ಸೌದೆ ಸಹಾಯಕ್ಕೆ ನಿಂತ ನಿರ್ದೇಶಕ – ಸಂಕಷ್ಟದಲ್ಲಿರೋ 200 ಮಂದಿ ಸಿನಿಮಾ ಕಾರ್ಮಿಕರಿಗೆ ಫುಡ್‌ ಕಿಟ್‌ ವಿತರಣೆಗೆ ಕೊಡಗು ಮಂಜು ರೆಡಿ!

ಯುವ ನಿರ್ದೇಶಕ ಕೊಡುಗು ಮಂಜು, ಕೊರೊನಾದ ಸಂಕಷ್ಟದಲ್ಲಿ ಸಿಲುಕಿರುವ ಅಸಹಾಯಕರಿಗೆ ತಮ್ಮ ಕೈಲಾದಷ್ಟು ನೆರವು ನೀಡಲು ಮುಂದಾಗಿದ್ದಾರೆ. ಈಗಾಗಲೇ ಅವರು ಬೆಂಗಳೂರು ನಗರದ ರುದ್ರಭೂಮಿಗಳಲ್ಲಿ ಶವ ಸುಡಲು ಸೌದೆ ಸಮಸ್ಯೆ ಉಂಟಾಗದಂತೆ ಅನೇಕ ಜನರಿಗೆ ಉಚಿತವಾಗಿ ಸೌದೆ ಸೌಲಭ್ಯ ಕಲ್ಪಿಸಿದ್ದಾರೆ. ಸದ್ದಿಲ್ಲದೆ, ಸುದ್ದಿ ಮಾಡದೆ ಈ ಕೆಲಸವನ್ನು ಅವರು ಯಾವುದೇ ಫಲಾಪೇಕ್ಷೆ ಬಯಸದೆ ಮಾಡಿಕೊಂಡು ಬಂದಿದ್ದಾರೆ. ಈಗಲೂ ಬೆಂಗಳೂರಿನ ಯಾವುದೇ ರುದ್ರಭೂಮಿಯಲ್ಲಿ ಸಾರ್ವಜನಿಕರಿಗೆ ಸೌದೆ ಸಮಸ್ಯೆ ಉಂಟಾದರೆ ತಕ್ಷಣವೇ ತಮ್ಮನ್ನು ಸಂಪರ್ಕ ಮಾಡಿದರೆ ಸಾಕು, ಅವರಿರುವ ಜಾಗಕ್ಕೆ ಅಗತ್ಯದಷ್ಟು ಸೌದೆ ತರಿಸಿಕೊಡುವ ಕೆಲಸ ತಮ್ಮದು ಎನ್ನುತ್ತಾರೆ ಯುವ ನಿರ್ದೇಶಕ ಮಂಜುನಾಥ್‌ ಕೊಡಗು.

ಈ ಕೆಲಸ ಈಗಾಗಲೇ ಯಾವುದೇ ಪ್ರಚಾರ ಇಲ್ಲದೆ ಸಾಗಿದೆ. ಈಗಲೂ ಅದೇ ನಮ್ಮ ಉದ್ದೇಶ. ಪ್ರಚಾರ ಬೇಡ. ಸಂಕಷ್ಟದಲ್ಲಿರುವ ಜನರಿಗೆ ನೆರವಾಗುದಷ್ಟೇ ನಮ್ಮ ಉದ್ದೇಶ. ಒಂದಷ್ಟು ಜನರು ಸೇರಿ ಈ ಕೆಲಸ ಮಾಡುತ್ತಿದ್ದೇವೆ. ನಮ್ಮಿಂದಾಗುವ ಕೆಲಸ ಇಷ್ಟು. ಸಂಕಷ್ಟದಲ್ಲಿರುವ ಜನರಿಗೆ ಏನಾದರೂ ಸಹಾಯ ಮಾಡೋಣ ಅಂದಾಗ ನಮಗೆ ಹೊಳೆದಿದ್ದು ಇದು. ಈಗಲೂ ಇದಕ್ಕೆ ದಯಮಾಡಿ ಯಾವುದೇ ಪ್ರಚಾರ ಬೇಡ. ಯಾಕಂದ್ರೆ ಪ್ರಚಾರ ಅಂದ್ರೆ ನಂಗೆ ಭಯ. ಜನ ಇದ್ರಲ್ಲೂ ಏನಾದ್ರೂ ಅಂದುಕೊಳ್ತಾರೆʼ ಅಂತ ತಮ್ಮ ಕೆಲಸದ ಬಗ್ಗೆ ಹೇಳಿಕೊಳ್ಳುವುದಕ್ಕೂ ಮುಜುಗರ ಪಡುತ್ತಾರೆ ನಿರ್ದೇಶಕ ಮಂಜು.

ಈಗ ಇನ್ನೊಂದು ಹೆಜ್ಜೆ ಮುಂದೆ ಹೋಗಿ, ಸಂಕಷ್ಟದಲ್ಲಿರುವ ಸಿನಿಮಾ ಕಾರ್ಮಿಕರಿಗೆ ಫುಡ್‌ ಕಿಟ್‌ ವಿತರಿಸಲು ಮುಂದಾಗಿದ್ದಾರೆ. ʼ ನಾನು ಕೂಡ ಸಿನಿಮಾ ರಂಗದಲ್ಲಿ ಸಹಾಯಕ ನಿರ್ದೇಶಕನಾಗಿ ಬಂದವನು. ಅವರ ಕಷ್ಟ ಏನು ಅಂತ ನಂಗೂ ಗೊತ್ತು. ಈಗ ಸುಮಾರು 200 ಮಂದಿಗೆ ಫುಡ್‌ ಕಿಟ್‌ ವಿತರಣೆ ಮಾಡುತ್ತಿದ್ದೇವೆ. ಈ ಕೆಲಸ ಶುರುವಾಗಿದೆ. ತೀರಾ ಅಗತ್ಯವಿದ್ದರವರನ್ನು ಸಂಪರ್ಕಿಸಿ, ಫುಡ್‌ ಕಿಟ್‌ ವಿತರಣೆ ಮಾಡುತ್ತಿದ್ದೇವೆ. ಸೂಕ್ತ ಮಾಹಿತಿ ಪಡೆದು ಅವರಿರುವ ಕಡೆಯೇ ಹೋಗಿ ಫುಡ್‌ ಕಿಟ್‌ ವಿತರಣೆ ಮಾಡುತ್ತಿದ್ದೇವೆʼ ಎನ್ನುತ್ತಾರೆ ಮಂಜು.

Related Posts

error: Content is protected !!