ʼಆ ದಿನಗಳುʼ ಖ್ಯಾತಿಯ ನಟ ಚೇತನ್ ಕೋವಿಡ್ ಯೋಧರಾದ ಸ್ಮಶಾನ ಕಾರ್ಮಿಕರ ನೆರವಿಗೆ ಧಾವಿಸಿದ್ದಾರೆ. ರಾಜ್ಯದಲ್ಲಿರುವ ಸ್ಮಶಾನ ಹಾಗೂ ಶವಗಾರಗಳಲ್ಲಿನ ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ. ಅವರು ಆರ್ಥಿಕವಾಗಿ ಹಿಂದುಳಿದಿರುವುದು ಮಾತ್ರವಲ್ಲ, ಕೋವಿಡ್ ಸಾಂಕ್ರಾಮಿಕ ರೋಗ ತೀವ್ರಗತಿಯಲ್ಲಿ ಹರಡುತ್ತಿರುವ ಈ ಸಂದರ್ಭದಲ್ಲಿ ಅವರಿಗೆ ಈಗ ತುರ್ತಾಗಿ ವೈದ್ಯಕೀಯ ನೆರವು ಬೇಕಿದೆ. ಈ ಹಿನ್ನೆಲೆಯಲ್ಲಿ, ಸರ್ಕಾರ ಅವರ ನೆರವಿಗೆ ಬರಬೇಕೆಂದು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಅವರು ಬರೆದಿರುವ ಪತ್ರದ ಡಿಟೈಲ್ಸ್ ಇಲ್ಲಿದೆ.
ಕರ್ನಾಟಕದಾದ್ಯಂತ ಸ್ಮಶಾನ ಕಾರ್ಮಿಕರು ಈ ಘೋರ ಬಿಕ್ಕಟ್ಟಿನ ಸಂದರ್ಭದಲ್ಲಿ ನಮ್ಮ ರಾಜ್ಯದ ಜನರಿಗೆ ಮುಂಚೂಣಿಯ ಕೋವಿಡ್ ಯೋಧರಾಗಿ ದಣಿವರಿಯದೆ ಮತ್ತು ನಿಸ್ವಾರ್ಥವಾಗಿ ಕೆಲಸ ಮಾಡುತ್ತಿದ್ದಾರೆ. ಈ ಸ್ಮಶಾನ ಕಾರ್ಮಿಕರು ತಲೆಮಾರುಗಳಿಂದ ನಮ್ಮ ಸಮಾಜದ ಸಾಮಾಜಿಕ ಮತ್ತು ಆರ್ಥಿಕವಾಗಿ ಅಳಿವಿನಂಚಿನಲ್ಲಿರುವ ಸದಸ್ಯರು. ಈ ಸಾಂಕ್ರಾಮಿಕ ರೋಗ ಹರಡುತ್ತಿರುವ ಸಮಯದಲ್ಲಿ ಅಸಾಧಾರಣ ವೈದ್ಯಕೀಯ ಅಪಾಯಗಳನ್ನು ಎದುರಿಸುತ್ತಿದ್ದಾರೆ. ದುರಾದೃಷ್ಟವಶಾತ್, ಅವರ ತಕ್ಷಣದ ಮತ್ತು ದೀರ್ಘಕಾಲದ ಅಗತ್ಯಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಸರ್ಕಾರಗಳು ಸತತವಾಗಿ ನಿರ್ಲಕ್ಷ್ಯಿಸಿದೆ. ನಮ್ಮ ಸ್ಮಶಾನ ಕಾರ್ಮಿಕರಿಗೆ ಹೆಚ್ಚು ಅಗತ್ಯವಿರುವ ಈ ಬೇಡಿಕೆಗಳನ್ನು ನೀವು ವಾಸ್ತವಿಕಗೊಳಿಸಬೇಕೆಂದು ನಾವು ಕೇಳುತ್ತೇವೆ.
1 ಎಲ್ಲಾ ಸ್ಮಶಾನ/ಶವಗಾರ ಕಾರ್ಮಿಕರಿಗೆ ತಕ್ಷಣದ ಅಗತ್ಯಗಳು..
