Categories
ಸಿನಿ ಸುದ್ದಿ

ಸೌದೆ ಸಹಾಯಕ್ಕೆ ನಿಂತ ನಿರ್ದೇಶಕ – ಸಂಕಷ್ಟದಲ್ಲಿರೋ 200 ಮಂದಿ ಸಿನಿಮಾ ಕಾರ್ಮಿಕರಿಗೆ ಫುಡ್‌ ಕಿಟ್‌ ವಿತರಣೆಗೆ ಕೊಡಗು ಮಂಜು ರೆಡಿ!

ಯುವ ನಿರ್ದೇಶಕ ಕೊಡುಗು ಮಂಜು, ಕೊರೊನಾದ ಸಂಕಷ್ಟದಲ್ಲಿ ಸಿಲುಕಿರುವ ಅಸಹಾಯಕರಿಗೆ ತಮ್ಮ ಕೈಲಾದಷ್ಟು ನೆರವು ನೀಡಲು ಮುಂದಾಗಿದ್ದಾರೆ. ಈಗಾಗಲೇ ಅವರು ಬೆಂಗಳೂರು ನಗರದ ರುದ್ರಭೂಮಿಗಳಲ್ಲಿ ಶವ ಸುಡಲು ಸೌದೆ ಸಮಸ್ಯೆ ಉಂಟಾಗದಂತೆ ಅನೇಕ ಜನರಿಗೆ ಉಚಿತವಾಗಿ ಸೌದೆ ಸೌಲಭ್ಯ ಕಲ್ಪಿಸಿದ್ದಾರೆ. ಸದ್ದಿಲ್ಲದೆ, ಸುದ್ದಿ ಮಾಡದೆ ಈ ಕೆಲಸವನ್ನು ಅವರು ಯಾವುದೇ ಫಲಾಪೇಕ್ಷೆ ಬಯಸದೆ ಮಾಡಿಕೊಂಡು ಬಂದಿದ್ದಾರೆ. ಈಗಲೂ ಬೆಂಗಳೂರಿನ ಯಾವುದೇ ರುದ್ರಭೂಮಿಯಲ್ಲಿ ಸಾರ್ವಜನಿಕರಿಗೆ ಸೌದೆ ಸಮಸ್ಯೆ ಉಂಟಾದರೆ ತಕ್ಷಣವೇ ತಮ್ಮನ್ನು ಸಂಪರ್ಕ ಮಾಡಿದರೆ ಸಾಕು, ಅವರಿರುವ ಜಾಗಕ್ಕೆ ಅಗತ್ಯದಷ್ಟು ಸೌದೆ ತರಿಸಿಕೊಡುವ ಕೆಲಸ ತಮ್ಮದು ಎನ್ನುತ್ತಾರೆ ಯುವ ನಿರ್ದೇಶಕ ಮಂಜುನಾಥ್‌ ಕೊಡಗು.

ಈ ಕೆಲಸ ಈಗಾಗಲೇ ಯಾವುದೇ ಪ್ರಚಾರ ಇಲ್ಲದೆ ಸಾಗಿದೆ. ಈಗಲೂ ಅದೇ ನಮ್ಮ ಉದ್ದೇಶ. ಪ್ರಚಾರ ಬೇಡ. ಸಂಕಷ್ಟದಲ್ಲಿರುವ ಜನರಿಗೆ ನೆರವಾಗುದಷ್ಟೇ ನಮ್ಮ ಉದ್ದೇಶ. ಒಂದಷ್ಟು ಜನರು ಸೇರಿ ಈ ಕೆಲಸ ಮಾಡುತ್ತಿದ್ದೇವೆ. ನಮ್ಮಿಂದಾಗುವ ಕೆಲಸ ಇಷ್ಟು. ಸಂಕಷ್ಟದಲ್ಲಿರುವ ಜನರಿಗೆ ಏನಾದರೂ ಸಹಾಯ ಮಾಡೋಣ ಅಂದಾಗ ನಮಗೆ ಹೊಳೆದಿದ್ದು ಇದು. ಈಗಲೂ ಇದಕ್ಕೆ ದಯಮಾಡಿ ಯಾವುದೇ ಪ್ರಚಾರ ಬೇಡ. ಯಾಕಂದ್ರೆ ಪ್ರಚಾರ ಅಂದ್ರೆ ನಂಗೆ ಭಯ. ಜನ ಇದ್ರಲ್ಲೂ ಏನಾದ್ರೂ ಅಂದುಕೊಳ್ತಾರೆʼ ಅಂತ ತಮ್ಮ ಕೆಲಸದ ಬಗ್ಗೆ ಹೇಳಿಕೊಳ್ಳುವುದಕ್ಕೂ ಮುಜುಗರ ಪಡುತ್ತಾರೆ ನಿರ್ದೇಶಕ ಮಂಜು.

ಈಗ ಇನ್ನೊಂದು ಹೆಜ್ಜೆ ಮುಂದೆ ಹೋಗಿ, ಸಂಕಷ್ಟದಲ್ಲಿರುವ ಸಿನಿಮಾ ಕಾರ್ಮಿಕರಿಗೆ ಫುಡ್‌ ಕಿಟ್‌ ವಿತರಿಸಲು ಮುಂದಾಗಿದ್ದಾರೆ. ʼ ನಾನು ಕೂಡ ಸಿನಿಮಾ ರಂಗದಲ್ಲಿ ಸಹಾಯಕ ನಿರ್ದೇಶಕನಾಗಿ ಬಂದವನು. ಅವರ ಕಷ್ಟ ಏನು ಅಂತ ನಂಗೂ ಗೊತ್ತು. ಈಗ ಸುಮಾರು 200 ಮಂದಿಗೆ ಫುಡ್‌ ಕಿಟ್‌ ವಿತರಣೆ ಮಾಡುತ್ತಿದ್ದೇವೆ. ಈ ಕೆಲಸ ಶುರುವಾಗಿದೆ. ತೀರಾ ಅಗತ್ಯವಿದ್ದರವರನ್ನು ಸಂಪರ್ಕಿಸಿ, ಫುಡ್‌ ಕಿಟ್‌ ವಿತರಣೆ ಮಾಡುತ್ತಿದ್ದೇವೆ. ಸೂಕ್ತ ಮಾಹಿತಿ ಪಡೆದು ಅವರಿರುವ ಕಡೆಯೇ ಹೋಗಿ ಫುಡ್‌ ಕಿಟ್‌ ವಿತರಣೆ ಮಾಡುತ್ತಿದ್ದೇವೆʼ ಎನ್ನುತ್ತಾರೆ ಮಂಜು.

Categories
ಸಿನಿ ಸುದ್ದಿ

ನಟ ಯಶ್‌ ಕಾರ್ಯಕ್ಕೆ ಶಹಬ್ಬಾಸ್‌ ಅಂದ ಚಿತ್ರೋದ್ಯಮ – ನಾಡಿನ ಜನತೆಯಿಂದಲೇ ಅಪಾರ ಮೆಚ್ಚುಗೆ

ಕೊರೊನಾ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಸಿನಿಮಾ ಕಾರ್ಮಿಕರಿಗೆ ಈಗಾಗಲೇ ಚಿತ್ರರಂಗದ ಅನೇಕ ಸ್ಟಾರ್‌ಗಳು ನೆರವಿಗೆ ಧಾವಿಸಿದ್ದು ನಿಮಗೆಲ್ಲ ಗೊತ್ತೇ ಇದೆ. ಸುದೀಪ್‌, ಶಿವರಾಜಕುಮಾರ್, ರಾಗಿಣಿ, ಉಪೇಂದ್ರ, ಸಂಚಾರಿ ವಿಜಯ್‌, ನೀನಾಸಂ ಸತೀಶ್‌ ಸೇರಿದಂತೆ ಅನೇಕರು ಈಗಾಗಲೇ ಫೀಲ್ಡಿಗಿಳಿದು ಸಿನಿಮಾ ಸೇರಿದಂತೆ ಇತರೆ ಕ್ಷೇತ್ರಗಳಲ್ಲಿನ ಜನರ ನೆರವಿಗೆ ನಿಂತಿದ್ದಾರೆ. ಈ ನಡುವೆ ಈಗ ರಾಕಿಂಗ್‌ ಸ್ಟಾರ್‌ ದೊಡ್ಡ ಮಟ್ಟದಲ್ಲೇ 3 ಸಾವಿರ ಮಂದಿ ಸಿನಿಮಾ ಕಾರ್ಮಿಕರ ನೆರವಿಗೆ ಬಂದಿರುವುದು ಚಿತ್ರೋದ್ಯಮದಲ್ಲಿ ಸಂಚಲನ ಮೂಡಿಸಿದೆ. ಎಲ್ಲರೂ ಯಶ್‌ ಅವರ ಮಹತ್‌ ಕಾರ್ಯಕ್ಕೆ ಮೆಚ್ಚುಗೆ ಹೇಳಿದ್ದಾರೆ.ʼ ಇದು ನಿಮ್ಮಿಂದಾಗುತ್ತಿರುವ ಮಹತ್‌ ಕಾರ್ಯ. ಧನ್ಯವಾದಗಳು ಯಶ್. ಇಂತಹ ಮತ್ತಷ್ಟು ಮಹತ್ಕಾರ್ಯಗಳು ತಮ್ಮಿಂದ ನಡೆಸಲು ಆ ಭಗವಂತ ತಮಗೆ ಶಕ್ತಿ ನೀಡಲಿ ಎಂದು ನಟ ಉಪೇಂದ್ರ ಅವರು ಟ್ವಿಟ್‌ ಮಾಡಿದ್ದಾರೆ. ಹಾಗೆಯೇ ನಟರಾದ ಸಂಚಾರಿ ವಿಜಯ್‌ ಕೂಡ ಯಶ್‌ ಅವರ ನೆರವಿನ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ಚಿತ್ರೋದ್ಯಮದ ಪರವಾಗಿ ಧನ್ಯವಾದ ತಿಳಿಸಿದ್ದಾರೆ.

