ಆದರ್ಶ ಪ್ರೇಮಿಯ ಪೂಜ್ಯ ಭಾವ! ವೈದ್ಯಲೋಕದಲ್ಲೊಂದು ಭಾವುಕ ಪ್ರೇಮ

ಚಿತ್ರ ಪ್ರೇಮಂ ಪೂಜ್ಯಂ
ನಿರ್ದೇಶನ: ರಾಘವೇಂದ್ರ
ನಿರ್ಮಾಣ: ಕೆದಂಬಾಡಿ ಕ್ರಿಯೇಷನ್ಸ್
ತಾರಾಗಣ: ನೆನಪಿರಲಿ ಪ್ರೇಮ್‌, ಬೃಂದಾ ಅಚಾರ್ಯ, ಐಂದ್ರಿತಾ ರೇ, ಆನಂದ್‌, ಸಾಧುಕೋಕಿಲ, ನಾಗಾಭರಣ, ಅವಿನಾಶ್‌, ಮಾಳವಿಕ, ಅನುಪ್ರಭಾಕರ್‌ ಇತರರು.

ಚಿತ್ರ ವಿಮರ್ಶೆ; ವಿಜಯ್‌ ಭರಮಸಾಗರ

ಮೊದಲ ನೋಟದಲ್ಲೇ ಆ ಎಂಬಿಬಿಎಸ್‌ ಸ್ಟುಡೆಂಟ್‌ಗೆ ಅದೇ ಕಾಲೇಜಿನ ಹುಡುಗಿಯೊಬ್ಬಳ ಮೇಲೆ ಮೆಲ್ಲನೆ ಪ್ರೀತಿ ಅಂಕುರವಾಗುತ್ತೆ. ಆಕೆಗೂ ಅವನ ಮೇಲೆ ಅದೇ ಕುಚ್‌ ಕುಚ್‌ ಶುರುವಾಗುತ್ತೆ. ಆಕೆಗೆ ಅವನ ಕೈ ಸ್ಪರ್ಶಿಸೋ ಆಸೆ, ಆದರೆ, ಅವನಿಗೋ ಅವಳನ್ನು ಅತಿಯಾಗಿ ಗೌರವಿಸಿ, ಆರಾಧಿಸೋ ಹಂಬಲ. ಭೇಟಿಯಾದಾಗೆಲ್ಲ ಆಕೆ ಶೇಕ್‌ಹ್ಯಾಂಡ್‌ಗಾಗಿ ತನ್ನ ಕೈ ಚಾಚಿದರೆ, ಅವನು ತನ್ನ ಎದೆಯ ಮೇಲೆ ಕೈ ಇಟ್ಟುಕೊಂಡು ಮುಗುಳ್ನಗುತ್ತಲೇ ಮೌನವಾಗುತ್ತಾನೆ… ಕಾರಣ ಮದ್ವೆ ಆಗೋ ತನಕ ಅವಳನ್ನು ಸ್ಪರ್ಶಿಸಲೇಬಾರದು ಅನ್ನೋ ದೃಢ ನಿರ್ಧಾರ ಅವನದು!
ಅಬ್ಬಾ, ಈ ಕಾಲದಲ್ಲೂ ಇಂಥಾ ಹುಡುಗ ಸಿಕ್ತಾನಾ? ಈ ಪ್ರಶ್ನೆ ಸಹಜವಾಗಿಯೇ ಬರುತ್ತೆ. ಆದರೂ, ಇದು “ಪ್ರೇಮಂ ಪೂಜ್ಯಂ” ಚಿತ್ರದಲ್ಲಿ ಸಾಧ್ಯವಾಗಿಸಿದ್ದಾರೆ ನಿರ್ದೇಶಕ ರಾಘವೇಂದ್ರ.

