Categories
ಸಿನಿ ಸುದ್ದಿ

ಲಾಕ್‌ ಡೌನ್‌ ಹಿನ್ನೆಲೆ : ಕಲಾವಿದರು ಹಾಗೂ ಕಲಾ ತಂಡಗಳಿಗೆ ತಲಾ 3 ಸಾವಿರ ಪರಿಹಾರ ಘೋಷಣೆ

ಕೊರೊನಾ ಹೆಚ್ಚಳದ ಹಿನ್ನೆಲೆಯಲ್ಲಿ ಸರ್ಕಾರ ಲಾಕ್‌ ಡೌನ್‌ ಘೋಷಣೆ ಮಾಡಿದ ನಂತರ ಸಿನಿಮಾ ಹಾಗೂ ಸೀರಿಯಲ್‌ ಕಲಾವಿದರೆಲ್ಲ ಕೆಲಸ ಇಲ್ಲದೆ ಮನೆಯಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರ ಬಡ ಕಲಾವಿದರ ಕುಟುಂಬಗಳಿಗೆ ಪರಿಹಾರ ಘೋಷಣೆ ಮಾಡಬೇಕೆಂಬ ಚಿತ್ರೋದ್ಯಮದವರ ಮನವಿಗೆ ರಾಜ್ಯ ಸರ್ಕಾರ ಕೊನೆಗೂ ಸ್ಪಂದಿಸಿದೆ.

ಕಲಾವಿದರು ಹಾಗೂ ಕಲಾ ತಂಡಗಳಿಗೆ ತಲಾ 3 ಸಾವಿರ ಘೋಷಣೆ ಮಾಡಿದೆ. ಲಾಕ್‌ ಡೌನ್‌ ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಆಟೋ ಚಾಲಕರು, ಟ್ಯಾಕ್ಸಿ ಡ್ರೈವರ್ಸ್‌, ಬೀದಿ ಬದಿ ವ್ಯಾಪಾರಿಗಳು, ಕ್ಷೌರಿಕ ಸಮಾಜದವರು, ದೋಬಿಗಳು, ಹಣ್ಣು ಹಾಗೂ ಹೂವು ಬೆಳೆಗಾರರು, ರೈತರು ಸೇರಿದಂತೆ ಸಮಾಜದ ವಿವಿಧ ವರ್ಗಗಳ ಜನರಿಗೆ ರಾಜ್ಯ ಸರ್ಕಾರ ಒಟ್ಟು 1250 ಕೋಟಿ ವಿಶೇಷ ಪ್ಯಾಕೇಜ್‌ ಘೋಷಣೆ ಮಾಡಿದೆ. ಬುಧವಾರ ಪತ್ರಿಕಾಗೋಷ್ಟಿಯಲ್ಲಿ ಅವರು ವಿಶೇಷ ಪ್ಯಾಕೇಜ್‌ ವಿವರ ಬಹಿರಂಗ ಪಡಿಸಿದರು. ʼ ಸರ್ಕಾರ ಘೋಷಣೆ ಮಾಡಿದ ಸುಮಾರು 1250 ಕೋಟಿ ರೂ.ಗಳ ವಿಶೇಷ ಪ್ಯಾಕೇಜ್‌ ನಿಂದಾಗಿ ಸುಮಾರು 30 ಲಕ್ಷ ಫಲಾನುಭವಿಗಳಿಗೆ ಸಹಾಯಕವಾಗಲಿದೆʼ ಅಂದರು.

ಸರ್ಕಾರದ ಈ ಪ್ಯಾಕೇಜ್‌ ನಲ್ಲಿ ಸಿನಿಮಾ ಹಾಗೂ ಸೀರಿಯಲ್‌ ಕಲಾವಿದರಿಗೂ ಪರಿಹಾರ ಘೋಷಣೆ ಆಗಿದೆ. ಲಾಕ್‌ ಡೌನ್‌ ಹಿನ್ನೆಲೆಯಲ್ಲಿ ಕನ್ನಡ ಚಿತ್ರೋದ್ಯಮದ ಸಾಕಷ್ಟು ಮಂದಿ ಕಾರ್ಮಿಕರು ಕೆಲಸ ಇಲ್ಲದ ಕುಳಿತಿದ್ದಾರೆ. ಕೆಲಸ ಇಲ್ಲದ ಕಾರಣಕ್ಕೆ ಅವರಿಗೆ ಕುಟುಂಬ ನಿರ್ವಹಣೆಯೂ ಕಷ್ಟವಾಗಿದೆ.

ಈ ಹಿನ್ನೆಲೆಯಲ್ಲಿ ಸರ್ಕಾರ ಅವರ ನೆರವಿಗೆ ಬರಬೇಕು. ಅವರ ಕುಟುಂಬ ನಿರ್ವಹಣೆಗೆ ಅನುಕೂಲ ಆಗುವ ಹಾಗೆ ಪರಿಹಾರ ಘೋಷಿಸಬೇಕೆಂದು ನಿರ್ಮಾಪಕ ಬಾ.ಮ. ಹರೀಶ್‌ ಸರ್ಕಾರಕ್ಕೆ ಮನವಿ ಪತ್ರ ಬರೆದಿದ್ದರು.

ಸಿಎಂ ಭೇಟಿ ಮಾಡಿದ ಭಾ.ಮ ಹರೀಶ್

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಕಾರ್ಯದರ್ಶಿಗಳಾದ ಭಾ.ಮ ಹರೀಶ್ ರವರು ಇಂದು ಮಾನ್ಯ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರನ್ನು ಭೇಟಿ ಮಾಡಿ ಕೊರೊನಾ ಮಹಾಮಾರಿಯಿಂದ ಸಂಕಷ್ಟಕ್ಕೀಡಾಗಿರುವ ಸಮಸ್ತ ಕನ್ನಡ ಚಿತ್ರೋದ್ಯಮದ ಸದಸ್ಯರಿಗೆ ಸರ್ಕಾರದಿಂದ ವಿಶೇಷ ಪ್ಯಾಕೇಜನ್ನು ಘೋಷಿಸಿ, ಅವರಿಗೆ ಹಾಗೂ ಅವರ ಕುಟುಂಬದವರಿಗೆ ನೆರವು ನೀಡಬೇಕೆಂದು ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಚಿತ್ರನಟರಾದ ಜೆ.ಕೆ ಹಾಗೂ ನಿರ್ಮಾಪಕ, ನಿರ್ದೇಶಕರಾದ ಆಸ್ಕರ್ ಕೃಷ್ಣ ಉಪಸ್ಥಿತರಿದ್ದರು.

Categories
ಸಿನಿ ಸುದ್ದಿ

ಗುರು ಶಿಷ್ಯರಿಗೆ ಹುಡುಗಿ ಸಿಕ್ಕಾಯ್ತು! ಶರಣ್ ಗೆ ನಿಶ್ವಿಕಾ ನಾಯ್ಡು ನಾಯಕಿ

ತರುಣ್ ಸುಧೀರ್ ಈ ಹಿಂದೆ ‘ಗುರುಶಿಷ್ಯರು’ ಸಿನಿಮಾ ಬಗ್ಗೆ ಹೇಳಿದ್ದರು. ಚಿತ್ರದ ಕುರಿತು ಒಂದಷ್ಟು ಮಾಹಿತಿ ನೀಡಿದ್ದ ಅವರು, ನಾಯಕಿ ಆಯ್ಕೆ ಬಗ್ಗೆ ಹೇಳಿರಲಿಲ್ಲ. ಈಗ ‘ಗುರುಶಿಷ್ಯರು’ ಚಿತ್ರಕ್ಕೆ ಹೀರೋಯಿನ್ ಸಿಕ್ಕಾಗಿದೆ.

