ಕೊರೊನಾ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಸಿನಿಮಾ ಕಾರ್ಮಿಕರಿಗೆ ಈಗಾಗಲೇ ಚಿತ್ರರಂಗದ ಅನೇಕ ಸ್ಟಾರ್‌ಗಳು ನೆರವಿಗೆ ಧಾವಿಸಿದ್ದು ನಿಮಗೆಲ್ಲ ಗೊತ್ತೇ ಇದೆ. ಸುದೀಪ್, ಶಿವರಾಜಕುಮಾರ್, ರಾಗಿಣಿ, ಉಪೇಂದ್ರ, ಸಂಚಾರಿ ವಿಜಯ್, ನೀನಾಸಂ ಸತೀಶ್ ಸೇರಿದಂತೆ ಅನೇಕರು ಈಗಾಗಲೇ ಫೀಲ್ಡಿಗಿಳಿದು ಸಿನಿಮಾ ಸೇರಿದಂತೆ ಇತರೆ ಕ್ಷೇತ್ರಗಳಲ್ಲಿನ ಜನರ ನೆರವಿಗೆ ನಿಂತಿದ್ದಾರೆ. ಈ ನಡುವೆ ಈಗ ರಾಕಿಂಗ್ ಸ್ಟಾರ್ ದೊಡ್ಡ ಮಟ್ಟದಲ್ಲೇ 3 ಸಾವಿರ ಮಂದಿ ಸಿನಿಮಾ ಕಾರ್ಮಿಕರ ನೆರವಿಗೆ ಬಂದಿರುವುದು ಚಿತ್ರೋದ್ಯಮದಲ್ಲಿ ಸಂಚಲನ ಮೂಡಿಸಿದೆ. ಎಲ್ಲರೂ ಯಶ್ ಅವರ ಮಹತ್ ಕಾರ್ಯಕ್ಕೆ ಮೆಚ್ಚುಗೆ ಹೇಳಿದ್ದಾರೆ.ʼ ಇದು ನಿಮ್ಮಿಂದಾಗುತ್ತಿರುವ ಮಹತ್ ಕಾರ್ಯ. ಧನ್ಯವಾದಗಳು ಯಶ್. ಇಂತಹ ಮತ್ತಷ್ಟು ಮಹತ್ಕಾರ್ಯಗಳು ತಮ್ಮಿಂದ ನಡೆಸಲು ಆ ಭಗವಂತ ತಮಗೆ ಶಕ್ತಿ ನೀಡಲಿ ಎಂದು ನಟ ಉಪೇಂದ್ರ ಅವರು ಟ್ವಿಟ್ ಮಾಡಿದ್ದಾರೆ. ಹಾಗೆಯೇ ನಟರಾದ ಸಂಚಾರಿ ವಿಜಯ್ ಕೂಡ ಯಶ್ ಅವರ ನೆರವಿನ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ಚಿತ್ರೋದ್ಯಮದ ಪರವಾಗಿ ಧನ್ಯವಾದ ತಿಳಿಸಿದ್ದಾರೆ.
ಇದು ದೊಡ್ಡ ಕಾರ್ಯ. ಇಷ್ಟು ದೊಡ್ಡ ಮಟ್ಟದಲ್ಲಿ ಸಿನಿಮಾ ಕಾರ್ಮಿಕರ ನೆರವಿಗೆ ಬರುವುದಕ್ಕೂ ದೊಡ್ಡ ಮನಸ್ಸು ಇರಬೇಕು. ಅದು ನಿಮ್ಮಲ್ಲಿದೆʼ ಅಂತ ನಟ ಸಂಚಾರಿ ವಿಜಯ್ ಸೋಷಲ್ ಮೀಡಿಯಾದಲ್ಲಿ ರಿಯಾಕ್ಟ್ ಮಾಡಿದ್ದಾರೆ. ಅವರಂತೆಯೇ ರವಿಶಂಕರ್ ಗೌಡ ಕೂಡ ಫೇಸ್ ಬುಕ್ ನಲ್ಲಿ ಮೆಚ್ಚುಗೆ ಸೂಚಿಸಿದ್ದಾರೆ. ಕನ್ನಡದ ಅನೇಕ ಸ್ಟಾರ್ ಗಳು ಕೂಡ ಯಶ್ ಕಾರ್ಯಕ್ಕೆ ಮೆಚ್ಚುಗೆ ಹೇಳಿದ್ದಾರೆ. ವಿಶೇಷವಾಗಿ ಸಿನಿಮಾ ಕಾರ್ಮಿಕರ ವಲಯದಿಂದ ಯಶ್ ಅವರಿಗೆ ಅಭಿನಂದನೆಯ ಮಹಾಪೂರವೇ ಹರಿದು ಬಂದಿದೆ.
ನಿರ್ಮಾಪಕರಾದ ಸಾ.ರಾ. ಗೋವಿಂದು, ಕಲಾವಿದರ ಸಂಘದ ದೊಡ್ಡಣ್ಣ ಸೇರಿದಂತೆ ಎಲ್ಲರೂ ಯಶ್ ಕಾರ್ಯವನ್ನು ಮೆಚ್ಚಿಕೊಂಡಿದ್ದಾರೆ. ಹಾಗೆಯೇ ಜನ ಕಾರ್ಯವನ್ನು ಮುಕ್ತ ಕಂಠದಿಂದ ಬಣ್ಣಿಸಿರುವ ಜನ ಸಾಮಾನ್ಯರು, ಕಷ್ಟ ಪಟ್ಟು ದುಡಿದ ಹಣದಲ್ಲಿ ಒಬ್ಬ ಸ್ಟಾರ್ ಇಷ್ಟೆಲ್ಲ ನೆರವಾಗಲು ಸಾಧ್ಯವಾಗುವುದಾದರೆ,
ಹಲವಾರು ವರ್ಷಗಳಿಂದ ರಾಜಕಾರಣದಲ್ಲಿದ್ದು. ಸಾವಿರಾರು ಕೋಟಿಗಳಷ್ಟು ಆಸ್ತಿ-ಅಂತಸ್ತು ಸಂಪಾದಿಸಿಕೊಂಡಿರುವ ನಾಡಿನ ರಾಜಕಾರಣಿಗಳಿಗೆ, ಸಚಿವರಿಗೆ ಈ ರೀತಿಯ ನೆರವು ನೀಡುವುದು ಯಾಕೆ ಆಗುತ್ತಿಲ್ಲ? ಎಂದು ತರಾಟೆಗೆ ತೆಗೆದುಕೊಂಡಿರುವುದು ವಿಶೇಷ.