ಕನ್ನಡದಲ್ಲೀಗ ಸಿನಿಮಾಗಳ ಕಲರವ ಶುರುವಾಗಿದೆ. ಒಂದರ ಮೇಲೊಂದರಂತೆ ಸಿನಿಮಾಗಳು ಬಿಡುಗಡೆಗೆ ಸಜ್ಜಾಗುತ್ತಿವೆ. ಕೆಲವು ಸಿನಿಮಾಗಳು ಸದ್ದಿಲ್ಲದೆಯೇ ಮುಕ್ತಾಯಗೊಂಡಿವೆ. ಆ ಸಾಲಿಗೆ ಈಗ “ರಾಜನಿವಾಸ” ಎಂಬ ಸಿನಿಮಾ ಕೂಡ ಚಿತ್ರೀಕರಣ ಮುಗಿಸಿದ್ದು, ಇನ್ನೇನು ಇಷ್ಟರಲ್ಲೇ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗುತ್ತಿದೆ.
ಅದರಲ್ಲೂ, ಶ್ರೀನಗರ ಕಿಟ್ಟಿ ಈ ಸಿನಿಮಾದಲ್ಲಿ ಸ್ಪೆಷಲ್ ರೋಲ್ ಮಾಡಿದ್ದಾರೆ ಅನ್ನೋದೇ ವಿಶೇಷ. ಇತ್ತೀಚೆಗಷ್ಟೇ, ಶ್ರೀನಗರ ಕಿಟ್ಟಿ ಅವರು “ಗೌಳಿʼ ಸಿನಿಮಾ ಮೂಲಕ ನ್ಯೂ ಎಂಟ್ರಿ ಕೊಟ್ಟಿದ್ದು ಗೊತ್ತೇ ಇದೆ. ಈಗ “ರಾಜ ನಿವಾಸ” ಸಿನಿಮಾದಲ್ಲೂ ಅಂಥದ್ದೊಂದು ಹೊಸ ಪಾತ್ರದ ಮೂಲಕ ಗಮನಸೆಳೆಯುತ್ತಿದ್ದಾರೆ. ಅದ್ಧೂರಿ ವೆಚ್ಚದಲ್ಲಿ ತಯಾರಾಗಿರುವ ಈ ಚಿತ್ರ ಡಿಎಎಂ36 ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿದೆ ಸುಮಾರು 57 ದಿನಗಳ ಕಾಲ ಚಿಕ್ಕಮಗಳೂರು ಹಾಗೂ ಬೆಂಗಳೂರಿನ ಸುತ್ತಮುತ್ತಲ ತಾಣದಲ್ಲಿ ಚಿತ್ರೀಕರಣಗೊಂಡಿದೆ.
ಚಿತ್ರದಲ್ಲಿ ರಾಘವ್ ಕೃತಿಕಾ, ಬಲರಾಜವಾಡಿ ಇತರರು ಕಾಣಿಸಿಕೊಂಡಿದ್ದಾರೆ. ಇಲ್ಲಿ ಶ್ರೀನಗರ ಕಿಟ್ಟಿ ಅವರು ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಅವರ ಹೊಸ ಲುಕ್ ಈಗಾಗಲೇ ರಿವೀಲ್ ಆಗಿದೆ. ತುಂಬಾ ಸ್ಟೈಲಿಷ್ ಎನಿಸುವ ಫೋಟೋಗಳು ಬಿಡುಗಡೆಯಾಗಿದ್ದು, ಅದೊಂದು ಹೊಸ ರೀತಿಯ ಪಾತ್ರ ಎಂಬುದನ್ನು ಸಾಬೀತುಪಡಿಸುತ್ತಿದೆ.
ಇನ್ನು, ಮಿಥುನ್ ಸುವರ್ಣ ನಿರ್ದೇಶಕರು. ದಾ.ಪಿ.ಆಂಜನಪ್ಪ ಹಾಗೂ ಲೋಕೇಶ್ ಎನ್.ಗೌಡ ಅವರು ನಿರ್ಮಾಪಕರು. ವಿಶೇಷವೆಂದರೆ, ದಸರಾ ಹಬ್ಬಕ್ಕೆ “ರಾಜ ನಿವಾಸ” ಚಿತ್ರದ ಶೀರ್ಷಿಕೆ ಪೋಸ್ಟರ್ ನಾಲ್ಕು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
ನಾಗಶೇಖರ್ ನಿರ್ದೇಶನದ ಚಿತ್ರವೊಂದು ಈಗ ಸದ್ದಿಲ್ಲದೆಯೇ ಬಿಡುಗಡೆಗೆ ಸಜ್ಜಾಗಿದೆ. ಹೌದು, ಸಂದೇಶ್ ಪ್ರೊಡಕ್ಷನ್ಸ್ ಮೂಲಕ ನಿರ್ಮಾಣವಾಗಿರುವ ಡಾರ್ಲಿಂಗ್ ಕೃಷ್ಣ ಹೀರೋ ಆಗಿರುವ “[email protected] ” ಸಿನಿಮಾ ಈಗ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ವಿಜಯದ ದಶಮಿ ಹಬ್ಬದಂದು ರಾಜ್ಯಾದ್ಯಂತ ಅದ್ಧೂರಿಯಾಗಿ ಬಿಡುಗಡೆ ಮಾಡಲು ಸಿನಿಮಾತಂಡ ತಯಾರು ಮಾಡಿಕೊಂಡಿದೆ. ಕನ್ನಡದಲ್ಲಿ ಈಗಾಗಲೇ ಹಲವು ಯಶಸ್ವಿ ಚಿತ್ರಗಳನ್ನು ನೀಡಿರುವ ಸಂದೇಶ್ ನಾಗರಾಜ್, ಈಗ ಮತ್ತೊಂದು ಮಜವಾದ ಸಿನಿಮಾ ಮಾಡಿ, ಅದನ್ನು ದಸರಾ ಹಬ್ಬಕ್ಕೆ ರಿಲೀಸ್ ಮಾಡಲು ಸಿದ್ಧತೆ ನಡೆಸುತ್ತಿದ್ದಾರೆ. ಈ ಚಿತ್ರಕ್ಕೆ ಬೃಂದಾ ಎನ್ ಜಯರಾಂ ಅವರ ಸಹ ನಿರ್ಮಾಣವಿದೆ.
ನಾಗಶೇಖರ್ ಅವರೇ ನಿರ್ದೇಶನದ ಜೊತೆಗೆ ಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ಚಿತ್ರಕಥೆಗೆ ನಾಗಶೇಖರ್ ಜೊತೆಯಲ್ಲಿ ಪ್ರೀತಂ ಗುಬ್ಬಿ ಸಾಥ್ ನೀಡಿದ್ದಾರೆ. ಇನ್ನು, ಹೀರೋ ಡಾರ್ಲಿಂಗ್ ಕೃಷ್ಣ ಅವರ ಜೊತೆಗೆ ಭಾವನಾ ಮೆನನ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಚಂದನ್ ಗೌಡ ಕೂಡ ಇಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಅತಿಥಿ ಪಾತ್ರದಲ್ಲಿ ರಿಷಬ್ ಶೆಟ್ಟಿ ಕೂಡ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಚಿತ್ರದಲ್ಲಿ ದತ್ತಣ್ಣ, ಸಾಧು ಕೋಕಿಲ, ಅಚ್ಯುತರಾವ್, ಸಾತ್ವಿಕ್ (ಕಾರ್ಪೊರೇಟರ್), ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಇತರರು ನಟಿಸಿದ್ದಾರೆ.
ಈ ಹಿಂದೆ ಸಂದೇಶ್ ಪ್ರೊಡಕ್ಷನ್ಸ್ ಮೂಲಕ ನಿರ್ಮಾಣವಾಗಿದ್ದ “ಅಮರ್” ಚಿತ್ರಕ್ಕೂ ನಾಗಶೇಖರ್ ಅವರೇ ನಿರ್ದೇಶಕರಾಗಿದ್ದರು. ಈಗ ಹೊಸ ಸಿನಿಮಾಗೂ ಅವರ ನಿರ್ದೇಶನವಿದೆ. ಚಿತ್ರದ ಐದು ಹಾಡುಗಳಿಗೆ ಕವಿರಾಜ್ ಗೀತಸಾಹಿತ್ಯವಿದೆ. ಸತ್ಯ ಹೆಗಡೆ ಕ್ಯಾಮೆರಾ ಹಿಡಿದಿದ್ದಾರೆ. ಇನ್ನುಳಿದಂತೆ ಚಿತ್ರಕ್ಕೆ ದೀಪು ಎಸ್. ಕುಮಾರ್ ಸಂಕಲನವಿದೆ. ಅರುಣ್ ಸಾಗರ್ ಕಲಾ ನಿರ್ದೇಶನವಿದೆ.
ಹೌದು, ಕೊರೊನಾ ಹಾವಳಿಗೆ ತತ್ತರಿಸಿ ಹೋಗಿದ್ದ ಸಿನಿಮಾರಂಗ ಈಗ ಚೇತರಿಸಿಕೊಳ್ಳುತ್ತಿದೆ. ಈವರೆಗೆ ಶೇ.50ರಷ್ಟು ಆಸನ ಭರ್ತಿಗೆ ಅವಕಾಶ ನೀಡಿದ್ದ ರಾಜ್ಯ ಸರ್ಕಾರ, ಅಕ್ಟೋಬರ್ 1ರಿಂದ ಶೇ.100ಷ್ಟು ಭರ್ತಿಗೆ ಅವಕಾಶ ಕೊಟ್ಟಿದೆ. ಇದೇ ಖುಷಿಯಲ್ಲಿರುವ ಸಿನಿಮಾ ಮಂದಿ ಹಬ್ಬದ ಸಂಭ್ರಮದಲ್ಲಿರುವುದಂತೂ ನಿಜ. ಸರ್ಕಾರ ಶೇ.100ರಷ್ಟು ಭರ್ತಿಗೆ ಅವಕಾಶ ಮಾಡಿಕೊಟ್ಟಿದ್ದೇ ತಡ, ಸ್ಟಾರ್ ಸಿನಿಮಾಗಳು ರಿಲೀಸ್ ದಿನಾಂಕವನ್ನು ಘೋಷಿಸಿಕೊಂಡಿವೆ. ಸುದೀಪ್ ಅಭಿನಯದ “ಕೋಟಿಗೊಬ್ಬ 3” ಮತ್ತು “ದುನಿಯಾ” ವಿಜಯ್ ಅಭಿನಯದ “ಸಲಗʼ ಸಿನಿಮಾಗಳು ದಸರಾಗೆ ಅಂದರೆ ಅಕ್ಟೋಬರ್ 14ರಂದು ದರ್ಶನ ನೀಡಲಿವೆ.
ಶಿವರಾಜ್ ಕುಮಾರ್ ಅಭಿನಯದ “ಭಜರಂಗಿ 2” ಚಿತ್ರದೊಂದಿಗೆ ಲವ್ಲಿ ಸ್ಟಾರ್ ಪ್ರೇಮ್ ಅಭಿನಯದ 25ನೇ ಚಿತ್ರ “ಪ್ರೇಮಂ ಪೂಜ್ಯಂ’ ಚಿತ್ರವೂ ಥಿಯೇಟರ್‌ಗೆ ಎಂಟ್ರಿಕೊಡುತ್ತಿದೆ. ಹೌದು, ಪ್ರೇಮ್ ಅವರ “ಪ್ರೇಮಂ ಪೂಜ್ಯ” ಸಿನಿಮಾ ಕೂಡ ರಿಲೀಸ್ ದಿನಾಂಕವನ್ನು ಘೋಷಿಸಿದೆ. ಅಕ್ಟೋಬರ್ 29ಕ್ಕೆ ಪ್ರೇಕ್ಷಕರ ಮುಂದೆ ಬರುವುದನ್ನು ಹೇಳಿಕೊಂಡಿದೆ. ಇನ್ನು ಈ ಚಿತ್ರವನ್ನು ರಾಘವೇಂದ್ರ ನಿರ್ದೇಶನ ಮಾಡಿದ್ದಾರೆ. ರಕ್ಷಿತಾ ಕೆಡಂಬಾಡಿ ಮತ್ತು ಡಾ ರಾಜ್ ಕುಮಾರ್ ಜಾನಕಿ ರಾಮನ್ ನಿರ್ಮಾಣ ಮಾಡಿದ್ದಾರೆ. ಇದೊಂದು ರೋಮ್ಯಾಂಟಿಕ್ ಕಥಾಹಂದರ ಹೊಂದಿದೆ. ಈ ಚಿತ್ರದಲ್ಲಿ ಪ್ರೇಮ್ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವರಿಗೆ ಬೃಂದಾ ಆಚಾರ್ಯ ನಾಯಕಿಯಾಗಿದ್ದಾರೆ.