ಇದು ದೊಡ್ಡ ಕಾರ್ಯ. ಇಷ್ಟು ದೊಡ್ಡ ಮಟ್ಟದಲ್ಲಿ ಸಿನಿಮಾ ಕಾರ್ಮಿಕರ ನೆರವಿಗೆ ಬರುವುದಕ್ಕೂ ದೊಡ್ಡ ಮನಸ್ಸು ಇರಬೇಕು. ಅದು ನಿಮ್ಮಲ್ಲಿದೆʼ ಅಂತ ನಟ ಸಂಚಾರಿ ವಿಜಯ್‌ ಸೋಷಲ್‌ ಮೀಡಿಯಾದಲ್ಲಿ ರಿಯಾಕ್ಟ್‌ ಮಾಡಿದ್ದಾರೆ. ಅವರಂತೆಯೇ ರವಿಶಂಕರ್ ಗೌಡ ಕೂಡ ಫೇಸ್ ಬುಕ್ ನಲ್ಲಿ ಮೆಚ್ಚುಗೆ ಸೂಚಿಸಿದ್ದಾರೆ. ಕನ್ನಡದ ಅನೇಕ ಸ್ಟಾರ್‌ ಗಳು ಕೂಡ ಯಶ್‌ ಕಾರ್ಯಕ್ಕೆ ಮೆಚ್ಚುಗೆ ಹೇಳಿದ್ದಾರೆ. ವಿಶೇಷವಾಗಿ ಸಿನಿಮಾ ಕಾರ್ಮಿಕರ ವಲಯದಿಂದ ಯಶ್‌ ಅವರಿಗೆ ಅಭಿನಂದನೆಯ ಮಹಾಪೂರವೇ ಹರಿದು ಬಂದಿದೆ.

ನಿರ್ಮಾಪಕರಾದ ಸಾ.ರಾ. ಗೋವಿಂದು, ಕಲಾವಿದರ ಸಂಘದ ದೊಡ್ಡಣ್ಣ ಸೇರಿದಂತೆ ಎಲ್ಲರೂ ಯಶ್‌ ಕಾರ್ಯವನ್ನು ಮೆಚ್ಚಿಕೊಂಡಿದ್ದಾರೆ. ಹಾಗೆಯೇ ಜನ ಕಾರ್ಯವನ್ನು ಮುಕ್ತ ಕಂಠದಿಂದ ಬಣ್ಣಿಸಿರುವ ಜನ ಸಾಮಾನ್ಯರು, ಕಷ್ಟ ಪಟ್ಟು ದುಡಿದ ಹಣದಲ್ಲಿ ಒಬ್ಬ ಸ್ಟಾರ್‌ ಇಷ್ಟೆಲ್ಲ ನೆರವಾಗಲು ಸಾಧ್ಯವಾಗುವುದಾದರೆ,

ಹಲವಾರು ವರ್ಷಗಳಿಂದ ರಾಜಕಾರಣದಲ್ಲಿದ್ದು. ಸಾವಿರಾರು ಕೋಟಿಗಳಷ್ಟು ಆಸ್ತಿ-ಅಂತಸ್ತು ಸಂಪಾದಿಸಿಕೊಂಡಿರುವ ನಾಡಿನ ರಾಜಕಾರಣಿಗಳಿಗೆ, ಸಚಿವರಿಗೆ ಈ ರೀತಿಯ ನೆರವು ನೀಡುವುದು ಯಾಕೆ ಆಗುತ್ತಿಲ್ಲ? ಎಂದು ತರಾಟೆಗೆ ತೆಗೆದುಕೊಂಡಿರುವುದು ವಿಶೇಷ.

Categories
ಸಿನಿ ಸುದ್ದಿ

ಸಿನಿಮಾ ಕಲಾವಿದರ ಕಷ್ಟಕ್ಕೆ ಮಿಡಿದ ರಾಕಿ ಭಾಯ್! ಮೂರು ಸಾವಿರಕ್ಕೂ ಹೆಚ್ಚು ಕಾರ್ಮಿಕರು, ಕಲಾವಿದರು, ತಂತ್ರಜ್ಞರ ಖಾತೆಗೆ ಐದು ಸಾವಿರ ರುಪಾಯಿ ಹಾಕಲು ನಿರ್ಧಾರ

ಯಶ್ ಈಗ ರಿಯಲ್ ಹೀರೋ…

ನಮ್ಮ ಕಲಾವಿದರು, ತಾಂತ್ರಿಕ ವರ್ಗದವರು ಮತ್ತು ಕಾರ್ಮಿಕರ ಅಧಿಕೃತ ಬ್ಯಾಂಕ್ ವಿವರ ತಲುಪಿದ ತಕ್ಷಣವೇ ಇದು ಕಾರ್ಯರೂಪಕ್ಕೆ ಬರಲಿದೆ. ಈ ಸಣ್ಣ ಸಹಾಯ ಈಗ ಎದುರಾಗಿರುವ ಎಲ್ಲ ಕಷ್ಟಗಳಿಗೂ ಪರಿಹಾರ ಎಂಬುದು ನನ್ನ ಭಾವನೆಯಲ್ಲ

ಕೊರನಾ ಎಲ್ಲರ ಬದುಕನ್ನು ಹಾಳು ಮಾಡಿದೆ. ಈಗ ಎಲ್ಲರೂ ಸಂಕಷ್ಟದಲ್ಲಿದ್ದಾರೆ. ಚಿತ್ರರಂಗವನ್ನು ನಂಬಿ ಬದುಕುತ್ತಿರುವ ಮಂದಿ ಕೂಡ ಇದಕ್ಕೆ ಹೊರತಾಗಿಲ್ಲ. ಈಗಾಗಲೇ, ಹಲವು ಸ್ಟಾರ್ ನಟರು ನೋವಲ್ಲಿರುವ ಜನರಿಗೆ ಸ್ಪಂದಿಸುವ ಕೆಲಸ ಮಾಡುತ್ತಿದ್ದಾರೆ. ಈಗ ರಾಕಿಂಗ್ ಸ್ಟಾರ್ ಯಶ್ ಕೂಡ ಸಿನಿಮಾ ಮಂದಿಯ ಕಷ್ಟಕ್ಕೆ ಸ್ಪಂದಿಸುವುದಾಗಿ ಹೇಳಿದ್ದಾರೆ.
ಒಕ್ಕೂಟದಲ್ಲಿರುವ ಸುಮಾರು 3000 ಸಾವಿರಕ್ಕು ಹೆಚ್ಚಿರುವ ಸಿನಿಮಾ ಕಲಾವಿದರು, ತಾಂತ್ರಿಕ ವರ್ಗದವರು ಹಾಗು ಕಾರ್ಮಿಕರ ಅಧಿಕೃತ ಖಾತೆಗಳಿಗೆ ತಲಾ 5000 ಸಾವಿರ ರೂ.ಗಳನ್ನು ಯಶ್ ತಮ್ಮ ಸಂಪಾದನೆಯ ಹಣದಿಂದ ಭರಿಸಲು ನಿರ್ಧರಿಸಿದ್ದಾರೆ…

ಹೌದು, ಯಶ್ ಇಂಥದ್ದೊಂದು ಒಳ್ಳೆಯ ನಿರ್ಧಾರ ಕೈಗೊಂಡಿದ್ದಾರೆ. ಕೊರೊನಾ ಹೊಡೆತಕ್ಕೆ ತತ್ತರಿಸಿದ್ದವರ ನೋವಿಗೆ ಸ್ಪಂದಿಸುವ ಬಗ್ಗೆ ಹೇಳಿದ್ದಾರೆ ಆ ಕುರಿತು ಯಶ್ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಓವರ್ ಟು ಯಶ್….

