ಸಿನಿಮಾ ಹಾಗೂ ಸೀರಿಯಲ್ ಕಲಾವಿದರು ಈಗ ಸಂಕಷ್ಟದಲ್ಲಿದ್ದಾರೆ. ಸಿನಿಮಾ ಅಥವಾ ಸೀರಿಯಲ್ ಯಾವುದೇ ಚಟುವಟಿಕೆ ಇಲ್ಲದೆ ಎಲ್ಲಾ ಕಲಾವಿದರೂ ಮನೆಯಲ್ಲಿ ಕುಳಿತಿದ್ದಾರೆ. ಈ ಅನಿಶ್ವಿತತೆ ಇನ್ನೆಷ್ಟು ದಿನವೋ ಯಾರಿಗೂ ತಿಳಿದಿಲ್ಲ. ಪರಿಸ್ಥಿತಿ ಹೀಗೆ ಮುಂದುವರೆದರೆ, ಎಲ್ಲಾ ಪರಿಸ್ಥಿತಿ ಶೋಚನೀಯವಾಗಲಿದೆ. ಈ ಹಿನ್ನೆಲೆಯಲ್ಲಿ ಕಲಾವಿದರನ್ನು ಫ್ರಂಟ್ ಲೈನ್ ವಾರಿಯರ್ಸ್ ಅಂತ ಪರಿಗಣಿಸಿ, ಎಲ್ಲರಿಗೂ ವ್ಯಾಕ್ಸಿನ್ ಸೌಲಭ್ಯ ನೀಡುವ ಮೂಲಕ ಅವರು ಕೂಡ ನಿರ್ಭಿತಿಯಿಂದ ಕೆಲಸ ಮಾಡುವ ಅವಕಾಶ ದೊರಕಿಸಿಕೊಡುವಂತೆ ಹಿರಿಯ ನಟಿ ಮಾಳವಿಕಾ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
‘ಚಿತ್ರೋದ್ಯಮ ಮತ್ತೆ ಸಕ್ರಿಯವಾಗಿ ಕೆಲಸ ಮಾಡಬೇಕಂದರೆ ಎಲ್ಲರಿಗೂ ವ್ಯಾಕ್ಸಿನೇಷನ್ ಅಗತ್ಯ. ಈಗಾಗಲೇ ನೀವು ಮಾಧ್ಯಮದಲ್ಲಿ ಕೆಲಸ ಮಾಡುತ್ತಿರುವವರನ್ನು ಫ್ರಂಟ್ ಲೈನ್ ವಾರಿಯರ್ಸ್ ಅಂತ ಪರಿಗಣಿಸಿ ವ್ಯಾಕ್ಸಿನೇಷನ್ ಕೊಡುತ್ತಿರುವ ಹಾಗೆ, ಕಲಾವಿದರಿಗೂ ಅದರ ಅಗತ್ಯವಿದೆ.
ತಕ್ಷಣವೇ ತಾವು ಕಲಾವಿದರ ಬಗ್ಗೆಯೂ ವಿಶೇಷ ಗಮನ ಹರಿಸಿ ಕಲಾವಿದರಿಗೆ ವ್ಯಾಕ್ಸಿನೇಷನ್ ಕೊಡಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡುತ್ತೇನೆ ಅಂತ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಲ್ಲಿ ನಟಿ ಮಾಳವಿಕಾ ಮನವಿ ಮಾಡಿದ್ದಾರೆ.