ನನಗೆ ಒಂದು ಬಿಗ್ ಡ್ರೀಮ್ ಇದೆ. ಗಂಧದಗುಡಿಗೆ ಅತೀ ದೊಡ್ಡ ಸ್ಟುಡಿಯೋವನ್ನು ಕೊಡುಗೆಯಾಗಿ ನೀಡಬೇಕು. ಮುಂದಿನ ದಿನಗಳಲ್ಲಿ ಪರಭಾಷೆಯವರು ನಮ್ಮ ಚಂದನವನಕ್ಕೆ ಬರಬೇಕು. ಪ್ರಿಪ್ರೊಡಕ್ಷನ್ ಸೇರಿದಂತೆ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಮ್ಮಲ್ಲಿ ಆಗ್ಬೇಕು. ಟೆಕ್ನಾಲಜಿ ಎಕ್ಸ್ಚೇಂಜ್ ಆಗ್ಬೇಕು ಹೀಗಾದಾಗ ಒಳ್ಳೆ ಪ್ರಾಡೆಕ್ಟ್ ಔಟ್‌ಪುಟ್ ಬರುತ್ತೆ. ಆಗ ಇಂಡಿಯನ್ ಸಿನ್ಮಾ ಇಂಡಸ್ಟ್ರಿಗೆ ಒಳ್ಳೊಳ್ಳೆ ಸಿನಿಮಾಗಳನ್ನು ಉಡುಗೊರೆಯಾಗಿ ನೀಡಬಹುದು ಎಂದಿದ್ದರು ಅಪ್ಪು…
ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಗಲಿ ಇಂದಿಗೆ ಹದಿನಾರು ದಿವಸ ಕಳೀತಾ ಇದೆ. ಆದರೆ, ದೊಡ್ಮನೆ ಮಗನಿಲ್ಲದ ನೋವು ಮಾತ್ರ ಮರೆಯಾಗುತ್ತಿಲ್ಲ ಬಹುಷಃ ಅಷ್ಟು ಬೇಗ ಮರೆಯಾಗೋದು ಇಲ್ಲ. ಯಾಕಂದ್ರೆ, ಅಗಲಿರುವುದು ಬರೀ ವ್ಯಕ್ತಿಯಲ್ಲ ಅದೊಂದು ಶಕ್ತಿ. ಬೆಲೆಯೇ ಕಟ್ಟಲಾಗದ ಬೆಟ್ಟದ ಹೂ. ಆದರೆ, ಈ ಹೂ ತನಗೆ ಪ್ರಿಯವಾಗಿದ್ದು ಅಂತ ಆ ಭಗವಂತ ಏಕಾಏಕಿ ಕಿತ್ಕೊಂಡಿದ್ದು ಮಾತ್ರ ಖಂಡನೀಯ. ಹೆಸರಿಗೆ ಕರುಣಾಮಯಿ ಎನಿಸಿಕೊಳ್ಳುವ ಭಗವಂತನಿಗೆ ಕೊಂಚವಾದರೂ ಕರುಣೆಯಿದ್ದರೆ ಕೋಟ್ಯಾಂತರ ಮನಸ್ಸುಗಳು ಆರಾಧಿಸುವ, ಪೂಜಿಸುವ, ಪ್ರೀತಿಸುವ, ತಲೆ ಮೇಲೆ ಹೊತ್ತು ಮೆರೆಸುವ ಜನರಿಂದ ಅಪ್ಪುನಾ ದೂರ ಮಾಡುತ್ತಿರಲಿಲ್ಲ. ದೊಡ್ಮನೆಯನ್ನು ಅನಾಥ ಮಾಡಿ, ಕರುನಾಡನ್ನು ಕಣ್ಣೀರ ಕಡಲಲ್ಲಿ ಮುಳುಗಿಸುತ್ತಿರಲಿಲ್ಲ ಬಿಡಿ.