ಒಂದು ನಿಷ್ಕಲ್ಮಶ ಪ್ರೀತಿಯ ಕಥೆ ಹೆಣೆಯುವ ಮೂಲಕ ಮನಸ್ಸು ಭಾರವಾಗಿಸುವ ಪ್ರಯತ್ನ ಮಾಡಿರುವ ನಿರ್ದೇಶಕರಿಗೆ ನಿರೂಪಣೆಯಲ್ಲಿ ಇನ್ನಷ್ಟು ಗಟ್ಟಿ ಹಿಡಿತ ಬೇಕಿತ್ತು. ಎಲ್ಲಾ ಪ್ರೀತಿಯ ಕಥೆಗಳಿಗಿಂತ ಈ ಪ್ರೀತಿಯ ಕಥೆ ಹೇಳಿಕೊಳ್ಳುವಂತಹ ವಿಭಿನ್ನವೇನಲ್ಲ. ಆದರೆ, ಪ್ರೀತಿಗೆ ಹೊಸ ವ್ಯಾಖ್ಯಾನ ಬರೆಯುವಲ್ಲಿ ಕೊಂಚ ಹೊಸತನದ ಸ್ಪರ್ಶ ಕೊಟ್ಟು ತಕ್ಕಮಟ್ಟಿಗೆ ಸೈ ಎನಿಸಿಕೊಂಡಿದ್ದಾರೆ. ಒಂದೊಳ್ಳೆಯ ಮನಸ್ಸಿರುವ ಹುಡುಗ ಅಷ್ಟೇ ಚಂದವಾಗಿರುವ ಹುಡುಗಿಯನ್ನು ಆನೆ ಮೇಲಿನ ಅಂಬಾರಿಯೊಳಗಿರುವ ದೇವತೆಯಷ್ಟೇ ಪ್ರೀತಿಸ್ತಾನೆ. ಆದರೆ, ಅವಳನ್ನು ಮದುವೆ ಆಗೋತನಕ ಸ್ಪರ್ಶಿಸದೆ, ತನ್ನ ಹೃದಯದಲ್ಲೇ ಆರಾಧಿಸುವ ದೊಡ್ಡ ಗುಣವುಳ್ಳ ಹುಡುಗನ ಪ್ರೀತಿ ನಿಜವಾಗಿಯೂ ಹಂಡ್ರೆಡ್‌ ಪರ್ಸೆಂಟ ಅನ್ನೋದನ್ನು ತೆರೆಮೇಲೆ ನೋಡಬೇಕು.


ಸಿನಿಮಾದ ಒಂದೊಂದು ಫ್ರೇಮ್‌ ಕೂಡ ಪೇಂಟಿಂಗ್‌ನಂತಿದೆ. ಅದರ ಬಗ್ಗೆ ಎಲ್ಲೂ ಚಕಾರ ಎತ್ತುವಂತಿಲ್ಲ. ಸಿನಿಮಾ ಕಥೆಯ ಅಗತ್ಯಕ್ಕಿಂತಲೂ ಅದ್ಧೂರಿತನ ಎದ್ದು ಕಾಣುತ್ತದೆ. ಮೊದಲರ್ಧ ಮೆಲ್ಲನೆ ಸಾಗುವ ಸಿನಿಮಾ ದ್ವಿತಿಯಾರ್ಧ ಗಂಭೀರತೆ ಪಡೆದುಕೊಳ್ಳುತ್ತೆ. ಮೊದಲರ್ಧಕ್ಕಿಂತ ದ್ವಿತಿಯಾರ್ಧದಲ್ಲೇ ಸಿನಿಮಾ ಗಟ್ಟಿಯಾಗಿದೆ. ಸರಾಗವಾಗಿ ಸಾಗುವ ಲವ್‌ಸ್ಟೋರಿ ನಡುವೆ ಎಗ್ಗಿಲ್ಲದಂತೆ ಹಾಡುಗಳು ಇಣುಕುವುದರಿಂದ ಸಿನಿಮಾದ ವೇಗಕ್ಕೆ ಅಡ್ಡಿಯಾದಂತಿದೆ. ನೋಡುಗ ಒಂದೊಳ್ಳೆಯ ಪ್ರೀತಿ ಕಥೆಯ ಹೂರಣ ಸವಿಸುತ್ತಿರುವ ಮಧ್ಯೆಯೇ, ಹಾಡುಗಳನ್ನು ನೂಕಿ ಸವಿರುಚಿಯನ್ನು ಹಾಳುಗೆಡವುದಂತಾಗುತ್ತದೆ. ಕಥೆಗೆ ಪೂರಕವಾಗಿ ಹಾಡುಗಳಿವೆಯಾದರೂ, ಅವುಗಳ ಸಂಖ್ಯೆಯನ್ನು ಕಡಿಮೆಗೊಳಿಸುವ ಸಾಧ್ಯತೆ ಇತ್ತು. ನಿರ್ದೇಶಕರು ಅದೇಕೋ, ಚಿತ್ರಕಥೆಗಿಂತ ಹಾಡುಗಳತ್ತವೇ ಹೆಚ್ಚು ಗಮನ ಹರಿಸಿದಂತಿದೆ. ಟೈಟಲ್‌ ಸಾಂಗ್‌ ಪ್ರೇಮಂ ಪೂಜ್ಯಂ ಹಾಡೊಂದರ ಜೊತೆ ಮತ್ತೆರೆಡು ಹಾಡನ್ನು ಹೊರತುಪಡಿಸಿದರೆ, ಉಳಿದ ಯಾವ ಹಾಡುಗಳೂ ರುಚಿಸುವುದಿಲ್ಲ. ಇನ್ನು, ಮೊದಲೇ ಹೇಳಿದಂತೆ ಸಿನಿಮಾದ ಮೊದಲರ್ಧ ಹಾಗು ದ್ವಿತಿಯಾರ್ಧ ಹಾಡುಗಳದ್ದೇ ಕಾರುಬಾರು. ಅಷ್ಟೊಂದು ಹಾಡುಗಳ ಅಗತ್ಯವಿರಲಿಲ್ಲ. ಯಾಕೆಂದರೆ, ಒಂದೊಳ್ಳೆಯ ಲವ್‌ಸ್ಟೋರಿಯನ್ನು ಮನಸಾರೆ ಒಪ್ಪಿಕೊಂಡು ನೋಡುವ ಪ್ರೇಕ್ಷಕನಿಗೆ ಎಲ್ಲೋ ಒಂದು ಕಡೆ ಹಾಡುಗಳೇ ಬೇರೆಡೆ ಗಮನ ಹರಿಸುವಂತೆ ಮಾಡಿವೆ. ಇಡೀ ಸಿನಿಮಾದ ಹೈಲೈಟ್‌ ಅಂದರೆ, ಕಥೆ, ಲೊಕೇಷನ್‌, ಸಂಗೀತ ಮತ್ತು ಹಿನ್ನೆಲೆ ಸಂಗೀತ. ಅಲ್ಲಲ್ಲಿ ತೂಕದ ಮಾತುಗಳಿಗೆ ಒತ್ತು ಕೊಡಲಾಗಿದೆ ಅನ್ನುವುದೇ ಸಮಾಧಾನ. ಹಾಸ್ಯ ನಟರಿದ್ದಾರೆ ಆದರೆ, ಕಚಗುಳಿ ಇಡುವಂತಹ ಹಾಸ್ಯದ ಆಕರ್ಷಣೆ ಇಲ್ಲ. ಸಾಧುಕೋಕಿಲ ಅವರನ್ನು ಸೀನಿಯರ್‌ ಎಂಬಿಬಿಎಸ್‌ ಸ್ಟುಡೆಂಟ್‌ ಅಂತಂದುಕೊಳ್ಳುವುದು ತುಸು ಕಷ್ಟವೇ ಸರಿ. ಸಿನಿಮಾ ಅವಧಿಯನ್ನು ಕೊಂಚ ಕಡಿಮೆಗೊಳಿಸುವ ಪ್ರಯತ್ನ ಮಾಡಿದ್ದರೆ, ನಿಜಕ್ಕೂ ಇನ್ನಷ್ಟು ಪೂಜ್ಯ ಮನೋಭಾವ ಬರುತ್ತಿತ್ತೇನೋ. ಆದರೂ, ಇದು ಡಾಕ್ಟರ್ಸ್‌ ಸೇರಿದಂತೆ ಪ್ರೇಮಿಗಳು, ಹುಡುಗ, ಹುಡುಗಿಯರು, ದೊಡ್ಡೋರು, ಸಣ್ಣೋರು ಕೂಡ ನೋಡಲ್ಲಡ್ಡಿಯಿಲ್ಲ.


