ಯಶ್ ಈಗ ರಿಯಲ್ ಹೀರೋ…
ನಮ್ಮ ಕಲಾವಿದರು, ತಾಂತ್ರಿಕ ವರ್ಗದವರು ಮತ್ತು ಕಾರ್ಮಿಕರ ಅಧಿಕೃತ ಬ್ಯಾಂಕ್ ವಿವರ ತಲುಪಿದ ತಕ್ಷಣವೇ ಇದು ಕಾರ್ಯರೂಪಕ್ಕೆ ಬರಲಿದೆ. ಈ ಸಣ್ಣ ಸಹಾಯ ಈಗ ಎದುರಾಗಿರುವ ಎಲ್ಲ ಕಷ್ಟಗಳಿಗೂ ಪರಿಹಾರ ಎಂಬುದು ನನ್ನ ಭಾವನೆಯಲ್ಲ
ಕೊರನಾ ಎಲ್ಲರ ಬದುಕನ್ನು ಹಾಳು ಮಾಡಿದೆ. ಈಗ ಎಲ್ಲರೂ ಸಂಕಷ್ಟದಲ್ಲಿದ್ದಾರೆ. ಚಿತ್ರರಂಗವನ್ನು ನಂಬಿ ಬದುಕುತ್ತಿರುವ ಮಂದಿ ಕೂಡ ಇದಕ್ಕೆ ಹೊರತಾಗಿಲ್ಲ. ಈಗಾಗಲೇ, ಹಲವು ಸ್ಟಾರ್ ನಟರು ನೋವಲ್ಲಿರುವ ಜನರಿಗೆ ಸ್ಪಂದಿಸುವ ಕೆಲಸ ಮಾಡುತ್ತಿದ್ದಾರೆ. ಈಗ ರಾಕಿಂಗ್ ಸ್ಟಾರ್ ಯಶ್ ಕೂಡ ಸಿನಿಮಾ ಮಂದಿಯ ಕಷ್ಟಕ್ಕೆ ಸ್ಪಂದಿಸುವುದಾಗಿ ಹೇಳಿದ್ದಾರೆ.
ಒಕ್ಕೂಟದಲ್ಲಿರುವ ಸುಮಾರು 3000 ಸಾವಿರಕ್ಕು ಹೆಚ್ಚಿರುವ ಸಿನಿಮಾ ಕಲಾವಿದರು, ತಾಂತ್ರಿಕ ವರ್ಗದವರು ಹಾಗು ಕಾರ್ಮಿಕರ ಅಧಿಕೃತ ಖಾತೆಗಳಿಗೆ ತಲಾ 5000 ಸಾವಿರ ರೂ.ಗಳನ್ನು ಯಶ್ ತಮ್ಮ ಸಂಪಾದನೆಯ ಹಣದಿಂದ ಭರಿಸಲು ನಿರ್ಧರಿಸಿದ್ದಾರೆ…
ಹೌದು, ಯಶ್ ಇಂಥದ್ದೊಂದು ಒಳ್ಳೆಯ ನಿರ್ಧಾರ ಕೈಗೊಂಡಿದ್ದಾರೆ. ಕೊರೊನಾ ಹೊಡೆತಕ್ಕೆ ತತ್ತರಿಸಿದ್ದವರ ನೋವಿಗೆ ಸ್ಪಂದಿಸುವ ಬಗ್ಗೆ ಹೇಳಿದ್ದಾರೆ ಆ ಕುರಿತು ಯಶ್ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಓವರ್ ಟು ಯಶ್….
‘ಕಣ್ಣಿಗೆ ಕಾಣದ ವೈರಸ್ ಮನುಷ್ಯನ ಬದುಕನ್ನು ಹೆಚ್ಚು ಕಮ್ಮಿ ಬುಡಮೇಲು ಮಾಡಿದೆ. ಅದರಲ್ಲೂ, ಕಳೆದೊಂದು ವರ್ಷದಿಂದ ನನ್ನ ಸಿನಿಮಾ ಕುಟುಂಬ ಅಸಹಾಯಕತೆಯಿಂದ ಕೈ ಕಟ್ಟಿ ಕುಳಿತಿದೆ.