‘ಕಣ್ಣಿಗೆ ಕಾಣದ ವೈರಸ್ ಮನುಷ್ಯನ ಬದುಕನ್ನು ಹೆಚ್ಚು ಕಮ್ಮಿ ಬುಡಮೇಲು ಮಾಡಿದೆ. ಅದರಲ್ಲೂ, ಕಳೆದೊಂದು ವರ್ಷದಿಂದ ನನ್ನ ಸಿನಿಮಾ ಕುಟುಂಬ ಅಸಹಾಯಕತೆಯಿಂದ ಕೈ ಕಟ್ಟಿ ಕುಳಿತಿದೆ.
ಹೌದು, ಇದು ಬರೀ ಮಾತನಾಡುವ ಸಮಯವಲ್ಲ
ಸಂಕಷ್ಟದಲ್ಲಿರುವ ಸಿನಿಮಾ ಕುಟುಂಬದ ಜೊತೆ ನಿಲ್ಲುವ ಸಮಯ. ಹಾಗಾಗಿ ಸುಮಾರು, 3000 ಸಾವಿರಕ್ಕೂ ಹೆಚ್ಚಿರುವ ನಮ್ಮ ಸಿನಿಮಾ ಕಲಾವಿದರು, ತಾಂತ್ರಿಕ ವರ್ಗದವರು, ಕಾರ್ಮಿಕರ ಅಧಿಕೃತ ಖಾತೆಗಳಿಗೆ ತಲಾ 5000 ರು.ಗಳನ್ನು ನನ್ನ ಸಂಪಾದನೆಯ ಹಣದಿಂದ ಭರಿಸಲು ನಿರ್ಧರಿಸಿದ್ದೇನೆ.
ಈ ಬಗ್ಗೆ ಈಗಾಗಲೇ ನಮ್ಮ ಒಕ್ಕೂಟದ ಅಧ್ಯಕ್ಷರಾದ ಸಾ.ರಾ.ಗೋವಿಂದು ಮತ್ತು ಪ್ರಧಾನ ಕಾರ್ಯದರ್ಶಿಗಳಾದ ರವೀಂದ್ರನಾಥ ಅವರೊಂದಿಗೆ ಚರ್ಚಿಸಿದ್ದೇನೆ.


ನಮ್ಮ ಕಲಾವಿದರು, ತಾಂತ್ರಿಕ ವರ್ಗದವರು ಮತ್ತು ಕಾರ್ಮಿಕರ ಅಧಿಕೃತ ಬ್ಯಾಂಕ್ ವಿವರ ತಲುಪಿದ ತಕ್ಷಣವೇ ಇದು ಕಾರ್ಯರೂಪಕ್ಕೆ ಬರಲಿದೆ. ಈ ಸಣ್ಣ ಸಹಾಯ ಈಗ ಎದುರಾಗಿರುವ ಎಲ್ಲ ಕಷ್ಟಗಳಿಗೂ ಪರಿಹಾರ ಎಂಬುದು ನನ್ನ ಭಾವನೆಯಲ್ಲ. ಬದಲಿಗೆ ಶಕ್ತಿ ಇರುವ ಹೃದಯವಂತರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಸಂಕಷ್ಟದಲ್ಲಿರುವ ಜನ ಸಮುದಾಯದ ಜೊತೆ ಹೆಗಲಿಗೆ ಹೆಗಲು ಕೊಟ್ಟು ನಿಂತು‌ ಸಹಾಯ ಮಾಡಿದರೆ, ನಾನು ಮಾಡಿದ ಪ್ರಯತ್ನಕ್ಕೂ ಸಾರ್ಥಕತೆ ಬರುತ್ತದೆ ಎಂಬುದು ನನ್ನ ಆಶಯ’ ಎಂದು ಯಶ್ ಟ್ವೀಟ್ ಮಾಡಿದ್ದಾರೆ.

ಅದೇನೆ ಇರಲಿ, ಯಶ್ ಒಂದೊಳ್ಳೆಯ ಕೆಲಸಕ್ಕೆ ಕೈ ಹಾಕಿದ್ದಾರೆ. ಅವರು ಹೇಳಿದಂತೆ ಈ ಸಹಾಯದಿಂದ ಕಷ್ಟಗಳೆಲ್ಲ ಪರಿಹಾರ ಆಗಲ್ಲ. ಆದರೆ, ಬೇರೆಯವರೂ ಹೆಗಲು ಕೊಟ್ಟರೆ, ಇಂತಹ ಪರಿಸ್ಥಿತಿಗೆ ಸಿಲುಕಿದವರಿಗೆ ಕೊಂಚ ನೆರವು ಸಿಕ್ಕೀತು. ಚಿತ್ರರಂಗದವರು ಏನು ಮಾಡುತ್ತಿದ್ದಾರೆ ಎಂಬುದಕ್ಕೆ ಹಲವು ಉದಾಹರಣೆ ಕಣ್ಣ ಮುಂದಿದೆ. ಈಗ ಇಡೀ ಚಿತ್ರರಂಗವೇ ಮೆಚ್ಚುವಂತಹ ಕೆಲಸ ಮಾಡಲು ಹೊರಟಿರುವ ಯಶ್ ಒಳ್ಳೇತನಕ್ಕೆ ಬಣ್ಣದ ಜಗತ್ತು ಮೆಚ್ಚದೇ ಇರದು.

Categories
ಸಿನಿ ಸುದ್ದಿ

ಸಹಾಯಧನದಲ್ಲೂ ತಾರತಮ್ಯ ಬೇಡ : ಸರ್ಕಾರಕ್ಕೆ ಹಿರಿಯ ರಂಗ ಕಲಾವಿದ ಸಿಧ್ದರಾಜು ಮನವಿ

ಲಾಕ್‌ ಡೌನ್‌ ಹಿನ್ನೆಲೆಯಲ್ಲಿ ಸರ್ಕಾರ ರಂಗ ಕಲಾವಿದರಿಗೆ ಘೋಷಿಸಿರುವ ಸಹಾಯಧನಕ್ಕೆ ವಯೋಮಿತಿ ಫಿಕ್ಸ್‌ ಮಾಡಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.
ನಾಡಿನ ವಿವಿಧಡೆಗಳ ಅನೇಕ ಮಂದಿ ಹಿರಿಯ ರಂಗ ಕಲಾವಿದರು ಸರ್ಕಾರ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಕಿರಿಯ ಕಲಾವಿದರಿಗೆ ಸಿಗದ ಸಹಾಯ ಧನ, ತಮಗ್ಯಾಕೆ ಬೇಕು ಅಂತ ದಾವಣಗೆರೆಯ ಹಿರಿಯ ರಂಗ ಕಲಾವಿದ ಸಿದ್ದರಾಜು, ಶಿವಮೊಗ್ಗ ಸತೀಶ್‌ ಸೇರಿದಂತೆ ಅನೇಕ ಮಂದಿ ಸರ್ಕಾರದ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿ, ಕಿರಿಯರಿಗೆ ಸಿಗದ ಸಹಾಯಧನ ತಮಗೆ ಬೇಡ ಎಂದಿದ್ದಾರೆ.

ರಂಗಭೂಮಿಯಲ್ಲಿ ಕೆಲಸ ಮಾಡುವವರ ನಡುವೆ ವಯಸ್ಸಿನ ಮಿತಿಯಿಲ್ಲ.ಆದರೂ ಸರ್ಕಾರ ಲಾಕ್‌ ಡೌನ್‌ ಹಿನ್ನೆಲೆಯಲ್ಲಿ ಘೋಷಣೆ ಮಾಡಿರುವ ಸಹಾಯಧನಕ್ಕೆ 35 ವರ್ಷ ಮೇಲ್ಪಟ್ಟವರಿಗೆ ಮಾತ್ರ ಅಂತ ವಯೋಮಿತಿ ನಿಗದಿ ಮಾಡಿದೆ. ಆದರೆ, ರಂಗದಲ್ಲಿ ಅವರಷ್ಟೇ ಇಲ್ಲ. ಇಲ್ಲಿ ಹಿರಿಯರ ಹಾಗೆ ಕಿರಿಯರು ಇದ್ದಾರೆ. ಈಗಲೂ ನನ್ನ ಜತೆಗೆ ಸುಮಾರು 29 ವರ್ಷ ವಯಸ್ಸಿನ ಯುವಕರು ರಂಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರಿಗೂ ಸಹಾಯಧನ ನೀಡುವ ಅಗತ್ಯವಿದೆ.