ಎಂತೆಂತವರಿಗೋ ಭಗವಂತ ಚಾನ್ಸ್ ಕೊಡ್ತಾನೆ, ಇದು ಕಡೇ ಚಾನ್ಸ್ ಉಳಿಸಿಕೋ ಎಂದು ಕರುಣೆ ತೋರಿಸ್ತಾನೆ. ಸಾವಿನ ಮನೆಗೆ ಸಮೀಪಿಸಿದವರನ್ನೂ ವಾಪಾಸ್ ಕರೆದುಕೊಂಡು ಆಯಷ್ಯ ಪ್ರಾಪ್ತಿರಸ್ತು ಎನ್ನುತ್ತಾನೆ. ಆದರೆ, ಅನಾಥರಿಗೆ ಆಸರೆಯಾಗಿ, ಕತ್ತಲಲ್ಲಿರುವವರಿಗೆ ಬೆಳಕಾಗಿ, ಬಡವರಿಗೆ ದೇವರಾಗಿ, ನಿರ್ಗತಿಕರಿಗೆ ನೆರವಾಗಿ, ಪ್ರತಿಭಾವಂತರಿಗೆ ವರವಾಗಿದ್ದ ಕಲಿಯುಗದ ಕರ್ಣನಂತಿದ್ದ ಅಂಜನಿಪುತ್ರನಿಗೆ ಕಡೇ ಚಾನ್ಸ್ ಅಲ್ಲ ಫಸ್ಟ್ ಚಾನ್ಸ್ ಕೂಡ ಕೊಡಲಿಲ್ಲ. ರಾಜರತ್ನನನ್ನು ಎಳೆದೊಯ್ಯಲಿಕ್ಕೆ ಸ್ಕೆಚ್ ಹಾಕಿದ ಭಗವಂತ ಒಂದೇ ಒಂದು ಚಾನ್ಸ್ ಕೊಟ್ಟಿದ್ದರೆ, ಅರೆಕ್ಷಣ ಕರುಣಾಮಯಿಯಾಗಿದ್ರೆ ಯುವರತ್ನ ಉಸಿರು ಚೆಲ್ಲುತ್ತಿರಲಿಲ್ಲ. ದೊಡ್ಮನೆ ಅನಾಥವಾಗುತ್ತಿರಲಿಲ್ಲ, ಅಭಿಮಾನಿ ದೇವರುಗಳು ಎದೆಬಡಿದುಕೊಂಡು ಸಾಯುವ ಸಂಧರ್ಭ ಸೃಷ್ಟಿಯಾಗುತ್ತಿರಲಿಲ್ಲ, ಕರುನಾಡು ಕಣ್ಣೀರಿನ ಕೋಡಿ ಹರಿಸುವಂತಿರಲಿಲ್ಲ. ಎಲ್ಲದಕ್ಕಿಂತ ಹೆಚ್ಚಾಗಿ, ಅಪ್ಪು ಕಂಡ ಕನಸುಗಳು `ಪೃಥ್ವಿ’ ಜೊತೆ ಒಡಲು ಸೇರುತ್ತಿರಲಿಲ್ಲ. ಅದರಲ್ಲೂ ಅರಸು ಕಂಡ ಅತೀ ದೊಡ್ಡ ಕನಸು ಮಣ್ಣಲ್ಲಿ ಮಣ್ಣಾಗುತ್ತಿರಲಿಲ್ಲ.
ಅಪ್ಪು ಒಬ್ಬರೇ ಸಾವನ್ನಪ್ಪಿಲ್ಲ ಬದಲಾಗಿ ದೊಡ್ಮನೆ ಮಗನನ್ನು ಮೈಂಡ್‌ನಲ್ಲಿಟ್ಟುಕೊಂಡು ರಚನೆ ಮಾಡಿದ ಎಷ್ಟೋ ಕಥೆಗಾರರ ಕನಸಿನ ಕೂಸುಗಳು ಉಸಿರುಗಟ್ಟಿವೆ. ಈ ಕಥೆನಾ? ಈ ಸಿನಿಮಾನ ಯಾರಿಗೆ ಮಾಡ್ಲಿ ದೇವಾ ಅಂತ ಕಥೆಗಾರರು-ನಿರ್ದೇಶಕರು-ನಿರ್ಮಾಪಕರು ಆಕಾಶ ನೋಡುವಂತಹ ಪರಿಸ್ಥಿತಿ. ಅದರಂತೇ, ಬೆಳ್ಳಿತೆರೆಯದ್ದು- ಬಾಕ್ಸ್ಆಫೀಸ್‌ನದ್ದು ಒಂದು ನೋವಿದೆ. ಇನ್ಮೇಲೆ ಅಪ್ಪು