ಕಥೆ ಬಗ್ಗೆ ಹೇಳುವುದಾದರೆ…
ಇಲ್ಲಿ ಜಾತಿ-ಧರ್ಮ ನಡುವಿನ ನಿಷ್ಕಲ್ಮಷ ಪ್ರೇಮವಿದೆ. ಸಂಬಂಧಗಳ ಮಧ್ಯೆ ಪ್ರೀತಿ ಇದೆ. ಭಾವನೆಗಳನ್ನು ಅರ್ಥ ಮಾಡಿಕೊಳ್ಳುವ ಗೆಳೆತನವಿದೆ, ಅಪ್ಪ, ಅಮ್ಮನ ಪ್ರೀತಿ ವಾತ್ಸಲ್ಯ ತುಂಬಿದೆ. ಅಲ್ಲಲ್ಲಿ ಕರುಣೆಯ ನೋಟವಿದೆ. ಪರ ಮನಸ್ಸುಗಳನ್ನು ಖುಷಿಪಡಿಸಬೇಕು ಎಂಬ ಧ್ಯೇಯ ಕೂಡ ಇದೆ. ಇವಿಷ್ಟು ಪ್ರೀತಿಯೊಳಗಿನ ಬೆಸುಗೆ. ಒಬ್ಬ ಮಂಡ್ಯ ಸಮೀಪದ ಹಳ್ಳಿಯೊಂದರ ರೈತನ ಮಗ ಡಾಕ್ಟರ್‌ ಆಗುವ ಆಸೆಯಿಂದ ಮೆಡಿಕಲ್‌ ಓದಲು ಪಟ್ಟಣಕ್ಕೆ ಬರ್ತಾನೆ. ಮೆಡಿಕಲ್‌ ಕಾಲೇಜಿನಲ್ಲಿ ಮೊದಲ ಸಲ ನೋಡುವ ಹುಡುಗಿ ಜೊತೆ ಪ್ರೀತಿ ಶುರುವಾಗುತ್ತೆ. ಅವಳಿಗೂ ಪ್ರೀತಿ ಅಂಕುರವಾಗುತ್ತೆ. ಪ್ರೀತಿ ನಡುವೆ ಧರ್ಮ ಅಡ್ಡ ಬರುತ್ತೆ. ಇನ್ನೇನು, ಮದುವೆ ಅನ್ನೋದು ಕನಸು ಅಂದುಕೊಳ್ಳುವಷ್ಟರಲ್ಲಿ ಅಲ್ಲೊಂದು ಪವಾಡ ನಡೆಯುತ್ತೆ. ಆ ಪವಾಡ ಏನು ಅನ್ನುವ ಕುತೂಹಲವಿದ್ದರೆ ಸಿನಿಮಾ ನೋಡಬಹುದು.


ಈ ಚಿತ್ರದ ಕಥೆ ಸಾಗುವ ರೀತಿ ನೋಡಿದವರಿಗೆ ಹಾಗೊಮ್ಮೆ ವಿಷ್ಣುವರ್ಧನ್‌ ಅಭಿನಯದ ಬಂಧನ ಸಿನಿಮಾ ನೆನಪಾಗುತ್ತೆ. ಅದಕ್ಕೂ ಇದಕ್ಕೂ ಸಾಮ್ಯತೆ ಇಲ್ಲದಿದ್ದರೂ, ಅಲ್ಲೂ ವಿಷ್ಣುವರ್ಧನ್‌ ಡಾಕ್ಟರ್.‌ ಸುಹಾಸಿನಿಯೂ ಡಾಕ್ಟರ್.‌ ಇಲ್ಲೂ ನಾಯಕ ಡಾಕ್ಟರ್‌, ನಾಯಕಿಯೂ ಮೆಡಿಕಲ್‌ ಸ್ಟುಡೆಂಟ್.‌ ಅಲ್ಲಿ ವಿಷ್ಣುವರ್ಧನ್‌ ಡಾ.ಹರೀಶ್ ಆಗಿದ್ದರೆ, ಇಲ್ಲಿ ಪ್ರೇಮ್‌ ಡಾ.ಶ್ರೀಹರಿ. ಅಲ್ಲೂ ರೋಗಿಗಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದರೆ, ಇಲ್ಲೂ ರೋಗಿಗಳ ಮೇಲೆ ಕಾಳಜಿ ಇದೆ. ಬಂಧನದಲ್ಲೂ ವಿಷ್ಣುವರ್ಧನ್‌ ಅವರಿಗೆ ನಾಯಕಿ ಸಿಗಲ್ಲ. ಕೊನೆಗೆ ವಿಷ್ಣುವರ್ಧನ್ ಸಹ ಪ್ರಾಣ ಬಿಡ್ತಾರೆ. ಪ್ರೇಮಂ ಪೂಜ್ಯಂ ಚಿತ್ರದಲ್ಲೂ ಕೂಡ…? ಹೇಳುವುದಕ್ಕಿಂತ‌ ಒಂದೊಮ್ಮೆ ನೋಡಿ ಬಿಡಿ. ಇನ್ನು, ವೃತ್ತಿಯಲ್ಲಿ ವೈದ್ಯರಾಗಿರುವ ನಿರ್ದೇಶಕ ರಾಘವೇಂದ್ರ ಅವರ ಚೊಚ್ಚಲ ಪ್ರಯತ್ನ ಸರಿಯಾಗಿಯೇ ಇದೆ. ಸ್ವಲ್ಪ ಅವಧಿ ಬಗ್ಗೆ ಯೋಚಿಸಿ, ಹಾಡುಗಳನ್ನು ಕಡಿಮೆಗೊಳಿಸುವ ಮನಸ್ಸು ಮಾಡಿದ್ದರೆ, ನಿಜಕ್ಕೂ ಮತ್ತಷ್ಟು ಪ್ರೀತಿ ಹೆಚ್ಚುತ್ತಿತ್ತು.