ಹೌದು, ಇದು ಬರೀ ಮಾತನಾಡುವ ಸಮಯವಲ್ಲ
ಸಂಕಷ್ಟದಲ್ಲಿರುವ ಸಿನಿಮಾ ಕುಟುಂಬದ ಜೊತೆ ನಿಲ್ಲುವ ಸಮಯ. ಹಾಗಾಗಿ ಸುಮಾರು, 3000 ಸಾವಿರಕ್ಕೂ ಹೆಚ್ಚಿರುವ ನಮ್ಮ ಸಿನಿಮಾ ಕಲಾವಿದರು, ತಾಂತ್ರಿಕ ವರ್ಗದವರು, ಕಾರ್ಮಿಕರ ಅಧಿಕೃತ ಖಾತೆಗಳಿಗೆ ತಲಾ 5000 ರು.ಗಳನ್ನು ನನ್ನ ಸಂಪಾದನೆಯ ಹಣದಿಂದ ಭರಿಸಲು ನಿರ್ಧರಿಸಿದ್ದೇನೆ.
ಈ ಬಗ್ಗೆ ಈಗಾಗಲೇ ನಮ್ಮ ಒಕ್ಕೂಟದ ಅಧ್ಯಕ್ಷರಾದ ಸಾ.ರಾ.ಗೋವಿಂದು ಮತ್ತು ಪ್ರಧಾನ ಕಾರ್ಯದರ್ಶಿಗಳಾದ ರವೀಂದ್ರನಾಥ ಅವರೊಂದಿಗೆ ಚರ್ಚಿಸಿದ್ದೇನೆ.
ನಮ್ಮ ಕಲಾವಿದರು, ತಾಂತ್ರಿಕ ವರ್ಗದವರು ಮತ್ತು ಕಾರ್ಮಿಕರ ಅಧಿಕೃತ ಬ್ಯಾಂಕ್ ವಿವರ ತಲುಪಿದ ತಕ್ಷಣವೇ ಇದು ಕಾರ್ಯರೂಪಕ್ಕೆ ಬರಲಿದೆ. ಈ ಸಣ್ಣ ಸಹಾಯ ಈಗ ಎದುರಾಗಿರುವ ಎಲ್ಲ ಕಷ್ಟಗಳಿಗೂ ಪರಿಹಾರ ಎಂಬುದು ನನ್ನ ಭಾವನೆಯಲ್ಲ. ಬದಲಿಗೆ ಶಕ್ತಿ ಇರುವ ಹೃದಯವಂತರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಸಂಕಷ್ಟದಲ್ಲಿರುವ ಜನ ಸಮುದಾಯದ ಜೊತೆ ಹೆಗಲಿಗೆ ಹೆಗಲು ಕೊಟ್ಟು ನಿಂತು ಸಹಾಯ ಮಾಡಿದರೆ, ನಾನು ಮಾಡಿದ ಪ್ರಯತ್ನಕ್ಕೂ ಸಾರ್ಥಕತೆ ಬರುತ್ತದೆ ಎಂಬುದು ನನ್ನ ಆಶಯ’ ಎಂದು ಯಶ್ ಟ್ವೀಟ್ ಮಾಡಿದ್ದಾರೆ.
ಅದೇನೆ ಇರಲಿ, ಯಶ್ ಒಂದೊಳ್ಳೆಯ ಕೆಲಸಕ್ಕೆ ಕೈ ಹಾಕಿದ್ದಾರೆ. ಅವರು ಹೇಳಿದಂತೆ ಈ ಸಹಾಯದಿಂದ ಕಷ್ಟಗಳೆಲ್ಲ ಪರಿಹಾರ ಆಗಲ್ಲ. ಆದರೆ, ಬೇರೆಯವರೂ ಹೆಗಲು ಕೊಟ್ಟರೆ, ಇಂತಹ ಪರಿಸ್ಥಿತಿಗೆ ಸಿಲುಕಿದವರಿಗೆ ಕೊಂಚ ನೆರವು ಸಿಕ್ಕೀತು. ಚಿತ್ರರಂಗದವರು ಏನು ಮಾಡುತ್ತಿದ್ದಾರೆ ಎಂಬುದಕ್ಕೆ ಹಲವು ಉದಾಹರಣೆ ಕಣ್ಣ ಮುಂದಿದೆ. ಈಗ ಇಡೀ ಚಿತ್ರರಂಗವೇ ಮೆಚ್ಚುವಂತಹ ಕೆಲಸ ಮಾಡಲು ಹೊರಟಿರುವ ಯಶ್ ಒಳ್ಳೇತನಕ್ಕೆ ಬಣ್ಣದ ಜಗತ್ತು ಮೆಚ್ಚದೇ ಇರದು.