Categories
ಸಿನಿ ಸುದ್ದಿ

ನಟ ಉಪೇಂದ್ರ ಅವರಿಗೆ ಟ್ವಿಟ್ಟರ್‌ ನಲ್ಲಿ 1 ಮಿಲಿಯನ್‌ ಫಾಲೋವರ್ಸ್‌!

ಸಿನಿಮಾ ಜತೆಗೆ ‘ಉತ್ತಮ ಪ್ರಜಾಕೀಯ’ ಪಕ್ಷದ ಮೂಲಕ ಸಾಮಾಜಿಕ ಕ್ಷೇತ್ರದಲ್ಲೂ ಸಕ್ರಿಯವಾಗಿರುವ ನಟ ಉಪೇಂದ್ರ ಸಾಮಾಜಿಕ ಜಾಲ ತಾಣದಲ್ಲೂ ಅಷ್ಟೇ ಸಕ್ರಿಯವಾಗಿದ್ದಾರೆನ್ನುವುದು ನಿಮಗೂ ಗೊತ್ತು. ರಾಜಕೀಯ ಸೇರಿದಂತೆ ಪ್ರಚಲಿತ ವಿದ್ಯಮಾನಗಳಿಗೆ ಅವರು ಹೆಚ್ಚಾಗಿ ಸೋಷಲ್‌ ಮೀಡಿಯಾದಲ್ಲಿಯೇ ರಿಯಾಕ್ಟ್‌ ಮಾಡುತ್ತಾ ಬರುತ್ತಿದ್ದಾರೆ. ಆ ಮಟ್ಟಿಗೆ ಸೋಷಲ್‌ ಮೀಡಿಯಾದಲ್ಲಿ ಸಕ್ರಿಯವಾಗಿರುವ ಕನ್ನಡದ ಸ್ಟಾರ್‌ ನಟರ ಪೈಕಿ ಅವರು ಒಬ್ಬರು. ಇದೀಗ ರಿಯಲ್ ಸ್ಟಾರ್ ಟ್ವಿಟ್ಟರ್‌ನಲ್ಲಿ 1 ಮಿಲಿಯನ್ ಫಾಲೋವರ್ಸ್ ಹೊಂದುವ ಮೂಲಕ ಮತ್ತೊಂದು ಸಾಧನೆ ಮೂಲಕ ಸುದ್ದಿಯಲ್ಲಿದ್ದಾರೆ. ಈಗಾಗಲೇ ಟ್ವಿಟ್ಟರ್‌ ನಲ್ಲಿ ಅತೀ ಹೆಚ್ಚು ಫಾಲೋವರ್ಸ್‌ ಹೊಂದಿರುವ ಖ್ಯಾತಿ ನಟ ಕಿಚ್ಚ ಸುದೀಪ್‌ ಅವರದ್ದು. ಅದು ಬಿಟ್ಟರೆ ಈಗ ಎರಡನೇ ಸ್ಥಾನ ಉಪೇಂದ್ರ ಅವರದ್ದು. ಸುದೀಪ್ ಅವರಿಗೆ ಟ್ವಿಟ್ಟರ್‌ನಲ್ಲಿ 2.5 ಮಿಲಿಯನ್ ಫಾಲೋವರ್ಸ್ ಇದ್ದಾರೆ. ಈಗ ಎರಡನೇ ಸ್ಥಾನದಲ್ಲಿ ಗುರುತಿಸಿಕೊಂಡಿರುವ ಉಪೇಂದ್ರ ಅವರಿಗೆ 1 ಮಿಲಿಯನ್‌ ಫಾಲೋವರ್ಸ್.‌

ಇನ್ನು ರಾಜ್ಯದಲ್ಲಿ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟ ದರ್ಶನ್‌ ಅವರಿಗೆ ಟ್ವಿಟ್ಟರ್‌ ನಲ್ಲಿ 879 ಕೆ ಫಾಲೋವರ್ಸ್ ಇದ್ದಾರೆನ್ನುವುದು ಅಚ್ಚರಿ.

ನಟ ಉಪೇಂದ್ರ ಟ್ವಿಟ್ಟರ್ ನಲ್ಲಿ ದಿಢೀರ್‌ ಈ ಮಟ್ಟದಲ್ಲಿ ಫಾಲೋವರ್ಸ್‌ ಹೊಂದಿರುವುದಕ್ಕೂ ಕಾರಣವಿದೆ. ಅವರೀಗ ಬರೀ ನಟರು ಮಾತ್ರವಲ್ಲ, ರಾಜಕಾರಣಿಯೂ ಹೌದು. ತಮ್ಮದೇ ‘ಉತ್ತಮ ಪ್ರಜಾಕೀಯ’ ಪಕ್ಷದ ಮೂಲಕ ಸದಾ ಚಟುವಟಿಕೆಗಳಲ್ಲಿರುತ್ತಾರೆ. ಅದು ಕೂಡ ಅವರ ಜನಪ್ರಿಯತೆ ಹೆಚ್ಚಾಗುವಂತೆ ಮಾಡಿದೆ.

Categories
ಸಿನಿ ಸುದ್ದಿ

ನಿರ್ದೇಶಕ ಆರ್. ಚಂದ್ರು ಅವರ ಮಾನವೀಯ ಕಹಾನಿ ; ಸಂಕಷ್ಟದಲ್ಲಿರುವವರಿಗೆ ನೆರವಿನ ಹಸ್ತ ಚಾಚಿದ ಕಬ್ಜ ಟೀಮ್‌

ಕನ್ನಡ ಚಿತ್ರರಂಗದ ಸ್ಟಾರ್‌ ನಿರ್ದೇಶಕ ಆರ್‌.ಚಂದ್ರು, ಸಿನಿಮಾ ಚಟುವಟಿಕೆಗಳ ಆಚೆ ಈಗ ಮತ್ತೊಂದು ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ಕೊರೊನಾ ಎರಡನೇ ಅಲೆಯಲ್ಲಿ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿರುವವರ ನೆರವಿಗೆ ಧಾವಿಸಿದ್ದಾರೆ. ನಟ ಉಪೇಂದ್ರ ಅವರ ಸಹಯೋಗದೊಂದಿಗೆ ಈಗ ಸಿನಿಮಾ ರಂಗದ ಮಾಧ್ಯಮದ ಮಿತ್ರರಿಗೆ ಫುಡ್‌ ಕಿಟ್‌, ತರಕಾರಿ ವಿತೆಇಸಿ ಮಾನವೀಯತೆ ಮೆರೆದಿದ್ದಾರೆ. ಹಾಗೆಯೇ ಸಂಕಷ್ಟದಲ್ಲಿರುವ ಸಿನಿಮಾ ಕಾರ್ಮಿಕರಿಗೂ ನೆರವಿನ ಹಸ್ತ ಚಾಚಿದ್ದು, ತಮ್ಮಿಂದ ಸಾಧ್ಯವಾದಷ್ಟು ಸಹಾಯವಾಗುವ ಉದ್ದೇಶ ಹೊಂದಿದ್ದಾರೆ.

ಲಾಕ್‌ ಡೌನ್‌ ಹಿನ್ನೆಲೆಯಲ್ಲಿ ತಮ್ಮ ಊರಿನ ತೋಟದ ಮನೆಯಲ್ಲಿದ್ದ ನಿರ್ದೇಶಕ ಆರ್. ಚಂದ್ರು, ಅಲ್ಲಿಂದಲೇ ತಮ್ಮದೇ ತೋಟ ಹಾಗೂ ಅಕ್ಕಪಕ್ಕದ ರೈತರು ಬೆಳೆದ ತರಕಾರಿಗಳನ್ನು ಖರೀದಿ ಮಾಡುವ ಮೂಲಕ ಅವುಗಳನ್ನು ಸಂಕಷ್ದಟದಲ್ಲಿರುವವರಿಗೆ ವಿತರಣೆ ಮಾಡಿದ್ದಾರೆ. ಇದಕ್ಕೆ ನಟ ಉಪೇಂದ್ರ ಕೂಡ ಸಾಥ್‌ ನೀಡಿದ್ದಾರೆ. ಈಗಾಗಲೇ ಉಪೇಂದ್ರ ಅವರು ತಮ್ಮ ʼಉತ್ತಮ ಪ್ರಜಾಕೀಯʼ ಪಕ್ಷದ ಮೂಲಕ ಕನ್ನಡ ಚಿತ್ರರಂಗ ವಿವಿಧ ವಿಭಾಗಗಳಲ್ಲಿನ ಕಾರ್ಮಿಕರಿಗೆ ಫುಡ್‌ ಕಿಟ್‌ ವಿತರಣೆ ಮಾಡಿದ್ದಾರೆ. ಹಾಗೆಯೇ ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದೆ ನೊಂದ ರೈತರಿಂದ ತರಕಾರಿ ಖರೀದಿ ಮಾಡುವ ಮೂಲಕ ರೈತರಿಗೂ ತಮ್ಮದೇ ರೀತಿಯಲ್ಲಿ ಬೆಂಬಲವಾಗಿ ನಿಂತಿದ್ದಾರೆ. ಈಗ ನಿರ್ದೇಶಕ ಆರ್. ಚಂದ್ರು ಜತೆಗೆ ಸೇರಿಕೊಂಡು ಸಿನಿಮಾ ಪತ್ರಕರ್ತರ ನೆರವಿಗೆ ಧಾವಿಸಿರುವುದು ವಿಶೇಷ.

