ಸಹಾಯಧನದಲ್ಲೂ ತಾರತಮ್ಯ ಬೇಡ : ಸರ್ಕಾರಕ್ಕೆ ಹಿರಿಯ ರಂಗ ಕಲಾವಿದ ಸಿಧ್ದರಾಜು ಮನವಿ

ಲಾಕ್‌ ಡೌನ್‌ ಹಿನ್ನೆಲೆಯಲ್ಲಿ ಸರ್ಕಾರ ರಂಗ ಕಲಾವಿದರಿಗೆ ಘೋಷಿಸಿರುವ ಸಹಾಯಧನಕ್ಕೆ ವಯೋಮಿತಿ ಫಿಕ್ಸ್‌ ಮಾಡಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.
ನಾಡಿನ ವಿವಿಧಡೆಗಳ ಅನೇಕ ಮಂದಿ ಹಿರಿಯ ರಂಗ ಕಲಾವಿದರು ಸರ್ಕಾರ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಕಿರಿಯ ಕಲಾವಿದರಿಗೆ ಸಿಗದ ಸಹಾಯ ಧನ, ತಮಗ್ಯಾಕೆ ಬೇಕು ಅಂತ ದಾವಣಗೆರೆಯ ಹಿರಿಯ ರಂಗ ಕಲಾವಿದ ಸಿದ್ದರಾಜು, ಶಿವಮೊಗ್ಗ ಸತೀಶ್‌ ಸೇರಿದಂತೆ ಅನೇಕ ಮಂದಿ ಸರ್ಕಾರದ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿ, ಕಿರಿಯರಿಗೆ ಸಿಗದ ಸಹಾಯಧನ ತಮಗೆ ಬೇಡ ಎಂದಿದ್ದಾರೆ.

ರಂಗಭೂಮಿಯಲ್ಲಿ ಕೆಲಸ ಮಾಡುವವರ ನಡುವೆ ವಯಸ್ಸಿನ ಮಿತಿಯಿಲ್ಲ.ಆದರೂ ಸರ್ಕಾರ ಲಾಕ್‌ ಡೌನ್‌ ಹಿನ್ನೆಲೆಯಲ್ಲಿ ಘೋಷಣೆ ಮಾಡಿರುವ ಸಹಾಯಧನಕ್ಕೆ 35 ವರ್ಷ ಮೇಲ್ಪಟ್ಟವರಿಗೆ ಮಾತ್ರ ಅಂತ ವಯೋಮಿತಿ ನಿಗದಿ ಮಾಡಿದೆ. ಆದರೆ, ರಂಗದಲ್ಲಿ ಅವರಷ್ಟೇ ಇಲ್ಲ. ಇಲ್ಲಿ ಹಿರಿಯರ ಹಾಗೆ ಕಿರಿಯರು ಇದ್ದಾರೆ. ಈಗಲೂ ನನ್ನ ಜತೆಗೆ ಸುಮಾರು 29 ವರ್ಷ ವಯಸ್ಸಿನ ಯುವಕರು ರಂಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರಿಗೂ ಸಹಾಯಧನ ನೀಡುವ ಅಗತ್ಯವಿದೆ.

ನಮ್ಮ ಹಾಗೆಯೇ ಅವರು ಕೂಡ ಲಾಕ್‌ ಡೌನ್‌ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿದ್ದಾರೆ. ಅವರಿಗೆ ಸಹಾಯಧನ ನೀಡುವ ಅಗತ್ಯವಿದೆ. ಹಾಗಾಗಿ ಅವರಿಗಿಲ್ಲದ ಸಹಾಯಧನ ನಮಗೆ ಬೇಡ ʼ ಅಂತ ಕಿರಿಯರ ಪರವಾಗಿ ಮಾತನಾಡಿರುವ ರಂಗ ಕರ್ಮಿ ಸಿದ್ದರಾಜು ಅವರು, ಸರ್ಕಾರ ಈ ಬಗ್ಗೆ ಆಲೋಚನೆ ನಡೆಸಬೇಕಿದೆ.

ಲಾಕ್‌ ಡೌನ್‌ ಹಿನ್ನೆಲೆಯಲ್ಲಿ ಘೋಷಣೆ ಮಾಡಿರುವ ಸಹಾಯಧನಕ್ಕೆ ನಿಗದಿ ಮಾಡಿರುವ ನಿರ್ಬಂಧ ತೆಗೆದು ಹಾಕಿ ರಂಗಭೂಮಿಯಲ್ಲಿ ಕೆಲಸ ಮಾಡುವ ಎಲ್ಲರಿಗೂ ಸಹಾಯಧನ ನೀಡಲಿ. ಹಾಗೊಂದು ವೇಳೆ ಸರ್ಕಾರ ಅದೇ ಅಂತಿಮ ಅಂತಂದುಕೊಂಡರೆ, ಕಿರಿಯರಿಗೆ ಇಲ್ಲದ ಸಹಾಯಧನ ತಮಗೂ ಬೇಡ ಎಂದು ಅವರು ಮನವಿ ಮಾಡಿದ್ದಾರೆ.

ಸರ್ಕಾರದ ಧೋರಣೆ ನೋಡಿದರೆ ಮೂವತ್ತೈದು ವರ್ಷ ಕೆಳಗಿರುವ ಕಲಾವಿದರಿಗೆ ಹೊಟ್ಟೆಯಿಲ್ಲ, ಹಸಿವಿಲ್ಲ, ಹೆಂಡತಿ ಮಕ್ಕಳಿಲ್ಲ ಎನ್ನುವ ಹಾಗಿದೆ. ಈ ಐಡಿಯಾವನ್ನು ಸರ್ಕಾರಕ್ಕೆ ಯಾರು ಕೊಟ್ಟರೋ ಗೊತ್ತಿಲ್ಲ. ಇದೊಂದು ಅಸಂಬದ್ದ ವಿಚಾರ ಎಂದು ರಂಗಕರ್ಮಿ ಸತೀಶ್‌ ಹೇಳುತ್ತಾರೆ. ಹಾಗೆಯೇ ಕಿರಿಯರಿಲ್ಲದೆ ರಂಗ ಚಟುವಟಿಕೆಗಳೇ ಇಲ್ಲ ಅಂತಲೂ ಅವರ ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟಿದ್ದಾರೆ.

Related Posts

error: Content is protected !!