ಸಿನಿಮಾರಂಗದ ಸಮಸ್ಯೆ ಬಗೆಹರಿಸಲು ಸರ್ಕಾರ ಬದ್ಧ; ಗೃಹಮಂತ್ರಿ ಅರಗ ಜ್ಞಾನೇಂದ್ರ

ಕನ್ನಡ ಚಿತ್ರರಂಗದಲ್ಲಿ ಅನೇಕ ಸಮಸ್ಯೆಗಳಿವೆ. ಆ ಬಗ್ಗೆ ಹಲವು ವರ್ಷಗಳಿಂದಲೂ ಚಿತ್ರೋದ್ಯಮದ ಗಣ್ಯರು ಸರ್ಕಾರದ ಗಮನಕ್ಕೆ ತರುತ್ತಲೇ ಇದ್ದಾರೆ. ಆದರೆ, ಭರವಸೆಗಳು ಸಿಗುತ್ತಿವೆ ಹೊರತು, ಅದಕ್ಕೆ ಪರಿಹಾರ ಸಿಕ್ಕಿಲ್ಲ. ಮಂಗಳವಾರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಭೇಟಿ ನೀಡಿದ್ದ ರಾಜ್ಯ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಚಿತ್ರರಂಗದವರ ಜೊತೆ ಸಮಸ್ಯೆಗಳ ಬಗ್ಗೆ ಚರ್ಚಿಸಿದ್ದಾರೆ. ಅಷ್ಟೇ ಅಲ್ಲ, ನಿರ್ಮಾಪಕರಿಗೆ ಧೈರ್ಯ ತಂಬಿದ್ದಾರೆ. ಅಷ್ಟಕ್ಕೂ ಆರಗ ಜ್ಞಾನೇಂದ್ರ ಅವರು ಹೇಳಿದ್ದೇನು ಗೊತ್ತಾ?


ಕನ್ನಡ ಸಿನಿಮಾ ನಿರ್ಮಾಪಕರ ರಕ್ಷಣೆಗೆ ನಮ್ಮ ಸರ್ಕಾರ ಬದ್ಧವಾಗಿದೆ. ನಿರ್ಮಾಪಕರ ಸಮಸ್ಯೆಗಳ ಕುರಿತಂತೆ ಸಿಎಂ ಜೊತೆ ಚರ್ಚೆ ನಡೆಸುತ್ತೇನೆ. ನಾನೂ ಸಹ ಚಿತ್ರರಂಗದೊಂದಿಗೆ ನಿಕಟ ಸಂಪರ್ಕದಲ್ಲಿರುತ್ತೇನೆ. ಕನ್ನಡ ಚಿತ್ರರಂಗ ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಇನ್ನೂ ಎತ್ತರಕ್ಕೆ ಬೆಳೆಯಬೇಕು ಸರ್ಕಾರ ಅದಕ್ಕೆ ಬೇಕಾದ ನೆರವು ನೀಡಲಿದೆ. ನಾನು ಹೆಚ್ಚಾಗಿ ಚಿತ್ರಗಳನ್ನು ನೋಡಿಲ್ಲ. ಆದರೆ, ರಾಜ್‌ಕುಮಾರ್ ಅಭಿಮಾನಿ. ಕನ್ನಡ ಚಿತ್ರರಂಗ ಅತ್ಯುತ್ತಮ ಪ್ರತಿಭೆಗಳನ್ನು ನೀಡಿದೆ. ಚಿತ್ರರಂಗದ ಕೊಡುಗೆ ಮರೆಯುವಂತಿಲ್ಲ. ಈಗಾಗಲೇ ಸರ್ಕಾರ ಕೆಲವು ಕ್ರಮಗಳನ್ನು ಕೈಗೊಂಡಿದೆ. ಕೋವಿಡ್‌ನಿಂದ ಆಗಿರುವ ನಷ್ಟ ಸರಿತೂಗಿಸುವ ಬಗ್ಗೆ ಚರ್ಚಿಸಲಾಗುವುದು. ಈಗಾಗಲೇ ಚಿತ್ರಮಂದಿರಗಳ ಕೆಲವು ತೆರಿಗೆಗಳನ್ನು ಮನ್ನಾ ಮಾಡುವ ಕಾರ್ಯ ನಡೆದಿದೆ. ಕಲಾವಿದರಿಗೆ ನೆರವನ್ನೂ ನೀಡಲಾಗಿದೆ ಎಂದರು.