ನಮ್ಮ ಹಾಗೆಯೇ ಅವರು ಕೂಡ ಲಾಕ್‌ ಡೌನ್‌ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿದ್ದಾರೆ. ಅವರಿಗೆ ಸಹಾಯಧನ ನೀಡುವ ಅಗತ್ಯವಿದೆ. ಹಾಗಾಗಿ ಅವರಿಗಿಲ್ಲದ ಸಹಾಯಧನ ನಮಗೆ ಬೇಡ ʼ ಅಂತ ಕಿರಿಯರ ಪರವಾಗಿ ಮಾತನಾಡಿರುವ ರಂಗ ಕರ್ಮಿ ಸಿದ್ದರಾಜು ಅವರು, ಸರ್ಕಾರ ಈ ಬಗ್ಗೆ ಆಲೋಚನೆ ನಡೆಸಬೇಕಿದೆ.

ಲಾಕ್‌ ಡೌನ್‌ ಹಿನ್ನೆಲೆಯಲ್ಲಿ ಘೋಷಣೆ ಮಾಡಿರುವ ಸಹಾಯಧನಕ್ಕೆ ನಿಗದಿ ಮಾಡಿರುವ ನಿರ್ಬಂಧ ತೆಗೆದು ಹಾಕಿ ರಂಗಭೂಮಿಯಲ್ಲಿ ಕೆಲಸ ಮಾಡುವ ಎಲ್ಲರಿಗೂ ಸಹಾಯಧನ ನೀಡಲಿ. ಹಾಗೊಂದು ವೇಳೆ ಸರ್ಕಾರ ಅದೇ ಅಂತಿಮ ಅಂತಂದುಕೊಂಡರೆ, ಕಿರಿಯರಿಗೆ ಇಲ್ಲದ ಸಹಾಯಧನ ತಮಗೂ ಬೇಡ ಎಂದು ಅವರು ಮನವಿ ಮಾಡಿದ್ದಾರೆ.

ಸರ್ಕಾರದ ಧೋರಣೆ ನೋಡಿದರೆ ಮೂವತ್ತೈದು ವರ್ಷ ಕೆಳಗಿರುವ ಕಲಾವಿದರಿಗೆ ಹೊಟ್ಟೆಯಿಲ್ಲ, ಹಸಿವಿಲ್ಲ, ಹೆಂಡತಿ ಮಕ್ಕಳಿಲ್ಲ ಎನ್ನುವ ಹಾಗಿದೆ. ಈ ಐಡಿಯಾವನ್ನು ಸರ್ಕಾರಕ್ಕೆ ಯಾರು ಕೊಟ್ಟರೋ ಗೊತ್ತಿಲ್ಲ. ಇದೊಂದು ಅಸಂಬದ್ದ ವಿಚಾರ ಎಂದು ರಂಗಕರ್ಮಿ ಸತೀಶ್‌ ಹೇಳುತ್ತಾರೆ. ಹಾಗೆಯೇ ಕಿರಿಯರಿಲ್ಲದೆ ರಂಗ ಚಟುವಟಿಕೆಗಳೇ ಇಲ್ಲ ಅಂತಲೂ ಅವರ ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟಿದ್ದಾರೆ.

Categories
ಸಿನಿ ಸುದ್ದಿ

ಇದು ಸ್ವಾತಂತ್ರ್ಯ ಪೂರ್ವದ, ಕ್ರಾಂತಿಯ “ಭುಗಿಲು”- ಸಿನಿಮಾ‌ ಆಯ್ತು ‘ಕಾಡ ಸೆರಗಿನ ಸೂಡಿ’ ಕಾದಂಬರಿ!

ಹಿರಿಯ ಪತ್ರಕರ್ತರಾದ ಮಂಜುನಾಥ್ ಚಾಂದ್ ಬರೆದಿರುವ “ಕಾಡ ಸೆರಗಿನ ಸೂಡಿ” ಕಾದಂಬರಿ ಆಧರಿಸಿ “ಧನ್ಯೋಸ್ಮೀ ಫಿಲಂಸ್” ಬ್ಯಾನರಿನಡಿ “ಭುಗಿಲು” ಎಂಬ ಕುಂದಾಪುರ ಭಾಷಾ ಶೈಲಿಯ ಸಿನಿಮಾ ನಿರ್ಮಾಣವಾಗಿದೆ. ಕನ್ನಡ ಚಿತ್ರರಂಗದಲ್ಲಿ ಸುಮಾರು ಮೂವತೈದು ವರ್ಷ ಡಬ್ಬಿಂಗ್ ಕಲಾವಿದರಾಗಿ, ನಟರಾಗಿ ಹಿರಿಯ ಅನುಭವ ಹೊಂದಿರುವ ಚಂದ್ರಕಾಂತ್ ಕೊಡಪಾಡಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.

ಅಂದಹಾಗೆ, ಈ “ಕಾಡ ಸೆರಗಿನ ಸೂಡಿ” ಕಾದಂಬರಿಯು, ವಿಶೇಷವಾಗಿ ಸ್ವತಂತ್ರ ಪೂರ್ವದ, 1934ನೇ ಇಸವಿಯಲ್ಲಿ ಗಾಂಧೀಜೀ ಕುಂದಾಪುರಕ್ಕೆ ಬಂದಿದ್ದ ಸಮಯದ ಆಸುಪಾಸಿನ ಕಾಲದಲ್ಲಿ ನಡೆದ ಘಟನಾವಳಿಗಳ ಸುತ್ತ ಕಥೆ ಹೆಣೆಯಲಾಗಿದೆ. ಆ ಕಾಲದ ಜನರ ಕಟ್ಟುಪಾಡುಗಳು ಮತ್ತು ದುರಾಡಳಿತ‌ ನಡೆಸುತ್ತಿದ್ದ ಬ್ರಿಟಿಷರ ಕಪಿಮುಷ್ಟಿಯಿಂದ ಸ್ವತಂತ್ರರಾಗುವ ನಿಟ್ಟಲ್ಲಿ, ಹಳ್ಳಿಯ ಪ್ರಮುಖರು ನಡೆಸಿದ ಹಿಂಬಾಗಿಲಿನ ಕಾರ್ಯಾಚರಣೆಗಳ ಮೇಲೆ ಈ ಕಾದಂಬರಿ ಬೆಳಕು ಚೆಲ್ಲಿದೆ. ವಿಶೇಷವಾಗಿ ತನಿಯ ಎಂಬ ದಲಿತನೊಬ್ಬನ ಮೇಲೆ ಇಡೀ ಕಥೆ ಚಾಚಿಕೊಳ್ಳುತ್ತದೆ.

ಇಂತಹದೊಂದು ಗಟ್ಟಿ ಕಥೆಯನ್ನು ಆಯ್ಕೆ ಮಾಡಿಕೊಂಡಿರುವ ನಿರ್ದೇಶಕ ಚಂದ್ರಕಾಂತ್ ಸಿನಿಮೀಯ ರೀತಿಯಲ್ಲಿ ಅದನ್ನು ಕೊಂಚ ಬದಲಿಸಿಕೊಂಡು ಕುಂದಾಪುರ ಭಾಷಾ ಶೈಲಿಯಲ್ಲಿ ಚಿತ್ರ ತಯಾರಿಸಿದ್ದಾರೆ. ಕರಾವಳಿ ಕುಂದಾಪುರದ ಅರೆಹೊಳೆ ಮತ್ತು ವಂಡ್ಸೆ ಎಂಬ ಎರಡು ಸುಂದರ ಊರುಗಳಲ್ಲಿ ಚಿತ್ರೀಕರಣ ನಡೆಸಿದ್ದಾರೆ. ನಿರ್ದೇಶನದ ಜೊತೆ ಚಂದ್ರಕಾಂತ್ ‘ತನಿಯ’ ಎಂಬ ಪ್ರಮುಖ ಪಾತ್ರವನ್ನೂ ನಿರ್ವಹಿಸಿದ್ದಾರೆ. ಜೊತೆಯಲ್ಲಿ ಹಿರಿಯ ನಟ ರಮೇಶ್ ಭಟ್, ನಮಿತಾ ದೇಸಾಯಿ, ರಾಜೀವ್ ಕೊಠಾರಿ, ಗಿರೀಶ್ ಬೈಂದೂರ್, ನಾಗರಾಜ್ ಗಾಣಿಗ ಬೈಂದೂರ್, ಚಂದ್ರಕಲಾ ರಾವ್, ನಾಗರಾಜ್ ಗಾಣಿಗ ಗುಜ್ಜಾಡಿ, ಪ್ರದೀಪ್ ಚಂದ್ರ ಕುತ್ಪಾಡಿ. ಶ್ರೀಪಾದ ಉಡುಪಿ, ಲಕ್ಷ್ಮಣ ಕೊರಗ, ಸತೀಶ್ ಕಂಚಕೋಡು, ಶ್ರೀನಿವಾಸ ಗಂಗೊಳ್ಳಿ ಸೇರಿದಂತೆ ರಂಗಭೂಮಿ ಕಲಾವಿದರೇ ಹೆಚ್ಚಾಗಿ ತೆರೆಹಂಚಿಕೊಂಡಿದ್ದಾರೆ.