ಅದೇನೆ ಇರಲಿ, ಕಳೆದ ಎರಡು ವರ್ಷಗಳಿಂದಲೂ ದಂಗುಬಡಿದಿದ್ದ ಚಿತ್ರರಂಗಕ್ಕೆ ಈಗ ಮಂದಹಾಸ ಮೂಡಿದೆ. ಸದ್ಯ ಸ್ಟಾರ್‌ಗಳ ಚಿತ್ರಗಳು ಥಿಯೇಟರ್‌ನಲ್ಲಿ ಬಿಡುಗಡೆಯಾಗುತ್ತಿವೆ. ಆ ಮೂಲಕ ಪ್ರೇಕ್ಷಕರನ್ನು, ಅಭಿಮಾನಿಗಳನ್ನು ತನ್ನತ್ತ ಸೆಳೆದುಕೊಳ್ಳುವ ಪ್ರಯತ್ನ ಕೂಡ ನಡೆಯುತ್ತಿದೆ ಎಂಬುದೇ ವಿಶೇಷ. ಅಭಿಮಾನಿಗಳು ಈಗ ಥಿಯೇಟರ್ ಮುಂದೆ ಹಬ್ಬ ಆಚರಿಸಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಮತ್ತೆ ಆ ವೈಭವ ಮರುಕಳಿಸಲು ಬಹಳ ದಿನಗಳೇನು ಬೇಕಿಲ್ಲ. ಆದರೂ, ಮುಂಜಾಗ್ರತೆ ಕ್ರಮ ಕೈಗೊಂಡು ಫ್ಯಾನ್ಸ್ ಸಿನಿಮಾ ನೋಡಿ, ಚಿತ್ರರಂಗವನ್ನು ಬೆಳೆಸಬೇಕಿದೆ. ಹಾಗೆಯೇ, ಥಿಯೇಟರ್‌ಗಳಿಗೆ ಮತ್ತೆ ಆ ಸಂಭ್ರಮ ತಂದುಕೊಡಬೇಕಿದೆ.
ಭಾರತೀಯ ಸಿನಿಮಾ ಕಂಡ ಮೇರು ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅಗಲಿ ಇಂದಿಗೆ (ಸೆಪ್ಟೆಂಬರ್ 25) ಒಂದು ವರ್ಷ. ದಾವಣಗೆರೆಯ ಹಿರಿಯ ಪತ್ರಕರ್ತ ವಿ.ಹನುಮಂತಪ್ಪ ಎಸ್‌ಪಿಬಿ ಕುರಿತು ‘ಸ್ವರ ಸಾಮ್ರಾಟ ಎಸ್.ಪಿ.ಬಾಲಸುಬ್ರಹ್ಮಣ್ಯಂ’ ಕೃತಿ ರಚಿಸಿದ್ದಾರೆ. ಈ ಕೃತಿ ಸೆಪ್ಟೆಂಬರ್ 25ರಂದು ದಾವಣಗೆರೆಯಲ್ಲಿ ಲೋಕಾರ್ಪಣೆಗೊಳ್ಳುತ್ತಿದೆ. ಈ ಪುಸ್ತಕದಲ್ಲಿನ ಒಂದು ಆಯ್ದ ಟಿಪ್ಪಣಿ ಇಲ್ಲಿದೆ.
ನನ್ನನ್ನು ಭಾರತದ ಎಲ್ಲಾ ಸ್ಥಳದ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಆದರೆ ಅದೇಕೋ ನನಗೂ ಗೊತ್ತಿಲ್ಲ. ಅವರೆಲ್ಲರಿಗಿಂತಲೂ ಕನ್ನಡಿಗರಿಗೆ ನನ್ನ ಮೇಲೆ ಪ್ರೀತಿ ಅಭಿಮಾನ ತುಸು ಹೆಚ್ಚೇ ಎನ್ನಬಹುದು. ಹೀಗಾಗಿ ಮುಂದಿನ ಜನ್ಮ ಎಂಬುದೇನಾದರೂ ಇದ್ದರೆ ಖಂಡಿತವಾಗಿಯೂ ಕರ್ನಾಟಕದಲ್ಲಿ ಹುಟ್ಟಬೇಕೆಂಬ ಆಸೆ. ಇದು ಉತ್ಪ್ರೇಕ್ಷೆ ಅಲ್ಲ ಮತ್ತು ಪ್ರಚಾರಕ್ಕಾಗಿಯೂ ಅಲ್ಲ. ನನ್ನ ಹೃದಯಾಂತರಾಳದ ಮಾತು ಎಂದು ಎಸ್.ಪಿ.ಬಿ. ಅನೇಕ ಸಂದರ್ಭದಲ್ಲಿ ಹೇಳಿದ್ದರು. ಕನ್ನಡವರಿಗೆ ಹೆಚ್ಚು ಪ್ರಿಯರಾದ ಎಸ್‌ಪಿಬಿ ಸಾವಿರಾರು ಕನ್ನಡದ ಹಾಡುಗಳನ್ನು ಹಾಡಿದ್ದಾರೆ. ಕನ್ನಡದಲ್ಲಿ "ನಕ್ಕರೆ ಅದೇ ಸ್ವರ್ಗ" ಚಿತ್ರವು 1966ರಲ್ಲಿ ತೆರೆಕಂಡಿತು. ಬಾಲು ಕೂಡ ಪ್ರಥಮವಾಗಿ ಅದೇ ಸಿನಿಮಾದ ಮೂಲಕ ಕನ್ನಡಿಗರ ಹೃದಯ ಸಾಮ್ರಾಜ್ಯಕ್ಕೆ ಲಗ್ಗೆ ಹಾಕಿದರೆನ್ನಬಹುದು. ಮೊದಲ ಹಾಡಿಗೆ ದೊರೆತ ಸಂಭಾವನೆ 150ರೂ.ಗಳು. ಆ ಕಾಲಕ್ಕೆ ಕನ್ನಡದಲ್ಲಿ ಪ್ರಸಿದ್ಧರಾಗಿದ್ದ ಪಿ.ಬಿ. ಶ್ರೀನಿವಾಸ್ ಒಂದು ಹಾಡಿಗೆ 250ರೂ. ಸಂಭಾವನೆ ಪಡೆಯುತ್ತಿದ್ದರು. "ದೇವರಗುಡಿ" ಸಿನಿಮಾದಮಾಮರವೆಲ್ಲೋ ಕೋಗಿಲೆ ಎಲ್ಲೋ” ಹಾಡು ಅವರಿಗೆ ಅತ್ಯಂತ ಹೆಚ್ಚಿನ ಜನಪ್ರಿಯತೆಗೆ ನಾಂದಿ ಹಾಡಿತೆನ್ನಬಹುದು.
ಸುಮಾರು ನಾಲ್ಕೂವರೆ ದಶಕಗಳ ಕಾಲ ಕನ್ನಡದ 15ಕ್ಕೂ ಹೆಚ್ಚು ನಾಯಕನಟರಿಗೆ ಅವರ ಧ್ವನಿಯೇ ಪರ್ಫೆಕ್ಟ್ ಎಂಬಂತೆ ಹೊಂದಿಕೊಂಡಿತು. ‘ಈ ಭೂಮಿ ಬಣ್ಣದ ಬುಗುರಿ’ ಎನ್ನುವಾಗ ವಿಷ್ಣುವರ್ಧನ್ ಹಾಡಿದಂತೆ, ಚಂದನದ ಗೊಂಬೆ ಚೆಲುವಾದ ಗೊಂಬೆ" ಪಲ್ಲವಿ ಕೇಳಿದಾಗ ಅನಂತ್‌ನಾಗ್ ದನಿ ಎನ್ನುವಂತಾಗುವುದು, ‘ಜೊತೆ ಜೊತೆಯಲಿ’ ಎಂದು ಗುನುಗುವಾಗ ಶಂಕರ್‌ನಾಗ್ ಹಾಡಿದಂತೆ, ‘ಸ್ನೇಹದ ಕಡಲಲ್ಲಿ’ ಹಾಡಿನ ನೆನಪು ಶ್ರೀನಾಥ್‌ರ ದನಿಯಾಗಿ, ‘ಶಿವ ಶಿವ ಎಂದರೆ ಭಯವಿಲ್ಲ...’ ಎನ್ನುವಾಗ ಲೋಕೇಶ್,ನಮ್ಮೂರು ಮೈಸೂರು, ನಿಮ್ಮೂರು ಯಾವೂರು” ಪಲ್ಲವಿಯು ದ್ವಾರಕೀಶ್‌ರೇ ಹಾಡಿದಂತೆ, ‘ಮಂಡ್ಯದ ಗಂಡು’ ಹಾಡಿನ ನೆನಪಿಗೆ ಅಂಬರೀಶ್ ದನಿಯಾದಂತೆ, ‘ಟುವ್ವಿ ಟುವ್ವಿ’ ಎಂದಾಗ ಶಿವರಾಜ್‌ಕುಮಾರ್, `ಈ ಬೆಳದಿಂಗಳು” ಎಂದಾಗ ರಮೇಶ್ ಅರವಿಂದ್‌ರ ದನಿಯೇ ನಮಗೆ ಕೇಳಿಸಿದಂತಹ ಪ್ರಭಾವಕ್ಕೆ ಸಿಲುಕಿಸಿರುವುದರ ಹಿಂದೆ ಎಸ್.ಪಿ.ಬಿ.ಯವರೇ ಹಾಡಿದ್ದರೆಂಬುದನ್ನು ಬಿಡಿಸಿ ಹೇಳಬೇಕಾಗಿಲ್ಲ.
ಎಸ್‌ಪಿಬಿ ನಿರಂತರವಾಗಿ ಹಾಡಲು ಸಾಧ್ಯವಾದದ್ದು ಹೇಗೆ? ಬಾಲು ಹಾಡುತ್ತಿದ್ದ ಕಾಲಘಟ್ಟದಲ್ಲಿ ಗಾಯಕರಾಗಿ ಬಂದವರು. ಹೆಚ್ಚು ವರ್ಷ ಚಾಲ್ತಿಯಲ್ಲಿ ಉಳಿಯಲಿಲ್ಲ. ಇವರು ಮಾತ್ರ ನಿರಂತರವಾಗಿ ಹಾಡುತ್ತಾ, ವಿಶ್ರಾಂತಿಯ ಸಂಗತಿಯನ್ನು ಮರೆತವರಂತಿದ್ದರು. ನಟರ ಧ್ವನಿಯನ್ನು ಅನುಸರಿಸುತ್ತಿದ್ದ ಎಸ್.ಪಿ.ಬಿ.ಗೆ ಅದೇ ಸಂಗೀತಕ್ಕೂ ವರದಾನ ಆಯಿತೆನ್ನಬಹುದು. ಹಾಡಬೇಕಾದ ನಟರ ಹೆಸರು ಹೇಳಿದರೆ ಸಾಕು. ಅವರ ಧ್ವನಿಗೆ ತಕ್ಕಂತೆ ಹಾಡುವುದು ಅವರಿಗೆ ಕರತಲಾಮಲಕ ಎನ್ನುವಂತಾಯಿತು. ಅವರ ಕಂಠ ಮಾಧುರ್ಯದ ಸಾಮರ್ಥ್ಯ ಹೇಗಿತ್ತೆಂದರೆ ಇಪ್ಪತ್ತು ವರ್ಷದ ಹಿಂದಿನ ಹಾಡನ್ನು ನಂತರ ಹಾಡಿಸಿದಾಗಲೂ ಅದೇ ಫೋರ್ಸ್‌ನಲ್ಲಿ ಅದೇ ವಾಯ್ಸ್ ಕಲ್ಚರ್‌ನಲ್ಲಿ, ಯಾವ ಲ್ಯಾಂಡಿಂಗ್ ನೋಟ್ಸ್‌ಗಳಿಗೂ ವ್ಯತ್ಯಾಸವಾಗದ ಹಾಗೆ ಪ್ರಸೆಂಟ್ ಮಾಡುವಲ್ಲಿ ಎಸ್ಪಿಬಿಯವರಿಗೆ ಅವರೇ ಸಾಟಿ ಎನಿಸಿದ್ದರು.
ಇನ್ನೊಬ್ಬರ ಅವಕಾಶವನ್ನು ಕಿತ್ತುಕೊಳ್ಳಲಾರೆ ಚಿತ್ರವೊಂದಕ್ಕೆ ವೈದ್ಯನಾಥನ್ ಸಂಗೀತ ಸಾರಥ್ಯದಲ್ಲಿ ಬಾಲು ಹಾಡನ್ನು ಹಾಡಿ ತಮ್ಮ ಪಾಲಿನದನ್ನು ಮುಗಿಸಿದರು. ಆದರೆ ನಿರ್ಮಾಪಕರೊಬ್ಬರು ಇನ್ನೊಂದು ಹಾಡನ್ನೂ ಪ್ಲೀಸ್ ಹಾಡಿರಿ ಎಂದು ವಿನಂತಿಸಿಕೊಂಡರು. ಆ ಹಾಡನ್ನು ಪಿ.ಬಿ. ಶ್ರೀನಿವಾಸ್ ಹಾಡಬೇಕಿತ್ತು, ಸ್ವತಃ ಪಿ.ಬಿ.ಎಸ್. ಕಾಯುತ್ತಿದ್ದರೂ ಅವಕಾಶವನ್ನು ಬದಲಾಯಿಸುವ ಪ್ರಯತ್ನ ನಡೆಯಿತು. ಬಾಲು ಅಸಲಿ ವಿಷಯವನ್ನು ತಿಳಿದುಕೊಂಡರು, ಅವರಿಂದ ಹಾಡಿಸಬೇಕಾದ ಹಾಡನ್ನು ನಾನು ಕಸಿಯುವುದು ಸಮಂಜಸವಲ್ಲ, ನೀವು ಅವರಿಂದಲೇ ಹಾಡಿಸುವುದು ನ್ಯಾಯಸಮ್ಮತ, ಅವರಿಂದಲೇ ಹಾಡಿಸಿ ಎಂದರು. ನಂತರ ಪಿ.ಬಿ.ಶ್ರೀನಿವಾಸ್ ಹಾಡುವ ತನಕ ಇದ್ದು ನಂತರ ಸ್ಟುಡಿಯೋದಿಂದ ಹೊರ ಬಂದರು. ಹಿರಿಯ ಗಾಯಕನ ಬಗೆಗಿನ ಗೌರವ ಯಾವ ರೀತಿಯಲ್ಲಿ ಇತ್ತು ಎಂದು ಇದನ್ನು ಕರೆಯಬಹುದಲ್ಲವೆ?
ಪತ್ರಕರ್ತ, ಲೇಖಕ ವಿ.ಹನುಮಂತಪ್ಪ
2007 ಡಿಸೆಂಬರ್ 16 ರಂದು ಮೈಸೂರಿನಲ್ಲಿ ಎದೆತುಂಬಿ ಹಾಡುವೆನು" ಸ್ಪರ್ಧೆಯ ಸಂಬಂಧದ ಕಾರ್ಯಕ್ರಮದಲ್ಲಿ ಬಾಲು ಪಾಲ್ಗೊಂಡಿದ್ದರು. ಆ ಹೊತ್ತಿಗೆ ಅವರು ಹಾಡಲು ಶುರು ಮಾಡಿ ನಾಲ್ಕು ದಶಕಗಳು ಕಳೆದಿದ್ದವು.
ಅಷ್ಟು ವರ್ಷಗಳ ದೀರ್ಘ ಕಾಲ ಹಾಡುವುದನ್ನು ಮುಂದುವರಿಸಿದ್ದರೂ ಅದೇ ಕಂಠಸಿರಿಯನ್ನು ಉಳಿಸಿಕೊಳ್ಳಲು ಹೇಗೆ ಸಾಧ್ಯವಾಯಿತು ಎಂಬ ಸಂದರ್ಶಕರೊಬ್ಬರ ಪ್ರಶ್ನೆಗೆ ಬಾಲು ಉತ್ತರ ಹೀಗಿತ್ತು,ಕಾಣದ ಊರಲಿ ನೀ ಕುಳಿತಿರುವೆ’, ‘ಎಲ್ಲರ ಕಥೆಯ ನೀ ಬರೆದಿರುವೆ” ಆ ಹಾಡನ್ನು ನೆನಪಿಸಿಕೊಂಡಿದ್ದರು, ಕನ್ನಡಿಗರು ಮತ್ತು ಕನ್ನಡದ ಪ್ರಸ್ತಾಪ ಬಂದಾಗಲೆಲ್ಲಾ ಎಸ್ಪಿಬಿಯವರಿಗೆ ಭಾವುಕತೆ ಗರ್ಭ ತುಂಬಿಕೊಳ್ಳುತ್ತಿತ್ತು.
ಜೂ.ನಿಖಿಲ್ ಎಂಟ್ರಿಯಿಂದ ಗಂಧದಗುಡಿಯ ಯುವರಾಜ ನಿಖಿಲ್ ಗೆ ಶಾಸಕನಾಗುವ ಅದೃಷ್ಟವಿದೆ ಎನ್ನುವ ಸಮಾಚಾರವನ್ನ ವಿನಯ್ ಗುರೂಜಿಯವರು ಈ ಹಿಂದೆಯೇ ಹೇಳಿದ್ದಾರೆ. ಸದ್ಯಕ್ಕೆ, ದೊಡ್ಮನೆಯ ಯುವರಾಣಿಗೆ ಗಂಡುಮಗು ಜನನದ ಸುದ್ದಿ ಸತ್ಯವಾಗಿದೆ. ಆ ಮಗುವಿನ ಭವಿಷ್ಯ ಉಜ್ವಲವಾಗಿರುವುದರ ಜೊತೆಗೆ ನಿಖಿಲ್ ಗೆ ರಾಜಯೋಗ ಬರಲಿದೆಯಂತೆ. ಆ ದಿವ್ಯಯೋಗದ ಕ್ಷಣಕ್ಕಾಗಿ ಗೌಡ್ರ ಕುಟುಂಬ ಮಾತ್ರವಲ್ಲ ಅಭಿಮಾನಿ ದೇವರುಗಳು ಕೂಡ ಕೂತೂಹಲದಿಂದ ಎದುರುನೋಡ್ತಿದೆ.
ದೊಡ್ಡಗೌಡರ ಕುಟುಂಬಕ್ಕೆ ಮರಿಮೊಮ್ಮಗನ ಆಗಮನವಾಗುತ್ತೆ ಅಂತ ಅವಧೂತರಾದ ವಿನಯ್ ಗುರೂಜಿಯವರು ಭವಿಷ್ಯ ನುಡಿದಿದ್ದರು.ಕೊನೆಗೂ ಗುರೂಜಿಯ ಭವಿಷ್ಯ ನಿಜವಾಗಿದೆ. ನಿಖಿಲ್- ರೇವತಿ ದಂಪತಿಗೆ ಗಂಡುಮಗು ಜನಿಸಿದೆ. ಮರಿ ಯುವರಾಜನೋ ಅಥವಾ ಜೂನಿಯರ್ ಯುವರಾಣಿಯೋ ಎನ್ನುವ ಕಾತುರಕ್ಕೆ ಬ್ರೇಕ್ ಬಿದ್ದಿದೆ. ಜೂ. ನಿಖಿಲ್ ಕಣ್ತುಂಬಿಕೊಳ್ಳುವ ಕಾತುರ ಹೆಚ್ಚಾಗಿದೆ.
ಜೂ.ನಿಖಿಲ್ ಎಂಟ್ರಿಯಿಂದ ಗಂಧದಗುಡಿಯ ಯುವರಾಜ ನಿಖಿಲ್ ಗೆ ಶಾಸಕನಾಗುವ ಅದೃಷ್ಟವಿದೆ ಎನ್ನುವ ಸಮಾಚಾರವನ್ನ ವಿನಯ್ ಗುರೂಜಿಯವರು ಈ ಹಿಂದೆಯೇ ಹೇಳಿದ್ದಾರೆ. ಸದ್ಯಕ್ಕೆ, ದೊಡ್ಮನೆಯ ಯುವರಾಣಿಗೆ ಗಂಡುಮಗು ಜನನದ ಸುದ್ದಿ ಸತ್ಯವಾಗಿದೆ. ಆ ಮಗುವಿನ ಭವಿಷ್ಯ ಉಜ್ವಲವಾಗಿರುವುದರ ಜೊತೆಗೆ ನಿಖಿಲ್ ಗೆ ರಾಜಯೋಗ ಬರಲಿದೆಯಂತೆ.
ಆ ದಿವ್ಯಯೋಗದ ಕ್ಷಣಕ್ಕಾಗಿ ಗೌಡ್ರ ಕುಟುಂಬ ಮಾತ್ರವಲ್ಲ ಅಭಿಮಾನಿ ದೇವರುಗಳು ಕೂಡ ಕೂತೂಹಲದಿಂದ ಎದುರುನೋಡ್ತಿದೆ. ಆ ಅದೃಷ್ಟದ ಕ್ಷಣ ಆದಷ್ಟು ಬೇಗ ಬರಲಿ ಅಲ್ಲವೇ.
ಸ್ಯಾಂಡಲ್‌ವುಡ್ ಯುವರಾಜ ನಿಖಿಲ್‌ಕುಮಾರಸ್ವಾಮಿಯವರು ಸಿನಿಮಾ ಮಾತ್ರವಲ್ಲದೇ ರಾಜಕೀಯದಲ್ಲೂ ಸಕ್ರಿಯರಾಗಿದ್ದಾರೆ. ಜೆಡಿಎಸ್ ಯುವಘಟಕದ ರಾಜ್ಯಾಧ್ಯಕ್ಷರಾಗಿರುವ ನಿಖಿಲ್, ಗಂಧದಗುಡಿಯ ಅಂಗಳದಲ್ಲಿ ಗೆಲುವಿನ ಗದ್ದುಗೆ ಏರುವುದರ ಜೊತೆಗೆ ರಾಜಕೀಯ ನಾಯಕರಾಗಿ ಅಧಿಕಾರದ ಚುಕ್ಕಾಣಿ ಹಿಡಿಬೇಕು ಎನ್ನುವ ಮಹದಾಸೆವೊತ್ತಿದ್ದಾರೆ. ಪಕ್ಷಸಂಘಟನೆ ಹಾಗೂ ಪ್ರಚಾರದ ಜೊತೆಗೆ ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ. ಸದ್ಯಕ್ಕೆ, ರೈಡರ್ ಸಿನಿಮಾ ಬಿಡುಗಡೆಗೆ ಸಜ್ಜಾಗ್ತಿದೆ.
ಅಂದ್ಹಾಗೇ, ಇತ್ತೀಚೆಗಷ್ಟೇ ದೊಡ್ಮನೆಯ ಯುವರಾಣಿ ರೇವತಿಯವರ ಸೀಮಂತಕಾರ್ಯ ಅದ್ದೂರಿಯಾಗಿ ನೆರವೇರಿತ್ತು. ಮನೆಮಗಳ ರೂಪದಲ್ಲಿರುವ ಸೊಸೆ ರೇವತಿಯವರ ಕನಸಿನಂತೆಯೇ ಸೀಮಂತ ಶಾಸ್ತ್ರವನ್ನ ಗ್ರ್ಯಾಂಡ್ ಆಗಿ, ಸಂಪ್ರದಾಯಬದ್ಧವಾಗಿ ನೆರವೇರಿಸಿದ್ದರು. ಎಚ್ ಎಸ್ ಆರ್ ಲೇ ಔಟ್ ನ ಖಾಸಗಿ ಕನ್ವೆಷನ್ ಹಾಲ್ ನಲ್ಲಿ ರೇವತಿ ಬೇಬಿಶವರ್ ಕಾರ್ಯಕ್ರಮ ಹಮ್ಮಿಕೊಂಡಿದ್ದರು, ಕುಟುಂಬಸ್ಥರು ಹಾಗೂ ಆಪ್ತರು ಸೇರಿದಂತೆ ಹಲವು ಗಣ್ಯರು ಭಾಗಿಯಾಗಿ ಶುಭಕೋರಿದ್ದರು
ಪೊಲೀಸು ಸಾಯಿಸ್ಬೋದು. ಆದರೆ, ಕೊಲೆ ಮಾಡಬಾರದು… ಆ ತನಿಖಾಧಿಕಾರಿ ಈ ಡೈಲಾಗ್ ಹೇಳುವ ಹೊತ್ತಿಗೆ, ಅಲ್ಲೊಂದು ಕೊಲೆ ನಡೆದಿರುತ್ತೆ. ಅಲ್ಲಿ ಕೊಲೆಯಾದವ ಯಾರು, ಆ ಕೊಲೆ ಮಾಡಿದ್ದು ಯಾರು, ಯಾಕೆ ಅನ್ನೋ ಕುತೂಹಲವಿದ್ದರೆ, ಯಾವುದೇ ಅನುಮಾನವಿಲ್ಲದೆ “ಪುಕ್ಸಟ್ಟೆ ಲೈಫು” ಸಿನಿಮಾ ನೋಡಬಹುದು. ಅಲ್ಲಲ್ಲಿ ಕಚಗುಳಿ ಇಡುತ್ತಲೇ, ಆಗಾಗ ಕಾಡುವ, ದಿಟ್ಟಿಸಿ ನೋಡುವ, ವಾಸ್ತವತೆ ಸಾರುವ, ಒಮ್ಮೊಮ್ಮೆ ಭಾವುಕತೆಗೆ ನೂಕಿ, ಭಾರವೆನಿಸಿ ನೈಜತೆಗೆ ಹತ್ತಿರವಾಗುವ ಸಿನಿಮಾ ಇದು. ಇಲ್ಲಿ ಓದುವುದಕ್ಕಿಂತ ಹಾಗೊಮ್ಮೆ ಪುರುಸೊತ್ತು ಮಾಡಿಕೊಂಡು ಸಿನಿಮಾ ನೋಡಿದರೆ ಅದಕ್ಕೊಂದು ಅರ್ಥ.
ಇಡೀ ಸಿನಿಮಾದ ಆಕರ್ಷಣೆ ಮನಮಿಡಿಯೋ ಕಥೆ. ಅದನ್ನು ಅಷ್ಟೇ ಸೊಗಸಾಗಿಯೇ ಕಟ್ಟಿಕೊಡುವ ಪ್ರಯತ್ನ ನಿರ್ದೇಶಕ ಅರವಿಂದ್ ಕುಪ್ಳೀಕರ್ ಅವರಿಂದ ಆಗಿದೆ. ಮೊದಲರ್ಧ ಸುಮ್ಮನೆ ನೋಡಿಸಿಕೊಂಡು ಹೋಗುವ ತಾಕತ್ತು ಚಿತ್ರಕಥೆಗಿದೆ. ಒಂದಷ್ಟು ಕುತೂಹಲ ಕೆರಳಿಸುತ್ತಲೇ ದ್ವಿತಿಯಾರ್ಧ ಸಾಗುತ್ತದೆಯಾದರೂ, ನೋಡುವ ಪ್ರೇಕ್ಷಕನಿಗೆ ಮುಂದೇನಾಗುತ್ತೆ ಅನ್ನುವುದರ ಅರಿವು ಕೂಡ ಗೊತ್ತಾಗುತ್ತೆ. ಅಲ್ಲಲ್ಲಿ ಇನ್ನಷ್ಟು ಬಿಗಿಯಾದ ನಿರೂಪಣೆ ಇರಬೇಕಿತ್ತು. ಕೆಲವು ಕಡೆ ನಿರ್ದೇಶಕರ ಹಿಡಿತ ಕೈ ತಪ್ಪಿದೆಯಾದರೂ, ಕೊನೆ ಕೊನೆಯಲ್ಲಿ ಸೀಟಿನ ಅಂಚಿಗೆ ಕೂರಿಸುವ ತಾಕತ್ತು ಆ ಕಥೆಯಲ್ಲಿದೆ. ಎಲ್ಲೋ ಒಂದು ಕಡೆ ಕಥೆ ಆಶಯ ಬೇರೆಲ್ಲೋ ಸಾಗುತ್ತಿದೆ ಅನ್ನುವ ಹೊತ್ತಿಗೆ ಚಿತ್ರದ ಸಂಭಾಷಣೆ, ಹಿನ್ನೆಲೆ ಸಂಗೀತ ಮತ್ತು ಪಾತ್ರಗಳಲ್ಲಿನ ಲವಲವಿಕೆ ನೋಡುಗರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿವೆ. ಒಂದು ಸಿನಿಮಾ ನೈಜತೆಗೆ ಹತ್ತಿರವಾಗಿರಬೇಕು ಜೊತೆಗೆ ಸಮಾಜದೊಳಗಿನ ವಾಸ್ತವದ ಅರಿವನ್ನು ತೆರೆದಿಡುವಂತಿರಬೇಕು ಅನ್ನುವುದಕ್ಕೆ ಈ ಚಿತ್ರ ಸಾಕ್ಷಿ. ಪ್ರಸ್ತುತ ವಿದ್ಯಮಾನಗಳನ್ನೇ ಇಟ್ಟುಕೊಂಡು ನಿರೂಪಿಸಿರುವ ಜಾಣತನ ನಿರ್ದೇಶಕರದ್ದು.
ಇದು ಸಾರಾಂಶ… ಅಲ್ಲೊಬ್ಬ ಷಹಜಾನ್. ಅವನಿಗೊಬ್ಬ ಮಮ್ತಾಜ್ ಕೂಡ ಇದ್ದಾಳೆ. ಹಾಗಂತ, ಇಲ್ಲಿ ‘ತಾಜ್ ಮಹಲ್’ನಂತಹ ಪ್ರೇಮ್ ಕಹಾನಿ ಇಲ್ಲ. ಷಹಜಾನ್ ಒಬ್ಬ ಕೀ ಮೇಕರ್. ಅಷ್ಟೇನು ಸ್ಥಿತಿವಂತನಲ್ಲದ ಷಹಜಾನ್, ಪೋಲೀಸರ ಆಟದಗೊಂಬೆ ಆಗ್ತಾನೆ. ಅದೊಂದು ರೀತಿ ಬೇಲಿಯೇ ಎದ್ದು ಹೊಲ ಮೇಯ್ದ ಕಥೆ ಅಂತಿಟ್ಟುಕೊಳ್ಳಿ. ಏನನ್ನೂ ಅರಿಯದ ಷಹಜಾನ್ ತನ್ನದಲ್ಲದ ತಪ್ಪಿಗೆ ಬಂಧಿಯಾಗ್ತಾನೆ. ಇಕ್ಕಟ್ಟಿನ ಪರಿಸ್ಥಿತಿಗೆ ಸಿಲುಕಿ ನಲುಗಿ ಹೋಗ್ತಾನೆ. ಘಟನೆಯೊಂದರಲ್ಲಿ ಮನಸ್ಸೊಪ್ಪದಿದ್ದರೂ ಪರಿಸ್ಥಿತಿ ಅವನನ್ನು ಕಳ್ಳನನ್ನಾಗಿಸುತ್ತೆ. ಅವನ ಆ ಪರಿಸ್ಥಿತಿಗೆ ಕಾರಣವೇನು? ಅದೇ ಸಿನಿಮಾದ ಟ್ವಿಸ್ಟು! ಈ ಕಥೆಯಲ್ಲಿ ಷಹಜಾನ್‌ನ ವ್ಯಥೆಯೂ ಇದೆ. ಅದೇನು ಎಂಬ ಪ್ರಶ್ನೆಗೆ ಉತ್ತರ ಬೇಕಿದ್ದರೆ, ಒಂದು ಬಾರಿ ಷಹಜಾನ್‌ನ ನೊಂದ-ಬೆಂದ ಕಥೆಯ ಚಿತ್ರಣ ನೋಡಬಹುದು.
ಇನ್ನು ಚಿತ್ರದ ಮತ್ತೊಂದು ಹೈಲೈಟ್ ಅಂದರೆ, ಸಂಗೀತ. ಚಿತ್ರದ ವೇಗಕ್ಕೆ ಹಿನ್ನೆಲೆ ಸಂಗೀತ ಹೆಗಲು ಕೊಟ್ಟಿದೆ. ಪ್ರತಿ ದೃಶ್ಯದಲ್ಲೂ ಅದ್ವೈತ ಗುರುಮೂರ್ತಿ ಅವರ ಕ್ಯಾಮೆರಾ ಕೈಚಳಕ ಖುಷಿ ಕೊಡುತ್ತದೆ. ಅದಕ್ಕೆ ಪೂರಕವಾಗಿ ಸಂಕಲನವೂ ಇದೆ. ಅಲ್ಲಲ್ಲಿ ಬರುವ ಹಾಡುಗಳಿಗೂ ಇಲ್ಲಿ ಮಹತ್ವವಿದೆ. ಇನ್ನು, ನಟನೆ ವಿಚಾರಕ್ಕೆ ಬಂದರೆ, ಸಂಚಾರಿ ವಿಜಯ್ ಅವರ ಬಗ್ಗೆ ಮಾತಾಡುವಂತಿಲ್ಲ. ಇಡೀ ಪಾತ್ರವನ್ನು ಅವರು ಜೀವಿಸಿದ್ದಾರೆ. ಮುಸ್ಲಿಂ ಯುವಕನ ಪಾತ್ರದ ನೋಡಿದವರಿಗೆ ಖಂಡಿತ ಖುಷಿಯಾಗದೇ ಇರದು. ಆ ಪಾತ್ರ ಮೂಲಕವೂ ಅವರು ಭಾವುಕತೆ ಹೆಚ್ಚಿಸಿದ್ದಾರೆ.
ಸಿನಿಮಾ ನೋಡಿ ಹೊರಬಂದವರಿಗೆ ಸಂಚಾರಿಯ ಭಾವುಕ ಪಯಣ ನೆನಪಾಗದೇ ಇರದು. ಅಷ್ಟರಮಟ್ಟಿಗೆ ಆವರಿಸಿಕೊಂಡಿದ್ದಾರೆ. ಉಳಿದಂತೆ ಅಚ್ಯುತ ಎಂದಿನಂತೆಯೇ ಗಮನ ಸೆಳೆಯುತ್ತಾರೆ. ಪೊಲೀಸ್ ಅಧಿಕಾರಿಯೊಬ್ಬನ ಹಣದಾಸೆ ಹೇಗೆಲ್ಲಾ ಇರುತ್ತೆ, ಅದರೊಂದಿಗೂ ಸಣ್ಣದ್ದೊಂದು ಮಾನವೀಯ ಗುಣವುಳ್ಳ ಪಾತ್ರವದು. ಇನ್ನು, ರಂಗಾಯಣ ರಘು ತನಿಖಾಧಿಕಾರಿಯಾಗಿ ಇಷ್ಟವಾಗುತ್ತಾರೆ. ಈವರೆಗೆ ಮಾಡಿದ ಪಾತ್ರಗಳಿಗಿಂತ ಇಲ್ಲಿನ ಪಾತ್ರ ವಿಭಿನ್ನ ಮತ್ತು ವಿಶಿಷ್ಟ ಎನ್ನಬಹುದು. ಉಳಿದಂತೆ ಅಲ್ಲಲ್ಲಿ ಬರುವ ಪ್ರತಿ ಪಾತ್ರಗಳು ಸಹ ಸಿನಿಮಾದಲ್ಲಿ ಜೀವಿಸಿವೆ.
ಕೊನೇ ಮಾತು: ಈ ಭಾವುಕ ಪಯಣದಲ್ಲಿ ಪುರುಸೊತ್ತು ಮಾಡ್ಕೊಂಡು ‘ಲೈಫ್’ ಎಂಜಾಯ್ ಮಾಡಿ..
ಕೊರೋನಾವೂ ಸೇರಿದಂತೆ ಅನೇಕ ಕಾರಣಗಳಿಗೆ ರಾಜ್ಯದಲ್ಲೀಗ ಚಿತ್ರಮಂದಿರಗಳು ಶಾಶ್ವತವಾಗಿ ಬಾಗಿಲು ಹಾಕುತ್ತಿವೆ. ಆಗೊಂದು ಸಂದರ್ಭದಲ್ಲಿ ಸಾವಿರಕ್ಕೂ ಹೆಚ್ಚಿದ್ದ ಚಿತ್ರಮಂದಿರಗಳ ಸಂಖ್ಯೆ ಈಗ ೫೦೦ಕ್ಕೆ ಬಂದಿದೆ ಎನ್ನುತ್ತವೆ ಮೂಲಗಳು. ಭವಿಷ್ಯದ ದಿನಗಳಲ್ಲಿ ಈ ಸಂಖ್ಯೆ ನೂರಿನ್ನೂರಕ್ಕೆ ಇಳಿದರೂ ಅಚ್ಚರಿ ಇಲ್ಲ. ಇದಕ್ಕೆ ಪರ್ಯಾಯವಾಗಿ ಸಿನಿಮಾದ ಹೊಸ ಮಾರುಕಟ್ಟೆ ಓಟಿಟಿ. ಅಮೆಜಾನ್, ನೆಟ್ ಫ್ಲಿಕ್ಸ್ ಸೇರಿದಂತೆ ಇದಕ್ಕೂ ಈಗ ಹತ್ತಾರು ಪ್ಲಾಟ್ ಫಾರ್ಮ್ ಇವೆ. ಆದರೂ ಕನ್ನಡಕ್ಕೆ ಯೋಗ್ಯವಾದ್ದದೊಂದು ಓಟಿಟಿ ಫ್ಲಾಟ್ ಫಾರ್ಮ್ ಈಗಲೂ ಇಲ್ಲ. ಅದೇ ಕಾರಣಕ್ಕೆ ಹೊಂಬಾಳೆ ಫಿಲಂಸ್ ನಂತಹ ಒಂದು ದೊಡ್ಡ ಸಂಸ್ಥೆ ಕನ್ನಡ ಸಿನಿಮಾಗಳಿಗೇ ಮೀಸಲಾಗಿ ಒಂದು ಒಟಿಟಿ ಪ್ಲಾಟ್ ಫಾರ್ಮ್ ಶುರು ಮಾಡಿದರೆ ಕನ್ನಡ ಸಿನಿಮಾ ಉಳಿಯುತ್ತೆ, ಹಾಗೆಯೇ ಕನ್ನಡ ಸಿನಿಮಾ ನಂಬಿ ಬಂದ ನಿರ್ಮಾಪಕರೂ ಉಳಿಯಬಲ್ಲರು ಅಲ್ಲವೇ?
ಹೊಂಬಾಳೆ ಫಿಲಂಸ್… ಸದ್ಯಕ್ಕೆ ಭಾರತೀಯ ಚಿತ್ರರಂಗದಲ್ಲಿಯೇ ಅತೀ ಹೆಚ್ಚು ಸೌಂಡ್ ಮಾಡುತ್ತಿರುವ ಚಿತ್ರ ನಿರ್ಮಾಣ ಸಂಸ್ಥೆ. ಇದು ಕನ್ನಡದ ಪ್ರತಿಷ್ಠಿತ ಪ್ರೊಡಕ್ಷನ್ ಹೌಸ್ ಅನ್ನೋದು ಮತ್ತೊಂದು ಹೆಮ್ಮೆ. ಅದಕ್ಕೆ ಕಾರಣ ʼಕೆಜಿಎಫ್ʼ ಚಿತ್ರ. ಕನ್ನಡ ಮಾತ್ರವಲ್ಲ ಭಾರತೀಯ ಚಿತ್ರರಂಗದಲ್ಲಿಯೇ ʼಕೆಜಿಎಫ್ʼ ಸಂಚಲನ ಸೃಷ್ಟಿ ಮಾಡಿದ ರೀತಿ ಈಗಲೂ ಸೋಜಿಗ. ಸಮುದ್ರದೊಳಗೆ ಇದಕ್ಕಿದ್ದಂತೆ ದೊಡ್ಡ ಅಲೆಯೇ ಎದ್ದು ಬಂದಂತೆ ಭಾರತೀಯ ಚಿತ್ರರಂಗಕ್ಕೆ ಸುನಾಮಿಯಂತೆ ಅಪ್ಪಳಿಸಿದ್ದು ಕೆಜಿಎಫ್ ಚಿತ್ರ. ಈ ಸಿನಿಮಾ ಸೃಷ್ಟಿಸಿದ ಅಬ್ಬರಕ್ಕೆ ಇಡೀ ಭಾರತೀಯ ಚಿತ್ರರಂಗವೇ ಅರೆಕ್ಷಣ ಕನ್ನಡದತ್ತ ತಿರುಗಿ ನೋಡಿದ್ದೀಗ ಇತಿಹಾಸ. ಕನ್ನಡದ ಚಿತ್ರವೊಂದು ಆ ಮಟ್ಟಿಗೆ ಭಾರತೀಯ ಚಿತ್ರರಂಗದಲ್ಲಿ ಸದ್ದು ಮಾಡಿದ್ದು ಅದೇ ಮೊದಲು. ಅದರ ಕೀರ್ತಿ ಹೊಂಬಾಳೆ ಫಿಲಂಸ್‌ನ ರೂವಾರಿ ವಿಜಯ್ ಕಿರಗಂದೂರು ಹಾಗೂ ನಿರ್ದೇಶಕ ಪ್ರಶಾಂತ್ ನೀಲ್ ಅವರದ್ದು.
ಕೆಜಿಎಫ್ ಮೂಲಕ ನಿರ್ದೇಶಕ ಪ್ರಶಾಂತ್ ನೀಲ್ ಸೃಷ್ಟಿಸಿದ ಆ ಮ್ಯಾಜಿಕ್ ಬಗ್ಗೆ ಎಷ್ಟು ವರ್ಣಿಸಿದರು ಕಮ್ಮಿಯೇ. ಅದರ ದೊಡ್ಡ ಪ್ರಭಾವವೇ ಕನ್ನಡ ಸಿನಿಮಾರಂಗದಲ್ಲೂ ಎದ್ದು ನಿಂತ ಪ್ಯಾನ್ ಇಂಡಿಯಾ ಟ್ರೆಂಡ್. ಅದೇ ಕಾರಣಕ್ಕೆ ಇವತ್ತು ಇಡಿಯಾ ಲೆವೆಲ್ ನಲ್ಲಿ ಕನ್ನಡ ಸಿನಿಮಾ ಅಂದ್ರೆ ಹೊಂಬಾಳೆ ಫಿಲಂಸ್ ಎನ್ನುವಷ್ಟರ ಮಟ್ಟಿಗೆ ಕೆಜಿಎಫ್ ದೊಡ್ಡ ಹವಾ ಸೃಷ್ಟಿಸಿದೆ. ಹಾಗಂತ ಕನ್ನಡ ಸಿನಿಮಾ ಅಂದ್ರೆ ಹೊಂಬಾಳೆ ಫಿಲಂಸ್ ಅಂತ ನಾವು ಹೇಳುತ್ತಿಲ್ಲ. ಅಷ್ಟೇ ಯಾಕೆ, ಈ ಮಾತನ್ನು ಹೊಂಬಾಳೆ ಫಿಲಂಸ್ ನ ರೂವಾರಿ ವಿಜಯ್ ಕಿರಗಂದೂರು ಕೂಡ ಒಪ್ಪುವುದಿಲ್ಲ. ಯಾಕಂದ್ರೆ ಕನ್ನಡ ಸಿನಿಮಾದ ಇತಿಹಾಸ ದೊಡ್ಡದಿದೆ. ಆದರೆ ಬದಲಾದ ಕಾಲದ ಸಿನಿಮಾ ಮಾರ್ಕೆಟ್ ದೃಷ್ಟಿಯಲ್ಲಿ ಕನ್ನಡ ಸಿನಿಮಾ ಅಂದ್ರೆ ಬಾಲಿವುಡ್ ಸೇರಿದಂತೆ ಇಡೀ ಭಾರತೀಯ ಚಿತ್ರರಂಗ ಒಂದು ಕ್ಷಣ ಅಚ್ಚರಿಯಾಗುವಂತೆ ಮಾಡಿದ್ದು ಕೆಜಿಎಫ್ ಚಿತ್ರ ಎನ್ನುವುದಕ್ಕೆ ಬಹುಶ: ಯಾರದೇ ತಕರಾರು ಇರದು.
ಅಷ್ಟು ಮಾತ್ರವಲ್ಲ, ʼಕೆಜಿಎಫ್ʼ ಬಂದು ಹೋದ ನಂತರ ಉಂಟಾದ ಪ್ರಭಾವ ಸಾಕಷ್ಟಿದೆ. ಆನಂತರ ಕನ್ನಡದಲ್ಲಿ ಶುರುವಾದ ಪ್ಯಾನ್ ಇಂಡಿಯಾಗಳ ದೊಡ್ಡ ಪಟ್ಟಿಯೇ ಅದಕ್ಕೆ ಸಾಕು. ಇರಲಿ, ಅದು ಕೆಜಿಎಫ್ ನ ತಾಕತ್ತು. ಅಲ್ಲಿಂದೀಗ ಕನ್ನಡದ ಸಿನಿಮಾ ಪ್ರೇಕ್ಷಕ ಮಾತ್ರವಲ್ಲ ಇಡೀ ಭಾರತೀಯ ಚಿತ್ರೋದ್ಯಮವೇ ʼಕೆಜಿಎಫ್ ೨ʼ ಚಿತ್ರದ ರಿಲೀಸ್ ದಿನಕ್ಕೆ ಕಾಯುತ್ತಿದೆ. ಹಾಗೆಯೇ ದೊಡ್ಡ ಕುತೂಹಲ ಹೊಂಬಾಳೆ ಫಿಲಂಸ್ ಬ್ಯಾನರ್‌ನ ಇತರೆ ಸಿನಿಮಾಗಳ ಮೇಲೂ ಇದೆ. ಪ್ರಭಾಸ್ ಅಭಿನಯದ ʼಸಲಾರ್ʼ ಮೊದಲ್ಗೊಂದು ಬುಧವಾರವಷ್ಟೇ ಅನೌನ್ಸ್ ಆದ ಹೊಂಬಾಳೆ ಫಿಲಂಸ್ ನ 12 ನೇ ಚಿತ್ರ ʼರಾಘವೇಂದ್ರ ಸ್ಟೋರ್ಸ್ʼ ಮೇಲೂ ಅಷ್ಟೇ ನಿರೀಕ್ಷೆ ಇದೆ. ಹೊಂಬಾಳೆ ಫಿಲಂಸ್ ಅಂದ್ರೆ ಸಿನಿಮಾ ಪ್ರೇಕ್ಷಕ ಪಾಲಿಗೆ ಅಂತಹ ಕುತೂಹಲ ಹಾಗೂ ನಿರೀಕ್ಷೆಗೆ ಕಾರಣವಾಗಿದ್ದು ʼಕೆಜಿಎಫ್ʼ ಚಿತ್ರ.
ವಿಜಯ್ ಕಿರಗಂದೂರು, ನಿರ್ಮಾಪಕ
ಆ ಕತೆ ಇರಲಿ, ಕನ್ನಡದ ಸಿನಿಮಾ ಚೈತನ್ಯ ಕೊರೋನಾ ಕಾಲದಲ್ಲೂ ಕಿಂಚಿತ್ತು ಉಡುಗದಂತೆ ಮಾಡಿದ್ದು ಹೊಂಬಾಳೆ ಫಿಲಂಸ್ ಇನ್ನೊಂದು ಮಹತ್ಕಾರ್ಯ. ಯಾಕಂದ್ರೆ, ಕೊರೋನಾ ಅಂತ ಇಡೀ ಉದ್ಯಮ ಈಗಲೂ ಕೈ ಕಟ್ಟಿ ಕುಳಿತಿದೆ. ಅವಕಾಶ ಇದ್ದಾಗ್ಯೂ ಈಗ ಸಿನಿಮಾ ರಿಲೀಸ್ ಮಾಡೋದಿಕ್ಕೆ ಹಿಂದೆ ಮುಂದೆ ನೋಡಬೇಕಾದ ಸ್ಥಿತಿ ಇದೆ. ಇನ್ನು ದೊಡ್ಡ ದೊಡ್ಡ ಚಿತ್ರ ನಿರ್ಮಾಣ ಸಂಸ್ಥೆಗಳೇ ಹೊಸ ಸಿನಿಮಾಗಳ ನಿರ್ಮಾಣಕ್ಕೆ ಮನಸ್ಸು ಮಾಡದೆ, ತಲೆ ಮೇಲೆ ಕೈ ಹೊತ್ತು ಕುಳಿತಿವೆ. ಕೊರೋನಾದ ಈ ಕಾಲದಲ್ಲಿ ದುಡ್ಡು ಹಾಕಿ ಸಿನಿಮಾ ಮಾಡಿದರೆ, ಮುಂದೆ ಹೇಗೋ ಎನೋ ಎನ್ನುವ ಆತಂಕ ಅವರಿಗೆ ಮನೆ ಮಾಡಿದೆ. ಆದರೆ ಹೊಂಬಾಳೆ ಫಿಲಂಸ್ ಮಾತ್ರ, ಕೊರೋನಾ ಕಾಲದಲ್ಲೂ ಬ್ಯಾಕ್ ಟು ಬ್ಯಾಕ್ ಸಿನಿಮಾ ಅನೌನ್ಸ್ ಮಾಡುತ್ತಾ, ಕನ್ನಡ ಚಿತ್ರೋದ್ಯಮಕ್ಕೆ ಹೊಸ ಚೈತನ್ಯ ತುಂಬಿದ್ದು ಮಾತ್ರವಲ್ಲ, ನೆರೆ ಚಿತ್ರೋದ್ಯಮದ ಮಂದಿ ಅಚ್ಚರಿಯಾಗುವಂತೆ ಮಾಡಿದೆ.