- ವೈದ್ಯಕೀಯ ವಿಮೆ
- ಕೋವಿಡ್ ಸಂತ್ರಸ್ಥರಿಗೆ ಆದ್ಯತೆಯ ಆಸ್ಪತ್ರೆಯ ಹಾಸಿಗೆ ಹಂಚಿಕೆ
- ಆದ್ಯತೆಯ ವ್ಯಾಕ್ಸಿನೇಷನ್
- ಈಗಾಗಲೇ ಒದಗಿಸಿರುವ ಪಿಪಿಇ ಕಿಟ್‌ಗಳ ಜೊತೆಗೆ ಕೈಗವಸುಗಳು ಮತ್ತು ಮುಖವಾಡಗಳು
- ತಮ್ಮ ಕೆಲಸದ ಅವಧಿಗಿಂತ ಹೆಚ್ಚು ಸಮಯ ಕೆಲಸ ಮಾಡಿದರೆ ಅದಕ್ಕೆ ಅವರ ಪಾವತಿಯನ್ನು ಹೆಚ್ಚಿಸಬೇಕು
- ಕೆಲಸದ ಹೊರೆ ಹೆಚ್ಚಿಗೆಯಾದ ಕಾರಣ ಅವರನ್ನು ಸಹಾಯ ಮಾಡಲು ಉದ್ಯೋಗಿಗಳ ಸಂಖ್ಯೆಯನ್ನು ಹೆಚ್ಚಿಸಬೇಕು.
2 ಎಲ್ಲಾ ಸ್ಮಶಾನ ಕಾರ್ಮಿಕರಿಗೆ ಶಾಶ್ವತ ಪರಿಹಾರಗಳು
- 4 ನೇ ದರ್ಜೆಯ, ಡಿ-ಗ್ರೂಪ್ ಸರ್ಕಾರಿ ನೌಕರರಾಗಿ ಶಾಶ್ವತ ಉದ್ಯೋಗ ಕಲ್ಪಿಸಬೇಕು.
- ಇಎಸ್‌ಐ ಮತ್ತು ಪಿಎಸ್‌ಗೆ ಅವಕಾಶ ಕಲ್ಪಿಸಿಕೊಡಬೇಕು.
- ಸ್ಮಶಾನ/ಶವಾಗರದ ಆವರಣದ ಹೊರಗೆ ವಸತಿ ಕಲ್ಪಿಸಬೇಕು.
- ಕೆಲಸದ ಸಮಯವನ್ನು 8 ಗಂಟೆಗಳ ಅವಧಿಗೆ ಶಿಫ್ಟ್ ಮಾದರಿಗೆ ಸೀಮಿತಗೊಳಿಸಬೇಕು.
- ಸ್ಮಶಾನ ಕಾರ್ಮಿಕರ ಮಕ್ಕಳಿಗೆ ಗುಣಮಟ್ಟದ ಶಾಲೆಗಳಲ್ಲಿ ಉಚಿತ ಶಿಕ್ಷಣ ನೀಡಬೇಕು.
- ಎಲ್ಲಾ ಧಾರ್ಮಿಕ ಸಮುದಾಯಗಳ (ಹಿಂದೂ, ಮುಸ್ಲಿಂ ಕ್ರಿಶ್ಚಿಯನ್, ಇತರೆ) ಸ್ಮಶಾನ ಕಾರ್ಮಿಕರಿಗೆ ಸರ್ಕಾರದ ಸೌಲಭ್ಯಗಳು ದೊರೆಯಬೇಕು.
- ಸ್ಮಶಾನ ಕಾರ್ಮಿಕರಿಗೆ ನಿರ್ದಿಷ್ಟವಾದ ಸಾಮಾಜಿಕ ಮತ್ತು ಶೈಕ್ಷಣಿಕೆ ಉನ್ನತಿಗಾಗಿ ಹೊಸ ನೀತಿಗಳನ್ನು ಅನುಷ್ಠಾನಗೊಳಿಸಬೇಕು.
ಸ್ಮಶಾನ ಕಾರ್ಮಿಕರ ಮತ್ತು ಸಾರ್ವಿಜನಿಕರ ಹಿತದೃಷ್ಟಿಯಿಂದ ನಮ್ಮ ಕರ್ನಾಟಕ ಸರ್ಕಾರ ಈ ನೀತಿಗಳನ್ನು ತಕ್ಷಣವೇ ಜಾರಿಗೆ ತರುತ್ತದೆ ಎಂದು ನಾವು ಭಾವಿಸುತ್ತೇವೆ’ ಎಂದು ಚೇತನ್ ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಮತ್ತು ಸಿಎಂ ಯಡಿಯೂರಪ್ಪ ಅವರಿಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ.