ಪ್ರಿಯಾಂಕ ಉಪೇಂದ್ರ ಅಭಿನಯದ 1980 ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ವಿಶೇಷವೆಂದರೆ, ಈ ಚಿತ್ರದ ಟ್ರೇಲರ್ ಅನ್ನು ನಟ ಸುದೀಪ್ ಬಿಡುಗಡೆ ಮಾಡಿದ್ದಾರೆ. ಈ ವೇಳೆ ಮಾತಿಗಿಳಿದ ಸುದೀಪ್, “ನಾನು ಎರಡು ವರ್ಷಗಳಿಂದ ದೊಡ್ಡ ಪರದೆಯ ಮೇಲೆ ಚಿತ್ರವನ್ನಾಗಲಿ, ಟ್ರೇಲರ್ ಆಗಲಿ ನೋಡಿಲ್ಲ. ತುಂಬಾ ದಿನಗಳ ನಂತರ ಈ ಅವಕಾಶ ತಂದುಕೊಟ್ಟ ಚಿತ್ರತಂಡಕ್ಕೆ ಧನ್ಯವಾದ. ಚಿತ್ರದ ಬಿಡುಗಡೆ ವೇಳೆಗೆ ಈಗಿರುವ ಸಂಕಷ್ಟದ ಪರಿಸ್ಥಿತಿ ದೂರವಾಗಿ, ಜನರಿಂದ ಚಿತ್ರಮಂದಿರ ತುಂಬಿ ತುಳುಕುವಂತಾಗಲಿ ಎಂದು ಶುಭ ಕೋರಿದರು. ಇನ್ನು, ನಟ ಉಪೇಂದ್ರ ಕೂಡ ಈ ವೇಳೆ ಮಾತಿಗಿಳಿದರು. “ವಿಭಿನ್ನ ಕಥೆ ಇಟ್ಟುಕೊಂಡು, ನಿರ್ದೇಶಕರು ಹೊಸತನ್ನು ಹೇಳ ಹೊರಟ್ಟಿದ್ದಾರೆ. ಚಿತ್ರ ನಮ್ಮ ಫ್ಲಿಕ್ಸ್ ನಲ್ಲಿ ಬಿಡುಗಡೆಯಾಗುತ್ತಿದೆ. ಎಲ್ಲರೂ ನೋಡಿ ಹರಸಿ ಅಂದರು.
ಅಂದು ನಟಿ ಪ್ರಿಯಾಂಕ ಉಪೇಂದ್ರ ಹೈಲೈಟ್ ಆಗಿದ್ದರು. ಟ್ರೇಲರ್ ಬಿಡುಗಡೆ ಮಾಡಿದ ಸುದೀಪ್ ಹಾಗೂ ಉಪೇಂದ್ರ ಅವರಿಗೆ ಧನ್ಯವಾದ ಹೇಳಿದ ಪ್ರಿಯಾಂಕ, “ನಿರ್ದೇಶಕರು ಆಯ್ಕೆ ಮಾಡಿಕೊಂಡಿರುವ ಕಥೆ ತುಂಬಾ ಚೆನ್ನಾಗಿದೆ. ಪ್ಯಾರಲಲ್ ಯುನಿವರ್ಸಲ್ ನ ಈ ಕಥಾಹಂದರ ನೋಡುಗರ ಮನ ಗೆಲ್ಲಲಿದೆ. ಚಿತ್ರೀಕರಣದ ವೇಳೆ ಲಾಕ್ ಡೌನ್ ಮುಂತಾದ ಸಮಸ್ಯೆ ಎದುರಾದವು. ಇಲ್ಲದಿದ್ದರೆ ಕಳೆದ ಮೇನಲ್ಲಿ ಈ ಚಿತ್ರ ತೆರೆಗೆ ಬರಬೇಕಿತ್ತು. ಇದೇ ಅಕ್ಟೋಬರ್ ೧೫ ಚಿತ್ರ ನಮ್ಮ ಫ್ಲಿಕ್ಸ್ ನಲ್ಲಿ ಬಿಡುಗಡೆಯಾಗಲಿದೆ. ಎಲ್ಲರೂ ನೋಡಿ ಹಾರೈಸಿ ಅನ್ನೋದು ಪ್ರಿಯಾಂಕ ಮಾತು.
“ನನ್ನ ಈ ಕಥೆಗೆ ಕೆಲವು ಇಂಗ್ಲೀಷ್ ಸಿನಿಮಾಗಳು ಸ್ಪೂರ್ತಿ ಎನ್ನಬಹುದು. ಪ್ಯಾರಲಲ್ ಯುನಿವರ್ಸಲ್ ಕಥೆ ಆಧಾರಿತ ಚಿತ್ರ ನನಗೆ ತಿಳಿದ ಮಟ್ಟಿಗೆ ಇದೇ ಮೊದಲು ಎನ್ನಬಹುದು. ಚಿತ್ರ ಚೆನ್ನಾಗಿ ಮೂಡಿ ಬಂದಿದೆ ಎಂಬ ಭರವಸೆ ಇದೆ. ಎಲ್ಲರ ಹಾರೈಕೆ ಇರಲಿ ಎಂಬುದು ನಿರ್ದೇಶಕ ರಾಜ್ ಕಿರಣ್ ಮಾತು. ನಟ ನಿರಂಜನ್ ಸುಧೀಂದ್ರ, ನಿರ್ಮಾಪಕ ಜಾಕ್ ಮಂಜು, ನಮ್ಮ ಫ್ಲಿಕ್ಸ್ ನ ವಿಜಯ ಕುಮಾರ್ ಇದ್ದರು. ಈ ಚಿತ್ರವನ್ನು ಆರ್ ಕೆ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಪೂಜಾಶ್ರೀ ಹಾಗೂ ಸ್ವಾಮಿರಾಜ್ ನಿರ್ಮಿಸಿದ್ದಾರೆ. ಬಹುತೇಕ ಈ ಚಿತ್ರದ ಚಿತ್ರೀಕರಣ ಶನಿವಾರಸಂತೆ ಸುತ್ತಮುತ್ತ ನಡೆದಿದೆ. ಚಿತ್ರಕ್ಕೆ ರಾಜ್ ಕಿರಣ್ ಕಥೆ, ಚಿತ್ರಕಥೆ ಬರೆದಿದ್ದಾರೆ. ಅರವಿಂದ್ ರಾವ್, ಶ್ರೀಧರ್, ಮುರಳಿ ಶರ್ಮ ಇತರರು ನಟಿಸಿದ್ದಾರೆ. ಚಿಂತನ್ ವಿಕಾಸ್ ಸಂಗೀತವಿದೆ. ಜೀವನ್ ಆಂತೋಣಿ ಛಾಯಾಗ್ರಹಣ ಹಾಗೂ ಶ್ರೀಕಾಂತ್ ಅವರ ಸಂಕಲನವಿದೆ.