ಇದು ಸ್ವಂತಕ್ಕೋ, ಸ್ವಾರ್ಥಕ್ಕೋ ಅದು ಏನೇ ಆಗಿದ್ದರೂ, ಒಂದು ಸಿನಿಮಾ ನಿರ್ಮಾಣವಾಗುತ್ತಿದೆ ಅಂದರೆ ಅದರಿಂದ ಅದೆಷ್ಟೋ ಕಾರ್ಮಿಕರಿಗೆ ಕೆಲಸ ಸಿಗುತ್ತದೆ. ಹಾಗೆಯೇ ಉದ್ಯಮ ಕೂಡ ಜೀವಂತವಾಗುಳಿದಿರುತ್ತದೆ ಎನ್ನುವುದು ಅಷ್ಟೇ ಸತ್ಯ. ಒಂದಲ್ಲ ಎರಡಲ್ಲ ಇವತ್ತು ಆರು ಸಿನಿಮಾಗಳು ಹೊಂಬಾಳೆ ಫಿಲಂಸ್ ಮೂಲಕ ಪ್ರೊಡಕ್ಷನ್ ಹಂತದಲ್ಲಿವೆ. ಅಲ್ಲಿಗೆ ನೂರು, ಇನ್ನೂರು ಮಾತ್ರವಲ್ಲ ಸಾವಿರಾರು ಕಾರ್ಮಿಕರಿಗೆ ಉದ್ಯೋಗ ಸಿಗುತ್ತಿದೆ. ಹಾಗೆಯೇ ಕೊರೋನಾ ಎಂಬ ಸಂಕಷ್ಟದಿಂದ ಚಿತ್ರೋದ್ಯಮ ಹೊರ ಬರುವುದಕ್ಕೆ ಇದು ದೊಡ್ಡ ಸಹಕಾರಿ ಆಗಿದೆ. ಆ ಮಟ್ಟಿಗೆ ಹೊಂಬಾಳೆ ಫಿಲಂಸ್ ನ ಸಿನಿಮಾ ಮೇಲಿನ ಕಾಳಜಿಗೆ ಒಂದು ಸೆಲ್ಯೂಟ್.
ಯಾಕಂದ್ರೆ, ಇದು ಸಿನಿಮಾ ಮೇಲಿನ ಪ್ರೀತಿಗಾಗಿ ಮಾಡುತ್ತಿರುವ ಕೆಲಸ. ಅದೊಂದೇ ಕಾರಣಕ್ಕೆ ದುಡ್ಡಿಗಿಂತ ಹೆಚ್ಚಾಗಿ ಕಲೆಗೆ ಬೆಲೆ ಕೊಟ್ಟು ಹೊಂಬಾಳೆ ಫಿಲಸ್ ಕನ್ನಡದ ಸ್ಟಾರ್ ಗಳಿಗೆ, ಪ್ರತಿಭಾವಂತ ನಿರ್ದೇಶಕರನ್ನೆಲ್ಲ ತನ್ನ ಕುಟುಂಬಕ್ಕೆ ಸೇರಿಸಿಕೊಂಡು ಸಿನಿಮಾ ಕಟ್ಟುವ ಕೆಲಸದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಅದೇ ಹಾದಿಯಲ್ಲಿ ಅದೀಗ ಇನ್ನೊಂದು ಸಾಹಸ ಮಾಡಿದರೆ ಉದ್ಯಮವೂ ಉಳಿಯುತ್ತದೆ. ಆ ಕೆಲಸವೇ ಒಟಿಟಿ ಪ್ಲಾಟ್ ಫಾರ್ಮ್. ಹಾಗಂತ ಕನ್ನಡ ಸಿನಿಮಾಗಳ ಮಾರುಕಟ್ಟೆಗೆ ಬೇರಾವುದೇ ಒಟಿಟಿ ಪ್ಲಾಟ್ ಫಾರ್ಮ್ ಇಲ್ಲಿಲ್ಲ ಅಂತಲ್ಲ. ಅಮೆಜಾನ್, ನೆಟ್ ಪ್ಲಿಕ್ಸ್ ಸೇರಿದಂತೆ ಸಾಕಷ್ಟು ಒಟಿಟಿ ಪ್ಲಾಟ್ ಫಾರ್ಮ್ ಇಲ್ಲಿವೆ. ಆದರೆ ಕನ್ನಡಕ್ಕೆ ಯೋಗ್ಯವಾದ ಒಂದು ಒಟಿಟಿ ಪ್ಲಾಟ್ ಫಾರ್ಮ್ ಇಲ್ಲ. ಇದ್ದವರು ಕೂಡ ಕನ್ನಡದ ನಿರ್ಮಾಪಕರಿಗೆ ಪೂರಕವಾಗಿಲ್ಲ. ಅದೊಂದು ಬೇಸರ ಈಗ ಇಡೀ ಚಿತ್ರೋದ್ಯಮವನ್ನು ಆವರಿಸಿಕೊಂಡಿದೆ.
ಅದು ದೂರವಾಗಬೇಕಾದರೆ ಕನ್ನಡದ ನಿರ್ಮಾಪಕರನ್ನು ಉಳಿಸುವಂತಹ, ಕಂಟೆಂಟ್ ಆಧರಿತ ಸಿನಿಮಾಗಳನ್ನು ಪ್ರೇಕ್ಷಕರಿಗೆ ನೀಡುವಂತಹ ಒಂದು ಚೆಂದದ ಉದ್ಯಮ ಸ್ನೇಹಿ ಪ್ಲಾಟ್ ಫಾರ್ಮ್ ಕನ್ನಡಕ್ಕೆ ಬೇಕಿದೆ. ಆ ಕೆಲಸವನ್ನು ಹೊಂಬಾಳೆ ಫಿಲಂಸ್‌ಗೆ ಮಾಡುವ ಸಾಮಾರ್ಥ್ಯವಿದೆ.ತೆಲುಗಿನಲ್ಲೀಗ ನಟ ಅಲ್ಲು ಅರ್ಜುನ್ ಆಹಾ ಹೆಸರಲ್ಲೊಂದು ಒಟಿಟಿ ಪ್ಲಾಟ್ ಫಾರ್ಮ್ ಶುರು ಮಾಡಿದ್ದಾರೆ. ಅದು ತೆಲುಗು ಸಿನಿಮಾ, ವೆಬ್ ಸೀರಿಸ್ ಗೆ ಮಾತ್ರ ಸೀಮಿತವಾಗಿದೆ. ಅಂತಹದೇ ಒಂದು ಪ್ಲಾಟ್ ಫಾರ್ಮ್ ಅನ್ನು ಹೊಂಬಾಳೆ ಫಿಲಂಸ್ ಶುರು ಮಾಡಿದರೆ, ಕನ್ನಡದ ಅದೆಷ್ಟೋ ಸ್ಟಾರ್ ಗಳು, ನಿರ್ದೇಶಕರು, ತಂತ್ರಜ್ಜರಿಗೆ ಕೆಲಸ ಕೊಟ್ಟ ಹಾಗೆಯೇ, ಕನ್ನಡದ ಅದೆಷ್ಟೋ ನಿರ್ಮಾಪಕರನ್ನು ಉಳಿಸುವ ಕೆಲಸ ಆಗುತ್ತದೆ. ಹೊಂಬಾಳೆ ಫಿಲಂಸ್ ನಂತಹ ದೈತ್ಯ ಸಂಸ್ಥೆಗೆ ಇದೇನು ಕಷ್ಟದ ಕೆಲಸವೇನು ಅಲ್ಲ. ಮನಸ್ಸು ಮಾಡಬೇಕು ಅಷ್ಟೇ.
ಶಿವತೇಜಸ್ ನಿರ್ದೇಶನದ ಈ ಚಿತ್ರದಲ್ಲಿಇಬ್ಬರು ನಾಯಕಿಯರು. ಆ ಪೈಕಿ ಒಬ್ಬರು ಈಗ ಅಂತಿಮಗೊಂಡಿದ್ದಾರೆ. ಅದು ಬೇರಾರು ಅಲ್ಲ, “ಜೊತೆ ಜೊತೆಯಲಿ” ಖ್ಯಾತಿಯ ಮೇಘಾಶೆಟ್ಟಿ. ಈಗಾಗಲೇ ಗಣೇಶ್ ಅಭಿನಯದ “ತ್ರಿಬಲ್ ರೈಡಿಂಗ್” ಸಿನಿಮಾಗೆ ನಾಯಕಿಯಾಗಿಋುವ ಮೇಘಾಶೆಟ್ಟಿ, ಈಗ ಶಿವತೇಜಸ್ ನಿರ್ದೇಶನದ ಸಿನಿಮಾಗೆ ನಾಯಕಿ. ಇಲ್ಲಿ ಮೇಘಾಶೆಟ್ಟಿ ಪಾತ್ರವೇನು? ಎಂಬುದನ್ನು ಸಿನಿಮಾದಲ್ಲೇ ಕಾಣಬೇಕು
ನಿರ್ದೇಶಕ ಶಿವತೇಜಸ್ ಅವರು “ಡಾರ್ಲಿಂಗ್” ಕೃಷ್ಣ ಅವರಿಗೆ ಹೊಸ ಸಿನಿಮಾ ಮಾಡುತ್ತಿದ್ದಾರೆ ಅನ್ನೋದು ಎಲ್ಲರಿಗೂ ಗೊತ್ತಿದೆ. ಆ ಚಿತ್ರಕ್ಕೆ ಸುಮಂತ್ ಕ್ರಾಂತಿ ನಿರ್ಮಾಣ ಮಾಡುತ್ತಿರುವುದು ಗೊತ್ತು. ಆ ಚಿತ್ರದ ಶೀರ್ಷಿಕೆ ಏನೆಂಬುದನ್ನು ನಿರ್ದೇಶಕರು ಗೌಪ್ಯವಾಗಿಟ್ಟಿದ್ದಾರೆ. ಸೆಪ್ಟೆಂಬರ್ 27ರಂದು ಸಂಜೆ 6.30ಕ್ಕೆ ಐಪಿಎಸ್ ಅಧಿಕಾರಿ ರವಿ ಡಿ.ಚನ್ನಣ್ಣವರ್ ಚಿತ್ರದ ಶೀರ್ಷಿಕೆ ಅನಾವರಣ ಮಾಡಲಿದ್ದಾರೆ. ಈಗ ಹೊಸ ಸುದ್ದಿ ಅಂದರೆ, ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದಾರೆ. ಆ ಪೈಕಿ ಒಬ್ಬರು ಅಂತಿಮಗೊಂಡಿದ್ದಾರೆ. ಅದು ಬೇರಾರು ಅಲ್ಲ, “ಜೊತೆ ಜೊತೆಯಲಿ” ಖ್ಯಾತಿಯ ಮೇಘಾಶೆಟ್ಟಿ. ಹೌದು, ಈಗಾಗಲೇ ಮೇಘಾಶೆಟ್ಟಿ ಅವರು ಗಣೇಶ್ ಅಭಿನಯದ “ತ್ರಿಬಲ್ ರೈಡಿಂಗ್” ಸಿನಿಮಾಗೆ ನಾಯಕಿಯಾಗಿದ್ದಾರೆ. ಈಗ ಶಿವತೇಜಸ್ ನಿರ್ದೇಶನದ ಸಿನಿಮಾಗೆ ನಾಯಕಿ. ಈ ಚಿತ್ರದಲ್ಲಿ ಮೇಘಾಶೆಟ್ಟಿ ಅವರ ಪಾತ್ರವೇನು? ಅದನ್ನು ಬಿಟ್ಟುಕೊಡದ ನಿರ್ದೇಶಕರು, ಸಿನಿಮಾದಲ್ಲೇ ಅದನ್ನು ಕಾಣಬೇಕು ಎನ್ನುತ್ತಿದ್ದಾರೆ.
ಶಿವತೇಜಸ್ ಹೆಣೆದಿರುವ ಬ್ಯೂಟಿಫುಲ್ ಲವ್‌ಸ್ಟೋರಿ ಕೇಳಿದ “ಡಾರ್ಲಿಂಗ್” ಕೃಷ್ಣ ಅದಕ್ಕೆ ಒಪ್ಪಿಕೊಂಡು ಬೇಕಾದ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಈಗಾಗಲೇ ಧರ್ಮಸ್ಥಳದ ಶ್ರೀಮಂಜುನಾಥ ಸ್ವಾಮಿಯ ಸನ್ನಿಧಿಯಲ್ಲಿ ಸ್ಕ್ರಿಪ್ಟ್ ಪೂಜೆ ನಡೆದಿದೆ. ಈ ಚಿತ್ರದಲ್ಲಿ ಹಲವು ವಿಶೇಷತೆಗಳೇ ತುಂಬಿವೆ. ಆ ವಿಶೇಷತೆಗಳಲ್ಲಿ ಮೊದಲ ಸ್ಪೆಷಲ್ ಅಂದರೆ, ನಿರ್ದೇಶಕ ಶಿವತೇಜಸ್ ಅವರನ್ನು ನಂಬಿ, ಅವರು ಮಾಡಿಕೊಂಡಿರುವ ಲವ್‌ಸ್ಟೋರಿಯನ್ನು ಒಪ್ಪಿ, ಚಿತ್ರವನ್ನು ಅದ್ಧೂರಿಯಾಗಿ ನಿರ್ಮಾಣ ಮಾಡಲು ಮುಂದಾಗಿರೋದು ನಿರ್ಮಾಪಕ ಸುಮಂತ್ ಕ್ರಾಂತಿ ಇದು ಅವರ ರಶ್ಮಿ ಫಿಲಂಸ್ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿದೆ.