ಕಟೌಟ್ ನನ್ನ ಅಂಗಳದಲ್ಲಿ ಬೀಳಲ್ಲ, ಅಪ್ಪುನಾ ತಲೆ ಮೇಲೆ ಹೊತ್ಕೊಂಡು ಮೆರವಣಿಗೆ ಹೋಗೋದಕ್ಕೆ ಆಗಲ್ಲ ಅಂತ ಬೆಳ್ಳಿಪರದೆ ಮರುಕಪಡ್ತಿದೆ. ಕೋಟಿ ಕೋಟಿ ನನ್ನ ಖಜಾನೆಯಲ್ಲಿ ಕುಣಿಯಲ್ಲವಲ್ಲ ಅಂತ ಬಾಕ್ಸ್ಆಫೀಸ್ ಕಣ್ಣೀರಿಡ್ತಿದೆ. ಇನ್ನೂ, ಪವರ್‌ಸ್ಟಾರ್ ಅಭಿಮಾನಿಗಳಂತೂ ಜೇಮ್ಸ್ ಹೊರತುಪಡಿಸಿ ಮತ್ಯಾವ ಚಿತ್ರವನ್ನು ಫಸ್ಟ್ ಡೇ ಫಸ್ಟ್ ಶೋ ಚಿತ್ರಮಂದಿರಕ್ಕೆ ಹೋಗಿ ನೋಡಲಿಕ್ಕೆ ಆಗಲ್ಲ, ಥಿಯೇಟರ್ ಮುಂದೆ ಮತ್ಯಾವ ಚಿತ್ರದ ಕಟೌಟ್ ಹಾಕಿ ಅಭಿಷೇಕ ಮಾಡಲಿಕ್ಕೆ ಆಗಲ್ಲ ಅಂತ ಒಳಗೊಳಗೆ ನೋವುಣ್ಣುತ್ತಿದ್ದಾರೆ.
ಇದೆಲ್ಲದರ ಮಧ್ಯೆ ದಿಗ್ಗಜರು ಕಟ್ಟಿ ಬೆಳೆಸಿದ ಗಂಧದಗುಡಿ ಕೂಡ `ಅರಸು’ನಾ ನೆನೆದು ಮಮ್ಮಲ್ಲ ಮರುಗುತ್ತಿದೆ. ಕನ್ನಡ ಚಿತ್ರರಂಗದ ಕೊರತೆನಾ ನೀಗಿಸ್ತೀನಿ? ಗಂಧದಗುಡಿಗೆ ಅತೀ ದೊಡ್ಡ ಕೊಡುಗೆ ನೀಡ್ತೀನಿ? ಪರಭಾಷೆಯವರು ನಮ್ಮ ಅಖಾಡಕ್ಕೆ ಬರುವಂತೆ ಮಾಡ್ತೀನಿ? ಇಂಡಿಯನ್ ಸಿನ್ಮಾ ಇಂಡಸ್ಟ್ರಿಗೆ ಉಡುಗೊರೆ ಕೊಡ್ತೀನಿ ಅಂತ ಹೇಳಿಕೊಂಡಿದ್ದ ಅಪ್ಪು ಮಾತನ್ನು ನೆನೆ ನೆನೆದು ಗಂಧದಗುಡಿ ದುಃಖಿಸುತ್ತಿದೆ. ಹೌದು, ಸ್ಟಾರ್‌ಗಳಿಗೆ ಮರುಜೀವ ನೀಡಿ ಆಕಾಶದೆತ್ತರಕ್ಕೆ ಬೆಳೆದು ನಿಲ್ಲಿಸುವ ಗಂಧದಗುಡಿಯಲ್ಲಿ ಒಂದಿಷ್ಟು ಕೊರತೆಯಿದೆ. ಅದರಲ್ಲಿ, ಒಂದು ಅತೀ ದೊಡ್ಡ ಸ್ಟುಡಿಯೋ ವ್ಯವಸ್ಥೆ ಇಲ್ಲದಿರುವುದು. ಶೂಟಿಂಗ್- ಎಡಿಟಿಂಗ್-ಡಬ್ಬಿಂಗ್-ಮಿಕ್ಸಿಂಗ್ ಸೇರಿದಂತೆ ಸಿನಿಮಾ ಶುರು ಆದಾಗಿಂದ ಸಿನಿಮಾ ರಿಲೀಸ್ ಆಗೋರ‍್ಗೂ ಕೂಡ ಒಂದೇ ಸೂರಿನಡಿ ಅಂದರೆ ಒಂದೇ ಸ್ಟುಡಿಯೋದಲ್ಲಿ ಎಲ್ಲವೂ ಸಾಧ್ಯವಾಗಬೇಕು ಎನ್ನುವುದು ನಟಸಾರ್ವಭೌಮನ ಕನಸಾಗಿತ್ತು.