ವಿಶೇಷವಾಗಿ ಚಿತ್ರದಲ್ಲಿ ಪೀಟರ್ ಎಂಬ ಬ್ರಿಟಿಷ್ ಅಧಿಕಾರಿಯ ಪಾತ್ರದಲ್ಲಿ ‘ಪೀಟರ್ ಗ್ರಾವಿಸ್ಕಿ’ ಎನ್ನುವ ಹಾಲೆಂಡಿನ ವಿದೇಶಿಗ ಬಣ್ಣ ಹಚ್ಚಿದ್ದಾರೆ. ಇನ್ನು ರಾಜತಂತ್ರ ಅಮ್ಮನ ಮನೆ ಖ್ಯಾತಿಯ ಪಿವಿಆರ್ ಸ್ವಾಮಿ ಛಾಯಾಗ್ರಹಣ ಮಾಡಿದ್ದು, ಕಾಶೀನಾಥ್, ಉಪೇಂದ್ರ ಒಡನಾಡಿಯಾದ ನಿರ್ದೇಶಕ ರಾಜೀವ್ ಕೊಠಾರಿ (ಶ್ರೀರಾಜ್) ಸ್ನೇಹಪೂರ್ವಕವಾಗಿ ಈ ಚಿತ್ರದ ನಿರ್ಮಾಣ-ನಿರ್ವಹಣೆಯ ಜವಾಬ್ದಾರಿ ನಿರ್ವಹಿಸಿದ್ದಾರೆ.

ಚಿತ್ರಸಾಹಿತಿ, ಡಾ. ನಾಗೇಂದ್ರ ಪ್ರಸಾದ್ ಸಾಹಿತ್ಯ, ರಾಧಾಕೃಷ್ಣ ಬಸ್ರೂರ್ ಸಂಗೀತ ಸಂಯೋಜನೆ, ಗುರುದತ್ ಸಾವುಕಾರ್ ಹಿನ್ನೆಲೆ ಸಂಗೀತ ಮತ್ತು ಸಂಕಲನ ಚಿತ್ರಕ್ಕೆ ಶಕ್ತಿ ತುಂಬಿದೆ. ಅಂದುಕೊಂಡಂತೆ ಎಲ್ಲವನ್ನು ಅಚ್ಚುಕಟ್ಟಾಗಿ ಮುಗಿಸಿರುವ ಚಿತ್ರತಂಡ ಚಿತ್ರೋತ್ಸವಗಳಿಗೆ ಲಗ್ಗೆ ಇಡುವ ಯೋಚನೆಯಲ್ಲಿದ್ದಾಗಲೇ ಕೊರೊನಾ ಹಾವಳಿಯಿಟ್ಟು ಕೈ ಕಟ್ಟಿ ಹಾಕಿದೆ. ಆದರೇನಂತೆ, ಈಗ ರಾಷ್ಟ್ರೀಯ ಚಲನಚಿತ್ರೋತ್ಸವದತ್ತ ಚಿತ್ರ ತಂಡ ಮುಖ ಮಾಡಿರುವ ಮಾಹಿತಿ ಹೊರ ಬಿದ್ದಿದೆ.
ಇಂಥದ್ದೊಂದು ಒಳ್ಳೆಯ ಕಥಾಹಂದರ ಇರುವ ಚಿತ್ರಕ್ಕೆ ಪ್ರಶಸ್ತಿಗಳು ಲಭಿಸಲಿ ಅನ್ನೋದು ‘ಸಿನಿಲಹರಿ’ ಆಶಯ.

Categories
ಸಿನಿ ಸುದ್ದಿ

ಶರಣು ಹುಲ್ಲೂರು ಬರೆದ ಪುಸ್ತಕಕ್ಕೆ ರಾಘು ಶಿವಮೊಗ್ಗ ಧ್ವನಿ! ಅಂಬರೀಶ್ ಬಯೋಗ್ರಫಿಗೆ ಈಗ ಆಡಿಯೋ ರೂಪ

ಪತ್ರಕರ್ತ ಹಾಗು ಲೇಖಕ ಡಾ.ಶರಣು ಹುಲ್ಲೂರು ಬರೆದಿರುವ ರೆಬೆಲ್ ಸ್ಟಾರ್ ಅಂಬರೀಶ್ ಅವರ ಬಯೋಗ್ರಫಿ “ಅಂಬರೀಶ್ ವ್ಯಕ್ತಿ ವ್ಯಕ್ತಿತ್ವ ವರ್ಣರಂಜಿತ ಬದುಕು” ಪುಸ್ತಕಕ್ಕೆ ರಾಜ್ಯ ಪ್ರಶಸ್ತಿ ಬಂದಿದ್ದು ಗೊತ್ತೇ ಇದೆ. ಆ ಪುಸ್ತಕ ಓದಿದ ಬಹುತೇಕರು ಮೆಚ್ಚುಗೆ ಸೂಚಿಸಿದ್ದು ಗೊತ್ತೇ ಇದೆ. ಈಗ ಹೊಸ ಸುದ್ದಿ ಅಂದರೆ, ರೆಬೆಲ್ ಸ್ಟಾರ್ ಅಂಬರೀಶ್ ಅವರ ಬಯೋಗ್ರಫಿ “ಅಂಬರೀಶ್ ವ್ಯಕ್ತಿ ವ್ಯಕ್ತಿತ್ವ ವರ್ಣರಂಜಿತ ಬದುಕು” ಪುಸ್ತಕ ಈಗ ಆಡಿಯೋ ರೂಪ ಪಡೆದಿದೆ. ಇದೇ ಮೊದಲ ಸಲ ನಿರ್ದೇಶಕ, ನಟ ರಾಘು ಶಿವಮೊಗ್ಗ ಅವರು, ಅಂಬರೀಶ್ ಅವರ ಬಯೋಗ್ರಫಿಗೆ ಧ್ವನಿ ನೀಡಿದ್ದಾರೆ. ಆ ಕುರಿತು ಅವರೇ ಒಂದಷ್ಟು ಮಾತು ಹಂಚಿಕೊಂಡಿದ್ದಾರೆ.

ಓವರ್ ಟು ರಾಘು ಶಿವಮೊಗ್ಗ

‘ಮಾಧ್ಯಮದ ಬಂಧುಗಳೆ
ಕೋವಿಡ್ 19 ನಮ್ಮೆಲ್ಲರ ಬದುಕನ್ನು ಅತಂತ್ರವಾಗಿಸಿಬಿಟ್ಟಿದೆ. ನೀವೆಲ್ಲರೂ ಕ್ಷೇಮ ಎಂದು ಭಾವಿಸಿರುವೆ. ಈ ಸಂದರ್ಭದಲ್ಲಿ ನನ್ನದೊಂದು ಖುಷಿ ಸಂಗತಿಯನ್ನು ಹಂಚಿಕೊಳ್ಳುತ್ತಿರುವೆ.
ನಾಡಿನ ಸುಪ್ರಸಿದ್ಧ ನಟರು, ನಮ್ಮೆಲ್ಲರ ರೆಬೆಲ್ ಸ್ಟಾರ್ ಅಂಬರೀಶ್ ಅವರ ಬಯೋಗ್ರಫಿ “ಅಂಬರೀಶ್ ವ್ಯಕ್ತಿ ವ್ಯಕ್ತಿತ್ವ ವರ್ಣರಂಜಿತ ಬದುಕು” ಈ ಪುಸ್ತಕವು ಆಡಿಯೋ ರೂಪ ಪಡೆದುಕೊಂಡಿದೆ.