ಶಿವತೇಜಸ್, ನಿರ್ದೇಶಕರು
ಸುಮಂತ್ ಕ್ರಾಂತಿ ನಿರ್ಮಾಪಕರು
ಸುಮಂತ್ ಕ್ರಾಂತಿ ನಿರ್ದೇಶಕರು. ಈಗ ಶಿವತೇಜಸ್ ಕಥೆಗೆ ಹಣ ಹಾಕುವ ಮೂಲಕ ನಿರ್ಮಾಪಕರಾಗಿಯೂ ಗುರುತಿಸಿಕೊಂಡಾಗಿದೆ. ಈ ಹಿಂದೆಯೇ ಸುಮಂತ್ ಕ್ರಾಂತಿ “ಕಾಲಚಕ್ರ” ಸಿನಿಮಾ ನಿರ್ದೇಶನದ ಜೊತೆಗೆ ನಿರ್ಮಾಣವನ್ನೂ ಮಾಡಿದ್ದಾರೆ.
ಆ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಇನ್ನು, “ಬರ್ಕ್ಲಿ” ಎಂಬ ಮತ್ತೊಂದು ಫೆಂಟಾಸ್ಟಿಕ್ ಸಿನಿಮಾ ಮಾಡಿದ್ದು, ಅದರ ಹಿಂದೆಯೇ ಅವರು ಪ್ರಜ್ವಲ್ ದೇವರಾಜ್ ಅವರಿಗೊಂದು ಸಿನಿಮಾ ಮಾಡಲೂ ಮುಂದಾಗಿದ್ದಾರೆ.
ಒಬ್ಬ ನಿರ್ದೇಶಕರಾಗಿ ಮತ್ತೊಬ್ಬ ನಿರ್ದೇಶಕರಿಗೆ ಅವಕಾಶ ಕೊಟ್ಟಿರುವುದೇ ವಿಶೇಷ. ಶಿವತೇಜಸ್ ಈ ಬಾರಿ ಪುನಃ ಬ್ಯೂಟಿಫುಲ್ ಲವ್‌ಸ್ಟೋರಿ ಜೊತೆ ಬರುತ್ತಿದ್ದಾರೆ. ನವೆಂಬರ್‌ನಿಂದ ಸಿನಿಮಾ ಶುರುವಾಗಲಿದೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡುತ್ತಿದ್ದಾರೆ. ಉಳಿದಂತೆ ಇನ್ನಿತರೆ ಕಲಾವಿದರ ಆಯ್ಕೆ ನಡೆಯುತ್ತಿದೆ.
ಸುಕನ್ಯ ದ್ವೀಪ ಎನ್ನುವ ಟೈಟಲ್ ಕೇಳಿದೊಡನೆ ಇದೊಂದು ಸಸ್ಪೆನ್ಸ್ ಚಿತ್ರ ಇರಬದುದೇನೋ ಎಂಬ ಪ್ರಶ್ನೆ ಎದುರಾಗುತ್ತೆ. ಆದರೆ, ಇದು ಸಸ್ಪೆನ್ಸ್ ಸಿನಿಮಾವಂತೂ ಅಲ್ಲ. ಇದೊಂದು ಪಕ್ಕಾ ಫ್ಯಾಮಿಲಿ ಮತ್ತು ಲವ್ ಜಾನರ್ ಕಥೆ ಹೊಂದಿರುವ ಸಿನಿಮಾ. ಇದರೊಂದಿಗೆ ಹಾಸ್ಯದ ಲೇಪನವೂ ಇಲ್ಲಿದೆ. ಅಂದಹಾಗೆ, ಈ ಚಿತ್ರವನ್ನು ಎಂ.ಡಿ. ಅಫ್ಜಲ್ ನಿರ್ದೇಶನ ಮಾಡಿದ್ದಾರೆ. ಈಗಾಗಲೇ “ಮೊಬೈಲ್ ರಾಜʼ ಸಿನಿಮಾ ನಿರ್ದೇಶಿಸಿರುವ ಅಫ್ಜಲ್, ಆ ಚಿತ್ರದ ಬಿಡುಗಡೆ ಎದುರು ನೋಡುತ್ತಿದ್ದಾರೆ. ಅದರ ಬೆನ್ನಲ್ಲೇ, ಇದೀಗ “ಸುಕನ್ಯ ದ್ವೀಪ” ಸಿನಿಮಾದ ಮೊದಲ ಹಂತದ ಚಿತ್ರೀಕರಣ ಮುಗಿಸಿದ್ದಾರೆ.
ನಿರ್ದೇಶಕ ಅಫ್ಜಲ್ ಅವರು, ಇದುವರೆಗೆ 18 ಚಿತ್ರಗಳಲ್ಲಿ ನಟಿಸಿದ್ದಾರೆ. ಅವರ ನಿರ್ದೇಶನದ ಎರಡನೇ ಸಿನಿಮಾ ಇದಾಗಿದ್ದು, ರಾಜ್‌ಪ್ರಭು ಅವರ ಮೂಲಕ ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಮೂವರು ಅಕ್ಕ-ತಂಗಿಯರ ಸುತ್ತ ನಡೆಯುವ ಕಥಾಹಂದರ ಇಲ್ಲಿದೆ. ಇಲ್ಲಿ ವಿಶೇಷ ಪಾತ್ರದಲ್ಲಿ ರಾಜ್‌ಪ್ರಭು ಕಾಣಿಸಿಕೊಂಡಿದ್ದಾರೆ. ಫ್ಯಾಮಿಲಿ ಸಬ್ಜೆಕ್ಟ್ ನಲ್ಲಿ ಲವ್‌ಸ್ಟೋರಿ ಕೂಡ ಇದೆ. ಕಾಮಿಡಿಗೆ ಹೆಚ್ಚು ಒತ್ತು ನೀಡಿರುವುದು ಇನ್ನೊಂದು ವಿಶೇಷ. ಈಗಾಗಲೇ ಬೆಂಗಳೂರು ಸುತ್ತಮುತ್ತ ಒಂದು ಹಂತದ ಶೂಟಿಂಗ್ ಮುಗಿಸಿದ್ದು, ಮುಂದಿನ ಹಂತದಲ್ಲಿ ಹಾಸನ, ಕಳಸ, ಬೇಲೂರು ಹೀಗೆ ಪ್ರಮುಖ ಸ್ಥಳಗಳಲ್ಲಿ ಚಿತ್ರೀಕರಿಸುವ ಯೋಜನೆ ಚಿತ್ರತಂಡದ್ದು. “ಸುಕನ್ಯ” ಎಂದರೆ ಹೆಣ್ಣು, ದ್ವೀಪ ಎಂದರೆ ಅವರಿರುವ ಮನೆಗೆ ಹೋಲಿಸಲಾಗಿದೆ. ಆ ಮೂವರು ಹೆಣ್ಣು ಮಕ್ಕಳು ಪ್ರೇಮದ ಬಲೆಗೆ ಬಿದ್ದಾಗ ಫ್ಯಾಮಿಲಿಯಿಂದ ಅಡ್ಡಿಯಾಗುತ್ತದೆ, ನಂತರ ಚಿತ್ರದಲ್ಲೊಂದು ಮೇಜರ್ ಟ್ವಿಸ್ಟ್ ಇದೆ. ಹಾಗಂತ, ಕೊಲೆ, ಸಸ್ಪೆನ್ಸ್ ಅಂಥದ್ದೇನೂ ಇಲ್ಲ. ಸ್ನೇಹಿತ ಅಲ್ವಿನ್ ಸೊಗಸಾದ ಡೈಲಾಗ್‌ಗಳನ್ನು ಬರೆದುಕೊಟ್ಟಿದ್ದಾರೆ ಎಂದು ಮಾಹಿತಿ ಕೊಡುತ್ತಾರೆ ನಿರ್ದೇಶಕ ಅಫ್ಜಲ್.
ಕಾರ್ಯಕಾರಿ ನಿರ್ಮಾಪಕ ರಾಜ್ ಪ್ರಭು ಅವರು, ತಮಿಳಿನ ಹಾಸ್ಯನಟ ದಿ. ವಿವೇಕ್ ಅವರಿಂದ ಸ್ಫೂರ್ತಿ ಪಡೆದು ಈ ಈ ಕಥೆ ಮಾಡಿಕೊಳ್ಳಲಾಗಿದೆ. ಚಿತ್ರದಲ್ಲಿ ನನ್ನ ಪಾತ್ರ ಸೆಕೆಂಡ್ ಹಾಫ್ ನಲ್ಲಿ ಬರುತ್ತೆ, ಅದರಲ್ಲಿ ಒಂದಷ್ಟು ಕುತೂಹಲವೂ ಇದೆ ಅನ್ನುತ್ತಾರೆ ಅವರು. ಸಂಗೀತ ನಿರ್ದೇಶಕ ಕೌಶಿಕ್ ಹರ್ಷ ಅವರಿಗೆ ರಾಜ್‌ಪ್ರಭು ಕಥೆ ಹೇಳಿದಾಗ ಇಷ್ಟವಾಯ್ತು, ಚಿತ್ರದ ೫ ಹಾಡುಗಳಿಗೆ ಸಂಗೀತ ನೀಡಲಾಗಿದೆ ಎಂಬ ಮಾಹಿತಿ ಕೊಡುತ್ತಾರೆ. ನಿರ್ಮಾಪಕ ವೀರಬಾಹು, ರಾಜಪ್ರಭು ಒಂದೊಳ್ಳೆ ಕಥೆ ರೆಡಿ ಇದೆ. ಸಿನಿಮಾ ಮಾಡೋಣ ಅಂದರು. ಒನ್ ಲೈನ್ ಕಥೆ ಕೇಳಿಯೇ ನಾನು ನಿರ್ಮಾಣಕ್ಕೆ ಒಪ್ಪಿದೆ. ಮಚ್ಚು, ಲಾಂಗು ಇಲ್ಲದ ನೀಟ್ ಫ್ಯಾಮಿಲಿ ಎಂಟರ್‌ಟೈನರ್ ಸಿನಿಮಾ ಇದು ಎಂದರು.
ಚಿತ್ರದ ನಾಯಕರಲ್ಲೊಬ್ಬರಾದ ಸಚಿನ್ ಪುರೋಹಿತ್, “ಸ್ಟೂಡೆಂಟ್ʼ, “ಚರಂತಿ”, “ಗಡಿಯಾರ” ನಂತರ ಇದು ನನ್ನ ನಾಲ್ಕನೇ ಚಿತ್ರ, “ತಮಸ್”ನಲ್ಲಿ ನಾನು ರಾಜ್‌ಪ್ರಭು ಒಟ್ಟಿಗೇ ಕೆಲಸ ಮಾಡಿದ್ದೆವು. ನನ್ನದು ಲವರ್ ಬಾಯ್ ಥರದ ಪಾತ್ರ ಅಂದರು. ಮತ್ತೊಬ್ಬ ನಟ ರವಿ ಅನುಭವ ಹಂಚಿಕೊಂಡರು. ಛಾಯಾಗ್ರಾಹಕ ವಿಘ್ನೇಶ್ ನಾಗೇಂದ್ರ, ನಾಯಕಿಯರಾದ ಶ್ರೇಯಾ ವಸಂತ್, ಅಕ್ಷಿತ ನಾಗರಾಜ್, ಚುಂಬಿತ ಮಾತನಾಡಿದರು. ಇಲ್ಲಿ ಎಂ.ಡಿ. ಕೌಶಿಕ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಗುರುರಾಜ ಕುಲಕರ್ಣಿ ನಿರ್ಮಾಣದಲ್ಲಿ ಆಸಕ್ತಿ ಹೊಂದಿ ಸದಭಿರುಚಿಯ ಸಿನಿಮಾ ಕೊಡಬೇಕು ಅನ್ನುವ ಉತ್ಸಾಹದಲ್ಲಿದ್ದವರು. ಈಗಾಗಲೇ “ಆಕ್ಸಿಡೆಂಟ್” ಮತ್ತು “ಲಾಸ್ಟ್ ಬಸ್” ಸಸ್ಪೆನ್ಸ್ , ಥ್ರಿಲ್ಲರ್ ಕಥಾ ಹಂದರ ಚಿತ್ರಗಳಿಗೆ ನಿರ್ಮಾಣದಲ್ಲೂ ಸಾಥ್ ಕೊಟ್ಟವರು. ಈಗ ಗುರುರಾಜ ಕುಲಕರ್ಣಿ ಅವರು ಮೊದಲ ಬಾರಿಗೆ ನಿರ್ದೇಶನದ ಪಟ್ಟ ಅಲಂಕರಿಸಿದ್ದಾರೆ. ಅದರೊಂದಿಗೆ ಜಿ 9 ಕಮ್ಯುನಿಕೇಷನ್ಸ್ ಮೀಡಿಯಾ ಅಂಡ್ ಎಂಟರ್‌ಟೈನ್‌ಮೆಂಟ್ಸ್ ಬ್ಯಾನರ್‌ನಡಿ ನಿರ್ಮಾಣದ ಜವಾಬ್ದಾರಿಯೂ ಅವರದೇ ಅನ್ನೋದು ವಿಶೇಷ.
