ಕನ್ನಡದಲ್ಲಿ ನಾಯಕ ನಟರಷ್ಟೇ ಖಳನಟರು ಕೂಡ ತೆರೆಯ ಮೇಲೆ ಭರ್ಜರಿಯಾಗಿ ಮಿಂಚುತ್ತಿದ್ದಾರೆ. ಆ ಸಾಲಿಗೆ ಈಗ ಯಶ್ ಶೆಟ್ಟಿ ಕೂಡ ಬೇಡಿಕೆಯ ಖಳನಟರಾಗುತ್ತಿರುವುದು ನಿಜಕ್ಕೂ ಹೊಸ ಬೆಳವಣಿಗೆಯೇ ಸರಿ. ಹೌದು, ಯಶ್ ಶೆಟ್ಟಿ ಅವರ ಕೈಯಲ್ಲೀಗ ಸಾಲು ಸಾಲು ಸಿನಿಮಾಗಳಿವೆ. ಬಹುತೇಕ ಸಿನಿಮಾಗಳಲ್ಲಿ ಅವರು ಖಳರಾಗಿಯೇ ತಮ್ಮ ಹೊಸ ಖದರ್ ತೋರಿಸಿದ್ದಾರೆ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಷಯ. ಈಗ ಹೊಸ ಸುದ್ದಿಯೆಂದರೆ, ಯಶ್‌ಶೆಟ್ಟಿ ಅವರು ಸದ್ದಿಲ್ಲದೆಯೇ ಮತ್ತೊಂದು ಹೊಸ ಸಿನಿಮಾಗೆ ಸಹಿ ಹಾಕಿದ್ದಾರೆ.
ಆ ಚಿತ್ರದಲ್ಲಿ ಅವರು ಮುಖ್ಯ ಖಳನಟರಾಗಿಯೂ ಕಾಣಿಸಿಕೊಳ್ಳುತ್ತಿದ್ದಾರೆ ಅನ್ನೋದು ವಿಶೇಷ. ಹೌದು, ನಟ ಶ್ರೀನಗರ ಕಿಟ್ಟಿ ಅವರು ಇತ್ತೀಚೆಗಷ್ಟೇ ಭರ್ಜರಿ ಸಿನಿಮಾ ಮೂಲಕ ಎಂಟ್ರಿಯಾಗುತ್ತಿದ್ದಾರೆ ಅನ್ನೋ ವಿಷಯವನ್ನು ಇದೇ “ಸಿನಿಲಹರಿ”ಯಲ್ಲಿ ಹೇಳಲಾಗಿತ್ತು. ಅದು ಅವರ “ಗೌಳಿ” ಸಿನಿಮಾ ಅಂತಾನೂ ಹೇಳಲಾಗಿತ್ತು. ಈ ಮೊದಲೇ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಲಾಗಿತ್ತು. ಪೋಸ್ಟರ್ ನೋಡಿದವರಿಗೆ ಅದೊಂದು ಮಾಸ್ ಫೀಲ್ ಸಿನಿಮಾ ಅಂತ ಗೊತ್ತಾಗದೇ ಇರದು. ಅಂದಹಾಗೆ, “ಗೌಳಿ” ಸಿನಿಮಾದಲ್ಲಿ ಈಗ ಯಶ್ ಶೆಟ್ಟಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ ಅನ್ನೋದೇ ವಿಶೇಷ. ಇಲ್ಲಿ ಯಶ್ ಶೆಟ್ಟಿ ಪಕ್ಕಾ ಖಡಕ್ ವಿಲನ್. ಅದರಲ್ಲೂ ಅವರದು ಫುಲ್ ರಾ… ಕ್ಯಾರೆಕ್ಟರ್ ಅಂತೆ. ಇದುವರೆಗೂ ಸಿಕ್ಕ ಪಾತ್ರಗಳಿಗೆ ಜೀವ ತುಂಬುತ್ತಿದ್ದ ಯಶ್ ಶೆಟ್ಟಿ, ಈಗ “ಗೌಳಿ” ಸಿನಿಮಾದಲ್ಲೂ ಖರಾಬ್ ಲುಕ್ ನಲ್ಲೇ ಕಾಣಿಸಿಕೊಳ್ಳುತ್ತಿದ್ದಾರೆ.
ಅಂದಹಾಗೆ, ಅದೊಂದು ಹೊಸ ಕಥೆ ಹೇಳಲಿರುವ ಚಿತ್ರ ಅನ್ನುವುದು ಪಕ್ಕಾ ಆಗಿದೆ. ಈ ಚಿತ್ರಕ್ಕೆ ರಘು ಸಿಂಗಂ, ನಿರ್ಮಾಪಕರು. ಸೂರ ಈ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ. ಇವರಿಗೆ ಇದು ಮೊದಲ ಸಿನಿಮಾ. ಈ ಹಿಂದೆ ಒಂದಷ್ಟು ಸಿನಿಮಾಗಳಲ್ಲಿ ಕೆಲಸ ಮಾಡಿದ ಅನುಭವ ಇವರಿಗೆ ಇದೆ. ಮೂಲತಃ ಫೋಟ್ರೋಗ್ರಫಿ ಮಾಡಿಕೊಂಡಿದ್ದ ಇವರು, ನಿರ್ದೇಶನ ವಿಭಾಗಕ್ಕೆ ಜಿಗಿದು, ಅಲ್ಲೊಂದಷ್ಟು ಕೆಲಸ ಕಲಿತು ಆ ಅನುಭವ ಮೇಲೆ ಸಿನಿಮಾ ಮಾಡುತ್ತಿದ್ದಾರೆ. ಮೊದಲ ಸಿನಿಮಾ ಆಗಿರುವುದರಿಂದ ಸಾಕಷ್ಟು ತಯಾರಿ ಮಾಡಿಕೊಂಡೇ ಫೀಲ್ಡ್‌ಗಿಳಿದಿದ್ದಾರೆ.
ಚಿತ್ರಕ್ಕೆ ಶಶಾಂಕ್ ಶೇಷಗಿರಿ ಅವರ ಸಂಗೀತವಿದೆ. ಉಳಿದಂತೆ ಚಿತ್ರದಲ್ಲಿ ದೊಡ್ಡ ತಾರಾಬಳಗವೇ ಇರಲಿದೆ.