ʼ ಇದು ದಾನ, ನೆರವು, ಸಹಾಯ ಎನ್ನುವುದಕ್ಕಿಂತ ಇದೊಂದು ಮನುಷ್ಯತ್ವದ ಕೆಲಸ. ನಾವೇನೆ ಆಗಿದ್ದರೂ, ಮೊದಲು ಮನುಷ್ಯರಾಗಿರಬೇಕು. ನಟ ಉಪೇಂದ್ರ ಅವರು ನಂಗೆ ವಿಚಾರದಲ್ಲಿ ಸ್ಪೂರ್ತಿ. ಅವರು ಮೊನ್ನೆಯಷ್ಟೇ ನಂಗೆ ಕಾಲ್‌ ಮಾಡಿ, ಚಂದ್ರು ಕೊರೊನಾ ಎರಡನೇ ಅಲೆಯಲ್ಲಿ ತುಂಬಾ ಜನ ಸಂಕಷ್ಟದಲ್ಲಿದ್ದಾರೆ. ಅವರಿಗೆ ನಮ್ಮಿಂದಾದ ಏನಾದರೂ ಸಹಾಯ ಮಾಡ್ಬೇಕು. ನಮ್ಮ ಕೆಲಸಕ್ಕೆ ನೀವು ಕೈಜೋಡಿಸಿದ್ರೆ ಚೆನ್ನಾಗಿರುತ್ತೆ ಅಂದಾಕ್ಷಣವೇ ಸರ್‌, ನೀವು ಕೇಳಬೇಕಿಲ್ಲ ಮಾಡೋಣ ಅಂತ ಹೇಳಿ ಊರಿನಿಂದ ಹೊರಟು ಬಂದೆ. ಇಲ್ಲಿಗೆ ಬಂದಾಗ ನಂಗೆ ತಕ್ಷಣಕ್ಕೆ ಅನಿಸಿದ್ದು ನಮ್ಮೊಂದಿಗೆ ಸದಾ ಸಿನಿಮಾ ರಂಗಕ್ಕೆ ಕೆಲಸ ಮಾಡುವ ಮಾಧ್ಯಮ ಮಿತ್ರರ ಸಂಕಷ್ಟ. ಅವರಿಗೆ ನನ್ನಿಂದಾದ ಸಹಾಯ ಮಾಡುವೆ ಅಂದೆ. ಇಲ್ಲಿ ನಾನು ನೆಪ ಮಾತ್ರ. ದೇವರು ನಮಗೆ ಕೊಡುವ ಶಕ್ತಿ ಕೊಟ್ಟಾಗ ಅದನ್ನು ಕಷ್ಟದಲ್ಲಿದ್ದವರಿಗೆ ನೀಡಬೇಕುʼ ಎನ್ನುತ್ತಾರೆ ನಿರ್ದೇಶಕ ಆರ್‌ .ಚಂದ್ರು.

ಕನ್ನಡ ಚಿತ್ರರಂಗದ ಯಶಸ್ವಿ ಯುವ ನಿರ್ದೇಶಕ ಆರ್‌. ಚಂದ್ರು, ಅವರೇ ಹೇಳುವ ಹಾಗೆ ಉದಾರವಾದಿ. ದೊಡ್ಡ ಸಕ್ಸಸ್‌ ನಡುವೆಯೇ ಸರಳಜೀವಿ. ನಿರ್ದೇಶನದ ಆಚೆ ನಿರ್ಮಾಪಕರಾಗಿಯೂ ದೊಡ್ಡ ಗೆಲವು ಕಂಡಾಗಲೂ ಪ್ರತಿಯೊಬ್ಬರ ಜತೆಗೂ ಒಳ್ಳೆಯ ಸ್ನೇಹ ಇಟ್ಟುಕೊಂಡ ಅಪರೂಪ ಮನುಷ್ಯ. ಕಷ್ಟ ಅಂದಾಗ ಎಲ್ಲರಿಗೂ ನೆರವಾಗಿದ್ದಾರೆ. ಅದು ಸಿನಿಮಾ ರಂಗದಲ್ಲಿನ ಅನೇಕರಿಗೂ ಗೊತ್ತಿದೆ. ಸದ್ಯಕ್ಕೆ ತಮ್ಮದೇ ನಿರ್ಮಾಣ ಸಂಸ್ಥೆಯ ಮೂಲಕ ಉಪೇಂದ್ರ ಅಭಿನಯದಲ್ಲಿ ‘ಕಬ್ಜ’ ದಂತಹ ಬಿಗ್‌ ಬಜೆಟ್‌ ನ ಪ್ಯಾನ್‌ ಇಂಡಿಯಾ ಸಿನಿಮಾ ನಿರ್ಮಾಣದ ಒತ್ತಡದಲ್ಲಿದ್ದರೂ, ಸಂಕಷ್ಟದಲ್ಲಿದ್ದವರಿಗೆ ನೆರವು ನೀಡಿದ್ದಾರೆ. ಕೊರೊನಾ ಮೊದಲ ಅಲೆ ಶುರುವಾಗಿ ಆಗಲೂ ಸಿನಿಮಾ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದಾಗ ತಮ್ಮಿಂದಾದ ಸಹಾಯ ಮಾಡಿದ್ದರು. ಈಗಲೂ ಅದೇ ಕೆಲಸ ಮುಂದುವರೆಸಿದ್ದಾರೆ. ಇದೆಲ್ಲ ಯಾಕೆ? ಹೀಗೆ ?

ʼ ನಂಗೆ ಕಷ್ಟ ಅಂತ ಅಂದವರಿಗೆ ಏನಾದರೂ ಸಹಾಯ ಮಾಡಬೇಕು ಅಂತ ಬಾಲ್ಯದಿಂದಲೂ ಅನಿಸುತ್ತಿತ್ತು. ಆಗ ಜೇಬಲ್ಲಿ ದುಡಿರಲಿಲ್ಲ. ಈಗ ಇದೆ. ಹಾಗಂತ ದಾನ ಶೂರ ಕರ್ಣ ಅಲ್ಲ, ದೊಡ್ಡ ಶ್ರೀಮಂತನೂ ಅಲ್ಲ. ನಾನು ಕೂಡ ನಿಮ್ಮ ಹಾಗೆಯೇ ಸಾಮಾನ್ಯ. ಆದರೆ, ನನಗೆ ಊಟಕ್ಕೆ ಆಗಿ, ಇತತರಿಗೂ ಸಹಾಯ ಮಾಡಬಹುದಾಷ್ಟು ಶಕ್ತಿ ನಾನು ನಂಬಿದ ದೇವರಿಂದ ಸಿಕ್ಕಿದೆ. ಅದರಲ್ಲಿಯೇ ಈಗ ಕಷ್ಟದಲ್ಲಿರುವವರಿಗೆ ನೆರವಾಗುತ್ತಿದ್ದೇನೆ. ಇದರಲ್ಲಿ ಒಂಥರ ಖುಷಿ ಇದೆ. ನೆಮ್ಮದಿ ಇದೆ. ಹಾಗೆ ನೋಡಿದರೆ ಇದು, ಒಂದ್ರೀತಿ ಉಪೇಂದ್ರ ಅವರ ಕೊಡುಗೆಯೂ ಹೌದು. ಒಂದ್ಸಲ ಮಡಿಕೇರಿಯಲ್ಲಿ ಪ್ರವಾಹ ಬಂದಾಗ ಒಂದು ರಾತ್ರಿ ಸುಮಾರು ಎರಡು ಗಂಟೆಗೆ ಉಪೇಂದ್ರ ಅವರು ನಂಗೆ ಕಾಲ್‌ ಮಾಡಿದ್ರು. ಅವತ್ತು ಅವರು ನೊಂದವರ ಪರವಾಗಿ ಮಿಡಿದ ಕಳ ಕಳಿ ನನ್ನನ್ನು ಬಡಿದೆಬ್ಬಿಸಿತು. ಅಲ್ಲಿಂದ ಜನರ ಕಷ್ಟಕ್ಕೆ ಒಂದಷ್ಟು ದುಡಿಮೆಯನ್ನು ಮೀಸಲಾಗಿಡಬೇಕೆಂದು ನಿರ್ಧರಿಸಿದೆʼ ಎನ್ನುತ್ತಾರೆ ನಿರ್ದೇಶಕ ಹಾಗೂ ನಿರ್ಮಾಪಕ ಆರ್. ಚಂದ್ರು.

ಅದೇನೆ ಇರಲಿ, ಸಂಕಷ್ಟದ ಸಮಯದಲ್ಲೂ ಹಲವರ ಸಹಾಯಕ್ಕೆ ನಿಂತ ನಿರ್ದೇಶಕ ಆರ್. ಚಂದ್ರು ಅವರಿಗೆ ಒಳ್ಳೆಯದಾಗಲಿ ಎನ್ನುವುದು ನೀಡಲಿ ಎನ್ನುವುದು ‘ಸಿನಿಲಹರಿ’ ಆಶಯ.