ಸಿನಿಮಾದ ಸೆಳೆತವೇ ಹಾಗೆ. ಇಲ್ಲಿ ಯಾರು ಯಾವಾಗ ಏನ್ ಬೇಕಾದರೂ ಆಗಬಹುದು. ಅಂಥದ್ದೊಂದು ಮ್ಯಾಜಿಕ್ ಈ ಬಣ್ಣದ ಲೋಕದಲ್ಲಿದೆ. ಹೌದು, ಇಲ್ಲಿ ನಿರ್ದೇಶಕರಾದವರು ಹೀರೋ ಆಗಿದ್ದಾರೆ. ಹೀರೋ ಆಗಿದ್ದವರು ನಿರ್ದೇಶಕರಾಗಿದ್ದಾರೆ. ನಿರ್ಮಾಪಕರು ಹೀರೋ ಆಗಿರುವ ಉದಾಹರಣೆ ಬೇಕಾದಷ್ಟಿದೆ. ಆದರೆ, ನಿರ್ಮಾಪಕರು ನಿರ್ದೇಶಕರಾದ ಉದಾಹರಣೆ ಬೆರಳೆಣಿಕೆಯಷ್ಟು ಮಾತ್ರ. ಆ ಸಾಲಿಗೆ ಗುರುರಾಜ ಕುಲಕರ್ಣಿ ಕೂಡ ಸೇರಿದ್ದಾರೆ. ಹೌದು, ಗುರುರಾಜ ಕುಲಕರ್ಣಿ ನಿರ್ಮಾಣದಲ್ಲಿ ಆಸಕ್ತಿ ಹೊಂದಿ ಸದಭಿರುಚಿಯ ಸಿನಿಮಾ ಕೊಡಬೇಕು ಅನ್ನುವ ಉತ್ಸಾಹದಲ್ಲಿದ್ದವರು. ಈಗಾಗಲೇ “ಆಕ್ಸಿಡೆಂಟ್” ಮತ್ತು “ಲಾಸ್ಟ್ ಬಸ್” ಸಸ್ಪೆನ್ಸ್ , ಥ್ರಿಲ್ಲರ್ ಕಥಾ ಹಂದರ ಚಿತ್ರಗಳಿಗೆ ನಿರ್ಮಾಣದಲ್ಲೂ ಸಾಥ್ ಕೊಟ್ಟವರು. ಈಗ ಗುರುರಾಜ ಕುಲಕರ್ಣಿ ಅವರು ಮೊದಲ ಬಾರಿಗೆ ನಿರ್ದೇಶನದ ಪಟ್ಟ ಅಲಂಕರಿಸಿದ್ದಾರೆ. ಅದರೊಂದಿಗೆ ಜಿ೯ ಕಮ್ಯುನಿಕೇಷನ್ಸ್ ಮೀಡಿಯಾ ಅಂಡ್ ಎಂಟರ್‌ಟೈನ್‌ಮೆಂಟ್ಸ್ ಬ್ಯಾನರ್‌ನಡಿ ನಿರ್ಮಾಣದ ಜವಾಬ್ದಾರಿಯೂ ಅವರದೇ ಅನ್ನೋದು ವಿಶೇಷ. ಅಂದಹಾಗೆ, ಅವರ ರಚನೆಯ ಚೊಚ್ಚಲ ನಿರ್ದೇಶನದ ಸಿನಿಮಾ “ಅಮೃತ್ ಅಪಾರ್ಟ್‌ಮೆಂಟ್ಸ್”.
ಈ ಶೀರ್ಷಿಕೆ ಕೇಳಿದವರಿಗೆ ಎಲ್ಲೋ ಒಂದು ಕಡೆ ಕುತೂಹಲ ಮೂಡಿಸುವುದು ನಿಜ. ಹೌದು, ಈಗಾಗಲೇ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಸಾಕಷ್ಟು ಕುತೂಹಲ ಕೆರಳಿಸಿದ್ದಲ್ಲದೆ, ಮೆಚ್ಚುಗೆಯನ್ನೂ ಪಡೆದುಕೊಂಡಿದೆ. ಇತ್ತೀಚೆಗೆ ಆಪ್ತರಿಗೊಂದು ಪ್ರದರ್ಶನ ಏರ್ಪಡಿಸಿದ್ದ ನಿರ್ದೇಶಕ ಗುರುರಾಜ ಕುಲಕರ್ಣಿ ಅವರ ಕೆಲಸವನ್ನು ಚಿತ್ರರಂಗದ ಹಲವು ತಾಂತ್ರಿಕ ವರ್ಗದವರು ಮೆಚ್ಚಿಕೊಂಡಿದ್ದಾರೆ. ಸಹಜವಾಗಿಯೇ ಚಿತ್ರತಂಡಕ್ಕೆ ಆ ಮೆಚ್ಚುಗೆ ಮತ್ತಷ್ಟು ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಇದಕ್ಕೂ ಮೊದಲು “ಅಮೃತ ಅಪಾರ್ಟ್‌ಮೆಂಟ್ಸ್ʼ ಚಿತ್ರದ ಫಸ್ಟ್ ಲುಕ್ ಹಾಗೂ ಟೀಸರ್ ಹೊರ ಬಂದಿದ್ದು, ಚಿತ್ರದ ಬಗ್ಗೆ ತೀವ್ರ ರೋಚಕತೆ ಮೂಡಿಸುವ ಟೀಸರ್ ಸೋಷಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡಿದ್ದು ಎಲ್ಲರಿಗೂ ಗೊತ್ತಿದೆ. ಈಗ ಸಿನಿಮಾ ಅಕ್ಟೋಬರ್‌ನಲ್ಲಿ ಪ್ರೇಕ್ಷಕರ ಮುಂದೆ ಬರಲು ತಯಾರಾಗುತ್ತಿದೆ. ಸದ್ಯ ನಿರ್ದೇಶಕರು ಬಿಡುಗಡೆಗೆ ಸಜ್ಜಗೊಳ್ಳುತ್ತಿದ್ದು, ಇಷ್ಟರಲ್ಲೇ ಬಿಡುಗಡೆಯ ದಿನವನ್ನು ಘೋಷಣೆ ಮಾಡಲಿದ್ದಾರೆ.
ಇನ್ನು, “ಅಮೃತ ಅಪಾರ್ಟ್ ಮೆಂಟ್ಸ್ʼ ಚಿತ್ರವನ್ನು ಕನ್ನಡದ ಪ್ರೇಕ್ಷಕರ ಮುಂದೆ ತರಲು ರೆಡಿಯಾಗಿರುವ ನಿರ್ದೇಶಕ ಗುರುರಾಜ ಕುಲಕರ್ಷಣಿ, ಒಂದೊಳ್ಳೆಯ ಸಂದೇಶ ಕೊಡುವ ಹುಮ್ಮಸ್ಸಿನಲ್ಲಿದ್ದಾರೆ. ಅಂದಹಾಗೆ, ಇದೊಂದು ಕಾಮಿಡಿ, ಸಸ್ಪೆನ್ಸ್, ಥ್ರಿಲ್ಲರ್ ಅಂಶಗಳನ್ನೊಳಗೊಂಡ ಚಿತ್ರ. ಬಾಲಾಜಿ ಮನೋಹರ್ ಈ ಚಿತ್ರದಲ್ಲಿ ಪ್ರಮುಖ ಪಾತ್ರಧಾರಿ. ತಾರಕ್ ಪೊನ್ನಪ್ಪ ನಾಯಕರಾಗಿದ್ದಾರೆ.
ಗುರುರಾಜ ಕುಲಕರ್ಣಿ, ನಿರ್ದೇಶಕ ಕಮ್ ನಿರ್ಮಾಪಕರು
ಊರ್ವಶಿ ಗೋರ್ವಧನ್ ಅವರಿಗೆ ನಾಯಕಿಯಾಗಿದ್ದಾರೆ. ಉಳಿದಂತೆ ನಟಿ ಮಾನಸ ಜೋಷಿ ಇಲ್ಲೊಂದು ವಿಶೇಷ ಪೊಲೀಸ್ ಅಧಿಕಾರಿ [ಪಾತ್ರ ಮಾಡಿದ್ದಾರೆ. ಸೀತಾ ಕೋಟೆ ಲಾಯರ್ ಆಗಿದ್ದಾರೆ. ಸಂಪತ್ ಕುಮಾರ್, ಮಾಲತೇಶ್, ಸಿತಾರಾ, ಜಗದೀಶ್ ಜಾಲಾ, ಅರುಣ ಮೂರ್ತಿ, ರಾಜು ನೀನಾಸಂ, ಶಂಕರ್ ಶೆಟ್ಟಿ ರಂಗಸ್ವಾಮಿ ಇತರರು ನಟಿಸಿದ್ದಾರೆ.
ಚಿತ್ರದ ಬಗ್ಗೆ ನಿರ್ದೇಶಕರು ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ.”ಇದು ಬೆಂಗಳೂರಿನ ಕಥೆ. ಐಟಿಬಿಟಿ ಅನ್ನೋ ಈ ಜಮಾನಾದ ಕಥೆ. ಬೆಂಗಳೂರಿಗರು ಸದ್ಯ ಏನಾಗುತ್ತಿದ್ದಾರೆ ಎಂಬುದನ್ನು ಈ ಸಿನಿಮಾ ಮೂಲಕ ಸಸ್ಪೆನ್ಸ್ ಶೈಲಿಯಲ್ಲಿ ತೋರಿಸಲು ಹೊರಟಿದ್ದಾರೆ. ಒಡೆದು ಹೋದ ಮನಸ್ಸುಗಳನ್ನು ಒಂದು ಮಾಡುವ ಕೆಲಸ ಈ ಸಿನಿಮಾದಲ್ಲಿ ಆಗಿದೆ ಅನ್ನೋದು ನಿರ್ದೇಶಕರ ಮಾತು.
https://youtu.be/QmEYglxzN80
ಮಲಯಾಳಂ ಚಿತ್ರರಂಗದಲ್ಲಿ ಕೆಲಸ ಮಾಡಿರುವ ಅರ್ಜುನ್ ಅಜಿತ್ ಚಿತ್ರಕ್ಕೆ ಕ್ಯಾಮೆರಾ ಹಿಡಿದಿದ್ದಾರೆ. ಕನ್ನಡದ ನೂರಾರು ಸಿನಿಮಾಗಳಿಗೆ ಕತ್ತರಿ ಹಾಕಿರುವ ಕೆಂಪರಾಜ್ ಅರಸ್ ಅವರ ಸಂಕಲನ ಇಲ್ಲಿದೆ. ಎಸ್.ಡಿ ಅರವಿಂದ್ 3 ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಕೆ.ಕಲ್ಯಾಣ್, ಡಾ. ಬಿ.ಆರ್ ಪೊಲೀಸ್ ಪಾಟೀಲ್ , ವಿ.ಮನೋಹರ್ ಅವರ ಸಾಹಿತ್ಯವಿದೆ.
ಚಿತ್ರಕ್ಕೆ ಮಹೇಶ್ ಎಸ್.ಪಿ.ಸಹ ನಿರ್ದೇಶಕರಾದರೆ, ಸುನೀಲ್ ವೈ.ಕೆ ನಿರ್ದೇಶನದ ವಿಭಾಗದಲ್ಲಿ ಕೆಲಸ ಮಾಡಿದ್ದಾರೆ. ಹರೀಶ ಮೂರ್ತಿ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ. ಚಿತ್ರಕ್ಕೆ ಸುನೀಲ್ ಆರ್. ಡಿ ಮತ್ತು ನರಸಿಂಹ ಕುಲಕರ್ಣಿ ಅವರು ಸಹ ನಿರ್ಮಾಪಕರಾಗಿದ್ದಾರೆ. ತೇಜಸ್ ಹರಿದಾಸ್, ವಾಣಿ ಹರಿಕೃಷ್ಣ, ಅರವಿಂದ್ ಹಾಡುಗಳಿಗೆ ಧ್ವನಿ ನೀಡಿದ್ದಾರೆ.