‘ಅಮ್ಮ ಐ ಲವ್ ಯು’,’ ಪಡ್ಡೆ ಹುಲಿ’, ‘ಜಂಟಲ್ಮನ್’ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದ ನಿಶ್ವಿಕಾ ನಾಯ್ಡು ಈ ಗುರುಶಿಷ್ಯರು ಚಿತ್ರದ ನಾಯಕಿ.

ಅಂದಹಾಗೆ, ನಿಶ್ವಿಕಾ ಅವರನ್ನು ಚಿತ್ರದ ನಾಯಕಿಯಾಗಿ ಆಯ್ಕೆ ಮಾಡುವ ಪ್ರಕ್ರಿಯೆ ಸುಲಭವಾಗಿರಲಿಲ್ಲ ಎಂಬುದು ಸಿನಿಮಾ ತಂಡದ ಹೇಳಿಕೆ. ನಾಯಕಿಯ ಆಯ್ಕೆ ಹೇಗಾಯಿತು ಅನ್ನೋ ವಿಷಯವನ್ನು ಒಂದು ಕಿರುನಾಟಕದ ಮೂಲಕ ಚಿತ್ರತಂಡ ಹೇಳಿದೆ.

30 ಹೊಸ ಕಲಾವಿದೆಯರು, ಕನ್ನಡ ಚಿತ್ರರಂಗದ ಅನೇಕ ನಟಿಯರು, ಪರಭಾಷಾ ನಟಿಯರನ್ನು ಕೂಡ ‘ಗುರುಶಿಷ್ಯರು’ ಚಿತ್ರಕ್ಕೆ ಪರಿಗಣಿಸಲಾಗಿತ್ತು. ಕೊನೆಗೂ ಈ ಪಾತ್ರಕ್ಕೆ ಅತ್ಯಂತ ಸೂಕ್ತ ಕಲಾವಿದೆ ಎಂದು ಅವರನ್ನು ಆಯ್ಕೆ ಮಾಡಲಾಗಿದೆ.

ಶರಣ್ ಚಿತ್ರದ ನಾಯಕರಾಗಿದ್ದು, ಅವರಿಲ್ಲಿ ಒಬ್ಬ ದೈಹಿಕ ಶಿಕ್ಷಕನಾಗಿ ನಟಿಸುತ್ತಿದ್ದಾರೆ. ನಿಶ್ವಿಕಾ ನಾಯ್ಡು ಅಪ್ಪಟ ಹಳ್ಳಿ ಹುಡುಗಿಯಾಗಿ, ರವಿಚಂದ್ರನ್ ಅಭಿಮಾನಿಯಾಗಿ, ಹಾಲಿನ ಡೈರಿ ನಡೆಸುವ ಸ್ವಯಂಕೃಷಿ ಉದ್ಯಮಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ‘ಗುರುಶಿಷ್ಯರು’ ಚಿತ್ರದ ಕಥೆ 1995 ರಲ್ಲಿ ಕಾಲಘಟ್ಟದ್ದು.

ಈಗಾಗಲೇ ಶೇ.60 ರಷ್ಟು ಚಿತ್ರೀಕರಣ ಮುಗಿಸಲಾಗಿದೆ. ಉಳಿದ ಭಾಗದ ಚಿತ್ರೀಕರಣ ಸದ್ಯದ ಕೊರೊನಾ ಲಾಕ್ಡೌನ್ ಮುಗಿದ ನಂತರ ಮಾಡಲು ಯೋಜಿಸಲಾಗಿದೆ. ಜಡೇಶ್ ಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ತರುಣ್ ಸುಧೀರ್ ಕ್ರಿಯೇಟಿವ್ ಹೆಡ್ ಆಗಿದ್ದಾರೆ.

Categories
ಸಿನಿ ಸುದ್ದಿ

ಎಲ್ಲಾ ರಾಜಕೀಯ ಪಕ್ಷದ ಬೆಂಬಲಿಗರಿಗೆ ಬಹಿರಂಗ ಪತ್ರ ಬರೆದ ಉಪೇಂದ್ರ : ನನ್ನನ್ನು ಬೇರೆಯವರ ಜೊತೆ ಹೋಲಿಸಬೇಡಿ, ಎಂದೆಂದೂ ನಾನು ಉಪೇಂದ್ರ! ಹೀಗೆ ಹೇಳಲು ಕಾರಣ ಇಲ್ಲಿದೆ…

ಅಂಬೇಡ್ಕರ್‌ ಹೇಳಿಕೆಯೊಂದರ ಬಗ್ಗೆ ರಿಯಾಕ್ಟ್‌ ಮಾಡಿ ಕೊನೆಗೆ ಅದು ವಿವಾದಕ್ಕೆ ಸಿಲುಕಿದ ನಂತರ ಕ್ಷಮೆ ಕೇಳಿ ವಿವಾದದಿಂದ ಹೊರ ಬಂದ ಬೆನ್ನಲ್ಲೇ, ನಟ ಉಪೇಂದ್ರ ನಾಡಿನ ಎಲ್ಲಾ ರಾಜಕೀಯ ಪಕ್ಷದ ಬೆಂಬಲಿಗರಿಗೊಂದು ಬಹಿರಂಗ ಪತ್ರ ಬರೆದಿದ್ದಾರೆ.

ತೀವ್ರ ಬೇಸರದಲ್ಲೇ ಆ ಪತ್ರ ಬರೆದಿರುವ ಅವರು, ‘ನನ್ನನ್ನು ಬೇರೆಯವರ ಜೊತೆ ಹೋಲಿಸಬೇಡಿ, ಎಂದೆಂದೂ ನಾನು ಉಪೇಂದ್ರ’ ಅಂತ ಮನವಿ ಮಾಡಿಕೊಂಡಿದ್ದಾರೆ.
ಇಷ್ಟಕ್ಕೂ ಆಗಿದ್ದೇನು, ಅಷ್ಟೇಕ್ಕೆ ಬೇಸರದಲ್ಲಿ ಅವರು ಪತ್ರಬರೆದು ತಮ್ಮನ್ನು ಬೇರೆವರಿಗೆ ಹೋಲಿಸಬೇಡಿ ಅಂತ ರಿಕ್ವೇಸ್ಟ್‌ ಮಾಡಿಕೊಂಡಿದ್ದರ ಕಾರಣವಾದರೂ ಏನು ? ಅದೀಗ ದೊಡ್ಡ ಕುತೂಹಲ ಮೂಡಿಸಿದೆ. ಹಾಗೆಯೇ ಅವರು ಬಹಿರಂಗ ಪತ್ರದಲ್ಲಿ ಏಳು ಕಾರಣಗಳೊಂದಿಗೆ ತಾವು ಬೇರೆಯವರ ಹಾಗೆ ಅಲ್ಲ ಅಂತ ಹೇಳಿಕೊಂಡಿದ್ದಾರೆ.