Categories
ಸಿನಿ ಸುದ್ದಿ

ಅಮೃತಮತಿಗೆ ಅತ್ಯುತ್ತಮ ಚಿತ್ರ ಪ್ರಶಸ್ತಿ ; ಮೊದಲ ಸಲ ಸ್ಕ್ರಿಪ್ಟ್ ಗೆ ಪ್ರಶಸ್ತಿ ಪಡೆದ ಬರಗೂರು

ಹದಿಮೂರನೇ ಶತಮಾನದ ಕನ್ನಡ ಕವಿ ಜನ್ನನ ಯಶೋಧರ ಚರಿತೆ’ಯನ್ನು ಆಧರಿಸಿ ಮರು ವ್ಯಾಖ್ಯಾನದ ಮೂಲಕ ಮರು ಸೃಷ್ಟಿರೂಪದಲ್ಲಿ ನಿರ್ಮಾಣಗೊಂಡಅಮೃತ ಮತಿ’ ಕನ್ನಡ ಚಿತ್ರಕ್ಕೆ ವಿದೇಶಿ ಅಂತರರಾಷ್ಟ್ರೀಯ
ಚಿತ್ರೋತ್ಸವಗಳಲ್ಲಿ ಅಪಾರ ಮನ್ನಣೆ ಸಿಗುತ್ತಿದೆ.
ಇಲ್ಲಿಯವರೆಗೆ ಹತ್ತು ಅಂತರರಾಷ್ಟ್ರೀಯ ಚಿತ್ರೋತ್ಸವಗಳಿಗೆ
ಆಯ್ಕೆಯಾಗಿದೆ. ಇತ್ತೀಚೆಗೆ ಜರುಗಿದ ಲಾಸ್ ಏಂಜಲೀಸ್ ಸನ್ ಅಂತರರಾಷ್ಟ್ರೀಯ ಚಿತ್ರೋತ್ಸವ’ದ ಸ್ಪರ್ಧಾ ವಿಭಾಗಕ್ಕೆ ಆಯ್ಕೆಯಾಗಿದ್ದ,ಅಮೃತಮತಿ’ ಚಿತ್ರವು ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಭಾಜನವಾಗಿದೆ.


ಜೊತೆಗೆ ಚಿತ್ರಕತೆ (ಸ್ಕ್ರಿಪ್ಟ್) ರಚನೆಗಾಗಿ ನಿರ್ದೇಶಕ ಬರಗೂರು ರಾಮಚಂದ್ರಪ್ಪ ಅವರು ವೈಯಕ್ತಿಕ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಈ ಹಿಂದೆ ಅಟ್ಲಾಂಟ ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಅಮೃತಮತಿ’ಗೆ ಅತ್ಯುತ್ತಮ ವಿದೇಶಿ ಭಾಷಾ ಚಿತ್ರ ಪ್ರಶಸ್ತಿ ಲಭ್ಯವಾಗಿತ್ತು. ನಾಯಕಿ ಪಾತ್ರದ ಹರಿಪ್ರಿಯ ಅವರು ಎರಡು ಚಿತ್ರೋತ್ಸವಗಳಲ್ಲಿ ಅತ್ಯುತ್ತಮನಟಿ’ ಪ್ರಶಸ್ತಿ ಪಡೆದಿದ್ದರು.

“ನಾನು ನಿರ್ದೇಶಿಸಿದ ಕೆಲವು ಚಿತ್ರಗಳು ಉತ್ತಮ ಚಿತ್ರ ಪ್ರಶಸ್ತಿ ಪಡೆದಿವೆ. ನನಗೆ ನಿರ್ದೇಶನಕ್ಕಾಗಿ ನೀಡುವ
ರಾಜ್ಯದ ಉನ್ನತ ಮನ್ನಣೆಯಾದ ಪುಟ್ಟಣ್ಣ ಕಣಗಾಲ್’ ಪ್ರಶಸ್ತಿ ಬಂದಿದೆ. ನಾನು ರಚಿಸಿದ ಕತೆ, ಗೀತೆ, ಸಂಭಾಷಣೆಗಳಿಗೂ ಪ್ರಶಸ್ತಿಗಳು ಲಭ್ಯವಾಗಿವೆ. ಆದರೆ ಇಲ್ಲಿಯವರೆಗೆ ನಾನು ರಚಿಸಿದ ಚಿತ್ರಕತೆಗೆ (ಸ್ಕ್ರಿಪ್ಟ್) ಒಂದೂ ಪ್ರಶಸ್ತಿ ಬಂದಿರಲಿಲ್ಲ. ಲಾಸ್ ಏಂಜಲೀಸ್ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಮೊದಲ ಬಾರಿಗೆ ಚಿತ್ರಕತೆಗಾಗಿ ನನಗೆ ಪ್ರಶಸ್ತಿ ಬಂದಿರುವುದು ತುಂಬಾ ಸಂತೋಷ ತಂದಿದೆ. ಇದನ್ನು ನಮ್ಮ ಚಿತ್ರತಂಡಕ್ಕೆ ಅರ್ಪಿಸುತ್ತೇನೆ. ಈ ಮೂಲಕ ಇಡೀ ಚಿತ್ರತಂಡದ ಸಹಕಾರವನ್ನು ಗೌರವಿಸುತ್ತೇನೆ' ಎಂದು ನಿರ್ದೇಶಕ ಬರಗೂರು ರಾಮಚಂದ್ರಪ್ಪ ಪ್ರತಿಕ್ರಿಯಿಸಿದ್ದಾರೆ.

ಅಮೃತಮತಿ’ ಚಿತ್ರವು ಇಂಚರ ಪುಟ್ಟಣ್ಣ ಪ್ರೊಡಕ್ಷನ್ ಸಂಸ್ಥೆಯ ಪುಟ್ಟಣ್ಣನವರಿಂದ ನಿರ್ಮಾಣಗೊಂಡಿದೆ.
ಚಿತ್ರದಲ್ಲಿ ಹರಿಪ್ರಿಯ, ಕಿಶೋರ್, ತಿಲಕ್, ಸುಂದರರಾಜ್, ಪ್ರಮೀಳಾ ಜೋಷಾಯ್, ಸುಪ್ರಿಯಾರಾವ್, ಅಂಬರೀಶ್
ಸಾರಂಗಿ, ವತ್ಸಲಾ ಮೋಹನ್ ಮುಂತಾದವರು ಅಭಿನಯಿಸಿದ್ದಾರೆ. ಈ ಚಿತ್ರಕ್ಕೆ ನಾಗರಾಜ್ ಆದವಾನಿ
ಛಾಯಾಗ್ರಹಣ, ಸುರೇಶ್ ಅರಸು ಸಂಕಲನ, ಶಮಿತಾ ಮಲ್ನಾಡ್ ಸಂಗೀತ ನಿರ್ದೇಶನ, ತ್ರಿಭುವನ್ ನೃತ್ಯ ನಿರ್ದೇಶನವಿದೆ.
ಮುಂಬೈನ ಸಂಸ್ಥೆಯೊಂದು ಪ್ರದರ್ಶನದ ಹಕ್ಕುಗಳನ್ನು ಪಡೆದಿದ್ದು ಕೊರೊನಾ ಕಡಿಮೆಯಾದ ಮೇಲೆ ‘ಅಮೃತಮತಿ’ ಚಿತ್ರವು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ.

Categories
ಸಿನಿ ಸುದ್ದಿ

ಚಿತ್ರೋದ್ಯಮಕ್ಕೆ ವಿಶೇಷ ಪ್ಯಾಕೇಜ್ ಘೋಷಿಸುವಂತೆ ಸಿಎಂಗೆ ಫಿಲ್ಮ್ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್ ಮನವಿ

ಕೊವಿಡ್ -19 ಲಾಕ್ ಡೌನ್ ಹಿನ್ನಲೆಯಲ್ಲಿ ತೀವ್ರ ಸಂಕಷ್ಟ ಎದುರಿಸುತ್ತಿರುವ ಕನ್ನಡ ಚಿತ್ರೋದ್ಯಮದ ಕಲಾವಿದರು, ತಂತ್ರಜ್ಞರು, ಕಾರ್ಮಿಕರಿಗೆ ವಿಶೇಷ ಪ್ಯಾಕೇಜ್ ನೀಡುವಂತೆ ಕೋರಿ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್ ಅವರು ಮುಖ್ಯಮಂತ್ರಿ ಗೃಹಕಚೇರಿ ಕೃಷ್ಣದಲ್ಲಿ ಸೋಮವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.

ಕೋವಿಡ್ ಲಾಕ್ ಡೌನ್ ಗೆ ಕನ್ನಡ ಚಿತ್ರೋದ್ಯಮ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಚಿತ್ರರಂಗದ ಲಕ್ಷಾಂತರ ಕಾರ್ಮಿಕರು ದಿನಗೂಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದಾರೆ. ಅವರ ಕುಟುಂಬ ಇಂದು ಬೀದಿಗೆ ಬೀಳುವಂತಾಗಿದೆ. ಆದ್ದರಿಂದ ತಕ್ಷಣವೇ ಚಿತ್ರೋದ್ಯಮದ ನೆರವಿಗೆ ವಿಶೇಷ ಪ್ಯಾಕೇಜ್ ನೀಡುವಂತೆ ಅವರು‌ ಮನವಿಯಲ್ಲಿ ಕೋರಿದ್ದಾರೆ.
2020ರ ಲಾಕ್ ಡೌನ್ ಸಂದರ್ಭದಲ್ಲಿ ಸಂಕಷ್ಟದಲ್ಲಿದ್ದ ಚಿತ್ರೋದ್ಯಮದ 6000ಕುಟುಂಬಗಳಿಗೆ ತಲಾ 3000 ರು. ಮೌಲ್ಯದ ದಿನಸಿ ಪಡಿತರ ರಿಲೆಯನ್ಸ್ ಕೂಪನ್ ಅನ್ನು ಸರ್ಕಾರದ ವತಿಯಿಂದ ನೀಡಿದ್ದನ್ನು ಚಿತ್ರರಂಗ ಸ್ಮರಿಸುತ್ತದೆ. ಅಂತೆಯೇ ಇಂದಿನ ಸಂಕಷ್ಟದ ಸಮಯದಲ್ಲೂ ಕನಿಷ್ಟ ತಲಾ₹ 5000 ಮೌಲ್ಯದ ಆಹಾರ ಪಡಿತರ ಕೂಪನ್ ಹಾಗೂ ಇತರೆ ವಿಶೇಷ ನೆರವನ್ನು ನೀಡಿದಲ್ಲಿ ಚಿತ್ರೋದ್ಯಮಕ್ಕೆ ಕನಿಷ್ಟ ಆಸರೆ ಆದಂತಾಗುತ್ತದೆ ಎಂದು ಅವರು ಕೋರಿದ್ದಾರೆ.
ನಿಯೋಗದಲ್ಲಿದ್ದ ಚಲನಚಿತ್ರ ನಿರ್ಮಾಪಕ ಹಾಗೂ ಕಲಾವಿದರ ಸಂಘದ ಕಾರ್ಯದರ್ಶಿ ರಾಕ್ ಲೈನ್ ವೆಂಕಟೇಶ್ ಅವರು, ಚಿತ್ರೋದ್ಯಮ ಸಾಕಷ್ಟು ಮಂದಿನ ಕೋವಿಡ್ ಲಸಿಕೆ ಪಡೆದಿಲ್ಲ. ಕೆಲವರು ವಯಸ್ಸಿನ ಕಾರಣ ಸರದಿ ಸಾಲಿನಲ್ಲಿ ನಿಲ್ಲಲು ಸಾಧ್ಯವಾಗದೆ ಲಸಿಕೆ ಮೊದಲು ಡೋಸ್ ಪಡೆದಿರುವುದಿಲ್ಲ. ಆದ್ದರಿಂದ ಚಿತ್ರೋದ್ಯಮವನ್ನು ಆದ್ಯತೆ ಎಂದು ಪರಿಗಣಿಸಿ ಕೋವಿಡ್ ಲಸಿಕೆಯನ್ನು ಹಾಕಲು ಪ್ರತ್ಯೇಕವಾದ ವ್ಯವಸ್ಥೆ ಮಾಡುವಂತೆ ಅವರು ಮುಖ್ಯಮಂತ್ರಿಯವರನ್ನು ಕೋರಿದ್ದಾರೆ.