ಪ್ರೇಮ್‌ ಅವರ ಇಪ್ಪತ್ತೈದನೆ ಸಿನಿಮಾ ಇದು. ಮನಸ್ಸು ಭಾರವಾಗಿಸುವ, ಅಲ್ಲಲ್ಲಿ ಭಾವುಕತೆಗೆ ದೂಡುವಂತಹ ನಟನೆಯಲ್ಲಿ ಅವರು ಗಮನಸೆಳೆಯುತ್ತಾರೆ. ಅವರಿಲ್ಲಿ ಎಂದಿಗಿಂತಲೂ ಹ್ಯಾಂಡ್‌ಸಮ್‌. ಸಿನಿಮಾದುದ್ದಕ್ಕೂ ಅವರ ನಟನೆ ಕಾಡುತ್ತೆ. ಎಲ್ಲಾ ಶೇಡ್‌ ಪಾತ್ರಗಳಲ್ಲೂ ಅವರ ಹಾವಭಾವ ನೆನಪಿರದೇ ಇರದು. ಬಹುತೇಕ ಹುಡುಗಿಯರಿಗೇ ಮನಸಾರೆ ಇಷ್ಟವಾಗುತ್ತಿದ್ದ ಪ್ರೇಮ್, ಈ ಸಿನಿಮಾ ಮೂಲಕ ಇನ್ನಷ್ಟು ಹುಡುಗರಿಗೂ ಇಷ್ಟವಾಗುವಲ್ಲಿ ಸಂದೇಹವಿಲ್ಲ.‌ ಬೃಂದಾ ನಟನೆ ಬಗ್ಗೆ ಹೇಳುವಂಥದ್ದೇನೂ ಇಲ್ಲ. ಐಂದ್ರಿತಾ ಇರುವಷ್ಟು ಕಾಲ ಇಷ್ಟವಾಗುತ್ತಾರೆ. ಆನಂದ್‌, ಸಾಧುಕೋಕಿಲ ಗೆಳೆಯರಾಗಿ ಸೈ ಎನಿಸಿಕೊಂಡಿದ್ದಾರೆ. ನವೀನ್‌ ಕುಮಾರ್‌ ಅವರ ಕ್ಯಾಮೆರಾ ಕೈಚಳಕ ಮತ್ತು ಹರೀಶ್‌ ಕೊಮ್ಮೆ ಅವರ ಕತ್ತರಿ ಪ್ರಯೋಗ ಸಿನಿಮಾದ ಮತ್ತೊಂದು ಪ್ಲಸ್.‌

ಎಂಟರ್‌ಟೈನ್ಮೆಂಟ್‌ ಬ್ಯೂರೋ ಸಿನಿಲಹರಿ

Related Posts

error: Content is protected !!