ಅಂದ್ಹಾಗೇ, ಈ ಕನಸಿನ ಬಗ್ಗೆ `ಫಿಲ್ಮ್ ಕಂಪ್ಯಾನಿಯನ್ ಸೌತ್’ ಯೂಟ್ಯೂಬ್ ಚಾನೆಲ್‌ವೊಂದರ ನಿರೂಪಕನ ಬಳಿ ಹಂಚಿಕೊಂಡಿದ್ದರು. ನಿಮ್ಮ ಡ್ರೀಮ್ ಏನು? ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಏನ್ ಕೊರತೆಯಿದೆ? ಇರುವಂತಹ ಕೊರೆತಯನ್ನು ಯಾವ್ ರೀತಿ ನೀಗಿಸುವುದಕ್ಕೆ ಪ್ರಯತ್ನ ಪಡುತ್ತೀರಿ? ನಿರೂಪಕ ಭಾರಧ್ವಾಜ್ ರಂಗನ್ ಅವರ ಈ ಪ್ರಶ್ನೆಗಳಿಗೆ ಉತ್ತರಿಸಿದ್ದ ಅಪ್ಪು, ನನಗೆ ಒಂದು ಬಿಗ್ ಡ್ರೀಮ್ ಇದೆ. ಗಂಧದಗುಡಿಗೆ ಅತೀ ದೊಡ್ಡ ಸ್ಟುಡಿಯೋವನ್ನು ಕೊಡುಗೆಯಾಗಿ ನೀಡಬೇಕು ಎನ್ನುವುದು. ಹಿಂದಿನಿಂದಲೂ ಹೊರ ರಾಜ್ಯಕ್ಕೆ ಮತ್ತು ಪರಭಾಷಾ ಸ್ಥಳಗಳಿಗೆ ಹೋಗಿ ಚಿತ್ರೀಕರಣ ಸೇರಿದಂತೆ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಮುಗಿಸಿಕೊಂಡು ಬಂದಿದ್ದೇವೆ. ಮುಂದಿನ ದಿನಗಳಲ್ಲಿ ಪರಭಾಷೆಯವರು ನಮ್ಮ ಚಂದನವನಕ್ಕೆ ಬರಬೇಕು. ಪ್ರಿಪ್ರೊಡಕ್ಷನ್ ಸೇರಿದಂತೆ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಮ್ಮಲ್ಲಿ ಆಗ್ಬೇಕು. ಟೆಕ್ನಾಲಜಿ ಎಕ್ಸ್ಚೇಂಜ್ ಆಗ್ಬೇಕು ಹೀಗಾದಾಗ ಒಳ್ಳೆ ಪ್ರಾಡೆಕ್ಟ್ ಔಟ್‌ಪುಟ್ ಬರುತ್ತೆ. ಆಗ ಇಂಡಿಯನ್ ಸಿನ್ಮಾ ಇಂಡಸ್ಟ್ರಿಗೆ ಒಳ್ಳೊಳ್ಳೆ ಸಿನಿಮಾಗಳನ್ನು ಉಡುಗೊರೆಯಾಗಿ ನೀಡಬಹುದು ಎಂದು ಹೇಳಿಕೊಂಡಿದ್ದರು. ಅತೀ ಶೀಘ್ರದಲ್ಲೇ ಸ್ಟುಡಿಯೋ ಬಗ್ಗೆ ಮಾಹಿತಿ ನೀಡುತ್ತೇನೆ ಎಂದು ಕೂಡ ತಿಳಿಸಿದ್ದರು. ಅಷ್ಟರಲ್ಲಿ ದುರ್ವಿಧಿಯ ಆಟಕ್ಕೆ ಬದುಕಿನ ಆಟ ಮುಗಿಸಿ ಎದ್ದೋಗಿದ್ದಾರೆ ಅಪ್ಪು.
ವಿಶಾಲಾಕ್ಷಿ,ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