ಮನವಿಯನ್ನು ಸ್ವೀಕರಿಸಿರುವ ಮುಖ್ಯಮಂತ್ರಿ ಯಡಿಯೂರಪ್ಪ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಮೊದಲ ಹಂತದ ಪ್ಯಾಕೇಜ್ ನಲ್ಲಿ ಕೆಲವರು ಬಿಟ್ಟು ಹೋಗಿರುವುದು ಗಮನಕ್ಕೆ ಬಂದಿದ್ದು ಮುಂದಿನ ಪ್ಯಾಕೇಜ್ ಘೋಷಣೆ ಸಂದರ್ಭದಲ್ಲಿ ಚಿತ್ರೋದ್ಯಮಕ್ಕೆ ಆದ್ಯತೆ ನೀಡಲಾಗುವುದು ಎಂದು ಅವರು ತಿಳಿಸಿರುವುದಾಗಿ ಪುರಾಣಿಕ್ ತಿಳಿಸಿದ್ದಾರೆ.
ಮುಖ್ಯಮಂತ್ರಿ ಬಳಿಗೆ ನಿಯೋಗ ತೆರಳಲು ಕೋವಿಡ್ ಸಂದರ್ಭದಲ್ಲಿ ಸಾಧ್ಯವಿಲ್ಲದಿರುವುದರಿಂದ ಅಕಾಡೆಮಿಯೊಂದಿಗೆ ಸಹಕರಿಸಿದ ಚಿತ್ರೋದ್ಯಮದ ಎಲ್ಲ ವಿಭಾಗದ ಸಂಘಟನೆಗಳಿಗೆ, ವಿಶೇಷವಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರು ಹಾಗೂ ನಿರ್ಮಾಪಕ ಸಂಘದ ಅಧ್ಯಕ್ಷರಿಗೆ ಸುನೀಲ್ ಪುರಾಣಿಕ್ ಧನ್ಯವಾದ ತಿಳಿಸಿದ್ದಾರೆ.

Categories
ಸಿನಿ ಸುದ್ದಿ

ದಿಯಾ ಖ್ಯಾತಿಯ ದೀಕ್ಷಿತ್ ಶೆಟ್ಟಿ ಮತ್ತೊಂದು ಸಿನಿಮಾಗೆ ಅಣಿ ; ಕನ್ನಡ, ತೆಲುಗಲ್ಲೂ ಚಿತ್ರ ರಿಲೀಸ್

‘ದಿಯಾ’ ಸಿನಿಮಾ ಮೂಲಕ ಕನ್ನಡ ಚಿತ್ರರಂಗದಲ್ಲಿ ಮೋಡಿ ಮಾಡಿದ ಕಿರುತೆರೆ ನಟ ದೀಕ್ಷಿತ್ ಶೆಟ್ಟಿ, ಇದೀಗ ಮತ್ತೊಂದು ಹೊಸ ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಅಂದಹಾಗೆ, ಆ ಚಿತ್ರದ ಹೆಸರು ‘ಅಣಿ ಮುತ್ತುಗಳು’.

ಹೌದು, ಮೂಲ ತೆಲುಗಿನಲ್ಲಿ ಸಿದ್ಧವಾಗಿರುವ ಕಾಮಿಡಿ ಮತ್ತು ಸಸ್ಪೆನ್ಸ್ ಥ್ರಿಲ್ಲರ್​ ಶೈಲಿಯ ಈ ಸಿನಿಮಾ ಕನ್ನಡಕ್ಕೂ ಡಬ್ ಆಗಿದ್ದು, ಟಾಲಿವುಡ್​ನ ಮೊದಲ ಪ್ರಾಜೆಕ್ಟ್ನಲ್ಲಿ ವಿಶೇಷವಾದ ಪಾತ್ರವನ್ನು ನಿರ್ವಹಿಸಿದ್ದಾರೆ ದೀಕ್ಷಿತ್.
ಚಿತ್ರಮಂದಿರ ಸ್ಟುಡಿಯೋಸ್​ ಬ್ಯಾನರ್​ನಲ್ಲಿ ಅಚ್ಯುತ್ ರಾಮಾರಾವ್ ನಿರ್ಮಾಣ ಮಾಡಿರುವ ‘ಅಣಿ ಮುತ್ತುಗಳು’ ಚಿತ್ರವನ್ನು ಅಭಿಷೇಕ್ ರೆಡ್ಡಿ ನಿರ್ದೇಶನ ಮಾಡಿದ್ದಾರೆ. ಮೂಗ, ಕಿವುಡ ಮತ್ತು ಕುರುಡ ಈ ಮೂವರ ಹಿನ್ನೆಲೆಯಲ್ಲಿ ಇಡೀ ಚಿತ್ರ ಸಾಗಲಿದ್ದು, ಇದರಲ್ಲಿ ಮೂಗನ ಪಾತ್ರದಲ್ಲಿ ದೀಕ್ಷಿತ್ ಶೆಟ್ಟಿ ನಟಿಸಿದ್ದಾರೆ. ಇನ್ನುಳಿದಂತೆ ಕಿವುಡನ ಪಾತ್ರದಲ್ಲಿ ಶ್ರೀನಿವಾಸ್ ರೆಡ್ಡಿ, ಕುರುಡನ ಪಾತ್ರದಲ್ಲಿ ಅಚ್ಯುತ್ ರಾಮ್’ರಾವ್ ನಟಿಸಿದ್ದಾರೆ.

ಕಾಮಿಡಿ ಜತೆಗೆ ರೋಚಕ ತಿರುವುಗಳುಳ್ಳ ಸಸ್ಪೆನ್ಸ್ ಕಥಾಹದರ ಈ ಚಿತ್ರದ್ದು. ಪೊಲೀಸ್ ತನಿಖೆ, ಕೊಲೆ, ಹುಡುಕಾಟ ಇದೆಲ್ಲದರ ನಡುವೆ ಮುದ್ದಾದ ಪ್ರೇಮ ಕಹಾನಿಯೂ ಸಿನಿಮಾದಲ್ಲಿದೆ. ಕಿವಿ ಕೇಳಿಸದ, ಮಾತು ಬಾರದ ಮತ್ತು ಕಣ್ಣು ಕಾಣದ ಮೂವರು ಈ ಚಿತ್ರದಲ್ಲಿ ಸ್ನೇಹಿತರಾಗಿ ಕಾಣಿಸಿಕೊಂಡಿದ್ದಾರೆ. ತ್ವಿಷಾ ಶರ್ಮಾ ನಾಯಕಿಯಾಗಿ ನಟಿಸಿದ್ದು, ದೀಕ್ಷಿತ್​ ಶೆಟ್ಟಿಗೆ ಜೋಡಿಯಾಗಿದ್ದಾರೆ. ನಟಿ ಶ್ವೇತಾ ವರ್ಮಾ ಸಹ ಪ್ರಮುಖ ಪಾತ್ರದಲ್ಲಿದ್ದಾರೆ.


ಇನ್ನುಳಿದಂತೆ ಅಪ್ಪಾರ್ಲ ಸಾಯಿ ಕಲ್ಯಾಣ್ ಕಥೆ, ಚಿತ್ರಕಥೆ ಬರೆದರೆ, ಗರುಡವೇಗ ಅಂಜಿ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಸುರೇಶ್ ಬೊಬ್ಲಿ ಸಂಗೀತ ನೀಡಿದ್ದಾರೆ. ಅಚ್ಯುತ್ ರಾಮಾರಾವ್ ನಿರ್ಮಾಣ ಮಾಡಿದ್ದು, ತೇಝ ಚೀಪುರುಪಲ್ಲಿ, ರವೀಂದ್ರ ರೆಡ್ಡಿ ಅಡ್ಡುಲ ಸಹ ನಿರ್ಮಾಪಕರಾಗಿದ್ದಾರೆ. ಈಗಾಗಲೇ ಚಿತ್ರತಂಡ ಬಹುತೇಕ ಎಲ್ಲ ಕೆಲಸಗಳನ್ನು ಮುಗಿಸಿಕೊಂಡಿದ್ದು, ಇನ್ನೇನು ಲಾಕ್​ಡೌನ್​ ಸಡಿಲವಾಗಿ, ಸಿನಿಮಾ ಬಿಡುಗಡೆಗೆ ಅವಕಾಶ ಸಿಗುತ್ತಿದ್ದಂತೆ ಚಿತ್ರ ಕನ್ನಡ ಮತ್ತು ತೆಲುಗಿನಲ್ಲಿ ತೆರೆಗೆ ಬರಲಿದೆ.