ಪೈರಸಿ ಕುರಿತು ಮಾತಿಗಿಳಿದ ಅವರು, “ಆನ್‌ಲೈನ್ ಗೇಮಿಂಗ್ ನಿಷೇಧ ಕಾಯ್ದೆಯನ್ನು ನಮ್ಮ ಸರ್ಕಾರ ಕೆಲ ದಿನಗಳ ಹಿಂದಷ್ಟೆ ತಂದಿದೆ. ಭಾರಿ ಒತ್ತಡ ಇದ್ದರೂ ನಾವು ಕಾಯ್ದೆ ತಂದಿದ್ದೇವೆ. ಹಾಗೆಯೇ ಪೈರಸಿ ವಿರುದ್ಧ ಕಾಯ್ದೆ ತರಬೇಕಾದ ಪರಿಸ್ಥಿತಿ ಬಂದರೆ ಖಂಡಿತ ನಾವು ಹಿಂಜರಿಯುವುದಿಲ್ಲ ಎಂಬ ಭರವಸೆ ನೀಡಿದ ಅವರು, ನಮ್ಮ ಸೈಬರ್ ಸೆಲ್ ಬಹಳ ಶಕ್ತವಾಗಿದೆ. ತರಬೇತಿ ಪಡೆದವರನ್ನೇ ನೇಮಕ ಮಾಡಿಕೊಂಡಿದ್ದೇವೆ.

ಗುಜರಾತ್ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡು ನಮ್ಮ ಕೆಲವು ಅಧಿಕಾರಿಗಳನ್ನು ತರಬೇತಿಗೆಂದೇ ಅಲ್ಲಿಗೆ ಕಳಿಸಿದ್ದೇವೆ. ಆಧುನಿಕ ತಂತ್ರಜ್ಞಾನ ಹೊಂದಿದ ಘಟಕವನ್ನು ಹೊಂದಿದ್ದೇವೆ. ತಂತ್ರಜ್ಞಾನದ ವಿಷಯದಲ್ಲಿ ಇನ್ಫೋಸಿಸ್ ದೊಡ್ಡ ಸಹಾಯ ಮಾಡಿದೆ ಎಂದರು.
ನಾನು ರೈತರ ಮಗ. ಸಿನಿಮಾರಂಗ ಹೊಸದು.

ಚಿತ್ರಮಂದಿರ ಹಾಗೂ ಮಲ್ಟಿಫ್ಲೆಕ್ಸ್‌ಗಳ ಸಮಸ್ಯೆ ಬಗೆಹರಿಸುವ ಬಗ್ಗೆ ಮುಂದಿನ ದಿನಗಳಲ್ಲಿ ಗಮನ ಹರಿಸುತ್ತೇನೆ. ಅಧಿಕಾರಿಗಳಿಂದ ಮಾಹಿತಿ ಪಡೆದು ನಮ್ಮಿಂದ ಆಗಬೇಕಾದ ಸಹಾಯಗಳ ಬಗ್ಗೆ ಮುಂದಿನ ದಿನಗಳಲ್ಲಿ ಚರ್ಚೆ ನಡೆಸೋಣ ಎಂದಿದ್ದಾರೆ. ಈ ವೇಳೆ ಫಿಲ್ಮ್‌ ಚೇಂಬರ್‌ ಅಧ್ಯಕ್ಷ ಜೈ ರಾಜ್‌, ಸಾ.ರಾ.ಗೋವಿಂದು, ಚಿನ್ನೇಗೌಡ, ಎನ್.ಎಂ.ಸುರೇಶ್‌, ಉಮೇಶ್‌ ಬಣಕಾರ್‌, ಕೆ.ಮಂಜು, ಪ್ರವೀಣ್‌ ಕುಮಾರ್‌, ಗಣೇಶ್‌, ನರಸಿಂಹಲು ಸೇರಿದಂತೆ ಇತರು ಇದ್ದರು.

Related Posts

error: Content is protected !!