2018 ರಲ್ಲಿ ಡಾ. ಶರಣು ಹುಲ್ಲೂರು ಅವರು ಬರೆದ ಈ ಪುಸ್ತಕ ಈ ವರ್ಷ ಎರಡನೇ ಮುದ್ರಣ ಕಂಡಿದೆ ಮತ್ತು ಸ್ಟೋರಿ ಟೆಲ್ ಈ ಪುಸ್ತಕವನ್ನು ಆಡಿಯೋ ರೂಪದಲ್ಲಿ ಹೊರತಂದಿದೆ. ಈ ಆಡಿಯೋಗೆ ನಾನು ಧ್ವನಿ ನೀಡಿದ್ದೇನೆ ಎನ್ನುವುದು ಸಂಭ್ರಮದ ಸಂಗತಿ.
ಕಿರುತೆರೆ, ಹಿರಿತೆರೆಯಲ್ಲಿ ನಿರ್ದೇಶಕನಾಗಿ, ನಟನಾಗಿ ಗುರುತಿಸಿಕೊಂಡಿರುವ ನಾನು, ಇದೇ ಮೊದಲ ಬಾರಿಗೆ ಆಡಿಯೋ ಬಯೋಗ್ರಫಿಗೆ ಧ್ವನಿ ನೀಡಿದ್ದು ವಿಶೇಷ. ನಾಡಿನ ಹೆಸರಾಂತ ಸಾಹಿತಿಗಳಾದ ಚಂದ್ರಶೇಖರ್ ಕಂಬಾರ್, ಗಿರೀಶ್ ಕಾರ್ನಾಡ್ ಸೇರಿದಂತೆ ಹಲವು ದಿಗ್ಗಜರ ಪುಸ್ತಕಗಳನ್ನು ಆಡಿಯೋ ರೂಪದಲ್ಲಿ ಹೊರತಂದಿರುವ ಸ್ಟೋರಿ ಟೆಲ್ ಸಂಸ್ಥೆ ನನಗೆ ಇಂಥದ್ದೊಂದು ಅವಕಾಶ ನೀಡಿದೆ.

‘ಚೌಕಬಾರ’ ನನ್ನ ಕಿರುಚಿತ್ರಕ್ಕೆ ಸರ್ಕಾರವೂ ರಾಜ್ಯ ಪ್ರಶಸ್ತಿ ನೀಡಿತ್ತು. ಅಂಬರೀಶ್ ಅವರ ಪುಸ್ತಕವೂ ರಾಜ್ಯ ಪ್ರಶಸ್ತಿ ಪಡೆದಿದೆ. ಹಾಗಾಗಿ ನನಗೆ ಡಬಲ್ ಸಂತಸ ತಂದಿದೆ.
ಅಂಬರೀಶ್ ಅವರ ಬದುಕಿನ ಪುಟಗಳನ್ನು ಓದಿದಾಗ ಥ್ರಿಲ್ ಆಗಿದ್ದೇನೆ. ನನ್ನದೇ ಆದ ಶೈಲಿಯಲ್ಲಿ ಅದನ್ನು ನಿರೂಪಿಸುತ್ತಾ ನಿಮ್ಮೊಳಗೆ ಅಂಬರೀಶ್ ಅವರನ್ನು ದಾಟಿಸುವ ಪ್ರಯತ್ನ ಮಾಡಿದ್ದೇನೆ. ನನ್ನ ಧ್ವನಿ ತಮಗೆಲ್ಲ ಇಷ್ಟ ಆಗಬಹುದು ಎನ್ನುವ ನಂಬಿಕೆ ನನ್ನದು.
ಸದ್ಯ ‘ಪೆಂಟಗನ್’ ಸಿನಿಮಾದ ಒಂದು ಕಥೆಯನ್ನು ನಿರ್ದೇಶಿಸಿ, ಹಲವು ಚಿತ್ರಗಳಲ್ಲ ನಟಿಸುತ್ತಾ ಇಂಥದ್ದೊಂದು ಕೆಲಸ ಮಾಡಲು ಸಾಧ್ಯವಾಗಿದ್ದು ತಮ್ಮೆಲ್ಲರ ಪ್ರೋತ್ಸಾಹದಿಂದಾಗಿ. ಈ ಹೊಸ ಕಾರ್ಯಕ್ಕೂ ತಮ್ಮ ಬೆಂಬಲವಿರಲಿ’ ಎಂದಿದ್ದಾರೆ ನಿರ್ದೇಶಕ, ಹಾಗು ನಟ ರಾಘು ಶಿವಮೊಗ್ಗ.

Categories
ಸಿನಿ ಸುದ್ದಿ

ಲಾಕ್ ಡೌನ್ ಮಧ್ಯೆ ನಟಿ ಪ್ರಣೀತಾ ಮದ್ವೆ…! ಉದ್ಯಮಿ ಕೈ ಹಿಡಿದ ಬೆಡಗಿ

ಸದ್ದಿಲ್ಲದೆ ಸಪ್ತಪದಿ ತುಳಿದಿದ್ದಾರೆ ನಟಿ ಪ್ರಣಿತಾ ಸುಭಾಷ್..! ಬೆಂಗಳೂರು ಮೂಲದ ಉದ್ಯಮಿ ನಿತಿನ್ ರಾಜ್ ಅವರನ್ನು ಪ್ರಣೀತಾ ವಿವಾಹವಾಗಿದ್ದಾರೆ.


ಕನ್ನಡ ಸೇರಿದಂತೆ ಪರಿಭಾಷೆಯಲ್ಲೂ ಮಿಂಚಿರುವ ಪ್ರಣೀತಾ ಈಗ ಬಾಲಿವುಡ್ ಅಂಗಳದಲ್ಲೂ ಜಿಗಿದಿದ್ದಾರೆ…

Categories
ಸಿನಿ ಸುದ್ದಿ

ದಾರಿ ಯಾವುದಯ್ಯಾ ವೈಕುಂಠಕೆ ಸಿನಿಮಾಗೆ ಸಾಲು ಸಾಲು ಅಂತಾರಾಷ್ಟ್ರೀಯ ಚಿತ್ರೋತ್ಸವ ಪ್ರಶಸ್ತಿಗಳ ಸುರಿಮಳೆ! ಖುಷಿಯ ಅಲೆಯಲ್ಲಿ ತಂಡ

ಕನ್ನಡದ ಅನೇಕ ಸಿನಿಮಾಗಳಿಗೆ ಈಗಾಗಲೇ ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರಶಸ್ತಿಗಳು ಲಭಿಸಿವೆ. ಆದರೆ, ಸಾಲು ಸಾಲು ಅಂತಾರಾಷ್ಟ್ರೀಯ ಚಿತ್ರೋತ್ಸವ ಪ್ರಶಸ್ತಿಗಳಿಗೆ ಭಾಜನವಾಗೋದು ವಿಶೇಷ. ಅಂತಹ‌ ವಿಶೇಷತೆಯನ್ನ ಕನ್ನಡದ ‘ದಾರಿ ಯಾವುದಯ್ಯ ವೈಕುಂಠಕೆ’ ಚಿತ್ರ ಪಡೆದುಕೊಂಡಿದೆ.

ಈಗ ‘ದಾರಿ ಯಾವುದಯ್ಯ ವೈಕುಂಠಕೆ’ ಚಿತ್ರಕ್ಕೆ ಮತ್ತೊಂದು ಪ್ರಶಸ್ತಿ ಲಭಿಸಿದೆ. ಚಿತ್ರದ ನಾಯಕ ವರ್ಧನ್ ಅವರ ಉತ್ತಮ ನಟನಾಗಿ 3ನೇ ಪ್ರಶಸ್ತಿ ಸಂದಿದೆ.
2021ನೇ ಸಾಲಿನಲ್ಲಿ ವರ್ಗಿನ್ ಸ್ಪ್ರಿಂಗ್ ಸ್ಪರ್ಧೆಯಲ್ಲಿ ಉತ್ತಮ ನಟ ಪ್ರಶಸ್ತಿ ಪಡೆದ ಮೇಲೆ ಲಂಡನ್ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಅಲ್ಲಿಯೂ ಸಹ ಉತ್ತಮ ನಟ ಪ್ರಶಸ್ತಿ ಪಡೆದಿದ್ದರು. ಈಗ ಏಷಿಯನ್ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ನಲ್ಲೂ ಸಹ ಉತ್ತಮ ನಟ ಪ್ರಶಸ್ತಿ ದೊರಕಿದೆ. ಸಹಜವಾಗಿಯೇ ಚಿತ್ರತಂಡಕ್ಕೆ ಇದು ಸಂತಸ ತಂದಿದೆ.

