ಪತ್ರಕರ್ತ ಹಾಗು ಲೇಖಕ ಡಾ.ಶರಣು ಹುಲ್ಲೂರು ಬರೆದಿರುವ ರೆಬೆಲ್ ಸ್ಟಾರ್ ಅಂಬರೀಶ್ ಅವರ ಬಯೋಗ್ರಫಿ “ಅಂಬರೀಶ್ ವ್ಯಕ್ತಿ ವ್ಯಕ್ತಿತ್ವ ವರ್ಣರಂಜಿತ ಬದುಕು” ಪುಸ್ತಕಕ್ಕೆ ರಾಜ್ಯ ಪ್ರಶಸ್ತಿ ಬಂದಿದ್ದು ಗೊತ್ತೇ ಇದೆ. ಆ ಪುಸ್ತಕ ಓದಿದ ಬಹುತೇಕರು ಮೆಚ್ಚುಗೆ ಸೂಚಿಸಿದ್ದು ಗೊತ್ತೇ ಇದೆ. ಈಗ ಹೊಸ ಸುದ್ದಿ ಅಂದರೆ, ರೆಬೆಲ್ ಸ್ಟಾರ್ ಅಂಬರೀಶ್ ಅವರ ಬಯೋಗ್ರಫಿ “ಅಂಬರೀಶ್ ವ್ಯಕ್ತಿ ವ್ಯಕ್ತಿತ್ವ ವರ್ಣರಂಜಿತ ಬದುಕು” ಪುಸ್ತಕ ಈಗ ಆಡಿಯೋ ರೂಪ ಪಡೆದಿದೆ. ಇದೇ ಮೊದಲ ಸಲ ನಿರ್ದೇಶಕ, ನಟ ರಾಘು ಶಿವಮೊಗ್ಗ ಅವರು, ಅಂಬರೀಶ್ ಅವರ ಬಯೋಗ್ರಫಿಗೆ ಧ್ವನಿ ನೀಡಿದ್ದಾರೆ. ಆ ಕುರಿತು ಅವರೇ ಒಂದಷ್ಟು ಮಾತು ಹಂಚಿಕೊಂಡಿದ್ದಾರೆ.
ಓವರ್ ಟು ರಾಘು ಶಿವಮೊಗ್ಗ
‘ಮಾಧ್ಯಮದ ಬಂಧುಗಳೆ
ಕೋವಿಡ್ 19 ನಮ್ಮೆಲ್ಲರ ಬದುಕನ್ನು ಅತಂತ್ರವಾಗಿಸಿಬಿಟ್ಟಿದೆ. ನೀವೆಲ್ಲರೂ ಕ್ಷೇಮ ಎಂದು ಭಾವಿಸಿರುವೆ. ಈ ಸಂದರ್ಭದಲ್ಲಿ ನನ್ನದೊಂದು ಖುಷಿ ಸಂಗತಿಯನ್ನು ಹಂಚಿಕೊಳ್ಳುತ್ತಿರುವೆ.
ನಾಡಿನ ಸುಪ್ರಸಿದ್ಧ ನಟರು, ನಮ್ಮೆಲ್ಲರ ರೆಬೆಲ್ ಸ್ಟಾರ್ ಅಂಬರೀಶ್ ಅವರ ಬಯೋಗ್ರಫಿ “ಅಂಬರೀಶ್ ವ್ಯಕ್ತಿ ವ್ಯಕ್ತಿತ್ವ ವರ್ಣರಂಜಿತ ಬದುಕು” ಈ ಪುಸ್ತಕವು ಆಡಿಯೋ ರೂಪ ಪಡೆದುಕೊಂಡಿದೆ.
ರಾಘು ಶಿವಮೊಗ್ಗ, ನಿರ್ದೇಶಕ, ನಟ
2018 ರಲ್ಲಿ ಡಾ. ಶರಣು ಹುಲ್ಲೂರು ಅವರು ಬರೆದ ಈ ಪುಸ್ತಕ ಈ ವರ್ಷ ಎರಡನೇ ಮುದ್ರಣ ಕಂಡಿದೆ ಮತ್ತು ಸ್ಟೋರಿ ಟೆಲ್ ಈ ಪುಸ್ತಕವನ್ನು ಆಡಿಯೋ ರೂಪದಲ್ಲಿ ಹೊರತಂದಿದೆ. ಈ ಆಡಿಯೋಗೆ ನಾನು ಧ್ವನಿ ನೀಡಿದ್ದೇನೆ ಎನ್ನುವುದು ಸಂಭ್ರಮದ ಸಂಗತಿ.