ಆ ಪತ್ರದಲ್ಲಿರೋ ಅಂಶಗಳು ಹೀಗಿವೆ…

  • ನನ್ನನ್ನು ಬೇರೆಯವರ ಜೊತೆ ಹೋಲಿಸಬೇಡಿ – ಎಂದೆಂದಿಗೂ ನಾನು ಉಪೇಂದ್ರ
  • ಆತಂಕ ಪಡಬೇಡಿ. ಇನ್ನೊಬ್ಬ ನಾಯಕ ಹುಟ್ಟಿಕೊಳ್ಳುತ್ತಿದ್ದಾನೆ ಎಂದು- ನಾನೆಂದಿಗೂ ನಾಯಕನಾಗುವುದಿಲ್ಲ.
  • ಭಯಪಡಬೇಡಿ ನಿಮ್ಮ ಪಕ್ಷ ನಾಯಕಿನಿಗೆ ಸಿಗುವ ಮತ ವಿಭಜನೆ ಆಗುತ್ತದೆ ಎಂದು-ನಾಯಕನಾಗಬೇಕೆಂದು ಧೃಡ ಮನಸು ಮಾಡಿರುವ ಪ್ರಜಾಪ್ರಭು ಯಾವ ನಾಯಕನಿಗೂ ಇನ್ನು ಮುಂದೆ ಮತ ನೀಡುವುದಿಲ್ಲ!
  • ನಿಮಗೆ ನಿಮ್ಮ ಪಕ್ಷ ನಾಯಕನಿಂದ ಸಿಗುವ ಮಾನಸಿಕ ನೆಮ್ಮದಿ, ಸಾಮಾಜಿಕ ಘನತೆ, ರಾಜಕೀಯ ಭದ್ರತೆ ಮತ್ತು ಆರ್ಥಿಕ ಆದಾಯ ಬೇರೆ ಯಾರೋ ಕಿತ್ತುಕೊಳ್ಳುತ್ತಾರೆಂಬ ಆತಂಕ ಬೇಡ. ಅದು ಕಡಿಮೆಯಾಗಬಾರದು ಇಮ್ಮಡಿ ಆಗಬೇಕೆನ್ನುವುದೇ ಪ್ರಜಾಕೀಯದ ಉದ್ದೇಶ.
  • ಶೇ. 20 ರಷ್ಟು ನಾಯಕತ್ವದ , ಚಾಣಾಕ್ಷ ಜಾಣತನದ, ಹಣ, ತೋಳ್ಬಲದ ಪ್ರಬಲ ಗುಂಪಿನಲ್ಲಿದ್ದೆನೆಂದು ಹೆಮ್ಮೆ ಪಡಬೇಡಿ. ಶೇ. 80 ರಷ್ಟು ಸಾಮಾನ್ಯರು, ದೀನ ದಲಿತರು, ಅಮಾಯಕರ ಗುಂಪು ನಿಮ್ಮ ತಾಳಕ್ಕೆ ಕುಣಿಯುತ್ತಲೇ ಇರುವರು ಎಂಬ ಕಾಳ ಮುಗಿದಿದೆ.
  • ನಾನು ಎಲೆಕ್ಷನ್‌ ನಲ್ಲಿ ನಿಲ್ಲುತ್ತೇನೆ ಎಂದುಕೊಂಡು ಇದೊಂದು ಕುಟುಂಬ ರಾಜಕಾರಣ ಎಂದಿರಿ, ನಾನು ನಿಲ್ಲಲ್ಲ ಎಂದಾಗ ಬೇರೆಯವರನ್ನು ಬಾವಿಗೆ ತಳ್ಳಿ ಆಳ ನೋಡ್ತೀರಾ ಎಂದಿರಿ ! ಇರಲಿ ಒಂದು ಸತ್ಯ ತಿಳಿಯಿರಿ….
    7.ಶೇ.20 ʼನಾನುʼ ಎನ್ನುವವರ ಜಪತೆ ನಿನ್ನನ್ನು ಬಿಟ್ಟು ಯಾರೂ ಇರುವುದಿಲ್ಲ, ನೀನು ಎನ್ನುವ ಶೇ.80 ರಷ್ಟು ಜನರ ಜೊತೆ ಅವನೇ…’
    ಅಂತ ಪತ್ರದಲ್ಲಿ ಬರೆದು ಅದನ್ನು ಸೋಷಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಸದ್ಯಕ್ಕೆ ಅವರು ಯಾರ ಕುರಿತು ಇದನ್ನೆಲ್ಲ ಹೇಳಿದ್ದಾರೆ, ಅವರ ಟಾರ್ಗೆಟ್‌ ಯಾರು, ಇಷ್ಟೆಲ್ಲ ಈಗ ಯಾಕಾಗಿ ಹೇಳಿದರು, ಎಲ್ಲವೂ ನಿಗೂಢ. ಆದರೆ, ‘ಮಹಾನಾಯಕ ಅಂಬೇಡ್ಕರ್‌’ ವಿಚಾರದಲ್ಲಿ ಅವರು ಕ್ಷಮೆ ಕೇಳಿದ ಬೆನ್ನಲ್ಲೇ ಸೋಷಲ್‌ ಮೀಡಿಯಾದಲ್ಲಿ ಇಷ್ಟೆಲ್ಲ ಹಂಚಿಕೊಂಡಿದ್ದು ಕುತೂಹಲ ಮೂಡಿಸಿದೆ. ಮತ್ತೊಂದೆಡೆ ಇದೆಲ್ಲವನ್ನು ಗಾಳಿಗೆ ತೂರಿದ ಅವರು, ಕಲಾವಿದರ ಹಾಗೂ ಅಸಹಾಯಕ ಜನರ ನೆರವಿಗೆ ನಿಂತಿದ್ದಾರೆ. ಇಂದು ಮಂಡ್ಯ ಹಾಗೂ ಮೈಸೂರಿನಲ್ಲಿ ಫುಡ್‌ ಕಿಟ್‌ ವಿತರಣೆಯಲ್ಲಿ ಪಾಲ್ಗೊಂಡಿದ್ದಾರೆ.

Categories
ಸಿನಿ ಸುದ್ದಿ

ಕಲಾವಿದರನ್ನೂ ಫ್ರಂಟ್ ಲೈನ್‌ ವಾರಿಯರ್ಸ್‌ ಅಂತ ಪರಿಗಣಿಸಿ ವ್ಯಾಕ್ಸಿನ್‌ ನೀಡುವಂತೆ ನಟಿ ಮಾಳವಿಕಾ ಮನವಿ

ಸಿನಿಮಾ ಹಾಗೂ ಸೀರಿಯಲ್‌ ಕಲಾವಿದರು ಈಗ ಸಂಕಷ್ಟದಲ್ಲಿದ್ದಾರೆ. ಸಿನಿಮಾ ಅಥವಾ ಸೀರಿಯಲ್‌ ಯಾವುದೇ ಚಟುವಟಿಕೆ ಇಲ್ಲದೆ ಎಲ್ಲಾ ಕಲಾವಿದರೂ ಮನೆಯಲ್ಲಿ ಕುಳಿತಿದ್ದಾರೆ. ಈ ಅನಿಶ್ವಿತತೆ ಇನ್ನೆಷ್ಟು ದಿನವೋ ಯಾರಿಗೂ ತಿಳಿದಿಲ್ಲ. ಪರಿಸ್ಥಿತಿ ಹೀಗೆ ಮುಂದುವರೆದರೆ, ಎಲ್ಲಾ ಪರಿಸ್ಥಿತಿ ಶೋಚನೀಯವಾಗಲಿದೆ. ಈ ಹಿನ್ನೆಲೆಯಲ್ಲಿ ಕಲಾವಿದರನ್ನು ಫ್ರಂಟ್ ಲೈನ್‌ ವಾರಿಯರ್ಸ್‌ ಅಂತ ಪರಿಗಣಿಸಿ, ಎಲ್ಲರಿಗೂ ವ್ಯಾಕ್ಸಿನ್‌ ಸೌಲಭ್ಯ ನೀಡುವ ಮೂಲಕ ಅವರು ಕೂಡ ನಿರ್ಭಿತಿಯಿಂದ ಕೆಲಸ ಮಾಡುವ ಅವಕಾಶ ದೊರಕಿಸಿಕೊಡುವಂತೆ ಹಿರಿಯ ನಟಿ ಮಾಳವಿಕಾ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

