಂಡಿದೆ.