ಪ್ರೇಮ ಪೂಜೆಯಲ್ಲಿ ಪ್ರೇಮ್‌! ನೆನಪಿರಲಿ ಇದು ಬಹು ನಿರೀಕ್ಷೆಯ 25 ನೇ ಚಿತ್ರ ; ಪ್ರೇಮಂ ಪೂಜ್ಯಂ ಟೈಟಲ್‌ ಸಾಂಗ್‌ ಲಿರಿಕಲ್‌ ವಿಡಿಯೋ ಸಿಕ್ತು ಭರಪೂರ ಮೆಚ್ಚುಗೆ…

ಕನ್ನಡದ ಸ್ಪುರದ್ರೂಪಿ ನಟ ಅಂದಾಕ್ಷಣ ನೆನಪಾಗೋದೇ “ನೆನಪಿರಲಿ” ಪ್ರೇಮ್.‌ ಹೌದು, ಎಂದೂ ವಯಸ್ಸೇ ಬತ್ತದಂತಿರುವ ಸ್ಮೈಲ್‌ ಹೀರೋ ಪ್ರೇಮ್‌ ಈಗ ಪ್ರೇಮ ಪೂಜೆಯ ಜಪದಲ್ಲಿದ್ದಾರೆ. ಪ್ರೇಮ್‌ ಕನ್ನಡ ಚಿತ್ರರಂಗದ ಲವ್ಲಿಸ್ಟಾರ್ ಎಂಬ ಮಾತಿಗೆ ಹೇಳಿ ಮಾಡಿಸಿದ ಸ್ಟಾರ್‌ ಅನ್ನೋದು ಸತ್ಯ. ಇಷ್ಟು ವರ್ಷಗಳ ಕಾಲ ಎಲ್ಲಾ ಬಗೆಯ ಚಿತ್ರಗಳನ್ನು ನೀಡಿರುವ ಪ್ರೇಮ್‌, ಯುವ ಮನಸ್ಸುಗಳ ಅದರಲ್ಲೂ ಹುಡುಗಿಯರ ಫೇವರೇಟ್‌ ಹೀರೋ ಅನ್ನುವುದನ್ನು ತಳ್ಳಿ ಹಾಕುವಂತಿಲ್ಲ. ಪ್ರೇಮ್‌ ಅವರ ಸಿನಿ ಜರ್ನಿಯನ್ನೊಮ್ಮೆ ಹಿಂದಿರುಗಿ ನೋಡಿದರೆ, ಅಲ್ಲಿ ಗೆಲುವಿದೆ, ಸೋಲೂ ಇದೆ. ಖುಷಿಯ ಹೆಜ್ಜೆಯೂ ಇದೆ. ನೋವಿನ ಹಾಡೂ ಇದೆ. ಆದರೆ, ಇವೆಲ್ಲವನ್ನೂ ಅಷ್ಟೇ ಪ್ರೀತಿಯಿಂದ ಸ್ವೀಕರಿಸಿ, ಸಾಧನೆಯ ಮೆಟ್ಟಿಲೇರಿದ ಬ್ಯೂಟಿಫುಲ್‌ ಹೀರೋ ಎಂಬುದು ನೆನಪಿರಲಿ.
ಇಷ್ಟಕ್ಕೂ ಈಗ ಈ ಪ್ರೇಮ್‌ ಕುರಿತು ಇಷ್ಟೋಂದು ಪೀಠಿಕೆ ಯಾಕೆ ಅನ್ನೋ ಪ್ರಶ್ನೆ ಎದುರಾಗಬಹುದು. ಅದಕ್ಕೆ ಕಾರಣ, ಅವರ ಬಹು ನಿರೀಕ್ಷೆಯ “ಪ್ರೇಮಂ ಪೂಜ್ಯಂ”.