‘ಚಿತ್ರೋದ್ಯಮ ಮತ್ತೆ ಸಕ್ರಿಯವಾಗಿ ಕೆಲಸ ಮಾಡಬೇಕಂದರೆ ಎಲ್ಲರಿಗೂ ವ್ಯಾಕ್ಸಿನೇಷನ್‌ ಅಗತ್ಯ. ಈಗಾಗಲೇ ನೀವು ಮಾಧ್ಯಮದಲ್ಲಿ ಕೆಲಸ ಮಾಡುತ್ತಿರುವವರನ್ನು ಫ್ರಂಟ್‌ ಲೈನ್‌ ವಾರಿಯರ್ಸ್‌ ಅಂತ ಪರಿಗಣಿಸಿ ವ್ಯಾಕ್ಸಿನೇಷನ್‌ ಕೊಡುತ್ತಿರುವ ಹಾಗೆ, ಕಲಾವಿದರಿಗೂ ಅದರ ಅಗತ್ಯವಿದೆ.

ತಕ್ಷಣವೇ ತಾವು ಕಲಾವಿದರ ಬಗ್ಗೆಯೂ ವಿಶೇಷ ಗಮನ ಹರಿಸಿ ಕಲಾವಿದರಿಗೆ ವ್ಯಾಕ್ಸಿನೇಷನ್‌ ಕೊಡಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡುತ್ತೇನೆ ಅಂತ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಅವರಲ್ಲಿ ನಟಿ ಮಾಳವಿಕಾ ಮನವಿ ಮಾಡಿದ್ದಾರೆ.

Categories
ಸಿನಿ ಸುದ್ದಿ

ತನ್ನ ಸದಸ್ಯರಿಗೆ ಉಚಿತ ಲಸಿಕೆ ವ್ಯವಸ್ಥೆಗೊಳಿಸಿದ ಟೆಲಿವಿಷನ್ ಅಸೋಸಿಯೇಷನ್; ಮೂರು ದಿನಗಳ ಲಸಿಕೆ ಅಭಿಯಾನಕ್ಕೆ ಚಾಲನೆ

ಈಗ ಎಲ್ಲೆಡೆ ಕೊರೊನಾ ಹಾವಳಿ. ಈ ಹಿನ್ನೆಲೆಯಲ್ಲಿ ಈಗಾಗಲೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಆರೋಗ್ಯ ಸಚಿವರನ್ನು ಭೇಟಿ ಮಾಡಿ ಚಿತ್ರರಂಗದವರಿಗೆ ವ್ಯಾಕ್ಸಿನೇಷನ್‌ ಹಾಕಿಸಲು ಮನವಿ ಮಾಡಿದ್ದಾಗಿದೆ. ಸರ್ಕಾರ ಕೂಡ ಸ್ಪಂದಿಸಿದೆ. ಇದರ ಬೆನ್ನಲ್ಲೇ ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಮುತುವರ್ಜಿ ವಹಿಸಿ, ತಮ್ಮ ಸಂಘದ ಸದಸ್ಯರು ಹಾಗು ಕುಟುಂಬದವರಿಗೆ ಕೋವಿಡ್ ಲಸಿಕೆ ಹಾಕಿಸುವ ಅಭಿಯಾನಕ್ಕೆ ಮಂಗಳವಾರ ಚಾಲನೆ ನೀಡಿದೆ.


ಅಸೋಸಿಯೇಷನ್ ಅಧ್ಯಕ್ಷ ಶಿವಕುಮಾರ್, ಕಂದಾಯ ಸಚಿವ ಅಶೋಕ್ ಮತ್ತು ಬಿಬಿಎಂಪಿ ಸದಸ್ಯ ಲಕ್ಷ್ಮಿಕಾಂತ್ ಜೊತೆಯಲ್ಲಿ ಚರ್ಚಿಸಿ, ಅಸೋಸಿಯೇಷನ್ ನ ಕಲಾವಿದರು, ತಾಂತ್ರಿಕ ವರ್ಗ ಹಾಗು ಅವರ ಕುಟುಂಬ ವರ್ಗದವರಿಗೆ ಉಚಿತ ಲಸಿಕೆ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದ್ದರು.


ಅವರ ಮನವಿ ಹಿನ್ನೆಲೆಯಲ್ಲಿ ಸಚಿವರು ಸರ್ಕಾರದ ವತಿಯಿಂದ ಲಸಿಕೆ ವ್ಯವಸ್ಥೆಗೊಳಿಸಿ ಚಾಲನೆ ನೀಡಿದೆ
ಮೇ18ರಿಂದ 20ರವರೆಗೆ ಮೂರು ದಿನಗಳ ಕಾಲ ಈ ಲಸಿಕೆ ವ್ಯವಸ್ಥೆ ಮಾಡಿದ್ದು, ಅಗತ್ಯ ಬಿದ್ದರೆ ಇನ್ನೂ ಮೂರು ದಿನಗಳ ಕಾಲ ಲಸಿಕೆ ಹಾಕಲು ವ್ಯವಸ್ಥೆ ಮಾಡುವುದಾಗಿ ಅಧ್ಯಕ್ಷ ಶಿವಕುಮಾರ್ ತಿಳಿಸಿದ್ದಾರೆ.
45 ವರ್ಷ ಮೇಲ್ಪಟ್ಟವರು ಇದರ ಸದುಪಯೋಗ ಪಡೆಯಲು ಕೋರಿದ್ದಾರೆ.

Categories
ಸಿನಿ ಸುದ್ದಿ

ನಾಗಾವರ ಜನತೆಗೆ ಆಸರೆಯಾದ ದೊಡ್ಮನೆ ದೊರೆ! ಶಿವಣ್ಣ ದಂಪತಿಯಿಂದ ಹಸಿದ ಹೊಟ್ಟೆಗೆ ‌ಕೈ ತುತ್ತು..

ಈ ಕೋವಿಡ್ ಸಂಕಷ್ಟದಲ್ಲಿ ಕರುನಾಡ ಚಕ್ರವರ್ತಿ ಡಾ.ಶಿವರಾಜ್ ಕುಮಾರ್ ಹಾಗಯ ಗೀತಾ ಶಿವರಾಜ್ ಕುಮಾರ್ ಹಾಗೂ ಶಿವಣ್ಣ ಬಾಯ್ಸ್ ಸೇರಿಕೊಂಡು, ತಾವು ನೆಲೆಸಿರೋ ನಾಗಾವರ ಏರಿಯಾದಲ್ಲಿ ಪ್ರತಿ‌ನಿತ್ಯ 500 ಜನರಿಗೆ ಊಟ, ತಿಂಡಿ ,ಹಾಗೂ ಟೀ ವ್ಯವಸ್ಥೆಯನ್ನ ಮಾಡುತ್ತಿದ್ದಾರೆ‌. ಈ ಸೇವೆಗೆಂದೇ ಶಿವಣ್ಣ ಬೊಲೇರೋ ಕ್ಯಾಂಟ್ರೋನ ಅರೇಂಜ್ ಮಾಡಿದ್ದು, ಈ ವಾಹನದಲ್ಲೇ ನಿತ್ಯ ಊಟ ತಿಂಡಿ‌ ಸರಬರಾಜಾಗುತ್ತಿದೆ.