ಹೌದು, ಈಗಾಗಲೇ ಮಹಾರಾಷ್ಟ್ರದ “ಪುಣೆ”ಯಲ್ಲಿ ನಡೆದ “ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಚಿತ್ರಕಥೆಗಾಗಿ “ಬೆಸ್ಟ್ ಸ್ಕ್ರೀನ್ ಪ್ಲೇ” ಅವಾರ್ಡ್ ಬಂದಿದೆ.
ಇದರ ಜೊತೆಗೆ “ಸ್ಪೇನ್” ನಲ್ಲಿ ನಡೆಯುವ ಬರ್ಸಿಲೊನ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಬೆಸ್ಟ್ ಡೈರೆಕ್ಟರ್ ಅವಾರ್ಡ್ ಬಂದಿದೆ.


ಇಷ್ಟೇ ಅಲ್ಲ, ನಾವಡ ಅಂತಾರಾಷ್ಟ್ರೀಯ
ಚಿತ್ರೋತ್ಸವದಲ್ಲೂ 1600 ಸಿನಿಮಾಗಳ ಪೈಕಿ ಈ ಚಿತ್ರದ ನಿರ್ದೇಶಕರಿಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಬಂದಿದ್ದು ವಿಶೇಷ. ಹಾಗೆಯೇ ಲಂಡನ್ ಇಂಡಿಪೆಂಡೆಂಟ್ ಫಿಲ್ಮ್ ಫೆಸ್ಟಿವಲ್ ನಲ್ಲೂ ಬೆಸ್ಟ್ ಆ್ಯಕ್ಟರ್ ಹಾಗು ಬೆಸ್ಟ್ ಡೈರೆಕ್ಟರ್ ಪ್ರಶಸ್ತಿ ಬಂದಿದೆ.

ರೇ( ಸತ್ಯಜಿತ್‌ ರೇ) ಸಿನಿಮೋತ್ಸವದಲ್ಲೂ ಬೆಸಗಸಟ್ ಫ್ಯೂಚರ್ ಫಿಲ್ಮ್ ಮತ್ತುಬೆಸ್ಟ್ ಡೈರೆಕ್ಟರ್ ಅವಾರ್ಡ್ ಸಿಕ್ಕಿದೆ. ಮುಂಬೈ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಬೆಸ್ಟ್ ರೈಟರ್
ಅವಾರ್ಡ್ ಬಂದಿದ್ದು, . ಮೊದಲನೇ ವರ್ಷದ ಕಾಶಿ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಅತ್ಯತ್ತಮ ಚಿತ್ರಕಥೆ ಮತ್ತು ಸಂಭಾಷಣೆಗೆ ಪ್ರಶಸ್ತಿ ಲಭಿಸಿದೆ.
ಏಷ್ಯನ್ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ನಲ್ಲಿ ನಾಯಕ ವರ್ಧನ್ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಬಂದಿರುವುದು ವಿಶೇಷ.
ಈಗಾಗಲೇ ಇದರ ಜೊತೆಗೆ ಸಾಕಷ್ಟು ವಿದೇಶಿ ಚಿತ್ರೋತ್ಸವದಲ್ಲಿ ಸಿನಿಮಾಗೆ ಪ್ರಶಸ್ತಿ ಸಂದಿದೆ ಎಂಬುದು ವಿಶೇಷ

ಇನ್ನೊಂದು ವಿಶೇಷವೆಂದರೆ, ನಿರ್ದೇಶಕ ಸೇರಿದಂತೆ ಹೀರೋ ವರ್ಧನ್, ಬಲ ರಾಜ್ವಾಡಿ, ಶೀಬಾ ಮೂರ್ತಿ,ಸಿದ್ದು ಪೂರ್ಣಚಂದ್ರ ಅವರಿಗೂ ಪ್ರಶಸ್ತಿಗಳು ಸಂದಿವೆ. ಇನ್ನು ಸ್ವಲ್ಪ ದಿನಗಳಲ್ಲಿ ಈ ಚಿತ್ರ ಪ್ರಶಸ್ತಿಗಳಲ್ಲಿ ನೂರರ ಗಡಿ ದಾಟಲಿದೆ ಎಂಬ ವಿಶ್ವಾಸ ಚಿತ್ರತಂಡದ್ದು.

Categories
ಸಿನಿ ಸುದ್ದಿ

ಅಂತೂ ಇಂತೂ ಸಿನಿಮಾ ಮಂದಿಗೂ ಸಿಗಲಿದೆ ವ್ಯಾಕ್ಸಿನ್! ಮೇ 31ರಿಂದ ಚಿತ್ರರಂಗದವರಿಗಾಗಿ ವ್ಯಾಕ್ಸಿನ್ ಡ್ರೈವ್ ಶುರು…

ಒಂದು ಕಡೆ ಕೊರೊನಾ ಕಾಟ, ಇನ್ನೊಂದು ಕಡೆ ವ್ಯಾಕ್ಸಿನ್ ಗಾಗಿ ಪರದಾಟ…
ಇದು ಸದ್ಯದ ಪರಿಸ್ಥಿತಿ. ಹೌದು, ಈಗ ವ್ಯಾಕ್ಸಿನ್ ಕೊರತೆ ಹೆಚ್ಚಿದೆ. ಕೆಲವರಿಗೆ ಸಿಕ್ಕರೆ, ಇನ್ನೂ ಕೆಲವರಿಗೆ ಸಿಗುತ್ತಿಲ್ಲ. ಇದಕ್ಕೆ ಸಿನಿಮಾ ಮಂದಿಯೂ ಹೊರತಲ್ಲ. ಸರ್ಕಾರ ಎಲ್ಲರಿಗೂ ವ್ಯಾಕ್ಸಿನ್ ತಲುಪಿಸಲು ಹರಸಾಹಸ ಮಾಡುತ್ತಲೇ ಇದೆ. ಒಂದೊಂದು ಕ್ಷೇತ್ರದವರು ಸ್ವತಃ ಸರ್ಕಾರಕ್ಕೆ ಮನವಿ ಮಾಡಿ‌ ವ್ಯಾಕ್ಸಿನ್ ವ್ಯವಸ್ಥೆ ಮಾಡಿಕೊಳ್ಳುತ್ತಿದೆ. ಈಗ ಕನ್ನಡ ಚಿತ್ರರಂಗ ಕೂಡ ಸರ್ಕಾರದ ಗಮನ ಸೆಳೆದಿದ್ದು, ಸಿನಿಮಾದ ಎಲ್ಲಾ ಕಲಾವಿದರಿಗೂ ವ್ಯಾಕ್ಸಿನ್ ವ್ಯವಸ್ಥೆ ಮಾಡಿದೆ.

ಮೇ 31, ಮತ್ತು ಜೂನ್ 1ರ ಸೋಮವಾರ ಮತ್ತು ಮಂಗಳವಾರ ಈ ಎರಡು ದಿನ ಬೆಳಗ್ಗೆ 10.00 ಗಂಟೆಯಿಂದ ಸಂಜೆ 5.00 ಗಂಟೆಯವರೆಗೂ ಚಾಮರಾಜಪೇಟೆಯಲ್ಲಿರುವ ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದಲ್ಲಿ “ಕೋವಿಡ್ ಶಿಲ್ಡ್” ಲಸಿಕೆಯನ್ನು ಉಚಿತವಾಗಿ ನೀಡಲಾತ್ತಿದೆ.
ಹದಿನೆಂಟು ವರ್ಷ ಮೇಲ್ಪಟ್ಟ ಎಲ್ಲ ಕಲಾವಿದರು ಇದರ ಉಪಯೋಗ ಪಡೆದು ಕೊಳ್ಳಬೇಕೆಂದು ಮನವಿ ಮಾಡಲಾಗಿದೆ.


ಈ ಸಂದರ್ಭದಲ್ಲಿ ಹಾಜರಾಗುವ ಪ್ರತಿಯೊಬ್ಬರೂ ಕಡ್ಡಾಯವಾಗಿ ಆಧಾರ್ ಕಾರ್ಡ್ ತರಬೇಕು, ಮಾಸ್ಕ್ ಧರಿಸಿರಬೇಕು ಮತ್ತು
ಸಾಮಾಜಿಕ ಅಂತರವನ್ನು ಕಾಯ್ದು ಕೊಳ್ಳಬೇಕು.
ಮೇ 31 ರ ಬೆಳಗ್ಗೆ 11.30ಕ್ಕೆ ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ್,
ಸಂಸದೆ ಸುಮಲತಾ ಅಂಬರೀಶ್, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಹಿರಿಯ ಕಲಾವಿದ ದೊಡ್ಡಣ್ಣ ಸೇರಿದಂತೆ ಆರೋಗ್ಯ ಇಲಾಖೆಯ ಪ್ರಮುಖ ಅಧಿಕಾರಿ ಹಾಗೂ ಬಿಬಿಎಂಪಿ ಕಮಿಷನರ್ ಕೂಡ ಹಾಜರಿರುತ್ತಾರೆ ಎಂದು
ನಿರ್ದೇಶಕಿ ರೂಪ ಅಯ್ಯರ್ ಶ್ರೀವತ್ಸ ತಿಳಿಸಿದ್ದಾರೆ.