ಹೌದು, ಇದು ಅವರ 25ನೇ ಸಿನಿಮಾ ಅನ್ನೋದು ವಿಶೇಷ. ಸದ್ಯ ಬಿಡುಗಡೆಗೆ ತಯಾರಾಗಿರುವ ಈ ಚಿತ್ರ, ಈಗಾಗಲೇ ಸಾಕಷ್ಟು ಕುತೂಹಲ ಕೆರಳಿಸಿದೆ. ಚಿತ್ರದ‌ ಟೈಟಲ್ಲೇ ಹೇಳುತ್ತೆ ಇದೊಂದು ಪಕ್ಕಾ ಇಂಟ್ರೆಸ್ಟಿಂಗ್‌ ಲವ್‌ಸ್ಟೋರಿ ಅಂತ. ಪ್ರೇಮ್‌ ಅವರ ಈವರೆಗಿನ ಲವ್‌ಸ್ಟೋರಿ ಸಿನಿಮಾಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಅಲ್ಲಿ ಗೆಲುವಿನ ಗೆರೆಗಳದ್ದೇ ಆರ್ಭಟ. ಆ ಆರ್ಭಟ ಪ್ರೇಮಂ ಪೂಜ್ಯಂವರೆಗೂ ಮುಂದುವರೆಯೋ ಸೂಚನೆ ಈಗಾಗಲೇ ಸಿಕ್ಕಿದೆ ಕೂಡ. ಆರಂಭದಿಂದಲೂ ಪೋಸ್ಟರ್ ಮೂಲಕವೇ ಸದ್ದು ಮಾಡಿದ್ದ “ಪ್ರೇಮಂ ಪೂಜ್ಯಂ”, ಈಗ ಮತ್ತೊಂದು ಸುದ್ದಿಗೂ ಕಾರಣವಾಗಿದೆ. ಯುಗಾದಿ ವಿಶೇಷ ಎಂಬಂತೆ ಚಿತ್ರದ ಟೈಟಲ್‌ ಸಾಂಗ್‌ ಲಿರಿಕಲ್‌ ವಿಡಿಯೊ ಬಿಡುಗಡೆಯಾಗಿದೆ. ಬಿಡುಗಡೆಯಾದ ಕ್ಷಣದಲ್ಲೇ ಲಕ್ಷಾಂತರ ವೀಕ್ಷಣೆ ಪಡೆದಿದೆ. ಅಷ್ಟೇ ಅಲ್ಲ, ಮೆಚ್ಚುಗೆಗೂ ಪಾತ್ರವಾಗಿದೆ.

ಪ್ರೇಮಂ ಪೂಜ್ಯಂ. ದೈವಂ ಚರಣಂ ನಿತ್ಯಂ ನಿಲಯಂ ಸತ್ಯಂ ವರದಂ… ಹೀಗೆ ಸಾಗುವ ಟೈಟಲ್‌ ಸಾಂಗ್‌ ಲಿರಿಕಲ್‌ ವಿಡಿಯೋ ನಿಜಕ್ಕೂ ಖುಷಿ ಕೊಡುತ್ತದೆ. ಪ್ರೀತಿಯ ಮಜಲುಗಳ ಬಗ್ಗೆ ಸಾರುವ ಸಾಹಿತ್ಯದಲ್ಲಿ ಒಂದ್ರೀತಿ ಲವ್ಲಿ ಸ್ಪರ್ಶವಿದೆ. ಕೆಡಂಬದಿ ಕ್ರಿಯೇಷನ್ಸ್‌ನಲ್ಲಿ ಮೂಡಿ ಬಂದಿರುವ ಈ ಸಿನಿಮಾದಲ್ಲಿ ಲವ್ಲಿ ಸ್ಟಾರ್‌ ಪ್ರೇಮ್‌ಗೆ ಜೋಡಿಯಾಗಿ ಬೃಂದಾ ಆಚಾರ್ಯ ಕಾಣಿಸಿಕೊಂಡಿದ್ದಾರೆ.

ಡಾ.ರಾಘವೇಂದ್ರ ಬಿ.ಎಸ್.‌ ಅವರು ಈ ಸಿನಿಮಾದ ನಿರ್ದೇಶನ ಮಾತ್ರವಲ್ಲ, ಸಂಗೀತ ಸಂಯೋಜನೆ ಜೊತೆ ಸಾಹಿತ್ಯವನ್ನೂ ಬರೆದಿದ್ದಾರೆ. ಹರಿಹರನ್‌ ಧ್ವನಿಯಲ್ಲಿ ಮೂಡಿ ಬಂದಿರುವ ಈ ಟೈಟಲ್‌ ಸಾಂಗ್‌ ಪ್ರೇಮಿಗಳ ಮನದಲ್ಲಿ ಅಚ್ಚಳಿಯದೆ ಉಳಿಯುವಂತಿದೆ. ಸಾಹಿತ್ಯದ ಸಾಲುಗಳಲ್ಲಿ ಸಾರವಿದೆ.

