ಯೋಗಿಯ ಯೋಗಾ ಯೋಗ! ವರ ಮಹಾಲಕ್ಷ್ಮಿ ಹಬ್ಬಕ್ಕೆ ಲಂಕೆಯ ಲಂಕಾಧಿಪತಿಯ ಆಗಮನ!!

ಅಂತೂ ಇಂತೂ ಚಿತ್ರರಂಗ ಈಗ ಗರಿಗೆದರಿದೆ. ಕೊರೊನಾ ಹೊಡೆತಕ್ಕೆ ಬಣ್ಣ ಕಳಚಿಕೊಂಡಿದ್ದ ಕನ್ನಡ ಚಿತ್ರರಂಗ ಈಗ ಕಲರ್ ಫುಲ್ ಆಗಿದೆ. ಈಗ ಮೆಲ್ಲನೆ ಒಂದೊಂದೇ ಸಿನಿಮಾಗಳು ಥಿಯೇಟರ್ ನತ್ತ ಮುಖ ಮಾಡಲು ಸಜ್ಜಾಗಿವೆ. ಆ ಸಾಲಿಗೆ ಈಗ ಲೂಸ್ ಮಾದ ಯೋಗಿ ಅಭಿನಯದ ‘ಲಂಕೆ’ ಚಿತ್ರವೂ ಸೇರಿದೆ.

ಹೌದು, ಅನ್ ಲಾಕ್ 4.0 ಆದರೂ ಇನ್ನು ಸಿನಿಮಾ ಥಿಯೆಟರ್ ಪೂರ್ತಿ ಓಪನ್ ಆಗಿಲ್ಲಾ. ಸರ್ಕಾರ ಶೇ.50 ರಷ್ಟು ಮಾತ್ರ ಅನುಮತಿ ನೀಡಿದೆ. ಹೀಗಿದ್ದರೂ ಸಾಲು ಸಾಲು ಚಿತ್ರಗಳು ಪ್ರೇಕ್ಷಕರ ಮುಂದೆ ಬರಲು ಸಾಲುಗಟ್ಟಿವೆ. ರೆಡಿಯಾಗಿ ನಿಂತಿವೆ. ಈ ನಡುವೆಯೇ ಯೋಗಿ‌ಅಭಿನಯದ ‘ಲಂಕೆ’ ಬಿಡುಗಡೆಗೆ ರೆಡಿಯಾಗಿದೆ. ರಿಲೀಸ್ ಗೂ ಮುನ್ನವೇ ‘ಲಂಕೆ’ ಚಿತ್ರದ ವಿಡಿಯೋ ಸಾಂಗ್ ವೊಂದನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಆನಂದ್ ಆಡಿಯೋ ಯುಟ್ಯಬ್ ಚಾನೆಲ್ ನಲ್ಲಿ ನಯನಕೆ ನಯನ… ಎಂಬ ಬ್ಯೂಟಿಫುಲ್ ಸಾಂಗ್ ರಿಲೀಸ್ ಆಗಿದ್ದು, ಎಲ್ಲೆಡೆಯಿಂದ ಮೆಚ್ಚುಗೆ ಪಡೆದುಕೊಂಡಿದೆ.

ಸದ್ಯ ಸಿನಿಮಾ ಪ್ರಚಾರ ಶುರು ಮಾಡಿರುವ ಚಿತ್ರತಂಡ, ವರಮಹಾಲಕ್ಷ್ಮಿ ಹಬ್ಬಕ್ಕೆ ಬಿಡುಗಡೆ ಮಾಡಲು ತಯಾರಿ ನಡೆಸಿದೆ.

ಇಲ್ಲಿ ಲೂಸ್ ಮಾದ ಯೋಗಿ ಲಂಕಾಧಿಪತಿಯಾಗಿ ಅಬ್ಬರಿಸಲಿದ್ದಾರೆ. ಇನ್ನು, ಅವರಿಗೆ ಕ್ರಿಷಿ ತಾಪಂಡ ಹಾಗು ಕಾವ್ಯಾ ಶೆಟ್ಟಿ ಜೋಡಿಯಾಗಿದ್ದಾರೆ. ನಟ ಸಂಚಾರಿ ವಿಜಯ್ ಅವರು ಕೂಡ ಈ ಚಿತ್ರದಲ್ಲಿ ಒಂದು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿರೋದು ವಿಶೇಷ.