Categories
ಸಿನಿ ಸುದ್ದಿ

ಲವ್ ಮಿ ಆರ್ ಹೇಟ್ ಮಿ ಶೀರ್ಷಿಕೆ ಗೊಂದಲ! ಯಾರಿಗೆ ಸಲ್ಲುತ್ತೆ ಈ ಟೈಟಲ್?

ಇತ್ತೀಚೆಗಷ್ಟೇ ಡಾರ್ಲಿಂಗ್ ಕೃಷ್ಣ ಮತ್ತು ರಚಿತರಾಮ್ ಅಭಿನಯದ ಹೊಸ ಚಿತ್ರಕ್ಕೆ ‘ ಲವ್ ಮಿ ಆರ್ ಹೇಟ್ ಮಿ’ ಎಂದು ಹೆಸರಿಡಲಾಗಿದೆ ಅಂತ ಹೇಳಲಾಗಿತ್ತು.
ಈಗ ಆ ಚಿತ್ರದ ಶೀರ್ಷಿಕೆ ಕುರಿತು ತಕರಾರು ಎದ್ದಿದೆ. ಇನ್ನೊಂದು ತಂಡ ಆ ಶೀರ್ಷಿಕೆಯ ಹೆಸರಲ್ಲಿ ಚಿತ್ರ ಮಾಡಲು ಹೊರಟಿರುವ ಸುದ್ದಿ ಹೊರಬಿದ್ದಿದೆ.
ಹೌದು, ಈ ಕುರಿತಂತೆ ನಿರ್ದೇಶಕ ವಿ.ದೇವದತ್ತ ಅವರು ‘ಲವ್ ಮಿ ಆರ್ ಹೇಟ್ ಮಿ’ ಶೀರ್ಷಿಕೆಯಡಿ ಸಿನಿಮಾ ಮಾಡುತ್ತಿರುವ ಬಗ್ಗೆ ಸ್ಪಷ್ಟಪಡಿಸಿದ್ದಾರೆ.

ಆ ಬಗ್ಗೆ ಹೇಳಿರುವ ಅವರು, ಈ ಹಿಂದೆ “ಸೈಕೊ” ಎಂಬ ಕನ್ನಡ ಚಲನಚಿತ್ರವನ್ನು ನಿರ್ದೇಶಿಸಿದ್ದು ಈ ಚಿತ್ರದಿಂದಲೇ ನಾನು ಗುರುತಿಸಿಕೊಡಿದ್ದೇನೆ. ಈಗ “ಶ್ರೀ ವೆಂಕಟೇಶ್ವರ ಇಂಟರ್ ನ್ಯಾಷನಲ್” ಎಂಬ ಸಂಸ್ಥೆಯಡಿಯಲ್ಲಿ ಶ್ರೀ ರವಿಕಿರಣ್ ಬಿ. ಕೆ. ಅವರ ನಿರ್ಮಾಣದಲ್ಲಿ “ಲವ್ ಮಿ ಆರ್ ಹೇಟ್ ಮಿ” ಎಂಬ ಕನ್ನಡ ಚಲನಚಿತ್ರವನ್ನು ನಿರ್ದೇಶಿಸಲು ಅಣಿಯಾಗಿದ್ದು, ಈ ಚಿತ್ರದ ಚಿತ್ರೀಕರಣಕ್ಕೆ ಸಂಬಂಧ ಪಟ್ಟಂತೆ ತಯಾರಿಯಲ್ಲಿ ಇರುವಾಗ ಕೋವಿಡ್ ಸಮಸ್ಯೆಯಿಂದ ಉಂಟಾದ ಲಾಕ್ಡೌನ್ ನಿಂದಾಗಿ ಚಿತ್ರೀಕರಣವನ್ನು ಮುಂದೂಡಬೇಕಾಯಿತು, ಈ ಸಂದರ್ಭದಲ್ಲಿ “ಆಕ್ಷನ್ ಕಟ್ ಎಂಟರ್ಟೈನ್ಮೆಂಟ್ ” ಎಂಬ ಬ್ಯಾನರ್ ಅಡಿಯಲ್ಲಿ ಶ್ರೀ ದೀಪಕ್ ಗಂಗಾಧರ್ ರವರು ನಟರಾದ ಡಾರ್ಲಿಂಗ್ ಕೃಷ್ಣ ಹಾಗೂ ರಚಿತಾ ರಾಮ್ ಅಭಿನಯದಲ್ಲಿ “ಲವ್ ಮಿ ಆರ್ ಹೇಟ್ ಮಿ” ಎಂಬ ನಮ್ಮ ಸಂಸ್ಥೆಯ ಶೀರ್ಷಿಕೆಯಡಿಯಲ್ಲಿ ಕನ್ನಡ ಚಿತ್ರವನ್ನು ನಿರ್ಮಾಣ ಮಾಡ ಹೊರಟಿರುವುದು ವಿವಿಧ ಮಾಧ್ಯಮಗಳ ಮೂಲಕ ಈ ದಿನ ನಮ್ಮ ಗಮನಕ್ಕೆ ಬಂದಿರುತ್ತದೆ.


ಈ ಶೀರ್ಷಿಕೆಯು ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಯಲ್ಲಿ ನಮ್ಮ ಸಂಸ್ಥೆಯ ಹೆಸರಿನಲ್ಲಿ ದಿನಾಂಕ: ನವೆಂಬರ್ 30, 2020 ರಂದು ನೋಂದವಣೆಗೊಂಡಿದ್ದು, ಈ ಸಂಬಂಧ ಅನುಮತಿಯನ್ನು ಪಡೆದಿರುತ್ತೇವೆ ಹಾಗೂ ಈ ಚಿತ್ರದ ಚಿತ್ರೀಕರಣವನ್ನು ಪ್ರಾರಂಭಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಯಿಂದ ದಿನಾಂಕ ಜನವರಿ, 4, 2021 ರಂದು ಸೂಕ್ತ ಅನುಮತಿಯನ್ನು ಪಡೆದಿರುತ್ತೇವೆ.

ಲಾಕ್ ಡೌನ್ ಮುಗಿದ ನಂತರ ಈ ಚಿತ್ರಕ್ಕೆ ಸಂಬಂದ ಪಟ್ಟ ಪ್ರಕಟಣೆಗಳನ್ನು ಮಾಧ್ಯಮಗಳಿಗೆ ನೀಡಿ ಪ್ರಚಾರವನ್ನು ಪ್ರಾರಂಭಿಸಬೇಕೆಂಬ ಯೋಜನೆಯಲ್ಲಿರುವಾಗ, ಈ ಘಟನೆ ನಡೆದಿರುತ್ತದೆ. ಮೇಲ್ಕಂಡ ವಿಷಯಕ್ಕೆ ಸ್ಪಷ್ಟನೆಯನ್ನು ನೀಡುತ್ತಾ ಸಂಬಂಧಪಟ್ಟ ಸೂಕ್ತ ದಾಖಲೆಗಳನ್ನು ತಮ್ಮ ಅವಾಗಹನೆಗಾಗಿ ನೀಡುತ್ತಿದ್ದೇವೆ ಹಾಗೂ ತಮ್ಮಿಂದ ಸೂಕ್ತ ಸಹಕಾರವನ್ನು ಬಯಸುತ್ತಿದ್ದೇವೆ’ ಎಂದಿದ್ದಾರೆ ನಿರ್ದೇಶಕರು.

ಸದ್ಯ ವಾಣಿಜ್ಯ ಮಂಡಳಿಯಲ್ಲಿ ಡಾರ್ಲಿಂಗ್ ಕೃಷ್ಣ ಅಭಿನಯದ ಸಿನಿಮಾಗೂ ಅದೇ ಹೆಸರಿಡಲಾಗಿದೆ. ಮುಂದೆ ಏನಾಗುತ್ತೆ ಅನ್ನೋದನ್ನು ಕಾದು ನೋಡಬೇಕಿದೆ.

error: Content is protected !!