Categories
ಸಿನಿ ಸುದ್ದಿ

ಮಾನವರು ಒಂದಾದರೆ ಈ ಮಹಾಮಾರಿಯದು ಯಾವ ಲೆಕ್ಕ ? ಅಸಹಾಯಕ ಜೀವ ಸಲಹಲು ಪೀಪಲ್ ಫಾರ್ ಪೀಪಲ್ ಸಜ್ಜು!

ಪೀಪಲ್ ಫಾರ್ ಪೀಪಲ್ ತಂಡ ಮತ್ತೆ ತನ್ನ ಕೆಲಸ ಶುರುವಿಟ್ಟುಕೊಂಡಿದೆ. ಕಳೆದ ವರ್ಷ ಸಾಕಷ್ಟು ಸದ್ದು ಮಾಡಿತ್ತು. ಅದರಲ್ಲೂ ಕೊಡಗು ಭಾಗದ ಜನ ಮಳೆಗೆ ತತ್ತರಿಸಿದ್ದಾಗ, ಉತ್ತರ ಕರ್ನಾಟಕ ಭಾಗದ ಮಂದಿ ನೆರೆಗೆ ರೋಸಿ ಹೋಗಿದ್ದಾಗ, ಕೋವಿಡ್ ಸಮಸ್ಯೆಗೆ ನಲುಗಿ ಕಂಗಾಲಾದಂತಹ ಜನರ ಪರವಾಗಿ ನಿಂತು, ಒಂದಷ್ಟು ನೊಂದ‌ ಜೀವಗಳಿಗೆ ಸಹಾಯ ಹಸ್ತ ಚಾಚಿತ್ತು. ಈಗ ಕೊರೊನಾ ಎರಡನೇ ಅಲೆಗೆ ಬೆಚ್ಚಿ ಬಿದ್ದಿರುವ ಶ್ರಮಿಕರ ಹಸಿವು ಅರಿತು ತನ್ನ ಕೈಲಾದ ಸೇವೆ ಮಾಡಲು ನಿಂತಿದೆ.


ಪೀಪಲ್‌ ಫಾರ್ ಪೀಪಲ್ ತಂಡದ ಚಕ್ರವರ್ತಿ ಚಂದ್ರಚೂಡ್ , ತಮ್ಮ ತಂಡ ಕಟ್ಟಿಕೊಂಡು ಈಗಾಗಲೇ ರಸ್ತೆಗಿಳಿದಿದ್ದಾರೆ. ಆ ಕುರಿತು ಒಂದು ಬರಹವನ್ನು ಹಂಚಿಕೊಂಡಿದ್ದಾರೆ. ಅದು ಅವರದೇ ಮಾತಲ್ಲಿ ಕೇಳಿ.

ಓವರ್ ಟು ಚಕ್ರವರ್ತಿ….

‘ಸಿದ್ಧಗಂಗಾ ಶ್ರೀಗಳು ಮತ್ತು ದಾದಾ ವಿಷ್ಣು ಅವರ ಆಶೀರ್ವಾದ ಬೇಡುವ ಮೂಲಕ ‘ಪೀಪಲ್ ಫಾರ್ ಪೀಪಲ್’ ತಂಡ ಮತ್ತಷ್ಟು ಚುರುಕುಗೊಂಡಿದೆ.
ಆಸ್ಪತ್ರೆಯಲ್ಲಿ ಬೆಡ್, ಆಮ್ಲಜನಕ, ರೇಷನ್, ಆಹಾರ ಎಂಥಹದೇ ಕ್ಲಿಷ್ಟಕರ ಸಮಸ್ಯೆ ಇರಲಿ, ಕರೆಮಾಡಿ ಪೀ’ಪಲ್ ಫಾರ್ ಪೀಪಲ್’ ತಂಡದ ಭೀಮರು ಬರುತ್ತಾರೆ.

ಸರಕಾರವೇ ಲಾಬಿ ಮಾಡುತ್ತಿದೆಯಾ? ಕೊನೆಗೂ ಕೈ ಚೆಲ್ಲಿ ಜೀವ ಹೋಗುವ ಸ್ಥಿತಿಯಾ? ಆಸ್ಪತ್ರೆಗಳ ಹಣದಾಹವಾ? ಕರೆ ಮಾಡಿ ಸ್ವತಹ ನಾನೇ ಬರುತ್ತೇನೆ.
ಮಾನವರು ಒಂದಾದರೆ ಈ ಮಹಾಮಾರಿಯದು ಯಾವ ಲೆಕ್ಕ ?
ಇಲ್ಲಿಯ ತನಕ ಆಸ್ಪತ್ರೆ ಸೇವೆಯಲ್ಲಿದ್ದವರು ನಾವು ಈಗ ಬಡವರಿದ್ದಲ್ಲಿಗೇ ನಡೆಯುತ್ತಿದ್ದೇವೆ.
ಜಗತ್ತಿನ ಕಟ್ಟ ಕಡೆಯ ಮನುಷ್ಯ ಇರುವ ತನಕ ಯಾವ ಮತ್ತೊಬ್ಬ ಮನುಷ್ಯನೂ ಅಸಹಾಯಕನಲ್ಲ…
ನಮ್ಮ ಜೊತೆ ಕಲಾವಿದೆ ಪ್ರಿಯಾಂಕ ತಿಮ್ಮೇಶ್ ಕೋಣನಕುಂಟೆ, ಚುಂಚನ್ ಘಟ್ಟ, ಗಣಪತಿ ಪುರದ ಬಡ ಜೀವಗಳ ಹಸಿವಿಗೆ 100 ಕೆಜಿ ಅಕ್ಕಿ ಕೊಡುವ ಮೂಲಕ ಸಾಂಕೇತಿಕವಾಗಿ ನಮ್ಮ ಕೈ ಜೋಡಿಸಿದ್ದಾರೆ.


ಈ ಚಿತ್ರಗಳು, ವಿಡಿಯೋ, ಹೆಸರುಗಳನ್ನು ಪ್ರಸ್ತಾಪಿಸುವುದು ಪ್ರಚಾರಕ್ಕಲ್ಲ, ಕೊಡಗು, ಸುನಾಮಿ, ಉತ್ತರ ಕರ್ನಾಟಕದ ನೆರೆ ಕೊವಿಡ್ ಮುಂತಾದ ಪ್ರಕೃತಿ ವಿಕೋಪಗಳಲ್ಲಿ ಅಸಹಾಯಕರ ಜೊತೆ ನಿಂತು ಬಡಿದಾಡಿದವರು ನಾವು. ಜೀವ ಪರ ಸರಪಳಿ ಹಿರಿದಾಗಲಿ. ಅಸಹಾಯಕ ಜೀವಗಳನ್ನು ಪ್ರೇಮದಿಂದ ಸಲಹೋಣ ಎಂಬ ಆಶಯದೊಂದಿಗೆ ಕಳುಹಿಸುತ್ತಿದ್ದೇವೆ.

ಎಲ್ಲರ ಪರವಾಗಿ
ಡಿ. ಜೆ. ಚಕ್ರವರ್ತಿ ಚಂದ್ರಚೂಡ್

Categories
ಸಿನಿ ಸುದ್ದಿ

ಮಿಡಿದ ಹೃದಯ; ತನ್ನ ಚಿತ್ರದಲ್ಲಿ ದುಡಿದ ಕಾರ್ಮಿಕರ ಖಾತೆಗೆ 5 ಸಾವಿರ ಹಾಕಿದ ಕ್ರೇಜಿ ಪುತ್ರ

ಕೊರೊನಾ ಸಂಕಷ್ಟದಿಂದ ಚಿತ್ರೋದ್ಯಮ ಕೂಡ ರಂಗು ಕಳೆದುಕೊಂಡಿದೆ. ಇಲ್ಲಿ ದುಡಿಯುವ ಅದೆಷ್ಟೋ ಮನಸ್ಸುಗಳು ಕಂಗಾಲಾಗಿವೆ.
ಕಳೆದ ಒಂದು ವರ್ಷದಿಂದಲೂ ಕಾಡುತ್ತಿರುವ ಈ ಸೋಂಕಿನಿಂದ ಕನ್ನಡ ಚಿತ್ರರಂಗದ ಅನೇಕ ಕಾರ್ಮಿಕರು ತತ್ತರಿಸಿದ್ದಾರೆ.
ಈ‌ ನಿಟ್ಟಿನಲ್ಲಿ ಕ್ರೇಜಿಸ್ಟಾರ್ ಪುತ್ರ ಮನುರಂಜನ್ ಕೂಡ ಸಿನಿಮಾ ಕಾರ್ಮಿಕರ ನೋವಿಗೆ ಸ್ಪಂದಿಸಿದ್ದಾರೆ.

ಸದ್ಯದ ಪರಿಸ್ಥಿ ಅರಿತ ಮನುರಂಜನ್, ತಾವು ಅಭಿನಯಿಸಿರುವ ‘ಮುಗಿಲ್ ಪೇಟೆ’ ಚಿತ್ರದಲ್ಲಿ ಕೆಲಸ ಮಾಡಿ ಕಳೆದಒಂದು ವರ್ಷದ ಈ ಪ್ರಾಜೆಕ್ಟ್ ನಲ್ಲಿ ನೂರಕ್ಕೂ ಹೆಚ್ಚು ಜನ ಕೆಲಸ ಮಾಡುತ್ತಿದ್ದಾರೆ.