ಕಿವಿಗಿಂಪೆನಿಸುವ ರಾಗ ಸಂಯೋಜನೆ ಜೊತೆ ಸಾಹಿತ್ಯ ಕೂಡ ಅರ್ಥಪೂರ್ಣ. ಹಾಗಾಗಿಯೇ, ಇದು ಯೂಥ್ಸ್‌ಗೊಂದು ಪ್ರೀತಿಯ ಹಾಡಾಗಿ ಉಳಿಯುವುದರಲ್ಲಿ ಅಚ್ಚರಿ ಇಲ್ಲ. ಇನ್ನು, ಈ ಚಿತ್ರದ ಪೋಸ್ಟರ್‌ ನೋಡಿದವರಿಗೆ ಪ್ರೇಮ್‌ ಮತ್ತಷ್ಟು ನ್ಯೂ ಲುಕ್‌ನಲ್ಲಿ ಆಕರ್ಷಿಸುತ್ತಾರೆ. ಫ್ರೆಶ್‌ ಲೊಕೇಷನ್‌ ಜೊತೆ ಅಷ್ಟೇ ಕ್ಯೂಟ್‌ ಜೋಡಿ ಕಾಣಿಸಿಕೊಂಡಿರುವುದನ್ನು ನೋಡಿದರೆ, ಸಿನಿಮಾ ನೋಡುವ ಕಾತುರ ಹೆಚ್ಚದೇ ಇರದು. ಚಿತ್ರಕ್ಕೆ ನವೀನ್‌ ಕುಮಾರ್‌ ಕ್ಯಾಮೆರಾ ಹಿಡಿದರೆ, ಹರೀಶ್‌ ಕೊಮ್ಮೆ ಸಂಕಲನವಿದೆ. ಇಂತಹ ನಿರೀಕ್ಷೆಯ ಸಿನಿಮಾಗೆ ಡಾ.ರಕ್ಷಿತ್‌ ಕೆಡಂಬದಿ, ಡಾ.ರಾಜಕುಮಾರ್‌ ಜಾನಕಿರಾಮನ್‌, ಡಾ.ರಾಘವೇಂದ್ರ ಎಸ್‌, ಮನೋಜ್‌ ಕೃಷ್ಣನ್‌ ನಿರ್ಮಾಪಕರು.

ಅದೇನೆ ಇರಲಿ, ಪ್ರತಿಯೊಬ್ಬ ನಟನಿಗೂ ತನ್ನ ಮೊದಲ ಚಿತ್ರ ಹೇಗೆ ವಿಶೇಷ ಆಗುತ್ತೋ, ಹಾಗೆಯೇ ಅವರ ಪ್ರತಿಯೊಂದು ಸಿನಿಮಾ ಕೂಡ ವಿಶೇಷವೇ. ಅದರಲ್ಲೂ 25 ನೇ ಸಿನಿಮಾ ಅಂದಾಕ್ಷಣ, ಅದೊಂದು ಮೈಲಿಗಲ್ಲು ಎನಿಸುವುದು ಸಹಜ. ಅಂತಹ ೨೫ನೇ ಹೊಸ್ತಿಲಲ್ಲಿ ಇರುವ ಪ್ರೇಮ್‌, 25ನೇ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅದಕ್ಕೆ ಕಾರಣ, ಚಿತ್ರದ ಕಥೆ ಮತ್ತು ಪಾತ್ರ. ಇಲ್ಲಿ ಪ್ರೀತಿಗೆ ಹೆಚ್ಚು ಆದ್ಯತೆ ಕೊಡಲಾಗಿದೆ. ಅದೇ ಪ್ರೇಮಂ ಪೂಜ್ಯಂ ವಿಶೇಷ. ಒಂದಂತೂ ನಿಜ.

ಚಿತ್ರರಂಗಕ್ಕೆ ಬಂದು ಇಷ್ಟು ವರ್ಷಗಳ ಕಾಲ ಸೋಲು-ಗೆಲುವನ್ನು ಕಂಡು ಇಂದಿಗೂ ರನ್ನಿಂಗ್‌ನಲ್ಲಿರುವುದು ಸುಲಭದ ಮಾತಲ್ಲ. ಪ್ರೇಮ್‌ ಆ ವಿಷಯದಲ್ಲಿ ಅದೃಷ್ಟವಂತರು. ಆರಂಭದಲ್ಲೇ ಯಶಸ್ಸು ಕಂಡ ಪ್ರೇಮ್‌, ಸಾಲು ಸಾಲು ಸಿನಿಮಾಗಳ ಮೂಲಕ ಗಮನಸೆಳೆದರು. ಹುಡುಗಿಯರ ಪಾಲಿಗಂತೂ ಲವ್ಲಿ ಸ್ಟಾರ್‌ಆಗಿಯೇ ಉಳಿದಿರುವ ಪ್ರೇಮ್‌ ಅವರ “ಪ್ರೇಮಂ ಪೂಜ್ಯಂ” ನೋಡಲು ತುದಿಗಾಲ ಮೇಲೆ ನಿಂತಿರೋದಂತೂ ಸತ್ಯ. ಸದ್ಯಕ್ಕೆ “ಪ್ರೇಮಂ ಪೂಜ್ಯಂ. ದೈವಂ ಚರಣಂ, ನಿತ್ಯಂ ನಿಲಯಂ, ಸತ್ಯಂ ವರದಂ… ಹಾಡು ಗುನುಗುತ್ತಿದ್ದಾರೆ ಅವರ ಫ್ಯಾನ್ಸ್.

Related Posts

error: Content is protected !!