ಭಜರಂಗಿಯ ದಿವ್ಯದರ್ಶನಕ್ಕೆ ಮುಹೂರ್ತ ಫಿಕ್ಸಾಗಿದೆ. ಅಕ್ಟೋಬರ್ 29ರಂದು ಬೆಳ್ಳಿತೆರೆ ಮೇಲೆ ದರ್ಶನ ಕೊಡಲಿರುವ ಭಜರಂಗಿಯನ್ನು ಕಣ್ತುಂಬಿಕೊಳ್ಳೋದಕ್ಕೆ ಇಡೀ ಪ್ರೇಕ್ಷಕಕುಲ ಕಾತುರದಿಂದ ಕಾಯ್ತಿದೆ. ಬಿಗ್‌ಸ್ಕ್ರೀನ್ ಮೇಲೆ ಹೇಗರ‍್ಬೋದು ಭಜರಂಗಿಯ ಅಬ್ಬರ ಆರ್ಭಟ ಎನ್ನುವ ಕೂತೂಹಲದ ನಡುವೆ ದೊಡ್ಮನೆ ಭಕ್ತರು ಹಾಗೂ ರಾಕಿಂಗ್ ಬಳಗದವರು ಸೀಟಿ ಹೊಡೆದು ಸಂಭ್ರಮಿಸುವಂತಹ ಸುದ್ದಿಯೊಂದು ಹೊರಬಿದ್ದಿದೆ. ಅದುವೇ, ಭಜರಂಗಿ-2 ಚಿತ್ರದ ಪ್ರಿರಿಲೀಸ್ ಕಾರ್ಯಕ್ರಮ.
ಹೌದು, ಚಿತ್ರ ಬಿಡುಗಡೆಗೆ ಕೌಂಟ್‌ಡೌನ್ ಶುರುವಾಗಿರುವ ಹೊತ್ತಲ್ಲಿ ಭಜರಂಗಿಯ ಧ್ಯಾನವನ್ನು ಹೆಚ್ಚಿಸೋಕೆ ಹಾಗೂ ಭಜರಂಗಿಯ ಬಗ್ಗೆ ಯಾರಿಗೂ ತಿಳಿಯದಿರುವ ಅಚ್ಚರಿಯ ಸಂಗತಿಗಳನ್ನು ಹಂಚಿಕೊಳ್ಳೋದಕ್ಕೆ ಚಿತ್ರತಂಡ ಒಂದು ವೇದಿಕೆಯನ್ನು ಸಜ್ಜುಮಾಡಿದೆ. ಅಲ್ಲಿಗೆ, ಸೆಲ್ಫ್ ಮೇಡ್ ಷೆಹಜಾದ್‌ನನ್ನು ಕರೆಸೋದಕ್ಕೆ ಫಿಲ್ಮ್ ಟೀಮ್ ಪ್ಲ್ಯಾನ್ ಮಾಡಿದೆ. ಇದೇ ಅಕ್ಟೋಬರ್ 29ರಂದು ಪ್ರಿರಿಲೀಸ್ ಇವೆಂಟ್ ಆರ್ಗನೈಸ್ ಮಾಡಿದ್ದು ಕೆಜಿಎಫ್ ಸಾಮ್ರಾಜ್ಯದ ಕಿಂಗ್ ರಾಕಿಂಗ್ ಸ್ಟಾರ್ ಯಶ್ ಆಗಮಿಸಲಿದ್ದಾರೆ. ಭಜರಂಗಿ ಶಿವಣ್ಣ ಹಾಗೂ ಇಡೀ ಚಿತ್ರತಂಡದ ಜೊತೆ ವೇದಿಕೆ ಹಂಚಿಕೊಳ್ಳಲಿದ್ದಾರೆ. ಈ ಸುದ್ದಿ ಭಜರಂಗಿ ಕೋಟೆಯಿಂದ ನುಸುಳಿಕೊಂಡು ಬಂದು ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದೆ. ದೊಡ್ಮನೆ ಅಭಿಮಾನಿ ದೇವರುಗಳು ಹಾಗೂ ಅಣ್ತಮ್ಮನ ಫ್ಯಾನ್ಸ್ ಗಳು ಒಟ್ಟಿಗೆ ಸೇರಿ ಸಂಭ್ರಮಿಸುವಂತಾಗಿದೆ.