ಈ ಸಿನಿಮಾಗೆ ತನುಮನ ಅರ್ಪಿಸಿದ ಕಾರ್ಮಿಕರಿಗೆ ನೆರವು ನೀಡಲು ಮುಂದಾಗಿರುವ ಅವರು, ‘ಮುಗಿಲ್ ಪೇಟೆ’ ಸಿನಿಮಾದಲ್ಲಿ ಕೆಲಸ ಮಾಡುತ್ತಿರುವ ಪ್ರತಿಯೊಬ್ಬರಿಗೂ ಮನುರಂಜನ್ ಕಡೆಯಿಂದ 5000 ಹಣವನ್ನು ಅವರ ಖಾತೆಗೆ ಹಾಕಿದ್ದಾರೆ. ಈ ಮೂಲಕ ನನ್ನ ಕೈಲಾದ ಸಹಾಯ ಮಾಡಿದ್ದೇನೆ ಎಂದಿದ್ದಾರೆ ಮನುರಂಜನ್.

Categories
ಸಿನಿ ಸುದ್ದಿ

ಸಂಕಷ್ಟಕ್ಕೆ ಸಿಲುಕಿದವರ ಬದುಕಿಗೆ ಅರ್ಬನ್ ಗುರುಕುಲ ಚಾರಿಟೇಬಲ್ ಟ್ರಸ್ಟ್ ಆಸರೆ ; ಟ್ರಸ್ಟ್ ಸಂಸ್ಥಾಪಕ, ನಿರ್ಮಾಪಕ, ಉದ್ಯಮಿ ಕೃಷ್ಣ ನೇತೃತ್ವದಲ್ಲಿ ಶ್ರಮಿಕರಿಗೆ ದಿನಸಿ ಕಿಟ್ ವಿತರಣೆ

ಕೊರೊನಾ ಸಂಕಷ್ಟ ಸಮಯದಲ್ಲಿ ನೊಂದವರ ಮತ್ತು ಶ್ರಮಿಕರಿಗೆ ತಮ್ಮ ಟ್ರಸ್ಟ್ ಮೂಲಕ ಕಿಟ್ ವಿತರಿಸಿದ ಬಗ್ಗೆ ನಮಗೆ ತೃಪ್ತಿ ಇದೆ – ಟ್ರಸ್ಟ್ ಸಂಸ್ಥಾಪಕ, ನಿರ್ದೇಶಕ ಕೃಷ್ಣ ಪಿ.

ಕೊರೊನಾ ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸಿದೆ. ಅದೆಷ್ಟೋ ಜೀವಗಳು ಹೋಗಿವೆ. ಲೆಕ್ಕವಿಲ್ಲದಷ್ಟು ಕುಟುಂಬಗಳು ತತ್ತರಿಸಿವೆ. ಕಾರ್ಮಿಕರು, ಶ್ರಮಿಕರು, ಕಂಗಾಲಾಗಿದ್ದಾರೆ. ಇಂತಹ ಸಂಕಷ್ಟದ ಕಾಲದಲ್ಲಿ ಸರ್ಕಾರ ಒಂದಷ್ಟು ನೆರವು ನೀಡಲು ಮುಂದಾಗಿದೆ. ಅದಕ್ಕೂ ‌ಮೊದಲೇ ಸಾಕಷ್ಟು ಸಂಘ ಸಂಸ್ಥೆಗಳು ನೊಂದವರ ಸಹಾಯಕ್ಕೆ ನಿಂತಿವೆ. ಆ ಸಾಲಿಗೆ ಹಲವಾರು ಟ್ರಸ್ಟ್ ಗಳು ಕೂಡ ನೆರವಿನ ಹಸ್ತ ಚಾಚಿವೆ. ಹಾಗೆಯೇ, ಬೆಂಗಳೂರು ವಿದ್ಯಾರಣ್ಯಪುರದಲ್ಲಿರುವ ‘ಅರ್ಬನ್ ಗುರುಕುಲ್ ಚಾರಿಟೇಬಲ್ ಟ್ರಸ್ಟ್’ ಮೂಲಕ ಒಂದಷ್ಟು ವರ್ಗದವರಿಗೆ, ಕಾರ್ಮಿಕರಿಗೆ ಅಗತ್ಯ ದಿನಸಿ ದಿನಸಿ ಕಿಟ್ ವಿತರಿಸಿದೆ.

ಹೌದು, ಅರ್ಬನ್ ಗುರುಕಲ್ ಚಾರಿಟೇಬಲ್ ಟ್ರಸ್ಟ್ ನ ಸಂಸ್ಥಾಪಕ ಕೃಷ್ಣ ಅವರ ನೇತೃತ್ವದಲ್ಲಿ ಭಾನುವಾರ ವಿದ್ಯಾರಣ್ಯಪುರ, ತಿಂಡ್ಲು, ಯಲಹಂಕ ಸುತ್ತಮುತ್ತಲಿನ ನೂರಾರು ಕಾರ್ಮಿಕರು, ಶ್ರಮಿಕರನ್ನು ಗುರುತಿಸಿ ದಿನಸಿ ಕಿಟ್ ವಿತರಿಸಲಾಗಿದೆ.

ಕಳೆದ ಮೂರ್ನಾಲ್ಕು ವರ್ಷಗಳಿಂದಲೂ ‘ಅರ್ಬನ್ ಗುರುಕಲ್ ಚಾರಿಟೇಬಲ್ ಟ್ರಸ್ಟ್’ ನ ಸಂಸ್ಥಾಪಕ ಕೃಷ್ಣ ಅವರು ಸಾಕಷ್ಟು ಜನಪರ ಕಾರ್ಯಕ್ರಮಗಳನ್ನು ಮಾಡಿಕೊಂಡು ಬಂದಿದ್ದಾರೆ. ತಮ್ಮ ಟ್ರಸ್ಟ್ ಮೂಲಕ ಆ ಭಾಗದ ಬಡ ಜನರಿಗೆ ಉಚಿತ ಆರೋಗ್ಯ ಶಿಬಿರ, ದಂತ ಚಿಕಿತ್ಸೆ ಶಿಬಿರ ಏರ್ಪಡಿಸಿದ್ದಾರೆ.


ಅಷ್ಟೇ ಅಲ್ಲ ಗುರುಕುಲ ಮೂಲಕ‌ ವಿದ್ಯಾರ್ಥಿಗಳಿಗೆ ಪೇಂಟಿಂಗ್ ಸ್ಪರ್ಧೆ ಸೇರಿದಂತೆ ಇತ್ಯಾದಿ ಕ್ರೀಡಾ ಚಟುವಟಿಕೆಯನ್ನೂ ನಡೆಸಿದೆ. ಈಗ ಕೊರೊನಾ ಸಂಕಷ್ಟದಲ್ಲಿ ನೊಂದವರ ಹಾಗೂ ಕಷ್ಟದಲ್ಲಿ ಸಿಲುಕಿರುವ ಜನರಿಗೆ ಧೈರ್ಯ ತುಂಬುವುದರ ಜೊತೆಗೆ ಆಹಾರದ ಕಿಟ್ , ಸ್ಯಾನಿಟೈಸರ್, ಮಾಸ್ಕ್ ವಿತರಿಸಿ ಆತ್ಮಸ್ಥೈರ್ಯ ತುಂಬಿದೆ. ಇದರ ಜೊತೆಗೆ ಕೊರೊನೊ ಹಾವಳಿ ತಪ್ಪಿಸಬೇಕೆಂಬ ಜಾಗೃತಿ ಮೂಡಿಸುವ ಕೆಲಸವನ್ನೂ ‘ಅರ್ಬನ್ ಗುರುಕುಲ ಚಾರಿಟೇಬಲ್ ಟ್ರಸ್ಟ್ ‘ ತಂಡದ ನಿರ್ದೇಶಕರು, ಸದಸ್ಯರು ಮಾಡಿದ್ದಾರೆ.

ಕೊರೊನಾ ಸಂಕಷ್ಟ ಸಮಯದಲ್ಲಿ ನೊಂದವರ ಮತ್ತು ಶ್ರಮಿಕರಿಗೆ ತಮ್ಮ ಟ್ರಸ್ಟ್ ನ ನಿರ್ದೇಶಕರು ಹಾಗು ಸದಸ್ಯರ ಜೊತೆ ದಿನಸಿ ಕಿಟ್ ವಿತರಿಸಿದ ಟ್ರಸ್ಟ್ ಸಂಸ್ಥಾಪಕ, ನಿರ್ದೇಶಕ ಕೃಷ್ಣ ಪಿ, ‘ಈ ಕೆಲಸದ ಬಗ್ಗೆ ನಮಗೆ ತೃಪ್ತಿ ಇದೆ.

ನಾವು ಟ್ರಸ್ಟ್ ಸ್ಥಾಪಿಸಿದ ಉದ್ದೇಶವೇ ಸಮಾಜಮುಖಿ ಕೆಲಸ ಮಾಡಲು. ಅದರಲ್ಲೂ ನೊಂದವರು, ಶ್ರಮಿಕರು, ಕಾರ್ಮಿಕರ ನೋವಿಗೆ ಸ್ಪಂದಿಸಬೇಕೆಂಬ ಉದ್ದೇಶದಿಂದ. ಈಗಾಗಲೇ ನಮ್ಮ ಟ್ರಸ್ಟ್ ಮೂಲಕ ಸಾಕಷ್ಟು ಕೆಲಸ‌ ಮಾಡಿದ್ದೇವೆ.