“ಆಸರೆ” ಹಸಿದ ಹೊಟ್ಟೆಗೆ ಕೈ ತುತ್ತು… ಅನ್ನೋ ಶೀರ್ಷಿಕೆಯಡಿಯಲ್ಲಿ ನಡೆಯುತ್ತಿರೋ ಈ ಕಾರ್ಯಕ್ರಮ, ಸದ್ಯ 10ದಿನದವರೆಗೂ ಮುಂದುವರೆಯಲಿದೆ.

ಲಾಕ್ ಡೌನ್ ಹೀಗೆ ಮುಂದುವರೆದಲ್ಲಿ‌ ಸುಮಾರು 1000 ಜನಕ್ಕೆ ಪ್ರತಿ ದಿನ ಅನ್ನ ದಾಸೋಹ ಮಾಡೋದಕ್ಕೆ ಯೋಜನೆಯನ್ನೂ ಶಿವಣ್ಣ, ಗೀತಕ್ಕ ಹಾಗೂ ಶಿವಣ್ಣ ಬಾಯ್ಸ್ ರೂಪಿಸಿಕೊಂಡಿದ್ದಾರೆ.

Categories
ಸಿನಿ ಸುದ್ದಿ

ಸ್ಮಶಾನ ಹಾಗೂ ಶವಗಾರ ಕಾರ್ಮಿಕರ ನೆರವಿಗೆ ಬನ್ನಿ – ಸರ್ಕಾರಕ್ಕೆ ನಟ ಚೇತನ್ ಪತ್ರ

ʼಆ ದಿನಗಳುʼ ಖ್ಯಾತಿಯ ನಟ ಚೇತನ್‌ ಕೋವಿಡ್‌ ಯೋಧರಾದ ಸ್ಮಶಾನ ಕಾರ್ಮಿಕರ ನೆರವಿಗೆ ಧಾವಿಸಿದ್ದಾರೆ. ರಾಜ್ಯದಲ್ಲಿರುವ ಸ್ಮಶಾನ ಹಾಗೂ ಶವಗಾರಗಳಲ್ಲಿನ ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ. ಅವರು ಆರ್ಥಿಕವಾಗಿ ಹಿಂದುಳಿದಿರುವುದು ಮಾತ್ರವಲ್ಲ, ಕೋವಿಡ್‌ ಸಾಂಕ್ರಾಮಿಕ ರೋಗ ತೀವ್ರಗತಿಯಲ್ಲಿ ಹರಡುತ್ತಿರುವ ಈ ಸಂದರ್ಭದಲ್ಲಿ ಅವರಿಗೆ ಈಗ ತುರ್ತಾಗಿ ವೈದ್ಯಕೀಯ ನೆರವು ಬೇಕಿದೆ. ಈ ಹಿನ್ನೆಲೆಯಲ್ಲಿ, ಸರ್ಕಾರ ಅವರ ನೆರವಿಗೆ ಬರಬೇಕೆಂದು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಅವರು ಬರೆದಿರುವ ಪತ್ರದ ಡಿಟೈಲ್ಸ್‌ ಇಲ್ಲಿದೆ.

ಕರ್ನಾಟಕದಾದ್ಯಂತ ಸ್ಮಶಾನ ಕಾರ್ಮಿಕರು ಈ ಘೋರ ಬಿಕ್ಕಟ್ಟಿನ ಸಂದರ್ಭದಲ್ಲಿ ನಮ್ಮ ರಾಜ್ಯದ ಜನರಿಗೆ ಮುಂಚೂಣಿಯ ಕೋವಿಡ್ ಯೋಧರಾಗಿ ದಣಿವರಿಯದೆ ಮತ್ತು ನಿಸ್ವಾರ್ಥವಾಗಿ ಕೆಲಸ ಮಾಡುತ್ತಿದ್ದಾರೆ. ಈ ಸ್ಮಶಾನ ಕಾರ್ಮಿಕರು ತಲೆಮಾರುಗಳಿಂದ ನಮ್ಮ ಸಮಾಜದ ಸಾಮಾಜಿಕ ಮತ್ತು ಆರ್ಥಿಕವಾಗಿ ಅಳಿವಿನಂಚಿನಲ್ಲಿರುವ ಸದಸ್ಯರು. ಈ ಸಾಂಕ್ರಾಮಿಕ ರೋಗ ಹರಡುತ್ತಿರುವ ಸಮಯದಲ್ಲಿ ಅಸಾಧಾರಣ ವೈದ್ಯಕೀಯ ಅಪಾಯಗಳನ್ನು ಎದುರಿಸುತ್ತಿದ್ದಾರೆ. ದುರಾದೃಷ್ಟವಶಾತ್, ಅವರ ತಕ್ಷಣದ ಮತ್ತು ದೀರ್ಘಕಾಲದ ಅಗತ್ಯಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಸರ್ಕಾರಗಳು ಸತತವಾಗಿ ನಿರ್ಲಕ್ಷ್ಯಿಸಿದೆ. ನಮ್ಮ ಸ್ಮಶಾನ ಕಾರ್ಮಿಕರಿಗೆ ಹೆಚ್ಚು ಅಗತ್ಯವಿರುವ ಈ ಬೇಡಿಕೆಗಳನ್ನು ನೀವು ವಾಸ್ತವಿಕಗೊಳಿಸಬೇಕೆಂದು ನಾವು ಕೇಳುತ್ತೇವೆ.

1 ಎಲ್ಲಾ ಸ್ಮಶಾನ/ಶವಗಾರ ಕಾರ್ಮಿಕರಿಗೆ ತಕ್ಷಣದ ಅಗತ್ಯಗಳು..

  • ವೈದ್ಯಕೀಯ ವಿಮೆ
  • ಕೋವಿಡ್ ಸಂತ್ರಸ್ಥರಿಗೆ ಆದ್ಯತೆಯ ಆಸ್ಪತ್ರೆಯ ಹಾಸಿಗೆ ಹಂಚಿಕೆ
  • ಆದ್ಯತೆಯ ವ್ಯಾಕ್ಸಿನೇಷನ್
  • ಈಗಾಗಲೇ ಒದಗಿಸಿರುವ ಪಿಪಿಇ ಕಿಟ್‌ಗಳ ಜೊತೆಗೆ ಕೈಗವಸುಗಳು ಮತ್ತು ಮುಖವಾಡಗಳು
  • ತಮ್ಮ ಕೆಲಸದ ಅವಧಿಗಿಂತ ಹೆಚ್ಚು ಸಮಯ ಕೆಲಸ ಮಾಡಿದರೆ ಅದಕ್ಕೆ ಅವರ ಪಾವತಿಯನ್ನು ಹೆಚ್ಚಿಸಬೇಕು
  • ಕೆಲಸದ ಹೊರೆ ಹೆಚ್ಚಿಗೆಯಾದ ಕಾರಣ ಅವರನ್ನು ಸಹಾಯ ಮಾಡಲು ಉದ್ಯೋಗಿಗಳ ಸಂಖ್ಯೆಯನ್ನು ಹೆಚ್ಚಿಸಬೇಕು.