ಕಿರುತೆರೆ, ಹಿರಿತೆರೆಯಲ್ಲಿ ನಿರ್ದೇಶಕನಾಗಿ, ನಟನಾಗಿ ಗುರುತಿಸಿಕೊಂಡಿರುವ ನಾನು, ಇದೇ ಮೊದಲ ಬಾರಿಗೆ ಆಡಿಯೋ ಬಯೋಗ್ರಫಿಗೆ ಧ್ವನಿ ನೀಡಿದ್ದು ವಿಶೇಷ. ನಾಡಿನ ಹೆಸರಾಂತ ಸಾಹಿತಿಗಳಾದ ಚಂದ್ರಶೇಖರ್ ಕಂಬಾರ್, ಗಿರೀಶ್ ಕಾರ್ನಾಡ್ ಸೇರಿದಂತೆ ಹಲವು ದಿಗ್ಗಜರ ಪುಸ್ತಕಗಳನ್ನು ಆಡಿಯೋ ರೂಪದಲ್ಲಿ ಹೊರತಂದಿರುವ ಸ್ಟೋರಿ ಟೆಲ್ ಸಂಸ್ಥೆ ನನಗೆ ಇಂಥದ್ದೊಂದು ಅವಕಾಶ ನೀಡಿದೆ.
ಶರಣು ಹುಲ್ಲೂರು, ಪತ್ರಕರ್ತ , ಲೇಖಕ
‘ಚೌಕಬಾರ’ ನನ್ನ ಕಿರುಚಿತ್ರಕ್ಕೆ ಸರ್ಕಾರವೂ ರಾಜ್ಯ ಪ್ರಶಸ್ತಿ ನೀಡಿತ್ತು. ಅಂಬರೀಶ್ ಅವರ ಪುಸ್ತಕವೂ ರಾಜ್ಯ ಪ್ರಶಸ್ತಿ ಪಡೆದಿದೆ. ಹಾಗಾಗಿ ನನಗೆ ಡಬಲ್ ಸಂತಸ ತಂದಿದೆ.
ಅಂಬರೀಶ್ ಅವರ ಬದುಕಿನ ಪುಟಗಳನ್ನು ಓದಿದಾಗ ಥ್ರಿಲ್ ಆಗಿದ್ದೇನೆ. ನನ್ನದೇ ಆದ ಶೈಲಿಯಲ್ಲಿ ಅದನ್ನು ನಿರೂಪಿಸುತ್ತಾ ನಿಮ್ಮೊಳಗೆ ಅಂಬರೀಶ್ ಅವರನ್ನು ದಾಟಿಸುವ ಪ್ರಯತ್ನ ಮಾಡಿದ್ದೇನೆ. ನನ್ನ ಧ್ವನಿ ತಮಗೆಲ್ಲ ಇಷ್ಟ ಆಗಬಹುದು ಎನ್ನುವ ನಂಬಿಕೆ ನನ್ನದು.
ಸದ್ಯ ‘ಪೆಂಟಗನ್’ ಸಿನಿಮಾದ ಒಂದು ಕಥೆಯನ್ನು ನಿರ್ದೇಶಿಸಿ, ಹಲವು ಚಿತ್ರಗಳಲ್ಲ ನಟಿಸುತ್ತಾ ಇಂಥದ್ದೊಂದು ಕೆಲಸ ಮಾಡಲು ಸಾಧ್ಯವಾಗಿದ್ದು ತಮ್ಮೆಲ್ಲರ ಪ್ರೋತ್ಸಾಹದಿಂದಾಗಿ. ಈ ಹೊಸ ಕಾರ್ಯಕ್ಕೂ ತಮ್ಮ ಬೆಂಬಲವಿರಲಿ’ ಎಂದಿದ್ದಾರೆ ನಿರ್ದೇಶಕ, ಹಾಗು ನಟ ರಾಘು ಶಿವಮೊಗ್ಗ.