ಈಗ ಕೊರೊನಾ ಹೆಮ್ಮಾರಿ ವಿರುದ್ಧ ‌ನಾವೆಲ್ಲ ಹೋರಾಡಬೇಕಿದೆ. ಇಂತಹ ಕಷ್ಟದ ಸಮಯದಲ್ಲಿ ನಾವು ಶ್ರಮಿಕರ ಜೊತೆ ನಿಲ್ಲಬೇಕು. ಮಾನವೀಯ ಮೌಲ್ಯ ಅಳವಡಿಸಿಕೊಡು ನಮ್ಮ ಕೈಲಾದಷ್ಟು ಸೇವೆ ಮಾಡಬೇಕು ಅನ್ನೋದಷ್ಟೇ ನಮ್ಮ ಉದ್ದೇಶ.

ಮುಂದಿನ‌ ದಿನಗಳಲ್ಲಿ ಇನ್ನೂ ಹಂತ ಹಂತವಾಗಿ ಟ್ರಸ್ಟ್ ಮೂಲಕ ಹಲವು ವಿಶೇಷ ಕಾರ್ಯಕ್ರಮ ಮೂಲಕ ಶ್ರಮಿಕರ ಕಷ್ಟಕ್ಕೆ ಸ್ಪಂದಿಸುವ ಕೆಲಸ‌ನಡೆಯಲಿದೆ ಎಂಬುದು ಕೃಷ್ಣ ಅವರ ಮಾತು.

ಅಂದಹಾಗೆ , ಕೃಷ್ಣ ಅವರು ಉದ್ಯಮಿಯೂ ಹೌದು. ಜೊತೆಗೆ ಸಿನಿಮಾ ನಿರ್ಮಾಪಕರೂ ಕೂಡ ಕನ್ನಡ ಚಿತ್ರರಂಗದಲ್ಲಿ ಸದಭಿರುಚಿಯ ಚಿತ್ರವನ್ನು ಕಟ್ಟಿಕೊಡಬೇಕು, ಅದರಲ್ಲೂ ಹೊಸ‌ ಪ್ರತಿಭೆಗಳಿಗೆ ಅವಕಾಶ ಕೊಡಬೇಕೆಂಬ ಉದ್ದೇಶ ಹೊಂದಿದ್ದು,

ಆ ನಿಟ್ಟಿನಲ್ಲಿ ಅವರು ಈಗಾಗಲೆ ‘ರಮೇಶ ಸುರೇಶ’ ಚಿತ್ರವನ್ನೂ ನಿರ್ಮಿಸಿದ್ದಾರೆ. ಸದ್ಯ ಆ ಚಿತ್ರ ರಿಲೀಸ್ ಗೆ ರೆಡಿಯಾಗುತ್ತಿದೆ. ಲಾಕ್ ಡೌನ್ ಬಳಿಕ ಪ್ರೇಕ್ಷಕರ ಮುಂದೆ ತರಲು ಸಜ್ಜಾಗಿದ್ದಾರೆ.

ಅದೇನೆ ಇರಲಿ, ತಮ್ಮ ‘ಅರ್ಬನ್ ಗುರುಕುಲ ಚಾರಿಟೇಬಲ್ ಟ್ರಸ್ಟ್’ ಮೂಲಕ ಇರುವಷ್ಟು ಕಾಲ ಒಂದಷ್ಟು ಸಮಾಧಾನ ಎನಿಸುವ, ಮನಸ್ಸಿಗೆ ನೆಮ್ಮದಿ ತರುವ ಒಳ್ಳೆಯ ಕೆಲಸಗಳನ್ನು ಮಾಡಬೇಕೆಂಬ ನಿರ್ಧಾರ ಮಾಡಿದ್ದಾರೆ ಟ್ರಸ್ಟ್ ನ ಸಂಸ್ಥಾಪಕ ಕೃಷ್ಣ.

ಇನ್ನು, ಅರ್ಬನ್ ಗುರುಕುಲ ಚಾರಿಟೇಬಲ್ ಟ್ರಸ್ಟ್ ಮೂಲಕ ಆಯೋಜಿಸಿದ್ದ ದಿನಸಿ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ನಿರ್ದೇಶಕರಾದ, ರೂಪ ಕೆ, ಮಾಲಿನಿ ಕೆ.ಕೆ, ಶ್ರೀನಾಥ್, ಮಂಜು , ವಿಜಯ್ ಭರಮಸಾಗರ ಮತ್ತು ತಂಡದ ಸದಸ್ಯರಾದ ರಕ್ಷಿತ್, ನಟಾಶ, ದೀಪು, ವಿಷ್ಣು, ವಿವೇಕ್ ಸಿಂಗ್, ಶ್ರೀರಾಮ್, ದೀಪಕ್ ಗೌಡ, ಹರೀಶ್, ನಿಖಿಲ್ ಇತರರು ಕೂಡ ದಿನಸಿ ಕಿಟ್ ವಿತರಣೆಯಲ್ಲಿ ತೊಡಗಿದ್ದರು.

Categories
ಸಿನಿ ಸುದ್ದಿ

ಉಸಿರು ತಂಡಕ್ಕೆ ಗಜ ಬಲ ; ಒಳ್ಳೇ ಕೆಲಸಕ್ಕೆ ನಟ ದರ್ಶನ್ ಸಾಥ್

ಗೀತ ಸಾಹಿತಿ ಕವಿರಾಜ್ ಮತ್ತು ಸಮಾನ ಮನಸ್ಕ ಗೆಳೆಯರು ಸೇರಿ ಕೊರೊನಾ ಸಂಕಷ್ಟದಲ್ಲಿ ಸಿಲುಕಿರುವ ಜನರಿಗಾಗಿ ‘ ‘ಉಸಿರು’ ತಂಡ ಕಟ್ಟಿಕೊಂಡು ಆ ಮೂಲಕ ಆಕ್ಸಿಜನ್ ಕೊಡುವ ಕೆಲಸ ಮಾಡುತ್ತಿದ್ದು, ಯಶಸ್ವಿಯಾಗಿ ಸಾಗುತ್ತಿದೆ.
ಈಗಾಗಲೇ ಬೆಂಗಳೂರಿನ ಹಲವು ಮಂದಿ ಉಸಿರು ಪಡೆದಿದ್ದಾರೆ.
ಶನಿವಾರವಷ್ಟೆ ಮೈಸೂರು ನಗರದಲ್ಲೂ ಉಸಿರು ತಂಡ ತನ್ನ ಕೆಲಸಕ್ಕೆ ಚಾಲನೆ‌ ನೀಡಿದೆ. ಇದರ ಬೆನ್ನಲ್ಲೇ ಚಾಲೆಂಜಿಂಗ್ ದರ್ಶನ್ ಕೂಡ ಉಸಿರು ತಂಡಕ್ಕೆ ಸಾಥ್ ನೀಡುತ್ತಿದ್ದಾರೆ.


ಇದು‌ ಸಹಜವಾಗಿಯೇ ಉಸಿರು ತಂಡದ ಖುಷಿ ಹೆಚ್ಚಿಸಿದೆ.
ದರ್ಶನ್ ಅವರು ಉಸಿರು ಹಿಂದೆ ನಿಂತಿರುವುದರಿಂದ ಗಜಬಲ ಬಂದಂತಾಗಿದೆ. ಬೆಂಗಳೂರು, ಮೈಸೂರು ಭಾಗದಲ್ಲಿ ಶುರುವಾದ ಉಸಿರು ಕೆಲಸಕ್ಕೆ ಡಿ ಬಾಸ್ ಮೆಚ್ಚುಗೆ ವ್ಯಕ್ತಪಡಿಸಿದ್ದು, ಇನ್ನಷ್ಟು ಜಿಲ್ಲೆಗಳಲ್ಲಿ ಉಸಿರು ಹರಡಲು ಸಾಧ್ಯವಾಗಿದೆ ಎಂಬುದು ಉಸಿರು ತಂಡದ ಖುಷಿಯ ಮಾತು.
ಈ ಉಸಿರು ತಂಡದ ಕೆಲಸ ಇನ್ನಷ್ಟು ಹೆಚ್ಚಲಿ, ಯಶಸ್ವಿಯಾಗಲಿ ಎಂಬುದಹ ಸಿನಿಲಹರಿ ಆಶಯ.

Categories
ಸಿನಿ ಸುದ್ದಿ

ಆಡಿಯೋಬುಕ್‌ ನಲ್ಲಿ ಗಿರೀಶ್‌ ಕಾರ್ನಾಡ್‌ ಪುಸ್ತಕ : ಆಡಾಡುತ್ತಾ ಆಯುಷ್ಯʼ ಕ್ಕೆ ನಟ ಸಂಚಾರಿ ವಿಜಯ್‌ ಧ್ವನಿ

ಜ್ಞಾನಪೀಠ ಪುರಸ್ಕೃತ ಸಾಹಿತಿ, ನಾಟಕಕಾರ ಹಾಗೂ ನಟ ಗಿರೀಶ್‌ ಕಾರ್ನಾಡ್‌ ಅವರ ಜೀವನ ಚರಿತ್ರೆ ʼ ಆಡಾಡುತಾ ಆಯುಷ್ಯ ʼ ಈಗ ಆಡಿಯೋ ರೂಪದಲ್ಲಿ ಹೊರ ಬಂದಿದೆ. ವಿಶೇಷ ಅಂದರೆ, ಈ ಪುಸ್ತಕಕ್ಕೆ ರಾಷ್ಟ್ರ ಪ್ರಶಸ್ತಿ ವಿಜೇತ ನಟ ಧ್ವನಿ ನೀಡಿದ್ದಾರೆ. ಸ್ಟೋರಿ ಟೆಲ್‌ ಸಂಸ್ಥೆ ಈ ಪುಸ್ತಕವನ್ನು ಆಡಿಯೋ ರೂಪದಲ್ಲಿ ಹೊರ ತಂದಿದೆ. 350 ಪುಟಗಳ ಈ ಪುಸ್ತಕಕ್ಕೆ ಪ್ರೀತಿಯಿಂದ, ಕಾರ್ನಾಡ್‌ ಅವರ ಮೇಲಿನ ಅಭಿಮಾನದಿಂದ ಧ್ವನಿ ನೀಡಿರುವ ನಟ ಸಂಚಾರಿ ವಿಜಯ್‌, ಪುಸ್ತಕ ಓದುವಾಗ ಆದ ಅನುಭವ, ಉತ್ತರ ಕನ್ನಡ ಭಾಷೆಯ ಪದಗಳ ಪ್ರಯೋಗಗಳ ಜತೆಗೆ ತಮಗೆ ಪರಿಚಯವಾದ ಹಲವು ಹೊಸ ಪದಗಳ ಜತೆಗೆ ಇತ್ಯಾದಿ ಮಜಲಗಳ ಕುರಿತು ಇಲ್ಲಿ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

ಓವರ್‌ ಟು ಸಂಚಾರಿ ವಿಜಯ್….