2 ಎಲ್ಲಾ ಸ್ಮಶಾನ ಕಾರ್ಮಿಕರಿಗೆ ಶಾಶ್ವತ ಪರಿಹಾರಗಳು

  • 4 ನೇ ದರ್ಜೆಯ, ಡಿ-ಗ್ರೂಪ್ ಸರ್ಕಾರಿ ನೌಕರರಾಗಿ ಶಾಶ್ವತ ಉದ್ಯೋಗ ಕಲ್ಪಿಸಬೇಕು.
  • ಇಎಸ್‌ಐ ಮತ್ತು ಪಿಎಸ್‌ಗೆ ಅವಕಾಶ ಕಲ್ಪಿಸಿಕೊಡಬೇಕು.
  • ಸ್ಮಶಾನ/ಶವಾಗರದ ಆವರಣದ ಹೊರಗೆ ವಸತಿ ಕಲ್ಪಿಸಬೇಕು.
  • ಕೆಲಸದ ಸಮಯವನ್ನು 8 ಗಂಟೆಗಳ ಅವಧಿಗೆ ಶಿಫ್ಟ್‌ ಮಾದರಿಗೆ ಸೀಮಿತಗೊಳಿಸಬೇಕು.
  • ಸ್ಮಶಾನ ಕಾರ್ಮಿಕರ ಮಕ್ಕಳಿಗೆ ಗುಣಮಟ್ಟದ ಶಾಲೆಗಳಲ್ಲಿ ಉಚಿತ ಶಿಕ್ಷಣ ನೀಡಬೇಕು.
  • ಎಲ್ಲಾ ಧಾರ್ಮಿಕ ಸಮುದಾಯಗಳ (ಹಿಂದೂ, ಮುಸ್ಲಿಂ ಕ್ರಿಶ್ಚಿಯನ್, ಇತರೆ) ಸ್ಮಶಾನ ಕಾರ್ಮಿಕರಿಗೆ ಸರ್ಕಾರದ ಸೌಲಭ್ಯಗಳು ದೊರೆಯಬೇಕು.
  • ಸ್ಮಶಾನ ಕಾರ್ಮಿಕರಿಗೆ ನಿರ್ದಿಷ್ಟವಾದ ಸಾಮಾಜಿಕ ಮತ್ತು ಶೈಕ್ಷಣಿಕೆ ಉನ್ನತಿಗಾಗಿ ಹೊಸ ನೀತಿಗಳನ್ನು ಅನುಷ್ಠಾನಗೊಳಿಸಬೇಕು.
    ಸ್ಮಶಾನ ಕಾರ್ಮಿಕರ ಮತ್ತು ಸಾರ್ವಿಜನಿಕರ ಹಿತದೃಷ್ಟಿಯಿಂದ ನಮ್ಮ ಕರ್ನಾಟಕ ಸರ್ಕಾರ ಈ ನೀತಿಗಳನ್ನು ತಕ್ಷಣವೇ ಜಾರಿಗೆ ತರುತ್ತದೆ ಎಂದು ನಾವು ಭಾವಿಸುತ್ತೇವೆ’ ಎಂದು ಚೇತನ್ ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಮತ್ತು ಸಿಎಂ ಯಡಿಯೂರಪ್ಪ ಅವರಿಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ.
Categories
ಸಿನಿ ಸುದ್ದಿ

ಮಹಾನಾಯಕನ ತಂಟೆಗೆ ಹೋದ ಉಪೇಂದ್ರ : ನೆಟ್ಟಿಗರ ಆಕ್ರೋಶಕ್ಕೆ ಕ್ಷಮೆ ಕೇಳಿ ಸುಮ್ಮನಾದ ರಿಯಲ್ ಸ್ಟಾರ್ !

ಇದೆಲ್ಲ ಬೇಕಿತ್ತಾ? ಸೋಷಲ್ ಮೀಡಿಯಾದಲ್ಲಿ ನಟ ಉಪೇಂದ್ರ ಅವರಿಗೆ ಜನ ಕೇಳಿದ ಪ್ರಶ್ನೆ ಇದು. ಅಂಬೇಡ್ಕರ್ ವಿಚಾರದಲ್ಲಿ ನಟ ಉಪೇಂದ್ರ ನೀಡಿದ್ದ ಹೇಳಿಕೆ ತೀವ್ರ ವಿವಾದ ಸೃಷ್ಟಿಸಿದ ಬೆನ್ನಲ್ಲೇ ಅವರು ಕ್ಷಮೆ ಕೇಳಿದ್ದಾರೆ.


“ಇತಿಹಾಸ ಅರಿಯವದವರು ಇತಿಹಾಸ ಸೃಷ್ಟಿಸಲಾರ ʼ ಎಂಬುದು ಡಾಕ್ಟರ್ ಅಂಬೇಡ್ಕರ್ ಅವರ ಹೇಳಿಕೆ ಎಂಬುದನ್ನು ತಿಳಿದಿರಲಿಲ್ಲ. ಯಾರೋ ಇಂಗ್ಲಿಷ್ ಅವರ ಬರಹ ಎಂದು ತಿಳಿದು ತಪ್ಪು ಮಾತನಾಡಿದೆ. ದಯವಿಟ್ಟು ಕ್ಷಮಿಸಿ ʼ ಅಂತ ಸೋಷಲ್ ಮೀಡಿಯಾ ಅಕೌಂಟ್ ನಲ್ಲಿ ಬರೆದುಕೊಂಡಿದ್ದಾರೆ. ಇಷ್ಟಕ್ಕೂ ಆಗಿದ್ದೇನು ಗೊತ್ತಾ?


ನಟ ಉಪೇಂದ್ರ ಮೂರ್ನಾಲ್ಕು ದಿನಗಳ ಹಿಂದೆ ಸೋಷಲ್ ಮೀಡಿಯಾ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ಇತಿಹಾಸ ಅರಿಯದವನು ಇತಿಹಾಸ ಸೃಷ್ಟಿಸಲಾರ ಅಂತ ಯಾರೋ ತಪ್ಪಾಗಿ ಹೇಳಿದ್ದಾರೆ. ಇತಿಹಾಸ ಸೃಷ್ಟಿಸೋದಿಕ್ಕೆ ಇತಿಹಾಸ ಗೊತ್ತಿರಬೇಕು ಅಂತೇನಿಲ್ಲ. ಇತಿಹಾಸ ತಾನಾಗಿಯೇ ಸೃಷ್ಟಿಯಾಗುತ್ತೆ ಅಂತ ಅಂದಿದ್ದರು. ಅವರ ಹೇಳಿಕೆ ವಿವಾದಕ್ಕೆ ಎಡೆ ಮಾಡಿಕೊಟ್ಟಿತ್ತು.

ಉಪೇಂದ್ರ ಹೇಳಿಕೆಗೆ ಕೆಲವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಉಪೇಂದ್ರ ಅವರಿಗೆ ಇತಿಹಾಸ ಗೊತ್ತಿಲ್ಲ. ಸುಮ್ನೆ ಮಾತನಾಡುತ್ತಾರೆ. ಅವರಿಗೆ ಅಂಬೇಡ್ಕರ್ ಯಾರು ಅನ್ನೋದು ಗೊತ್ತಿಲ್ಲ. ಮೇಲ್ಜಾತಿಯ ಅಮಲು ಹೀಗೆಲ್ಲ ಮಾತನಾಡಿಸುತ್ತೆ ಅಂತೆಲ್ಲ ಕಟುವಾಗಿ ಟೀಕಿಸಿದ್ದರು. ಇದಾದ ಬೆನ್ನಲೇ ಉಪೇಂದ್ರ ಕ್ಷಮೆ ಕೇಳಿ ಬಚವಾಗಿದ್ದಾರೆ.