ಈ ಚಿತ್ರಕ್ಕೆ ರಾಮ್ ಪ್ರಸಾದ್ ಆಕ್ಷನ್ ಕಟ್ ಹೇಳಿದ್ದಾರೆ. ಸಿನಿಮಾ ಬಗ್ಗೆ ಹೇಳುವ ಅವರು, ‘ಸ್ವಲ್ಪ ದುಃಖ ಹಾಗೂ ಹೆಚ್ಚಿನ ಸಂತೋಷವನ್ನು ಹಾಡಿನ ಮೂಲಕ ಹೇಳಬೇಕೆಂದುಕೊಂಡೆ.
ಈ ವಿಷಯವನ್ನು ಗೀತರಚನೆಕಾರ ಗೌಸ್ ಫಿರ್ ಅವರ ಬಳಿ ಹೇಳಿದಾಗ “ನಯನಕ್ಕೆ ನಯನ ಸೇರೋ ಕ್ಷಣ” ಎಂಬ ಸುಂದರ ಗೀತೆ ಬರೆದುಕೊಟ್ಟರು. ಅಷ್ಟೇ ಮಧುರವಾಗಿ ಕಾರ್ತಿಕ್ ಶರ್ಮ ಈ ಹಾಡಿಗೆ ಸಂಗೀತ ನೀಡಿದ್ದಾರೆ. ಧನಂಜಯ್ ಅವರ ನೃತ್ಯ ನಿರ್ದೇಶನದಲ್ಲಿ ಯೋಗಿ ಹಾಗೂ ಕೃಷಿ ತಾಪಂಡ ಅದ್ಭುತವಾಗಿ ನಟಿಸಿದ್ದಾರೆ. ವರಮಹಾಲಕ್ಷ್ಮೀ ಹಬ್ಬದಂದು ಚಿತ್ರವನ್ನು ತೆರೆಗೆ ತರುವ ಸಿದ್ದತೆ ನಡೆಯುತ್ತಿದೆ ಎಂದರು.


ತುಂಬಾ ದಿನಗಳ ನಂತರ ಎಲ್ಲರನ್ನೂ ನೋಡಿ ಸಂತಸವಾಗುತ್ತಿದೆ ಎಂದು ಮಾತು ಆರಂಭಿಸಿದ, ನಾಯಕಿ ಕೃಷಿ ತಾಪಂಡ ಈ ಹಾಡು ಹಾಗೂ ಚಿತ್ರದ ಬಗ್ಗೆ ತಮ್ಮ ಅನುಭವದ ಮಾತುಗಳಾಡಿದರು.

ಸುರೇಖ ರಾಮ್ ಪ್ರಸಾದ್ ಹಾಗು ಪಟೇಲ್ ಶ್ರೀನಿವಾಸ್ ಅವರು ನಿರ್ಮಾಣದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಲಂಕೆಗೆ ಕಾರ್ತಿಕ್ ಶರ್ಮ ಅವರ ಸಂಗೀತದ ಸ್ಪರ್ಶವಿದೆ.

ಇಲ್ಲಿ ಇನ್ನೊಂದು ವಿಶೇಷ ಅಂದರೆ, ವರಮಹಾಲಕ್ಷ್ಮಿ ಹಬ್ಬಕ್ಕೆ ‘ಸಲಗ’ ಕೂಡ ಅನೌನ್ಸ್ ಆಗಿದ್ದು, ಅಂದೇ ಲಂಕೆಯ ಲಂಕಾಧಿಪತಿಯ ಎಂಟ್ರಿಯಾಗಲಿದೆ. ಒಟ್ಟಾರೆ ಭಾವ-ಬಾಮೈದ ಒಟ್ಟಿಗೆ ಬರ‍್ತಾರಾ ಅನ್ನೋದು ಕುತೂಹಲ ಕೆರಳಿಸಿದೆ.

ಚಿತ್ರದ ನಾಲ್ಕು ಹಾಡುಗಳು ಬೇರೆ ಬೇರೆ ಶೈಲಿಯಲ್ಲಿದೆ. ಈ ಹಾಡು ಸೂಫಿ ಹಾಗೂ ಕವಾಲಿ ಶೈಲಿಯಲ್ಲಿದೆ. ಗೌಸ್ ಫಿರ್ ಅವರ ಸಾಹಿತ್ಯ ಸೊಗಸಾಗಿದೆ ಹಾಗೂ ಈ ಹಾಡನ್ನು ಕನ್ನಡದವರೇ ಆದ ಧನುಷ್ ಜಗದೀಶ್ ಹಾಗೂ ರಕ್ಷಿತ ಸುರೇಶ್ ಹಾಡಿದ್ದಾರೆ ಎಂದು ಚಿತ್ರದ ಹಾಡುಗಳ ಬಗ್ಗೆ ಸಂಗೀತ ನಿರ್ದೇಶಕ ಕಾರ್ತಿಕ ಶರ್ಮ ಮಾಹಿತಿ ನೀಡಿದರು.

ಗೀತರಚನೆಕಾರ ಗೌಸ್ ಫಿರ್ ಅವರು ತಾವು ಬರೆದಿರುವ ಈ ಹಾಡಿನ ಬಗ್ಗೆ ಮಾತನಾಡಿ, ಸಂಗೀತ ನಿರ್ದೇಶಕರ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದರು.

Related Posts

error: Content is protected !!