ʼ 350 ಪುಟಗಳಿರುವ ಈ ಪುಸ್ತಕವನ್ನು ಓದುವಾಗ ಹಲವಾರು ಸವಾಲುಗಳು ಎದುರಾದವು. ಲೇಖಕರಾದ ಗಿರೀಶ್‌ ಕಾರ್ನಾಡ್‌ ಅವರು ಕೆಲವೆಡೆ ಉತ್ತರ ಕನ್ನಡ ಭಾಷೆಯ ಪದಗಳ ಪ್ರಯೋಗಿಸಿದರೆ ಇನ್ನಷ್ಟು ಕಡೆ ಉತ್ತರ ಕರ್ನಾಟಕ, ನಂತರ ಬೆಂಗಳೂರು, ಮತ್ತೊಂದೆಡೆ ಮರಾಠಿ ಮಿಶ್ರಿತ ಕನ್ನಡ ಹೀಗೆ ನನಗೂ ಹಲವಾರು ಹೊಸ ಪದಗಳ ಪರಿಚಯ ಮಾಡಿಕೊಡುತ್ತಾ ಅವರು ಅನುಭವಿಸಿದ ಹಲವಾರು ಮಜಲುಗಳನ್ನು ಹಂಚುತ್ತಾ ಇಡೀ ಪುಸ್ತಕ ಒಂದು ಹೊಸ ಲೋಕವನ್ನೇ ತೆರೆದಷ್ಟು ಅನುಭವವನ್ನು ಕಟ್ಟಿಕೊಡುತ್ತಾ ಹೋಗುತ್ತದೆ. ಇನ್ನು ಅವರ ಬಾಲ್ಯದಲ್ಲಿ ಮಹಾರಾಷ್ಟ್ರದಿಂದ ಧಾರವಾಡಕ್ಕೆ ವಲಸೆ ಬಂದಿದ್ದು, ಅಲ್ಲಿ ಸಾರಸ್ವತಪುರದಲ್ಲಿ ನಿಂತು ಅಲ್ಲಿಂದ ಮುಂದೆ ಶಿರಸಿಗೆ ಹೋಗಿ ಅವರ ತಾಯಿ ‘ಕುಟ್ಟಾಬಾಯಿಯ’ ಜೀವನದ ಏಳು ಬೀಳುಗಳ ಅನಾವರಣ.

ಗಂಡನನ್ನು ಕಳೆದುಕೊಂಡು 11 ವರ್ಷದ ಬಾಲಚಂದ್ರ ಎನ್ನುವ ಮಗನನ್ನು ಕಟ್ಟಿಕೊಂಡು ಆಕೆ ಧೈರ್ಯದಿಂದ ಸಮಾಜವನ್ನು ಎದುರಿಸಿದ ಪ್ರಯಾಣ. ನಂತರ ಅತೀ ಚಿಕ್ಕ ವಯಸ್ಸಿಗೆ ಇಂಗ್ಲೆಂಡ್ ಗೆ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ತೆರಳಿ ಅಲ್ಲಿಯ ನಡೆಯನ್ನು ಹರವಿದ್ದು. ನಂತರ ಎನ್‌ಎಫ್‌ಎಗೆ ನಿದೇಶಕನಾಗಿದ್ದ ಸಂದರ್ಭದಲ್ಲಿ ಅವರ ವಿದ್ಯಾರ್ಥಿಗಳಾದಂತಹ ಹಲವಾರು ಪ್ರತಿಭಾವಂತ ನಟರು ಬಾಲಿವುಡ್ ನಲ್ಲಿ ಸ್ಟಾರ್ ಗಳಾಗಿ ಮಿಂಚಿದ್ದು. ತಮ್ಮ ಕೆಲವು ನಿಲುವುಗಳಿಂದ ಅನೇಕಾನೇಕ ಬಲವುಳ್ಳವರನ್ನು ಎದುರು ಹಾಕಿಕೊಂಡಿದ್ದು. ನಂತರ ಮದ್ರಾಸಿಗೆ ಕೆಲಸವನ್ನರಸಿ ಹೋಗಿದ್ದು ಅಲ್ಲಿಂದ ಕನ್ನಡ ಸಾಹಿತ್ಯ, ನಾಟಕ, ಸಿನಿಮಾ ಹೇಗೆ ಹತ್ತು ಹಲವಾರು ಕ್ಷೇತ್ರಗಳಿಗೆ ತೆರೆದುಕೊಂಡಿದ್ದು, ಒಂದು ರೋಮಾಂಚನ ಪ್ರಯಾಣ ಅನ್ನಿಸಿದ್ದು ಸುಳ್ಳಲ್ಲ. ಇದಿಷ್ಟನ್ನು ಹಿಡಿದಿಡುವ ಪ್ರಯತ್ನ ಇಲ್ಲಿದೆ ನೀವು ಬಿಡುವಾದಾಗ ಕೇಳಿ ನಿಮ್ಮ ಅನಿಸಿಕೆಗಳನ್ನು ತಪ್ಪುಗಳನ್ನು ತಿದ್ದಿ ನನಗೆ ತಿಳಿಸಿ. ಒಂದೇ ಸಮನೆ 350 ಪುಟಗಳನ್ನು ಓದಿದ್ದರಿಂದ ಒಂದಷ್ಟು ತಪ್ಪು ಒಪ್ಪಗಳು ನಿಮ್ಮ ಗ್ರಹಿಕೆಗೆ ಬಂದೆ ಬರುತ್ತದೆ. ಅದನ್ನು ಬದಿಗಿರಿಸಿ ಕೇಳಿ ಎಂದು ನನ್ನ ಸವಿನಯ ಪ್ರಾರ್ಥನೆ.

ಇದಿಷ್ಟು ನಟ ಸಂಚಾರಿ ವಿಜಯ್‌ ಮಾತು. ಇನ್ನು ಪುಸ್ತಕದ ಆಡಿಯೋ ರೂಪಕ್ಕೆ ಧ್ವನಿ ನೀಡಲು ಅವರಿಗೆ ಅವಕಾಶ ಸಿಕ್ಕಿದ್ದೇ ಆಕಸ್ಮಿಕವಂತೆ. ಗೆಳೆಯನ ಮೂಲಕ ಈ ಅವಕಾಶ ಬಂತು. ಮೇಲಾಗಿ ಕಾರ್ನಾಡ್‌ ಅವರ ಬಗ್ಗೆಯೂ ನಂಗೆ ದೊಡ್ಡ ಕುತೂಹಲ ಇತ್ತು. ಆಯ್ತು ಓದ್ತೀನಿ ಅಂತ ಒಪ್ಪಿಕೊಂಡ ನಂತರ ಓದುವುದು ಎಂತಹ ಸವಾಲಿನ ಕೆಲಸ ಅಂತ ಗೊತ್ತಾಯಿತು ಎನ್ನುವ ನಟ ಸಂಚಾರಿ ವಿಜಯ್‌, 350 ಪುಟಗಳ ಈ ಪುಸ್ತಕವನ್ನು ಓದಿ ಮುಗಿಸಲು ಒಂದು ತಿಂಗಳು ತೆಗೆದುಕೊಂಡ್ರಂತೆ.ʼ ಇದಿಷ್ಟು ಸಮಯವನ್ನು ನಾನು ತೆಗೆದುಕೊಡಿದ್ದಕ್ಕೆ ಕಾರಣ ಎಲ್ಲೂ ಪದ ದೋಷ ಆಗಿದಿರಲಿ ಅಂತ. ಹಾಗೆ ಓದುತ್ತಾ ನನಗೆ ದೊಡ್ಡ ಅನುಭವವೇ ಆಯಿತು.

ನಾನು ಅಭಿನಯಿಸಿದ ಮೊದಲ ನಾಟಕದಲ್ಲಿ ಆದ ಅನುಭವವೇ ಇಲ್ಲಿಯೂ ಆಯಿತು. ಕಾರ್ನಾಡ್‌ ಅವರನ್ನು ಒಂದಷ್ಟು ತಿಳಿದುಕೊಳ್ಳುವುದಕ್ಕೂ ಇದು ಕಾರಣವಾಯಿತು. ಇಂತಹ ಅವಕಾಶಗಳು ಸಿಕ್ಕರೆ ನಾನೆಂದಿಗೂ ಮಿಸ್‌ ಮಾಡಿಕೊಳ್ಳುವುದಿಲ್ಲ ಎನ್ನುತ್ತಾರೆ ನಟ ಸಂಚಾರಿ ವಿಜಯ್.‌

error: Content is protected !!