ಈಗಾಗಲೇ ಹಲವು ಭಾರಿ ಶಿವಣ್ಣ ಹಾಗೂ ಯಶ್ ವೇದಿಕೆ ಹಂಚಿಕೊಂಡಿದ್ದಾರೆ. ಆದರೆ, ಭಜರಂಗಿ-2 ಚಿತ್ರ ಬಿಡುಗಡೆಗೂ ಮುನ್ನ ನಡೆಯುತ್ತಿರುವ ಈ ಪೂರ್ವಭಾವಿ ಕಾರ್ಯಕ್ರಮ ಫ್ಯಾನ್ಸ್ ಗೆ ಮಾತ್ರವಲ್ಲ ಅವರಿಬ್ಬರಿಗೂ ಸ್ಪೆಷಲ್. ಯಾಕಂದ್ರೆ, ಜಯಣ್ಣ ಹಾಗೂ ಭೋಗೇಂದ್ರ ಅವರು ಶಿವಣ್ಣ ಹಾಗೂ ಯಶ್ ಇಬ್ಬರ ಪಾಲಿಗೂ ಅನ್ನದಾತರು. ಗೂಗ್ಲಿ, ಗಜಕೇಸರಿ, ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ಸೇರಿದಂತೆ ಹಲವು ಸೂಪರ್‌ಹಿಟ್ ಚಿತ್ರಗಳಿಗೆ ಕೋಟಿ ಬಂಡವಾಳ ಹೂಡಿದ ಕೀರ್ತಿ ಸದ್ಯ `ಭಜರಂಗಿ-೨’ ಚಿತ್ರಕ್ಕೆ ದುಡ್ಡು ಹಾಕಿರುವ ನಿರ್ಮಾಪಕರುಗಳಾದ ಜಯ್ಯಣ್ಣ ಹಾಗೂ ಭೋಗೇಂದ್ರ ಅವರಿಗೆ ಸಲ್ಲುತ್ತೆ. ಹೀಗಾಗಿ, ಸೆಂಚುರಿಸ್ಟಾರ್ ಹಾಗೂ ಸೆಲ್ಫ್ ಮೇಡ್ ಷೆಹಜಾದ್ ಒಟ್ಟಿಗೆ ಸ್ಟೇಜ್ ಶೇರ್ ಮಾಡುತ್ತಿರುವುದು, ಭಜರಂಗಿಯ ಅಬ್ಬರ-ಆರ್ಭಟಕ್ಕೆ ಕಿಕ್‌ಸ್ಟಾರ್ಟ್ ಕೊಡಲಿಕ್ಕೆ ಬರುತ್ತಿರುವುದು ನಿಜಕ್ಕೂ ಖುಷಿಯ ಸಂಗತಿ.
ಅಂದ್ಹಾಗೇ, ಭಜರಂಗಿ ಎಂಟು ವರ್ಷಗಳ ನಂತರ ಸೀಕ್ವೆಲ್ ಮೂಲಕ ಬೆಳ್ಳಿಪರದೆಗೆ ಎಂಟ್ರಿಕೊಡ್ತಿರುವುದರಿಂದ ಸಹಜವಾಗಿ ನಿರೀಕ್ಷೆಗಳು ಗರಿಗೆದರಿವೆ. ಟೀಸರ್-ಟ್ರೈಲರ್-ಮೇಕಿಂಗ್ ಜೊತೆ ಪ್ರತಿಯೊಂದು ಪಾತ್ರವೂ ಕೂಡ ಸಿನಿಮಾಕುಲವನ್ನು ಕಣ್ಣುಜ್ಜಿಕೊಂಡು ಕಾಯುವಂತೆ ಮಾಡ್ತಿದೆ. ನಿರ್ದೇಶಕ ಎ. ಹರ್ಷ ಅವರು ಒಂದೊಂದು ಕ್ಯಾರೆಕ್ಟರನ್ನು ಕೂಡ ಅಷ್ಟೇ ಕೇರ್‌ಫುಲ್ಲಾಗಿ ಮತ್ತು ಕ್ಯೂರಿಯಸ್ಸಾಗಿ ಸೃಷ್ಟಿ ಮಾಡಿದ್ದಾರೆ. ಶಿವಣ್ಣ-ಸೌರವ್ ಲೋಕಿ-ಶ್ರುತಿ-ಭಾವನ ಜೊತೆಗೆ ಯುವಪ್ರತಿಭೆಗಳಾದ ಪ್ರಸನ್ನ ಹಾಗೂ ಚೆಲುವರಾಜ್ ಪಾತ್ರ ಕೂತೂಹಲದ ಕಟ್ಟೆಯನ್ನು ಹೊಡೆದುರುಳಿಸಿದೆ.
ಪಾತ್ರವರ್ಗದ ಲುಕ್-ಗೆಟಪ್-ಖದರ್ ಜೊತೆಗೆ ಕಣ್ಣಿಗೆ ಹೊಡೆಯುವಂತಹ ಮೇಕಿಂಗ್ ಭಜರಂಗಿ-2' ಚಿತ್ರದ ಮೇಲಿನ ಕೌತುಕವನ್ನು ಒಂದೊಂದೆ ತೂಕ ಹೆಚ್ಚಿಸುತ್ತಾ ಹೋಗಿವೆ. ದೇವರು ಮತ್ತು ರಾಕ್ಷಸರ ನಡುವಿನ ಕದನ ನೋಡೋದಕ್ಕೆ ಒಂಟಿಕಾಲಿನಲ್ಲಿ ನಿಂತು ಕಾಯುವಂತೆ ಮಾಡಿವೆ. ಈ ಕೂತೂಹಲಭರಿತ ಕದನಕ್ಕೆ ಅಕ್ಟೋಬರ್ 29ರಂದು ತೆರೆಬೀಳಲಿದೆ. ನಾಲ್ಕು ಭಾರಿ ಸೂರ್ಯ, ನಾಲ್ಕು ಭಾರಿ ಚಂದ್ರ ಬಂದುಹೋದರೆ ಮುಗೀತು ಬಿಳಿಪರದೆಯ ಮೇಲೆ
ಭಜರಂಗಿ’ ವಜ್ರದಂತೆ ಝಳಪಿಸುತ್ತಾನೆ. ಅಲ್ಲಿವರೆಗೂ ಕಾಯ್ರಿ.
ವಿಶಾಲಾಕ್ಷಿ,ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