Categories
ಸಿನಿ ಸುದ್ದಿ

ಐರಾವನ್ ಚಿತ್ರ ತಂಡದಿಂದ ಆಕ್ಸಿಜನ್ ಆಂಬುಲೆನ್ಸ್ ಸೇವೆ; ಕೋವಿಡ್ ಕಿಟ್ ವಿತರಣೆ

ಆರೋಗ್ಯ ಭಾರತಿ ಮತ್ತು ಸೇವಾ ಭಾರತಿ ಸಹಯೋಗದಲ್ಲಿ ‘ಐರಾವನ್’ ಚಿತ್ರತಂಡ ಇದೀಗ ಸೇವೆಗೆ ಇಳಿದಿದೆ. ಚಿತ್ರದ ನಿರ್ಮಾಪಕ ಡಾ. ನಿರಂತರ್ ಗಣೇಶ್ ಮತ್ತು ಚಿತ್ರ ನಾಯಕ ಜಯರಾಮ್ ಕಾರ್ತಿಕ್ (ಜೆಕೆ) ಮತ್ತು ನಟ ವಿವೇಕ್ ಆಕ್ಸಿಜನ್​ ವಾಹನವನ್ನು ಇತ್ತೀಚೆಗೆ ಬ್ಯಾಟರಾಯನಪುರ ವ್ಯಾಪ್ತಿಗೆ ನೀಡಿದ್ದಾರೆ. ಅದರ ಜತೆಗೆ 10 ಸಾವಿರ ಕೋವಿಡ್ ಮೆಡಿಕಲ್ ಕಿಟ್ ಹಾಗು ಔಷಧಗಳನ್ನೂ ವಿತರಣೆ ಮಾಡಿದ್ದಾರೆ. ಈ ಕಾರ್ಯಕ್ಕೆ ಆರೆಸ್ಸೆಸ್​ನ ಪ್ರಾದೇಶಿಕ ಜನರಲ್ ಸೆಕ್ರೆಟರಿ ಎನ್ ತಿಪ್ಪೇಸ್ವಾಮಿ, ಕರ್ನಾಟಕ ರಾಜ್ಯದ ಆರೋಗ್ಯ ಭಾರತಿಯ ಜಂಟಿ ಕಾರ್ಯದರ್ಶಿ ಗಂಗಾಧರನ್ ಚಾಲನೆ ನೀಡಿದ್ದಾರೆ.


ಈ ವೇಳೆ ಮಾತನಾಡಿದ ನಿರ್ಮಾಪಕ ನಿರಂತರ್, “ಇಂಥ ವಿಷಮ ಕಾಲಘಟ್ಟದಲ್ಲಿ ಸಮಾಜಕ್ಕೆ ನಾವು ಮಾಡಬೇಕಾದ ಜವಾಬ್ದಾರಿ ಇದು. ಎಲ್ಲೆಡೆ ಆ್ಯಂಬುಲೆನ್ಸ್ ಕೊರತೆ ಕಾಡುತ್ತಿದೆ. ಅದನ್ನೇ ಗಮನದಲ್ಲಿಟ್ಟುಕೊಂಡು ಬ್ಯಾಟರಾಯನಪುರ ವ್ಯಾಪ್ತಿಗೆ ಆಕ್ಸಿಜನ್ ಸಹಿತ ಆ್ಯಂಬುಲೆನ್ಸ್ ನೀಡಿದ್ದೇವೆ. ಇದರ ಜತೆಗೆ ಕೋವಿಡ್ ಮೆಡಿಕಲ್ ಕಿಟ್ ಅನ್ನೂ ವಿತರಣೆ ಮಾಡಿದ್ದೇವೆ. ಸೋಂಕಿನ ಲಕ್ಷಣ ಕಾಣುತ್ತಿದ್ದಂತೆ ಕಿಟ್​ನಲ್ಲಿ ನೀಡಿದ ಔಷಧಗಳನ್ನು ತೆಗೆದುಕೊಳ್ಳಬಹುದು. ಯಾವ್ಯಾವುದನ್ನು ಹೇಗೆ ತೆಗೆದುಕೊಳ್ಳಬೇಕು ಎಂಬ ಮಾಹಿತಿಯನ್ನೂ ನೀಡಿದ್ದೇವೆ ಎಂದಿದ್ದಾರೆ.

Categories
ಸಿನಿ ಸುದ್ದಿ

ಜೆಕೆಶ್ರೀ ಬೆಳ್ಳಿತೆರೆಯ ಬದುಕು.. ಹಿರಿಯ ನಟ ಶ್ರೀನಿವಾಸ್ ಮೂರ್ತಿ ಅವರ ಹುಟ್ಟುಹಬ್ಬಕ್ಕೆ ಪಲ್ಲಕ್ಕಿಯ ಪ್ರೀತಿಯ ಬರಹ

ನಟ, ನಿರ್ಮಾಪಕ ಕಮ್ ನಿರ್ದೇಶಕ ಪಲ್ಲಕ್ಕಿ ಅವರು ಹಿರಿಯ ನಟ ಶ್ರೀನಿವಾಸ್ ಅವರ ಹುಟ್ಟುಹಬ್ಬದ ಅಂಗವಾಗಿ ಬರೆದ ಒಂದು ಆಪ್ತ ಬರಹವಿದು

‘ಸಿದ್ದಲಿಂಗಯ್ಯನವರ ಕಣ್ಣು ಇವರ ಮೇಲೆ ಬಿತ್ತು, ಒಂದೊಂದು ಸಿನಿಮಾದಲ್ಲೂ ವಿಭಿನ್ನವಾಗಿ ಕಾಣಿಸತೊಡಗಿದ ಇವರು, ಅಷ್ಟೇ ಶ್ರದ್ದೆಯಿಂದ ಪಾಲಿಸತೊಡಗಿದರು. ಅಲ್ಲಿಯವರೆವಿಗೂ ನಾಯಕ ನಟರಾಗಿ ವಿಜೃಂಭಿಸುತ್ತಿದ್ದ ಕೆಲವರಿಗೆ ಈ ನಟನ ನಡೆ ನುಡಿಯಿಂದ ಸ್ವಲ್ಪ ಮಟ್ಟಿಗೆ ಆತಂಕವಾಗಿದ್ದು ನಿಜ, ಭಾವ ಭಾಷೆಯ ಶುದ್ಧತೆ , ನೋಡಬೇಕು ಎನ್ನಿಸುವ ಮುಖ ಕನ್ನಡ ಪ್ರೇಕ್ಷಕರಿಗೆ ಹಿಡಿಸಿತ್ತು. ಏರು ಮುಖವಾಗಿ ಮೇಲೆ ಏರುತ್ತಲೇ ಬಂದ ಈ ನಾಯಕ ನಟ , ಹಿರಿಯ ನಾಯಕಿ ನಟಿಯರ ಜೊತೆ ಡ್ಯುಯೆಟ್ ಹಾಡಿನಲ್ಲಿ ತಣ್ಣಗೆ ಸಣ್ಣಗೆ ಕುಣಿಯಲಾರಂಭಿಸಿದರು.

ಬಹು ಸವಾಲಿನ ಪಾತ್ರಗಳಲ್ಲಿ ಲೀಲಾಜಾಲವಾಗಿ ಅಭಿನಯಿಸತೊಡಗಿದರು. ಪತ್ರಿಕೆಗಳಲ್ಲಿ ಸುದ್ದಿಗಳು ಬರಲಾರಂಭಿಸಿದವು, ಹೊಸ ನಿರ್ದೇಶಕರ ಹೊಸ ಆಲೋಚನೆಗಳಿಗೆ ಈ ಕಲಾವಿದರು ಬೇಕೆನ್ನಿಸಿದರು. ತಮ್ಮದೇ ನಿರ್ಮಾಣದಲ್ಲಿ ತೊಡಗಿಸಿಕೊ0ಡು ಅನ್ನದಾತ ರಾದರು. ಭೋಜರಾಜನ ಆಸ್ಥಾನದಲ್ಲಿ ಭೋಜನಾಗಿ ಪಾತ್ರಕ್ಕೆ ಜೀವ ತುಂಬಿ ಯಶಸ್ಸಿನ ತುದಿ ಮುಟ್ಟಿದರು. ಹಲವಾರು ಚಲನಚಿತ್ರಗಳು ನಿರ್ಮಾಣವಾಗಿ ಸೋಲು- ಗೆಲುವು ಎರಡರ ರುಚಿ ತೋರಿಸಿಕೊಟ್ಟವು. ಆದರೂ ಎದೆಗುಂದದೆ ಸುಪುತ್ರನನ್ನು ಬೆಳ್ಳಿತೆರೆಗೆ ಬೊಂಬಾಟ್ ಆಗಿ ಪರಿಚಯಿಸಿದರು. ಅಪ್ಪನಂತೆ ಎಲ್ಲಾ ವಿಭಾಗಗಳಲ್ಲೂ ಹೆಸರು ಮಾಡಿಕೊಂಡ ಈ ನಾಯಕ ಕನ್ನಡದ ಕೆಲವು ನಿರ್ಮಾಪಕ/ನಿರ್ದೇಶಕರಿಗೆ ‘ಧಿಮಾಕು’ ಪ್ರದರ್ಶನ ಮಾಡ್ತಾರೆ ಅಂತ ಗಾಂಧಿನಗರದಲ್ಲಿ ಗುಲ್ಲು ಎಬ್ಬಿಸಿದರು.

ಆದರೆ, ಈ ಇಬ್ಬರೂ ಕಲಾವಿದರು ಶಾಂತಿ, ಸಹನೆಯಿಂದ ವರ್ತಿಸಿ ದೊಡ್ಡವರಾದರು. ಚಾಮಯ್ಯ ಮೇಷ್ಟ್ರು ರಷ್ಟೇ ಸಮಾನಾದ ಪಾತ್ರಗಳನ್ನು ತೂಗಿಸಿದ ಈ ಕಲಾವಿದ ಕನ್ನಡನಾಡಿನ ಆಗಿನ ಕೋಲಾರ ಜಿಲ್ಲೆಯವರು. ಇವರು ಮನಸ್ಸು ಮಾಡಿದ್ದರೆ, ತೆಲುಗು ಸಿನಿಮಾ ರಂಗದಲ್ಲಿ ಮಿಂಚಬಹುದಿತ್ತು ಆದರೆ, ಈ ನೆಲದ ಅಭಿಮಾನ ಇಲ್ಲಿಯೇ ಉಳಿಸಿತು, ಪೌರಾಣಿಕ, ಐತಿಹಾಸಿಕ, ಸಾಮಾಜಿಕ, ಪಕ್ಕಾ ಕಮರ್ಷಿಯಲ್ ಎಲಿಮೆಂಟ್ ಸಿನಿಮಾಗಳಲ್ಲಿ ಪಾತ್ರಗಳನ್ನು ಮಾಡಿ ಸೈ ಎನಿಸಿಕೊಂಡರು.

ನಮ್ಮ ಚಿತ್ರರಂಗ ಇವರನ್ನು ಇನ್ನೂ ಚೆನ್ನಾಗಿ ಬಳಸಿಕೊಳ್ಳಬಹುದಿತ್ತು ,ಬಳಸಿಕೊಳ್ಳುವ ಪ್ರತಿಭಾವಂತ ನಿರ್ದೇಶಕರುಗಳು ಗಟ್ಟಿ ಪಾತ್ರಗಳನ್ನು ಹುಟ್ಟು ಹಾಕಿ ಇವರ ಕೈಗೆ ಕೊಟ್ಟರೆ ಇನ್ನು ಗಟ್ಟಿ ಮಾಡಿಕೊಡುವುದರಲ್ಲಿ ಸಂಶಯವೇ ಇಲ್ಲ. ಸಹಜ ನಟನಿಗೆ ಇರಬೇಕಾದ ಎಲ್ಲಾ ಗುಣಗಳು ಇವರಲ್ಲಿವೆ. ಚಲನಚಿತ್ರ ಕ್ಷೇತ್ರಕ್ಕೆ ಬರುವ ಮುನ್ನ ಸರ್ಕಾರಿ ಹುದ್ದೆಯಲ್ಲಿ ಇದ್ದರು ಎಂದು ಕೇಳಿದ್ದೆ ಈ ರಂಗ ಸೇವೆಗಾಗಿ ತೊರೆದು ಬಂದ ಅದ್ಬುತ ನಟ, ನಿರ್ಮಾಪಕ, ನಿರ್ದೇಶಕ ಹೀಗೆ ಹಲವಾರು ವಿಭಾಗಗಳಲ್ಲಿ ಕಾಣಿಸಿಕೊಂಡ ಈ ನಾಯಕ ನಟ, ಈಗಿನ ನಟರಿಗೆ ಮಾದರಿ ಆಗಿದ್ದಾರೆ. ಸರ್ಕಾರ ಸಮಾಜ ಇಂತಹ ನಟನಿಗೆ ಗೌರವ/ಪ್ರಶಸ್ತಿ ಅರ್ಪಿಸಿದ್ದೇ ಆದಲ್ಲಿ ಕೊಟ್ಟ ಪ್ರಶಸ್ತಿಗೆ ಗೌರವ ಲಭಿಸುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ…

ಬೆಳ್ಳಿತೆರೆಗೆ ಇವರು ಬಂದರೆ ತೂಕ, ಪಾತ್ರಗಳಿಗೆ ಪಾಕ, ಪ್ರೇಕ್ಷಕರು ಮೂಕ. ಅಷ್ಟೊಂದು ಮೌನವಹಿಸಿ ಇವರ ಪಾತ್ರಗಳನ್ನು ನೋಡುತ್ತಾ ಅನುಭವಿಸಿದ್ದಾರೆ, ರಂಗ ರೊಳಗಿನ ಎಲ್ಲಾ ರಂಗು ರಂಗಿನ ಜನರನ್ನು ಕಂಡವರು,ಇವರ ಹಾರಾಟ, ಚೀರಾಟ, ಕೂಗಾಟ ನೋಡಿದವರು ಈ ನಟ, ಅಹಂ ಇಲ್ಲದ ನಟ. ಆದರೆ ಯಾವುದೇ ಪಾತ್ರ ಕೊಟ್ಟರು ಮಾಡಬಲ್ಲೆನೆಂಬ ಅಹಂ ಇರುವವರು. ಕನ್ನಡಿಗರ ಮನೆಮಾತಾಗಿರುವ ನಮ್ಮೆಲ್ಲರ ಪ್ರೀತಿಯ ಕಲಾವಿದ ಜೆ.ಕೆ.ಶ್ರೀನಿವಾಸಮೂರ್ತಿ ಅವರು ಇನ್ನೂ ಹಲವು ಪಾತ್ರಗಳ ಮೂಲಕ ರಂಜಿಸಲಿ’ ಎಂದು ಬರಹ ರೂಪದಲ್ಲಿ ಪಲ್ಲಕ್ಕಿ ಹಾರೈಸಿದ್ದಾರೆ.

error: Content is protected !!